ಚಿತ್ರ ಕೃಪೆ: http://www.tailoredtanning.co.uk/vitamind.htm
ನೇಸರನೇರುವತ್ತ ಕತ್ತಲು ಸರಿಯುತಿದೆ
ಎಲ್ಲೋ ಯಾರೋ ಮಲಗಿ ಏಳುವಂತಿದೆ
ಘೋರವರಿತ ಬೆಚ್ಚಿಕನಸ ಕರಗುವಂತಿದೆ
ಎತ್ತಲೆತ್ತಲೋ ಇತ್ತು ಕತ್ತಲುರುಳುವಂತಿದೆ
ಸೂರ್ಯಹೊರಳಲು ಸಾಕು ನರಿ ಊಳಿಡಲು
ತೋಳಗಳ ಹಿಂಡು ಕುರಿದೊಡ್ಡಿಗೆ ನುಸುಳಲು
ನಾಯಿಗಳು ಮಲಗಿವೆ ತಿಂದು ಕವಿದು ಅಮಲು
ತಿಂದ ಧಣಿಗಳು ಮತ್ತೆ ತಿನ್ನಲೆಂದೇ ಬಿಟ್ಟು ಬಿಳಲು
ಕೊಟ್ಟು ಮತ ಆಸೆ ಆಮಿಶವೆಲ್ಲಕೆ ಬಲಿಯಾಗಿ ಅಂದು
ನಿಮ್ಮ ನಿಂತ ನೆಲಕುಸಿಯೆ ಸರಿಯಿಲ್ಲವೇ ಇಂದು?
ವಿದ್ಯೆವಿವೇಕವಿದ್ದೂ ಅವಿವೇಕಿಯ ಗೆಲಲು ಬಿಟ್ಟದ್ದು
ರೈತನ ಕೊಲುವರು ಗಣಿ ಅರಣ್ಯ ದೋಚುವರೆನ್ನುವುದು
ಹೊಣೆಗೇಡಿತನಕ್ಕೆಡೆಯಿಲ್ಲ ಅಳುವುದು ಸಲ್ಲ, ಬಿದ್ದರೆ ಗುದ್ದು
ಏನಿಲ್ಲ ನಮ್ಮಲ್ಲಿ, ಬುದ್ಧಿ, ಶಕ್ತಿ, ನಿಸರ್ಗ ಸಂಪತ್ತು?
ಎಂತಹ ವಿಪತ್ತಿಗೂ ಇದೆ ಎದೆಯೊಡ್ಡುವ ತಾಕತ್ತು
ಎಲ್ಲ ಶಕ್ತಿ ಒಟ್ಟುಗೂಡಿಸುವ ಯೋಜನೆಯೊಂದು ಸಾಕು
ಕತ್ತಲಜೊತೆ ಗುದ್ದಾಟ, ಸಾಕು ನಿರಂತರ ಕಸರತ್ತು
ತಡಬೇಡ ತಿಳಿಯಲಿ ನಾಡು ದೇಶ ಏನೆಂದು ಜಗತ್ತು