Thursday, February 4, 2010

ಹೀಗೇ ಒಮ್ಮೆ.....

ಇತ್ತೀಚೆಗೆ ಯಾವುದೋ ಕಾನ್ಫರೆನ್ಸಿಗೆ ಅಂತ ಮಂಗಳೂರಿಗೆ ಅಂತ ಹೋಗಿದ್ದೆ. ನನ್ನನ್ನು ಬರಮಾಡಿಕೊಳ್ಳಲು ಯಾರಾದ್ರೂ ಕಾಲೇಜಿಂದ ಬಂದಿರ್ತಾರೇನೋ..ಎಂದು ಸ್ಟೇಷನ್ನಿಂದ ಹೊರಬಂದು ಕಾರ್ ಸ್ಟಾಂಡಿನತ್ತ ನೋಡತೊಡಗಿದೆ....

“ಸಾರ್....”
ದನಿ ಬಂದ ಕಡೆ ತಿರುಗಿದೆ.. ಚಿವುಟಿಕೊಂಡೆ...ಯಾಕಂದರೆ..ಗುಂಡನ ಆ ಗೊಗ್ಗರು ದನಿ ಮರೆಯಲು ಸಾಧ್ಯವೇ ಇಲ್ಲ!!. ಗುಂಡ..!! ..yes...!!!! ನನ್ನ ಯೋಚನಾ ಲಹರಿ ಹತ್ತು ವರ್ಷ ಹಿಂದಕ್ಕೆ ಹೋಯಿತು.

ನಾನು ಸುಮಾರು 10 ವರ್ಷ ಕೆಲಸ ಮಾಡಿ central Govt.ನ deputation ಮೂಲಕ ಪ.ಸಂ.ಮೀ. ಮಹಾವಿದ್ಯಾಲಯದಲ್ಲಿ ಪಿ.ಎಚ್.ಡಿ ಗಾಗಿ ಬಂದಿದ್ದಾಗ ಪರಿಚಯವಾದ ಬಹಳ ಪಗಡದಸ್ತ್ ಆಸಾಮಿ., ಆಗಲೇ ಬಿ.ಎಸ್ಸಿ. ಪದವಿಗಾಗಿ ಸೇರಿದ್ದ ಮಂಡ್ಯದ ಬಳಿಯ ಮಲ್ನಾಯಕನ ಕಟ್ಟೆ ಬೆಟ್ಟೇಗೌಡರ ಮಗ ಗುಂಡ..ಅಂದರೆ ..ಎಮ್.ಬಿ. ಗುಂಡ ರಾಜೇಗೌಡನ ಪರಿಚಯವಾಗಿದ್ದು. ನಾನು ಪಿ ಎಚ್ ಡಿ ಗೆ ಸೇರಿದಾಗ ಕಾಲೇಜಿನ ಆಫೀಸ್ ಆವರಣದಲ್ಲಿ ಮೊದಲಿಗೆ ಸಿಕ್ಕ ಸೀನಿಯರ್ student ಇವನೇ ಆಗಿದ್ದ. ಗುಂಡ ಅಂತಿಮ ವರ್ಷ ಬಿ. ಎಸ್ಸಿಯಲ್ಲಿದ್ದ (ಇದು ಗೊತಾಗಿದ್ದು ನಂತರ). ಆ ಕಾರಣಕ್ಕೆ..ಎಮ್. ಎಸ್ಸಿ ಮತ್ತು ಪಿ.ಎಚ್.ಡಿ. ಗೆ ಸೇರಲು ಬಂದಿದ್ದ ಎಲ್ಲ ಹೊಸಬರನ್ನ ಮುಲಾಜಿಲ್ಲದೇ ಕಾಡಲು, ರಾಗಿಂಗಿಗೇ ಇಳಿದಿದ್ದ. ನಾನು ನನ್ನ official formalities ಮುಗಿಸಿ course ಗೆ ಸೇರಲು ಬಂದಾಗ ನನ್ನ ಜೊತೆಯವರೆಲ್ಲಾ admit ಆಗಿಬಿಟ್ಟಿದ್ದರು. ಆಫಿಸಿನಿಂದ ಹೊರಬರುತ್ತಿದ್ದ ನನ್ನನ್ನು..ನೋಡಿ.. “ರೀ..ಏನ್ರೀ.. ಒಂದ್ಸೊಲ್ಪ..ನಿಂತ್ಕಳ್ಳೀ..” ಅಂತ ನಿಲ್ಲಿಸಿ.. “ಏನು ಪಿ.ಎಚ್.ಡೀನಾ..? ಡಾಕ್ಟ್ರು ಅನ್ನಿಸ್ಕೊಂಬೇಕಾ..?? ಎಲ್ಲಿ..ಎಮ್.ಎಸ್ಸಿ. ಮಾಡಿದ್ದು..??, ನ್ಯೂಟನ್ ಪ್ರಕಾರ ಆಕರ್ಷಣೆ ನಾಲ್ಕನೇ ನಿಯಮ..ಏನು ಹೇಳಿ ನೋಡೋಣ..?” ಪಕ್ಕದಲ್ಲಿದ್ದ ಇನ್ನೊಬ್ಬ ಸೀನಿಯರ್ ಹುಡುಗನ್ನ ಕರೆದು

“ಲೇ ಒಂದಿಬ್ಬರು ಮೂವರು ಈವೊತ್ತು ಜಾಯಿನ್ ಆಗ್ತಾವ್ರೆ ಅಂತ ಹೇಳಿ ನಾಲ್ಕೈದುಜನ ಸೀನಿಯರ್ಸ್ ನ ಕರ್ಕೊಂಡ್ಬಾ ಹೋಗು”.....
ನನ್ನ ಮೇಲಿಂದ ಕೆಳಕ್ಕೆ ನೋಡುತ್ತಾ...ನಾನು in-service candidate ಪಿ.ಎಚ್.ಡಿ ಗೆ ಅನ್ನೋ ಕಾರಣಕ್ಕೆ ... ಯಾವುದಕ್ಕೂ ಸಪೋರ್ಟಿಗೆ ಇರಲಿ ಅಂತ ಅನ್ನಿಸಿರಬೇಕು,

ನಾನು “ ಹೌದು ಸಾರ್‍... ಪಿ. ಎಚ್.ಡಿ.ಗೆ ಸೇರಿದ್ದೇನೆ..”

ನೋಡಲು ದಷ್ಠ-ಪುಷ್ಠವಾಗಿದ್ದ, ಬಹಳ ಸೀನಿಯರ್ ಪಿ.ಎಚ್.ಡಿ ಸ್ಕಾಲರ್ ಇರಬೇಕು ಎಂದುಕೊಂಡೆ.

..ಗಾಬರಿಯಲ್ಲಲ್ಲದಿದ್ದರೂ ಸ್ವಲ್ಪ ಗಲಿಬಿಲಿಗೊಂಡಂತೆ..ಉತ್ತರಿಸುವುದರಲ್ಲಿ.. ...

“ಲೋ ಹರೀಶ ....ಎಲ್ಲೆಲ್ಲೋ..ಹುಡ್ಕೋದು ನಿನ್ನ..?? ನೆನ್ನೆನೇ ಬಂದ್ಯಂತೆ..ಮನೆಕಡೆ ಬರೋದಲ್ಲವಾ..?”
ಎನ್ನುತ್ತಾ..ನನ್ನ ಪಿ.ಯು.ಸಿ. ಯಿಂದ ಎಮ್.ಎಸ್ಸಿ ವರೆಗಿನ ಸಹಪಾಠಿ..ಮತ್ತು ತನ್ನ ಉತ್ತಮ ಸಾಧನೆ-ಸಾಮರ್ಥ್ಯಗಳ ಮೂಲಕ ಪ್ರೊಫೆಸರ್ ಆಗಿದ್ದ ಘನಿಷ್ಠ ಗೆಳೆಯ ರೆಡ್ಡಿ ಕಾರಿಡರ್ ಗೆ ಬಂದು ನನ್ನ ಕೈಕುಲುಕಿದ.

“ಇಲ್ಲ ಕಣೋ...., ರವಿ ಸಿಕ್ಕಿದ್ದ..ಅವನ ಜೊತೆ ಹೋಟೆಲಲ್ಲೇ ಇದ್ದೆ..ಈಗ ಬೆಳಿಗ್ಗೆ..class ಶುರು ಆಗಿರಬಹುದು
ಅಂತ..fees ಕಟ್ಟಿ registration ಮಾಡ್ಬೇಕು ಅಂತ ಬೇಗ ಬಂದೆ” ಎಂದೆ.

ಆಗಲೇ ಗೊತ್ತಾಗಿದ್ದು.. ಗುಂಡ ಅಲ್ಲಿಂದ ಮಾಯವಾಗಿದ್ದ ಅಂತ. “ಗೌಡ ಏನೋ ಕೇಳ್ತಾ ಇದ್ದ ನಿನ್ಹತ್ರ.. ಏನಂತೆ?? ಅವನ ತಾಪತ್ರಯ..??” ನಾನು ಆಶ್ಚರ್ಯದಿಂದ ರೆಡ್ಡಿಯನ್ನು ಪ್ರಶ್ನಾರ್ಥಕವಾಗಿ ನೋಡಿದಾಗ..ಗುಂಡ ಬಿ. ಎಸ್ಸಿ ಗಾಗಿ ಏಳನೇ ವರ್ಷವೂ ಪರಿಶ್ರಮ ನಿರತನಾಗಿರುವುದು ರೆಡ್ಡಿ ಮೂಲಕ ತಿಳಿಯಿತು.

ಆನಂತರ ಒಂದೆರಡು ಬಾರಿ ಹಾಸ್ಟೆಲಿನಲ್ಲಿ..ಕಾಲೇಜು ಕಾರಿಡಾರುಳಲ್ಲಿ..ಗುಂಡ ನನ್ನ ಕಣ್ತಪ್ಪಿಸಿ ಓಡಾಡುವುದನ್ನು ಗಮನಿಸಿದ್ದೆ. ಒಂದು ದಿನ ಹಾಸ್ಟಲಿನಲ್ಲಿ ಸ್ವಲ್ಪ ಲೇಟಾದ್ದರಿಂದ ಊಟದ ತಟ್ಟೆಯನ್ನು ಪಡೆದು ಗುಂಡ ಒಬ್ಬನೇ ಕುಳಿತಿದ್ದ ಟೇಬಲ್ಲಿಗೇ ಹೋಗಿ ಕುಳಿತೆ. ಅವನೇ ವಿಷಯವನ್ನು ಸ್ವಲ್ಪ ಹಿಂಜರಿಕೆಯಿಂದಲೇ ಪ್ರಾರಂಭಿಸಿದ. “ಸಾರ್..ನೀವು ರೆಡ್ಡಿ ಸಾರ್ class-mateಉ ಅಂತಾ ಗೊತ್ತಿರಲಿಲ್ಲ.. ಅಲ್ಲದೇ ನಿಮ್ಮನ್ನ ನೋಡಿದರೆ ತುಂಬಾ young ಆಗಿ ಕಾಣ್ತೀರ..ಸಾರಿ ಸಾರ್..” ಎಂದು ಹಲ್ಲು ಗಿಂಜಿದ. “ಪರವಾಗಿಲ್ಲ ಗೌಡರೇ.. ಹೊಸದಾಗಿ ಕಾಲೇಜಿಗೆ ಬರೋವರನ್ನ ಒಂದುರೀತಿ ಚುಡಾಯಿಸೋ ತರಹ ಬರಮಾಡ್ಕೊಳ್ಳೋದು ನಾವೂ ಮಾಡ್ತಿದ್ದದ್ದೇ...ಆದರೆ ಅವರಿಗೆ ಅವಮಾನ-ಹಿಂಸೆ ಆಗೋಥರಾ ನಾವು ಯಾವತ್ತೂ ಮಾಡಿದ್ದಿಲ್ಲ..ಅವರಿಗೆ ಅತಿ ಮುಜಗರ ಅನ್ನಿಸ್ತಾ ಇದೆ ಅಂತ ಗೊತ್ತಾದ್ರೆ..ಸಮಾಧಾನ ಮಾಡಿ ಫ್ರೆಂಡ್ ಮಾಡ್ಕೊತಿದ್ವಿ. ragging ಆನ್ನೋದು ಹೊಸಬರನ್ನು ಕೀಟಲೆ ಮಾಡಲು ಮತ್ತು ಆ ಮೂಲಕ ಪರಿಚಯಿಸಿಕೊಂಡು ಉತ್ತಮ ಮಿತ್ರರಾಗಲು ಮಾಡಿಕೊಂಡ ನಮ್ಮದೇ ಆದ ವ್ಯವಸ್ಥೆ...ಆದ್ರೆ ಅದನ್ನೇ ನಾವು ಗೂಂಡಾಗಿರಿ ಮೆರೆಯಲು, ಕಾಟಕೊಡಲು ಮತ್ತು ಹಿಂಸಿಸಲು ಮಾಡೋದು ಅಪರಾಧ ಅಲ್ಲವೇ ಗುಂಡ ಅವರೇ..?” ಎಂದಾಗ...

“ಹೆ..ಹೆ..ಹೆ..ಏನ್ಸಾರ.? ಎಷ್ಟು ಜೂನಿಯರ್ ನಾನು..?? ನೀವು ತಾವು ಅಂತೀರ..ಗುಂಡ ಅನ್ನಿ ಸರ್..ಪರ್ವಾಗಿಲ್ಲ..” ಅಂತ ಮತ್ತೆ ಹಲ್ಲು ಗಿಂಜಿದ.

“ಹೌದು.. ಗುಂಡೇ ಗೌಡ್ರೆ.., ನಿಮ್ಮದು ಯಾವ ಊರು..?” ಒಮ್ಮೆಲೇ ಏಕವಚನಕ್ಕೆ ಬರೋದು ಕಷ್ಟ ಅನ್ನಿಸ್ತು.

“ಅಂದಹಾಗೆ ನನ್ನ ಪೂರ್ತಿ ಹೆಸರು..ಗುಂಡ ರಾಜೇಗೌಡ ಅಂತ ಸಾರ್.. ನಮ್ಮದು ಮಂಡ್ಯ” ಅಂದ.

ನನಗೆ ಕುತೂಹಲ ಆಯಿತು.. “ಏನು..ಮಂಡ್ಯನೇ..? ನಾನು ಮಂಡ್ಯದ V.C.Farm ನಲ್ಲಿ ಕೆಲ್ಸ ಮಾಡ್ದೆ...ಎಲ್ಲಿ ಯಾವ ಏರಿಯಾ ಮಂಡ್ಯದಲ್ಲಿ..? ”

“ಹೆ..ಹೆ..ಹೆ..ಔದಾ ಸಾರ್..!!?? ಹೆ..ಹೆ.ಹೆ..ಮಂಡ್ಯ ಅಂದ್ರೆ.. ಮಂಡ್ಯ ಅಲ್ಲ ಸಾರ್ ಪಕ್ಕದಲ್ಲಿ ..... ಹಳ್ಳಿ..”

ನಾನು..
“ಅಲ್ಲಪ್ಪ ಯಾಕೆ ಹಳ್ಳಿ ಅನ್ನೋಕೆ ನಾಚ್ಕೇನಾ..? ನಾನೂ ಹಳ್ಳೀಲೇ ಹುಟ್ಟಿದ್ದು ಬೆಳೆದಿದ್ದು..ಅನ್ನಕೊಡೋ ಅನ್ನದಾತರು ನಮ್ಮ ಹಳ್ಳಿ ರೈತರು...ರೈತನ ಮಗ ಅನ್ನೋದು ಹೆಮ್ಮೆ ಪಡೋ ವಿಷಯ...ಅಲ್ಲವಾ?” ..ಈಗ ಏಕವಚನಕ್ಕೆ ಬರೋದು ಕಷ್ಟ ಅನಿಸಲಿಲ್ಲ.
ಮತ್ತೆ ಕೇಳಿದೆ... “ಯಾವ ಹಳ್ಳಿ?”

“ಮಲ್ನಾಯಕನ ಕಟ್ಟೆ..ಅಂತ ಸಾರ್..” ಎಂದ ಮತ್ತೆ ಹಲ್ಲು ತೋರಿಸುತ್ತಾ....

“ಹೌದಾ..?” ಮತ್ತೂ ಅಶ್ಚರ್ಯವಾಯಿತು.
“ಹೌದು ಸಾರ್..ಬೆಟ್ಟೇಗೌಡರು ಗೊತ್ತಿರಬೇಕು ನಿಮಗೆ..ಅವರ ಮಗ ನಾನು.” ಎಂದ.

“ಏನು ಕಟ್ಟೆ ಮನೆ ಬೆಟ್ಟೇ ಗೌಡರ ಮಗಾನೇ..? ..ಚಂದ್ರು ನ ನೋಡಿದ್ದೆ....ನೀ...ನು...”

“ಸಾರ್ ಚಂದ್ರು ನಮ್ಮಣ್ಣ ಸಾರ್...”

“ಹೌದಾ? ಗೌಡ್ರು ಬಹಳ ಸಹಾಯ ಮಾಡಿದ್ರಪ್ಪಾ ನಾನು ಹೊಸದಾಗಿ ವಿ.ಸಿ, ಫಾರಂ ಗೆ ಹೋದಾಗ...
ಹೇಗಿದ್ದಾರೆ ನಿಮ್ಮಪ್ಪ.. ನಿಮ್ಮಣ್ಣ ಎಲ್ಲಾ.....? ನಿಮ್ಮಪ್ಪ ನಮ್ಮ ಸಂಶೋಧನಾ ಕೇಂದ್ರಕ್ಕೆ ಬರ್ತಿದ್ದ ಹೊಸ ಕೃಷಿ ಸಂಶೋಧಕರಿಗೆ ಮನೆ ಬಾಡಿಗೇಗೆ ಸಿಕ್ಕು ಹೊಸವೃತ್ತಿ ಜೀವನ ಪ್ರಾರಂಭಿಸೋ ಸಮಯದಲ್ಲಿ ೧೦-೧೫ ದಿನ ತಮ್ಮ ಕಡೆಯಿಂದ ಊಟದ ವ್ಯವಸ್ಥೆ ಮಾಡಿಸಿ ಅವರ ಬೇಕು ಬೇಡಗಳಿಗೆ ನೆರವಾಗ್ತಿದ್ದವರು...ರೈತ ಅಂದ್ರೆ ಅನ್ನದಾತ ಅನ್ನೋದನ್ನ ಮಾಡಿ ತೋರಿಸಿದವರು. ನಮ್ಮ ಸ್ನೇಹಿತರೆಲ್ಲಾ ರಾಜೇಗೌಡರು ಅಂದ್ರೆ ಬಹಳ ಗೌರವ ಕೊಡೋರು...” ಹಿಂದಿನ ಆ ದಿನಗಳ ನೆನಪಿಸಿಕೊಳ್ಳುತ್ತಾ ಹೇಳಿದೆ.

“ಅಯ್ಯೋ.. ಸಾರ್ ಅದು ಹಳೇ ಕಥೆ....ಯಾವ್ದೋ ..ತೊಂದರೇಗೆ ಸಾಲ ತಂಗಡ ನಮ್ಮಣ್ಣ.., ಬೇಸಾಯ ಕೈಕೊಡ್ತು, ಕಬ್ಬು ಬೆಲೆ ಇಳೀತು, ಹಾಕಿದ್ ಬಂಡವಾಳಾನೂ ಕೈಗತ್ತೋದು ಕಷ್ಟ ಆಗ್ತಿತ್ತು, ಅದ್ಕೆ ನಮ್ಮಪ್ಪ ಗದ್ದೆ ಮಾರ್ಬಿಟ್ಟ..ನಮ್ಮಣ್ಣ ಸರ್ಕಾರಿ ಕಂಟ್ರಾಕ್ಟರು .. ಆಗುವ್ನೆ...ಮೇಲದ್ಕಾರಿಗಳನ್ನ ಸರಿ ಮಾಡ್ಕಂಡವ್ನೆ..ಒಳ್ಳೆ ಆದಾಯ...” ಎಂದ ಗುಂಡ

“ಇದು ತಪ್ಪಲ್ಲವಾ ಗುಂಡ...ಕಂಟ್ರಾಕ್ಟ್ ತಗೊಂಡು ..ಕಳಪೆ ಕೆಲಸ ಮಾಡಿದ್ರೆ ಜನಕ್ಕೆ ತೊಂದರೆ ಅಲ್ಲ್ವಾ?” ನಾನು ಕೇಳಿದೆ.
“ಇಲ್ಲಾ ಸಾರ್ ..ಕೆಲ್ಸ ಚನ್ನಾಗೇ ಮಾಡಿಸ್ತಾನೆ..ಆದ್ರೆ...ಮಾಡಿರೋ ಕೆಲ್ಸಾನೇ ಎರಡು ಸರ್ತಿ ತೋರ್ಸೋ ಅದ್ಕಾರಿಗಳಹತ್ರ ಕಿತ್ಕೋತಾನೆ....ಹಹಹಹ....ಗುಂಡೀಲಿ ಹೋಗೋದು ಬಂಡೀಲಿ ಬರ್ತದೆ...”

ಇದೊಂದು ಸಾಧನೆ ಅನ್ನೋ ರೀತಿಯಲ್ಲಿ ಪೋಸ್ ಮಾಡ್ದ ಗುಂಡ......

ಲಂಚಕೋರ ಅಧಿಕಾರಿಗಳು, ಅವರನ್ನೇ ನಂಬಿ ದುಡ್ಡು ಮಾಡೋ ಪುಢಾರಿಗಳು ವ್ಯವಸ್ಥೆಯ ಮತ್ತು ಬೇಸಾಯದ ಹೊಡೆತ ತಿಂದು ಸೋತು ಸುಣ್ಣವಾಗೋ ರೈತನನ್ನ ಹೇಗೆ ತಪ್ಪು ದಾರಿಗೆ ಎಳೀತಾರಲ್ಲಾ..?! ಎನ್ನುತ್ತಾ ಯೋಚಿಸತೊಡಗಿದೆ. ಸೋತು..ಆತ್ಮಹತ್ಯೆಗೆ ಶರಣಾಗದೇ ನ್ಯಾಯಯುತವಾಗಿ ಬದುಕಲು ಸಾಧ್ಯವೇ? ಎನ್ನುವುದೂ ನನ್ನನ್ನು ಯೋಚನೆಗೆ ತಳ್ಳಿತು.


“ಸಾರ್..ಸಾರ್..”....

ಗಕ್ಕನೆ ಮತ್ತೆ ವಾಸ್ತವಕ್ಕೆ ಬಂದಿದ್ದೆ... “ಹೋ ಗುಂಡ ಹೇಗಿದ್ದೀಯಪ್ಪ..?” ಎಂದೆ ಅವನ ಕೈ ಕುಲುಕುತ್ತಾ..

“ನೆನಪಿದೆಯಲ್ಲ ಸಾರ್...!!!?? ಥ್ಯಾಂಕ್ಸ್... ಚನ್ನಾಗಿದ್ದೀನಿ...ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದೀನಿ ಸರ್...” ಎಂದ...
ಗುಂಡ ಏಳನೇ ವರ್ಷ ಬಿಎಸ್ಸಿಯಲ್ಲಿದ್ದಾಗ..ಅವರಣ್ಣ ತೀರಿಹೋಗಿದ್ದು...ಒಮ್ಮೆಗೇ ಬಿದ್ದ ಜವಾಬ್ದಾರಿಯಿಂದ ತಡವಾಗಿಯಾದರೂ ಎಚ್ಚೆತ್ತುಕೊಂಡದ್ದು..ಛಲದಿಂದ ಅದೇ ವರ್ಷ ಬಿಎಸ್ಸಿ ಮುಗಿಸಿ ಎಂಟ್ರೆಂನ್ಸ್ ಪರೀಕ್ಷೆ ಮೂಲಕ ಫೆಲೋಶಿಪ್ ತಗೊಂಡು ಉತ್ತಮ ದರ್ಜೆಯಲ್ಲಿ ಎಮ್ ಎಸ್ಸಿ ಮುಗಿಸಿ, ಹಾಗೇ ಪಿಎಚ್ ಡಿ ಮಾಡಿ ಕಾಲೇಜಿನ ಲೆಕ್ಛರರ್ ಆದದ್ದು ರೆಡ್ಡಿ ಮೂಲಕ ನನಗೆ ತಿಳಿದಿತ್ತು.