ಮನದಾಳದ
ಬೂದಿ
ನಿಟ್ಟುಸಿರಿಗೆ
ಊದಿ
ಮುಚ್ಚಿಟ್ಟ ಕೆಂಡವ
ಕೆಣಕದಿರು
ಕಿಡಿಸಾಕು
ಒಣಹುಲ್ಲ ಹಿಡಿದು
ಕಾದಿರುವ ಶತೃವಿಗೆ
ನಿನ್ನ ಮನ
ನನ್ನ ತನು
ಎಲ್ಲ ಜನ
ಕ್ಷಣಮಾತ್ರದಿ
ಮರೆವರು ನಿನ್ನೆ
ನನಗೆ ನೀನು ರಕ್ತನೀಡಿದ್ದು
ನನ್ನ ತಂಗಿ
ನಿನ್ನ ಮುಂಗೈಗೆ
ರಾಖಿ ಕಟ್ಟಿದ್ದು
ನನ್ನಲ್ಲಿ ಈದ್ ನ
ಶಾವಿಗೆ ಪಾಯಸ
ನಿನ್ನವರುಂಡದ್ದು
ಗಣೇಶನಿಗೆ ನಮಿಸಿ
ಕಡುಬ ನಾವೆಲ್ಲ ಮೆದ್ದದ್ದು
ಅಕ್ಕನ ಕಾಯಲು
ನನ್ನಕ್ಕ ಬುರಖಾ
ಹೊದಿಸಿದ್ದು, ನಿನ್ನಮ್ಮ
ನನ್ನ ತಾಯ ಹಣೆಗೆ
ವಿಭೂತಿ ಹಚ್ಚಿದ್ದು
ಅಬ್ಬೂ-ನಿನ್ನಪ್ಪ
ಜೊತೆಯಾಗಿ ನಮ್ಮನ್ನೆಲ್ಲಾ
ಕಾಪಾಡಿದ್ದು...!!!
ಯಾರದೋ ತೀಟೆ..
ಯಾರಾಗುತ್ತಿರುವುದು ಬೇಟೆ?
ಕುತ್ತಿಗೆಗೆ ಬಂದರೆ ಪ್ರಾಣ
ಮುಳುಗುವವ ಕೇಳುವುದುಂಟೇ?
ಹಗ್ಗ ಎಸೆದದ್ದು ಯಾರೆಂದು..?
ಇಟ್ಟಿಗೆ-ಸಿಮೆಂಟಿನ ರಚನೆ
ನಮಗಲ್ಲ ಹಿರಿದು
ಮನದಲ್ಲಿ - ಮನೆಯಲ್ಲಿ
ಸುಖ-ಸಹಬಾಳ್ವೆ ತೊರೆದು
ಅವರ ಉಳಿವಿಕೆಗೆ
ಪದವಿ, ಅಧಿಕಾರಗಳಿಕೆಗೆ
ತಮ್ಮವರ ಬಲಿನೀಡುವುದ
ನೋಡಿರುವಿರೇನು?
ನನ್ನ-ನಿಮ್ಮ ಏರಿಸಿ ಚಟ್ಟಕೆ
ತನ್ನವರ ಬಲಿಕೊಟ್ಟೆನೆನುವ
ಗೋಸುಂಬೆಗಳ ಮಾತಿಗೆ
ಮರುಳಾಗದಿರಿ, ನಮಗೆ -ನೀವು
ನಿಮಗೆ-ನಾವು, ನಮ್ಮೆಲ್ಲರಿಗೆ ಬೇಕು
ಜನ್ಮ-ಅನ್ನ ನೀಡಿದನಾಡು
ಸೊಪ್ಪು ಹಾಕದಿರಿ,
ತಿರುಗಿಯೂ ನೋಡದಿರಿ
ಇದು ಬಣ್ಣಬದಲಿಸುವವರ ಜಾಡು.