ಕೆಲವು ಪದಗಳ ಸಾಲೇ?
ಸಾಲಿನ ಕೊನೆಯ ಪ್ರಾಸವೇ?
ಪ್ರಾಸದೊಳಗಿನ ಭಾವವೇ?
ಭಾವದೊಳಗಿನ ಕಲ್ಪನೆಯೇ?
ಕಲ್ಪನೆಗೊಂದು ಚಿಂತನೆಯೇ?
ಚಿಂತನದೊಳಿಹ ವಿಷಯವೇ?
ವಿಷಯದ ಹಿಂದಿನ ಘಟನೆಯೇ?
ಘಟನೆಗೊಂದು ತರ್ಕವೇ?
ತರ್ಕಕ್ಕೆ ನಿಲುಕದ ಸತ್ಯವೇ?
ಸತ್ಯದೊಳಗಿನ ಸೌಂದರ್ಯವೇ?
ಸೌಂದರ್ಯವೆಂಬ ಕನಸೇ?
ಕನಸಿಂದ ದೊರೆತ ಸ್ಪೂರ್ತಿಯೇ?
ಸ್ಪೂರ್ತಿಯಿಂದ ಹುಟ್ಟಿದ ಪದಗಳೇ?
ಪದಗಳ ಅಂತರಾಳವೇ?
ಅಂತರಾಳದಲ್ಲಡಿಗಿದ ದುಗುಡ ದುಮ್ಮಾನವೇ?
ಮಾನಕಂಜಿದ ಸಮ್ಮಾನವೇ?
ಸಮ್ಮಾನ ಗಿಟ್ಟಿಸಿಸಿದ ವಿಪರ್ಯಾಸವೇ?
ವಿಪರ್ಯಾಸ ತರಿಸಿದ ಪರ್ಯಾಯವೇ?
ಪರ್ಯಾಯ ಹೇಳಲಿಚ್ಛಿಸಿದ್ದೇ?
ಹೇಳಲಿಚ್ಛಿಸುದೇ ಬರೆದುದೇ?
ಬರೆದುದೇ ಒಂದು ಕವಿತೆಯೇ?
ಕವಿತೆಯೆಂದರೇನು? ???
ಕವಿತೆ
ಕವಿತೆ ಕವಿ
ತಾ ತೆರೆದ ಮನ
ವಿ (ಆ)ಷಯ ಕ್ಷಣ
ಕ್ಷಣ ತುಡಿತದ
ಭಾಷೆ ಸುರುಳಿ
ಬಿಚ್ಚಿಡುವ ಸರಪಳಿ
ಅನಿಸಿದ್ದು ಬರೆ
ಬರೆದದ್ದು ತೆರೆ
ತೆರೆವವನದೊಂದು ಪರಿ
ಹೆಪ್ಪುಗಟ್ಟಿದ ಭಾವ
ಮಂಥಿಸಲು ಕವನ
ಬಿಂಬಿಸಲು ಕಥನ
ಮನತುಂಬಿ
ಹೊನಲು ಗೀತೆ
ಮನಸೀಳಿ ಲೇಖಾಂಕವಿತೆ
ಅವನು-ಅವಳು
ಅವನು ಕಥೆ-
ರಸ-ನೀರಸ
ಏಳು-ಬೀಳು
ಪುಟಗಟ್ಟಲೆ ಗೋಳು
ಅಲ್ಲೊಂದು
ಇಲ್ಲೊಂದು
ರಸಿಕತೆಯ ಓಳು
ಕೊನೆಗೊಂದೇ
ಉಳಿದದ್ದು ಹೇಳೋಕೆ
ಯಾಕದ್ರೂ ಬೇಕು
ಬಾಳಬೇಕು ಈ ಬಾಳು?
ಅವಳು ಕವಿತೆ-
ಸುಂದರ ಸವಿತೆ
ಬಲು ಆಕರ್ಷಿತೆ
ಪುಟವೆಲ್ಲಿ..ಪದಗಳು?
ಕಣ್ಣಲ್ಲೇ ನುಡಿಗಳು
ತುಟಿ ಬರೆವ ಸಾಲುಗಳು
ನಕ್ಕರೆ ಉದುರುವ
ಬಹುಮೂಲ್ಯ ಮುತ್ತುಗಳು
ಲತಾಂಗಿ, ಸುಕೋಮಲೆ
ಬಿಂಬವೊಂದೇ..
ಸಾವಿರ ಕನಸಲೂ
ಅದಕೇ ಇವಳು
ನಡೆದಾಡುವ
ಜೀವಂತ ಕವಿತೆ.
ದಾಂಪತ್ಯ
ಅವಳಜೊತೆ ಅವನು
ಬೆಸೆದ ಸಾಂಗತ್ಯ
ಕಥೆಯಲ್ಲಿ ಬೆರೆತ ಕವಿತೆ
ಒಂದು ವಾಸ್ತವದ ಭಾಷೆ
ಮತ್ತೊಂದು ಬಾಳರಸ
ಹಿಂಗಿಸಲು ತೃಷೆ
ಮಹಾಕಾವ್ಯದ ರಚನೆಗೆ
ಇಬ್ಬರೂ ಸಮ, ಹೇಳಲಾದೀತೆ?
ಇದು ಕಥನ ಇದೇ ಕವಿತೆ?