Monday, March 9, 2009



ಗತ ವೈಭವ
ತುಂಗಭದ್ರೆಯ ಮಡಿಲು
ಉತ್ತುಂಗಗಳ ಕಂಡ ಒಡಲು
ಬೀದಿಯಲಿ ಮಾರಿದರು
ಮುತ್ತು-ರತ್ನ ನಾಡ ಸುತರು
ಹಕ್ಕ-ಬುಕ್ಕರು ವೈಭವಕೆ ನಾಂದಿ
ಬೆರಗಾಗಲಿಲ್ಲವೇ ವಿದೇಶೀ ಮಂದಿ
ಬಂದೆರಗಿತು ವಿಧಿ
ಕರಗಿಹೋಯಿತು ನಿಧಿ
ಅಳಿದುಳಿದದ್ದು
ಹದ್ದುಗಳ ಪಾಲು
ಹತಾಶರಾಗಿ ಹೋದರು
ಇದ್ದವರೂ ದಿಕ್ಕಾಪಾಲು
ಕಳೆದುಕೊಂಡ ನರ-ಸಿಂಹ
ತಡೆಯದಾದ ಇದ ಪರಬ್ರಹ್ಮ
ಒಮ್ಮೆ ಮಿಡಿದಿದ್ದವು
ಆಗಿದ್ದರೂ ಕಲ್ಲು ವೀಣೆಗಳು
ನುಡಿದಾವೇ ಒಮ್ಮೆ ಬಂಡೆಗಳು?
ಚಾಲನೆ ಕಂಡಾವೇ ಕಲ್ಲು ರಥಗಳು?

ಭಗ್ನ-ಕನಸು
ಗತ ವೈಭದಲ್ಲಿ ಎಷ್ಟೊಂದು ಆನಂದವಿದ್ದಿರಬಹುದು?!! ನನಗೆ ಹಳೇಬೀಡನು ಕಂಡಾಗ ಒಡನೆ ನೆನಪಿಗೆ ಬಂದದ್ದು ನಮ್ಮ ಹಳ್ಳಿಗಳಲ್ಲಿ ಮನೆ ಕಟ್ಟುವ ಜಾಗಗಳಲ್ಲಿ ಮರಳಿನ ರಾಶಿಯ ಮೇಲೆ ಆಟವಾಡಿದ ದಿನಗಳು, ನನ್ನ ಸ್ನೇಹಿತನ ಪುಟ್ಟ ತಮ್ಮ ತನ್ನ ಕಾಲಿನ ಸುತ್ತ ಅರೆನೆನೆದ ಮರಳನ್ನು ತಟ್ಟಿ.. ಮತ್ತ ಅದರ ಸುತ್ತ ಇನ್ನಷ್ಟು ಮರಳನ್ನು ಪೇರಿಸಿ ಪುಟ್ಟ ಪುಟ್ಟಗುಬ್ಬಿ ಗೂಡನು ಮಾಡಿದ್ದು ಕಾಲನ್ನು ನಿಧಾನವಾಗಿ ಹೊರಗೆಳೆದು ಗೂಡಿನ ಬಾಗಿಲನು ಮಾಡಿ ಸಂಭ್ರಮಿಸಿದ್ದು, ನನ್ನ ಸ್ನೇಹಿತನ ಕೆಟ್ಟ ಗೆಳೆಯನೊಬ್ಬ ಆ ಪುಟ್ಟನ ಗೂಡನ್ನು ಒಮ್ಮೆಗೇ ಕಾಲಿಂದ ಒದ್ದು ಒಂದುರೀತಿಯ ವಿಕೃತ ನಗೆ ಬೀರಿದ್ದು ಪುಟ್ಟ ತನ್ನ ಗೂಡು ಪಾಳುಬಿದ್ದದ್ದು ಕಂಡು..ದಪ್ಪ ದಪ್ಪ ಕಣ್ಣಿನಲ್ಲಿ ಅಷ್ಟೇ ದಪ್ಪನೆಯ ಹನಿಯಾಡಿದ್ದು.. ಒಂದು ಕ್ಷಣದ ಆಟದ ಮರಳಿನ ಮನೆ ಹಾಳಾದೊಡನೆ ಸಂಕಟ ಪಟ್ಟ ಪುಟ್ಟ ಬ್ರುಹತ್ ಕಲ್ಲು ಶಿಲ್ಪಗಳ ಮಹಾನ ಶಿಲ್ಪಿಗಳ ಅವಿರತ ಶ್ರಮ ಕೆಲವೇ ದಿನಗಳಲ್ಲಿ ಧರೆಗುರುಳಿದಾಗ.. ಶ್ರಮಿಕರು, ಶಿಲ್ಪಿಗಳು ಸೃಜನಶೀಲರು.. ಇವರೆಲ್ಲರನು ಪ್ರೋತ್ಸಾಹಿಸಿ ಕನಸುಕಂಡ ಅರಸರ ಕಣ್ಣಲ್ಲಿ ರಕ್ತ ಕಣ್ಣೀರು ಹರಿದಿರಲಿಕ್ಕಿಲ್ಲವೇ..?