Sunday, January 31, 2010

ಗೊತ್ತಿಲ್ಲ ಮಗು

ವ್ಯತ್ಯಾಸ
ಅಪ್ಪಾ..ಒಂದ್ಮಾತು..
ಏನಪ್ಪ ಮಗ ಹೊಸ ವರ್ಸೆ?
ಮೊನ್ನೆ ಚಿತ್ರ ಕಲಾ ಉದ್ಘಾಟನೆ ನಡೀತು
ಹೌದು, ಟಿ.ವಿ.ಯಲ್ಲೂ ಬಂತಲ್ಲ
ಚಿತ್ರ ಕಲೆಗೂ ಚಲನ ಚಿತ್ರಕ್ಕೂ ವ್ಯತ್ಯಾಸ ಇಲ್ಲವಾ?
ಯಾಕಿಲ್ಲ..ನೀನು, ನಿನ್ನ ಸ್ನೇಹಿತ್ರು
ಮೊನ್ನೆ ಸ್ಕೂಲಲ್ಲಿ ಭಾಗವಹಿಸಿದ್ದರಲ್ಲಾ...??
ಗೊತ್ತಪ್ಪ...ಆದ್ರೆ...ಚಿತ್ರಕಲಾ ಉದ್ಘಾಟನೆ ಮಾಡ್ತಾ
ನಮ್ಮ ಮಾನ್ಯ ಸಚಿವರು ನಮ್ಮ ಚಲನಚಿತ್ರಗಳು
ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡ್ತಿವೆ
ಅಂತೆಲ್ಲಾ ಭಾಷಣ ಮಾಡಿದ್ರಲ್ಲಾ ಕಟ್ಟುಮಸ್ತಾಗಿ..
ಸಚಿವರಿಗೆ ಅಷ್ಟೂ ಗೊತ್ತಾಗಲಿಲ್ಲವಾ
ಚಿತ್ರ ಕಲೆ ಬೇರೆ, ಚಲನ ಚಿತ್ರ ಬೇರೆ ಅಂತ...??
ಗೊತ್ತಿಲ್ಲ ಮಗು.

ಮುಖ ನೋಡಿ ಮಣೆ
ಅಪ್ಪಾ...ಬೆಳ್ಳಾರೀಲಿ ಕಟ್ಟಡ ಉರುಳಿ
ಎಷ್ಟು ಅಮಾಯಕರು ಪ್ರಾಣ ಕಳ್ಕೊಂಡ್ರು..!!
ಹೌದು ನೋಡು...ಎಷ್ಟು ಜೀವ ಹಾನಿ ಅಲ್ಲವಾ?
ಅಕ್ರಮ ಕಟ್ಟಡ ಎಲ್ಲಾ ಒಡೆದು ಕೆಡವಬೇಕು ಅನ್ನುತ್ತಲ್ಲ ಸರ್ಕಾರ?
ಹೌದಲ್ಲ ..? ಪ್ರಾಣ ಹಾನಿ ತಡಿಯಬಹುದಲ್ಲವಾ?
ಅಲ್ಲಪ್ಪ ಮತ್ತೆ ಅಕ್ರಮ ಗಣಿಗಾರಿಕೆಯಿಂದ
ರಾಜ್ಯದ ಸಂಪತ್ತು ಮತ್ತು ಪರಿಸರಕ್ಕೆ
ಹಾನಿಯಾಗ್ತಿದೆಯಲ್ಲ ಅದನ್ನ ಯಾಕೆ ನಿಲ್ಲಿಸ್ತಿಲ್ಲ ಸರ್ಕಾರ?
ಇದು ಮುಖ ನೋಡಿ ಮಣೆ ಹಾಕೋದಲ್ಲವಾ?
ಗೊತ್ತಿಲ್ಲ ಮಗು.

ಶಾಸ್ತ್ರೀಯ ಭಾಷೆ
ಅಪ್ಪಾ...ಕನ್ನಡ ಬಲು ಸಿರಿವಂತ ಭಾಷೆ ಅಲ್ಲವೇನಪ್ಪ?
ಹೌದು..ಮತ್ತೆ..ಬಹು ಪುರಾತನ ಸಹಾ...
ಏಳು ಜ್ಜಾನಪೀಠ ಸಿಕ್ಕಿದೆ..ಯಾವ ಭಾಷೆಗೂ ಸಿಕ್ಕಿಲ್ಲ ಹೀಗೆ..
ಮತ್ತೆ ಶಾಸ್ತ್ರೀಯ ಭಾಷೆ ಪಟ್ಟ ಇನ್ನೂ ಅಧಿಕೃತವಾಗಿಲ್ಲವಲ್ಲ
ಹೌದು ಕಣೋ, ಕೋರ್ಟ್ ನಲ್ಲಿ ಇತ್ಯರ್ಥ ಆಗಬೇಕು
ಅಲ್ಲಪ್ಪ ನಮ್ಮ ಮನೆಯಲ್ಲಿ ನಮ್ಮ ಭಾಷೇನಾ
ಅಧಿಕೃತಗೊಳಿಸಿಕೊಂಡ್ರೆ..ಪಕ್ಕದ್ಮನೆಯೋರ್ಗೆ ಏನು ತೊಂದರೆ?
ಅವರ ಮನೆಯವರು ನಮ್ಮ ಮನೆಯಲ್ಲಿ ಅವರ ಭಾಷೇನೇ
ಅಷ್ಟೊಂದು ಧೀಟಾಗಿ ಮಾತನಾಡೋವಾಗ...?
ಗೊತ್ತಿಲ್ಲ ಮಗು

Tuesday, January 26, 2010

ಒಂದು ಚಾಟ್ ನ ಕನ್ನಡಿಗರ ಇಂಗ್ಲೀಷ್ ಲಿಪ್ಯಾಲಾಪ

(ಕನ್ನಡೀಕೃತಲಿಪಿಯಲ್ಲಿ, ಸೂಚನೆ: ಶಿಫ್ಟ್-ಎಲ್ ಕೀಲಿಯ ಬಗ್ಗೆ ಇಬ್ಬರಿಗೂ ಗೊತ್ತಿರಲಿಲ್ಲ- ಇದು ಎಷ್ಟು ಅಭಾಸಪೂರ್ಣ ಆಗಬಹುದು ಅನ್ನೋದಕ್ಕೆ..)

ಆಕೆ: ಏನ್ರೀ? ಚೆನ್ನಾಗಿದ್ದೀರಾ?

ಆತ: ನೀವು ಹೇಲಿ..ನಾನು ಚೆನ್ನಾಗಿದ್ದೇನೆ...ಹೋದ ಸರ್ತಿ ಏನೋ ಹೇಲಬೇಕು ಅಂದ್ರಿ ..ಹೇಲಲಿಲ್ಲ

ಆಕೆ: ತುಂಬಾ ಹೇಲೋದಿದೆ..ಆದ್ರೆ ಹೇಗೆ ಹೇಲೋದೂ ಅಂತ ಗೊತ್ತಾಗ್ತಿಲ್ಲ..ಕಂಪ್ಯೂಟರ್ ನಲ್ಲಿ ಪೋನ್ ನಲ್ಲಿ ಹೇಲೋದು ಕಷ್ಟ..... ನೀವು ಬಂದ್ರೆ ನಿಮ್ಮ ಮುಂದೆ ಹೇಲ್ತೀನಿ...

ಆತ: ನಾನು ಹೇಲೋದೆಲ್ಲ ಹೇಲಿ ಆಗಿದೆ..ನಿಮಗಿನ್ನೂ ಹೇಲೋದಿದ್ರೆ ನಾನು ಬರ್ತೀನಿ ನನ್ನ ಮುಂದೇನೇ ಹೇಲಿ ಆಗ ನಿಮಗೂ ನಿರಾಳ ನನಗೂ ಸಮಾಧಾನ.

ಆಕೆ: ನಿಮ್ಮಾಕೆನೂ ನಮ್ಮವ್ರ ಹತ್ರ ಹೇಲ್ತಾ ಇದ್ರಂತೆ ಹಂಗಂತ ನಮ್ಮವ್ರು ನನಗೆ ಹೇಲಿದ್ರು, ನಿಮ್ಮಬ್ಬರಿಗೂ ಹೆಚ್ಚಿಗೆ ಹೇಲೋದಿದ್ರೆ ನಾವೆಲ್ಲ ಒಟ್ಟಿಗೆ ಕೂತಾಗ ಹೇಲೋನ...ಎನಂತೀರಿ..?

ಆತ: ಇದು ಸರಿಯಾದ ಸಲಹೆ ಒಟ್ಟಿಗೆ ಎಲ್ಲ ಕೂತು ಹೇಲಿಕೊಂಡ್ರೆ ಎಲ್ರಿಗೂ ಸಮಾಧಾನ

ಆಕೆ: ನಿನ್ನೆ ಮಿನಿಸ್ಟ್ರು ಫೋನ್ ಮಾಡಿದ್ರು..ನಮ್ಮವ್ರಿಗೆ

ಆತ: ಏನು ಹೇಲಿದ್ರು?

ಆಕೆ: ಅವ್ರೆಲ್ಲಿ ಹೇಲ್ತಾರೆ..? ನಿಮ್ಮಮನೆಗೇ ಬರ್ತೀನಲ್ಲ್ಲಾ ನಿಮ್ಮ್ ಮಿಸೆಸ್ ಹತ್ರ ಹೇಲ್ತೀನಿ ಅಂದರಂತೆ

ಆತ: ಬಂದಿದ್ರಾ ನಿಮ್ಮನೇಗೆ? ನಿಮ್ಮ ಹತ್ರ ಹೇಲಿದ್ರಾ?

ಆಕೆ: ಇಲ್ಲಾ ರೀ ..ಅವರ ಮಿಸೆಸ್ ಬಂದಿರ್ಲಿಲ್ಲ ..ಅದಕ್ಕೆ ಹೇಲ್ಲಿಲ್ಲ..!!

ಆತ: ಅಲ್ಲ, ಅವ್ರ ಮಿಸೆಸ್ ಬರ್ದೆಇದ್ರೆ ಹೇಲೋಕೆ ಅವ್ರಿಗೆ ತೊಂದರೆ ಏನಂತೆ?

ಆಕೆ: ಅವ್ರ ಮಿಸೆಸ್ ಹತ್ರ ಸಿ.ಎಮ್. ಏನೋ ಹೇಲಿದ್ರಂತೆ..ಅದನ್ನ ನಮ್ ಮಿಸೆಸ್ ಹತ್ರ ಹೇಲಿಸ್ತೇನೆ ಅಂದ್ರು..ಅದಕ್ಕೆ ನಾನು.. ’ಸಿ.ಎಮ್. ನಿಮ್ಮಾಕೆಹತ್ರ ಹೇಲಿದ್ದು ಏನೇ ಇದ್ರೂ ನೀವು ನಮ್ಮ ಹತ್ರ ಹೇಲ್ಬೇಕೂ ಅನ್ನೋದನ್ನ ಹೇಲಿ ಬಿಡಿ ಸಂಕೋಚ ಯಾಕೆ’ ಅಂತ ಹೇಲ್ದೆ..

ಆತ: ಸರಿ ಬಿಡಿ ನಾಡಿದ್ದು ಸಿ.ಎಮ್ ಮನೇಲಿ ಮೀಟಿಂಗ್ ಇದೆ, ಮಿನಿಸ್ಟ್ರು ಅವ್ರ ಮಿಸೆಸ್ಸು, ಸಿ.ಎಮ್ಮು, ನೀವು ನಾವು ಎಲ್ಲಾ ನಮ್ಮ ನಮ್ಮದು ಹೇಲೋಣ..ಅವ್ರು ಏನು ಹೇಲ್ತಾರೋ ನೋಡೋಣ ಆಮೇಲೆ ಅದನ್ನ ನೋಡಿ ನಿರ್ಧಾರ ತಗಲ್ಲೋಣ..ಏನು ಹೇಲ್ತೀರಿ..?

ಆಕೆ: ಸರಿ ನೀವು ಹೇಲೋ..ಹಾಗೇ ಮಾಡೋಣ.

ಆತ: ಓಕೆ..ಬೈ ಹಾಗಾದ್ರೆ..

ಆಕೆ: ಬೈ...

Wednesday, January 20, 2010

ಎಚ್ಚರ- ಎದ್ದೇಳಿ



ಮನದಾಳದ
ಬೂದಿ
ನಿಟ್ಟುಸಿರಿಗೆ
ಊದಿ
ಮುಚ್ಚಿಟ್ಟ ಕೆಂಡವ
ಕೆಣಕದಿರು
ಕಿಡಿಸಾಕು
ಒಣಹುಲ್ಲ ಹಿಡಿದು
ಕಾದಿರುವ ಶತೃವಿಗೆ
ನಿನ್ನ ಮನ
ನನ್ನ ತನು
ಎಲ್ಲ ಜನ
ಕ್ಷಣಮಾತ್ರದಿ
ಮರೆವರು ನಿನ್ನೆ
ನನಗೆ ನೀನು ರಕ್ತನೀಡಿದ್ದು
ನನ್ನ ತಂಗಿ
ನಿನ್ನ ಮುಂಗೈಗೆ
ರಾಖಿ ಕಟ್ಟಿದ್ದು
ನನ್ನಲ್ಲಿ ಈದ್ ನ
ಶಾವಿಗೆ ಪಾಯಸ
ನಿನ್ನವರುಂಡದ್ದು
ಗಣೇಶನಿಗೆ ನಮಿಸಿ
ಕಡುಬ ನಾವೆಲ್ಲ ಮೆದ್ದದ್ದು
ಅಕ್ಕನ ಕಾಯಲು
ನನ್ನಕ್ಕ ಬುರಖಾ
ಹೊದಿಸಿದ್ದು, ನಿನ್ನಮ್ಮ
ನನ್ನ ತಾಯ ಹಣೆಗೆ
ವಿಭೂತಿ ಹಚ್ಚಿದ್ದು
ಅಬ್ಬೂ-ನಿನ್ನಪ್ಪ
ಜೊತೆಯಾಗಿ ನಮ್ಮನ್ನೆಲ್ಲಾ
ಕಾಪಾಡಿದ್ದು...!!!
ಯಾರದೋ ತೀಟೆ..
ಯಾರಾಗುತ್ತಿರುವುದು ಬೇಟೆ?
ಕುತ್ತಿಗೆಗೆ ಬಂದರೆ ಪ್ರಾಣ
ಮುಳುಗುವವ ಕೇಳುವುದುಂಟೇ?
ಹಗ್ಗ ಎಸೆದದ್ದು ಯಾರೆಂದು..?
ಇಟ್ಟಿಗೆ-ಸಿಮೆಂಟಿನ ರಚನೆ
ನಮಗಲ್ಲ ಹಿರಿದು
ಮನದಲ್ಲಿ - ಮನೆಯಲ್ಲಿ
ಸುಖ-ಸಹಬಾಳ್ವೆ ತೊರೆದು
ಅವರ ಉಳಿವಿಕೆಗೆ
ಪದವಿ, ಅಧಿಕಾರಗಳಿಕೆಗೆ
ತಮ್ಮವರ ಬಲಿನೀಡುವುದ
ನೋಡಿರುವಿರೇನು?
ನನ್ನ-ನಿಮ್ಮ ಏರಿಸಿ ಚಟ್ಟಕೆ
ತನ್ನವರ ಬಲಿಕೊಟ್ಟೆನೆನುವ
ಗೋಸುಂಬೆಗಳ ಮಾತಿಗೆ
ಮರುಳಾಗದಿರಿ, ನಮಗೆ -ನೀವು
ನಿಮಗೆ-ನಾವು, ನಮ್ಮೆಲ್ಲರಿಗೆ ಬೇಕು
ಜನ್ಮ-ಅನ್ನ ನೀಡಿದನಾಡು
ಸೊಪ್ಪು ಹಾಕದಿರಿ,
ತಿರುಗಿಯೂ ನೋಡದಿರಿ
ಇದು ಬಣ್ಣಬದಲಿಸುವವರ ಜಾಡು.

Monday, January 18, 2010

ಮೂರು ಮುತ್ತುಗಳು



ಮೂರು ಮುತ್ತುಗಳು

ಮೈಸೂರಿಗೆ ಬಿತ್ತು ಮತ್ತೊಂದು ಪೆಟ್ಟು

ಕೆ.ಎಸ್. ಅಶ್ವಥ್ ಹೋದರು ನಮ್ಮ ಬಿಟ್ಟು

ಚಾಮಯ್ಯ ಮೇಷ್ಟ್ರನ್ನು ಕಾಡಿತು ಶಿಷ್ಯನ ಅಗಲಿಕೆ

ಬೇಸರಿಸಿ ಇನ್ನೆಲ್ಲಿ ಶಿಷ್ಯ ಪಾಠವ ಕಲಿಯೋಕೆ?

ಕನ್ನಡ ಚಲನಚಿತ್ರ ಮತ್ತು ಕಲೆಗೆ ಅಪಾರ ಹಾನಿ

ಎರಡೇ ತಿಂಗಳಲ್ಲಿ ಮೂರು ಮುತ್ತು ಆದವು ಮೌನಿ

Wednesday, January 13, 2010

ಸಂಕ್ರಾಂತಿ - ತ್ರಿವರ್ಣಕ್ರಾಂತಿ


(ಶುಭಾಷಯಗಳು)
ಹಸಿರುಸಿರಾಡುವ ಹೊಲ ಗದ್ದೆ
ಉಸಿರಾಗಿದ್ದವು, ರೈತನೆಂದ ಗೆದ್ದೆ
ಕೊಳ್ಳುವುದು ಭಾರ, ಮಾರು ಅಗ್ಗ
ಸಾಲಹೊರೆ, ರೈತನ ಕೊರಳಿಗೆ ಹಗ್ಗ
ಬರಲಿ ಅನ್ನದಾತನ ಅನುಕೂಲದ ದಿನ
ತೀರಲಿ ಸಾಲ,ಹಸಿರಾಗಿ ಹೊಲ ಅನುದಿನ
ಬರಲಿ ಸಂಕ್ರಾಂತಿ ಮನೆಗೆ, ಗದ್ದೆಗೆ
ಊರಿಗೆ, ನಾಡಿಗೆ, ರೈತನಿಗೆ ಗದ್ದುಗೆ
ಆಗಲಿ ತ್ರಿವರ್ಣ ಕ್ರಾಂತಿ, ಹಸಿರು ಶಾಂತಿ
ಶ್ವೇತ ಹೈನಿಗೆ, ಮೀನಿಗೆ ನೀಲಕ್ರಾಂತಿ
ಬಾನಲಿ ಹಾರಾಡಿ ತ್ರಿವರ್ಣ ಪಟಪಟ
ತ್ಯಾಗ, ಶೌರ್ಯಕ್ಕಾಗಲಿ ಕೇಸರಿ ದಿಟ
ಸಮೃದ್ಧಿ, ಸಸ್ಯಸಿರಿ ಆಗಲಿ ಹಸಿರು
ಶಾಂತಿಗೆ ಬಿಳಿ, ಮುನ್ನಡೆಗೆ ಚಕ್ರವೇ ಉಸಿರು
ಸಂಭ್ರಮವಾಗಲಿ ಒಂದೆಡೆ ಅನ್ನದಾತನಿಗೆ
ತರಲಿ ಎಳ್ಳು-ಬೆಲ್ಲದ ಸಂಕ್ರಾಂತಿ
ಯೋಧನ ಶೌರ್ಯ, ಮೇಧಾವಿಗಳ ನಾಡಿಗೆ
ನಮಿಸಿ ವಿಶ್ವ ಆಗಲಿ ತ್ರಿವರ್ಣ ಕ್ರಾಂತಿ

Monday, January 11, 2010

ಕಥೆ ದಾಸರದು...ಕಂಬಳಿ ಯಾರದ್ದೋ??!!




ಬೇಸಿಗೆಯ ಬೇಗೆ ಮತ್ತು ಮೇವಿನ ಕೊರತೆಯಿಂದ ಎಲುಬು ಬಿಟ್ಟುಕೊಂಡು ಸೊರಗುವ ರೈತನ ರಾಸುಗಳಂತೆ ಸೊರಗಿದ್ದರೂ ಚುಚ್ಚುವವುದನು ಬಿಡೆವು ಎನ್ನುವ ರಾಜಕಾರಣಿಯಂತೆ ಮುಳ್ಳುಗಳಿಂದ ಕೂಡಿದ ಜಾಲಿ ಮರದ ಕೊಂಬೆಗೆ ನೇತುಬಿದ್ದಿದ್ದ ಭೇತಾಳನನ್ನು ಹೆಗಲಿಗೇರಿಸಿ, ಪ್ರತಿ ಬಾರಿಯೂ ದಾಳಿ ಮಾಡಿ ಲಂಚಕೋರ ಅಧಿಕಾರಿ ಕುಳಗಳ ಅಕ್ರಮ ಆಸ್ತಿಯ ಪತ್ತೆ ಮಾಡಿ, ಅವರ ಬಣ್ಣ ಬಯಲುಮಾಡಿ, ಸರಕಾರಕ್ಕೆ ಅವರನ್ನು ಶಿಕ್ಷಿಸಲು ಬಿಟ್ಟು, ಮತ್ತೊಂದು ದಾಳಿಗೆ ಅಣಿಯಾಗುವ ಲೋಕಾಯುಕ್ತರಂತೆ ಈ ಬಾರಿಯೂ ಶತವಿಕ್ರಮ ಕ್ರಿಮೆಟೋರಿಯಂ ವಾಹನದ ಕಡೆ ಹೆಜ್ಜೆ ಹಾಕಿದನು.
ಐದು ವರ್ಷ ಸಂಸತ್ತಿನಲ್ಲಿ ನಿದ್ದೆಮಾಡಿ ಚುನಾವಣೆ ಸಮಯದಲ್ಲಿ ಬಾಯಿಗೆ ಬಂದದ್ದೆ ಪ್ರಶ್ನೆ ಎನ್ನುವಂತೆ ಅಧಿವೇಶನದಲ್ಲಿ ಪ್ರಶ್ನೆ ಮಾಡಿ ಗುಲ್ಲೆಬ್ಬಿಸುವ ಸಂಸದನಂತೆ ಈ ವರೆಗೂ ಸುಮ್ಮನಿದ್ದ ಶವದೊಳಗಿನ ಭೇತಾಳ ಮಾತನಾಡತೊಡಗಿತು "ಅಲ್ಲಯ್ಯ ಶತವಿಕ್ರಮ.. ಮುಗಿಯದ ಫಲವನ್ನೀಯದ ಆಶ್ವಾಸನೆಗಳನ್ನೇ ನಂಬಿ ಪ್ರತಿ ಬಾರಿಯೂ ಅದೇ ಸಂಸದನನ್ನು ಆರಿಸಿ ಕಳುಹಿಸುವ ಸಂಸತ್ ಚುನಾವಣಾ ಕ್ಷೇತ್ರದ ಮದಾರನಂತೆ ನಿನ್ನ ಈ ಪ್ರಯತ್ನದ ಹಾದಿಯ ಶ್ರಮ ಅರಿವಾಗದಂತೆ ತುತ್ತೂರಿ ನಗರದ ಹರಿಕಥೆ ಹೇಳುತ್ತೇನೆ ಕೇಳು..." ಎಂದು ತನ್ನ ತುತ್ತೂರಿಯನ್ನು ಊದಲು ಪ್ರಾರಂಬಿಸಿತು.
"ಬಹಳ ಶ್ರಮ ಪಟ್ಟು ಸ್ವಯಂವರದಲ್ಲಿ ಹುಡುಗಿಯನ್ನ ಗೆದ್ದು ಬಂದ್ರೂ ತನಗೇ ಪೂರ್ಣವಾಗಿ ಹೆಂಡತಿಯಾಗದವಳನ್ನು ಪೂರ್ಣ ಪಡೆಯಲು ಪರದಾಡುವ ಪಡ್ಡೆ ಯುವರಾಜನಂತೆ, ನಮ್ಮ ಎಡಬಿಡಂಗಿ ಗೌಡ, ..ಅದೇನಯ್ಯ.. ತುತ್ತುರಿನಗರದ ಮಾಜಿ ಉಪ-ಮೇಯೋ-ರ, ಗುಡದಹಳ್ಳಿ-ಎಂಕಣ್ಣ, ಮೇಯೋ-ರ ವರದನಿಗೆ ಕೊಟ್ಟಿದ್ದ ತನ್ನ ಬೆಂಬಲಾನ ವಾಪಾಸ್ ತಗಂಡ..., ಅವನು ವಾಪಸ ತಗಂಡ ಅನ್ನೋದಕ್ಕಿಂತಾ... ಅ ತರಹದ ವಾತಾವರಣದ ಸೃಷ್ಟಿ ಆಯ್ತು. ಸರಿ, ಚುನಾವಣೇನೂ ಆಯಿತು.., ಗೌಡನ ಕರ್ಜುರದ ಗುರ್ತಿಗೆ ಪೂರ್ಣ ಬಹುಮತ ಸಿಗಲಿಲ್ಲ. ಇನ್ನೊಂದು ಕಡೆ ಪ್ರತಿ ಬಾರಿಯಂತೆ ಈ ಬಾರಿಯೂ ಗೆದ್ದ ..ಸಾರಾಯಿ ಕಂಟ್ರಾಕ್ಟರ್ ದಾರಾಕಡ್ಡಿ (ಅವನು ಮೊದಲು ಮೊಹಲ್ಲ ಮೊಹಲ್ಲ ಸುತ್ತಿ ದಾರ, ಕಡ್ಡಿ ,ಗಾಳಿಪಟ ಮಾರ್ತ ಇದ್ನಂತೆ ಅದಕ್ಕೇ ಅವನ ನಿಜ ಹೆಸರೇ ಯಾರಿಗೂ ಗೊತ್ತಿಲ್ಲ) ಮೊರೆಹೋದ ಎಂಕಣ್ಣ, ಲಕ್ಷಾಂತರ ಪಾಕೆಟ್ ಮಾರಿ ಕೊಟ್ಯಂತರ ಮಾಡಿದ್ದ ದಾರಾಕಡ್ಡಿಗೆ ಐದಾರು ಕರ್ಪೋರೇಟರುಗಳನ್ನ ಕೊಳ್ಳೋದು ಕಷ್ಟ ಆಗಲಿಲ್ಲ. ಸರಿ ಗದ್ದುಗೆ ಮೇಲೆ ಕುಂತೇ ಬಿಟ್ಟ ಗೌಡ, ಎಂಕಣ್ಣ ಅಂದ್ರೆ ಬಿಂಕಣ್ಣ ಅನ್ನೋತರಹ ರಾಜ್ಯ-ಭಾರ ನೆಡೀತು. ಅವನ ಅದೃಷ್ಟ ನೆಟ್ಟಗಿರಲಿಲ್ಲ, ಎಂಡ ಕುಡ್ದು ಸಾಯೋ ಬಡಪಾಯಿಗಳು ಜಾಸ್ತಿ ಆದರು. ಹೆಣ್ಣುಮಕ್ಕಳು ಬೀದಿಗಿಳಿದರು. ತನ್ನ ನೆಚ್ಚಿನ ಕಾರ್ಪೊರೇಟರ್ ಮೇರಿ ಬಡವರ ಪರ ವಹಿಸಿದಳು. ಕಳ್ಳಭಟ್ಟಿಗೆ ಕತ್ರಿ ಬಿತ್ತು. ಪುರಸಭೆ ಕಾನೂನು ಜಾರಿ ಮಾಡ್ತು. ಸಣ್ಣಗೆ ಅಧಿಕಾರ ವಲಯದಲ್ಲಿ ಹೊಗೆ ಶುರುವಾಯ್ತು..ಎಂಕಣ್ಣನ ನಿಜವಾದ ದುರ್ದೆಸೆ ಪ್ರಾರಂಭವೋ ಎನ್ನುವ ಹಾಗೆ ಯಾವತ್ತೂ ಇಲ್ಲದ ಮಳೆ ಬಂತು...ಜನ ದಿಕ್ಕಾಪಾಲು..!!?? ಅದೇನೋ ಯಾಕೋ ಎಂಕಣ್ಣನ ಬಿಂಕನೂ ಕೆಡ್ತು, ಇತ್ತ ಕೆಂಡಾಮಂಡಲ ಆಗಿದ್ದ ದಾರಾಕಡ್ಡಿ. ಎಂಕಣ್ಣನ್ನ ಎತ್ತದೆ ಹೋದ್ರೆ ನಾನು ಬಿಡ್ತೀನಿ ಅಂತ ಕಡ್ಡಿ ಎರಡು ತುಂಡು ಮಾಡಿದ, ಹಂಗೆ ಕುಂತುಬಿಟ್ಟ ದಾರಾಕಡ್ಡಿ!!. ಇಬ್ಬರ ಜಗಳದಲ್ಲಿ ಬಡವಾಗಿದ್ದು- ತುತ್ತೂರಿ ನಗರದ ಜನ!! ಸೂರಿಲ್ಲ-ಊರಿಲ್ಲ ಅನ್ನೋಹಾಗಾಗಿತ್ತು ಅವರ ಕಥೆ. ದೊಡ್ಡೋರು ಬಂದರು ಎಂಕಣ್ಣಂಗೆ ಸುಂಕ ಕಟ್ಟಬೇಕಾಯ್ತು.. ಹೆಂಗೋ ತೇಪೆ ಬಿತ್ತು. ಇವಾಗ ರಾಜ್ಯ- ಇನ್ನೂ ಭಾರವಾಗೇ ನಡೆದಿದೆ..."
ಅಲ್ಲಿಗೆ ಸುಮ್ಮನಾಯಿತು ಭೇತಾಳ..
"ಏನಯ್ಯಾ ಭೇತಾಳ ಅಷ್ಟೇನಾ ಪುಂಗಿ ನಿನ್ನದು ?"
ಎಂದ ಶತವಿಕ್ರಮ..
"ನನ್ನ ಪ್ರಶ್ನೇನ ಕೇಳು.."
ಹೇಳ್ತು ಭೇತಾಳ.
"ಮುಂದೆ ಮಳೆ ಆಗೋಲ್ಲ ಅನ್ನೋದು ಏನು ಗ್ಯಾರಂಟಿ? ತುತ್ತೂರಿ ನಗರದ ಮಾನವಂತ ಹೆಣ್ಣು ಮಕ್ಕಳ ಗಂಡಂದಿರು ಸಾರಾಯಿ ಕುಡ್ದು ಹಾಳಾಗ್ತಾರೆ ಅಂತ ಎಂಕಣ್ಣಂಗೆ ಹೇಳಿ ..ಸಾರಾಯಿ ಧಂಧೆ ನಿಲ್ಸೋಲ್ಲ ಅಂತ ಏನು ಗ್ಯಾರಂಟಿ? ಒಂದುವೇಳೆ ಹಂಗಾದ್ರೆ .....ಎಂಕಣ್ಣ ಕು0ತಿರೋ ಕಂಬಳಿ ನಂದು ಅಂತ ದಾರಾಕಡ್ಡಿ ಕೆಂಪು ಬಾವುಟ ಹಾರ್ಸೊಲ್ಲ ಅಂತ ಏನು ಗ್ಯಾರಂಟಿ? ಅವನು ಕುಂತಿರೋ ಕಂಬಳಿನಾ ಎಳಿಯೋಲ್ಲ ಅನ್ನೋದು ಏನು ಗ್ಯಾರಂಟಿ"

"ಅದಕ್ಕೇ ಹೇಳೋದು....ಬುರುಡೆ ಒಳಗಡೆ ಏನಾದ್ರೂ ಇರಬೇಕು ಅಂತ....,!! ಅಲ್ಲಯ್ಯ ಭೇತಾಳ ಇಷ್ಟೊಂದು ಕಂಡೀಶನ್ನುಗಳ ಮೇಲೆ ಕಂಬಳಿ ಹಾಸ್ಕೊಂಡು ಕುಂತ್ರೆ ಎಂಕಣ್ಣನ ಬಿಂಕಕ್ಕೆ ನಾನ್ಯಾಕೆ ಗ್ಯಾರಂಟಿ ಕೊಡಲಿ..?? ಇದನ್ನು ತುತ್ತೂರಿ ಜನತೆ ಹೇಳ್ಬೇಕು. ಅವರೇ ನಿರ್ಧರಿಸಬೇಕು...ತಮ್ಮ ನಾಯಕ ಹೇಗಿರಬೇಕು? ಅಂತ...ದೂರದ ಯೋಚನೆಮಾಡಿ, ತರ್ಕಿಸಿ ಚುನಾಯಿಸೋ ಬುದ್ಧಿವಂತಿಕೆ ತೋರಬೇಕು, ಬುದ್ಧಿವಂತರು ಅನಿಸಿಕೊಂಡವರು ದಡ್ಡರಿಗಿಂತಾ ತೀರಾ ದಡ್ಡರಂತೆ ವರ್ತಿಸಿ ಓಟೇ ಹಾಕದೆ ಇರೋದನ್ನು ಬಿಡಬೇಕು.., ಆಗಲೇ ಏನಾದ್ರು ಸಾಧ್ಯ"
ಇನ್ನೂ ಶತವಿಕ್ರಮನ ಮಾತು ಮುಗಿದಿರಲಿಲ್ಲ... ಸಭೇಲಿ ಪ್ರಸ್ತಾಪದ ಮಂಡನೆಗೆ ಮುಂಚೆಯೇ ಸಭೆಯನ್ನ ಬಿಡೋ ಸಭಾಸದರಂತೆ...ಶತವಿಕ್ರಮನ ಹೆಗಲಿಂದ ಮಾಯವಾಗಿ ಕಾರ್ಪೋರೇಶನ್ ಪಕ್ಕದ ಸಣಕಲು ಮರಕ್ಕೆ ಜೋತು ಬೀಳಲು ಹೊರಟಿತು ..ಭೇತಾಳ.

Sunday, January 3, 2010

ಹಾಗಾದ್ರೆ...ನಾರಾಯಣನ ಕಿವಿ ಹೋಯಿತಾ?

ನಾನು ಹೈಸ್ಕೂಲಿಗೆ ಹೋಗುತ್ತಿದ್ದ ದಿನಗಳು, ಹಳ್ಳಿಲಿ ಆರೇಳು ಅಂಗಡಿಗಳಲ್ಲಿ ನಮ್ಮ ಸೋದರಮಾವನದ್ದೂ ಒಂದು. ನನ್ನ ಸೋದರಮಾವ ಎರ್ಡನೇ ಸರ್ತಿಗೆ ಎಸ್ಸೆಸ್ಸೆಲ್ಸಿ ಮುಗಿಸಿದ್ದ..ಕಾಲೇಜಿಗೆ ಹೋಗೋಕೆ ಮನಸ್ಸಿರಲಿಲ್ಲ..ನಮ್ಮ ತಾತ.. "ನೀನು ಓದಿ ಮುಂಡಾಮೋಚಿದ್ದು ಸಾಕು, ಅಂಗಡಿ ಹಾಕ್ಕೊಡ್ತೀನಿ..ಕೂತು ಒಂಚೂರು ವ್ಯಾಪಾರ ಕುದುರಿಸಿಕೋ" ಅಂತ..ಒಂದು ದಿನಸಿ ಅಂಗಡಿ ಹಾಕಿ ಕೊಟ್ಟಿದ್ದರು. ನಮ್ಮ ಮಾವ ಇನ್ನೂ ಮದುವೆ ಆಗಿರಲಿಲ್ಲ. ಸಂಜೆ ಆರರ ನಂತರ ಹೊಲ ಗದ್ದೆಯಲ್ಲಿ ಕೆಲಸಮಾಡಿ ಬಂದ ನನ್ನ ಮಾವನ ಸ್ನೇಹಿತ ಮಿತ್ರರು, ರೈತಾಪಿಗಳು ನಮ್ಮ ಅಂಗಡಿಯ ಜಗುಲಿ ಮೇಲೆ ಕೂತು ಲೋಕಾಭಿರಾಮ ಮಾತಿಗೆ ಕೂತರೆ..ಅವರೆದ್ದು ಹೋಗುವ ಹೊತ್ತಿಗೆ ರಾತ್ರಿ ಹತ್ತು-ಹತ್ತೂವರೆ ಆಗ್ತಿತ್ತು. ಇವರ ಮಾತಿಗೆ ಅಂಗಡಿ ವ್ಯಾಪಾರ ನೊಡ್ಕೋತಾ ನಮ್ಮ ಮಾವ ಚರ್ಚೆಗೆ ಸ್ವಾರಸ್ಯಕರ ವಿಷಯಗಳನ್ನ ಹಾಗೇ ಪ್ರಾರಂಭಿಸಿ ಚರ್ಚೆ ಮುಂದುವರೆಯೋಕೆ ಬಿಡ್ತಿದ್ದ..ಮಧ್ಯೆ ಮಧ್ಯೆ ತನ್ನ expert comments ಹಾಕೋದನ್ನ ಮರೀತಿರಲಿಲ್ಲ...ರಾತ್ರಿಯ ಎಂಟೂವರೆ ನಂತರ ವ್ಯಾಪಾರ ಸ್ವಲ್ಪ ಕಡಿಮೆ ಇರ್ತಿತ್ತು..ಆಗ ನಮ್ಮ ಮಾವನ ಸ್ನೇಹಿತರು “ಲೇ ..ಅತಾವುಲ್ಲ..ಯಾವುದಾದ್ರೂ interesting story ಇದ್ರೆ ಹೇಳೋ..” ಅಂತ ಗೋಗರೆಯೋದು ಮಾಮೂಲಾಗಿರ್ತಿತ್ತು..ನಾನು ನನ್ನ ಸ್ಕೂಲಿನ ಮನೆಕೆಲಸ ಮುಗಿಸಿ ಮಾವನ್ನ ಊಟಕ್ಕೆ ಕಳುಹಿಸೋಕೆ ಅಂಗಡೀಗೆ ಬರ್ತಿದ್ದೆ...ಹಾಗನ್ನೋದಕ್ಕಿಂತಾ ಅವರ ಸ್ವಾರಸ್ಯಕರ ಮಾತುಕತೆ ಕೇಳೋಕೆ ಬರ್ತಿದ್ದುದು ಅಂದ್ರೆ ತಪ್ಪಾಗದು.

ಹೀಗೇ ಒಮ್ಮೆ, ಎಂಟೂವರೆ ಸಮಯಕ್ಕೆ ಮಾವ ಊಟ ಮುಗಿಸಿಬಂದ..ಸರಿ ಸೇರಿದ್ದ ಅವರ ಸ್ನೇಹಿತರು ಎಂದಿನಂತೆ ದಂಬಾಲು ಬಿದ್ದಾಗ...ಮನೆ ಕೆಲಸದಿಂದ ಬೇಸತ್ತ ನಾರಾಯಣ ಎನ್ನುವ ರೈತನೊಬ್ಬನ ಕಥೆ ಹೇಳತೊಡಗಿದ.
“ನಾರಾಯಣ ಮದುವೆ ಯಾಗಿ ಮನೆಗೆ ಹೆಂಡತೀನೇನು ತಂದ..ಮನೆಗೆ ಮಾರೀನೇ ತಂದುಕೊಂಡ...ಮನೆ ಕೆಲಸ ಎಲ್ಲ ನಾರಾಯಣನಿಗೆ ಮಾಡ್ಬೇಕಾಗ್ತಿತ್ತು..ಸರಿ ದಿನವೆಲ್ಲಾ ಹೊಲ ಗದ್ದೆ ಕೆಲಸ ಮಾಡಿ ದಣಿದು ಬಂದರೆ ಮನೆ ಕೆಲಸಕ್ಕೆ ಹೆಂಡತಿ ಪೀಡಿಸ್ತಿದ್ದಳು...ಬೇಸತ್ತ ನಾರಾಯಣ.. ಗುಡ್ದದಮೇಲಿನ ಬಾಬಾನ ಬಳಿ ಪರಿಹಾರ ಕೇಳೋಕೆ ಹೋದ. ಬಾಬಾ ಅವನಿಗೆ ಒಂದು ಮಂತ್ರ ಹೇಳಿಕೊಟ್ಟು “ಅದನ್ನು ಪ್ರಯೋಗಿಸಿ ಕೆಲಸ ಮಾಡೋ ದೆವ್ವಾನ ಹುಟ್ಟುಹಾಕಬಹುದು..ಆದರೆ ಅದರ ಎಲ್ಲಾ ಶರತ್ತುಗಳನ್ನು ಪಾಲಿಸಬೇಕು, ತಪ್ಪಿದರೆ ಅದು ತನ್ನ ಶರತ್ ಪೂರೈಕೆಮಾಡಿ ಮಾಯವಾಗಿಬಿಡುತ್ತೆ.. “ ಎಂದ ಬಾಬ. ನಾರಾಯಣ ಮಂತ್ರದಿಂದ ದೆವ್ವವನ್ನು ತರಿಸಿದ..ಅದು..ನಾರಾಯಣ ಏನೇ ಕೆಲಸ ಹೇಳಿದರೂ ಮಾಡುವುದಕ್ಕೆ ಒಪ್ಪಿತು, ಆದ್ರೆ ನಾರಾಯಣ ಕೆಲಸ ಹೇಳಲು ಅಸಮರ್ಥನಾದರೆ ದೆವ್ವ ಅವನ ಕಿವಿಯನ್ನು ಕಚ್ಚಿ ತಿನ್ನುವ ಶರತ್ ಹಾಕಿತು. ಸರಿ.. ಅಂತ ಒಪ್ಪಿಕೊಂಡ ನಾರಾಯಣ. ಅವನ ಎಲ್ಲ ಕೆಲಸ ಮಾಡುತ್ತಾ ಬಂತು ದೆವ್ವ...ಕೊನೆಗೆ ಒಮ್ಮೆ ನಾರಾಯನನಿಗೆ ಕೆಲಸ ಹೇಳಲಾಗಲಿಲ್ಲ. ದೆವ್ವ ನಾರಾಯನ ಕಿವಿಯನ್ನು ಕತ್ತರಿಸಿ ಕಚ್ಚಿತಿಂದು ಮಾಯವಾಯಿತು.

ಕಥೆ ಪೂರ್ಣವಾಗುತ್ತಿದ್ದಂತೆ..ಸ್ವಲ್ಪ ಹೆಡ್ದನಂತಹ..ರೈತ ಗೋವಿಂದ.... “ಹಂಗಾದ್ರೆ ನಾರಾಯಣನ ಕಿವಿ ಕಚ್ಚಿತಾ?...ಅವನ ಕಿವಿ ಹೋಯಿತಾ..? ” ಎಂದ. ಅವನು ಹಾಗೆ ಕೇಳುತ್ತಿರುವಂತೇ.. ಅಂಗಡಿಗೆ ಒಳಬರುತ್ತಿದ್ದಾತ ಜಗುಲಿ ಮೇಲೆ ಕುಳಿತಿದ್ದ ಗೋವಿಂದನ್ನ ಎಳೆದು ಬೀಳಿಸಿ... ಬೋ..ಮಗನೆ...ನಿನಗೇನೋ...?? ನನ್ನ ಕಿವೀನಾದ್ರೂ ಕಚ್ಚತಾನೆ...ತಲೇನಾದ್ರೂ ಹೊಡಿತಾನೆ...ನಮ್ಮ್ ಸಂಸಾರದ ಇಷ್ಯ ನಿನಗ್ಯಾಕೋ..??” ಎನ್ನುತ್ತಾ ಗೋವಿಂದನ್ನ ಗುದ್ದಿ ಹಲ್ಲೆ ಮಾಡಿದ... ನಮ್ಮಾವ ಮತ್ತೆ ಇತರರು ಗೋವಿಂದನ್ನ ಬಿಡಿಸುವಾಗ... "ನೋಡು ಅತ್ತಾವುಲ್ಲ..ಇವನಿಗ್ಯಾಕೆ ನಮ್ಮ ಮನೆ ಸಮಾಚಾರ..?" ಎನ್ನುತ್ತ ನ್ಯಾಯ ಒಪ್ಪಿಸತೊಡಗಿದ. ಎಲ್ಲರೂ ಆಶ್ಚರ್ಯ ಗಾಬರಿಯಿಂದ ಮೂಕರಾಗಿ ನೋಡುವುದೇ ಆಯಿತು. ನಮ್ಮ ಮಾವ ಮತ್ತೆ ಇನ್ನೊಂದಿಬ್ಬರಿಗೆ ಕ್ಷಣ ಕಾಲ ಆಶ್ಚರ್ಯ, ಹೀಗೇಕೆ ಎನ್ನುವುದರ ಕಾರಣ ತಿಳಿದದ್ದು ಹಿಂದಿನ ದಿನದ ಘಟನೆ ನೆನಪಾದಾಗಲೇ.
'ನಾರಾಯಣ'...ಒಳಕ್ಕೆ ಬಂದಾತನ ಹೆಸರು; ಅವನು ಮತ್ತು ಅವನ ತಮ್ಮ ಹಿಂದಿನ ದಿನವಷ್ಟೇ ಮನೆಯ ಒಂದು ಯಾವುದೋ ಸಮಸ್ಯೆಯ ಕುರಿತು ಜೋರು ಜಗಳಾನೇ ಆಡಿದ್ರು ...ಆ ಜಗಳದಲ್ಲಿ..ನಾರಾಯಣನ ತಮ್ಮ ತನ್ನ ಅಣ್ಣನ ಕಿವಿಯನ್ನು ಕಚ್ಚಿಬಿಟ್ಟಿದ್ದ. ಇದು ಎಲ್ಲಾ ಕಡೆ ಗುಲ್ಲಾಗಿತ್ತು. ಆತ ಅಂಗಡಿಯೊಳಕ್ಕೆ ಬಂದಾಗ ಗೋವಿಂದ ಕೇಳಿದ್ದ ಮಾತು..ನಾರಾಯಣನು ರೇಗುವಂತೆ ಮಾಡಿತ್ತು... ಅದೇ ಕಾರಣಕ್ಕೆ ನಾರಾಯಣ ಗೋವಿಂದನ್ನ ಹೊಡೆದಿದ್ದು. ವಿಷಯ ತಿಳಿಸಿ ನಾರಾಯಣನನ್ನು ಸಮಾಧಾನ ಮಾಡುವ ಹೊತ್ತಿಗೆ ಸಾಕುಸಾಕಾಗಿ ಹೋಯಿತು ಎಲ್ಲರಿಗೂ...ಆಮೇಲೆ ..ನಾರಾಯಣ ಗೋವಿಂದನಲ್ಲಿ ಕ್ಷಮೆ ಕೇಳಿದ್ದ ಅದು ಬೇರೆ ವಿಷಯ.