Thursday, May 28, 2009
ಅವಳು ಹೊರಟು ನಿಂತಾಗ
ನಿನ್ನನಗಲಿ ಹೇಗಿರಲಿ
ನೀನಿಲ್ಲದೆ ನಾ ಜಾಲಿಯಲಿ
ನಿನ್ನ ನೆನಪು ಸದಾ ಕಾಡುವುದು
ನೀ ಬರುವರೆಗೆ ದಿನ ಓಡುವುದು
ಬೆಳ್ಳಂ ಬೆಳಗೇ ಎಚ್ಚರ ನೀನಿಲ್ಲದೆ
ನೆತ್ತಿಗೆ ರವಿಯಿರೆ ಮಲಗುವೆ ಭಯವಿಲ್ಲದೆ
ನಿನ್ನ ಕೈಯ ರುಚಿ ಕಾಡುವುದು
ಹಲಬಗೆ ಹೊರರುಚಿ ರುಚಿಸುವುದು
ಕೆಲಸಕೆ ಹೊರಟಾಗ ನೀ ಎದುರಾಗುವುದು
ಕೆಲಸದಿ ಆಪ್ತ ಸಹಾಯಕಿ ಕುಲುಕಾಡುವುದು
ಮನೆಗೆ ಬಂದರೆ ನೀನಿಲ್ಲದೆ ಬೋರು
ಮನೆಗೇ ಬರದೆ ಹೊರಗೇ ಪಾರ್ಟಿಜೋರು
ಬಂದರೂ ಮನೆಗೆ ನಿನ್ನ ನೆನಪು ನೂರು
ಮಲಗಿಬಿಡುವೆ ಆದರೂ ಅದು ನಿತ್ಯ ನವ ಸೂರು
ಸೂಚನೆ: ಏಳು (ಪಂಕ್ತಿ ಬಿಟ್ಟು ಪಂಕ್ತಿ) ಅವಳಿಗೆ ಹೊರಟು ನಿಂತಾಗ
ಏಳು (ಪಂಕ್ತಿ ಬಿಟ್ಟು ಪಂಕ್ತಿ) ಬ್ಲಾಗ್ ಪೋಸ್ಟಿಗೆ ಕುಂತಾಗ
ನೆನಪಾಗುವುದು
ಬೇಸಿಗೆ ಬಂದರೆ
ನಗರದಿ ತೊಂದರೆ
ಹಳ್ಳಿಯೆಡೆಗೆ ವಲಸೆಯ ನೆನಪಾಗುವುದು
ಮಾವಿನ ತೋಪಿನ
ತಣ್ಣನೆ ತಂಪಿನ
ಹುಳಿಮಾವಿನ ಸವಿ ನೆನಪಾಗುವುದು
ಅಮ್ಮನು ಕಟ್ಟಿದ ಬುತ್ತಿ
ಕೂಡಿ ತಿಂದೆವು ಭರ್ತಿ
ಮತ್ತೆ ಆಡಿದ ಮರಕೋತಿ ನೆನಪಾಗುವುದು
ನೆಳಲಲಿ ನಿದ್ದೆ
ಹೊಳೆಯಲಿ ಒದ್ದೆ
ಒಡನಾಡಿದ ದಿನಗಳ ನೆನಪಾಗುವುದು
ಆ ಹುಣ್ಣಿಮೆ ರಾತ್ರಿಲಿ
ಶಿವನಳ್ಳಿ ಜಾತ್ರೆಲಿ
ಬತಾಸು-ಚುರುಮುರಿಯ ನೆನಪಾಗುವುದು
ರಾತ್ರಿಯ ಬಯಲಾಟ
ಹನುಮನ ಹುಡುಕಾಟ
ಕೊನೆಗೆ ಸೀತೆಯ ವ್ಯಥೆ ನೆನಪಾಗುವುದು
ಅಜ್ಜ ಸುತ್ತ ಹತ್ತಳ್ಳೀಗೂ ಸಜ್ಜನ
ಊರವರಿಗೆ ಅವನೇ ಯಜಮಾನ
ಅವ ಸತ್ತ ದಿನ ಊರೇ ಅತ್ತದ್ದು ನೆನಪಾಗುವುದು
ಇಲ್ಲದಾಗಿವೆ ಹಸಿರುಗಳು
ಸಂಜೆಗೆ ಮರಳುವ ರಾಸುಗಳು
ನೆನಪುಮಾತ್ರ ಈಗ ನೆನಪಾಗುವುದು
Subscribe to:
Posts (Atom)