Thursday, July 23, 2009

ಬ್ಲಾಗಾಯಣ

ಈ- ಮೈಲು, ವೆಬ್ಬು, ಗಬ್ಬು..ಅಂತೆಲ್ಲಾ ಅನ್ನೋರಿಗೆ..ಬ್ಲಾಗು ಅನ್ನೋ ಇನ್ನೊಂದು ವ್ಯವಸ್ಥೆ ಇದೆ ಅನ್ಸಿದ್ದು..ಅಥ್ವಾ ನೋಡಿದ್ದು..ಆ ನಂತರ ಅದರ ದಾಸರಾಗಿದ್ದು ..ಈಗ ಚರಿತ್ರೆ ಆಗ್ತಾ ಇದೆ.
ಪಿ.ಬಿ.ಎಸ್ ರಿಗೆ ಈಗ ಹಳೇ ಹಾಡು ಹಾಡೋಕೆ ಹೇಳಿದ್ರೆ...
"ಬ್ಲಾಗೊಂದ ತೋರ್ಸುವೇ
ಪುಟಾಣಿ ಮಕ್ಕಳೇ..ಬ್ಲಾಗಿದ್ದು ತನಗೆ
ಬ್ಲಾಗಾಗದ್ದು ಪರರಿಗೆ" ಅಂತಿದ್ರೋ..ಏನೋ..!!
ಬ್ಲಾಗಿದ್ದಿದ್ರೆ..ಸೀತೆ ಸ್ವಯಂವರದ ಅನೌನ್ಸ್ ಮೆಂಟು ಪ್ರೆಸಿಡೆಂಟ್ ಜನಕ್ಸ್ ಬ್ಲಾಗಿಸ್ತಿದ್ದ್ರೋ ಏನೋ..??
ಬ್ಲಾಗುಗಳ ಇಂಟರಾಕ್ಷನ್ ಫಾಲೋಗಳ ಮೂಲಕ ದುರ್ಯೋಧನ್ಸ್ ಪಾಂಡವ್ಸ್ ನ ಫ್ಯಾಂನ್ಸಿಡ್ರೆಸ್ನಲ್ಲೇ ಪರ್ಮನೆಂಟಾಗಿ ಇರೋ ಹಂಗೆ ಮಾಡ್ತಿದ್ದನೋ ಏನೋ..?
ಬ್ಲಾಗು ಅನ್ನೋದು..ಈಗ್ಗೂ ನನ್ ತಲೇಗೆ ಸರಿಯಾಗಿ ಹೋಗಿಲ್ಲ, ಯಾರ್ಯಾರೋ ಬ್ಲಾಗ್ ಮಾಡ್ತಾರೆ ಅಂತ ನಾನೂ ಬ್ಲಾಗನ್ನ ಕೂಡಿ, ಕಳೆದು, ಗುಣಿಸಿ ಈಗ ಬ್ಲಾಗಿಸ್ತಿದ್ದೀನಿ.
ಅಜ್ಜಿ ಮಕ್ಕಳಿಗೆ ಕಥೆ ಹೇಳೋವಾಗ..."ಒಂದಾನೊಂದು ಬ್ಲಾಗ್ ರಾಜ್ಯದಲ್ಲಿ ಒಬ್ಬ ಬ್ಲಾಗ್ ರಾಜ, ಇಬ್ಬರು ಬ್ಲಾಗ್ ರಾಣಿಯರಿದ್ದರು. ಅವರಿಗೆ ..." ಅಂತೆಲ್ಲಾ ಹೇಳೋ ಕಾಲ ದೂರಾ ಏನಿಲ್ಲ.
ನಮ್ಮ ಹಳ್ಳಿ ಗಮಾರ ದೋಸ್ತು (ಪಿ.ಯು.ಸಿ ಲೇ ಸುಸ್ತಾಗಿದ್ದಾನೆ) ಮೊನ್ನೆ ವರೆಗೂ ಕಂಪ್ಯೂಟರು, ಇ-ಮೈಲ್ ಏನೂ ಗೊತ್ತಿಲ್ಲದೇ ಇದ್ದವನು...ಮೊನ್ನೆ ಬ್ಲಾಗಿನ ಬಗ್ಗೆ ಏನು ಹೇಳ್ದ ಗೊತ್ತೇ..?
“ಈವಾಗ ಈ ಬ್ಲಾಗು ಎಷ್ಟೊಂದು ಪಾಪುಲರ್ ಆಗ್ತಾ ಐತೆ ಅಂದ್ರೆ...ರಾಜಕಾರಣಿಗಳು..ತಮ್ಮ ಚುನಾವಣಾ ಪ್ರಚಾರಾನ ಬ್ಲಾಗಿಸೋಕೆ ಶುರು ಹಚ್ಚೌವ್ರೆ, ನಮ್ಮ ಚುನಾವಣಾಧಿಕಾರಿ ತಾನೂ ಏನ್ ಕಡಿಮೆ ಇಲ್ಲ ಅನ್ನೋ ಹಂಗೆ ರಾಜ್ಕಾರ್ಣಿಗಳ
ಬ್ಲಾಗನ್ನ ಬ್ಯಾನ್ ಮಾಡಿ ತಿಳಿಸೋಕೆ ಅಂತ್ಲೇ ಇನ್ನೊಂದು ಬ್ಲಾಗು ಸುರು ಹಚ್ಚೇಬಿಟ್ಟವ್ರೆ”.
ನಮ್ಮ ಪೂರ್ವ ರಾಷ್ಟ್ರಪತಿಗಳು (ಕಲಾಂ ಸಾಹೇಬ್ರು) ಬ್ಲಾಗ್ ಮಾಡಿಯೇ ಸ್ಕೂಲ್ ಮಕ್ಕಳಲ್ಲಿ ದೇಶಾಭಿಮಾನ, ದೇಶದ ಬಗ್ಗೆ ಸಾಮಾನ್ಯ ಅರಿವಳಿಕೆ (general awareness) ತರೋದಕ್ಕೆ ಪ್ರಯತ್ನಿಸಿದ್ದು ಎಲ್ಲಾ ತಿಳಿದಿರೋದೇ..
ಅಮಿತಾಬ್ ಬಚ್ಚನ್ ತನ್ನ ಬ್ಲಾಗ್ ಮೂಲಕ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾದದ್ದು ನೋಡಿದ್ರೆ ಬೆಳೀತಿರೋ ಬ್ಲಾಗಾಭಿಮಾನ, ಬ್ಲಾಗಪಾರಂಗತಿ, ಇತ್ಯಾದಿ ಬಗ್ಗೆ ಯೋಚಿಸ್ಬೇಕಾಗುತ್ತೆ.
ಕೆಲಸದ application ನಲ್ಲಿ ಈಗ ಇ-ಮೈಲ್ ಅಡ್ರೆಸ್ ಜೊತೆಗೆ ಬ್ಲಾಗ್ ಅಡ್ರೆಸ್ ಸಹಾ ಕೇಳುವ ಸಮಯಾನೂ ಬಂದಿದೆ. Interview ನಲ್ಲಿ can you show your blog posting items on your laptop...?? ಅಂತ ಕೇಳ್ಬಾರ್ದಲ್ಲವೇ..?? ಅದಕ್ಕೇ..ಈವರೆಗೂ ಯಾವುದೇ ಬ್ಲಾಗ್ open ಮಾಡ್ದೇ ಇದ್ರೆ ತಕ್ಷಣ ಮಾಡೀ ಈ ಕೆಲಸ...ಅದ್ರಲ್ಲೂ ನೌಕರಿ ಹುಡುಕೋ ಭಾವೀ ನೌಕರರು.
ಮತ್ತೆ ಮದ್ವೆ ಹುಡ್ಗೀರನ್ನ ನೋಡೋಕೆ ಹೋಗೋ ಗಂಡುಗಳು ನಿಮ್ಮದು ಅಂತ ಯಾವುದಾದರೂ ಬ್ಲಾಗ್ ಇದೆಯಾ..?? ಅಂತ ಕೇಳಿಬಿಟ್ಟರೆ,,..?? ಅಪ್ಪ ಕೊಡೋ ಕಾರು, ಹತ್ತು ಲಕ್ಷ ರಕಂ ಎಲ್ಲ ಹೋಗಿ ಅಪ್ಪ-ಅಮ್ಮನ ಮರ್ಯಾದೆ ಜಖಂ ಆಗೋದಿಲ್ಲವೇ..??

ಟ್ಯೂಶನ್ ಪರಿಪಾಠ ಬೆಳೆಸಿಕೊಳ್ತಾ ಇರೋ ಟೀಚರ್ಗಳಿಗೆ ಬ್ಲಾಗಿನ ಮೂಲಕ ಸರ್ಕಾರದ, ಆಡಳಿತ ಮಂಡಳಿಯ ಕಣ್ಣಿಗೆ ಮಣ್ಣೆರೆಚೋದು ಸುಲಭ ಆಗ್ತಾ ಇದೆ. ಜೋಡಿಗಳು ಮೈಲ್ ಗಳ ಮೂಲಕ ಪರಸ್ಪರ ವಿಷಯ ವಿನಿಮಯ ಮಾಡ್ಕೋತಾ ಇದ್ದದ್ದು ಹೋಗಿ ಈವಾಗ...ಬ್ಲಾಗುಗಳನ್ನ ಸೃಷ್ಠಿಸಿಕೊಂಡು ತಮ್ಮ ಕೆಲಸಾನ ಇನ್ನೂ ಪರಿಣಾಮಕಾರಿ ಮಾಡ್ಕೋತಾ ಇದ್ದಾರೆ. ಹಾಂ..ಹಾಂ..ಖಾಸಗಿ ವಿಷಯಕ್ಕೆ.. ಇ-ಮೈಲ್ ಇದ್ದದ್ದೇ..?? ಬ್ಲಾಗು ಪಬ್ಲಿಕ್ ಅಲ್ವೇ...!!!!

ಸಾಹಿತ್ಯ ಕ್ಷೇತ್ರದಲ್ಲಿ ಬ್ಲಾಗಾಯಣದ ಪರಿಣಾಮ ಬಹಳವಾಗಿಯೇ ಆಗಿದೆ ಎಂದರೆ ತಪ್ಪಿಲ್ಲ. ಕವಿಗಳು ತಮ್ಮ ಕವನಗಳನ್ನ, ಲೇಖನಗಳನ್ನ ಬ್ಲಾಗಿನ ಮೂಲಕ ಪರಿಚಯಿಸುತ್ತಿದ್ದಾರೆ. ಕನ್ನಡದವರು ತಮ್ಮ ಇ-ಸಿರಿವಂತಿಕೆಯನ್ನು ಇಲ್ಲೂ ಮೆರೆದಿದ್ದಾರೆ...ಯುವಕವಿ ಬ್ಲಾಗ್ ಸ್ಪಾಟ್ ಡಾಟ್ ಕಾಂ, ಚುಟುಕು ಬ್ಲಾಗ್ ಸ್ಪಾಟ್ ಡಾಟ್ ಕಾಂ, ವ್ಯಂಗ್ಯ ಬ್ಲಾಗ್ ಸ್ಪಾಟ್ ಡಾಟ್ ಕಾಂ, ಹೀಗೆ..ಹಲವಾರು..ಬ್ಲಾಗುಗಳು....
ಇದು ಒಂದು ಹಿತಕರ ಬೆಳವಣಿಗೆಯೇ ಸರಿ. ಇದೇ ತರಹ ವಿಷಯ ವಿನಿಮಯಕ್ಕೂ ತಮ್ಮಲ್ಲಿನ ಶೇಖರಿತ ಮಾಹಿತಿಗಳನ್ನು ವಿನಿಮಯಿಸಿಕೊಳ್ಳಲು ಬ್ಲಾಗ್ ಬಹಳ ಸಹಕಾರಿಯಾಗುತ್ತಿದೆ.
ಬ್ಲಾಗೆಂಬ ಮಹತ್ವಪೂರ್ಣ ಮಾಧ್ಯಮವನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಮತ್ತು ಅರೋಗ್ಯಕರ ಸಮಾಜದ ಬೆಳವಣಿಗೆಗೆ ಪ್ರಯೋಗಿಸಬೇಕು.