(Photo: Indian Express, web)
ಇಳಿದುಬಿಡು ಇಳೆಗೆ
ನೀರಹೊತ್ತು ನಿಲ್ಲಬೇಡ ಬಹಳ ಹೊತ್ತು
ನೀ ಇಳಿದು ಬಿಡು ಕಾಯಿಸದೇ ಇಳೆಗೆ.
ಜಲದ ಬಸಿರ ಬಿಸಿಯುಗಿಯ ನೀ ಬಸಿದು,
ಹೊಲದ ಹಸಿರ ಕದಿವಂತೆ ಹೀಗೆ ಕಸಿದು,
ನೆಟ್ಟನೋಟದಿ ರೈತ ನಿಟ್ಟಿಸುವಂತೇಕೆ ನೀ
ನುಟ್ಟು ಶುಭ್ರ ಬಿಳಿಯುಡುಪು- ಬಾ ವಾಹಿನೀ
ಹರಿಸಿ ಹನಿಯ ರಾಶಿಯ ಬಾಯ್ಬಿಟ್ಟ ನೆಲಕೆ
ಗೇಯ್ಮೆಗಾತುರಿತ ನೆಲ, ಕೆರೆಯ ಜಲಕೆ
ಮೊಟ್ಟೆತುಂಬಿ ಬಸಿರಾಗಿದೆ ಬಾಳೆಮೀನು
ಕಾದಿದೆ ಆ ಹನಿಗೆ ವಟಗುಟ್ಟೊ ಕಪ್ಪೆ ತಾನು
ಜೀವ-ಜಲ-ಜೀವನ ಚಕ್ರ ಮನುವಿನದಲ್ಲ
ಇದ್ದು ಸದ್ದು ಮಾಡುವ ಆ ಋತುವಿನದಲ್ಲ
ನಿಸರ್ಗ ನಿಯಮ, ನೀನಿಳಿಯಲೇ ಬೇಕು
ಇಂದಿರಬಹುದು ಬರ ನಾಳೆ ಹನಿಯಲೇಬೇಕು
ನೀರಹೊತ್ತು ನಿಲ್ಲಬೇಡ ಬಹಳ ಹೊತ್ತು
ನೀ ಇಳಿದು ಬಿಡು ಕಾಯಿಸದೇ ಇಳೆಗೆ.