ಮೈಟೋಕಾಂಡ್ರಿಯಾ (ಜೀವಕೋಶ ಶಕ್ತಿ ತಾಣ/ಕೇಂದ್ರ)
ಶಕ್ತಿ ಉತ್ಪಾದಿಸುವ ಕೋಶಾಂಶಗಳು (ಆರ್ಗನೆಲ್ಲೆ)
ಮೈಟೋಕಾಂಡ್ರಿಯಾಗಳನ್ನು “ಕೋಶ ಶಕ್ತಿತಾಣ” ಎಂದು ಕರೆಯುವುದೇ ಸರಿ,
ಶಕ್ತಿ ಕೇಂದ್ರ ಎಂದರೆ ಯಾವುದಕ್ಕೆ ಕೇಂದ್ರ? ಮತ್ತೆ ಬೇರೆ ಕಡೆಯೂ ಶಕ್ತಿ ಉತ್ಪಾದನೆಯಾಗುತ್ತದೆ
ಎಂದಾಗುತ್ತದಲ್ಲವೇ..?ಆದರೆ ಜೀವಕ್ರಿಯೆಗಳಿಗೆ ಬೇಕಾಗುವ ಶಕ್ತಿ ಉತ್ಪಾದನೆಯಾಗುವುದು
ಮೈಟೋಕಾಂಡ್ರಿಯಾದಲ್ಲೇ. ಹಾಗಾಗಿ ಕೇಂದ್ರ ಎನ್ನುವುದಕ್ಕಿಂತಾ ತಾಣ ಎಂದರೆ ಸೂಕ್ತವೇನೋ.
ಮೈಟೋಕಾಂಡ್ರಿಯಾ ಪ್ರತಿ ಜೀವಕೋಶದ ಜೀವಜಲದಲ್ಲಿ (ಸೈಟೋಪ್ಲಾಸಮ್)
ಕಂಡುಬರುವ ಕೋಶಾಂಶ (ಆರ್ಗನೆಲ್ಲೆ) ಗಳಲ್ಲಿ ಒಂದು. ಜೀವಕೋಶಗಳ ಕಾರ್ಯನಿರ್ವಹಣೆಗೆ ಬೇಕಾಗುವ
ಶಕ್ತಿಯನ್ನು ಉತ್ಪಾದಿಸುವ ಕೆಲಸ ಈ ಕೋಶಾಂಶಗಳದ್ದು. ಉದಾಹರಣೆಗೆ- ನರವ್ಯೂಹ ಮತ್ತು ಮಿದುಳಿನ
ಕೋಶಗಳ ಸಂವೇದಿ ಸೂಚನೆಗಳ ಪ್ರವಹನೆಗೆ ಶಕ್ತಿ ಬೇಕಾಗುತ್ತದೆ, ಆಶಕ್ತಿಯನ್ನು ಮೈಟೋಕಾಂಡ್ರಿಯಾ
ಉತ್ಪಾದಿಸುತ್ತವೆ. ಮಾಂಸ ಖಂಡಗಳಿಗೂ ಶ್ರಮಿಸಲು ಬೇಕಾಗುವ ಶಕ್ತಿಯನ್ನು ಮೈಟೋಕಾಂಡ್ರಿಯಾ
ಒದಗಿಸುತ್ತವೆ. ವಿದ್ಯುತ್ ಕೋಶಗಳಿಂದ ಸಿಗುವ ಶಕ್ತಿಯಂತಹ ರಾಸಾಯನಿಕ ಶಕ್ತಿಯನ್ನು
ಮೈಟೋಕಾಂಡ್ರಿಯಾ ಉತ್ಪಾದಿಸುತ್ತವೆ. ಅಡಿನೋಸಿನ್ ಮುಮ್ಮಡಿ ಫಾಸ್ಫೇಟ್ (ಅ.ಮು.ಫಾ) ಅಥವಾ ಎ.ಟಿ.ಪಿ.
ಜೀವಕೋಶಗಳ ಕೆಲಸ ನಡೆಯಲು ಬೇಕಾದ ನಗದು ಅ.ಮು.ಫಾ. ಮೈಟೋಕಾಂಡ್ರಿಯಾ ಅ.ಮು.ಫಾ. ತಯಾರಿಕೆಗೆ ಬಳಸುವ
ಯಾಂತ್ರಿಕ ವ್ಯವಸ್ಥೆಯನ್ನು ಎಲೆಕ್ಟ್ರಾನ್ ಟ್ರಾನ್ಸ್ಪೋರ್ಟ್ ಚೈನ್ ಅಥವಾ ವಿದ್ಯುನ್ಮಾನ ಸಂಚಾರ
ಸರಣಿ ಎನ್ನುತ್ತೇವೆ. ಈ ಸರಣಿ ಜೊತೆಜೊತೆ ಕೆಲಸ ನಿರ್ವಹಿಸುವ ಪ್ರೋಟೀನು ಗುಂಪುಗಳ ನಾಲ್ಕು
ಸಂಕೀರ್ಣ ವ್ಯವಸ್ಥೆಗಳ ಅನುಬಂಧವಾಗಿದೆ. ಐದನೇ ವ್ಯವಸ್ಥೆಯ ಮೂಲಕ ಶಕ್ತಿ ಉತ್ಪಾದನೆಯಾಗುತ್ತದೆ.
ಮೈಟೋಕಾಂಡ್ರಿಯಾ ಜೀವವಿಕಾಸ ಸರಣಿಯಲ್ಲಿ ವಿಕಸಿತ ಜೀವಿ (ಪ್ರಾಣಿ
ಮತ್ತು ಸಸ್ಯಗಳನ್ನೊಳಗೊಂಡಂತೆ ಮಾನವನವರೆಗೂ) ಮತ್ತು ಅತಿ ಪ್ರಾಥಮಿಕ ಹಂತದ ಬ್ಯಾಕ್ಟೀರಿಯಾಗಳ ನಡುವಿನ
ಸಂಬಂಧವನ್ನು ಪ್ರತಿಪಾದಿಸುವ ಪ್ರಮುಖ ಕೊಂಡಿಯಾಗಿದೆ. ಬ್ಯಾಕ್ಟೀರಿಯಾಗಳಲ್ಲಿ ಕೋಶಕೇಂದ್ರ
ಇರುವುದಿಲ್ಲ ವಂಶಾಭಿವೃದ್ಧಿಗೆ ಬೇಕಾದ ವಂಶವಾಹಿನಿಗಳು (ಡಿ.ಎನ್.ಎ) ಕೋಶದಲ್ಲೆಲ್ಲಾ
ಕಂಡುಬರುತ್ತವೆ. ಜೀವವಿಕಾಸವಾದಂತೆ ಕೋಶಗಳಲ್ಲಿ ವಿವಿಧತೆ ಮೂಡಿದಂತೆ ಅಂಗಾಂಶ ರೂಪುಗೊಂಡಂತೆ, ದೇಹ
ರಚನೆ, ರೂಪು ರೇಷೆ ಇತ್ಯಾದಿಗೆ ಬೇಕಾದ ಸಂಕೇತಗಳನ್ನೊಳಗೊಂಡ ಡಿ.ಎನ್.ಎ. ಕೋಶ ಕೇಂದ್ರದಲ್ಲಿ
ಸಾಂದ್ರೀಕೃತವಾದವು. ಜೀವ ಮತ್ತು ಕೋಶ ಕ್ರಿಯೆಗಳಿಗೆ ಬೇಕಾಗುವ ಶಕ್ತಿಯ ಉತ್ಪಾದನೆಗೆ ಬೇಕಾಗುವ
ಎಲ್ಲಾ ಅಂಶಗಳಿಗೆ ಸಂಕೇತಗಳನ್ನೊಳಗೊಂಡ ಡಿ.ಎನ್.ಎ. ಮೈಟೋಕಾಂಡ್ರಿಯಾದಲ್ಲಿ ಉಳಿದುಕೊಂಡಿತು. ಡಿ.
ಎನ್ ಎ. ಒಂದು ತಿರುಚಿದ ಏಣಿಯ ರೂಪದಲ್ಲಿ ವಿನ್ಯಾಸ ಹೊಂದಿರುವ ಕೇಂದ್ರ ಧಾತುಗಳ
(ನ್ಯೂಕ್ಲಿಯೋಟೈಡ್) ಆಕಾರವಾಗಿದೆ. ಮಾನವ (ಹೆಚ್ಚಿನ ಎಲ್ಲಾ ಪ್ರಾಣಿಗಳಲ್ಲೂ) ದೇಹದ
ಕೋಶಕೇಂದ್ರದಲ್ಲಿರುವ ವರ್ಣತಂತುಗಳಲ್ಲಿ ಮತ್ತು ಕೋಶ ಜೀವಜಲದಲ್ಲಿನ ಮೈಟೋಕಾಂಡ್ರಿಯಾದಲ್ಲಿ “ಡಿ.ಎನ್.ಎ.”
ಕಂಡುಬರುತ್ತದೆ. ಜೀವಿಗಳಲ್ಲಿ ಮಾರ್ಪಾಡುಗಳು ಕಂಡುಬರಲು ಕೋಶ ಕೇಂದ್ರದ ಡಿ ಎನ್ ಎ ಕಾರಣ.
ಮೈಟೋಕಾಂಡ್ರಿಯಾ ಎಲ್ಲಾ ಜೀವಿಗಳ ಅತ್ಯಾವಶ್ಯಕ ಶಕ್ತಿ ಉತ್ಪಾದನೆಗೆ ಕಾರಣವಾಗಿರುವುದರಿಂದ
ಇದರಲ್ಲಿನ ಡಿಎನ್ ಎ ನಲ್ಲಿ ಮಾರ್ಪಾಟುಗಳು ಆಗುವುದಿಲ್ಲ.
ಮಾನವ ದೇಹದಲ್ಲಿ ಮೈಟೋಕಾಂಡ್ರಿಯಾ ಹೊಂದಿರುವ ಡಿ ಎನ್ ಎ ಪ್ರಮಾಣ ಕೇವಲ
16,500 ಮೂಲ ಜೋಡಿ (ಬೇಸ್ ಪೇರ್ಸ್) ಧಾತುಗಳು (ನ್ಯೂಕ್ಲಿಯೋಟೈಡ್). ಅದೇ ಕೋಶಕೇಂದ್ರದ
ವರ್ಣತಂತುಗಳ ಮೇಲೆ ಕಂಡುಬರುವ ಡಿ,ಎನ್.ಎ ಪ್ರಮಾಣ 30 ಕೋಟಿ ಮೂಲ ಜೋಡಿ ಧಾತುಗಳು.
ಇಷ್ಟು ಕಡಿಮೆ ಡಿ ಎನ್ ಎ. ಹೊಂದಿದ್ದರೂ ಮೈಟೋಕಾಂಡ್ರಿಯಾ ಜೀವ ಶಕ್ತಿ ತಾಣ ಹಾಗಾಗಿ ಮಹತ್ತರ
ಕೋಶಾಂಶ.