Wednesday, April 27, 2011

(ಚಿತ್ರ ಕೃಪೆ: ಇಟ್ಟಿಗೆ ಸಿಮೆಂಟ್)

ಬಾ ಹೂಬನಕೆ ಇನಿಯಾ


ಮುಳ್ಳು ಹರಿತೆಲೆಯ ತಲೆ

ಚುಚ್ಚುವುದು ಬಂದರೆ

ಅನುಮತಿಯಿಲ್ಲದಲೇ

ನಾಜೂಕು ಕಾಂಡ

ಮುಳ್ಳಿದ್ದರೂ ಭ್ರಮರ ಭಂಡ

ನುಸುಳುವುದು ಮಕರಂದಕಾಗಿ

ಹೆದರಿದ ಪತಂಗ ನೋಡುತಿರೆ ಮಂಕಾಗಿ

ಭರ ಭ್ರಮರದ ಸಂಭ್ರಮ,

ನಾಚಿದ ಕೆಂದುಟಿ ತೆರೆದ ಸುಮ

ಇನ್ನೂ ಮುಚ್ಚಿದ ಗರಿ ಬಿಚ್ಚದ ಮೊಗ್ಗು

ನೋಡುತಿದೆ ಅಳೆದಳೆದು

ಕಳೆದುಕೊಂಡರೂ ಗಳಿಸಿದ ತನ್ನಕ್ಕನ

ಗಳಿಸಿದರೂ ಕಳಕೊಂಡ ಭ್ರಮರನ

ನಸುನಕ್ಕು ಅರಿತಂತೆ ಓಲಾಡಿಸಿ ತಲೆ

ಕಾಯುತಿದೆ ಮತ್ತೆ ಬರುವ ರವಿಗಾಗಿ

ರವಿತರುವ ಪುಳಕ ಸುಳಿವ ಋತುಗಾಗಿ

ಆ ಕಿರಣದಾಗಮನ ಭೃಂಗಸಂಗಕಾಗಿ

Thursday, April 14, 2011

ಎರಡು- ಕವನಗಳು

(ಚಿತ್ರ ಕೃಪೆ: ಅಂತರ್ಜಾಲ)

ಅಮ್ಮ


ಅಮ್ಮನಾಗೋ ಆಸೆ ಹೆಣ್ಣಾದ ಎಲ್ಲರಿಗಿರುತ್ತೆ
ಕರುಳ ಬಳ್ಳಿ ಬೆಳಸೋ ಬಯಕೆ ಎಲ್ಲರಿಗಿರುತ್ತೆ
ಅದಕೆ ಚಿಗುರೊಡೆಸೋ, ಆಧರಿಸೋ, ಅದಮ್ಯ
ವಾಂಛೆ, ಮುದ್ದು ಮಳೆಗರೆಯೋ ಮನಸು,
ಬಿದ್ದರೆತ್ತೋ ಕಾಳಜಿ, ಎತ್ತಿ ಮುದ್ದಾಡೋ ಸೊಗಸು,
ನೊಂದರೆ ತಾನಳುವ, ನಕ್ಕರೆ ತಾನಗುವ
ಸಲಹುವಳಲ್ಲ ಸದಾ ತಾಯಿ ತನ್ಮಗುವ?


ನಿರೀಕ್ಷೆ

ನಿರಾಸೆ ಬರಡು ಬಿತ್ತು..ಬೆಳೆಯಲಾಗಲಿಲ್ಲ ತುತ್ತು
ಉಸಿರಾಡುತಿವೆ ಜೀವ ಇದ್ದಂತೆ ಬಿದ್ದಲ್ಲೇ ಸತ್ತು
ಧರೆಗೂ ಬೇಕಿದೆ, ಒಣಗುವ ಬೆಳೆಗೂ ಬೇಕು, ಹನಿ
ಅವಳ ಬಾಳಲೂ ಏಕೋ ಬರಡು, ಇಲ್ಲ ಶಿಶುದನಿ
ಹರಕೆಗಳೆಷ್ಟೋ, ಧಾಮ-ಪುನಸ್ಕಾರಕ್ಕೆ ಕೊನೆಯಿಲ್ಲ
ಎನಿಸತೊಡಗಿದಾಗ ಜೀವನದಿ, ಭರವಸೆ ಇನ್ನಿಲ್ಲ
ಮೋಡ ಕಪ್ಪಿಟ್ಟಿತು, ಭಾರವಾಯಿತು ತಡೆಯಲಾರದೆ
ಹನಿಯಿತು, ಸುರಿಸಿತು, ಧರೆಗಿಳಿಯಿತು ಇನ್ನಿರಲಾಗದೆ.








Saturday, April 2, 2011

ಭಾರತಕ್ಕೆ ವಿಶ್ವಕಪ್ ಕ್ರಿಕೆಟ್ ಕಿರೀಟ

ಭಾರತಕ್ಕೆ ವಿಶ್ವಕಪ್ ಕ್ರಿಕೆಟ್ ಕಿರೀಟ

ಕಪಿಲವಾಹಿನಿಯ ರಭಸ ಅಂದು
ವಿಶ್ವ ಕ್ರಿಕೆಟ್ ಮಕುಟವ ತಂದು
ಇಪ್ಪತ್ತೆಂಟು ವರ್ಷದ ನಂತರ
ದೋಣಿಯ ನಾಯಕ ನಾವಿಕನಾಗಿ
ಭರತದ ಹರುಷ ಮರುಮಕುಟವು ಇಂದು

ಜ಼ಹೀರ ಮುನಾಫರ ಪ್ರಾರಂಭಿಕ ಬಿಗಿತ
ಕರಾರುವಾಕ್ ಭಜ್ಜಿ ಯುವಿ ಎಸೆತ
ಮಾಡಲು ಅಧಿಕ ಲಂಕನ್ನರ ತುಡಿತ
ತಡೆದರು ಫೀಲ್ಡರುಗಳು ಪ್ರತಿ ಹೊಡೆತ
ಏಕಮಾತ್ರ ಜಯವರ್ಧನೆ ಸೆಂಚುರಿ ಜಿಗಿತ

ಇನ್ನೂರ ಎಪ್ಪತ್ತೈದರ ಗುರಿ ಸವಾಲು
ಸೆಹ್ವಾಗ್ ಸಚಿನ್ ಆಗದೆ ರನ್ ಮಾಡಲು
ವಿರಾಟ ತನ್ನಾಟ ಗಂಭೀರನ ಕಮಾಲು
ಸಾಗತೊಡಗಿತು ದೋಣಿ ತೀರ ಸೇರಲು
ಮೆಲ್ಲ ಮೆಲ್ಲನೆ ತನ್ನಂತಿಮ ಗುರಿ ತಲುಪಲು

ವಿರಾಟನಾಟದ ನಂತರ ನಾಯಕನಾಗಮನ
ಶತಕದ ಬಳಿ ಎಡವಿತು ಗಂಭೀರನ ತನನ
ತನ್ನೆಲ್ಲ ಶಕ್ತಿಯ ಮೆರೆದಿದ್ದ ಯುವಿಯಾಗಮನ
ಹೆಜ್ಜೆ ಹೆಜ್ಜೆಗೂ ಪ್ರತಿ ರನ್ನಿಗೂ ಎಂಥ ಸಂಚಲನ
ಸಂಗಕಾರ ತನ್ನವರೊಂದಿಗೆ ನಡೆಸಲು ಚಿಂತನ

೪೬ ರಲ್ಲಿ ಮಾಲಿಂಗ ಕೊಟ್ಟದ್ದು ಕೇವಲ ೩ ರನ್ನು
ಮುರಳಿಗಲ್ಲ ೪೭ ಸಿಕ್ತು ನಮ್ಮವರಿಗೆ ಕುಲಶೇಖರ ಬನ್ನು
ಯುವಿ ಧೋನಿ ಜಡಿದರು ಒಟ್ಟು ೧೧ ಅಮೂಲ್ಯ ರನ್ನು
ಮಾಲಿಂಗನನ್ನೂ ಬಿಡಲಿಲ್ಲ ೪೮ ರಲ್ಲಿ ಮತ್ತೆ ೧೧ ರನ್ನು
ಬೇಕಿತ್ತು ೫ ಧೋನಿ ಬಾರಿಸಿದ ಸಿಕ್ಸು ಗಳಿಸಿತು ವಿಶ್ವಕಪ್ಪನ್ನು