Saturday, July 13, 2013

ಬೆಲ್ಜಿಯಂ - ಬೆಲೆ ...ಹೀಗೂನಾ...???

ಬೆಲ್ಜಿಯಂ – ಯೂರೋಪಿಗೆ ನನ್ನ ಎರಡನೇ ಭೇಟಿ ಈ ದೇಶಕ್ಕೆ ಎನ್ನುವ ಅಂಶ ಒಂದೆಡೆಯಾದರೆ “ಜೈವಿಕ ತಂತ್ರಜ್ಞಾನದ ಅಂತರ ರಾಷ್ಟ್ರೀಯ ವಿಚಾರ ಸಂಕಿರಣ -೨೦೧೩” ಕ್ಕೆ ಹೋಗಿ ಅಲ್ಲಿ ಶೋಧ ಪತ್ರ ಮಂಡಿಸುವ ಖುಷಿ ಇನ್ನೊಂದೆಡೆ. ಆದರೆ ಯಾತ್ರೆಯ ಕಡೆಯ ದಿನಗಳು ನನ್ನ ಒಳಗನ್ನು ಪರೀಕ್ಷಿಸುವ ದಿನಗಳಾಗಿದ್ದು ಐರೋಪ್ಯ ದೇಶಗಳಲ್ಲಿ ನಮಗಿರುವ “ಶುದ್ಧ ಸಂಭಾವಿತರು” ಎನ್ನುವ ಭಾವನೆಗೆ ಧಕ್ಕೆ ಎನ್ನುವಂತಹ ಘಟನೆ ನಡೆದದ್ದು ಮತ್ತು ನಂತರದ ಅನುಭವಗಳು...ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ....ಎಷ್ಟು ನಿಜ ಅಲ್ಲವೇ ? ಎನ್ನುವಂತೆ ಮಾಡಿದೆ.
ಬೆಲ್ಜಿಯಂ ನ ರಾಜಧಾನಿ ಬ್ರಸಲ್ಸ್ ನಿಂದ ವಿಚಾರ ಸಂಕಿರಣ ನಡೆಯಬೇಕಿದ್ದ ಆಂಟ್ವೆರ್ಪ್ ವಿಶ್ವವಿದ್ಯಾಲಯ ಕ್ಕೆ ಬ್ರಸಲ್ಸ್ ವಿಮಾನ ನಿಲ್ದಾಣದಿಂದ ಮತ್ತು ವಾಪಸಿನಲ್ಲಿ ವಿಶ್ವವಿದ್ಯಾಲಯದಿಂದ ಬ್ರಸಲ್ಸ್ ವಿಮಾಣಕ್ಕೆ ಕುವೈತಿನಲ್ಲಿದ್ದಾಗಲೇ  ಟ್ಯಾಕ್ಸಿಗಾಗಿ ಮುಂಗಡ ಬುಕಿಂಗ್ ಮಾಡಿದ್ದೆ ಹಾಗಾಗಿ ವಿಮಾನ ನಿಲ್ದಾಣದಲ್ಲಿ ನನ್ನ ಹೆಸರಿನ ಪ್ಲಕಾರ್ಡ್ ಹಿಡಿದಿದ್ದ ಟ್ಯಾಕ್ಸಿ  ಚಾಲಕನನ್ನು ನೋಡಿ “ಈ ಜನ ಎಷ್ಟು ಸಮಯ ಪ್ರಜ್ಞೆ ಉಳ್ಳವರು ಎನಿಸಿದ್ದು ನಿಜ.
ಮೂರು ದಿನದ ಕಾರ್ಯಕ್ರಮದ ಪ್ರಬಂಧ ಮಂಡನೆಗಳನ್ನು ಎರಡು ದಿನಕ್ಕೆ ಪೂರೈಸಿ ಮೂರನೇ ದಿನ ಬೆಲ್ಜಿಯಂ ನಗರ ದರ್ಶನಕ್ಕೆ ಎಂದೇ ಮೀಸಲಿಡಿಸಿದ್ದು ಜುಲೈ ೧೦ಕ್ಕೆ ಗೆಂಟ್ ಪ್ರದೇಶದ ಗೆಂಟ್ ವಿಶ್ವವಿದ್ಯಾಲಯದಲ್ಲಿದ್ದ ಮೀನುಗಾರಿಕಾ ಪದವೀಧರ ಸ್ನೇಹಿತರಿಬ್ಬರನ್ನು ನೋಡಿಬರುವ ನಿಶ್ಚಯ ಮಾಡಿ ಹೋಟಲ್ ರೂಮನ್ನು ಖಾಲಿ ಮಾಡಿ ಹತ್ತಿರದ ಆಂಟ್ವರ್ಪ್ ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಹೊರಟೆ. ಲ್ಯಾಪ್ ಟಾಪಿನ ಬ್ಯಾಗಲ್ಲಿ ಪಾಸ್ ಪೋರ್ಟ್, ಟಿಕೆಟ್ , ವಿಮಾ ಪತ್ರಗಳು ಮತ್ತು ಲ್ಯಾಪ್ ಟಾಪ್ ಇದ್ದಿದ್ದರಿಂದ ಹೆಗಲಿಗೆ ಕತ್ತಿನ ತೂಗು ಹಾಕಿಕೊಂಡೆ, ಕತ್ತಿಗೆ ಕ್ಯಾಮರಾ ತೂಗುಹಾಕಿಕೊಂಡು ದೃಶ್ಯ ಸೆರೆಹಿಡಿಯಲು ಅನುವಾಗುವಂತೆ ಮಾಡಿಕೊಂಡೆ. ಹೊರಬರುವಾಗ ಹೋಟೆಲ್ ನ ಚಿತ್ರಗಳು, ಸ್ಟೇಶನ್ ನ ಹೊರ ನೋಟ ಸೆರೆಹಿಡಿದೆ. 
ಉಳಿದುಕೊಂಡ ಹೋಟೆಲ್: ಇಬಿಸ್ ಆಂಟ್ವೆರ್ಪ್ 

ಅಂಟ್ವೆರ್ಪ್ ಸ್ಟೇಶನ್....

ಟಿಕೆಟ್ ಕೊಂಡು ಮೊದಲ ಮಹಡಿಯಿಂದ ಹೊರಡಬೇಕಿದ್ದ ರೈಲನ್ನು ಹುಡುಕಿ ಹೊರಟೆ. ಅಲ್ಲೇ ಇದ್ದ ಕೆಲವರನ್ನು ಕೇಳಿದೆ... ಇಂಗ್ಲೀಷ್ ಸರಿಯಾಗಿ ಅರ್ಥವಾಗದ ಕೆಲವರು ಹೇಳಿದ್ದು ನನಗೆ ಅರ್ಥವಾಗಲಿಲ್ಲ. ಅಲ್ಲಿಯೇ ಇದ್ದ ಒಬ್ಬ ಅರೆಬರೆ ಇಂಗ್ಲೀಷಲ್ಲಿ ಈ ಎರಡನೇ ಸಾಲಿನಲ್ಲಿರುವ ರೈಲು ಹೋಗುತ್ತೆ ಎಂದ. ಇನ್ನೂ ಹತ್ತು ಹದಿನೈದು ನಿಮಿಷ ಬಾಕಿ ಇತ್ತು, ಬೆಳಗಿನ ತಿಂಡಿ ಸರಿಯಾಗಿ ಸಿಗದ ಕಾರಣ ಹೊರಡಲು ತಯಾರಾಗಿದ್ದೆ. ಅಲ್ಲಿಯೇ ಇದ್ದ ಬರ್ಗರ್ ಕಾರ್ನರ್ ಅದುಮಿಟ್ಟ ನನ್ನ ಹಸಿವನ್ನು ಜಾಗೃತಗೊಳಿಸಿತ್ತು. 



ಬರ್ಗರ್ ತಿಂದ ಜಾಗ

ಸೂಟ್ ಕೇಸ್, ಲ್ಯಾಪ್ ಟಾಪ್, ಕ್ಯಾಮರಾ ಬ್ಯಾಗು, ಬಟ್ಟೆಯ ಕಾನ್ಫರೆನ್ಸ್ ಬ್ಯಾಗ್ ಎಲ್ಲವನ್ನೂ ಎತ್ತಿಕೊಂಡು ಅಲ್ಲೇ ಇದ್ದ ಚೇರಿನಲ್ಲಿ ಕುಳಿತು ಬರ್ಗರ್ ಗೆ ಆರ್ಡರ್ ಕೊಟ್ಟೆ.., ಹಾಗೆಯೇ ಸ್ಟೇಶನ್ನಿನ ವಿವಿಧ ಕಟ್ಟಡ ಸುಂದರ ದೃಶ್ಯಗಳನ್ನು ಸೆರೆ ಹಿಡಿದೆ. ಇನ್ನೇನು ೪-೫ ನಿಮಿಷ ಉಳಿದಿದೆ ನನ್ನ ಗೆಂಟ್ ಗೆ ಹೊರಡುವ ರೈಲಿನ ನಿರ್ಗಮನಕ್ಕೆ ಎನ್ನುವಾಗ ಹಣ ಕೊಟ್ಟು, ಹೆಗಲಿಗೆ ಲ್ಯಾಪ್ ಟಾಪ್ ಬಾಗ್, ಕುತ್ತಿಗೆಗೆ ಕ್ಯಾಮರಾ, ಒಂದು ಕೈಯಲ್ಲಿ ಕ್ಯಾಮರಾ ಬ್ಯಾಗ್ ಮತ್ತು ಕಾನ್ಫರೆನ್ಸ್ ಬ್ಯಾಗ್ ಇನ್ನೊಂದು ಕೈಯಲ್ಲಿ ಸೂಟ್ ಕೇಸಿನ ಟ್ರಾಲಿ ಹ್ಯಾಂಡಲ್ ತಗೊಂಡು ರೈಲಿನತ್ತ ಹೊರಟೆ. ಮುಂಚೆ ಅರ್ಧಂಬರ್ಧ ಇಂಗ್ಲೀಷಲ್ಲಿ ರೈಲಿನ ಬಗ್ಗೆ ಹೇಳಿದವನೂ ನನ್ನದೇ ರೈಲಿನತ್ತ ಬಂದ, ನೀವೂ ಇದೇ ರೈಲಿಗಾ ಎಂದಾಗ ಹೌದು ಎಂದ. ನಾನು ಹತ್ತಿದ ಬೋಗಿಗೇ ಅವನೂ ಹತ್ತಿದ. ಒಳ ಹತ್ತುವಾಗ ಟ್ರಾಲಿ ಹ್ಯಾಂಡಲ್ ಮಡಚಿ ಹಿಡಿಯನ್ನು ಹಿಡಿದು ಮೇಲೆ ಎತ್ತಿದಾಗ ಹಿಡಿ ಕೈಗೆ ಬಂದು ಬಾಗಿಲಬಳಿಯೇ ಆ ಸೂಟ್ ಕೇಸ್ ಕುಸಿದು ಬಿತ್ತು. ಮೂರನೇ ಸಾಲಿನಲ್ಲಿದ್ದ ಸೀಟಿನಲ್ಲಿ ಲ್ಯಾಪ್ ಟಾಪ್ ಬ್ಯಾಗ್, ಕಾನ್ಫರೆನ್ಸ್ ಬ್ಯಾಗ್, ಕ್ಯಾಮರಾ ಬ್ಯಾಗನ್ನು ಇಟ್ಟು ಸೂಟ್ ಕೇಸನ್ನು ತರಲು ಬಂದೆ. ಹಿಡಿ ಸರಿಮಾಡಲಾಗುವುದೇ ನೋಡಿದೆ, ಆಗಲಿಲ್ಲ.. ಹಾಗೇ ರೈಲ್ ಹೊರಡಲು 3 ನಿಮಿಷ ಇದೆ ಎಂದು ಸ್ಟೇಷನ್ ಗಡಿಯಾರದ ಮೂಲಕ ಖಚಿತ ಪಡಿಸಿಕೊಂಡು ಡಿಪಾರ್ಚರ್ ಗೇಟ್ ನ ಒಂದು ಚಿತ್ರ ತೆಗೆಯುವ ಉದ್ದೇಶದಿಂದ ಬಾಗಿಲಿಂದಲೇ ಕತ್ತು ಹೊರಚಾಚಿ ಫೋಟೋ ತೆಗೆದೆ. 

ಬಾಗಿಲಿಂದ ಹೊರಚಾಚಿದ ನನ್ನ ಕ್ಯಾಮರಾ ತೆಗೆದ ಚಿತ್ರ: ಲ್ಯಾಪ್ ಟಾಪ್ ಕಳುವಿಗೆ ಇದು ಅನುವಾಯ್ತಾ..???

ನಂತರ ಸೂಟ್ ಕೇಸ್ ತೆಗೆದುಕೊಂಡು ಸೀಟಿಗೆ ಬಂದು ಸೂಟ್ ಕೇಸನ್ನು ಮೇಲೆ ಲಗೇಜ್ ಸ್ಟಾಂಡಲ್ಲಿಟ್ಟೆ ಆಗಲೇ ಗೊತ್ತಾಗಿದ್ದು ನನ್ನ ಲ್ಯಾಪ್ ಟಾಪ್ ಅಲ್ಲಿಲ್ಲ ಎಂದು..!!!! ತಕ್ಷಣ ಆಚೀಚೆ ನೋಡಿದೆ..ನನ್ನ ಸೀಟಿನಿಂದ ಎರಡು ಸೀಟ್ ಮುಂದಕ್ಕೆ ಕುಳಿತಿದ್ದ ಆ ವ್ಯಕ್ತಿ ..ಅಗೋ ಅಗೋ...ಅಲ್ಲಿ ಅವನು ತಗೊಂಡು ಹೋಗ್ತಿದ್ದಾನೆ...!!! ಎಂದ,,ನನ್ನ ಕೋಪ ನೆತ್ತಿಗೇರಿತ್ತು..ಯೂ ಬ್ಲಡಿ...ಹಿಡಿಯೋಕೆ ಆಗ್ತಿರ್ಲಿಲ್ವಾ ಅವನ್ನ... ನೋಡ್ಕೊಂಡು ಕೂತಿದ್ದೀಯಾ..?? ಅಂತ ಕೂಗಾಡ್ತಾ (ನಾನು ಕೂಗಾಡಿದ್ದು ಕನ್ನಡದಲ್ಲೇ..ಯಾಕಂದ್ರೆ ಅವನಿಗೆ ನನ್ನ ಭಾಷೆ ಅರ್ಥವಾಗುವ ಹಾಗಿರಲಿಲ್ಲ ಅಥವಾ ನಾನು ಹೇಳುವುದನ್ನು ಕೇಳುವ ಆಸಕ್ತಿಯೂ ಅವನಿಗಿರಲಿಲ್ಲ)...ತಕ್ಷಣ..ಥೀಫ್ ಥೀಫ್.. ಕ್ಯಾಚ್ ಹಿಮ್ ಎನ್ನುತ್ತಾ ಓಡಿದೆ... ಮುಂದಿನ ಬಾಗಿಲಿಂದ ಓಡಿದ ನನಗೆ ಸುಮಾರು 50-60 ಮೀಟರ್ ದೂರದಲ್ಲಿ ಕಂಕುಳಲ್ಲಿ ಲ್ಯಾಪ್ಟಾಪ್ ಬ್ಯಾಗ್ ಅದುಮಿ ಓಡುತ್ತಿದ್ದ ಸಣಕಲು ದೇಹದ ಕಪ್ಪು ಕೋಟಿನ ವ್ಯಕ್ತಿ ಸ್ಪಷ್ಟವಾಗಿ ಕಂಡ. ನನ್ನ ಕೂಗಾಟ ಕೇಳಿದ ಮುಮ್ದಿನ ಬೋಗಿಯ ಹತ್ತಿರವಿದ್ಧ ಗಾರ್ಡ್..ಯೂ ಕಮ್ ದಟ್ ಸೈಡ್ ಐ ವಿಲ್ ಚೇಸ್ ಹಿಮ್ ಫ್ರಂ ದಿಸ್ ಸೈಡ್  (ನೀನು ಆ ಕಡೆಯಿಂದ ಬಾ ನಾನು ಈ ಕಡೆಯಿಂದ ಅವನ್ನ ಅಟ್ಟಿಸಿ ಬರ್ತೇನೆ) ಎಂದ. ಕೆಳಗಿಳಿಯುವ ಮೆಟ್ಟಿನ ಗೊಂದಲ ಮೀರಿ ಸಾವರಿಸಿಕೊಂಡು ಓಡಿದೆ... ಥೀಫ್ ಥೀಫ್ಹ್ ಎನ್ನುತ್ತಾ... ಕೆಳಗಿಳಿದು ನೋಡಿದರೆ ಹೊರ ಹೋಗುವ ಸುಮಾರು ಎಂಟು ಗೇಟುಗಳು...!!! ಎಲ್ಲೂ ಕಾಣಲಿಲ್ಲ ಅವನು...!! ಅಷ್ಟರಲ್ಲಿ ಗಾರ್ಡ್ ಸಹಾ ಬಂದ...ಎಲ್ಲಿ ಸಿಕ್ಕನಾ..?? ಎಂದ... ಕೆಳಗಿಳಿದ ಮೇಲೆ ಅವನನ್ನು ಹುಡುಕುವುದು ಕಷ್ಟ..ಎಂದ.  ಅಷ್ಟರಲ್ಲಿ ರೈಲ್ ಬಿಡುವ ಸಮಯ ಹತ್ತಿರವಾಯಿತೆಂದು ಜಾಗೃತಗೊಂಡ ನನ್ನ ಮನಸು ಹೇಳಿತು... ಓ!! ದೇವರೇ..ನನ್ನ ಸೂಟ್ ಕೇಸ್ ಮತ್ತು ಕ್ಯಾಮರಾ ಬ್ಯಾಗ್...ಎಂದುಕೊಂಡು ಕೊರಳು ನೋಡಿಕೊಂಡೆ..ನನ್ನ ಕ್ಯಾಮರಾ ಕತ್ತಿನಲ್ಲಿ ನೇತಾಡ್ತಾ ನನ್ನ ನೋಡಿ ನಕ್ಕಂತಾಯಿತು. ತಕ್ಷಣ ನನ್ನ ಸೂಟ್ ಕೇಸನ್ನು ತೆಗೆದುಕೊಳ್ಳಲು ಮೇಲಕ್ಕೆ ಮತ್ತೆ ಧಾವಿಸಿದೆ. ತಿಂದಿದ್ದ ಬರ್ಗರ್ ಖಾಲಿ ಆಗಿತ್ತೇನೋ...ಬಾಯಿ ಒಣಗಿತ್ತು. ಬೋಗಿಗೆ ಹೋಗಿ ಲಗೇಜ್ ಸ್ಟಾಂಡ್ ನಿಂದ ಸೂಟ್ ಕೇಸ್ ಇಳಿಸಿ ಕ್ಯಾಮರಾ ಬ್ಯಾಗ್ ಮತ್ತು ಬಟ್ಟೆಯ ಕಾನ್ಫರೆನ್ಸ್ ಬ್ಯಾಗ್ ತಗೊಂಡು ಕೆಳಗಿಳಿದೆ. ನೀವು ತಕ್ಷಣ ರೈಲ್ವೇ ಪೋಲೀಸ್ ಸ್ಟೇಶನ್ ಗೆ ಹೋಗಿ ಕಂಪ್ಲೇಂಟ್ ಕೊಡಿ ಅದು ನಿಮಗೆ ಪಾಸ್ ಪೋರ್ಟ್ ಸಿಗಲು ಸಹಾಯವಾಗುತ್ತದೆ ಮತ್ತು ನಿಮ್ಮ ಅದೃಷ್ಟ ನಿಮ್ಮ ಜೊತೆಗಿದ್ದರೆ ಕದ್ದ ಮಾಲು ಸಿಗಬಹುದು ಎಂದು ಸಲಹೆ ನೀಡಿದ ರೈಲ್ವೇ ಗಾರ್ಡ್.


ಅಲ್ಲೇ ಬೆಂಚಿನ ಮೇಲೆ ಐದು ನಿಮಿಷ ಕೂತಿದ್ದು, ಬಟ್ಟೆ ಬ್ಯಾಗಿನಲ್ಲಿದ್ದ ನೀರಿನ ಬಾಟಲಿಂದ ನೀರು ಕುಡಿದೆ, ಕಳ್ಳನನ್ನು ಹಿಂಬಾಲಿಸಿ ಹಿಡಿಯಲಾಗದೇ ವಾಪಸ್ಸಾದ ಒಂದರ್ಧ ನಿಮಿಷ ದಿಕ್ಕೆಟ್ಟು ಕೂತಿದ್ದ ನನಗೆ ನೀರು ಕುಡಿದ ಮೇಲೆ ಮುಂದಾಗಬೇಕಾದ ಕಾರ್ಯಗಳತ್ತ ಗಮನ ಹರಿಯಿತು. ಕೆಳಗಿಳಿದು ಬಂದು ಅಲ್ಲಿಯೇ ಇದ್ದ ಪೋಲೀಸ್ ಸ್ಟೇಶನ್ನಿಗೆ ಹೋದೆ. ಅಲ್ಲಿದ್ದ ಡ್ಯೂಟಿ ಆಫೀಸರ್ ಗೆ ನನ್ನ ಲ್ಯಾಪ್ ಟಾಪ್ ಮತ್ತು ಡಾಕ್ಯುಮೆಂಟ್ಸ್ ಕಳ್ಲತನ ಆಗಿದೆ ಎಂದೆ ಇಂಗ್ಲೀಷಲ್ಲಿ... ಸದ್ಯ ಆತನಿಗೆ ಇಂಗ್ಲೀಷ ಅರಿವಿತ್ತು. ದಯವಿಟ್ಟು ಕೂತಿರಿ, ಆಫೀಸರ್ ಬರ್ತಾರೆ ಎಂದು ಅಲ್ಲಿಯೇ ಕುಳಿತುಕೊಳ್ಳಲು ಚೇರ್ ತೋರಿಸಿ ಹೋದ. ನಂತರ ಬಂದ ಆಫೀಸರ್...ಎಸ್ ಮಿಸ್ಟರ್ ..ಫ್ರೆಂಚ್..?? ಡೋಯೆಶ್..?? ಎಂದು ನಿನಗೆ ಫ್ರೆಂಚ್ ಬರುತ್ತಾ ಡಚ್ ಭಾಷೆ ಬರುತ್ತಾ? ಎಂದು ಕೇಳಿ.. ನಾನು ಇಂಗ್ಲೀಷ್ ಎಂದೆ..ಓಕೆ...ಕಮ್ ಎಂದು ಒಳಗಡೆಗೆ ಕರೆದೊಯ್ದ. ಕುಳಿತುಕೊಳ್ಳಲು ಚೇರ್ ಕೊಟ್ಟು...ಹೇಳಿ, ಏನಾಯ್ತು ಎಂದು ವಿವರಗಳನ್ನು ಬರೆದುಕೊಳ್ಳಲ್ಲು ಪ್ರಾರಂಭಿಸಿದ....
(ಮುಂದುವರೆಯುತ್ತದೆ)