Saturday, December 3, 2011

ಹೀಗೂ ಒಮ್ಮೆ ಎಡವಟ್ಟಾಗೋದ್ರೆ ಆಶ್ಚರ್ಯ ಇಲ್ಲ


ಹೀಗೂ ಒಮ್ಮೆ ಎಡವಟ್ಟಾಗೋದ್ರೆ ಆಶ್ಚರ್ಯ ಇಲ್ಲ

(foto: Emirates web site)

ಬಹಳ ಅಲ್ಪಾವಧಿಯ ತಾಯ್ನಾಡ ಪ್ರವಾಸಕ್ಕೆ ತುರಾತುರಿಯಲ್ಲಿ ನಿರ್ಧರಿಸಲು ಕಾರಣಗಳು ಹಲವಾರಾಗಿದ್ದವು. ಮಂಗಳೂರಿನಲ್ಲಿ ನಡೆಯಲಿದ್ದ ಏಶಿಯಾ ಮಟ್ಟದ ಮತ್ಸ್ಯಾರೋಗ್ಯ ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಅಪ್ಪ-ಅಮ್ಮ ಹಾಗೂ ನೆಂಟರನ್ನು ಮತ್ತು ಸ್ನೇಹಿತರನ್ನು ನೋಡುವ ಸ್ವಾರ್ಥವೂ ಇತ್ತು. ಅಲ್ಲದೇ ಬೆಂಗಳೂರು ಮಾಯಾನಗರಿಯಲ್ಲಿ ಹೊಸದಾಗಿ ಕಟ್ಟಲು ಪ್ರಾರಂಭಿಸಿರುವ ಮನೆಯ ಪ್ರಸ್ತುತ ಸ್ಥಿತಿಯನ್ನು ನಿರೀಕ್ಷಿಸುವುದೂ ಸೇರಿತ್ತು. ಕುವೈತಿನಲ್ಲಿ ನಮ್ಮ ಕನ್ನಡ ಕೂಟದ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅದೇ ದಿನ ಅಂದರೆ ಡಿಸೆಂಬರ್ ೧೮ರ ಮಧ್ಯರಾತ್ರಿ ಮನೆಯಿಂದ ಹೊರಟು, ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸೇರಬೇಕಿತ್ತು. ಬೇಗ ಕಾರ್ಯಕ್ರಮದಿಂದ ಬಂದು ಬಟ್ಟೆ ಬರೆ (ಒಂದು ವಾರದ ಪ್ರವಾಸಕ್ಕೆ ಬೇಕಾಗುವ ಹಾಗೆ) ಪ್ಯಾಕ್ ಮಾಡಿ ತಯಾರಾಗೋದು ಕಷ್ಟವಾಗಲಾರದೆಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟೆ. ಕಾರ್ಯಕ್ರಮನಂತರ ಊಟಕ್ಕೂ ನಿಲ್ಲದೇ ಮನೆಗೆ ವಾಪಸ್ಸಾಗಿ ಸೂಟ್ ಕೇಸ್ ರೆಡಿ ಮಾಡಿ ೧.೩೦ ಕ್ಕೆ ಮನೆಯಿಂದ ಏರ್ಪೋರ್ಟಿಗೆ ಹೊರಟೆ. ಚೆಕ್ ಇನ್ ಶಾಸ್ತ್ರ ಮುಗಿಸಿ ಸ್ವಲ್ಪ ಪೇಟ್-ಪೂಜೆಗೆ ಡಿಪಾರ್ಚರ್ ಟರ್ಮಿನಲ್ ನಲ್ಲಿದ್ದ ಫಾಸ್ಟ್ ಫುಡ್ ಕೌಂಟರಲ್ಲಿ ಬರ್ಗರ್ ತಿಂದು ಕಾಫಿ ಕುಡಿದು ಡಿಪಾರ್ಚರ್ ಗೆ ಬಂದಾಗ ಆಗಲೇ ಬೋರ್ಡಿಂಗ್ ಪ್ರಾರಂಭವಾಗಿತ್ತು. ಹಿಂದಿನ ರಾತ್ರಿಯೂ ಮಲಗಿದ್ದು ತಡವಾಗಿದ್ದರಿಂದ ನಿದ್ದೆ ಕಾರಣ ಕಣ್ಣೆವೆ ಭಾರವಾಗಿದ್ದವು. ವಿಮಾನ ಹತ್ತಿ ಸೀಟಲ್ಲಿ ಕುಳಿತು ಬೆಲ್ಟ್ ಬಿಗಿದು ಮಲಗೋ ತಯಾರಿ ಮಾಡೋಕೆ ಮುಂಚೆಯೇ ನಿದ್ದೆ ಬಂದಿತ್ತು.., ನಾನು ನಿದ್ದೆ ಮಾಡಿದೆ ಅನ್ನೋದಕ್ಕಿಂತಾ ನಿದ್ದೆ ನನ್ನ ಆವರಿಸಿತ್ತು ಎನ್ನಬಹುದು.
      
ವಿಮಾನ ನೆಲಬಿಟ್ಟೇಳುವ (ಟೇಕ್ ಆಫ್) ಸಮಯವಾಗಿತ್ತೆನಿಸುತ್ತದೆ, ನನ್ನ ಅಕ್ಕ ಪಕ್ಕ ಸ್ವಲ್ಪ ಗಲಿಬಿಲಿ ಆಗ್ತಿದ್ದದ್ದು ಭಾಸವಾದ್ರೂ ಕಣ್ಣು ತೆರೆಯಲಿಲ್ಲ.
“ಎಕ್ಸ್ ಕ್ಯೂಸ್ ಮಿ, ಆರ್ ಯೂ ಮಿ. ಸಾಹಬ್ (ಕ್ಷಮಿಸಿ ನೀವಾ ಮಿಸ್ಟರ್ ಸಾಹೇಬ್)?”
ಕಿವಿಯಲ್ಲಿ ಕೋಗಿಲೆ ಉಲಿದ ಭಾಸವಾಯ್ತು...ಕಣ್ಣು ತಂತಾನೆ ತೆರೆಯಿತು, ಸುಂದರ ಗಗನ ಸಖಿ ನನ್ನ ಮುಂದೆ!!,
ಸಾವರಿಸಿಕೊಂಡು...
“ಎಸ್, ಐ ಯಾಮ್ ಆಜಾದ್ ಇಸ್ಮಾಯಿಲ್ ಸಾಹೇಬ್” (ಹೌದು ನಾನೇ ಆಜಾದ್ ಇಸ್ಮಾಯಿಲ್ ಸಾಹೇಬ್) ಎಂದೆ...ಅಕಸ್ಮಾತ್ ಆಕೆ ಬೇರೆ ಸಾಹೆಬ್ ಬಗ್ಗೆ ಕೇಳ್ತಿದ್ರೆ ಅಂತ ಅನುಮಾನ ಬಂದು.
“ಡೂ ಯೂ ನೋ ಹಿಂದಿ.. ಆಪ್ ದಕ್ಕನಿ ಹಿಂದಿ ಜಾನ್ತೇ ಹೋ??” (ನಿಮಗೆ ಹಿಂದಿ, ದಕ್ಕನಿ ಹಿಂದಿ ಬರುತ್ತಾ?)
ಎಂದು ಕೇಳಿದಳು ಸಖಿ.
“ಹಾಂ ಜಾನ್ತಾ ಹೂಂ, ಕ್ಯೂ ಕ್ಯಾ ಬಾತ್ ಹೈ?”
ನಿದ್ದೆ ಹಾರಲಾರಂಬಿಸಿತ್ತು. ಕುತೂಹಲದಿಂದ ಕೇಳಿದೆ ನಾನು.
“ಜಸ್ಟ್ ಎ ಲಿಟ್ಲ್ ಹೆಲ್ಪ್ ಸರ್.ಥೋಡಾ ಆಪ್ ಮದದ್ ಕರೇಂಗೆ..??” ಸುಂದರಿಯ ಕೋರಿಕೆಗೆ ’ಇಲ್ಲ’ ಎನ್ನೋದು ಹೇಗೆ..??
“ಎಸ್ ಟೆಲ್ ಮಿ, ಕಹಿಯೇ ಕ್ಯಾ ಕರ್ನಾ ಹೈ?” ಎಂದೆ.
“ದೇರ್ ಇಸ್ ಒನ್ ಲೇಡಿ, ಸೀಮ್ಸ್ ಟು ಬಿ ಫ್ರಂ ಹೈದರಾಬಾದ್, ಥೋಡಾ ಉಸ್ ಸೆ ಬಾತ್ ಕರೇಂಗೆ..? ಕ್ಯಾ ತಕಲೀಫ್ ಹೈ ಉಸ್ಕೋ ಪೂಛಿಯೇ...ಮೆರಿ ಹಿಂದಿ ಒಹ್ ಸಮಝ್ ನಹೀಂ ಪಾ ರಹೀ ಹೈ” (ಅಲ್ಲೊಬ್ಬ ಹೆಂಗಸಿದ್ದಾಳೆ, ಬಹುಶಃ ಹೈದರಾಬಾದಿನವಳಿರಬೇಕು, ನನ್ನ ಹಿಂದಿ ಅವಳಿಗೆ ಅರ್ಥವಾಗ್ತಿಲ್ಲ ಅನ್ಸುತ್ತೆ).. ಎಂದಳು ಸುಂದರಿ.
ಅಲ್ಲಿಗಾಗ್ಲೇ ವಿಮಾನ ಗಗನದ ತನ್ನ ಪ್ರಯಾಣದ ಎತ್ತರ ತಲುಪಿತ್ತು. ಸೀಟ್ ಬೆಲ್ಟ್ ಸೈನ್ ತೆಗೆಯಲಾಗಿತ್ತು. ನಾನು ನನ್ನ ಸೀಟ್ ಬೆಲ್ಟ್ ತೆಗೆದು ಗಗನ ಸಖಿಯ ಹಿಂದೆ ಹೋದೆ. ನಾಲ್ಕೈದು ಹಿಂದಿನ ಸಾಲಿನ ಸೀಟಿನಲ್ಲಿ ಕಣ್ಣುಮುಚ್ಚಿ ಮಲಗಿದ್ದ ಸುಮಾರು ೩೨-೩೫ ವರ್ಷದ ಹೆಂಗಸನ್ನು ಆ ಗಗನ ಸಖಿ ಎಬ್ಬಿಸುತ್ತಾ...
“ಮೇಡಂ...ಬೋಲಿಯೇ..ಆಪ್ ಕೋ ಕ್ಯಾ ತಕಲೀಫ್ ಹೈ..???” (ನಿಮಗೇನು ತೊಂದರೆ ಹೇಳಿ)
ಎನ್ನುತ್ತಾ ನನ್ನ ಕಡೆ ತಿರುಗಿ,
“ಆಸ್ಕ್ ಹರ್ ವಾಟ್ ಈಸ್ ದಿ ಪ್ರಾಬ್ಲಂ, ಎಹ್ ಔರತ್ ಏಕ್ ಜಗಹ್ ಬೈಟ್ ನಹೀಂ ರಹೀ, ಇಧರ್ಸೆ ಉಧರ್ ಜಾತಿ ಹೈ, ಕಹೀಂ ಖಾಲಿ ಜಗಹ್ ಮೆ ಬೈಟ್ತೀ ಹೈ ಫಿರ್ ಖಡೀ ಹೋ ಜಾತೀ ಹೈ...ಟೇಕ್ ಆಫ್ ಪರ್ ಭೀ ಬಹುತ್ ಪರೇಶಾನ್ ಕರ್ ದಿಯಾ ಇಸ್ನೆ” (ಕೇಳಿ ಈಕೆಯನ್ನ ಏನು ಸಮಸ್ಯೆ ಇವಳದ್ದು, ವಿಮಾನ ನೆಲ ಬಿಟ್ಟೇಳುವಾಗಲೂ ಆ ಕಡೆ ಈ ಕಡೆ ಓಡಾಡುತ್ತ ಒಂದೆಡೆ ಕೂರದೇ ನಮ್ಮನ್ನು ಗೋಳು ಹುಯ್ಕೋತಾ ಇದ್ದಾಳೆ) ಎಂದಳು.
ಆ ಮಹಿಳೆಯನ್ನು “ ಸುನಿಯೇ,..ಕ್ಯಾ ತಕಲೀಫ್ ಹೈ ಆಪ್ಕೋ..ಹಲೋ...ಹಲೋ...”
ಅರಬಿಯಲ್ಲಿ ಬಡಬಡಿಸಿದಳು ..”ಅನಾ ಅನಾ ಕುಮಾರಿ...ಆನಾ ಸಾಫಿರ್ ಹೈದ್ರಾಬಾದ್...” (ನಾನು ನಾನು ಕುಮಾರಿ..ನಾನು ಹೈದರಾಬಾದಿಗೆ ಹೋಗ್ತಿದ್ದೇನೆ)... ಇಷ್ಟು ಹೇಳಿ ಮತ್ತೆ ಕಣ್ಣು ಮುಚ್ಚಿದಳು.
ಅಷ್ಟರಲ್ಲಿ ಇನ್ನೂ ಮೂವರು ಗಗನ ಸಖಿಯರು ಜಮಾಯಿಸಿದರು. ಎಲ್ಲರೂ..
”ಪ್ಲೀಸ್ ಆಸ್ಕ್ ಹರ್ ಟು ಟೇಕ್ ಸಮ್ ಥಿಂಗ್, ಜ್ಯೂಸ್ ಆರ್ ಸಮ್ ಬ್ರೆಡ್...ಸೀಮ್ಸ್ ಶಿ ಈಸ್ ವೀಕ್..” (ಕೇಳಿ ಆಕೆನ ಏನಾದ್ರೂ ತಿನ್ತಾಳಾ ಅಥವಾ ಜ್ಯೂಸ್, ಇಲ್ಲ ಬೆಡ್.. ತುಂಬಾ ನಿಶ್ಯಕ್ತಳಾಗಿದ್ದಾಳೆ..) ಎನ್ನುತ್ತಾ ತಮ್ಮ ಕಾಳಜಿ ತೋರಿದರು ಅಸಹಾಯಕಾರಾಗಿ ನನ್ನತ್ತ ನೋಡಿ.
ನನಗೆ ಆ ಮಹಿಳೆ ಆಂಧ್ರದ ಹಳ್ಳಿಯೊಂದರ ಮಹಿಳೆ ಎನ್ನಿಸತೊಡಗಿತು. ಬಹುಶಃ ತೆಲುಗಲ್ಲಿ ಕೇಳಿದ್ರೆ ಸಹಾಯಕವಾಗಬಹುದು ಎನಿಸಿ...
“ಏಮ್ಮಾ...ಕುಮಾರಿ...ಏಮೈನಾ ತಿಂಟಾವಾ..? ಜ್ಯೂಸ್ ತಾಗು ಶಕ್ತಿ ಲೇದು ನೀಕು...ಕೊಂಚಂ ಶಕ್ತಿ ವಸ್ತೂಂದಿ..” (ಏನಾದ್ರೂ ತಿನ್ನು ಅಥವಾ ಜ್ಯೂಸ್ ಕುಡಿ, ಶಕ್ತಿ ಇಲ್ಲ ನಿನ್ನಲ್ಲಿ ಶಕ್ತಿ ಬರುತ್ತೆ)
ಇಷ್ಟು ಕೇಳಿದ್ದೆ...!!! ಇಷ್ಟಗಳ ಕಣ್ಣು ಬಿಟ್ಟ “ಕುಮಾರಿ”...
“ನೂವು ಇಕ್ಕಡೇ ನಾ ಪಕ್ಕ ಕುಚ್ಚೋ...ಈಳ್ಳು ನನ್ನೆಕ್ಕೆಡೋ ತೀಸ್ಕೆಳ್ತಾರು...ನೇನು ಹೈದರಾಬಾದುಕ್ಕೆಳ್ಳಾಲಿ..” (ನೀನು ಇಲ್ಲೇ ನನ್ನ ಪಕ್ಕ ಕೂತ್ಕೋ ಇವರು ನನ್ನ ಎಲ್ಲೋ ತಗೊಂಡು ಹೋಗ್ತಿದ್ದಾರೆ, ನಾನು ಹೈದರಾಬಾದಿಗೆ ಹೋಗಬೇಕು) ಎನ್ನುತ್ತಾ ನನ್ನ ಕೈ ಹಿಡಿದೆಳೆದು ತನ್ನ ಪಕ್ಕದ ಖಾಲಿ ಸೀಟಿನಲ್ಲಿ ಕೂರಿಸಿದಳು... ನನಗೆ ಮುಜುಗರ, ಆದ್ರೆ ಆಕೆಯ ಸ್ಥಿತಿ ನೋಡಿ ಅಯ್ಯೋ ಎನಿಸಿತು, ಕೈಗಳು ತಣ್ಣಗಿದ್ದು ನವಿರು ನಡುಕ ಇದ್ದು ಭಯಗೊಂಡಿದ್ದಾಳೆನ್ನುವುದು ಗೊತ್ತಾಯಿತು. ಕೂತೆ, ಏನಾದ್ರೂ ಕುಡಿ ಅಥವಾ ತಿನ್ನು ಎನ್ನುತ್ತಾ ಗಗನ ಸಖಿಯರು ಕೊಟ್ಟ ಜ್ಯೂಸನ್ನು ಕುಡಿಯಲು ಹೇಳಿದೆ..ತಿನ್ನಲು ಕೊಟ್ಟ ಬ್ರೆಡ್-ಬನ್ ತಿನ್ನಲು ಹೇಳಿದೆ...ಎರಡನ್ನೂ ಸ್ವಲ್ಪ ಸ್ವಲ್ಪ ಸವಿದು ಮತ್ತೆ ಬಡಬಡಿಕೆ ಪ್ರಾರಂಭಿಸಿ,
“ನಾನು ಹೋಗಬೇಕು..ಎಲ್ಲಿಗೆ ನನ್ನ ಕರ್ಕೊಂಡು ಹೋಗ್ತಿರೋದು..ನನ್ನ ಕೊಲ್ಲಬೇಡಿ..” ಎಂದೆಲ್ಲಾ ಗೊಣಗಿದಾಗ ನನಗೆ ನಿಜಕ್ಕೂ ಗಾಬರಿ ಆಯಿತು. ಇವಳು ಮತಿಗೆಟ್ಟವಳಾ ಹೇಗೆ..? !!! ಅಲ್ಲಿ ಆಗಲೇ ಗಗನ ಸಖಿಯರು, ಕ್ಯಾಬಿನ್ ಚೀಫ್ ಸಹಾ ಬಂದಾಯ್ತು... ಅವಳನ್ನು ಏಳಲು ಬಿಡಬೇಡಿ...ದಯಮಾಡಿ ಅವಳನ್ನು ಏನಾದ್ರೂ ತಿನ್ನಲು ಹೇಳಿ... ದುಬಾಯ್ ವರೆಗೂ ಸಂಭಾಳಿಸಿ, ನಿಮ್ಮ ಮಾತು ಕೇಳ್ತಿದ್ದಾಳೆ..ಒಂದೇ ಇಷ್ಟು ಹೊತ್ತು ಕೂತಿದ್ದೇ ಹೆಚ್ಚು...ಎಂದು ನನ್ನ ರಿಕ್ವೆಸ್ಟ್ ಮಾಡಿಕೊಂಡರು...
ಅವಳೋ,....
ನೀನು ಎಲ್ಲೂ ಹೋಗಬೇಡ ಇಲ್ಲೇ ಕೂತ್ಕೋ..ನನ್ನ ಹೈದರಾಬಾದಿಗೆ ಬಿಟ್ಟು ಹೋಗು...ಎಲ್ಲಿ ಹೋಗಬೇಕೋ ನೀನು ನನಗೆ ಗೊತ್ತಿಲ್ಲ...ಇವರು ನನ್ನ ಸಾಯಿಸ್ತಾರೆ... ಎನ್ನುತ್ತ ಬಡಬಡಿಸೋದು ನಡೆದೇ ಇತ್ತು, ನನ್ನ ಹೆಗಲಿಗೆ ತಲೆ ಇಟ್ಟು ಮಲಗಲು ನನ್ನ ಕೊಸರುವಿಕೆಯ ಮಧ್ಯೆಯೂ ಪ್ರಯತ್ನಿಸಿದಳು...ಗಗನ ಸಖಿಯರು
“ಪ್ಲೀಸ್ ಸರ್ ಲೆಟ್ ಹರ್ ಸ್ಲೀಪ್, ಇಫ್ ಶಿ ಟೇಕ್ಸ್ ಸಮ್ ರೆಸ್ಟ್ ಇಟ್ ವಿಲ್ ಬಿ ಗುಡ್ ವಿ ವಿಲ್ ಬಿ ಇನ್ ದುಬಾಇ ಬೈ ದೆನ್” (ಸರ್ ಆಕೆಯನ್ನು ಮಲಗಲು ಬಿಡಿ ಸ್ವಲ್ಪ ರೆಸ್ಟ್ ತಗೊಳ್ಳಲಿ..ಅಷ್ತರಲ್ಲಿ ದುಬೈ ತಲುಪುತ್ತೇವೆ.).. ನನ್ನ ಪೀಕಲಾಟ ಹೆಚ್ಚಾಗಿತ್ತು. ನನ್ನ ನಿದ್ದೆ ಎಲ್ಲಿಗೆ ಹಾರಿ ಹೋಯ್ತೋ...!!!!
ಅಷ್ಟರಲ್ಲಿ ಗಗನ ಸಖಿ (ಹಿಂದಿಯವಳು) ದುಬ್ಬೈ ಗ್ರೌಂಡ್ ಸಂಪರ್ಕ ಮಾಡಿ ವಿಮಾನ ನಿಲ್ದಾಣದ ಕ್ಲಿನಿಕ್ ನ ಸಹಾಯ ಕೇಳಿದಳು. ಪರಿಚಾರಕರನ್ನು ಕಳುಹಿಸಿ ತೆಲುಗು ಬರುವವರ ವ್ಯವಸ್ಥೆ ಮಾಡಿ ಆಕೆಯ ಪ್ರಾಥಮಿಲ ವೈದ್ಯಕೀಯ ಪರೀಕ್ಷೆ ಮಾಡಿ ಹೈದರಾಬಾದ್ ವಿಮಾನ ಹತ್ತಿಸುವ ಏರ್ಪಾಡು ಮಾಡಬೇಕೆಂದು ಕೋರಿಕೆ ಕಳುಹಿಸಿದಳು. ನಂತರ ನನಗೆ... ಸರ್ ಈಕೆ ನಿಮ್ಮ ಮಾತೇ ಕೇಳೋದು ಇವಳನ್ನು ಕ್ಲಿನಿಕವರೆಗೂ ತಲುಪಿಸಿ ನೀವು ಬೆಂಗಳೂರು ವಿಮಾನ ಹತ್ತಿ, ದಯಮಾಡಿ ಇಷ್ಟು ಸಹಾಯ ಮಾಡಿ, ಎಂದಳು ಇಂಗ್ಲೀಷಲ್ಲಿ. ನಾನು ಇಲ್ಲ ಎನ್ನುವ ಮನಸಾಗದೇ ಆಗಲಿ ಎಂದೆ.
ದುಬೈ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಗಗನ ಸಖಿಯರು ಆಕೆಯನ್ನು...
“ ಅಬ್ ಆಪ್ ಇಧರ್ ಉತರ್ ಜಾವೋ ಬಾದ್ ಮೆ ಹೈದರಾಬದ್ ಕಾ ಪ್ಲೈನ್ ಹಮಾರಾ  ಸ್ಟಾಫ್ ಚಢಾಯೆಗಾ, ಆಪ್ಕೋ ಥೋಡಾ ತಾಖತ್ ಕೆ ಲಿಯೆ ಕ್ಲಿನಿಕ್ ಮೆ ಕುಚ್ ದವಾ ದೇಂಗೆ ಬಾದ್ ಮೆ ಆಪ್ ಕೋ ಹೈದರಾಬಾದ್ ಪ್ಲೈನ್ ಮೆ ಬಿಠಾಯೇಂಗೆ” (ಈಗ ಇಲ್ಲಿ ಇಳಿಯಿರಿ, ಆಮೇಲೆ ನಿಮ್ಮನ್ನು ಹೈದರಾಬದ್ ಪ್ಲೈನ್ ಗೆ ಹತ್ತಲು ನಮ್ಮ ಸಿಬ್ಬಮ್ದಿ ಸಹಾಯ ಮಾಡುತ್ತೆ, ಸ್ವಲ್ಪ ಶಕ್ತಿಗಾಗಿ ಕ್ಲಿನಿಕಲ್ಲಿ ಔಷಧಿ ಕೊಡ್ತಾರೆ)
ಆಕೆಯನ್ನು
“ಕುಮಾರಿ ..ಇಕ್ಕಡ ದಿಗಿ ಹೈದರಾಬಾದ್ ಪ್ಲೈನ್ ಎಕ್ಕಾಲಿ ..ದಿಗು..ನೀಕು ಕ್ಲಿನಿಕ್ ಲೊ ಶಕ್ತಿ ಕೋಸಂ ಮಂದು ಇಸ್ತಾರು” (ಕುಮಾರಿ ನೀನು ಇಲ್ಲಿ ಇಳಿ ಮತ್ತೆ ಹೈದರಾಬಾದ್ ಪ್ಲೈನ್ ಹತ್ತಿಸ್ತಾರೆ, ನಿನಗೆ ಶಕ್ತಿಗಾಗಿ ಕ್ಲಿನಿಕ್ಕಲ್ಲಿ ಸ್ವಲ್ಪ ಅಷಧಿ ಕೊಡ್ತಾರೆ.) ಎನ್ನುತ್ತಾ ಹೊರನೆಡೆಸಿಕೊಂಡು ಬಂದೆ. ಹೊರನಡೆದು ಬಂದು ವಿಮಾನ ನಿಲ್ದಾಣ ಕ್ಕೆ ಬರುತ್ತಿದ್ದವಳು...
“ಎಕ್ಕಡಿಕಿ ಪಿಲಿಸ್ಕೆಳ್ತಾ ಉನ್ನಾರು ಈಳ್ಳು..... ನೇನು ಹೈದರಾಬಾದ್ ತಪ್ಪಾ ಎಕ್ಕಡೂ ದಿಗನು” (ಎಲ್ಲಿಗೆ ಕರೆದೊಯ್ತಾ ಇದ್ದರೆ ಇವರು..? ನಾನು ಹೈದರಾಬಾದ್ ಅಲ್ಲದೇ ಬೇರೆಲ್ಲೂ ಇಳಿಯೊಲ್ಲ)..
ಎನ್ನುತ್ತಾ ಅಳುತ್ತಾ ವಾಪಸ್ ವಿಮಾನದೊಳಕ್ಕೆ ಹೋಗಲಾರಂಭಿಸಿದಳು.. ಅಲ್ಲಿಗೆ ಬಂದ ನಿಲ್ದಾಣದ ಪರಿಚಾರಕರು ಅವಳನ್ನು ಬಲವಂತವಾಗಿ ಏರ್ಪೋರ್ಟ್ ಓಪನ್ ಕಾರಲ್ಲಿ ಕುಳ್ಳಿರಿಸಲು ಪ್ರಯತ್ನಿಸಿದಾಗ ನಾನೂ ಬರಬೇಕು ಅಂತ ಒತ್ತಾಯ ಮಾಡುತ್ತಾ ನನ್ನ ಕೈಯನ್ನು ಬಲವಾಗಿ ಹಿಡಿದುಕೊಂಡಳು.. . ನಾನೂ ಕುಳಿತುಕೊಂಡು ಅವಳನ್ನು ಕ್ಲಿನಿಕ್ ಗೆ ತಲುಪಿಸುವ ಒತ್ತಾಯ ಮಾಡಿದರು ನಿಲ್ದಾಣ ಪರಿಚಾರಕರು. ಸರಿ!! ವಿಧಿಯಿರಲಿಲ್ಲ. ನಾನೂ ಕೂತೆ, ಇವಳು ಅಳಲಾರಂಭಿಸಿದಳು...ನನ್ನ ಗಂಡನ ಬಳಿಗೆ ನನ್ನ ಕರೆದುಕೊಂಡು ಹೋಗಿ...ನನ್ನ ಕೊಲ್ಲ ಬೇಡಿ...ಎಂದೆಲ್ಲಾ ಬಡಬಡಿಸತೊಡಗಿದಳು. ಓಪನ್ ಕಾರಲ್ಲಿದ್ದ ನನಗೋ ಮುಜುಗರ, ಎಲ್ಲಾ ನನ್ನನ್ನು ಮತ್ತು ಅಳುತ್ತಿದ್ದ ಕುಮಾರಿಯನ್ನು ನೋಡಿ..ಇವನೇನೋ ಮಾಡಿದ್ದಾನೆ ..! ಪಾಪ ಅಳ್ತಾ ಇದ್ದಾಳೆ...ಅದಕ್ಕೇ ಪೋಲೀಸ್ ಇವನನ್ನ ಎಳೆದು ಕೊಂಡು ಹೋಗ್ತಿದ್ದಾರೆ...!!! ಎನ್ನುವಂತೆ ನನ್ನ ಯಾವುದೋ ಖೈದಿನ ನೋಡೋ ತರಹ  ಎಲ್ಲಾ ನೋಡ್ತಾ ಇದ್ದದ್ದು ಗಮನಕ್ಕೆ ಬಂತು...ಮೆತ್ತಗೆ ಅವಳಿಗೆ..ಅಳಬೇಡ ಎಂದಷ್ಟೂ ಅವಳ ಅಳು ಜಾಸ್ತಿ ಆಗಿತ್ತು. ಅಲ್ಲಿ ಪರಿಚಾರಕ ಬದಲಿ ಪೋಲಿಸ್ ಪೇದೆಗಳು ಇನ್ನೊಂದು ತೆರೆದ ಕಾರಿನಲ್ಲಿ ಬರ್ತಿದ್ದದ್ದು ನನಗೆ ನಂತರವೇ ಗೊತ್ತಾಗಿದ್ದು. ನಂತರ ಪೇಚಿಗೆ ಅದೂ ಒಂದು ಕಾರಣವಾಗಿತ್ತು.
ಕ್ಲಿನಿಕ್ ಗೆ ತಲುಪಿದ ಮೇಲೆ ನರ್ಸ್ ಮತ್ತು ಅರಬಿ ಲೇಡಿ ಡಾಕ್ಟರ್ ಆಕೆಯನ್ನು ಸಮಾಧಾನಿಸುವಾಗ ಪೋಲಿಸ್ ಅಲ್ಲೇ ಇದ್ದರೇನೋ, ಸ್ವಲ್ಪ ಸಮಯದ ನಂತರ ಹೊರಗಡೆ ಕುಳಿತಿದ್ದ ನನ್ನನ್ನು ಪೋಲೀಸರು ನೀವು ಈದಿನ ಇಲ್ಲೆ ಇರಬೇಕಾಗುತ್ತೆ, ಆಕೆ ನೀವು ತೊಂದರೆ ಕೊಡ್ತಿದ್ದೀರ ಅಂತ ಹೇಳ್ತಿದ್ದಾಳೆ... ಎಂದಾಗ ನನ್ನ ಧೈರ್ಯವೇ ಉಡುಗಿಹೋಗಿತ್ತು.. ಸಾವರಿಸಿಕೊಂಡು ನಡೆದ ಕಥೆ ವಿವರಿಸಿದೆ, ಪೋಲೀಸರಿಗೆ ಸಮಾಧಾನವಾದಂತೆ ಕಾಣ್ಲಿಲ್ಲ. ನನ್ನ ಕುಳಿತುಕೊಳ್ಳಲು ಹೇಳಿದರು. ಆ ಹೊತ್ತಿಗೆ ಬೆಳಿಗ್ಗೆ ೧೦ ಘಂಟೆ ಆಗುತ್ತಿತ್ತು. ನನ್ನ ಬೆಂಗಳೂರ ವಿಮಾನ ೧.೫೦ ಕ್ಕೆ ಇದ್ದಿದ್ರಿಂದ ನನ್ನ ಆತಂಕ ಜಾಸ್ತಿಯಾಯಿತು. ಕುಮಾರಿ ತನ್ನ ಅರ್ಧಂಬರ್ಧ ಅರಬಿ ಪಾಂಡಿತ್ಯ ಮೆರೆದಿದ್ದೇ ಇದಕ್ಕೆ ಕಾರಣವಾಗಿತ್ತು. ಅಷ್ಟರಲ್ಲಿ ಉತ್ತರಭಾರತದವರಾದ ಕ್ಲಿನಿಕ್ ಡಾಕ್ಟರ್ ಮತ್ತು ಅದೇ ವಿಮಾನ (ಹಿಂದಿ) ಗಗನ ಸಖಿ ಬಂದು ವಿವರಣೆ ಕೊಟ್ಟಕಾರಣ, ಪೋಲೀಸರು ನನ್ನಲ್ಲಿ ಕ್ಷಮೆ ಕೋರಿ ನನ್ನನ್ನು ಹೋಗುವಂತೆ ಹೇಳಿದಾಗ..ಬದುಕಿದೆಯಾ ಬಡಜೀವವೇ ಎನಿಸಿ ಡಿಪಾರ್ಚರ್ ಟರ್ಮಿನಲ್ನತ್ತ ದೌಡಾಯಿಸಿದೆ.
ಬೆಂಗಳೂರಿನ ವಿಮಾನ ಹತ್ತಿ ಕುಳಿತು ವಿಮಾನ ದುಬೈ ಬಿಟ್ಟಾಗ ಒಂದು ಉದ್ದನೆಯ ನಿಟ್ಟುಸಿರು ಬಿಟ್ಟೆ... ಅಬ್ಬಾ ...ಎಡವಟ್ಟು ಅಂದ್ರೆ ಹೀಗೂನಾ...? ಅನ್ನಿಸಿ ಮೈ ಝುಂ ಎಂದಿತು.