Saturday, August 29, 2009

ಕ್ಲಿಪ್ಪಿಂಗ್ ಪೂರಕ ಪೋಸ್ಟ್

ಸುನಾಥ್ ಸರ್ ರವರ ಕ್ಲಿಪ್ ಗೆ ಪ್ರತಿಕ್ರಿಯೆ ನನ್ನ ಈ ಪೂರಕ ಪೋಸ್ಟ್ ಗೆ ಕಾರಣ.
ಮನಸ್ಸಿನ, ಮಿದುಳಿನ ಮತ್ತು ಆರೋಗ್ಯದ ಅಗೋಚರ ಸಂಬಂಧಗಳನ್ನು ಹಲವರು ನಂಬುವುದಿಲ್ಲ. ಅಂತಹವರಿಗೆ ನನ್ನ ನೇರ ಪ್ರಶ್ನೆ...ಹುಚ್ಚು ಏಕೆ ಹಿಡಿಯುತ್ತೆ?? ಇದು ಕೇವಲ ಮನಸ್ಸು, ಮಿದುಳಿಗೆ ಸಂಬಂಧಿಸಿದ್ದು ಅದೇ ರೋಗ ಎನ್ನುತ್ತೇವೆ ನಾವು...ಈ ಕ್ಲಿಪ್ಪಿಂಗ್ ನಲ್ಲಿ ಹೇಳಿದಂತಹ ಪ್ರೋಟಿನ್ ಪೆಪ್ಟೈಡುಗಳು ನೇರ ಪ್ರಭಾವ ಬೀರುವ ಖಾಯಿಲೆ ಇದು. ದುಃಖವಾದಾಗ ಕಣ್ಣೀರೇಕೆ? ಇನ್ನೊಂದು ಪ್ರಶ್ನೆ? ಇಲ್ಲಿಯೂ ಭಾವನೆ (ಮನಸು) ಸ್ರಾವಕ ಪ್ರೋಟಿನುಗಳ ಮೂಲಕ ಮಿದುಳಿಗೆ ಸಂದೇಶ ತಲುಪಿಸಿ ಕಣ್ಣಿರನ್ನು ಸುರಿಸುವಂತೆ ಮಾಡುತ್ತದೆ. ಆದ್ದರಿಂದ ಸುಖೀ ಮನಸು, ಆಹ್ಲಾದಕತೆ ಲಾಭಕರ ಪ್ರೋಟೀನುಗಳನ್ನು ಉತ್ಪಾದಿಸಬಹುದಲ್ಲ .? ಇವು ರೋಗ ಕಾರಕಗಳನ್ನು ತಡೆಯಬಹುದಲ್ಲ...?? ಇದೇ ವಿಷಯವನ್ನು ಈ ವೀಡಿಯೋದಲ್ಲಿ ಪ್ರತಿಪಾದಿಸಲಾಗಿದೆ. ಎಲ್ಲದಕ್ಕೂ ಸಮತೋಲನಾಸ್ಥಿತಿ ಎಂಬುದು ನಿರ್ಣಾಯಕ. ಅತೀ ಮಾರಕಗಳು ಈ ಸಮತೋಲನಾಸ್ಥಿತಿಯ ರೇಖೆಗಿಂತ ಮೀರಿ ಪ್ರಭಾವ ಬೀರುವುದರಿಂದ ಶಿಘ್ರ ನಷ್ಟಕ್ಕೆ ಕಾರಣವಾಗುತ್ತವೆ. ರೋಗಕಾರಕಗಳ ಪ್ರಭಾವ ಈ ದೇಹ ಸಮತೋಲನಾಸ್ಥಿತಿ ರೇಖೆಯನ್ನು ದಾಟಿದಾಗಲೇ ರೋಗ ತಲೆದೋರುವುದು. ಆರೋಗ್ಯ ಸಮತೋಲನಾ ಮಟ್ಟ ಪ್ರತಿಜೀವಿಯಲ್ಲೂ ಒಂದೊಂದು ಮಟ್ಟದ್ದಾಗಿರುತ್ತೆ, ಇದಕ್ಕೆ ಕೆಲವು ವಿಷಯಗಳು ಪೂರಕ ಶಕ್ತಿ ಕೊಟ್ಟರೆ ಮತ್ತೆ ಕೆಲವು ವಿರುದ್ಧವಾಗಿ ಆ ಮಟ್ಟವನ್ನು ಕ್ಷೀಣಗೊಳಿಸಿ ದೇಹ ರೋಗಕ್ಕೆ ಸುಲಭದ ತುತ್ತಾಗುವಂತೆ ಮಾಡುತ್ತವೆ. ಪ್ರತಿ ರೋಗದ ನಿರ್ವಹಣೆಯಲ್ಲಿ ಇದೇ ಅಂಶಗಳನ್ನು ಪರಿಗಣಿಸಲಾಗುತ್ತದೆ. ಉತ್ತಮ ಆಹಾರ, ಶುದ್ಧ ಪರಿಸರ, ಉತ್ತಮ ಆಚಾರ ಮತ್ತು ಆಹ್ಲಾದಕರ ಮನಸ್ಥಿತಿ ಎಲ್ಲವೂ ದೇಹಾರೋಗ್ಯ ಸಮತೋಲನಾ ಸ್ಥಿತಿಯನ್ನು ಉನ್ನತ ಮಟ್ಟಕೇರಿಸಿ ರೋಗಕಾರಕಗಳು ಬಹುಶ್ರಮ ಪಡುವಂತೆ ಮಾಡುವುದಲ್ಲದೇ ರೋಗತಲೆದೋರುವಿಕೆಗೆ ವಿಳಂಬವನ್ನುಂಟು ಮಾಡುತ್ತವೆ. ಈ ಹೆಚ್ಚಿದ ಸಮಯಾವಕಾಶದಲ್ಲಿ ದೇಹ ತನ್ನ ನಿರ್ದಿಷ್ಟ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ ಹೀಗಾಗಿ ರೋಗವನ್ನು ತಡೆಯಲಾಗುತ್ತದೆ.

Friday, August 28, 2009

ಬ್ಲಾಗು-ಬಳಗಕ್ಕೆ, ಸ್ವೈನ್-ಫ್ಲೂ ಕ್ಲಿಪ್ಪಿಂಗ್

ಇದು ಒಂದು ಮಾಹಿತಿಯ ಕ್ಲಿಪ್ಪಿಂಗ್ ನೋಡಿ ನಿಮ್ಮ ಪ್ರತಿಕ್ರಿಯೆ ನೀಡಿ.

Friday, August 21, 2009

ಹಂದಿ ಜ್ವರ ಪೂರಕ ಪೋಸ್ಟ್

ಶಿವು ಬೆಂಗಳೂರಿಗೆ ಬಂದೂ ನಿಮ್ಮನ್ನು ಭೇಟಿಯಾಗಲಾಗಲಿಲ್ಲ ಆದರೆ ಹಂದಿ ಜ್ವರದ ಉಗಮ ಕಂಡೆ ಅಲ್ಲಿ. ಮೊದಲ ಬಲಿ lady teacher ಗೆ ವೈದ್ಯಕೀಯ ಸೂಕ್ತ ಚಿಕಿತ್ಸೆ ಸಿಕ್ಕಿದ್ದು ತಡವಾಯ್ತು ಎಂದೇ ನನ್ನ ಅನಿಸಿಕೆ, ಇಲ್ಲಿ ಇನ್ನೊಂದು ಅಂಶ ಹಂದಿ ಜ್ವರ ಒಂದೇ ಇದ್ದಲ್ಲಿ ಮಾರಣಾಂತಕವಾಗುವ ಸಾಧ್ಯತೆ ಕಡಿಮೆ ಅದರ ಜೊತೆಗೇ ಸೋಂಕುವ ಇತರೆ ರೋಗಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು (ರೋನಿಶ) ಹಂಚಿಬಿಟ್ಟು ಹಂದಿ ಜ್ವರ ವೈರಸ್ ನತ್ತ ನಿರೋಧಕತೆ ಕ್ಷೀಣವಾಗಿ ಮರಣ ಅನಿವಾರ್ಯವಾಗುತ್ತದೆ. ಅದಕ್ಕೇ ಹಂದಿಜ್ವರದ ತಡೆಗೆ ಉತ್ತಮ ಆಹಾರ ವಿಟಮಿನ್ ಸಿ ಅಧಿಕ ಸೇವನೆ (ಮೆಗಾ ಡೋಸ್ ಎನ್ನುತ್ತಾರೆ) ಮತ್ತು ಹೆಚ್ಚು ನೀರಿನ ಸೇವನೆ ಬಹು ಸಹಾಯಕ. ರೋಗ ನಿರೋಧಕಗುಣ ಗುಣ ಮತ್ತು ಸಾಮಾನ್ಯ ಸೋಂಕುಗಳನ್ನು ವಿರೋಧಿಸುವ ಮೂಲಗಳ ಉದ್ದೀಪನೆಗೆ ಸಹಾಯವಾಗುತ್ತೆ. ವೈರಸ್ ನಂದಿಸುವ ಔಷಧಿ ತಾಮಿಫ್ಲೂ ಹಂದಿ ಜ್ವರ ಬಳಲಿತರಿಗೆ ಎಷ್ಟು ಬೇಗ ಕೊಟ್ಟರೆ ಅಷ್ಟೇ ಬೇಗ ನಮ್ಮ ರೋನಿಶ ದ ಹಂಚುವಿಕೆ ನಿಲ್ಲುತ್ತೆ ಮತ್ತು ಈರೋಗ (ಇತರ ರೋಗಗಳ ವಿಷಯದಲ್ಲೂ) ನಿಯಂತ್ರಣಕ್ಕೆ ಬರುತ್ತದೆ. ನಿಮ್ಮ ಈ ಪ್ರಶ್ನೆ ನನಗೆ ನನ್ನ ಬ್ಲಾಗ್ ಪೋಸ್ಟ್ ಗೆ ಪೂರಕ ಪೋಸ್ಟ್ ಹಾಕುವಂತೆ ಮಾಡಿದೆ. ನನ್ನ ಈ ಲೇಖನ ಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸಿದರೆ ಧನ್ಯ.

ಹಂದಿಜ್ವರ- ಮಂದಿಗ್ಯಾಕೆ...?? ಭೇತಾಳ ಉವಾಚ





ಶತ ವಿಕ್ರಮನ ವಿಕ್ರಮಗಳು ಏಕೋ ..ಸ್ವಲ್ಪ ಢೀಲಾಗಿವೆ ಎನಿಸುವಾಗಲೇ ಹಂದಿಜ್ವರ ಎಂಬ ಭೇತಾಳ ಆಡಳಿತಾರೂಢರ ಬೆನ್ನು ಹತ್ತಿರುವುದು ಶತ ವಿಕ್ರಮ ಚುರುಕಾಗಲು ಕಾರಣವಾಗಿರಬಹುದು. ಅದಕ್ಕೋ ಏನೋ...ಗಂಭೀರ ಮತ್ತು ಸಿಟ್ಟಿನ ಮುಖಭಾವಹೊತ್ತ ಶತವಿಕ್ರಮ ನಿಮ್ಹಾನ್ಸ್ ನ ಹೊರ ವಲಯದ ಬೋಗನ್-ವಿಲ್ಲ ಕ್ಕೆ ನೇತುಬಿದ್ದು ತನ್ನ ಹತ್ತಿರ ಮೂಗಿಗೆ ಬಟ್ಟೆ, ಮುಸುಕು, ಮಾಸ್ಕ್, ಟಿಸ್ಯು ಪೇಪರ್ ಹೀಗೆ ಯಾವುದೋ ಒಂದನ್ನು ಅಡ್ಡವಿಟ್ಟು ಬರುವವರ ನಿರೀಕ್ಷೆಯಲ್ಲಿದ್ದ ಎಚ್-೧-ಎನ್-೧ ಭೇತಾಳನನ್ನು ಜಗ್ಗದೇ ಹೆದರದೇ, ಮೂಗಿಗೆ ಕೈಯನ್ನು ಅಡ್ಡವಿಟ್ಟುಕೊಳ್ಳದೇ ಬಂದು ಎತ್ತಿ ಹೆಗಲಿಗೇರಿಸಿ ರಸ್ತೆಯ ಸಿಗ್ನಲ್ ಅನ್ನೂ ಗಮನಿಸಿದೇ ಹೊರಡುವ ಆಂಬುಲೆನ್ಸ್ ವ್ಯಾನಿನಂತೆ ವಿಲ್ಸನ್ ಗಾರ್ಡನ್ ನ ವಿದ್ಯುತ್ ಚಿತಾಗಾರದತ್ತ ಹೊರಟನು. ಎಚ್-೧ಎನ್-೧ ಮಾತನಾಡತೊಡಗಿತು.


“ನಾನು ಎಂತಹ ವಿಷಾಣು ಎಂದು ತಿಳಿದಿದ್ದರೂ.. ನಿನ್ನದು ಸಾಹಸ ಎನ್ನಲೋ? ಶುದ್ಧ ಮೊಂಡುತನ ಎನ್ನಲೋ?? ಅರ್ಥವಾಗುತ್ತಿಲ್ಲ. ಆದರೂ ನಿನ್ನ ಈ ಧೈರ್ಯವನ್ನು ಮೆಚ್ಚದೇ ಇರಲಾರೆ. ನಿನ್ನಷ್ಟೇ ನಿಷ್ಠೆ..ಏಕಾಗ್ರತೆ..ಸಾಧಿಸಿ ತೋರುವ ಛಲ ನಮ್ಮ ಆಡಳಿತಾರೂಢರಲ್ಲಿದ್ದಿದ್ದರೆ ನಾನು ಮಹಾ ಮಾರಿ ಆಗೋ ಲಕ್ಷಣ ತೋರ್ತಾ ಇರ್ಲಿಲ್ಲ. ನಿಜಕ್ಕೂ ನಿನ್ನ ಪ್ರಯತ್ನ ಅಭಿನಂದನಾರ್ಹ. ನಿನ್ನ ಈ ಪ್ರಯತ್ನಕ್ಕೆ ಸರ್ಕಾರದ ಜೊತೆ ಅನಿವಾರ್ಯ, ಸದ್ಯಕ್ಕೆ ಸರ್ಕಾರಕ್ಕೆ ಉಪಚುನಾವಣೆ ಮುಖ್ಯ.. ಅದೇನೇ ಇರಲಿ, ನಿನ್ನ ವ್ಯರ್ಥ ಪ್ರಯತ್ನದ ಹಾದಿಯ ಶ್ರಮದ ಅರಿವಾಗದಂತೆ ನನ್ನ ಜಾತಿಯ ಕಥೆಯನ್ನು ಹೇಳುತ್ತೇನೆ ಕೇಳು” ಎಂದು ತನ್ನ ಕಥೆಯನ್ನು ಹೇಳಲಾರಂಭಿಸಿತು.


ನನ್ನ ಮೂಲ -ಫ್ಲೂ ಕಾರಕ ಅತಿಸೂಕ್ಷ್ಮಜೀವಾಣು (ವೈರಸ್). ಇವು ಬ್ಯಾಕ್ಟೀರಿಯಾಗಿಂತ (ಎರಡು ಮೈಕ್ರಾನ್ ಗಿಂತ ಅಂದರೆ ೦.೦೦೨ ಮಿ.ಮೀಗಿಂತ) ಚಿಕ್ಕವು. ಅತಿಸೂಕ್ಷ್ಮಾಣು ಜೀವಿಗಳಲ್ಲಿ ಎರಡು ವಿಧ - ಡಿ.ಎನ್.ಎ. ವೈರಸ್ ಮತ್ತು ಆರ್.ಎನ್.ಎ. ವೈರಸ್. ವೈರಸ್ ತನ್ನ ವಂಶಾಭಿವೃದ್ಧಿಗೆ ಮತ್ತೊಂದು ಜೀವಕೋಶವನ್ನು ಅವಲಂಬಿಸುತ್ತವೆ. ಡಿ.ಎನ್.ಎ. ವೈರಸ್ ತನ್ನ ವಂಶಾಭಿವೃದ್ಧಿಗೆ ಬೇಕಾದ ಎಲ್ಲ ಮಾಹಿತಿಯನ್ನುಳ್ಳ ಡಿ.ಎನ್.ಎ. ಎಂಬ ರಾಸಾಯನಿಕ ತತ್ವವನ್ನು ಆಶ್ರಯದಾತ ಜೀವಕೋಶದಲ್ಲಿ (ಆಜೀಕೋ) ಅಳವಡಿಸಿ ತನ್ನ ಪೂರ್ಣ ರೂಪಕ್ಕೆ ಅವಶ್ಯವಾದ ಪ್ರೋಟೀನುಗಳನ್ನು ಆಜೀಕೋ ಉತ್ಪಾದಿಸುವಂತೆ ಮಾಡಿ ಪೂರ್ಣಗೊಂಡು ಆಜೀಕೋ ದಿಂದ ಹೊರಬರುತ್ತದೆ, ಇನ್ನೊಂದು ಆಜೀಕೋ ಮತ್ತೊಂದು ಹೀಗೆಯೇ ಆ ಜೀವಿಯಿಂದ ಮತ್ತೊಂದು ಜೀವಿ ಹೀಗೆ ಹರಡುತ್ತದೆ. ಈ ಪ್ರಕ್ರಿಯೆಯಲ್ಲಿ ಆಜೀಕೋ ಗೆ ಅಥವಾ ಅದನ್ನು ಹೊಂದಿದ ಜೀವಿಯ ಅಸಹನೆ, ಅನಾರೋಗ್ಯ ಕೊನೆಗೆ ಅವಸಾನಕ್ಕೆ ಕಾರಣವಾಗುತ್ತದೆ. ಇನ್ನು ಆರ್.ಎನ್.ಎ. ವೈರಸ್ ಗಳು ಮೊದಲಿಗೆ ಡಿ.ಎನ್.ಎ. ಆಗಿ ರೂಪಾಂತರಗೊಂಡು ನಂತರ ತನ್ನ ವಂಶಾಭಿವೃದ್ಧಿಯನ್ನು ಮುಂದುವರೆಸುತ್ತದೆ. ಆರ್.ಎನ್.ಎ ವೈರಸ್ ನ ರೂಪಾಂತರದ ಸಮಯದಲ್ಲಿ ಆಗುವ ಕೆಲವು ಸ್ವಾಭಾವಿಕ ತಪ್ಪುಗಳು ಹೊಸ ಆರ್.ಎನ್.ಎ. ವೈರಸ್ ನ ಹುಟ್ಟಿಗೆ ಕಾರಣವಾಗಬಹುದು. ಫ್ಲೂ ಕಾರಕ ವೈರಸ್ ಗಳು ಆರ್.ಎನ್.ಎ ವೈರಸ್ ಗಳಾಗಿರುವುದರಿಂದ ರೂಪಾಂತರದ ಕಾರಣ ಮಾನವ ಮತ್ತು ಇತರ ಜೀವಿಗಳ ಸ್ವಾಭಾವಿಕ ರೋಗನಿರೋಧಕ ಗುಣಕ್ಕೆ ಸವಾಲಾಗಿ ಅದನ್ನು ತಪ್ಪುದಾರಿಗೆಳೆದು ರೋಗಹರಡುವಲ್ಲಿ ಯಶಸ್ವೀ ಎನಿಸುತ್ತವೆ. ಪದೇ ಪದೇ ಮಾರ್ಪಾಡುಗಳಿಗೆ ಈಡಾಗುವ ಆರ್.ಎನ್.ಎ. ವೈರಸ್ ಈ ಗುಣದ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದೆ. ಇದೇ ಕಾರಣಕ್ಕೆ ಲಸಿಕೆಯನ್ನೂ ಅಭಿವೃದ್ಧಿಪಡಿಸಲಾಗುತ್ತಿಲ್ಲ ಎನ್ನಬಹುದು.
ಇನ್ನು...ನನ್ನ ಅತಿ ಹೊಸ ರೂಪದ ಫಲಿತವೇ ಹಂದಿಜ್ವರದ ವೈರಸ್..ಎಚ್-೧-ಎನ್-೧. ಇದು ನೀವು ಮನುಷ್ಯರು ಕೊಟ್ಟ ಹೆಸರೇ...ಹಂದಿಗಳಲ್ಲಿ ಬರುತ್ತಿದ್ದ ಫ್ಲೂ ಮನುಷ್ಯರಿಗೆ ಬಂದದ್ದೇ ಈ ರೂಪಕ್ಕೆ ಕಾರಣ. ಇನ್ ಫ್ಲುಯೆಂಜಾ ಎ, ಬಿ ಮತ್ತು ಸಿ ಎಂದು ಮೂರು ವಿಧಗಳು. ಎ ಮೂಲತಃ ಹಂದಿಗಳಲ್ಲಿ ಕಂಡುಬರುವುದು, ಬಿ ಹಂದಿಗಳಲ್ಲಿ ಇಲ್ಲದ್ದು ಮತ್ತು ಸಿ ಹಂದಿಗಳಲ್ಲಿ ಅಪರೂಪದ್ದು. ೧೯೧೮ ರಲ್ಲಿ ಹಂದಿ ಮತ್ತು ಮಾನವನಲ್ಲಿ ಒಟ್ಟಿಗೇ ಕಂಡುಬಂದ ಇನ್ ಫ್ಲುಯೆಂಜಾ ಎ ಜ್ವರ ಬಹುಶಃ ಇಂದಿನ ಹಂದಿ ಜ್ವರದ ಮೂಲ ಎನ್ನಬಹುದು.ನನ್ನ ಹೊಸ ರೂಪದ ಮೂಲ ಮೆಕ್ಸಿಕೋ ಮತ್ತು ಅಮೇರಿಕಾ.. ಹಂದಿಗಳು ಹಕ್ಕಿ ಜ್ವರದ ವೈರಸ್ ಮತ್ತು ಮಾನವ ಇನ್ ಫ್ಲೂಯೆಂಜಾ ವೈರಸ್ ಎರಡನ್ನೂ ತನ್ನಲ್ಲಿ ಬೆಳೆಸುವ ಮತ್ತು ತನ್ನ ವೈರಸ್ ಜೊತೆಗೆ ಅಧಿಕ ರೂಪಾಂತರಕ್ಕೆ ಕಾರಣವಾಗುವ ಸಾಧ್ಯತೆಗಳನ್ನು ೧೯೧೮ ರ ನಂತರದ ಘಟನಾವಳಿಗಳು ಧೃಢಪಡಿಸುತ್ತವೆ...!!! ಅದೇ ಕಾರಣಕ್ಕೆ ಹಂದಿಗಳ ರಕ್ತದಲ್ಲಿ ಈ ವಿವಿಧ ವೈರಸ್ ಗಳ ವಿರುದ್ಧದ ಪ್ರತಿವಿಷವಸ್ತು (ಆಂಟಿಬಾಡಿ) ಕಂಡುಬಂದಿದೆ. ಗುಂಪುಪ್ರತಿರೋಧಕತೆ (ಹರ್ಡ್ ಇಮ್ಯುನಿಟಿ) ಇಂತಹ ರೋಗಗಳಿಗೆ ಉತ್ತಮ ಸ್ವಾಭಾವಿಕ ಪರಿಹಾರ.


ನನ್ನ ಹರಡುವಿಕೆಯನ್ನು ತಡೆಯುವುದು, ನನ್ನ ಅಸ್ತಿತ್ವವನ್ನು ಅತಿಶೀಘ್ರ ಪತ್ತೆಹಚ್ಚುವುದು, ಸೂಕ್ತ ಚಿಕಿತ್ಸೆಯನ್ನು ಅತಿ ತ್ವರಿತ ಅವಧಿಯೊಳಗೆ ನೀಡುವುದು ನನ್ನಿಂದಾಗುವ ರೋಗ ಮತ್ತು ಜೀವಹಾನಿಯನ್ನು ತಡೆಯಲು ಬಹುಮುಖ್ಯ ಅಂಶಗಳು.
ಹೀಗನ್ನುತ್ತಿರುವಂತೆ..ಭೇತಾಳ ತನ್ನ ತಪ್ಪಿನ ಅರಿವಾಗಿ ಅವಡುಗಚ್ಚಿ ಸುಮ್ಮನಾಯಿತು...ಆದರೆ ಆ ವೇಳೆಗಾಗಲೇ ಮಹತ್ವ ಮಾಹಿತಿಯನ್ನು ಶತವಿಕ್ರನಿಗೆ ನೀಡಿತ್ತು..ಮುಗುಳ್ನಕ್ಕ ಶತ ವಿಕ್ರಮ ..”ಅಯ್ಯೋ ಮಂಕೇ ನಮ್ಮ ಸಂಶೋಧಕರು ಇದನ್ನೆಲ್ಲ ಅರಿತಿದ್ದಾರೆ ಆದ್ರೆ ನಮ್ಮ ರಾಜಕಾರಣಿಗಳು ತಮ್ಮ ಆಪ್ತರಿಗೆ ಈ ರೋಗ ಬರುವವರೆಗೂ ಎಚ್ಚರಗೊಳ್ಳುವುದಿಲ್ಲ”
ಎನ್ನುತ್ತಿರುವಂತೆಯೇ...”ಮೌನ ಮುರಿದು ನಮ್ಮ ಅಗ್ರೀಮೆಂಟ್ ಮುರಿದಿದ್ದೀಯಾ...ಅಗೋ ಅಲ್ಲೊಬ್ಬ ಬಕರಾ ಬರ್ತಿದ್ದಾನೆ ಅವನಲ್ಲಿ ಎಚ್-೧-ಎನ್-೧ ಬೀಜ ಬಿತ್ತುತ್ತೀನಿ..ಸಾಧ್ಯ ಅದ್ರೆ ಅವನ್ನ ಉಳಿಸ್ಕೋ” ಎನ್ನುತ್ತಾ ..ಕರ್ಕಶವಾಗಿ ಕೂಗುತ್ತಾ ಹಾರಿಹೋಯಿತು.
ಶತ ವಿಕ್ರಮ ಮಂತ್ರಿಯಾಗಿದ್ದ ತನ್ನ ಮಾವ ಕಂತ್ರಿ ವಿಕ್ಕಣ್ಣನ ಮನೆಕಡೆ ಹೆಜ್ಜೆಹಾಕಿದ ಆ ಹೊಸ -ಬಕರಾ- ನ ಮತ್ತು ಅಂತಹವರನ್ನು ಉಳಿಸಲು.