Cartoon Source: tenaliramareports.com
ಕೆರೆಯ ನೀರನು ಕೆರೆಗೆ
ಚಲ್ಲಿ
ನಮಸ್ಕಾರ ಸರ್, ಏನು
ಸುದ್ದಿ ನಿಜಾನಾ?
ಏನು ಹೇಳಿ...?? ನಾನು
ಕುವೈತ್ ಬಿಟ್ಟು ಹೋಗ್ತಾ ಇರೋದಾ..??
ಊಂ ಸರ್,,, ಒಳ್ಳೆ
ನೌಕರಿ ಇತ್ತು ತುಂಬಾನೆ ಒಳ್ಳೆ ಸಂಬಳ..!! ಇನ್ ಕಂ ಟ್ಯಾಕ್ಸ್ ಇಲ್ಲ, ಇಷ್ಟೆಲ್ಲಾ
ಇದ್ದು..????!!!
ಇಷ್ಟೆಲ್ಲಾ
ಗೊತ್ತಿರೋರು..ಯಾಕೆ ಬಿಡ್ತಾ ಇದ್ದೀನಿ ಅಂತಾನೂ ಗೊತ್ತಿರಬೇಕಲ್ವಾ?
ಹಾಂ...ಯಾರೋ
ಹೇಳಿದ್ದು... ಆದರೂ ನಿಮ್ಮ ಹತ್ರ ಕನ್ಫರ್ಮ್ ಮಾಡ್ಕೊಳ್ಳೋಕೆ ...ಬಂದೆ... , ನೀವು ವಿಧಾನ ಸಭೆ
ಚುನಾವಣೆಲಿ ಕೆಲ್ಸ ಮಾಡೋಕೆ ಹೋಗ್ತಿದ್ದೀರಂತೆ.... ??
ಚುನಾವಣೆಲಿ ಕೆಲ್ಸ
ಮಾಡೋಕಲ್ರೀ... .. ಎಂ ಎಲ್ ಎ ಗೆ ನಿಲ್ತಾ ಇದ್ದೀನಿ.
ಹಹಹ..ಏನ್ಸಾರ್..ತಮಾಶೆ
ಮಾಡ್ತಿದ್ದೀರಾ...?? ನಿಮಗೆ ಅಷ್ಟು ಓಟು ಸಿಗುತ್ತಾ...??
ನಾನೆಲ್ಲಿ
ಹೇಳ್ದೆ...ಗೆಲ್ತೀನಿ ಅಂತ...??.. ನಿಂತವರೆಲ್ಲಾ ಗೆಲ್ತಾರೆ ಅಂತಾನಾ...ನಿಮ್ಮ ಅಭಿಪ್ರಾಯ...??
ಅಲ್ಲಾ ಸರ್..ಇಲ್ಲಿನ
ಕೆಲ್ಸ, ಎಸಿ ಮನೆ, ಎಸಿ ಕಾರು, ಎಸಿ ಆಫೀಸು, ಎಸಿ ಮಾಲು......?
ರೀ...ಮೆತ್ತಗೆ
ಮಾತನಾಡ್ರಿ...ಮಾಲು ಗೀಲು..ಅಂದ್ರೆ ಮನೆಗೆ ಸೇರ್ಸೊಲ್ಲ ನನ್ನ ಹೆಂಡ್ತಿ ಆಮೇಲೆ... ರಸ್ತೆಲಿ ಎಸಿ
ಇರೊಲ್ಲ ಗೊತ್ತಾ..?? ರಾತ್ರಿ ಇಡೀ..ss ಹೊರಗಡೆ ? ಬೆಂಚ್ ಮೇಲೆ ಮಲಗ್ಬೇಕಾಗ್ತದೆ ಪಾರ್ಕಲ್ಲಿ...!! ಇನ್ನು ಈ ಕುವೈತ್
ವೆದರ್ರೋ,,,ದೇವರಿಗೂ ಗೊತ್ತಿರೊಲ್ಲ ಯಾವಾಗ ಹೇಗೆ ಅಂತ... ಡಸ್ಟ್ ಸ್ಟಾರ್ಮ್ ಬಂದ್ರೆ ಉಸಿರು
ಕಟ್ಟಿ ಸಾಯ್ತೀನಿ... ಆಮೇಲೆ ಕನ್ನಡಿಗ ವಿಜ್ಞಾನಿಯೊಬ್ಬನ ಸಾವಿಗೆ ಕಾರಣನಾದ ಮತ್ತೊಬ್ಬ ಕನ್ನಡಿಗ
ಅಂತ ನನ್ನ ಸಾವಿಗೂ ಕನ್ನಡಕ್ಕೂ ಸಂಬಂಧ ಕಟ್ಟಿ ಮಾನ ಮರ್ವಾದೆ ಹರಾಜ್ ಹಾಕಿಬಿಡ್ತಾರೆ ಪೇಪರ್
ಟಿವಿಯವರು.
ಛೇ..ಛೇ...ಛೇ... ನಾನು
ಹೇಳಿದ್ದು ಮಾಲ್ (ಇಂಗ್ಲೀಷ್ದು...)... ಶಾಪಿಂಗ್ ಮಾಲ್..
ಹಂಗೆ ಹೇಳಿ ಮತ್ತೆ, ಸರಿಯಾಗಿ... ಎಲ್ಲೆಲ್ಲೋ ಇಂಗ್ಳೀಷ ಮಧ್ಯೆ ಮಧ್ಯೆ ಸೇರ್ಸಿದ್ರೆ ಹಿಂಗೇ ಆಗೋದು... ಮೊನ್ನೆ
ತೆಲುಗಿನವನೊಬ್ಬ ಹಿಂದಿ ಹುಡುಗಿಗೆ ಕಷ್ಟಪಟ್ಟು ಹಿಂದಿಲಿ ಹೇಳ್ತಾ... ಮಧ್ಯೆ ತೆಲುಗು ಪದ ಸೇರ್ಸಿ...
ಧರ್ಮದ ಏಟು ತಿಂದ...ಗೊತ್ತಾ...??
ಯಾರು ಸರ್...? ಏನು
ಹೇಳ್ದ...??
ಆ ಹುಡುಗಿಗೆ “ ಮೇರೆಕು
ತುಮ್ ಬೋಲ್ನಾಜಿ... ಮೈ ತೆರೆಕು ರೇಪು ಕರೇಗಾ” ಅಂದ....
ಅಯ್ಯೋ ಸಿವ್ನೇ...ರೇಪ
ಮಾಡ್ತೀನಿ ಅಂದ್ರೆ ಯಾರು ತಾನೇ ಸುಮ್ನೆ ಇರ್ತಾರೆ ಸರ್...??
ಅಲ್ಲಾ ರೀ “ರೇಪು”
ಅಂದರೆ ತೆಲುಗಲ್ಲಿ ನಾಳೆ ಅಂತ. ಆಕೆಯ ಒಂದು ಕೆಲಸ ಕುವೈತ್ ಟ್ರಾಫಿಕ್ ಆಫೀಸಲ್ಲಿ ಮಾಡಿಸಿಕೊಡೋಕೆ
ಕೇಳಿಕೊಂಡಿದ್ದಳಂತೆ ಆಕೆ. ಅದನ್ನೇ ಆತ.. ನಾಳೆ ಮಾಡಿಸಿ ಕೊಡ್ತೀನಿ ಅನ್ನೋ ಅರ್ಥದಲ್ಲಿ
ಹೇಳಿದ್ದು....
ಹಹಹಹ, ಹಾಗಾ....??!!
ಅದು ಹೋಗಲಿ ನೀವು ಗೆಲ್ಲೋಕೆ ಅಲ್ವಾ ಹೋಗೋದು... ಮತ್ತೆ?? ಇಲ್ಲಿನ ಕೆಲ್ಸ ಬಿಟ್ಟು ಯಾಕೆ
ಹೋಗ್ತಿದ್ದೀರಾ...??
ಮತ್ತೆ ನೋಡಿ, ಪೂರ್ತಿ
ವಿಷಯ ತಿಳಿದುಕೊಳ್ಳದೇ ನಿಮ್ಮದೇ ವ್ಯಾಖ್ಯಾನ ಕಲ್ಪಿಸಿ ಅದಕ್ಕೆ ಕಥೆ ಕಟ್ಟೋದು ನಮ್ಮ ಟಿವಿ
ಪತ್ರಿಕೆ ವರದಿಗಾರರ ಕೆಲ್ಸ...ನೀವು ಪೂರ್ತಿ ತಿಳ್ಕೊಳ್ಳಿ ಮೊದಲು... ನಾನು ಕೆಲ್ಸ ಎಲ್ಲಿ
ಬಿಡ್ತಿದ್ದೀನಿ..? ಮೂರು ತಿಂಗಳ ರಜೆ ತಗೊಂಡು ಹೋಗ್ತಿದ್ದೀನಿ, ಕಲ್ಲು ಎಸೆಯೋದುss. ಬಿದ್ರೆ ಮಾವಿನ ಹಣ್ಣುss... ಬೀಳದೇ ಇದ್ರೆss..? ಸರ್ಕಾರಿ ರೋಡಿನ ಸರ್ಕಾರಿ ಕಲ್ಲು!! ಬಿದ್ದ ಕಲ್ಲಿನ ಹೆಸರಲ್ಲಿ ಕಂಟ್ರಾಕ್ಟರ್ ಕಾಣೆಯಾಯ್ತು
ಅಂತ ಅಡಿಶನಲ್ ಬಿಲ್ ಹಾಕ್ಸಿ ಅವನ ಹೊಟ್ಟೆ ಪಾಡು ಪೂರೈಸ್ಕೋತಾನೆ.
ಹೌದು ನಿಮಗೆ ಏನು
ಲಾಭ...?? ಇಲ್ಲಿದ್ರೆ ಏನಿಲ್ಲಾಂದ್ರೂ ದೇಶಕ್ಕೆ ಐದಾರು ಲಕ್ಷ ಮೂರು ತಿಂಗಳಲ್ಲಿ ವಿದೇಶಿ ವಿನಿಮಯ
ಸಿಗ್ತಿತ್ತು..
ಬಿಡ್ರೀ..., ಮೊನ್ನೆ ನೋಡಿದ್ರಾ..?
ಯಾವುದೋ ಟಿವಿ ಚಾನಲ್ ನವ್ರು ಎನ್ನಾರೈಗಳು ವಿದೇಶದಲ್ಲಿ ಈಗ ನೀವು ಹೇಳಿದ್ರಲ್ಲಾ ಹಾಗೆ...ಎಸಿ
ಕಾರು, ಎಸಿ ಮನೆ ಎಲ್ಲಾ ಇಟ್ಕೊಂಡು ಇಲ್ಲಿಗೆ ಬಂದು ದೌಲತ್ತು ತೋರ್ಸಿ ಓಡೋಗ್ತಾರೆ ದೇಶ
ದ್ರೋಹಿಗಳು...ಅಂತೆಲ್ಲಾ ಹೇಳಿರ್ಲಿಲ್ವಾ...??
ಹೌದು ಸರ್...ನನಗೂ ಎಂಥ
ಕೋಪ ಬಂತು ಅಂತೀರಿ..., ಅಲ್ಲಾss,.. ಅಪ್ಪ, ಅಮ್ಮ, ಬಂಧು-ಬಳಗ..ಅಷ್ಟ್ಯಾಕೆ ? ತಮ್ಮ ಮಕ್ಕಳ ವಿದ್ಯಾಭ್ಯಾಸ ನಾಡಲ್ಲಿ ನಡೀಲಿ ಅಂತ
ಮಕ್ಕಳನ್ನೂ ಅಲ್ಲಿ ಬಿಟ್ಟು ಇಲ್ಲಿ ಜೀತದ ಆಳಿನ ತರಹ ದಿನರಾತ್ರಿ ದುಡಿದು ಲಕ್ಷ ಲಕ್ಷ ವಿದೇಶೀ
ವಿನಿಮಯದ ದೇಶಕ್ಕೆ ಜಮಾವಣೆ ಮಾಡುವ ನಮ್ಮಂತಹ ಎನ್ನಾರೈ ಗಳು ಅಲ್ಲಿದ್ದು ಬಡವರ ಹೊಟ್ಟೆ ಹೊಡೆದು,
ಕೋಟಿ ಕೋಟಿ ದೋಚಿ ವಿದೇಶೀ ಬ್ಯಾಂಕುಗಳಲ್ಲಿ ಬೇನಾಮಿ ಖಾತೆಗಳಲ್ಲಿ ಕೂಡಿಡುವ ಹೆಗ್ಗಣಗಳದ್ದು ದೇಶ
ಸೇವೆ ಅನ್ನೋದಾದ್ರೆ... ನಮ್ಮದು ದೇಶ ದ್ರೋಹವೇ..??? ಉಗೀರಿ ಮುಖಕ್ಕೆ ಇಂತಹ ಭಟ್ಟಂಗಿ
ಟಿವಿಯವರಿಗೆ. ಅದು ಹೋಗಲಿ..., ನಿಮಗೆ ಹೇಗೆ ಲಾಭ ಆಗುತ್ತೆ ಹೇಳ್ಲಿಲ್ಲ..
ನೋಡಿ, ಊರಿಗೆ ಹೋಗಿ,
ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಹಾಕ್ತೀನಿ. ಆಗ ನನ್ನ ಬ್ಲಾಗ್, ಫೇಸ್ಬುಕ್ ಫ್ರೆಂಡ್ಸ್
ಎಲ್ಲಾರ್ಗೂ ಪಾರ್ಟಿ ಕೊಡ್ತೇನೆ...ಏನಿಲ್ಲ ಅಂದ್ರೂ ಎರಡು ಮೂರು ಸಾವಿರ ಜನ ಸೇರ್ತಾರೆ, ಯಾವ
ಪಾರ್ಟಿಯವರಿಗೂ ಛಳಿ-ಜ್ವರ ಬರೋ ವಿಷಯ ಅದಾಗುತ್ತೆ.....
ಎರಡು-ಮೂರು ಸಾವಿರ
ಜನಕ್ಕೆ ಅವರು ಹೆದರ್ತಾರಾ...ಹ್ಯಾಗೆ ಸರ್?
ನೋಡಿದ್ರಾ ಅದಕ್ಕೇ
ಸ್ವಲ್ಪ ಸಾಮಾನ್ಯ ಜ್ಞಾನ ಇರ್ಬೇಕು ಅನ್ನೋದು....!!, ಅಲ್ಲಾ ರೀ ಚುನಾವಣೆ ರಾಲಿಲಿ ೧೦ ಸಾವಿರ ಜನ
ಸೇರಿದ್ರೆ ೫೦-೬೦ ಸಾವಿರ ಓಟು ಗ್ಯಾರಂಟಿ ಅಂತಾರೆ ಅತಹುದರಲ್ಲಿ ನನ್ನ ಪಾರ್ಟಿಗೆ ಬರೋ ಮೂರು
ಸಾವಿರ ಜನ ಅಂದರೆ ೩೦ ಸಾವಿರ ಓಟು..!!! ಈಗ ಕರ್ನಾಟಕದಲ್ಲಿ ಎಷ್ಟು ಪಾರ್ಟಿ ಇವೆ ಹೇಳಿ? ಬಿಜೆಪಿ
ಲೇ ಮೂರು, ಇನ್ನು ಅವರ ಬಂಡಾಯ ಅಭ್ಯರ್ಥಿಗಳು, ಎರಡು ಕಾಂಗ್ರೆಸ್, ಎರಡು ಕಮ್ಯುನಿಸ್ಟ್, ಎರಡು
ಜನತಾ, ಅಲ್ಲಿಗೆ ೧೦-೧೧ ಪಾರ್ಟಿ, ಕ್ಷೇತ್ರದ ಮತದಾರರ ಸಂಖ್ಯೆ ೨-೩ ಲಕ್ಷ, ಸರೀನಾ??
ಹೌದು..ಸರ್..ನಿಜ...
ಆದರೆ ನಿಮ್ಮ ಪಾರ್ಟಿಗೆ ಬರುವವರು ಒಂದೇ ಮತಕ್ಷೇತ್ರದವರಲ್ಲವಲ್ಲ...??
ಹೌದು...ಆದರೆ ಅದು ನನಗೆ
ಗೊತ್ತು, ಚುನಾವಣೆ ಸಮಯದಲ್ಲಿ ಜನ ಸೇರಿದ್ದಾರೆ ಅಂದರೆ ಅವರು ಮತದಾರರು, ಬೆಂಬಲಿಗರು ಎನ್ನುವುದೇ ನಂಬಿಕೆ....
ಇನ್ನು ೫೦% ಮತ ಚಲಾಯಿಸೋದು ಹೆಚ್ಚು ಅಂದ್ರೆ ೧೫೦ ಸಾವಿರ (೧.೫ ಲಕ್ಷ), ಅಂದರೆ ಪ್ರತಿ ಪಕ್ಷಕ್ಕೆ
೧೫ ಸಾವಿರ ಅಥವಾ ಹೆಚ್ಚೆಂದರೆ ೨೫ ಸಾವಿರ,
ಸರಿನಾ?
ಹೌದು....ಹಾಗಾದ್ರೆ...???
ನಿಮ್ಮ ೨೦-೩೦ ಸಾವಿರ ಓಟಿನ ಕಲ್ಪನೆಯೇ ಅವರಿಗೆ ನಡುಕ ತರಿಸೋದು... ಅಲ್ವಾ..?
ಅಯ್ಯೋ ಅಲ್ಲೇ
ಇರೋದು..ಗಮ್ಮತ್ತು...೨೦-೩೦ ಇರ್ಲಿ ೨-೩ ಸಾವಿರಾನೂ ಸಿಗೊಲ್ಲ ನನಗೆ ಅಂತ ಗೊತ್ತು, ಆದರೆ ಅವರಿಗೆ
ಇದು ಬೆದರುಬೊಂಬೆ... ಅಂತಿಮ ಕ್ಷಣದಲ್ಲಿ ನನ್ನ ನಾಮಪತ್ರ ವಾಪಸ್ ಅತಗೋತೀನಿ ಅಂತ...ಮುಖ್ಯವಾದ
ಪಾರ್ಟಿಗಳಿಂದ ಹದಿನೈದು ಇಪ್ಪತ್ತು ಲಕ್ಷ ತಗೊಂಡು, ಐವತ್ತು ಅರವತ್ತು ಲಕ್ಷ ಮಾಡೊಂಡು ವಾಪಸ್
ಕುವೈತಿಗೆ... ಮತ್ತೆ ನನ್ನ ಕೆಲ್ಸಕ್ಕೆ...?? ಹ್ಯಾಗೆ..??
ಓಹ್..ಅಬ್ಬಬ್ಬಾ...ಎಂಥಾ
ಪ್ಲಾನು... ಹೌದು ೫೦-೬೦ ಲಕ್ಷ, ಏನ್ಮಾಡ್ತೀರಾ...??
ನಿಮಗೆ
ಗೊತ್ತಿಲ್ವೇನ್ರೀ...?? ನನಗೆ ಬರೋ ಸಂಬಳಾನೇ ನನಗೆ ಸಾಕು... ಸಂಬಳದ ಸಮಾನ ಮತ್ತು ಅಲ್ಲಿ ಖರ್ಚಾದ
ಹಣ ಇಟ್ಟುಕೊಂಡು ಮಿಕ್ಕಿದ್ದು ಕನ್ನಡ ನಾಡಲ್ಲೇ ನನ್ನ ಫೇಸ್ಬುಕ್ ಮಿತ್ರರು, ಬ್ಲಾಗ್ ಮಿತ್ರರು
ಮಾಡ್ತಿರೋ ಹಲವಾರು ಪುಣ್ಯಕಾರ್ಯಗಳಿಗೆ ಕೊಟ್ಟು ಬಿಡ್ತೇನೆ... ಗೋಸುಂಬೆ ರಾಜಕಾರಣಿಗಳು
ಅನಾಥಾಶ್ರಮಗಳಿಗೆ ಅಂತ ಏನೂ ಕೊಡೊಲ್ಲ...ಅವರಿಗೆ ಕೊಡ್ತೇನೆ...
ಸೂಪರ್ ಐಡಿಯಾ ಸರ್...
ನಾನೂ ಬರ್ತೀನಿ...ನನ್ನ ಕೆಲ ಸ್ನೇಹಿತರೂ ನಿಮ್ಮ ಪಾರ್ಟಿ ಸಮಯಕ್ಕೆ ಬಂದು ನಿಮ್ಮ ತೂಕ ಇನ್ನೂ
ಹೆಚ್ಚುವಂತೆ ನೋಡ್ಕೋತೇವೆ..... ನಿಮ್ಮ ಈ “ಕೆರೆಯ ನೀರನು ಕೆರೆಗೆ ಚಲ್ಲಿ” ಕಾಯಕಕ್ಕೆ ನಮ್ಮ
ಕೈಲಾದ ಸಹಾಯ ಮಾಡ್ತೀವಿ.