Wednesday, December 21, 2011

ಚಿತ್ರ: ಹಿಂದೂಸ್ತಾನ್ ಟೈಮ್ಸ್ (Fotos: Hindustan Times)

ಗೊತ್ತಿಲ್ಲ ಮಗು... ಆದರೆ ಬರುತ್ತೆ ಆ ದಿನ...

ತಾತಾ ಭಾರತದ ನಾಗರೀಕತೆ ಅದ್ವಿತೀಯ ಅಂತೆ
ಹೌದು ಪುಟ್ಟಿ
ನಮ್ಮ ರಾಜ ಮಹರಾಜರು ಪ್ರಜಾಹಿತಚಿಂತಕರಾಗಿದ್ದರಂತೆ
ಹೌದು ಪುಟ್ಟಿ ಕೆಲವರು ಹೆಚ್ಚು ಮತ್ತೆ ಕೆಲವರು ಕಡಿಮೆ
ಆದರೆ ಈಗಿನ ನಮ್ಮ ಆಳುವವರು ಯಾಕಜ್ಜಾ ತುಂಬಾ ಹೆಚ್ಚು ಕಮ್ಮಿ..
ನನಗೆ ಗೊತ್ತಿಲ್ಲ ಮಗು... ಅದಕ್ಕೇ ನಾನು ಕೂತೀನಿ....

ಅಜ್ಜಾ..
ಹೇಳು ಪುಟ್ಟೀ..
ಭ್ರಷ್ಠಾಚಾರ ನಿನಗೊಬ್ಬನಿಗೇ ಕೆಟ್ಟದ್ದು ಯಾಕೆ?
ಇಲ್ಲಾ ಪುಟ್ಟಿ..ನಿನಗೂ ಕೆಟ್ಟದ್ದೇ ಅಲ್ವಾ ಅದಕ್ಕೇ..
ಇಲ್ಲಿ ಕುಂತಿರೋರೆಲ್ಲರಿಗೂ ಕೆಟ್ಟದ್ದು ಅದಕ್ಕೇ..
ಬರಲು ಆಗದೆ, ದಿನದ ಹೊಟ್ಟೆಪಾಡಿಗೆ ಹೋಗುವವರಿಗೂ
ಕಡೆಗೆ ನಿನ್ನಪ್ಪ ನಿನ್ನ ಅಣ್ಣನ ಕೆಲ್ಸಕ್ಕೆ ಲಂಚ ಕೊಡ್ಲಿಲ್ವಾ ಅದಕ್ಕೇ..
ಎಲ್ಲಾರಿಗೂ ಕೆಟ್ಟದ್ದೇ.....
ಮತ್ತೆ ಮಂತ್ರಿಗಳಿಗೆ ಅಧಿಕಾರಿಗಳಿಗೆ ..??
ನನಗೆ ಗೊತ್ತಿಲ್ಲ ಮಗೂ.. ಅದಕ್ಕೇ ಕೂತೀನಿ..

ನಂಗೊಂದ್ ಮಾತ್ ಹೇಳಜ್ಜಾ
ಏನ್ ಪುಟ್ಟಿ.?
ನಮ್ಮ ಆಳೋರನ್ನ ನಾವು ಆರಿಸೋದಲ್ವಾ?
ಹೌದು ಪುಟ್ಟಿ ನಿಜ ನಿನ್ ಮಾತು..
ಮತ್ತೆ ಅವರು ನಾವು ಹೇಳೋದನ್ನ..ಮತ್ತೆ
ನಮಗೆ ಒಳ್ಳೆದಾಗೊದನ್ನ ಮಾಡ್ಬೇಕಲ್ವಾ,,?
ಹೌದು ನೂರಕ್ಕೆ ನೂರು ನಿಜ ಪುಟ್ಟಕ್ಕ...
ಮತ್ತೆ ಕೋಟ್ಯಾಂತರ ಜನದ ಒಳಿತ್ಗೆ...
ಭ್ರಷ್ಠಾಚಾರ ತಡೆಗೆ ಕಾನೂನು ಮಾಡೋಕೆ ಮೀನ ಮೇಷ ಯಾಕೆ..?
ಗೊತ್ತಿಲ್ಲ ನನ್ ಕಂದಾ... ಅದಕ್ಕೆ ಕೂತೀನಿ..
ನಿನ್ನನ್ನೂ ಕೂರ್ಸೀನಿ.. ಎಷ್ಟೋ ಕೋಟ್ಯಾಂತರ ಜನ್ರನ್ನ ಕೂರ್ಸೀನಿ...
ಒಂದೇ ನಿರೀಕ್ಷೆಲಿ..... ಬರುತ್ತೆ ಆ ದಿನ ಅಂತ....