ಜೈ ಭಾರತಾಂಬೆ
ಕೇಸರಿಯ
ಶೌರ್ಯವದು,
ಹಸಿರುಟ್ಟ ಹರಿತವದು
ಶಾಂತಿಯಾ ಮಂತ್ರವದು,
ನಡುನೆಡೆವ ಚಕ್ರವದು
ಜೈ ಜೈ ಜೈ ಭಾರತಾಂಬೆ
ಇಲ್ಲುಂಟು ಏನಿಲ್ಲ
ಎಲ್ಲುಂಟು ಏಕಿಲ್ಲ
ನೀರುಂಟು ಇಂಗಿಲ್ಲ
ದಾಹವಿದು ಸತ್ತಿಲ್ಲ
ಜೈ ಜೈ ಜೈ ಭಾರತಾಂಬೆ
ದೇಶವಿದು ಸಿರಿವಂತ
ಸಾವ್ರಾರು ಹಣವಂತ
ಸುಡುವರು ಜೀವಂತ
ಬಡವರದು ಧಾವಂತ
ಜೈ ಜೈ ಜೈ ಭಾರತಾಂಬೆ
ಕಿತ್ತಿಲ್ಲಿ ತಿನ್ನುವವರು
ಹತ್ತಿಲ್ಲಿ ಉರಿಸುವವರು
ಸಾಲದಲಿ ಬೆಳೆವವರು
ಆದರಿಲ್ಲೆಲ್ಲ ಉಳ್ಳವರು
ಜೈ ಜೈ ಜೈ ಭಾರತಾಂಬೆ
ಖಾಕಿಲಿ ನಿಯ್ಯತ್ತೇ ಖಾಲಿ
ಕಾವಿಲಿ ಭಕ್ತಿಯದು ಜೋಲಿ
ಖಾದಿಯಲಿ ಗಾಂಧಿಗೇ ಗೋಲಿ
ಹೊಲವನ್ನೇ ಮೇಯುವುದು ಬೇಲಿ
ಜೈ ಜೈ ಜೈ ಭಾರತಾಂಬೆ
ಉಗ್ರಾಣದಿ ತುಂಬಿ ಹೆಗ್ಗಣ
ಗ್ರಾಮದಲ್ಲೀಗಿಲ್ಲ ದಿಬ್ಬಣ
ಗಣಿನೆಲವ ಮಾರಿ ಕಬ್ಬಿಣ
ರಾಜಕಾರಣಿಯದೀಗ ರಿಂಗಣ
ಜೈ ಜೈ ಜೈ ಭಾರತಾಂಬೆ
ಹೀಗಿದ್ದೂ ದಿಕ್ಕೆಡದಂತೆ ಹರಸು
ಹಿಗ್ಗಿದೆಯ ಕುಗ್ಗದಂತೆ ಬೆಳೆಸು
ಹಸಿರುಸಿರಾಡುವಂತೆ ಉಳಿಸು
ಪ್ರತಿ ರಕ್ತದಲಿ ದೇಶಪ್ರೇಮವ ಬೆರೆಸು
ಜೈ ಜೈ ಜೈ ಭಾರತಾಂಬೆ