ವಿಷ್ಣುವಾಗಿ ನಟನೆಯಲ್ಲಿ ಮೇರು ಸಂಪತ್
ಭಾವಕ್ಕೆ ಗೀತೆಕೊಟ್ಟು ಅವಿಸ್ಮರಣೀಯ ಅಶ್ವಥ್
ಒಂದೇ ದಿನದಂತರದಲ್ಲಿ ಎಂತಹ ನೋವು ಕಲೆಗೆ
ಎರಡು ಅಮೂಲ್ಯ ಪುತ್ರರತ್ನಗಳ ನಷ್ಟ ನಾಡಿಗೆ.
ಛಲ ತೋರಿ ಮಿಂಚಿ ನಟನೆಯಲಿ ಪುಟ್ಟಣ್ಣನ ನಾಗರಹಾವಾಗಿದ್ದು
ದಾರಿತಪ್ಪಿದ ಪಾತ್ರದ ಗಂಧದಗುಡಿಯಲ್ಲಿ ಅಣ್ಣನ ತಮ್ಮನಾಗಿದ್ದು
ಅಮೋಘ ನಟನೆ ದುರಂತ ಕಥೆಗೆ ಜೀವಾಳದ ಬಂಧನವಾದದ್ದು
ಕನ್ನಡ ಕುಲಕೋಟಿಗೆ ಸಾಹಸಿಂಹನಾಗಿ ಆಪ್ತಮಿತ್ರನಾದದ್ದು.
ಅಂದು ಮಾರ್ಪಟ್ಟ ಸಂಪತ್ ಇಂದು ಇಲ್ಲವಾದ ವಿಷ್ಣು
ಮಿತ ನುಡಿ ಹಿತ ನಡೆಯಿಂದ ಟೀಕೆಗೆ ಉತ್ತರಿಸಿದ ವಿಷ್ಣು
ನಾಡ-ನುಡಿಯ ರಕ್ಷಣೆಗೆ ಅಣ್ಣನಜತೆಗೂಡಿದ ವಿನಯಿ ವಿಷ್ಣು
ಎಂತಹ ನೋವು ನಾಡಿಗೆ ಅಶ್ವಥ್ ಹಿಂದೆಯೇ ಹೋದರು ವಿಷ್ಣು.
ಚಿತ್ರರಂಗ ಒಬ್ಬ ಮೇರು ನಟನನ್ನು ಕಳೆದುಕೊಂಡಿರಬಹುದು
ರಂಗದ ನಟರು ಆಪ್ತಮಿತ್ರನನ್ನು ಕಳೆದುಕೊಂಡಿರಬಹುದು
ಆದರೆ ವಿಷ್ಣು ಒಂದು ಗುರುತಾಗಿ ವ್ಯಕ್ತಿ ನಮ್ಮಲ್ಲಿ ಇಲ್ಲ
ನಟನಾಗಿ, ಯಜಮಾನನಾಗಿ ಸಿಂಹದ ಹೂಂಕಾರ ಇನ್ನಿಲ್ಲ.
ಚೇತನ ಹೊರಟಿದೆ ದೇಹ ಬಿಟ್ಟು ಇಹ ಲೋಕವ ತ್ಯಜಿಸಿ
ನೂತನ ಚಿರಂತನವಾಗಲಿ ಜನಿಸಿ ಮತ್ತೊಮ್ಮೆ ಪ್ರವೇಶಿಸಿ
ಕನ್ನಡ ಲೋಕವ, ಸಾರಸ್ವತವ ನಟನಾ ಪ್ರಪಂಚವ
ದೈವನೀಡಲಿ ಕುಟುಂಬಕೆ ಸಾಂತ್ವನ, ಆತ್ಮಕೆ ಸ್ವರ್ಗವ.