Saturday, October 13, 2012

ಕಿತ್ತೂರು ಚನ್ನಮ್ಮನ ಪುನರ್ಜನ್ಮ..???





























ಕಿತ್ತೂರು ಚನ್ನಮ್ಮನ ಪುನರ್ಜನ್ಮ..???

ಆ ದಿನ ಬೆಳಿಗ್ಗೆ ಎಂದಿನಂತೆ ೫.೩೦ ಎದ್ದು ಸ್ಕೂಲಿಗೆ ಹೋಗಬೇಕಾಗಿದ್ದ ನನ್ನ ಮಗಳು ಸುರಯ್ಯಾನನ್ನು ಮೂರನೇ ಬಾರಿ..ಹತ್ತು ನಿಮಿಷದೊಳಗೆ ಎಚ್ಚರಿಸಿದ್ದೆ..  ಆಗ್ಲೇ ೬.೦ ಆಗುತ್ತಾ ಇತ್ತು.
“ಬೇಟೂ..ಉಠೋ..ಟೈಮ್ ಹುವಾ ಮಾ...ರೆಡಿ ನೈ ಹೋನಾ ಕ್ಯಾ ಸ್ಕೂಲ್ಕು ಜಾನೇ..?” ಸ್ವಲ್ಪ ಎತ್ತರದ ದನಿಯಲ್ಲೇ ಹೇಳಿ -
ನಾನೂ ಬ್ರಶ್ ಮಾಡಿ ಬಂದೆ, ಅರೆ..!! ಇನ್ನೂ ಎದ್ದಿಲ್ಲ... ಈಗ ಕೋಪ ಬಂತು...
“ಸುರೂ...” ಕೂಗಿದೆ ಒತ್ತು ಕೊಟ್ಟು ’ರೂ’ ಅಕ್ಷರಕ್ಕೆ..
ತಡಬಡಾಯಿಸಿ ಎದ್ದಳು ಸುರು, ಎಂದಿನಂತೆ ಮೊದಲು ಅವಳೇ ಅಲಾರ್ಮ್ ತೆಗೆದು, ಅದನ್ನು ಆಫ್ ಮಾಡಿ ಎದ್ದು ನನ್ನ ಎಬ್ಬಿಸ್ತಾ ಇದ್ದವಳು ಈ ದಿನ ಯಾಕೆ..?? ನನಗೂ ಯೋಚನೆ ಆಗೋದು ಸಹಜ ಅಲ್ವೇ..??
ಯಾಕೋ ಲವಲವಿಕೆ ಕಡಿಮೆ ಇತ್ತು... ಅವಳಮ್ಮನೂ ಎದ್ದಿರಲಿಲ್ಲ... ಅರೆ ಇದೇನು..?? ನಾನೇ ಏನಾದರೂ ತಪ್ಪು ಮಾಡ್ತಿದ್ದೀನಾ..???
“ರೀ ..ಈ ದಿನ ಶುಕ್ರವಾರ ಅಲ್ವಾ !! ರಜಾ ಮಲಗ್ಲಿ ಬಿಡಿ...ಇಷ್ಟು ಬೇಗ ಯಾಕೆ ಎಚ್ಚರಿಸ್ತೀರಾ” ಅನ್ನೋ ಥರ ನನ್ನ ನೋಡಿದ್ಲು ಮಲಗಿದ್ದಲ್ಲಿಂದಲೇ ನನ್ನವಳು...
ಎದ್ದು ಕುಂತ ನನ್ನ ಮಗಳು.. ಮಂಕು ಮಂಕಾಗೇ ಇದ್ದದ್ದು ನೋಡಿ... ಸ್ವಲ್ಪ ಆತಂಕ ಆಯ್ತು, ಹಣೆ ಮುಟ್ಟಿ ನೋಡಿದೆ, ತಣ್ಣಗಿತ್ತು. ಸಮಾಧಾನ ಆಯ್ತು.
“ಓಕೆ ಬೇಟೂ ..ಮಲಗು.. ಹಾಲಿಡೇ ಅಲ್ವಾ..ಓಕೆ...ಮಲಗು” ಎಂದೆ..
ಸುರು ನನ್ನ ಕೈಹಿಡಿದು ಕುಳ್ಳರಿಸಿಕೊಂಡಳು ಹಾಸಿಗೆ ಮೇಲೆ..
“ಅಬ್ಬೂ ನಾನು ಬ್ರಿಟೀಶರ್ಸನ್ನ ನೋಡಿದ್ದೀನಿ.., ಬಹಳ ಕೆಟ್ಟವರು ಅವರು, ನಮ್ಮ ನಮ್ಮಲ್ಲೇ ಜಗಳ ತಂದಿಟ್ಟು ತಮ್ಮ ವಸಾಹತು ಸಾಮ್ರಾಜ್ಯ ಮಾಡಿದ್ದೇ ಅಲ್ಲದೇ..ನಮ್ಮ ರಾಜ್ಯದಲ್ಲೂ ನಮ್ಮವರನ್ನೇ ನನ್ನ ವಿರುದ್ಧ ಎತ್ತಿ ಕಟ್ಟಿದರು”.... !!!!!!!!!!!!!! ??????
ತಕ್ಷಣ ಮತ್ತೆ ಅವಳ ಹಣೆ ಮುಟ್ಟಿದೆ..ಗಾಬರಿಯಾಯ್ತು... ತಣ್ಣಗಿತ್ತು ಹಣೆ!!
“ಏನಾಯ್ತು ಬೇಟೂ...ಯಾಕೆ?? ಕನಸು ಕಂಡ್ಯಾ??”
“ಇಲ್ಲ ಅಬ್ಬು, ನನಗೆ ನನ್ನ ಹಿಂದಿನ ಜನ್ಮದ ನೆನಪಾಗ್ತಿದೆ,...”
ನನ್ನ ಗಾಬರಿ ಜಾಸ್ತಿ ಆಯ್ತು, ನನ್ನವಳು ಪುಣ್ಯಕ್ಕೆ ರಜೆ ಆದ್ದರಿಂದ ಮತ್ತೆ ನಿದ್ರಿಸಿದ್ದಳು, ಇಲ್ಲವಾಗಿದ್ದರೆ ಅತ್ತೇ ಬಿಡ್ತಾ ಇದ್ದಳು.
“ಇಲ್ಲ ಪುಟ್ಟಾ, ಕನಸು ಕಂಡಿರಬೇಕು...!!” ಅಂದೆ.
“ಇಲ್ಲ ಅಬ್ಬೂ ನನಗೆ ಪೂರ್ತಿ ನೆನಪಾಗ್ತಿದೆ,... ಸಂಗೊಳ್ಳಿಯನ್ನ ಹಿಡಿದು ಗಲ್ಲಿಗೆ ಹಾಕಿದ್ರು.. ಎಂಥ ಕ್ರೂರಿಗಳು... ನಾನು ಹೇಗೋ ತಪ್ಪಿಸ್ಕೊಂಡು ಕಾಡಿಗೆ ಹೋಗಿದ್ದೆ, ಅಲ್ಲೂ ಬಿಡಲಿಲ್ಲ ನನ್ನ ಬೆನ್ನಹಿಂದೆ ಬಿದ್ದರು.. ನನ್ನ ಹಾಗೇ ಇದ್ದ ಸುಂದರಮ್ಮನನ್ನ ಕೊಂದು ನಾನೇ ಸತ್ತೆ ಅಂತ ಗುಲ್ಲೆಬ್ಬಿಸಿ...ನನ್ನ ರಾಜ್ಯಾನೂ ಕಬಳಿಸಿದ್ದರು.........
ನಾನೂ ಇನ್ನೂ ಶಾಕ್ ನಿಂದ ಹೊರಬಂದಿರ್ಲಿಲ್ಲ... ನನ್ನ ಮಗಳಿಗೆ ಇದೇನಾಗಿದೆ...? ನಿಜಕ್ಕೂ ಪುನರ್ಜನ್ಮದ ನೆನಪಾಯ್ತಾ?? ಅಂದರೆ ಇವಳು ಕಿತ್ತೂರು ಚನ್ನಮ್ಮ ಆಗಿದ್ದಳಾ...???
ತಲೆ ಕೊಡವಿಕೊಂಡೆ... ಆದರೆ ಅವಳು ಎಂದಿನಂತೆ ಶಾಂತವಾಗೇ ಇದ್ದಳು, ಸ್ವಲ್ಪ ಸಮಯ ನಿದ್ದೆ ಮಂಪರು ಇದ್ದಿದ್ದು ಬಿಟ್ಟರೆ ...!! ನನಗೆ ಟೆನ್ಶನ್...!!!
“ಅಲ್ಲಮ್ಮಾ ..ಕನಸು ಕಂಡಿರಬೇಕು ನೀನು...” ಎಂದೆ...
ಇಲ್ಲಾ ಅಬ್ಬೂ...ನನಗೆ ಸುಮಾರು ವಿಷಯಗಳು ನೆನಪಾಗ್ತಿವೆ... ಎನ್ನುತ್ತಾ ಚನ್ನಮ್ಮ ಕಾರಾಗೃಹದಿಂದ ತಪ್ಪಿಸಿಕೊಂಡದ್ದು ತನ್ನಂತೇ ಇದ್ದ ಸುಂದರಮ್ಮ ಮತ್ತಿತರ ಬಂಟರ ಜೊತೆ ಕಾಡಿಗೆ ಹೋಗಿದ್ದು..ಹೀಗೆ ಹತ್ತು ಹಲವು ಚರಿತ್ರಕಾರರು ಅರಿತಿರದ ವಿಷಯ ಹೇಳತೊದಗಿದಳು... ಅವಳ ಮುಖದಲ್ಲಿ ವಿಶೇಷ ಕಾಂತಿ ಕಾಣುತ್ತಿತ್ತು... ನನಗಿಂತಾ ನೂರು ಪಾಲು ಹೆಚ್ಚು ಮನೋ ಸ್ಥೈರ್ಯ, ಗಾಂಭೀರ್ಯ ಅವಳ ಮಾತುಗಳಲ್ಲಿ ನೋಡಿ ..ನನಗೆ ನಿಜಕ್ಕೂ ಗಾಬರಿ, ಆಶ್ಚರ್ಯ, ಸಂತಸ ಎಲ್ಲಾ ಒಟ್ಟಿಗೆ ಆಗಲಾರಂಭ್ಸಿಸಿತು... !!!, ಅವಳು ತಿಳಿಸಿದ ಕೆಲವು ವಿಷಯಗಳು ಚರಿತ್ರೆಯ ಗೊತ್ತಿರುವ ವಿಷಯಗಳಿಗೆ ಹಲವು ಆಯಾಮ ಕೊಡುವಂತಿದ್ದವು.
“ಸುರು ಬೇಟಾ...ನೀನು..ನನ್ನ ಮಗಳು..ನಿನ್ನ ಹೆಸರು ಸುರಯಾ, ನೀನೀಗ ಕುವೈತಲ್ಲಿದ್ದೀಯಾ ...ಅನ್ನೋದು ಗೊತ್ತಲ್ಲ..??” ಎಂದೆ ಅವಳ ಮುಖವನ್ನೇ ಆತಂಕ ಭಯದಿಂದ ನೋಡ್ತಾ...
“ಹೌದು ಅಬ್ಬೂ, ನಾನು ಸುರಯ್ಯ ನಿನ್ನ ಮಗಳು, ಗೊತ್ತು..., ಆದ್ರೂ ಹಳೆಯದು ಬಹಳ ಸ್ಪಷ್ಟವಾಗಿ ನೆನಪಾಗ್ತಿದೆ....”
ಸ್ವಲ್ಪ ಸಮಾಧಾನವಾದರೂ ಗಾಬರಿ ಹೋಗಲಿಲ್ಲ...
“ಓಕೆ ಬೇಟಾ... ಓಕೆ..ಓಕೆ.. ಎಲ್ಲೂ ಈ ವಿಷಯ ಹೇಳಬೇಡ..ಅದರಲ್ಲೂ ನಿನ್ನ ಕನ್ನಡ ಕೂಟದ ಕನ್ನಡ ಕ್ಲಾಸಲ್ಲಿ ಯಾರಿಗೂ ಹೇಳಬೇಡ...ಅಯ್ತಾ...!! ಓಕೆ..ಬೇಟೂ...” ಎಂದೆ. ನನ್ನ ಆತಂಕ ಕಡಿಮೆ ಆಗಿರ್ಲಿಲ್ಲ, ಎಸಿ ಇದ್ರೂ ಮೈ ಬೆವರುತಿತ್ತು......
ಏನು ಮಾಡುವುದು?? ಇವಳು ತುಂಬಾ ಸ್ಪಷ್ಟವಾಗಿ ಪುನರ್ಜನ್ಮ ಪಡೆದ ಹಾಗೆ ಕಾಣುತ್ತಿದೆ... ಎಲ್ಲೂ ಓದಿರದ ಇವಳಿಗೆ ಚನ್ನಮ್ಮನ ವಿಷಯ ನಾನೂ ಹೇಳಿಲ್ಲ, ಅವಳ ಸ್ಕೂಲಲ್ಲೂ ಯಾವ ಪಠ್ಯವಿಷಯದಲ್ಲೂ ಬಂದಿಲ್ಲ....!!!!! ಎಷ್ಟೊಂದು ವಿಷಯ ಹೇಳ್ತಿದ್ದಾಳಲ್ಲಾ... ಈ ಸುಂದರಮ್ಮ ಯಾರು??? ನಾನೂ ಓದಿದ್ದು ನೆನಪಿಲ್ಲ.....!!! ಹೇಗೆ?? ಏನು??? ತಲೆ ಸುತ್ತತೊಡಗಿತು ಎಲ್ಲಾ ಯೋಚನೆ ಮನಸಿಗೆ ಬಂದು................
..................................................
“ಅಬ್ಬೂ...ಅಬ್ಬೂ....!!! ಅಬ್ಬೂ....” ನನ್ನ ತೋಳನ್ನು ಜೋರಾಗಿ ಅಲುಗಾಡಿಸಿದಳು ಸುರು,
“ಅಬ್ಬೂ ಇನ್ನೂ ಏಳಲ್ವಾ..?? ನನ್ನ ಕನ್ನಡ ಕ್ಲಾಸಿದೆ ಅಲ್ವಾ ೯.೩೦ ಗೆ... ಮರೆತ್ರಾ..???
ಹಾಂ..ಆಂ...ಎಸ್ ಬೇಟೂ... !! ವಾಸ್ತವಕ್ಕೆ ತಂದಿದ್ದು ನನ್ನ ಮಡದಿ ಕಾಫಿ ರೆಡಿ ಇದೆ ಬನ್ನಿ ಎನ್ನುವ ಮಾತು.... !!!!
ಅಯ್ಯೋ... !!! ಅಲಾರ್ಮ್ ಹೊಡೆದಾಗ ಎದ್ದು ಮತ್ತೆ ಮಲಗಿದವನಿಗೆ ಈ ಕನಸು ಬಿತ್ತಾ....???
ಕಣ್ಣುಜ್ಜಿದೆ, ಸುರು ತನ್ನ ಕನ್ನಡ ಕ್ಲಾಸಿನ ಪುಸ್ತಕ ಕೈಲಿ ಹಿಡಿದಿದ್ದು ಹೊರಡೋಕೆ ರೆಡಿ ಆಗಿದ್ದಳು...
“ಬೇಟೂ...ಚನ್ನಮ್ಮನ ವಿಷಯ ಮರೆತೆಯಾ...??” ಎಂದೆ
“ಯಾವ ಚನ್ನಮ್ಮ ??? ಅಬ್ಬೂ...!!! ಆಶ್ಚರ್ಯದಿಂದ ಅವಳು ನನ್ನತ್ತ ಪ್ರಶ್ನೆ ಎಸೆದಾಗಲೇ
“ಅಬ್ಬಾ..!!!” ನಿರಾಳ... ಈ ವರೆಗೂ ಕನಸು ಕಂಡಿದ್ದೆ ನಾನು...
ನಗುತ್ತಾ ಎದ್ದು ಹೋದೆ ಮುಖ ತೊಳೆದು ಕಾಫಿ ಕುಡಿದು ಸುರುನ ಕನ್ನಡ ಕ್ಲಾಸಿಗೆ ಕರೆದುಕೊಂಡು ಹೋಗಲು.
ಹಲ್ಲುಜ್ಜುತ್ತಾ ನೆನಪು ಮಾಡ್ಕೊಂಡೆ ಸುರು ಹೋದ ಸಲ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಕಿತ್ತೂರು ಚನ್ನಮ್ಮನ ಪಾತ್ರ ಮಾಡಿದ್ದು.