ಬನ್ನಿ ಬನ್ನಿ ನೋಡಿರಿಲ್ಲಿ ಮಳೆಯು ಬಂದಿದೆ
Sunday, August 3, 2025
Saturday, May 17, 2025
ಯಾರ ಆಯ್ಕೆ ?
ಪ್ರಹಸನ: ಆಜಾದ್ ಐ. ಎಸ್.
ಸಲಾಂ
ಅಲೇಕುಮ್…
(ನಿಮಗೆ
ಶುಭವಾಗಲಿ)
ವಾಲೆಕುಂ
ಅಸ್ಸಲಾಮ್ ವ ರಹ್ಮತುಲ್ಲಾಹಿ ವ ಬರಕಾತುಹು …
(ನಿಮಗೂ
ಶುಭವಾಗಲಿ ದೇವರ ಕರುಣೆ ಮತ್ತು ಏಳಿಗೆ ಕೃಪೆ ಮೂಲಕ)
ಒಳಗಡೆ ನನ್ನ
ರೂಮಿನಲ್ಲಿ ಕಾದಂಬರಿಯೊಂದನ್ನು ಓದುತ್ತಾ ಕೂತಿದ್ದ ನನಗೆ ಅಬ್ಬಾಜಾನ್ ರು ಮನೆಗೆ ಬಂದವರ ಸಲಾಂ (ಶುಭ ಕೋರಿಕೆ) ಗೆ ಪ್ರತಿ ಸಲಾಂ ಕೋರಿದ್ದು ಕೇಳಿಸಿತು. ಚಿಕ್ಕಪ್ಪನೂ ಅವರ ಮಾತಿಗೆ ದನಿಗೂಡಿಸಿದ್ದೂ
ಕೇಳಿಸಿತು… ಅಷ್ಟರಲ್ಲಿ
ಸೋದರಮಾವನೂ ಎಲ್ಲಿಂದಲೋ ಬಂದವನು –
ಬಂದವರಿಗೆ ಸಲಾಂ ಮಾಡಿದಾಗ ಎಲ್ಲವೂ ಯೋಜಿತ ಎನಿಸಿದ್ದು ಹೌದು..
ಅದೂ ಮಾವ ಬಂದ
ಎಂದರೆ ನನ್ನ ಮದುವೆ ಬಗ್ಗೆಯೇ ಎಂದು ನನಗೆ ಖಾತರಿಯಾಯ್ತು.
ನೆಪಕ್ಕೆ
ಪುಸ್ತಕ ಕೈಯಲ್ಲಿ. ಕಿವಿ ಮಾತ್ರ
ಸಲ್ಲಾದಲ್ಲಿ ನಡೆಯುತ್ತಿದ್ದ ಸಲ್ಲಾಪದತ್ತಲೇ ಎನ್ನುವುದನ್ನು ಸ್ವಲ್ಪ ಮಾತ್ರ ತೆರೆದಿದ್ದ ನನ್ನ
ಕೋಣೆಯ ಬಾಗಿಲನ್ನು ಇನ್ನೂ ಹೆಚ್ಚು ತೆರೆಯಲು ಮುಂದಾದ ನನ್ನ ಕಾಲೇ ಸೂಚಿಸಿತ್ತು.
ಮಾವ – “ಏನು ಓದಿದ್ದಾಳೆ ಮಗಳು..ಖಾನ್ಸಾಬ್ ?”
ನನ್ನ ಕಿವಿ
ನೆಟ್ಟಗಾಯಿತು… ಕಾಲು ಮತ್ತೆ
ತನ್ನ ಚೇಷ್ಟೆ ಮುಂದುವರೆಸಿತ್ತು…
ಬಾಗಿಲು ಪೂರ್ತಿ ತೆರೆದಿರಲಿಲ್ಲವಲ್ಲಾ..?
ಬಂದವರು.. ಖಾನ್ಸಾಬ್ ಎಂದದ್ದು
ಮಾತ್ರ ಗೊತ್ತಾಯ್ತು.. ಯಾವ ಖಾನ್
ಸಾಬ..?? ಶಾರೂಕ್ಕಾ? ಅಮೀರಾ..?? ಸಲ್ಮಾನಾ..???
“ಎಮ್ ಎಸ್ಸಿ ಮಾಡಿದ್ದಾಳೆ, ಪಿಎಚ್ಡಿ ಮಾಡಬೇಕು ಅಂತ ಹೇಳ್ತಿದ್ಳು…ಮದ್ವೆ ಮಾಡ್ಕೊ..ಗಂಡ ಮುಂದಕ್ಕೆ ಓದ್ಸಿದ್ರೆ ಓದು ಅಂದೆ….”
ಖಾನ್ಸಾಬ್ರು
ಹೇಳಿದ್ದು ಕೇಳಿ ನನ್ನ ಆಸಕ್ತಿ ಹೆಚ್ಚಾಯ್ತು…
ನನ್ನ ಅಬ್ಬು
ದನಿ ಕೇಳಿಸ್ತು.. “ಇವನಿಗೂ
ಹುಡುಗಿ science ಓದಿರೋಳು ಆದರೆ ಒಳ್ಳೇದು ಅಂತ ಇವನ ಅಮ್ಮಿಜಾನ್ ಹೇಳ್ತಿದ್ಳು” …
ಅರೆ..ಹೌದಾ..? ನಾನು ಹೇಳಿದ್ದನ್ನ ಅಮ್ಮೀಜಾನ್..ಅಬ್ಬೂ ಕಿವಿಗೆ ಹಾಕೇ ಬಿಟ್ಟಿದ್ದಾಳಾ..??
ಡಾಕ್ಟ್ರಾದ್ರೂ
ಅಮ್ಮಿಜಾನ್ ಅಬ್ಬೂ ಗೆ ಬಹಳ ವಿಧೇಯಳು…,
ಒಂದು ರೀತಿಲಿ ಅಬ್ಬೂ ನ ಬಹಳವಾಗಿ ಬೆಳೆದ ಬ್ಯುಸಿನೆಸ್ ಅದರಿಂದ ಅಬ್ಬೂಗೆ ಇದ್ದ ವರ್ಚಸ್ಸೇ
ಇದಕ್ಕೆ ಕಾರಣ..
ಚಿಕ್ಕಪ್ಪ – “ಮದುವೆ ಆದಮೇಲೆ ಇವನ ಲ್ಯಾಬಲ್ಲೇ ರೀಸರ್ಚ್
ಮಾಡ್ತಾ ಪಿ.ಎಚ್.ಡಿ ಮಾಡ್ತಾಳೆ ಬಿಡಿ.., ಅಲ್ವಾ ಭಾಭಿಜಾನ್…?”
ಚಿಕ್ಕಪ್ಪ
ಅಷ್ಟರಲ್ಲಿ ಕ್ಲಿನಿಕ್ ನಿಂದ ಮನೆಗೆ ಬಂದ ಅಮ್ಮಿನ ಕೇಳಿದ…
ಅಮ್ಮಿ – “ಹೌದು.. ಅಂದಹಾಗೆ …ಹುಡುಗಿ ಫೊಟೋ
ಇದೆಯಾ..?”
ಖಾನ್ ಸಾಬ್- “ಕಳುಹಿಸಿ
ಕೊಡುವೆ ಬೆಹೆನ್ ಜೀ... ಒಮ್ಮೆ ನೀವೆಲ್ಲಾ ಬನ್ನಿ.. ನಮ್ಮ ಮನೆಗೆ ಹುಡುಗಿನ ನೋಡೋ ರಿವಾಜ್
ಆಗಿಬಿಡಲಿ..”
ಅಮ್ಮಿ- “ಆಗಲಿ
..ಭಾನುವಾರ ಬರ್ತೇವೆ ನಾವು ೬-೭ ಜನ...ಅಲ್ವಾ ಭಯ್ಯಾ..??”
ಮಾಮ- “ಹೌದು...
ಅಂದಹಾಗೆ .. ಕಾಲೇಜ್ ಪಕ್ಕ.. ದೊಡ್ಡ ಕಾಂಪೌಂಡ್ ಇರೋ ಮನೆನೇ ಅಲ್ವಾ..? ನಿಮ್ಮದು?”.
ಮಾಮಾ ಸ್ವಲ್ಪ
ಏರು ದನಿಯಲ್ಲಿ ಹೇಳಿದ್ದು ನನಗೆ ಕೇಳಿಸಲೆಂದೇ ಎನ್ನುವುದನ್ನು ಯಾರೂ ಗುರುತಿಸಲಿಲ್ಲ, ಸದ್ಯ !!
ಖಾನ್ ಸಾಬ್- “ಹೌದು,
ಅದೇ... ಬನ್ನಿ... ಆದರೆ ಮಾಫ್ ಮಾಡ್ಬೇಕು ಹುಡುಗನ್ನ ಕರ್ಕೊಂಡ್ ಬರ್ಬೇಡಿ... ಮೊದಲೇ ಹುಡುಗನಿಗೆ
ಹುಡ್ಗಿನ ತೋರ್ಸೋ ರಸಂ ನಮ್ಮಲ್ಲಿಲ್ಲ...ಮದ್ವೆ ನಿಶ್ಚಯ ಆದ್ಮೇಲೆ ಒಮ್ಮೆ ಹುಡುಗನ್ನ ಕರ್ಕೊಂಡು
ಬನ್ನಿ... ತೊಂದರೆ ಇಲ್ಲ...”
“ಥತ್ ಇವ್ನಾ...
ಎಂಥಾ ಮಾವನೋ ಇವ್ನು...? ಅನ್ನಿಸ್ತು .. ಪರ್ವಾಗಿಲ್ಲ ಬಿಡು..ಅಡ್ರೆಸ್ ಗೊತ್ತಾಯ್ತಲ್ಲ.. ನಾನೇ
ಹೆಂಗೋ ನೋಡ್ತೀನಿ ಹಡ್ಗೀನ..” ಅಂದ್ಕೊಂಡು ಬೇಸರ ಆದರೂ ಸುಮ್ಮನ್ನಾದೆ.
ಹುಡುಗೀನ.. ಒಂದು
ದಿನ ಎಲ್ಲಾ ಹೋಗಿ ನೋಡ್ಕೊಂಡ್ ಬಂದ್ರು.....
ಆಮೇಲೆ ಮದ್ವೆ
ನಿಶ್ಚಯಕ್ಕೆ ಅಂತ ಮಾತ್ನಾಡ್ಕೊಳ್ಳೋವಾಗ ..ಮಾವ ಕೇಳ್ದ.. “ಮುನೀರ್..ನಿನಗೆ ಹುಡ್ಗಿನ ಮೊದ್ಲೇ
ನೋಡ್ಬೇಕು ಅಂತ ಅನ್ಸೊಲ್ವೇನೋ..?” ಕೀಟಲೆ ಮಾಡ್ತಾ..
“ಮಾಮ್..
ನಾನು ಆಗಲೇ ಅವಳ ಫೋಟೋ ತಕ್ಕೊಂಡಾಯ್ತು...” ಅಂದೆ ಕಣ್ಣು ಮಿಟಕಿಸ್ತಾ,,
“ಭಲೆ ಪಾಕಡಾ
ಕಣೊ ನೀನು..” ಅಂತ ಬೆನ್ನಿಗೆ ಮೆತ್ತಗೆ ಗುದ್ದುತ್ತಾ ಮಾವ ಅಂದ..
“ಮುಂದಿನ
ಭಾನುವಾರ ಖುದ್ದಾಗಿ ನೋಡುವೆಯಂತೆ ಬಿಡು” ಅಂದ...
ಭಾನುವಾರ
ಎಲ್ಲಾ ಹೋದ್ವಿ, ಶಾಸ್ತ್ರ ಎಲ್ಲಾ ಮುಗೀತು, ಮದ್ವೆ ನಿಶ್ಚಯ ಆಯ್ತು.. ಅಮ್ಮಿ ಅಂದ್ಳು...
“ಮುನೀರ್
ಬೇಟಾ, ಹುಡುಗೀನ ನೋಡಬೇಕಂತೆ ..ಕರೆಸ್ತೀರಾ ..?”
ಹುಡುಗಿ ಮಾವ
ಇರ್ಬೇಕು,.. ಹುಡುಗೀನ ಕರ್ಕೊಂಡ್ ಬಂದ...
ಮಾವ ಅಂದ – “ನೋಡೋ
ಮುನೀರಾ ಹುಡ್ಗೀನ... ಹುಡ್ಗಿ ಥರ ಕತ್ತು ಬಗ್ಗಿಸ್ಕೊಂಡ್ ಯಾಕೆ ಕೂತಿದ್ದೀಯಾ?”
ಅಂತ ಹತ್ತಿರ
ಬಂದು ಕಿವೀಲಿ..
“ನೋಡೋ..ಫೋಟೋದಲ್ಲಿ
ನೋಡೋಕೂ..ಖುದ್ದಾಗಿ ನೋಡೋಕೂ..ಫರಕ್” ಇದೆ ಅಂದ
ನಿಧಾನಕ್ಕೆ
ಕತ್ತೆತ್ತಿ ನೋಡಿದೆ...ಕ್ಷಣಕ್ಕೆ ದಂಗಾದೆ...
ಮಾವ ನನ್ನ
ಗಮನಿಸ್ತಾನೇ ಇದ್ದ...
ಖಾನ್ ಸಾಬ್
ಅಂದ್ರು ..”ಆಯ್ತು... ಮದುವೆ ದಿನ ನಿಮಗೆ ನಮಗೆ ಅನುಕೂಲ ಆಗೋಹಾಗೆ ಇಟ್ಕೊಳ್ಳೋಣ”. ಅಂದ್ರು
..ಎಲ್ಲಾ ಏನೇನೋ ಮಾತನಾಡ್ತಿದ್ರು... ನನಗೆ ಗೊಂದಲ...
ನಾವು ಹೊರಟು
ನಿಂತ್ವಿ...
ಮಾವ ಮೊದಲೇ
ಹೊರಗೆ ಬಂದಿದ್ದ ನನ್ನ ಹತ್ತಿರ ಬಂದು..”ಹೇಳ್ಲಿಲ್ವಾ ಖುದ್ದಾಗಿ ನೋಡೋಕೂ ಫೋಟೋಲಿ ನೋಡೋಕೂ ಫರಕ್
ಇರುತ್ತೆ ಅಂತ.. ಹುಡ್ಗಿ ಸೊಗ್ಸಾಗಿದ್ದಾಳಲ್ಲೋ...ಯಾಕೆ ಒಂಥರಾ ಮಾಡಿದೆ ನೀನು..?”
ನಾನು- “ಮಾಮ್
ಆದರೆ ಫೋಟೋಗೂ ಖುದ್ದಾಗಿ ನೋಡಿದ್ದಕ್ಕೂ ತುಂಬಾ ವ್ಯತ್ಯಾಸ ಇದೆ... ಚನ್ನಾಗೇ
ಇದ್ದಾಳೆ..ಆದರೆ..ಫೋಟೋ.... ?..ಅಂದಹಾಗೆ ಖಾನ್ಸಾಹೇಬ್ರಿಗೆ ಒಬ್ಬಳೇ ತಾನೇ ಮಗಳು ಇರುವುದು?”
ಮಾವ- “ಹೌದು
ಒಬ್ಬಳೇ...ಯಾಕೆ..?”
ನಾನು ಕದ್ದು
ಮುಚ್ಚಿ ತೆಗೆದಿದ್ದ ಹುಡುಗಿ ಫೋಟೋನ...ತೋರಿಸಿದೆ....
ಮಾವ..ಬಿದ್ದು
ಬಿದ್ದು ನಗತೊಡಗಿದ...ಸದ್ಯಕ್ಕೆ ..ಅಮ್ಮಿ ಅಬ್ಬೂ ಎಲ್ಲಾ ಕಾರಿನೊಳಕ್ಕೆ ಕೂತು ಹೊರಟಿದ್ರು...
ನಿನ್ನ ಮಾಮನೂ ನೀನೂ ನಿಮ್ಮ ಕಾರಲ್ಲಿ ಬನ್ನಿ ಅಂತ ಹೇಳ್ತಾ..
ನಾನಂದೆ....”ಮಾಮ್
ಯಾಕೆ ನಗ್ತೀಯಾ?”
“ಈ
ಫೋಟೋದಲ್ಲಿರೋ ಹುಡ್ಗಿ ಬೇಕಾ...? ಹಂಗಾದರೆ..ಮತ್ತೆ ಖಾನ್ ಸಾಬ್ರನ್ನ ಕೇಳಬೇಕು ಅಂದ..ನಗ್ತಾ...?”
“ಮಾಮ್, ನಗು
ನಿಲ್ಸಿ ಹೇಳ್ತಿಯಾ ಏನ್ ವಿಷ್ಯಾ..ಅಂತ.”..ಅಂದೆ ಸ್ವಲ್ಪ ಬೇಜಾರಿಂದ...
“ಲೋ..ಮುನೀರ....ಫೋಟೋದಲ್ಲಿರೋದು...
ಖಾನ್ಸಾಹೇಬರ ಎರಡನೇ ಹೆಂಡತಿ”
ಮಾಮ ಅಂದ
ಮತ್ತೆ ನಗ್ತಾ...
ಈಗ ನನಗೂ ನಗು
ತಡೆಯಲಾಗದೇ...ಮಾಮನ ಜೊತೆ ನಗ್ತಾ ಅಂದೆ...
“ಸದ್ಯ ಮೊದಲೇ
ಗೊತ್ತಾಯ್ತು...ಇಲ್ಲಾಂತಿದ್ದಿದ್ರೆ.. ಮದ್ವೆ ಆದ್ಮೇಲೆ...ಅತ್ತೆ ಮನೆಲಿ ‘ಫರಕ್’
ಆಗ್ತಿತ್ತು...”
Sunday, October 22, 2023
ಹುಟ್ಟು ದಾಖಲು
ಜಗದೊಳಗೆ ಬಂದೆ
ಆಗ ಕಾಗದ..
ಮಗುವನಾಡಿಸುತ
ಕಾಣಿಕೆ ಕೊಟ್ಟ ನೋಟು
ಮೌಲ್ಯ ಕಾಗದ..
ಬಳಪ ಸ್ಲೇಟುಗಳ
ಮೀರಿ ಬೆಳೆದೆ ಬರೆಯಲು
ಬಲಿತ ಕೈಗಳಿಗೆ ಪೆನ್ಸಿಲ್ಲು
ಬರೆಗೆ ಕಾಗದ..
ಅಕ್ಕರಗಳಕ್ಕರದಿ
ದುಂಡಾಗಿಸೆ ಕಾಪಿ ಪುಸ್ತಕ
ಆತ ಈಶ, ಬಸವ ಕಮಲ
ಬಣ್ಣದ ತಗಡಿನ ತುತ್ತೂರಿಗೆ
ಬಾಲ ಕಾಗದ..
ಮೊದಲ ಪರೀಕ್ಷೆ
ಪರಿಚಯವಿರದ ನಿರೀಕ್ಷಕ
ಉರುಹಚ್ಚಿದ ಹಾಳೆಗಳು
ಹಾಗೆಯೇ ಮೂಡಿಸಲು
ಕಾತರದ ಉತ್ತರಕೆ ಮತ್ತೆ
ಅದೇ ಕಾಗದ..
ಪಬ್ಲಿಕ್ ಪರೀಕ್ಷೆಯ
ಮೊದಲ ಮೌಲ್ಯಮಾಪನ
ನನಗಿಲ್ಲದ ಕುತೂಹಲ
ಅಪ್ಪ ಅಮ್ಮ ಹಿರಿಯರಿಗೆ
ಅದಕು ಮಿಗಿಲು ಗುರುಗಳಿಗೆ
ಕೊನೆಗೂ ಬಂತು ಕಾಗದ
ಆಯ್ತು ಕಾಗದ, ಪತ್ರ..
ಅಲ್ಲಿಂದ ಮೊದಲಾಯ್ತು
ಕಾಗದದ ವಿಭಿನ್ನ ರೂಪ
ಅಂಕವಿದ್ದ ಕಾಗದ- ಅಂಕಪತ್ರ
ಹೈಸ್ಕೂಲಿಗೆ ಹೋಗಲು
ಬೇಕಲ್ಲ ವರ್ಗಾವಣೆ ಪತ್ರ,
ಹೈಸ್ಕೂಲಿನ ಫೀಸ್ ಗೆಂದು
ಕೊಟ್ಟ ನೋಟುಗಳು -ಕಾಗದ
ಎಲ್ಲ ಕಾಗದ..
ಕಾಲೇಜುಗಳ ಉಪನ್ಯಾಸ
ಲೇಖಕ್, ಪ್ರಯೋಗ ದಾಖಲಿಗೆ
ರಾಶಿ ರಾಶಿ ನೋಟ್ಸುಗಳಿಗೆ
ಬಸ್ ಕಂಡರಿಗೆ ಕೊಡಲು-ನೋಟು
ಅವನಿಂದ ಪಡೆಯಲು ಟಿಕೆಟ್ಟು
ಕ್ಯಾನ್ಟಿನಿನ ಉಪಾಹಾರದ
ಕೂಪನ್ನು
ಲೆಕ್ಚರರಿಗೆ ಹಾರಿಸೋ
ರಾಕೆಟ್ಟು
ಹುಡುಗಿಗೆ ಪ್ರೇಮದಿ
ಕೊಟ್ಟ ಪತ್ರ
ಬಗೆ ಬಗೆಯ ಕಾಗದ..
ಚುನಾವಣೆ ಘೋಷಣೆ ಕಾಗದ
ಅಭ್ಯರ್ಥಿ ಆಶಯ ಕಾಗದ
ಘೋಷಣಾ ಪತ್ರ ಕಾಗದ
ಕರಪತ್ರ ಹಂಚುವ ನೋಟೂ ಕಾಗದ..
ಮತಗಟ್ಟೆಯಲೂ ಕಾಗದ
ಫಲಿತಾಂಶದ ಪಟ್ಟಿ ಕಾಗದ
ಗೆದ್ದವರ ಹಸ್ತಾಕ್ಷರಕೂ ಕಾಗದ
ಎಲ್ಲ ಪ್ರಕಾಶಿಸುವ ಕಾಗದ
ರಾಜಕೀಯದ ಕಾಗದ..
ಬಂತು ಸಮಯ ತಾನೇ ಗಳಿಸಲು
ಅಪ್ಪನ ಗಳಿಕೆಗೆ ನೆರವಾಗಲು
ಅಮ್ಮನಿಗೆ ಹೆಮ್ಮೆ ಎಣಿಸಲು
ಮೊದಲ ನೌಕರಿಗೆ ಆರ್ಡರು
ಮದುವೆಯ ಕರೆಯೋಲೆ
ಕಂದನ ಹುಟ್ಟು ಹಬ್ಬದ
ಓಲೆ
ಮನೆ ಖರೀದಿಯ ಪತ್ರ
ನೀರು ವಿದ್ಯುತ್ತು ಬಳಕೆಯ
ಬಿಲ್ಲು
ವರ್ಷಾ೦ತ್ಯಕೆ ಟ್ಯಾಕ್ಸ್ ಫೈಲು
ಕಾಪಿ ಪುಸ್ತಕ ಮರೆತ
ಡಾಕ್ಟರ ಪ್ರಿಸ್ಕ್ರಿಪ್ಷನ್ನು
ಎಲ್ಲವೂ ಕಾಗದ..
ಕೊನೆಯ ದಿನಗಳ ಎಣಿಸುವ
ಆರೈಕೆ ಹಾರೈಕೆ ಬಯಸುವ
ಹಿರಿಯ ಜೀವಗಳ ಬಳಿಯಿದೆ
ಕಾಗದ-ಪತ್ರ,
ಅದಕೆ ಬರುವರು
ನೆಂಟಸ್ತನ ಹೇಳಿಕೊಂಡು
ಹತ್ರ
ಒಮ್ಮೆ ಕಾಗದಕೆ ಬಿತ್ತೆಂದರೆ
ಅಂಕಿತ ಮುದ್ರೆಯ ಸಹಿ
ಆತುರ ತೋರುವವರು ಪಡೆಯಲು
ಮರಣ ಪ್ರಮಾಣ ಪತ್ರ
ಅದುವೇ ಜೀವನದ
ನಮ್ಮ ನಿಮ್ಮ
ಕೊನೆಯ ಕಾಗದ.
==============
Thursday, February 16, 2023
ಏನಾಗಲಿ?
ಏನಾಗಲಿ?
- ಆಜಾದ್ ಐ.ಎಸ್.
ಹೊರಳಿ ನೋಡುವುದೇ ಹೀಗೆ
ಮರಳಿ ಬಾರದ ಹಾಗೆ
ಉಲ್ಕೆಯಾಗದಿರು ಪಥದಿ
ಗ್ರಹವಾದರೂ ಸ್ವಂತತೆ ಇಲ್ಲ ..
ಚಂದಿರನಾಗಲೇ ಹೇಳು
ತಂಪೆನಿಸುವಂತೆ ವಿರಹಿಗೆ..
ಸೂರ್ಯನಾಗಲೇ ಬೇಡ
ತಪಿಸುವಂತೆ ತನ್ನೊಳಗೇ ..
ಭೂಮಿಯಾಗಲೇ ಗೆಳೆಯಾ
ಹೊರಲು ಪಾಪಿಗಳ..
ಪಾಪ ತೊಳೆಯಲೇ ಗಂಗೆಯಾಗಿ
ಮಾಲಿನ್ಯ ವಿಷದಂಗಳ..
ಬೆಟ್ಟ ಗುಡ್ಡವಾದರೂ ಏನು
ಲೂಟಿ ಅಗೆದು ವಜ್ರ ಖನಿಜ ..
ಬಗೆವರು ಗರ್ಭವನು ಚಿನ್ನ
ಬಿಡಲಾರ ಈ ಮನುಜ.
Thursday, January 19, 2023
ಕೆಲವು ಹಾಯ್ಕುಗಳು
ಮೋಡದೊಡಲು
ಬೆವರ ಹನಿ ಜಲ
ಕಣದ ಕಾಳು
ಕೋಗಿಲೆ ಗಾನ
ಕಟ್ಟಲಾಗದ ಗೂಡು
ಆಶ್ರಯದಾತ
ಕಾಲುವೆ ಕಸ
ಹರಿವು ನಿಂತು
ಕೆರೆ
ನೆರೆಹಾವಳಿ
ಹಸಿದ ಹೊಟ್ಟೆ
ಕಪ್ಪೆ ಹಾವು
ಗಿಡುಗ
ಕಾಲ ನಿಯಮ
ಕೋಶ ಸಂಗಮ
ನವಮಾಸ ಸಂಯಮ
ಮೊದಲ ಕೂಗು
ರಂಜಕ ಕಲೆ
ಬೆಂಕಿ ಬೆಳಕು
ಸದ್ದು
ಸಂಭ್ರಮ ಹಬ್ಬ