ಬೆಚ್ಚನೆ ಕರುಳಪ್ಪುಗೆ
ಬಳ್ಳಿಗೆ ಒಳಗೆ, ಹೊರಗೆ
ಡವ-ಡವಿಕೆ ಜೋಗುಳ ಒಳಗೆ
ಮೈದಡವಿ ಮಡಿಲಲಿ ಹೊರಗೆ
ಚರಾಚರದ ಸೃಷ್ಠಿಗೆ ಕಾರಣ ದೇವರು
ನನ್ನ ಹೊತ್ತು ಹೆತ್ತವಳು ತಾಯಿ ದೇವರು
ಲಾಲಿಸಿ-ಪಾಲಿಸಿ ಮಗುವ
ಮುದ್ದಿಸಿ ರಕ್ಷಿಸಿ ಬಾಲ್ಯವ
ನೋವಲಿ ‘ಅಮ್ಮಾ‘ ಎನಲು
ಓಡೋಡಿ ಬರುವಳು
ನನ್ನ ಮೇಲಿನ ಅಪ್ಪನ ಕೋಪಕೆ
ಆಡ್ಡಗೋಡೆಯಾಗಿ ನಿಲುವಳು
ನನಗೆ ಬೀಳಬೇಕಾದ ಏಟನು
ತಾನೇ ತಿನುವಳು
ನನ್ನ ನೋವಲಿ ತಾನೊಂದು
ಸಂತೈಸುವಳು
ನನ್ನಲ್ಪ ಗೆಲುವಲೂ
ಜಗಗೆದ್ದಂತೆ ನಲಿವಳು
ಬಾಲ್ಯ..ಶಾಲೆ ಆಗಲೂ ಮಗು
ಕಾಲೇಜು, ಉದ್ಯೋಗ
ಆಗಲೂ ಮಗು
ಮದುವೆಯಾಗಿ ತಂದೆಯಾದರೂ
ಅಪರೂಪಕ್ಕೆ ಹೋದಾಗ ಊರಿಗೆ
ದಢೂತಿದೇಹವ ಬಗ್ಗಿಸಿ ನಮಿಸಲು
ಅನ್ನುವಳಲ್ಲ ‘ಎಷ್ಟು ಸೊರಗಿರುವೆ ಮಗು?‘
ಅವಳಿಗೆ ನಾನು ಈಗಲೂ ಮಗು
ಅಮ್ಮ ಯಾವಾಗಲೂ ಅಮ್ಮ
ಮಗ ತಾತನಾದರೂ
ಅವಳಿಗೆ ಮಗುವೇ.