(ಚಿತ್ರ ಕೃಪೆ: ಅಂತರ್ಜಾಲ)
ಅಮ್ಮ
ಅಮ್ಮನಾಗೋ ಆಸೆ ಹೆಣ್ಣಾದ ಎಲ್ಲರಿಗಿರುತ್ತೆ
ಕರುಳ ಬಳ್ಳಿ ಬೆಳಸೋ ಬಯಕೆ ಎಲ್ಲರಿಗಿರುತ್ತೆ
ಅದಕೆ ಚಿಗುರೊಡೆಸೋ, ಆಧರಿಸೋ, ಅದಮ್ಯ
ವಾಂಛೆ, ಮುದ್ದು ಮಳೆಗರೆಯೋ ಮನಸು,
ಬಿದ್ದರೆತ್ತೋ ಕಾಳಜಿ, ಎತ್ತಿ ಮುದ್ದಾಡೋ ಸೊಗಸು,
ನೊಂದರೆ ತಾನಳುವ, ನಕ್ಕರೆ ತಾನಗುವ
ಸಲಹುವಳಲ್ಲ ಸದಾ ತಾಯಿ ತನ್ಮಗುವ?
ನಿರೀಕ್ಷೆ
ನಿರಾಸೆ ಬರಡು ಬಿತ್ತು..ಬೆಳೆಯಲಾಗಲಿಲ್ಲ ತುತ್ತು
ಉಸಿರಾಡುತಿವೆ ಜೀವ ಇದ್ದಂತೆ ಬಿದ್ದಲ್ಲೇ ಸತ್ತು
ಧರೆಗೂ ಬೇಕಿದೆ, ಒಣಗುವ ಬೆಳೆಗೂ ಬೇಕು, ಹನಿ
ಅವಳ ಬಾಳಲೂ ಏಕೋ ಬರಡು, ಇಲ್ಲ ಶಿಶುದನಿ
ಹರಕೆಗಳೆಷ್ಟೋ, ಧಾಮ-ಪುನಸ್ಕಾರಕ್ಕೆ ಕೊನೆಯಿಲ್ಲ
ಎನಿಸತೊಡಗಿದಾಗ ಜೀವನದಿ, ಭರವಸೆ ಇನ್ನಿಲ್ಲ
ಮೋಡ ಕಪ್ಪಿಟ್ಟಿತು, ಭಾರವಾಯಿತು ತಡೆಯಲಾರದೆ
ಹನಿಯಿತು, ಸುರಿಸಿತು, ಧರೆಗಿಳಿಯಿತು ಇನ್ನಿರಲಾಗದೆ.