Friday, December 11, 2009

ಯಾರಲ್ಲಿ ಹೇಳಿಕೊಳ್ಳಲಿ ನನ್ನ ಗೋಳು..??

ನಾನು ಗಂಡಾಗಿ ಹುಟ್ಟಿದ್ದೇ ತಪ್ಪೇ??...ನನ್ನ ನೋವನ್ನೇಕೆ ಈ ಹೆಣ್ಣುಗಳು ಅರ್ಥಮಾಡಿಕೊಳ್ಳುವುದಿಲ್ಲ..??!! ದೇವರೇ..ಯಾವ ಜನ್ಮಕ್ಕೂ ಬೇಡ ಈ ಗಂಡಾಗುವ ಕರ್ಮ... ಹಯವದನ ಮನಸ್ಸಿನಲ್ಲೇ ನೋವು ಅನುಭವಿಸುತ್ತಾ...ದೇವರಲ್ಲಿ ಬೇಡಿಕೊಳ್ಳತೊಡಗಿದ... ಅಂದು.. ಹೊರಗಡೆ ಅಡ್ಡಾಡಿ...ಮನೆಗೆ ಅಲ್ಪಸ್ವಲ್ಪ ಏನಾದರೂ ತರೋಣ ಅಂತ ಹೊರಟಿದ್ದ ಹಯವದನ... ಇಡೀ ಕಾಲೊನಿಯಲ್ಲೇ ಬಹುಸ್ಫುರದ್ರೂಪಿ ಕಟ್ಟುಮಸ್ತಾದ ಅಂಗಸೌಸ್ಠವ ಹೊಂದಿದ್ದ ಯುವ ಚೇತನ ಪುಟಿಯುವ ನವ ಯುವಕ ಇವನು. ಎಲ್ಲ ಹೆಣ್ಣುಗಳ ಕಣ್ಣೂ ಇವನಮೇಲೆಯೇ.. ಆಜಾನುಬಾಹು ವ್ಯಕ್ತಿತ್ವ...ಮುಖದಲ್ಲಿ ಬಹು ಆಕರ್ಷಣೀಯ ಕಾಂತಿ, ನಡೆದಾಡಿದರೆ ರಾಜಗಾಂಭೀರ್ಯ ತುಳುಕುತ್ತಿತ್ತು. ಯಾವುದೇ ಹೆಣ್ಣು ಆಸೆ ಪಡುವ ಎಲ್ಲ ಗುಣ ಅವನಲ್ಲಿದ್ದುದರಿಂದಲೇ ಎಲ್ಲ ಹೆಣ್ಣುಗಳ ಕಣ್ಣೂ ಇವನ ಮೇಲೆ. ಕಾಲೋನಿಯ ಬಹು ಕ್ವಾಲಿಫೈಯ್ಡ್ ಗಂಡುಗಳಲ್ಲಿ ಒಬ್ಬನಾದರೂ ಇವನ ರೂಪಕ್ಕೆ ಎಲ್ಲ ಹೆಣ್ಣುಗಳೂ ಮಾರುಹೋಗಿದ್ದವು. ತನ್ನ ಮನೆಗೆ ಬೇಕಾದ ಸಾಮಾನು ಸರಂಜಾಮನ್ನು ಹುಡುಕುವ ಅವನ ಕಣ್ಣಿಗೆ ಮೂರು ನವ ಯುವತಿಯರ ಕಣ್ಣುಗಳು ಹಿಂಬಾಲಿಸುವುದನ್ನು ಕಂಡುಕೊಳ್ಳಲು ಬಹಳ ಸಮಯ ಬೇಕಾಗಲಿಲ್ಲ. ಬೇಗ ಬೇಗ ..ಅವಸವಸರದಲ್ಲಿ ಸಾಮಾನನ್ನು ತೆಗೆದುಕೊಂಡು ಕಡೆದಾಗಿ ಬೇಕಾಗಿದ್ದ ವಸ್ತುವಿಗೆ ಸ್ವಲ್ಪ ಬಿಕೋ ಎನ್ನುವ ಜಾಗಕ್ಕೆ ಬಂದಿದ್ದ...ಸಂಜೆ ಗತ್ತಲು ..ಅವರಿಸಿದ್ದರಿಂದ..ಭಯ ಆವರಿಸಿತು. ಹಯವದನ ಹಿಂಬಾಲಿಸಿದ ಕಣ್ಣುಗಳು ಕತ್ತಲಲ್ಲಿ ಇನ್ನೂ ಹೆಚ್ಚಾಗಿ ಮಿನುಗುತ್ತಾ ಘೋರವೆನಿಸತೊಡಗಿತು.. ತನ್ನ ಬೇಕಾದ ಸಾಮಾನನ್ನು ಇನ್ನೇನು ತಗೆದುಕೊಳ್ಳಬೇಕು ಎನ್ನುವಾಗ ಮೂವರು ಯುವತಿಯರೂ ಸುತ್ತುಗಟ್ಟಿದರು..ಅವನ ಅಂಗಗಳ ಬಗ್ಗೆ ವಿವರಿಸುತ್ತಾ ಛೇಡಿಸತೊಡಗಿದರು.. ಒಬ್ಬಳು ಅವನ ಮೈಮೇಲೆ ಮೃದುವಾಗಿ ಕೈಯಾಡಿಸಿದಳು...ಇನ್ನೊಬ್ಬಳು ತನ್ನ ಬಾಹುಗಳಿಂದ ಗಟ್ಟಿಯಾಗಿ ತಬ್ಬಿಕೊಳ್ಳಲು ಮುಂದಾದಳು...ಕೊಸರಿಕೊಂಡ ಹಯವದನ..ತಪ್ಪಿಸಿಕೊಂಡು ಸತ್ತೆನೋ ಕೆಟ್ಟೆನೋ ಎಂದು.. ಓಡಲಾರಂಭಿಸಿದ...ಕತ್ತಲಾಗಿತ್ತು.. ಗಾಭರಿಯಲ್ಲಿ ದಾರಿ ತಪ್ಪಿದ..ಕುರುಚುಲು ಗಿಡ ಎತ್ತರ ಹುಲ್ಲಿನ ಬಯಲಿಗೆ ಬಂದಿದ್ದ...ದಾರಿತಪ್ಪಿದ ಗಂಡು ಈಗ ಸುಲಭವಾಗಿ ಸಿಗುವಂತಾದ... ಇಬ್ಬರು ಹೆಣ್ಣುಗಳು ಅವನಮೇಲೆ ಬಿದ್ದು ಕೆಡಹಿದರು..ಹಯವದನನ ಕೊಸರಾಡಿದರೂ ಆಗಲಿಲ್ಲ .. ವಿಲಕ್ಷಣ ಮತ್ತು ಬಿಡೆವೆಂಬ ಛಲ ಆ ಹೆಣ್ಣುಗಳಲ್ಲಿತ್ತು...ಹಯವದನನ ಶಕ್ತಿ ಕುಗ್ಗತೊಡಗಿತು....ಕತ್ತಲೂ ಹೆಚ್ಚಾಯಿತು...ಸೋಲತೊಡಗಿದ..ಹೆಣ್ಣುಗಳು ಗೆಲ್ಲತೊಡಗಿದವು......ಏನಾಗಬಾರದೆಂದು ಜಾಗರೂಕನಾಗಿದ್ದನೋ ಅದು ಅಂದು ಆಗೇ ಹೋಯಿತು..ಹಯವದನನ ಜೀವನದಲ್ಲಿ.....ಛೇ..ದೈವವೇ..ಗಂಡಿಗೇಕೆ ಇಂಥ ಶಿಕ್ಷೆ ಎಂದು..ಗೋಳಾಡಿದ. ಈಗ..ಪಾಪದ..ಫಲ ಬೆಳೆಯುತ್ತಿದೆ ಇವನ ಹೊಟ್ಟೆಯಲ್ಲಿ..ಅದಕ್ಕೆ ಕಾರಣರಾದ ಆ ಮೂರೂ ಹೆಣ್ಣುಗಳು...ರಾಜಾರೋಷವಾಗಿ ತಿರುಗುತ್ತಿವೆ..ಊರಲ್ಲೆಲ್ಲಾ... ತನ್ನ ಪ್ರಸವ ವೇದನೆಯನ್ನು ನೆನೆದು ಹಲುಬುತ್ತಿದ್ದಾನೆ ಹಯವದನ..... ಇಗೋ ಇಲ್ಲಿದೆ ನೀವೇ ನೋಡಿ ಅವನ ಗೋಳು ಎಂತಹುದೆಂದು....





ಸ್ನೇಹಿತರೇ..ಇದು ಹೆರುವ ಗಂಡು....ಸಮುದ್ರಕುದುರೆ...ಇದೊಂದು ಮೀನು......ಇದರ ಬಗ್ಗೆ ವಿವರ ನನ್ನ ಮೇ ಬ್ಲಾಗ್ ಪೋಸ್ಟ್ ನೋಡಿ.....ಹಹಹಹ...