Thursday, July 8, 2010

ಎಲ್ಲಾ ಮಾಯವೋ

ಕಾಡು..ಕಾಡಿದ್ದು ನಾಡು
ನಾಡು ನೋಡಿದ್ದು ಬೀಡು
ಬೀಡು ಈಗಾಯ್ತು ಮತ್ತೆ ಕಾಡು
ಇಲ್ಲ ಮರ ಗಿಡ, ಹಸಿರು
ತೋರಿ ಎತ್ತರಗಳ ಕಾಂಕ್ರೀಟು ಜಾಡು.

ಕಾಡು, ಎಲ್ಲಿವೆ ನೋಡು
ನೋಡುತ್ತಿರುವಂತೆ ಮಾಯ
ಮರ, ಬಂದವು ಗಿಡ, ಕೃಷಿಗೆ
ಸಾಯೋ ಸ್ಥಿತಿಗೆ ವ್ಯವಸಾಯ.

ಕೆರೆಯಾದವು ಮರೆ,
ತೊರೆ ನೆಲಬಿರಿದಿರೆ
ಒತ್ತುವರಿಕೆ ಸುತ್ತುವರಿದು
ಮಾಫಿಯಾ ಕೊಳ್ಳೆ ಸುಲಿದು.

ಹೊಲ-ಗದ್ದೆ ಮಾರಿ ಮೆದ್ದೆ
ಹಣದಾಸೆ, ಈಗ- ಇಲ್ಲ ಆಹಾರ ನಿದ್ದೆ
ಆಗ ನಿನ್ನ ಕೂಲಿ
ಈಗಾಗಿರುವ ನಿನ್ನದೇ ಸಿರಿಯ ಮಾಲಿ.

ಬಿಡುತ್ತಿಲ್ಲ ಭೂ ಗರ್ಭವನೂ
ಅಗೆದು ಹೊರಹಾಕಿ ಕರುಳನೂ
ಅಯ್ಯೋ ಮರುಳೇ..ಏಕೆ ತೋಡುತಿರುವೆ
ನಿನ್ನವನತಿ ಗೋರಿಯ ಕುಳಿಯನ್ನು ನೀನೇ?

ಈಗಲೂ ಕಾಲ ಮಿಂಚಿಲ್ಲ
ತಾಯವಳು ಮನ್ನಿಸುವಳು ಎಲ್ಲ
ನೆಡು - ಬೆಳೆಯಲಿ ಕಾಡು
ರೈತ-ಕಾರ್ಮಿಕ ಬೆಳಗಲು ನಾಡು
ಅನ್ನ, ಗಾಳಿ, ನೀರಿಗೆ ಬೇಕು ಎಲ್ಲ
ಸತ್ತಾಗ ಕೊಂಡುಹೋಗುವುದೇನಿಲ್ಲ
ದಡಿಮಣ್ಣು ಹಿಡಿ ಬೂದಿ ಕಡೆಗಷ್ಟೇ ಎಲ್ಲಾ