Saturday, July 27, 2013

ಕೂಗಿ ಕರೆದರೇ..ಓ ಎನ್ನುವ ಸಹೃದಯಿಗಳಿಗೆ ನಮನ.......

ಕೂಗಿ ಕರೆದರೇ..ಓ ಎನ್ನುವ ಸಹೃದಯಿಗಳಿಗೆ ನಮನ.......
ಇಲ್ಲಿ ಒಂದು ಮಾತು ಹೇಳಲೇ ಬೇಕು.
ನನ್ನ ಬ್ಯಾಗ್ ಎತ್ತಿಹೋದ ಮಹರಾಯನ ಕೃಶಕಾಯ ಮನಸಿನಿಂದ ಸ್ವಲ್ಪ ಮಾಸಿಹೋಗಲು ಕಾರಣವಾದದ್ದು... ಎಲ್ಲ ಕಡೆಯಿಂದ ಓ-ಗೊಟ್ಟ ಮಿತ್ರ ವೃಂದ, ಹೋಟೆಲ್ ರಿಸಪ್ಶನಿಸ್ಟ್, ಕುವೈತಿನಿಂದಲೇ ನಮ್ಮ ಆಫೀಸಿನಲ್ಲಿ ಎಲ್ಲಾ ಸಾಧ್ಯ ಸಹಾಯಕ್ಕೆ ದಾವಂತ ನೆಡೆಸಿದ ಮಿತ್ರ ಡಾ.ವಿನೋದ್. ಇನ್ನೊಂದು ಸ್ವಾರಸ್ಯ ಸಂಗತಿ ಈ ನನ್ನ ನಲ್ಮೆಯ ಡಾ.ವಿನೋದ್, ಡಾ. ಮಿಸಸ್ ವನಿತಾ ವಿನೋದ್ ನಡುವೆ ನನ್ನ ವಿಷಯವಾಗಿ...ನಡೆದದ್ದು.
ಆಂಟ್ವೆರ್ಪ್ ಪೋಲೀಸ್ ದೂರು ನೀಡಿ, ಅಲ್ಲಿಂದ ಹೋಟೆಲಿಗೆ ಬಂದು ಸ್ವಲ್ಪ ಸುಧಾರಿಸಿಕೊಂಡಾಗ ನೆನಪಾದದ್ದು ಕುವೈತ್ ಗೆ ಹೇಗೆ ಹೋಗುವುದು?? ಎನ್ನುವ ವಿಷಯ. ವಿಷಯ ತಿಳಿದಿರಲಿ ಎಂದು ನನ್ನ ಗ್ಯಾಲಕ್ಸಿ ತೆರೆದೆ. ಹೋಟಲ್ ನ ವೈ ಫೈ ಉಪಯೋಗಕ್ಕೆ ಬಂತು, ಫೇಸ್ಬುಕ್ ಓಪನ್ ಮಾಡಿದೆ, ವನಿತಾ ಆನ್ ಲೈನ್..!!! ಮುಳುಗುವನಿಗೆ ಹುಲ್ಲುಕಡ್ಡಿ ಸಾಕಂತೆ...!!! ಸರಿ ಒಂದು ಮೆಸೇಜ್ ಹಾಕಿದೆ ಚಾಟಲ್ಲಿ...
”ವನಿತಾ ನನ್ನ ಲ್ಯಾಪ್ ಟಾಪ್ ಮತ್ತು ಪಾಸ್ಫೋರ್ಟ್ ಇದ್ದ ಬ್ಯಾಗ್ ಕಳುವಾಗಿದೆ” ಅಂತ...
ನಂಬಲಿಲ್ಲ ಮೊದಲಿಗೆ ವನಿತಾ... ಹೌದಾ ಸರ್..!! ನಿಜವಾ..??  ಸದ್ಯಕ್ಕೆ ಆಗ್ಲೇ ಕೇಳಿದ್ದರಿಂದ..
“ಹೌದಮ್ಮಾ ತಾಯಿ, ಕಳುವಾಗಿದೆ...ನಾನೇ.. ಇದು ಹ್ಯಾಕ್ಡ್ ಮೆಸೇಜ್ ಅಲ್ಲ...ವಿನೋದ್ ಗೆ ಒಂದು ಫೋನ್ ಮಾಡಿ ಹೇಳು, ನಮ್ಮ ಹೈಯರ್ ಆಫೀಸರ್ಸ್ ಗೆ ಏನಾದರೂ ಹೆಲ್ಪ್ ಮಾಡೋಕೆ ಆಗುತ್ತಾ ಅನ್ನೋದನ್ನ ವಿಚಾರಿಸಲಿ”
FACEBOOK ಜಿಂದಾಬಾದ್

ಕಾಡ್ಗಿಚ್ಚಿನ ಹಾಗೆ ಸುದ್ದಿ ಕುವೈತಲ್ಲಿ...ನಮ್ಮ ಮಿತ್ರ ವೃಂದದಲ್ಲಿ ಸಂಚಲನ...
ಮಹೇಶ್ ಮತ್ತು ಸುಗುಣಾ...ಫೋನೇ ಮಾಡ್ಬಿಟ್ರು....
“ಸರ್ ನಮ್ಮಿಂದ ಏನಾದರೂ ಸಹಾಯ ಬೇಕಾದ್ರೆ...ಮರೀಬೇಡಿ...”
ವಿನೋದ ಸಹಾ ಮೊದಲಿಗೆ ನಂಬಲಿಲ್ಲವಂತೆ...
ಅಯ್ಯೋ ಇದು ಹ್ಯಾಕ್ ಆದ ಅಕೌಂಟ್ ಮೂಲಕ ಹಣ ಕೀಳೋಕೆ ಮಾಡೋ ತಂತ್ರ..
ಅಂತ..ಆದರೆ ವನಿತಾ..”ಇಲ್ಲಾ ಮುನ್ನಾ...ಆಜಾದ್ ಸರ್ ಮತ್ತೆ ಆನ್ ಲೈನ್ ಕಂಫರ್ಮ್ ಮಾಡಿದ್ದಾರೆ...(ಇಷ್ಟಕ್ಕೂ ಅವರು ಹಣ ಕೇಳ್ಲಿಲ್ಲ ಅಲ್ವಾ...ಅಂದಿರಬೇಕು) ವಿನೋದ್ ಕನ್ವಿನ್ಸ್ ಆಗಿ...ಅಲ್ಲಿ ಆಫೀಸಲ್ಲಿ ಎಲ್ಲರ ಸಂಪರ್ಕ ಶುರು ಮಾಡಿ ಆಗಿತ್ತು...ಆಗಾಗ್ಗೆ ನನಗೆ ಅಪ್ಡೇಟ್ ಮೆಸೇಜ್ ಸಹಾ...
ಇತ್ತ 11 ನೇ ತಾರೀಖು (10ಕ್ಕೆ ಸಂಜೆ ಅರ್ಜಿ ಗುಜ್ರಾಯಿಸಿ ಆಗಿತ್ತು) ಬೆಳಿಗ್ಗೆ ನನಗೆ ಮೊದಲ ಆದ್ಯತೆ ಕೊಟ್ಟ ಸೌಜನ್ಯ ಅಜಯ್ ಅಗರ್ವಾಲ್ ದು. ಸುಮಾರು ೪-೫ ಸಲ ಕುವೈತ್ ಭಾರತೀಯ ದೂತಾವಾಸಕ್ಕೆಫೋನಾಯಿಸಿದ್ದರು ನನ್ನ ಇತ್ತೀಚಿನ ಕುವೈತ್ ನಲ್ಲಿ ಇಶ್ಯೂ ಆದ ಪಾಸ್ಪೋರ್ಟ್ ಬಗ್ಗೆ ನಿಗದಿ ಪಡಿಸಿಕೊಳ್ಳಲು....ಊಂಹೂಂ... ಅಗಲೇ 11.00 ಗಂಟೆ..ಆಗಿತ್ತು..ಆದರೆ ನನಗೆ ಅಜಯ್ ರ ಆತ್ಮ ವಿಶ್ವಾಸ ಕಂಡು ಆತಂಕ ಮೂಡಲಿಲ್ಲ.
ಹೊರ ಬಂದು ಅಜಯ್ ರವರು ಆಜಾದ್ ಜೀ ನೋ ರೆಸ್ಪಾನ್ಸ್... ಫ್ರಂ ಕುವೈತ್ ಬಟ್ ಐ ವಿಲ್ ಕಾಲ್ ಎಗೈನ್ ಅಂಡ್ ಎಗೈನ್,,, ಅಂತ ಮುಖ್ಯ ಕಚೇರಿ ಕಡೆ ಹೊರಟರು...ಅಷ್ಟರಲ್ಲಿ ಕುವೈತಿಂದ ವಿನೋದ್ ಫೋನ್...
“ನಾನು ಇಲ್ಲಿ ಯಾರಿಗಾದರೂ ಕೇಳ್ತೇನೆ ಎಂಬಾಸಿಯಿಂದ ಅಲ್ಲಿಗೆ ಮೆಸೇಜ್ ಕಳ್ಸೋಕೆ ಟ್ರೈ ಮಾಡ್ತೀನಿ” ಅಂತ.
“ನೋಡು, ಟ್ರೈ ಮಾಡು.. ಆದರೆ ಅಜಯವ್ರು ಎರಡು ಗಂಟೆಯೊಳಗೆ ನನಗೆ ಪಾಸ್ಪೋರ್ಟ್ ಕೊಡ್ತೇನೆ ಅಂದಿದ್ದಾರೆ... ನೀನು ಅಲ್ಲಿಂದ ನನ್ನ ಪಾಸ್ಪೋರ್ಟ್ ಕಾಪಿ ಫ್ಯಾಕ್ಸ್ ಮಾಡಿದ್ದು ಅವರಿಗೆ ತಲುಪಿದೆ.” ಎಂದೆ
15 ನಿಮಿಷದ ನಂತರ ಒಳಬಂದ ಅಜಯ್
“ಡಾ. ಆಜಾದ್ ಒಂದು ನಿಮಿಷ ಕಣ್ಮುಚ್ಚಿ ಅಲ್ಲಾಹ್ ನ ಸ್ಮರಿಸಿ...ಈ ನನ್ನ ಕೈಲಿರೋ ಲಕೋಟೆಯಲ್ಲಿರೋ ದಾಖಲೆ ನಿಮಗೆ ಅನುಕೂಲ ಮಾಡಲಿ” ಎಂದು ಆಗ ತಾನೇ ಆಂಟ್ವೆರ್ಪ್ ಸೆಂಟ್ರಲ್ ಸ್ಟೇಶನ್ ನಿಂದ ಬಂದಿದ್ದ ಲಕೋಟೆ ಒಡೆದು ಹೊರತೆಗೆದದ್ದು
’ಪಾಸ್ಪೋರ್ಟ್..!!!!!”
ಓಪನ್ ಮಾಡಿದ್ರೆ....”ಛೇ... ಯಾರೋ ಲೀಸಾ ಜಾರ್ಜ್ ಅಂತೆ...”
ನನ್ನ ಹಾಗೇ ಆಂಟ್ವೆರ್ಪ್ ನಲ್ಲಿ ಕಳೆದು ಕೊಂಡಿದ್ದ ಲೀಸಾ ಜಾರ್ಜ್ ರ ಪಾಸ್ಪೋರ್ಟ್..!!!
“ಲಕ್ ನಿಮ್ಮದಾಗ್ಲಿಲ್ಲ... .. ಬಟ್ ಡೋಂಟ್ ವರಿ ಆಪ್ಕೆ ದೋಸ್ತ್ ಕೆ ಫ್ಯಾಕ್ಸ್ ಕೆ ಬೇಸಿಸ್ ಪರ್ ಮೆರೆ ಡಿಸ್ಕ್ರೀಶನ್ ಪರ್ ಆಪ್ಕೋ ದೋಪಹರ್ ದೋ ಕೆ ಅಂದರ್ ಪಾಸ್ಪೋರ್ಟ್ ದೂಂಗಾ...” ಎಂದರು ಖಚಿತವಾಗಿ..ತಮ್ಮ ಕೋಣೆಗೆ ಹೋಗುತ್ತಾ.
ಹತ್ತು ನಿಮಿಷದ ನಂತರ ಹೊರ ಬಂದು..
“ಕುವೈತ್ ನಿಂದ ಕಂಫ್ಹರ್ಮೇಶನ್ ಬಂತು ಆಜಾದ್..ಈಗ ೧೨.೩೦, ನಿಮಗೆ ಆದಷ್ಟು ಬೇಗ ಪಾಸ್ಪೋರ್ಟ್ ಕೊಡ್ತೇನೆ...ನಿಮ್ಮ ಡೀಟೈಲ್ಸ್ ಎಲ್ಲಾ ಸರಿಯಾಗಿದೆಯಾ ಮತ್ತೊಮ್ಮೆ ಚೆಕ್ ಮಾಡಿ... ಎಂಟ್ರಿ ಆದಮೇಲೆ ಕರೆಕ್ಟ್ ಮಾಡೋಕೆ ಕಷ್ಟ ಆಗುತ್ತೆ” ಎಂದರು.
ಅಷ್ಟರಲ್ಲಿ ಕುವೈತಿಂದ ವಿನೋದ್ ಫೋನು..!!
“ಸರ್ ಮಹೇಶ್ ಈಗ ಎಂಬಾಸಿಗೆ ಹೊರಟಿದ್ದಾರೆ ಅವರ ಸ್ನೇಹಿತನಿಗೆ ತಿಳಿದವರು ಅಲ್ಲಿದ್ದಾರಂತೆ ಅವರು ಫೋನ್ ಮಾಡಿಸ್ತಾರಂತೆ” ಎಂದಾಗ... “ಆಹಾ ಏನಿದು ? ಕೆಲವೊಮ್ಮೆ ಏನೂ ಆಗೊಲ್ಲ ಎನಿಸುವ ಹತಾಶೆ!! ಮರುಕ್ಷಣ ಎಲ್ಲೆಡೆಯಿಂದ ಎಲ್ಲಾ ಆಗುತ್ತೆ ಎನ್ನುವ ಸಾಂತ್ವನ.. ಭರವಸೆ...!!!!” ಬದುಕು ಇದೇ ಅಲ್ಲವೇ.. ಅನಿಸಿತು.
ಸರಿಯಾಗಿ ಮದ್ಯಾನ್ಹ ಒಂದು ಗಂಟೆಗೆ ಅಜಯ್ ರವರು ಹೊರಬಂದು ನನ್ನ ಕೈ ಕುಲುಕಿ
“ ಹಿಯರ್ ಈಸ್ ಯುವರ್ ಪಾಸ್ಪೋರ್ಟ್ ಡಾ.ಆಜಾದ್, ಐ ಹ್ಯಾವ್ ಡನ್ ವಾಟ್ ಐ ಪ್ರಾಮಿಸ್ಡ್ ಯೂ..., ಗುಡ್ ಲಕ್..ನೌ ಯು ಕ್ಯಾನ್ ಟ್ರಾವೆಲ್..ಐ ಡೋಂಟ್ ನೋ ಇಫ್ ಯು ಕೆನ್ ಗೋ ಟು ಕುವೈತ್...ಬಟ್ ಕೆನ್ ಶ್ಯೂರ್ಲಿ ಗೋ ಟು ಇಂಡಿಯಾ..ಅವರ್ ಮದರ್ ಲ್ಯಾಂಡ್..., ಬಟ್ ಐ ಥಿಂಕ್ ಅಂಡ್ ಫೀಲ್ ಯು ವಿಲ್ ಕ್ಯಾಚ್ ಕುವೈತ್ ಫ್ಲೈಟ್” ಎಂದರು.
ನನ್ನ ಕಣ್ಣಂಚಲಿ ನೀರು ತುಳುಕಿಯೂ ತುಳಿಕದಂತೆಆಯಿತು... ಅಜಯ್ ರ ಎರಡೂ ಕೈ ಹಿಡಿದು ಧನ್ಯವಾದ ಅರ್ಪಿಸಿದೆ... ಎಲ್ಲಾ ಸಿಬ್ಬಂದಿಗೆ ನನ್ನ ಧನ್ಯವಾದ ಹೇಳಿ..ಕುವೈತ್ ಎಂಬಾಸಿ ಗೆ ಹೋಗಿ ನನ್ನ ಅದೃಷ್ಟ ಪರೀಕ್ಷೆ ಮಾಡಲು ನಿರ್ಧರಿಸಿದೆ.
ಟ್ಯಾಕ್ಸಿ ಹಿಡಿದು ಅಲ್ಲಿಂದ ೭-೮ ಕಿ ಮೀ ದೂರದಲ್ಲಿದ್ದ ಕುವೈತ್ ಎಂಬಾಸಿ ಇನ್ ಬೆಲ್ಜಿಯಂ ಕಚೇರಿಗೆ ಹೊರಟೆ.. ಮತ್ತೆ ವಿನೋದ್ ಫೋನ್...ನಮ್ಮ ಜೊತೆ ಕೆಲಸ ಮಾಡುತ್ತಿದ್ದ ಸಲ್ವಾ ಎಂಬ ವಿಜ್ಞಾನಿ(ನಿ) (ನಗಬೇಡಿ ಈ ಪದ ಪ್ರಯೋಗ ಪದಾರ್ಥ ಚಿಂತಾಮಣಿಗೆ ಹಾಕಿ ಚಿಂತೆಯಾಗಲಿ...ಹೆಣ್ಣು ವಿಜ್ಞಾನಿಗೆ ಏನಂತಾರೆ..?? ಅಂತ) ಕುವೈತ್ ಎಂಬಾಸಿಗೆ ಒಂದು ಪತ್ರ ಫ್ಯಾಕ್ಸ್ ರವಾನಿಸಿದ್ದೇನೆ ಅಂತ.
ಅಲ್ಲಿ, ಎಂಬಾಸಿ ಬಳಿ... ಜನವೇ ಇಲ್ಲ...ಬೋರ್ಡ್ ನೋಡಿದೆ...1.0 ಕ್ಕೆ ಕ್ಲೋಸ್..!!! ಸರಿ ಧೈರ್ಯಗೆಡಲಿಲ್ಲ ಫೋನ್ ಮಾಡಿದೆ. ಪುಣ್ಯಕ್ಕೆ ನಮ್ಮ ಸಂಸ್ಥೆಯ ಹಿರಿಯ ಅಧಿಕಾರಿ ಈ ಮೊದಲೇ ಮಾತನಾಡಿದ್ದ ಎಂಬಾಸಿ ಅಧಿಕಾರಿ ಫೋನ್ ಎತ್ತಿಕೊಂಡರು..
“ಹೌದು, ಡಾ ಸಮೀರ್ ಮಾತನಾಡಿದ್ದಾರೆ, ಆದರೆ ಈಗ ನಾವೇನೂ ಮಾಡಲಾಗದು, ಕುವೈತ್ ರೆಸಿಡೆನ್ಸಿ ಸ್ಟಾಂಪ್ ಮಾಡಲು ಅಲ್ಲಿಂದ ಮಂತ್ರಾಲಯದ ಪತ್ರ ಬೇಕು, ಅದಕ್ಕೆ ಈ ದಿನ ಸಮಯ ಮೀರಿದೆ, ನಾಳೆ (ಶುಕ್ರವಾರ) ನಾಡಿದ್ದು ಅಲ್ಲಿ ರಜೆ ಹಾಗಾಗಿ ಕಡೇ ಪಕ್ಷ ಮೂರು ದಿನ ನೀವು ಇಲ್ಲಿ ಉಳಿಯಬೇಕಾಗುತ್ತೆ.” ಎಂದರು.
“ಸರ್ ನಾನು ಕುವೈತ್ ಹೋಗಲು ಸಾಧ್ಯವೇ ಇಲ್ಲವೇ ?” ಎಂದೆ.
“ನಿಮ್ಮ ಹತ್ರ ಯಾವ ಯಾವ ದಾಖಲೆ ಇದೆ? “ ಎಂದು ಕೇಳಿದರು
“ನನ್ನ ಬಳಿ ಕುವೈತ್ ಸಿವಿಲ್ ಐಡಿ ಮತ್ತು ಡ್ರೈವಿಂಗ್ ಲೈಸೆನ್ಸ್ ಇದೆ” ಎಂದೆ.
“ಓಹ್...ದೆನ್ ನಥಿಂಗ್ ಟು ವರಿ, ಟೇಕ್ ಇಟ್ ಫ್ರಂ ಮಿ, ಯು ಕೆನ್ ಟ್ರಾವೆಲ್ ಟು ಕುವೈತ್,..ಜಸ್ಟ್ ಗೋ ಅಂಡ್ ಬೋರ್ಡ್ ದಿ ಪ್ಲೇನ್” ಎಂದರು
ಮನಸು ನಿರಾಳ ಆಯ್ತು.. ಈ ದಿಶೆಯಲ್ಲಿ ನಾನೂ ಯೋಚಿಸಿದ್ದೆ, ಸಿವಿಲ್ ಐಡಿ ಬಹಳ ಶಕ್ತಿಯುತ ದಾಖಲೆ.. ಬಹುಶಃ ನನಗೆ ಸಾಧ್ಯವಾಗಬಹುದು ಎಂದು, ಅಧಿಕಾರಿಯ ಮಾತಿನಿಂದ ನಿಶ್ಚಿಂತನಾಗಿ ಹೋಟೆಲಿಂದ ಲಗೇಜ್ ತೆಗೆದುಕೊಂಡು ಏರ್ ಪೋರ್ಟ್ ಗೆ ಹೊರಟೆ. ಏರ್ ಪೋರ್ಟ್ ನಲ್ಲಿ ತುಕಿಶ್ ಏರ್ ನ ಚೆಕ್ ಇನ್ ನಲ್ಲಿ ನನ್ನ ಟಿಕೆಟ್ ಮತ್ತು ಪಾಸ್ಪೋರ್ಟ್ ಕಳೆದು ಹೋಗಿದೆ, ಆದರೆ ಹೊಸ ಪಾಸ್ಪೋರ್ಟ್ ಇಶ್ಯೂ ಆಗಿದೆ ಎಂದು ಅದನ್ನು ತೋರಿಸಿದೆ. ನಿಮ್ಮ ರೆಸಿಡೆನ್ಸಿಗೆ ಪ್ರೂಫ್ ಏನು ಎಂದರು..ಸಿವಿಲ್ ಐಡಿ ಇದೆ ಎಂದು ತೋರಿಸಿದೆ..ಓಕೆ ಎಂದು ಟಿಕೆಟ್ ಮತ್ತು ಬೋರ್ಡಿಂಗ್ ಪಾಸ್ ಕೊಟ್ಟರು ಚೆಕ್ ಇನ್ ಮಾಡಿ. ಇಮಿಗ್ರೇಶನ್ ನಲ್ಲಿ ಕೌಂಟರ್ ಆಫೀಸರ್ ಗೆ ಸ್ವಲ್ಪ ಗೊಂದಲ ಆಯ್ತು, ಹಿರಿಯ ಅಧಿಕಾರಿ ಬಂದು ನನ್ನ ತಮ್ಮ ದಾಖಲೆ ಕೊಠಡಿಗೆ ಕರೆದೊಯ್ದು ಅಲ್ಲಿ ಪರಿಶೀಲನೆ ಮಾಡಿ ನಿಮ್ಮನ್ನು ಡಿಪಾರ್ಚರ್ ಗೇಟ್ ಗೆ ನಾನೇ ಬಿಡ್ತೇನೆ ಎಕೆಂದರೆ ಇನ್ನು ಹದಿನೈದು ನಿಮಿಷ ಮಾತ್ರ ಇದೆ ಡಿಪಾರ್ಚರ್ ಗೆ, ಗೇಟ್ ಕ್ಲೋಸ್ ಆಗ್ಬಾರ್ದು ಎಂದರು...ಇಲ್ಲೂ ಸಮಾಧಾನದ ಭರವಸೆಯ ಸಾಂತ್ವನ...!!!
ಎರಡೇ ನಿಮಿಷದಲ್ಲಿ ಪರೀಶೀಲನೆ ಮಾಡಿ, ನೇರ ಗೇಟ್ ಗೆ ಕರೆದೊಯ್ದು ಬಿಟ್ಟರು, ಇನ್ನೇನು ಗೇಟ್ ಕ್ಲೋಸ್ ಆಗುವುದರಲ್ಲಿತ್ತು.
ನಿರಾಳವಾಗಿ, ಆಫೋಸರ್ ಗೆ ಧನ್ಯವಾದ ಹೇಳಿ ವಿಮಾನ ಏರಿ..ನನ್ನ ಸೀಟ್ ನ ಮೇಲಿನ ಲಗೇಜ್ ಬಾಕ್ಸಲ್ಲಿ ಲಗೇಜ್ ಇಟ್ಟು ಕೂತೆ.. ಟರ್ಕಿಶ್ ವಿಮಾನ ಹೊರಡಲು ೧೫ ನಿಮಿಷ ಇತ್ತು.
(ಚಿತ್ರ: ಅಂತರ್ಜಾಲ ಕೃಪೆ)
“ಎಕ್ಸ್ ಕ್ಯೂಸ್ ಮಿ” ಮಧುರ ಹೆಣ್ಣಿನ ದನಿ...!! ತಲೆಯೆತ್ತಿ ನೋಡಿದೆ.. ಬಿಳಿಯ ಹೆಣ್ಣು ಸುಮಾರು ೩೦-೩೫ ರ ಆಸುಪಾಸಿನ ಆಕೆ ಕಿಟಕಿ ಬಳಿಯ ಸೀಟ್ ತೋರಿಸಿ ಅದು ನನ್ನ ಸೀಟ್ ಎನ್ನುವಂತೆ ಕಣ್ಸನ್ನೆ ಮಾಡಿದಾಗ ಎದ್ದು ಆಕೆಗೆ ಕುಳಿತುಕೊಳ್ಲಲು ಅನುವು ಮಾಡಿಕೊಟ್ಟೆ. ಪರಂಗಿಯರು ಸೋಶಿಯಲ್ ಎನ್ನುವುದು..ಕುಳಿತ ಎರಡೇ ನಿಮಿಷದಲ್ಲಿ ಆಕೆ ಮಾತು ಕತೆಗೆ ಪ್ರಾರಂಭಿಸಿದ್ದರಿಂದ ಖಚಿತವಾಯ್ತು....
“ಸೀಮ್ಸ್, ಯೂ ಆಲ್ಸೋ ಕೇಮ್ ಅಟ್ ದಿ ಲಾಸ್ಟ್ ಮೊಮೆಂಟ್” ಎಂದಳು...
“ಯೆಸ್...ಮೀನ್ಸ್..ಯೂ ಟೂ...??”  ಐ ಹ್ಯಾಡ್ ಲಿಟ್ಲ್ ಪ್ರಾಬ್ಲಂ ವಿಥ್ ಮೈ ಪಾಸ್ಪೋರ್ಟ್..”ಎಂದೆ.
ಓಹ್...ಈಸ್ ಇಟ್....?? ಫಾರ್ ಮೀ ಟೂ..., ಐಯಾಮ್ ಬೇಸಿಕಲಿ ಫ್ರಂ ಕಜಾಕಿಸ್ತಾನ್ (ಫಾರ್ಮರ್ ರಶ್ಯನ್ ಸ್ಟೇಟ್), ಬಟ್ ಹ್ಯಾವಿಂಗ್ ಎ ಸ್ಮಾಲ್ ಬ್ಯುಸಿನೆಸ್ ಇನ್ ಬ್ರುಸೆಲ್ಸ್..., ಮೈ ವ್ಯಾಲೆಟ್ ವಿಥ್ ಪಾಸ್ಪೋರ್ಟ್, ಕ್ಯಾಶ್ ಅಂಡ್ ಮೈ ಕ್ರೆಡಿಟ್ ಕಾರ್ಡ್ಸ್ ವಾಸ್ ಸ್ನ್ಯಾಚ್ಡ್ ಇನ್ ಎ ಬಸ್ ಸ್ಟಾಪ್ ಇನ್ ಬ್ರಸಲ್ಸ್” ಎಂದಳು..

ವಾಟ್..!!!?? ಯೂ ಟೂ ಲಾಸ್ಟ್ ಯುವರ್ ಪಾಸ್ಪೋರ್ಟ್...!!!!!!??? ಎಂದೆ....

Friday, July 19, 2013

ಕರ್ ಭಲಾ ತೋ ಹೋ ಭಲಾ....


ಸುಮಾರಾಗೇ ಇಂಗ್ಲೀಷ್ ಬಲ್ಲ ಪೋಲೀಸ್ ಠಾಣಾಧಿಕಾರಿ ತನ್ನ ಚೇಂಬರಿನಲ್ಲಿ ನನ್ನನ್ನು ಸಾವಕಾಶವಾಗಿ ಕುಳಿತುಕೊಳ್ಳಲು ಹೇಳಿ ಬರೆಯಲಾರಂಭಿಸಿದ... ನನ್ನನ್ನು ವಿವರಣೆ ಕೇಳುತ್ತಾ...
“ಹೇಳಿ...ಹೇಗಾಯ್ತು ಎಲ್ಲಾ.....” ನಾನು ವಿವರಣೆ ಕೊಡಲಾರಂಭಿಸಿದೆ.
“ನಾನು ಡಾ. ಆಜಾದ್ ಅಂತ, ಭಾರತೀಯ ಮೂಲದವನು ಈಗ ಕುವೈತಲ್ಲಿ ವಿಜ್ಞಾನಿಯಾಗಿ ಕೆಲ್ಸ ಮಾಡುತ್ತಿದ್ದೇನೆ....”
......!! ಸ್ವಲ್ಪ ಮಟ್ಟಿಗೆ ಕಾಟಾಚಾರ ಎದ್ದು ಕಾಣುತ್ತಿದ್ದ ಆತನ ವರ್ತನೆಯಲ್ಲಿ ನನ್ನ ಮಾತು ಕೇಳಿ ಗಂಭೀರತೆ ಮನೆ ಮಾಡಿತು ಎನಿಸುತ್ತೆ... ಆತನೆಂದ..
“ಓಹ್..!! ಹೌದೇ..?? ಸರಿ ಹೇಳಿ” ಆಸಕ್ತಿ ತೋರುತ್ತಾ ..
“ಇಲ್ಲಿ ಆಂಟ್ವೆರ್ಪ್ ಯೂನಿವರ್ಸಿಟಿಲಿ ಬಯೋಟೆಕ್ ಕಾನ್ಫರೆನ್ಸಿಗೆ ಬಂದೆ, ಈ ದಿನ ಗೆಂಟ್ ಯೂನಿವರ್ಸಿಟಿಯ ನನ್ನ ಸ್ನೇಹಿತನೊಬ್ಬ ನನ್ನು ನೋಡಲು ಹೊರಟು ಟಿಕೆಟ್ ತೆಗೆದುಕೊಂಡು ಇಲ್ಲಿಗೆ ಬಂದೆ, ತಿಂಡಿ ತಿನ್ನುವಾಗ ಒಬ್ಬನನ್ನು ಟ್ರೈನ್ ಬಗ್ಗೆ ಖಚಿತಪಡಿಸಿಕೊಳ್ಳಲು ಕೇಳಿದೆ, ಆತ ಹೌದು ಇದೇ ಟ್ರೈನು ಎಂದು ಎರಡನೇ ಪ್ಲಾಟ್ ಫಾರ್ಮ್ ನ ಟ್ರೈನನ್ನು ತೋರಿದ, ನಾನೂ ವೇಳಾಪಟ್ಟಿಯಲ್ಲಿ ಸಮಯ ಖಚಿತಪಡಿಸಿಕೊಂಡೆ. ತಿಂಡಿ ತಿಂದು ಇನ್ನೇನು ೮-೧೦ ನಿಮಿಷದಲ್ಲಿ ಟ್ರೈನು ಹೊರಡುತ್ತೆ ಎನ್ನುವಾಗ ನೀರಿನ ಬಾಟಲ್ ಕೊಂಡು ಕೆಲ ಫೋಟೋ ತೆಗೆದು ಹೆಗಲಿಗೆ ನನ್ನ ಲ್ಯಾಪ್ ಟಾಪ್ ಬ್ಯಾಗ್, ಕ್ಯಾಮರಾ ಬ್ಯಾಗ್ ಮತ್ತು ಕಾನ್ಫರೆನ್ಸ್ ಬ್ಯಾಗ್ ಏರಿಸಿ, ಛಾಯಾಗ್ರಹಣ ಮಾಡುತ್ತಿದ್ದರಿಂದ ಕೊರಳಲ್ಲಿ ಕ್ಯಾಮರಾ ತೂಗಿ ಬಿಟ್ಟು, ನನ್ನ ಲಗೇಜ್ ಬ್ಯಾಗಿನ ಟ್ರಾಲಿ ಹ್ಯಾಂದಲ್ ಹಿಡಿದು ಬ್ಯಾಗ್ ಅನ್ನು ಉರುಳಿಸಿಕೊಂಡು ಟ್ರೈನಿನ ನಾಲ್ಕನೇ ಡಬ್ಬಕ್ಕೆ ಹತ್ತಿದೆ. ಹತ್ತುವುದಕ್ಕೆ ಮುಂಚೆ ಟ್ರಾಲಿ ಹ್ಯಾಂಡಲನ್ನು ತಳ್ಳಿ ಒಳ ಸೇರಿಸಿ, ಮೇಲಿನ ಹಿಡಿಯನ್ನು ಹಿಡಿದು ಟ್ರೈನಿನ ಬಾಗಿಲ ಮೆಟ್ಟಿಲು ಹತ್ತಿದೆ. ಇನ್ನೇನು ಒಳಗೆ ಲಗ್ಗೇಜ್ ಬ್ಯಾಗ್ ಇಡಬೇಕು ಎನ್ನುವಾಗ ಹ್ಯಾಂಡಲ್ ಕಿತ್ತು ಕೈಗೆ ಬಂತು (ವಿಮಾನ ಲಗ್ಗೇಜ್ ಸಾಗಣೆ ವ್ಯವಸ್ಥೆಯ ಕೃಪೆ ಅದು ಒಡೆದಿತ್ತು). ಸರಿ, ಲ್ಯಾಪ್ ಟಾಪ್, ಕ್ಯಾಮರಾ ಬ್ಯಾಗ್ ಮತ್ತು ಕಾನ್ಫರೆನ್ಸ್ ಬ್ಯಾಗ್ ಅನ್ನು ಸೀಟಿನ ಮೇಲಿಟ್ಟು ಲಗೇಜ್ ತೆಗೆಯೋಣ ಎಂದು ನಾಲ್ಕನೇ ಸಾಲಿನ ಸೀಟೊಂದರಲ್ಲಿ ಅವುಗಳನ್ನು ಇಟ್ಟು ಬ್ಯಾಗ್ ತರಲು ಬಂದೆ. ಬ್ಯಾಗ್ ತೆಗೆದುಕೊಳ್ಳುವಾಗ ಸ್ಟೇಶನ್ ನ  ಮೊದಲ ಮತ್ತು ಎರಡನೇ ಪ್ಲಾಟ್ ಫಾರಂ ನ ಪ್ರವೇಶ ದ್ವಾರದ ದೃಶ್ಯ ಮೋಹಕವಾಗಿ ಕಂಡಿತು ಅದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಬ್ಯಾಗ್ ತಳ್ಳಿಕೊಂಡು ಒಳಬಂದು ಲಗೇಜ್ ಸ್ಟಾಂಡಲ್ಲಿ ಬ್ಯಾಗ್ ಇಟ್ಟು ನನ್ನ ಸೀಟಿನತ್ತ ನೊಡ್ತೇನೆ... ಲ್ಯಾಪ್ ಟಾಪ್ ಬ್ಯಾಗ್ ಮಿಸ್ಸಿಂಗು...!!!! ಗಾಬರಿಯಲ್ಲಿ ಅಲ್ಲಿಂದ ಮುಂದಕ್ಕೆ ಎರಡನೇ ಸೀಟಲ್ಲಿದ್ದ ಪ್ರಯಾಣಿಕನನ್ನು ನಾನು ಇಲ್ಲಿಟ್ಟಿದ್ದ ಬ್ಯಾಗ್ ಕಾಣ್ತಿಲ್ಲ...ನೀವು...... ಎನ್ನುತ್ತಿರುವಂತೆಯೇ..ಆತ ನಾನು ಈ ಮುಂಚೆ ಟ್ರೈನ್ ಬಗ್ಗೆ ವಿಚಾರಿಸಿದಾತನೇ ಎಂದು ಮನದಟ್ಟಾಯಿತು, ಆತ ..ಹಿ ಹಿ..ಟುಕ್ ದಟ್..ಹಿ ರಾನ್ ಔಟ್ (ಅವನು ತಗೊಂಡು ಓಡಿ ಹೋದ) ಎಂದು ಮುಂದಿನ ಬಾಗಿಲು ತೋರಿದ.. ನನಗೆ ಕೋಪ ನೆತ್ತಿಗೇರಿತು.. ಯೂ ಬ್ಲಡಿ...ಹಿಡಿಯೋಕೆ ಆಗ್ತಿರ್ಲಿಲ್ವಾ ಅವನ್ನ... ನೋಡ್ಕೊಂಡು ಕೂತಿದ್ದೀಯಾ..?? ವೈ ಯು ಡಿಡ್ ನಾಟ್ ಶೌಟ್..ಅಂಡ್ ಕಾಲ್ ಮಿ.... ಅಂತ ರೇಗಿದೆ....”
ಮಧ್ಯೆ ಬಾಯಿ ಹಾಕಿದ ಅಧಿಕಾರಿ...
ನೀನು ಇಂಗ್ಲೀಷಲ್ಲಿ ಅವನ್ನ ಕೇಳಿದೆಯಾ...??
ಅರೆ ..ಹೌದಲ್ಲಾ ..!! ಆಗ ನೆನಪಾಯಿತು ನನಗೆ ನನ್ನ ಗಾಬರಿಯಲ್ಲಿ ಬೇಗ ಬಂದಿದ್ದು ಕನ್ನಡ ಬಾಯಿಗೆ... ’ಯೂ ಬ್ಲಡಿ...ಹಿಡಿಯೋಕೆ ಆಗ್ತಿರ್ಲಿಲ್ವಾ ಅವನ್ನ... ನೋಡ್ಕೊಂಡು ಕೂತಿದ್ದೀಯಾ..?  ಅಂದಿದ್ದೆ.... ಕನ್ನಡದಲ್ಲಿ....!!!!!
ನಾನು...
“ಯಾ ಯಾ... ಇನ್ ಇಂಗ್ಲೀಷ್ .” ಎಂದೆ
ಗೊತ್ತಿಲ್ಲ, ಸುಳ್ಳು ಯಾಕೆ ಹೇಳಿದೆ..?? ಅಥವಾ ಕನ್ನಡ ಎಂದಿದ್ದರೆ ಇಂಗ್ಲೀಷೇ ಸರಿಯಾಗಿ ಬಾರದ ಅವನು...’ಇದು ಯಾವ ಭಾಷೆ??’ ಎಂದೆಲ್ಲಾ ಸುಮ್ಮನೆ ಕಾಲಹರಣವಾಗುತ್ತೆ ಎಂದೋ.....ಅಂತೂ ಆತ
“ಓಕೆ...ದೆನ್ ವಾಟ್ ಹ್ಯಾಪನ್ಡ್...”(ಮತ್ತೇನಾಯಿತು) ಎಂದ
“ ನಾನು ಕೆಳಕ್ಕೆ ಓಡಿದೆ, ರೈಲ್ವೇ ಗಾರ್ಡ್ ನನ್ನ ಏನಾಯ್ತು ಅಂತ ಕೇಳಿ ಅವನೂ ಸಹಾಯಕ್ಕೆ ಬಂದ, ನೀನು ಆ ಕಡೆಯಿಂದ ಕೆಳಗಿಳಿದು ಬಾ, ನಾನು ಈ ಕಡೆಯಿಂದ ಬರ್ತೇನೆ ಎಂದ, ಕೆಳಗಿಳಿದು ನೋಡಿದ್ರೆ ಸುಮಾರು ಏಳೆಂಟು ಹೊರ ಬಾಗಿಲುಗಳಿವೆ, ತೋಚಲಿಲ್ಲ, ಯಾವುದರ ಮೂಲಕ ಹೋದ ಎಂದು.. ಅಲ್ಲೇ ಬೆಂಚಿನ ಮೇಲೆ ಹತ್ತು ಸೆಕೆಂಡ್ ಕೂತೆ... ಅಲ್ಲಿವರೆಗೆ ಏನಾಗುತ್ತಿದೆ ಎನ್ನುವ ಪರಿವೆಯೇ ನನಗಿರಲಿಲ್ಲ ಎಲ್ಲಾ ತನ್ನಷ್ಟಕ್ಕೆ ಆಗ್ತಿತ್ತು. ಅಲ್ಲಿ ಕೂತ ಮೇಲೆ ಯೋಚನೆ ಸ್ಥಿಮಿತಕ್ಕೆ ಬಂತು... ತಕ್ಷಣ ನೆನಪಾಗಿದ್ದು ಟ್ರೈನ್ ಹೊರಡಲು ಒಂದೆರಡು ನಿಮಿಷ ಇರಬಹುದು ಎಂದು ಹಿಂದೆಯೇ ನೆನಪಾದದ್ದು ಟ್ರೈನಲ್ಲಿರುವ ನನ್ನ ಲಗ್ಗೇಜ್ ಬ್ಯಾಗ್ ಮತ್ತಿತರ ಬ್ಯಾಗ್.....ಕ್ಯಾಮರಾ ಕೊರಳಲ್ಲೇ ಇತ್ತು..!!!!
ಮೇಲೆ ಬಂದೆ, ಗಾರ್ಡ್ ’ನಿಮ್ಮ ಲಗೇಜ್ ತೆಗೆದುಕೊಳ್ಳಿ, ಪೋಲಿಸ್ ಗೆ ತಿಳಿಸಿ ರಿಪೋರ್ಟ್ ತೆಗೆದುಕೊಳ್ಳಿ ನಿಮ್ಮ ಬೇರೆ ಪಾಸ್ಪೋರ್ಟ್ ಮಾಡಿಸಲು ಅನುಕೂಲ ಆಗಬಹುದು ಎಂದ. ಟ್ರೈನಿಗೆ ಹೋಗಿ ಲಗ್ಗೇಜ್ ಮತ್ತಿತರ ಬ್ಯಾಗ್ ತೆಗೆದುಕೊಂಡು ನಿಮ್ಮಲ್ಲಿಗೆ ಬಂದೆ.....”
ಅಂದು ಸುದೀರ್ಘ ವಿವರಣೆ ನೀಡಿದೆ...
ಪೋಲೀಸ್ ಕೇಳಿದ -“ನೀವು ಕಳ್ಳನ್ನ ನೋಡಿದ್ರಾ ? ಹೇಗಿದ್ದ ಅವ??”
“ಹೌದು ನಾನು ಬಾಗಿಲಿಂದ ಇಳಿದಾಗ ಅವನು ಮೆಟ್ಟಿಲಿಳಿಯಲು ಓಡುತ್ತಿದ್ದ ಕಂಕುಳಲ್ಲಿ ನನ್ನ ಬ್ಯಾಗ್ ಇತ್ತು, ನನ್ನ ಕೂಗಾಟದಿಂದ ವನ ವೇಗ ಹೆಚ್ಚಾಯ್ತು, ಸಪೂರ ದೇಹ, ನುಸುಗಪ್ಪು ಕೋಟು ಹಾಕಿದ್ದ ಕಡು ಬೂದು ಬಣ್ಣದ (ಇರಬಹುದು) ಪ್ಯಾಂಟ್ ಹಾಕಿದ್ದ, ಸುಮಾರು ೪೦ ರ ಆಸುಪಾಸಿನ ವಯಸ್ಸಿರಬಹುದು.” ಎಂದೆ.
ನನ್ನನ್ನು ದಿಟ್ಟಿಸಿ ನೋಡಿದ ಅಧಿಕಾರಿ ನಿಜಕ್ಕೂ ನಿಮ್ಮ ಬ್ಯಾಗ್ ಕಳುವಾಗಿದೆಯೇ ಎಂದ...??
ನನಗೆ ಆಶ್ಚರ್ಯ ಮತ್ತು ಕೋಪ ಒಟ್ಟಿಗೆ ಬಂತು... ಆದರೆ ತಕ್ಷಣ ಏಕಿರಬಹುದು ಎಂದು ಊಹಿಸಿದೆ...
ನಿಜಕ್ಕೂ ಆ ಎರಡು ನಿಮಿಷ ಬಿಟ್ಟರೆ ಗಾಬರಿ ಇರಲಿಲ್ಲ ನನ್ನ ಮುಖದಲ್ಲಿ. ಬೆಂಚಿನ ಮೇಲೆ ಕುಂತು ಮೇಲೆ ಬಂದಮೇಲೆ ನನಗೆ ಮುಂದೇನು ಮಾಡಬಹುದು ಎಂಬುದರ ಲೆಕ್ಕಾಚಾರ ತಲೆಯಲ್ಲಿ ಓಡುತ್ತಿತ್ತು...ಹಾಗಾಗಿ ಶಾಂತ ಕಂಡ ನನ್ನನ್ನು ನೋಡಿ ಆತನಿಗೆ ಹಾಗನ್ನಿಸಿರಬೇಕು..ಎಂದುಕೊಂಡು... ಆತನ ಮುಖ ನೋಡಿದೆ.. ಆತನೇ ಹೇಳಿದ
“ಸಾಮಾನ್ಯವಾಗಿ ಅಮೂಲ್ಯ ವಸ್ತು ಕಳಕೊಂಡವರು ದಿಕ್ಕು ತೋಚದೇ ಕುಳಿತುಕೊಳ್ಳುತ್ತಾರೆ..ನೀವು ಹೀಗೆ ಕೂಲ್ ಆಗಿರುವುದರಿಂದ ಹಾಗೆ ಕೇಳಿದೆ, ಕ್ಷಮಿಸಿ” ಎನ್ನುತ್ತಾ...
“ಬಂದೆ ಇರಿ, ಎಲ್ಲಾ ರಿಪೋರ್ಟ್ ಮಾಡಿದ್ದೇನೆ ನಿಮ್ಮ ವಿವರ ತುಂಬಬೇಕಷ್ಟೇ” ಎಂದು ಇನ್ನೊಂದು ಕೊಠಡಿಗೆ ಹೋದ...
ನಾನು ನನ್ನ ಲಗೇಜ್ ಬ್ಯಾಗನ್ನೊಮ್ಮೆ ಬಿಚ್ಚಿ ನೋಡಿಕೊಂಡೆ...ಒಂದು ವೇಳೆ ಪಾಸ್ ಪೋರ್ಟ್ ಮತ್ತು ಟಿಕೆಟ್ ಇದರಲ್ಲಿದೆಯಾ ?? ಎಂದು ಆಶಾಭಾವದೊಂದಿಗೆ... ಊಹೂಂ.... ಖಾಲಿ ಮೇಲಿನ ಪೌಚ್ ಅಣಕಿಸಿತು ನನ್ನ, ಯಾಕಂದ್ರೆ ಅಲ್ಲಿಯೇ ಇದ್ದ ಟಿಕೆಟ್, ಪಾಸ್ ಪೋರ್ಟ್ ಮತ್ತು ಇನ್ಶೂರೆನ್ಸ್ ದಾಖಲೆಗಳ ಕವರನ್ನು ಹೋಟೆಲಿಂದ ಹೊರಡುವಾಗ ಲ್ಯಾಪ್ ಟಾಪ್ ಬ್ಯಾಗಿಗೆ ಹಾಕಿದ್ದೆ....!!!!
೫ ನಿಮಿಷದ ನಂತರ ಅಧಿಕಾರಿ ಎರಡು ಹಾಳೆಗಳ ರಿಪೋರ್ಟ್ ನೊಂದಿಗೆ ಹಾಜರಾದ. ನನ್ನ ಹೆಸರು, ಪಾಸ್ಪೋರ್ಟ್ ನಂಬರ್, ಲ್ಯಾಪ್ ಟಾಪ್ ಬ್ರಾಂಡ್ ಎಲ್ಲಾ ವಿವರ ಪೆನ್ನಿನ ಮೂಲಕ ಅದರಲ್ಲಿ ನಮೂದಿಸಿ ನನಗೆ ಸಹಿ ಮಾಡಲು ಹೇಳಿ ಸಹಿ ಮಾಡಿಸಿಕೊಂಡು ತನ್ನ ಸಹಿ ಹಾಕಿ ಸೀಲ್ ಒತ್ತಿ, ಒಂದು ಪ್ರತಿ ತನ್ನ ಬಳಿ ಇಟ್ಟುಕೊಂಡು ಮೂಲ ನನಗೆ ಕೊಟ್ಟು... ಸಾರಿ ಫಾರ್ ದಿ ಅನ್ ಫಾರ್ಚುನೇಟ್ (ನಿಮಗೆ ಘಟಿಸಿದ ಈ ದುರದೃಷ್ಟಕರ ಘಟನೆಗೆ ನನ್ನ ವಿಷಾದವಿದೆ) ಎಂದು ಹೇಳಿ..ಗುಡ್ ಲಕ್ ಹೇಳಿ, ಬ್ರಸೆಲ್ಸ್ ಭಾರತೀಯ ರಾಯಭಾರಿ ಕಛೇರಿಯ ವಿಳಾಸ ಕೊಟ್ಟು ಪಾಸ್ಪೋರ್ಟ್ ಗೆ ಪ್ರಯತ್ನಿಸಿ ಎಂದು ಹೇಳಿ ಬೀಳ್ಕೊಟ್ಟ.
ಪಾಸ್ಪೋರ್ಟ್ ಪ್ರತಿಗಳೂ ಅದೇ ಬ್ಯಾಗಿನಲ್ಲಿದ್ದವು, ಹೋಟೆಲಿನ ನೆನಪಾಯ್ತು, ಬಹುಶಃ ಅವರು ನನ್ನ ಪಾಸ್ಪೋರ್ಟ್ ಪ್ರತಿ ಇಟ್ಟಿರಬಹುದಾ..?? ಇನ್ನೊಂದು ಆಸೆ ಕಿರಣ...!!!!
ಹೋಟೆಲ್ ಗೆ ಬಂದೆ (ಸ್ಟೇಶನ್ ಪಕ್ಕದಲ್ಲೇ ಇದ್ದಿದ್ದರಿಂದ, ಎರಡೇ ನಿಮಿಷದಲ್ಲಿ ಅಲ್ಲಿಗೆ ಬಂದೆ).
ಸ್ವಾಗತಕಟ್ಟೆ (ರಿಸೆಪ್ಶನ್ ಕೌಂಟರ್ನ ಚನ್ನಾಗಿ ಇಂಗ್ಲೀಷ್ ಬಲ್ಲವಳು ಮತ್ತು ಸಂಭಾವಿತ ನಡೆ ನುಡಿಯ) ಹುಡುಗಿ
“ಯೆಸ್ ಸರ್ ಏನಾಯ್ತು” ಎಂದಳು
ಎಲ್ಲಾ ವಿವರಿಸಿದೆ, ಓಹ್ ಮೈ ಗಾಡ್ ಎಂದು ತನ್ನ ಅನುಕಂಪ ತೋರಿ..ಪ್ಲೀಸ್ ಹ್ಯಾವ್ ಸೀಟ್ ಅಂತ ನನ್ನ ಕುಳ್ಳಿರಿಸಿ.. ವಾಟ್ ವುಡ್ ಯು ಲೈಕ್ ಟು ಹ್ಯಾವ್ (ಏನು ತಗೋತೀರಿ), ಕಾಫಿ, ಟೀ, ಜ್ಯೂಸ್..ಎಂದಳು
ದಾಕ್ಷಿಣ್ಯ..ಸಂಕೋಚ ತೋರದೇ “ಜ್ಯೂಸ್” ಎಂದೆ
ಜ್ಯೂಸ್ ಕೊಟ್ಟಳು ಕುಡಿಯುತ್ತಾ, ನಿಮ್ಮಲ್ಲಿ ನನ್ನ ಪಾಸ್ಪೋರ್ಟ್ ಕಾಪಿ ಇದೆಯೇ ಎಂದೆ
ಇಲ್ಲ ವೀಸಾ ಪುಟ ಮಾತ್ರ ತಗೋತೀವಿ ಅದರ ಪ್ರತಿ ಒಂದೆರಡು ಕೊಡುತ್ತೇನೆ ಎಂದು, ಎರಡು ಪ್ರತಿ ಮಾಡಿಕೊಟ್ಟು..ಮತ್ತೇನಾದರೂ ಸಹಾಯ ಬೇಕಿದ್ದರೆ ತಿಳಿಸಿ ಎಂದಳು...
ಆಕೆಗೆ ಧನ್ಯವಾದ ಹೇಳಿ, ಬ್ರಸಲ್ಸ್ ಭಾರತೀಯ ಎಂಬಸಿ ಗೆ ಫೋನ್ ಮಾಡಲಾಗುತ್ತದೆಯೇ..?? ಎನ್ನುತ್ತಿರುವಂತೆಯೇ..
ಫೋನಾಯಿಸುತ್ತಾ.. ನಂಬರ್ ಹೇಳಿ ಎಂದಳು..
ಎಂತಹ..ವಿಲೋಮಗಳು..ವಿಪರೀತಗಳು...!!! ನನಗೆ ಆಶ್ಚರ್ಯ ಎನಿಸಿತು.. ಎಲ್ಲಾ ದಿಕ್ಕೆಡುವಿಕೆಗೆ ದೂಡಿದ ನಿರ್ದಯಿ ಕಳ್ಳ ಒಂದೆಡೆ, ನನಗೆ ಮಾರ್ಗ (ಗೊತ್ತಿಲ್ಲ) ತೋರಿ ರೈಲಿಬ ಬಗ್ಗೆ ಹೇಳಿಯೂ ಕಳ್ಳನನ್ನು ಕಂಡೂ ಸುಮ್ಮನಿದ್ದ ಸಹಪ್ರಯಾಣಿಕ ಇನ್ನೊಂದೆಡೆ, ತನ್ನ ಕೈಲಾದ ಸಹಾಯ ಮಾಡಿದ ರೈಲ್ವೇ ಗಾರ್ಡ್, ಸೌಹಾರ್ದವಾಗಿ ವರ್ತಿಸಿದ ಪೋಲೀಸ್ ಅಧಿಕಾರಿ, ಬಲು ಸಂಭಾವಿತ ನಡೆ ತೋರಿ ಸಹಕರಿಸಿದ ಹೋಟೆಲ್ ರಿಸೆಪ್ಶನಿಷ್ಟ್ ಮಗದೊಂದೆಡೆ..!!! ಎಂತಹ ವಿಚಿತ್ರ?? ಏನು ತಿರುವುಗಳು...??? ವಿಧಿ, ಜೀವನ ಎಂದರೆ ಇದೇ...!!!
ರಿಸೆಪ್ಶನಿಷ್ಟ್ ನಿಂದ ಎಂಬಸಿಯ ವಿವರ ಪಡೆದು ಮತ್ತೆ ಅದೇ ಸ್ಟೇಷನ್ನಿಗೆ ಬಂದೆ... ಟಿಕೆಟ್ ಗೆ ಹೋದಾಗ ನನ್ನ ಮುಖ ಕಂಡು ಮುಂಗಟ್ಟಿನ (ಕೌಂಟರಿನ) ವ್ಯಕ್ತಿ.. ಹುಬ್ಬೇರಿಸಿದ... “ಏಕೆ ಗೆಂಟ್ ಗೆ ಹೋಗಲಿಲ್ಲವಾ ಎನ್ನುವಂತೆ...
ಆತ ಕೇಳುವುದಕ್ಕೆ ಮುಂಚೆಯೇ ಸ್ಥೂಲವಾಗಿ ವಿವರಿಸಿ, ಗೆಂಟ್ ಟಿಕೆಟ್ ವಾಪಸ್ ಪಡೆದು ಬ್ರಸೆಲ್ಸ್ ಟಿಕೆಟ್ ಕೊಡುವಿರಾ ಎಂದಾಗ... ನೋ ಪ್ರಾಬ್ಲಂ... ಅದೇ ಟಿಕೆಟ್ ಮೌಲ್ಯದ್ದೇ ಬ್ರಸಲ್ಸ್ ಟಿಕೆಟ್ ಎಂದು ನನ್ನ ಟಿಕೆಟ್ ಪಡೆದು ಬ್ರಸೆಲ್ಸ್ ಟಿಕೆಟ್ ಕೊಟ್ಟು “ಗುಡ್ ಲಕ್” ಎಂದು ಶುಭಕೋರಿದ... !!! ಹೀಗೂ ಇರ್ತಾರೆ..ಎನಿಸಿತು, ಬಹುಶಃ ನಕಾರಾತ್ಮಕ ಛಾಪು ಕಡಿಮೆಯಾಗತೊಡಗಿತ್ತು ಮನದಲ್ಲಿ ಬೆಲ್ಜಿಯಂ ಬಗ್ಗೆ.
ಪುಣ್ಯಕ್ಕೆ ಈ ಸಲದ ಟ್ರೈನ್ ಕೆಳಗಿನ ಪ್ಲಾಟ್ ಫಾರಂ...!!! ಟ್ರೈನಿಗಾಗಿ ಕಾದೆ, ಐದು ನಿಮಿಷದಲ್ಲಿ ಟ್ರೈನ್ ಬಂತು, ಹತ್ತಿ ಕುಳಿತೆ... ಒಂದು ಬ್ಯಾಗ್ ಕಡಿಮೆ ಆಗಿತ್ತು ...!!! ಹಾಗಾಗಿ ಎಣಿಕೆ ತಪ್ಪಲಿಲ್ಲ....
೪೦ ನಿಮಿಶದಲ್ಲಿ ಬ್ರಸೆಲ್ಸ್ ಸೆಂಟ್ರಲ್ ನಲ್ಲಿಳಿದೆ.


ಆ ವೇಳೆಗೆ ಸಂಜೆಯ ನಾಲ್ಕು ಗಂಟೆಗೆ ಐದು ನಿಮಿಷ ಬಾಕಿ. ತಡ ಮಾದದೇ ಟ್ಯಾಕ್ಸಿ ಹಿಡಿದು ಅಡ್ರೆಸ್ ತೋರಿಸಿದೆ, ೧೨ ಯೂರೋ ತೆಗೆದುಕೊಂಡು ಭಾರತೀಯ ಎಂಬಾಸಿ ಬಳಿ ಇಳಿಸಿದ. ೪೫-೫೦ ಕಿಮೀ ಗೆ ೭ ಯೂರೋ, ಎರಡು ಕಿಮೀ ದೂರದ ಭಾರತೀಯ ಎಂಬಾಸಿಗೆ ೧೨ ಯೂರೋ..!!! ವಾಹ್ ಬೆಲ್ಜಿಯಂ ಟ್ಯಾಕ್ಸಿಯೇ...!!!
ನಾಲ್ಕಕ್ಕೆ ಎಂಬಸಿ ಬಾಗಿಲು ತೆರೆಯಿತು, ದೇಶದ ಹತ್ತಾರು ಮಂದಿ, ಹಿಂದಿ ಇಂಗ್ಲೀಷ್ ಪರಿಚಿತ ಮಾತುಗಳು...!! ಅಬ್ಬಾ...!!!
ಒಳಗಡೆ ಹೋಗಿ ನನ್ನ ಸರದಿಗಾಗಿ ೫ ನಿಮಿಷ ಕಾದೆ. ಮುಂಗಟ್ಟೆಯ ಮಹಿಳೆ (ಬಹುಶಃ ದಕ್ಷಿಣ ಭಾರತದವಳು ಎನಿಸುತ್ತೆ) ಸಾವಕಾಶವಾಗಿ ನನ್ನ ಅಹ್ವಾಲು ಕೇಳಿ ಕೆಲವು ಫಾರ್ಮ್ ಕೊಟ್ಟು ತುಂಬಲು ಹೇಳಿದಳು. ಈ ದಿನದ ವಹಿವಾಟು ಮುಗಿದೆ, ಯಾವುದಕ್ಕೂ ಈ ದಿನ ನೀವು ಅರ್ಜಿ ಸಲ್ಲಿಸಿ ನಾಳೆ ಬೆಳಿಗ್ಗೆ ನಿಮಗೆ ನಮ್ಮ ಕೈಲಾದ ಎಲ್ಲಾ ಸಹಾಯ ಮಾಡುತ್ತೇವೆ ಎಂದು ನನ್ನ ಧೈರ್ಯ ಹೆಚ್ಚಿದಳು. ನಮ್ಮ ಸಾಹೇಬ್ರು ಅಜಯ್ ಅಗರ್ವಾಲ್ ಅಂತ ಅವರನ್ನು ಭೇಟಿ ಮಾಡಿ ಹೇಳಿ ಎಮ್ದೂ ಸಲಹೆ ಕೊಟ್ಟಳು...!!! ಕಳ್ಳ, ಕಳ್ಳನ ಸಹಾಯಕ ಈ ಇಬ್ಬರನ್ನು ಬಿಟ್ಟರೆ...!!!??? ನೆನಪಿಸಿಕೊಂಡು ಮುಗುಳ್ನಕ್ಕೆ, ಏನು? ಏನಾಯ್ತು ಎಂದು ಕೇಳಿದಳು ಆಕೆ...ಕುತೂಹಲದಿಂದ... ಏನಿಲ್ಲ .. ಕಳ್ಳನ ಬಗ್ಗೆ ಯೋಚಿಸಿ ನಗು ಬಂತು ಎಂದೆ... ಈಗ ಆಕೆಯ ಮುಖದಲ್ಲಿ ಆಶ್ಚರ್ಯ ಮತ್ತು ಸಂಶಯ ಸಹಾ ಕಂಡಿತು...ಬಹುಶಃ ಪೋಲೀಸ್ ಅಧಿಕಾರಿಯ ಮನಸ್ಥಿತಿಯೇ ಇಲ್ಲಿಯೂ...!!!!



ಸ್ವಲ್ಪ ಸಮಯದಲ್ಲಿ, ಸರ್... ಸಾಹೇಬ್ರು ಕರೀತಿದ್ದಾರೆ..ಬನ್ನಿ ಎಂದು ಒಳ ಕರೆದಳು. ಒಳ ಹೋದೆ, ಸುಮಾರು ೩೦-೩೨ ವಯಸಿನ ನೀಟಾಗಿ ಬಾಚಿದ ಗೋಧಿ ಮೈಬಣ್ಣದ ೫.೫-೫.೬ ಅಡಿ ಎತ್ತರದ ಮತ್ತು ಸೌಮ್ಯ ಎನಿಸುವ ಮುಖಭಾವದ ಅಧಿಕಾರಿ ಪ್ಲೀಸ್ ಕಮ್ ಇನ್ ಎಂದಾಗ... ನನ್ನ ಆತನ ಬಗ್ಗೆ ಏಕೋ ಒಳ್ಳೆಯ ಮನುಷ್ಯ ಎನಿಸಿತ್ತು.
“ಹೇಳಿ..ಏನಾಯ್ತು... “
ಪೂರ್ತಿ ಕಥೆಯನ್ನು ವಿವರಿಸಿದೆ... ನನ್ನ ಆಶ್ಚರ್ಯಕ್ಕೆ ಆತ ಚಕಿತಗೊಳ್ಲಲಿಲ್ಲ...
“ಡೋಂಟ್ ವರಿ, ಇಂತಹ ಕೇಸುಗಳು ನನಗೆ ವಾರಕ್ಕೆ ಎರಡು ಮೂರಾದ್ರೂ ಸಿಗುತ್ತವೆ” ಎಂದ
ಆತನ ಮಾತು, ಏನೇ ಆಗಬೇಕಿದ್ದರೂ ಒಳ್ಲೆಯ ದಿಶೆಯಲ್ಲೇ ಆಗುತ್ತೆ ಎನ್ನುವ ಭರವಸೆ ಮೂಡತೊಡಗಿತು. ನನ್ನ ಹಿನ್ನೆಲೆ ಮತ್ತು ನನ್ನ ಗೊಂದಲಗಳ ಬಗ್ಗೆ ಹೇಳಿದಾಗ ನನ್ನ ಸ್ಥೈರ್ಯ ಹೆಚ್ಚಿಸುವ ಆತನ ಮಾತು ಇನ್ನೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ.
“ಲುಕ್ ಡಾಕ್ಟರ್ ಆಜಾದ್, ಮೈಂ ಆಪ್ಕೆ ಲಿಯೇ ಜೋ ಭೀ ಬನ್ ಪಡೆಗಾ ಕರೇಂಗೆ, ಟೇಕ್ ಇಟ್ ಫ್ರಂ ಮಿ, ಯೂ ವಿಲ್ ಟ್ರಾವೆಲ್ ಅಸ್ ಪರ್ ಯುವರ್ ಶೆಡ್ಯೂಲ್, ಕಲ್ ಆಪ್ ಸುಬಹ್ ೯.೩೦ ಕೊ ಆಜಾಯಿಯೆ, ಕ್ಯೂ ಜೋ ಭೀ ಹೋ, ಆಪ್ಕಾ ಕೇಸ್ ಪ್ರಯಾರಿಟಿ ಮೆ ಲೇಂಗೆ, ಕುವೈತ್ ಸೆ ಆಪ್ಕೆ ಪಾಸ್ಪೋರ್ಟ್ ಕೆ ಬಾರೆ ಮೆ ಕಂಫ್ಹರ್ಮೇಶನ್ ಮಿಲ್ತೇ ಹೀ ಆಪ್ಕೋ ದೋ ಸಾಲ್ ಕೆ ವ್ಯಾಲಿಡಿಟಿ ಕೆ ಸಾಥ್ ಪಾಸ್ಪೋರ್ಟ್ ಇಶ್ಯೂ ಕರ್ ಕೆ ದೇಂಗೆ”
ನನಗೆ ಈಗಂತೂ ನನ್ನ ಹಣೆಬರಹ ಮತ್ತು ಸಿಗುತ್ತಿದ್ದ ಉತ್ತಮ ಸಹಕಾರೀ ವ್ಯಕ್ತಿತ್ವಗಳ ಕಾರಣ ಭರವಸೆ ಮೂದತೊಡಗಿತ್ತು... ನನ್ನ ಆತಂಕ ಉಳಿದಿದ್ದು..ಒಂದೇ....ಪಾಸ್ಪೋರ್ಟ್ ಸಿಗುತ್ತೆ ಆದರೆ ಕುವೈತಿಗೆ ಪ್ರವೇಶ ಹೇಗೆ...?? ಒಂದು ಕಪ್ಪು ಮೋಡದ ರಜತರೇಖೆ (silver lining in a dark cloud) ಎಂದರೆ ನನ್ನಲ್ಲಿ ಕ್ಷೇಮವಾಗಿದ್ದ ಎಲ್ಲಾ ಕ್ರೆಡಿಟ್ ಕಾರ್ಡ್ಗಳು, ಕುವೈತ್ ನ ಸಿವಿಲ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮತ್ತು ಎಲ್ಲ ಹೃದಯವಂತರು ತುಂಬಿದ್ದ ಭರವಸೆ.

ಒಳಿತನ್ನು ಎದುರುನೋಡಬೇಕಿದ್ದರೆ ಒಳಿತು ಮಾಡುವ ಮನೋಭಾವ ಮೊದಲಿರಬೇಕು....!! ನನ್ನಮ್ಮ ಹೇಳುತ್ತಿದ್ದ ಮಾತುಗಳು ನೆನಪಾದವು. “ಕರ್ ಭಲಾ ತೋ ಹೋ ಭಲಾ”

Saturday, July 13, 2013

ಬೆಲ್ಜಿಯಂ - ಬೆಲೆ ...ಹೀಗೂನಾ...???

ಬೆಲ್ಜಿಯಂ – ಯೂರೋಪಿಗೆ ನನ್ನ ಎರಡನೇ ಭೇಟಿ ಈ ದೇಶಕ್ಕೆ ಎನ್ನುವ ಅಂಶ ಒಂದೆಡೆಯಾದರೆ “ಜೈವಿಕ ತಂತ್ರಜ್ಞಾನದ ಅಂತರ ರಾಷ್ಟ್ರೀಯ ವಿಚಾರ ಸಂಕಿರಣ -೨೦೧೩” ಕ್ಕೆ ಹೋಗಿ ಅಲ್ಲಿ ಶೋಧ ಪತ್ರ ಮಂಡಿಸುವ ಖುಷಿ ಇನ್ನೊಂದೆಡೆ. ಆದರೆ ಯಾತ್ರೆಯ ಕಡೆಯ ದಿನಗಳು ನನ್ನ ಒಳಗನ್ನು ಪರೀಕ್ಷಿಸುವ ದಿನಗಳಾಗಿದ್ದು ಐರೋಪ್ಯ ದೇಶಗಳಲ್ಲಿ ನಮಗಿರುವ “ಶುದ್ಧ ಸಂಭಾವಿತರು” ಎನ್ನುವ ಭಾವನೆಗೆ ಧಕ್ಕೆ ಎನ್ನುವಂತಹ ಘಟನೆ ನಡೆದದ್ದು ಮತ್ತು ನಂತರದ ಅನುಭವಗಳು...ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ....ಎಷ್ಟು ನಿಜ ಅಲ್ಲವೇ ? ಎನ್ನುವಂತೆ ಮಾಡಿದೆ.
ಬೆಲ್ಜಿಯಂ ನ ರಾಜಧಾನಿ ಬ್ರಸಲ್ಸ್ ನಿಂದ ವಿಚಾರ ಸಂಕಿರಣ ನಡೆಯಬೇಕಿದ್ದ ಆಂಟ್ವೆರ್ಪ್ ವಿಶ್ವವಿದ್ಯಾಲಯ ಕ್ಕೆ ಬ್ರಸಲ್ಸ್ ವಿಮಾನ ನಿಲ್ದಾಣದಿಂದ ಮತ್ತು ವಾಪಸಿನಲ್ಲಿ ವಿಶ್ವವಿದ್ಯಾಲಯದಿಂದ ಬ್ರಸಲ್ಸ್ ವಿಮಾಣಕ್ಕೆ ಕುವೈತಿನಲ್ಲಿದ್ದಾಗಲೇ  ಟ್ಯಾಕ್ಸಿಗಾಗಿ ಮುಂಗಡ ಬುಕಿಂಗ್ ಮಾಡಿದ್ದೆ ಹಾಗಾಗಿ ವಿಮಾನ ನಿಲ್ದಾಣದಲ್ಲಿ ನನ್ನ ಹೆಸರಿನ ಪ್ಲಕಾರ್ಡ್ ಹಿಡಿದಿದ್ದ ಟ್ಯಾಕ್ಸಿ  ಚಾಲಕನನ್ನು ನೋಡಿ “ಈ ಜನ ಎಷ್ಟು ಸಮಯ ಪ್ರಜ್ಞೆ ಉಳ್ಳವರು ಎನಿಸಿದ್ದು ನಿಜ.
ಮೂರು ದಿನದ ಕಾರ್ಯಕ್ರಮದ ಪ್ರಬಂಧ ಮಂಡನೆಗಳನ್ನು ಎರಡು ದಿನಕ್ಕೆ ಪೂರೈಸಿ ಮೂರನೇ ದಿನ ಬೆಲ್ಜಿಯಂ ನಗರ ದರ್ಶನಕ್ಕೆ ಎಂದೇ ಮೀಸಲಿಡಿಸಿದ್ದು ಜುಲೈ ೧೦ಕ್ಕೆ ಗೆಂಟ್ ಪ್ರದೇಶದ ಗೆಂಟ್ ವಿಶ್ವವಿದ್ಯಾಲಯದಲ್ಲಿದ್ದ ಮೀನುಗಾರಿಕಾ ಪದವೀಧರ ಸ್ನೇಹಿತರಿಬ್ಬರನ್ನು ನೋಡಿಬರುವ ನಿಶ್ಚಯ ಮಾಡಿ ಹೋಟಲ್ ರೂಮನ್ನು ಖಾಲಿ ಮಾಡಿ ಹತ್ತಿರದ ಆಂಟ್ವರ್ಪ್ ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಹೊರಟೆ. ಲ್ಯಾಪ್ ಟಾಪಿನ ಬ್ಯಾಗಲ್ಲಿ ಪಾಸ್ ಪೋರ್ಟ್, ಟಿಕೆಟ್ , ವಿಮಾ ಪತ್ರಗಳು ಮತ್ತು ಲ್ಯಾಪ್ ಟಾಪ್ ಇದ್ದಿದ್ದರಿಂದ ಹೆಗಲಿಗೆ ಕತ್ತಿನ ತೂಗು ಹಾಕಿಕೊಂಡೆ, ಕತ್ತಿಗೆ ಕ್ಯಾಮರಾ ತೂಗುಹಾಕಿಕೊಂಡು ದೃಶ್ಯ ಸೆರೆಹಿಡಿಯಲು ಅನುವಾಗುವಂತೆ ಮಾಡಿಕೊಂಡೆ. ಹೊರಬರುವಾಗ ಹೋಟೆಲ್ ನ ಚಿತ್ರಗಳು, ಸ್ಟೇಶನ್ ನ ಹೊರ ನೋಟ ಸೆರೆಹಿಡಿದೆ. 
ಉಳಿದುಕೊಂಡ ಹೋಟೆಲ್: ಇಬಿಸ್ ಆಂಟ್ವೆರ್ಪ್ 

ಅಂಟ್ವೆರ್ಪ್ ಸ್ಟೇಶನ್....

ಟಿಕೆಟ್ ಕೊಂಡು ಮೊದಲ ಮಹಡಿಯಿಂದ ಹೊರಡಬೇಕಿದ್ದ ರೈಲನ್ನು ಹುಡುಕಿ ಹೊರಟೆ. ಅಲ್ಲೇ ಇದ್ದ ಕೆಲವರನ್ನು ಕೇಳಿದೆ... ಇಂಗ್ಲೀಷ್ ಸರಿಯಾಗಿ ಅರ್ಥವಾಗದ ಕೆಲವರು ಹೇಳಿದ್ದು ನನಗೆ ಅರ್ಥವಾಗಲಿಲ್ಲ. ಅಲ್ಲಿಯೇ ಇದ್ದ ಒಬ್ಬ ಅರೆಬರೆ ಇಂಗ್ಲೀಷಲ್ಲಿ ಈ ಎರಡನೇ ಸಾಲಿನಲ್ಲಿರುವ ರೈಲು ಹೋಗುತ್ತೆ ಎಂದ. ಇನ್ನೂ ಹತ್ತು ಹದಿನೈದು ನಿಮಿಷ ಬಾಕಿ ಇತ್ತು, ಬೆಳಗಿನ ತಿಂಡಿ ಸರಿಯಾಗಿ ಸಿಗದ ಕಾರಣ ಹೊರಡಲು ತಯಾರಾಗಿದ್ದೆ. ಅಲ್ಲಿಯೇ ಇದ್ದ ಬರ್ಗರ್ ಕಾರ್ನರ್ ಅದುಮಿಟ್ಟ ನನ್ನ ಹಸಿವನ್ನು ಜಾಗೃತಗೊಳಿಸಿತ್ತು. 



ಬರ್ಗರ್ ತಿಂದ ಜಾಗ

ಸೂಟ್ ಕೇಸ್, ಲ್ಯಾಪ್ ಟಾಪ್, ಕ್ಯಾಮರಾ ಬ್ಯಾಗು, ಬಟ್ಟೆಯ ಕಾನ್ಫರೆನ್ಸ್ ಬ್ಯಾಗ್ ಎಲ್ಲವನ್ನೂ ಎತ್ತಿಕೊಂಡು ಅಲ್ಲೇ ಇದ್ದ ಚೇರಿನಲ್ಲಿ ಕುಳಿತು ಬರ್ಗರ್ ಗೆ ಆರ್ಡರ್ ಕೊಟ್ಟೆ.., ಹಾಗೆಯೇ ಸ್ಟೇಶನ್ನಿನ ವಿವಿಧ ಕಟ್ಟಡ ಸುಂದರ ದೃಶ್ಯಗಳನ್ನು ಸೆರೆ ಹಿಡಿದೆ. ಇನ್ನೇನು ೪-೫ ನಿಮಿಷ ಉಳಿದಿದೆ ನನ್ನ ಗೆಂಟ್ ಗೆ ಹೊರಡುವ ರೈಲಿನ ನಿರ್ಗಮನಕ್ಕೆ ಎನ್ನುವಾಗ ಹಣ ಕೊಟ್ಟು, ಹೆಗಲಿಗೆ ಲ್ಯಾಪ್ ಟಾಪ್ ಬಾಗ್, ಕುತ್ತಿಗೆಗೆ ಕ್ಯಾಮರಾ, ಒಂದು ಕೈಯಲ್ಲಿ ಕ್ಯಾಮರಾ ಬ್ಯಾಗ್ ಮತ್ತು ಕಾನ್ಫರೆನ್ಸ್ ಬ್ಯಾಗ್ ಇನ್ನೊಂದು ಕೈಯಲ್ಲಿ ಸೂಟ್ ಕೇಸಿನ ಟ್ರಾಲಿ ಹ್ಯಾಂಡಲ್ ತಗೊಂಡು ರೈಲಿನತ್ತ ಹೊರಟೆ. ಮುಂಚೆ ಅರ್ಧಂಬರ್ಧ ಇಂಗ್ಲೀಷಲ್ಲಿ ರೈಲಿನ ಬಗ್ಗೆ ಹೇಳಿದವನೂ ನನ್ನದೇ ರೈಲಿನತ್ತ ಬಂದ, ನೀವೂ ಇದೇ ರೈಲಿಗಾ ಎಂದಾಗ ಹೌದು ಎಂದ. ನಾನು ಹತ್ತಿದ ಬೋಗಿಗೇ ಅವನೂ ಹತ್ತಿದ. ಒಳ ಹತ್ತುವಾಗ ಟ್ರಾಲಿ ಹ್ಯಾಂಡಲ್ ಮಡಚಿ ಹಿಡಿಯನ್ನು ಹಿಡಿದು ಮೇಲೆ ಎತ್ತಿದಾಗ ಹಿಡಿ ಕೈಗೆ ಬಂದು ಬಾಗಿಲಬಳಿಯೇ ಆ ಸೂಟ್ ಕೇಸ್ ಕುಸಿದು ಬಿತ್ತು. ಮೂರನೇ ಸಾಲಿನಲ್ಲಿದ್ದ ಸೀಟಿನಲ್ಲಿ ಲ್ಯಾಪ್ ಟಾಪ್ ಬ್ಯಾಗ್, ಕಾನ್ಫರೆನ್ಸ್ ಬ್ಯಾಗ್, ಕ್ಯಾಮರಾ ಬ್ಯಾಗನ್ನು ಇಟ್ಟು ಸೂಟ್ ಕೇಸನ್ನು ತರಲು ಬಂದೆ. ಹಿಡಿ ಸರಿಮಾಡಲಾಗುವುದೇ ನೋಡಿದೆ, ಆಗಲಿಲ್ಲ.. ಹಾಗೇ ರೈಲ್ ಹೊರಡಲು 3 ನಿಮಿಷ ಇದೆ ಎಂದು ಸ್ಟೇಷನ್ ಗಡಿಯಾರದ ಮೂಲಕ ಖಚಿತ ಪಡಿಸಿಕೊಂಡು ಡಿಪಾರ್ಚರ್ ಗೇಟ್ ನ ಒಂದು ಚಿತ್ರ ತೆಗೆಯುವ ಉದ್ದೇಶದಿಂದ ಬಾಗಿಲಿಂದಲೇ ಕತ್ತು ಹೊರಚಾಚಿ ಫೋಟೋ ತೆಗೆದೆ. 

ಬಾಗಿಲಿಂದ ಹೊರಚಾಚಿದ ನನ್ನ ಕ್ಯಾಮರಾ ತೆಗೆದ ಚಿತ್ರ: ಲ್ಯಾಪ್ ಟಾಪ್ ಕಳುವಿಗೆ ಇದು ಅನುವಾಯ್ತಾ..???

ನಂತರ ಸೂಟ್ ಕೇಸ್ ತೆಗೆದುಕೊಂಡು ಸೀಟಿಗೆ ಬಂದು ಸೂಟ್ ಕೇಸನ್ನು ಮೇಲೆ ಲಗೇಜ್ ಸ್ಟಾಂಡಲ್ಲಿಟ್ಟೆ ಆಗಲೇ ಗೊತ್ತಾಗಿದ್ದು ನನ್ನ ಲ್ಯಾಪ್ ಟಾಪ್ ಅಲ್ಲಿಲ್ಲ ಎಂದು..!!!! ತಕ್ಷಣ ಆಚೀಚೆ ನೋಡಿದೆ..ನನ್ನ ಸೀಟಿನಿಂದ ಎರಡು ಸೀಟ್ ಮುಂದಕ್ಕೆ ಕುಳಿತಿದ್ದ ಆ ವ್ಯಕ್ತಿ ..ಅಗೋ ಅಗೋ...ಅಲ್ಲಿ ಅವನು ತಗೊಂಡು ಹೋಗ್ತಿದ್ದಾನೆ...!!! ಎಂದ,,ನನ್ನ ಕೋಪ ನೆತ್ತಿಗೇರಿತ್ತು..ಯೂ ಬ್ಲಡಿ...ಹಿಡಿಯೋಕೆ ಆಗ್ತಿರ್ಲಿಲ್ವಾ ಅವನ್ನ... ನೋಡ್ಕೊಂಡು ಕೂತಿದ್ದೀಯಾ..?? ಅಂತ ಕೂಗಾಡ್ತಾ (ನಾನು ಕೂಗಾಡಿದ್ದು ಕನ್ನಡದಲ್ಲೇ..ಯಾಕಂದ್ರೆ ಅವನಿಗೆ ನನ್ನ ಭಾಷೆ ಅರ್ಥವಾಗುವ ಹಾಗಿರಲಿಲ್ಲ ಅಥವಾ ನಾನು ಹೇಳುವುದನ್ನು ಕೇಳುವ ಆಸಕ್ತಿಯೂ ಅವನಿಗಿರಲಿಲ್ಲ)...ತಕ್ಷಣ..ಥೀಫ್ ಥೀಫ್.. ಕ್ಯಾಚ್ ಹಿಮ್ ಎನ್ನುತ್ತಾ ಓಡಿದೆ... ಮುಂದಿನ ಬಾಗಿಲಿಂದ ಓಡಿದ ನನಗೆ ಸುಮಾರು 50-60 ಮೀಟರ್ ದೂರದಲ್ಲಿ ಕಂಕುಳಲ್ಲಿ ಲ್ಯಾಪ್ಟಾಪ್ ಬ್ಯಾಗ್ ಅದುಮಿ ಓಡುತ್ತಿದ್ದ ಸಣಕಲು ದೇಹದ ಕಪ್ಪು ಕೋಟಿನ ವ್ಯಕ್ತಿ ಸ್ಪಷ್ಟವಾಗಿ ಕಂಡ. ನನ್ನ ಕೂಗಾಟ ಕೇಳಿದ ಮುಮ್ದಿನ ಬೋಗಿಯ ಹತ್ತಿರವಿದ್ಧ ಗಾರ್ಡ್..ಯೂ ಕಮ್ ದಟ್ ಸೈಡ್ ಐ ವಿಲ್ ಚೇಸ್ ಹಿಮ್ ಫ್ರಂ ದಿಸ್ ಸೈಡ್  (ನೀನು ಆ ಕಡೆಯಿಂದ ಬಾ ನಾನು ಈ ಕಡೆಯಿಂದ ಅವನ್ನ ಅಟ್ಟಿಸಿ ಬರ್ತೇನೆ) ಎಂದ. ಕೆಳಗಿಳಿಯುವ ಮೆಟ್ಟಿನ ಗೊಂದಲ ಮೀರಿ ಸಾವರಿಸಿಕೊಂಡು ಓಡಿದೆ... ಥೀಫ್ ಥೀಫ್ಹ್ ಎನ್ನುತ್ತಾ... ಕೆಳಗಿಳಿದು ನೋಡಿದರೆ ಹೊರ ಹೋಗುವ ಸುಮಾರು ಎಂಟು ಗೇಟುಗಳು...!!! ಎಲ್ಲೂ ಕಾಣಲಿಲ್ಲ ಅವನು...!! ಅಷ್ಟರಲ್ಲಿ ಗಾರ್ಡ್ ಸಹಾ ಬಂದ...ಎಲ್ಲಿ ಸಿಕ್ಕನಾ..?? ಎಂದ... ಕೆಳಗಿಳಿದ ಮೇಲೆ ಅವನನ್ನು ಹುಡುಕುವುದು ಕಷ್ಟ..ಎಂದ.  ಅಷ್ಟರಲ್ಲಿ ರೈಲ್ ಬಿಡುವ ಸಮಯ ಹತ್ತಿರವಾಯಿತೆಂದು ಜಾಗೃತಗೊಂಡ ನನ್ನ ಮನಸು ಹೇಳಿತು... ಓ!! ದೇವರೇ..ನನ್ನ ಸೂಟ್ ಕೇಸ್ ಮತ್ತು ಕ್ಯಾಮರಾ ಬ್ಯಾಗ್...ಎಂದುಕೊಂಡು ಕೊರಳು ನೋಡಿಕೊಂಡೆ..ನನ್ನ ಕ್ಯಾಮರಾ ಕತ್ತಿನಲ್ಲಿ ನೇತಾಡ್ತಾ ನನ್ನ ನೋಡಿ ನಕ್ಕಂತಾಯಿತು. ತಕ್ಷಣ ನನ್ನ ಸೂಟ್ ಕೇಸನ್ನು ತೆಗೆದುಕೊಳ್ಳಲು ಮೇಲಕ್ಕೆ ಮತ್ತೆ ಧಾವಿಸಿದೆ. ತಿಂದಿದ್ದ ಬರ್ಗರ್ ಖಾಲಿ ಆಗಿತ್ತೇನೋ...ಬಾಯಿ ಒಣಗಿತ್ತು. ಬೋಗಿಗೆ ಹೋಗಿ ಲಗೇಜ್ ಸ್ಟಾಂಡ್ ನಿಂದ ಸೂಟ್ ಕೇಸ್ ಇಳಿಸಿ ಕ್ಯಾಮರಾ ಬ್ಯಾಗ್ ಮತ್ತು ಬಟ್ಟೆಯ ಕಾನ್ಫರೆನ್ಸ್ ಬ್ಯಾಗ್ ತಗೊಂಡು ಕೆಳಗಿಳಿದೆ. ನೀವು ತಕ್ಷಣ ರೈಲ್ವೇ ಪೋಲೀಸ್ ಸ್ಟೇಶನ್ ಗೆ ಹೋಗಿ ಕಂಪ್ಲೇಂಟ್ ಕೊಡಿ ಅದು ನಿಮಗೆ ಪಾಸ್ ಪೋರ್ಟ್ ಸಿಗಲು ಸಹಾಯವಾಗುತ್ತದೆ ಮತ್ತು ನಿಮ್ಮ ಅದೃಷ್ಟ ನಿಮ್ಮ ಜೊತೆಗಿದ್ದರೆ ಕದ್ದ ಮಾಲು ಸಿಗಬಹುದು ಎಂದು ಸಲಹೆ ನೀಡಿದ ರೈಲ್ವೇ ಗಾರ್ಡ್.


ಅಲ್ಲೇ ಬೆಂಚಿನ ಮೇಲೆ ಐದು ನಿಮಿಷ ಕೂತಿದ್ದು, ಬಟ್ಟೆ ಬ್ಯಾಗಿನಲ್ಲಿದ್ದ ನೀರಿನ ಬಾಟಲಿಂದ ನೀರು ಕುಡಿದೆ, ಕಳ್ಳನನ್ನು ಹಿಂಬಾಲಿಸಿ ಹಿಡಿಯಲಾಗದೇ ವಾಪಸ್ಸಾದ ಒಂದರ್ಧ ನಿಮಿಷ ದಿಕ್ಕೆಟ್ಟು ಕೂತಿದ್ದ ನನಗೆ ನೀರು ಕುಡಿದ ಮೇಲೆ ಮುಂದಾಗಬೇಕಾದ ಕಾರ್ಯಗಳತ್ತ ಗಮನ ಹರಿಯಿತು. ಕೆಳಗಿಳಿದು ಬಂದು ಅಲ್ಲಿಯೇ ಇದ್ದ ಪೋಲೀಸ್ ಸ್ಟೇಶನ್ನಿಗೆ ಹೋದೆ. ಅಲ್ಲಿದ್ದ ಡ್ಯೂಟಿ ಆಫೀಸರ್ ಗೆ ನನ್ನ ಲ್ಯಾಪ್ ಟಾಪ್ ಮತ್ತು ಡಾಕ್ಯುಮೆಂಟ್ಸ್ ಕಳ್ಲತನ ಆಗಿದೆ ಎಂದೆ ಇಂಗ್ಲೀಷಲ್ಲಿ... ಸದ್ಯ ಆತನಿಗೆ ಇಂಗ್ಲೀಷ ಅರಿವಿತ್ತು. ದಯವಿಟ್ಟು ಕೂತಿರಿ, ಆಫೀಸರ್ ಬರ್ತಾರೆ ಎಂದು ಅಲ್ಲಿಯೇ ಕುಳಿತುಕೊಳ್ಳಲು ಚೇರ್ ತೋರಿಸಿ ಹೋದ. ನಂತರ ಬಂದ ಆಫೀಸರ್...ಎಸ್ ಮಿಸ್ಟರ್ ..ಫ್ರೆಂಚ್..?? ಡೋಯೆಶ್..?? ಎಂದು ನಿನಗೆ ಫ್ರೆಂಚ್ ಬರುತ್ತಾ ಡಚ್ ಭಾಷೆ ಬರುತ್ತಾ? ಎಂದು ಕೇಳಿ.. ನಾನು ಇಂಗ್ಲೀಷ್ ಎಂದೆ..ಓಕೆ...ಕಮ್ ಎಂದು ಒಳಗಡೆಗೆ ಕರೆದೊಯ್ದ. ಕುಳಿತುಕೊಳ್ಳಲು ಚೇರ್ ಕೊಟ್ಟು...ಹೇಳಿ, ಏನಾಯ್ತು ಎಂದು ವಿವರಗಳನ್ನು ಬರೆದುಕೊಳ್ಳಲ್ಲು ಪ್ರಾರಂಭಿಸಿದ....
(ಮುಂದುವರೆಯುತ್ತದೆ)