ಬ್ಲಾಗಾಯಣ
ಈ- ಮೈಲು, ವೆಬ್ಬು, ಗಬ್ಬು..ಅಂತೆಲ್ಲಾ ಅನ್ನೋರಿಗೆ..ಬ್ಲಾಗು ಅನ್ನೋ ಇನ್ನೊಂದು ವ್ಯವಸ್ಥೆ ಐತೆ ಅನ್ಸಿದ್ದು..ಅಥ್ವಾ ನೋಡಿದ್ದು..ಆ ನಂತರ ಅದರ ದಾಸರಾಗಿದ್ದು ..ಈಗ ಚರಿತ್ರೆ ಆಗ್ತಾ ಇದೆ.
ಪಿ.ಬಿ.ಎಸ್ ರಿಗೆ ಈಗ ಹಳೇ ಹಾಡು ಹಾಡೋಕೆ ಹೇಳಿದ್ರೆ...
"ಬ್ಲಾಗೊಂದ ತೋರ್ಸುವೇ
ಪುಟಾಣಿ ಮಕ್ಕಳೇ..ಬ್ಲಾಗಿದ್ದು ತನಗೆ
ಬ್ಲಾಗಾಗದ್ದು ಪರರಿಗೆ" ಅಂತಿದ್ರೋ..ಏನೋ..!!
ಬ್ಲಾಗಿದ್ದಿದ್ರೆ..ಸೀತೆ ಸ್ವಯಂವರದ ಅನೌನ್ಸ್ ಮೆಂಟು ಪ್ರೆಸಿಡೆಂಟ್ ಜನಕ್ಸ್ ಬ್ಲಾಗಿಸ್ತಿದ್ದ್ರೋ ಏನೋ..??
ಬ್ಲಾಗುಗಳ ಇಂಟರಾಕ್ಷನ್ ಫಾಲೋಗಳ ಮೂಲಕ ದುರ್ಯೋಧನ್ಸ್ ಪಾಂಡವ್ಸ್ ನ ಫ್ಯಾಂನ್ಸಿಡ್ರೆಸ್ನಲ್ಲೇ ಪರ್ಮನೆಂಟಾಗಿ ಇರೋ ಹಂಗೆ ಮಾಡ್ತಿದ್ದನೋ ಏನೋ..?
ಬ್ಲಾಗು ಅನ್ನೋದು..ಈಗ್ಗೂ ನನ್ ತಲೇಗೆ ಸರಿಯಾಗಿ ಹೋಗಿಲ್ಲ, ಯಾರ್ಯಾರೋ ಬ್ಲಾಗ್ ಮಾಡ್ತಾರೆ ಅಂತ ನಾನೂ ಬ್ಲಾಗನ್ನ ಕೂಡಿ, ಕಳೆದು, ಗುಣಿಸಿ ಈಗ ಬ್ಲಾಗಿಸ್ತಿದ್ದೀನಿ.
ಅಜ್ಜಿ ಮಕ್ಕಳಿಗೆ ಕಥೆ ಹೇಳೋವಾಗ..."ಒಂದಾನೊಂದು ಬ್ಲಾಗ್ ರಾಜ್ಯದಲ್ಲಿ ಒಬ್ಬ ಬ್ಲಾಗ್ ರಾಜ, ಇಬ್ಬರು ಬ್ಲಾಗ್ ರಾಣಿಯರಿದ್ದರು. ಅವರಿಗೆ ..." ಅಂತೆಲ್ಲಾ ಹೇಳೋ ಕಾಲ ದೂರಾ ಏನಿಲ್ಲ.
ಈವಾಗ ಈ ಬ್ಲಾಗು ಎಷ್ಟೊಂದು ಪಾಪುಲರ್ ಆಗ್ತಾ ಐತೆ ಅಂದ್ರೆ...ರಾಜಕಾರಣಿಗಳು..ತಮ್ಮ ಚುನಾವಣಾ ಪ್ರಚಾರಾನ ಬ್ಲಾಗಿಸೋಕೆ ಶುರು ಹಚ್ಚೌವ್ರೆ, ನಮ್ಮ ಚುನಾವಣಾಧಿಕಾರಿ ತಾನೂ ಏನ್ ಕಡಿಮೆ ಇಲ್ಲ ಅನ್ನೋ ಹಂಗೆ ಇವ್ರ ಅಂಥ ಬ್ಲಾಗನ್ನ ಬ್ಯಾನ್ ಮಾಡಿ ಇನ್ನೊಂದು ಬ್ಲಾಗು ಹಚ್ಚೇಬಿಟ್ಟವ್ರೆ.
ನಮ್ಮ ಪೂರ್ವ ರಾಷ್ಟ್ರಪತಿಗಳು (ಕಲಾಂ ಸಾಹೇಬ್ರು) ಬ್ಲಾಗ್ ಮಾಡಿಯೇ ಸ್ಕೂಲ್ ಮಕ್ಕಳಲ್ಲಿ ದೇಶಾಭಿಮಾನ, ದೇಶದ ಬಗ್ಗೆ ಸಾಮಾನ್ಯ ಅರಿವಳಿಕೆ (general awareness) ತರೋದಕ್ಕೆ ಪ್ರಯತ್ನಿಸಿದ್ದು ಎಲ್ಲಾ ತಿಳಿದಿರೋದೇ..
ಅಮಿತಾಬ್ ಬಚ್ಚನ್ ತನ್ನ ಬ್ಲಾಗ್ ಮೂಲಕ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾದದ್ದು ನೋಡಿದ್ರೆ ಬೆಳೀತಿರೋ ಬ್ಲಾಗಾಭಿಮಾನ, ಬ್ಲಾಗಪಾರಂಗತಿ, ಇತ್ಯಾದಿ ಬಗ್ಗೆ ಯೋಚಿಸ್ಬೇಕಾಗುತ್ತೆ.
ಟ್ಯೂಶನ್ ಪರಿಪಾಠ ಬೆಳೆಸಿಕೊಳ್ತಾ ಇರೋ ಟೀಚರ್ ಗಳಿಗೆ ಬ್ಲಾಗಿನ ಮೂಲಕ ಸರ್ಕಾರದ, ಆಡಳಿತ ಮಂಡಳಿಯ ಕಣ್ಣಿಗೆ ಮಣ್ಣೆರೆಚೋದು ಸುಲಭ ಆಗ್ತಾ ಇದೆ. ಜೋಡಿಗಳು ಮೈಲ್ ಗಳ ಮೂಲಕ ಪರಸ್ಪರ ವಿಷಯ ವಿನಿಮಯ ಮಾಡ್ಕೋತಾ ಇದ್ದದ್ದು ಹೋಗಿ ಈವಾಗ...ಬ್ಲಾಗುಗಳನ್ನ ಸೃಷ್ಠಿಸಿಕೊಂಡು ತಮ್ಮ ಕೆಲಸಾನ ಇನ್ನೂ ಪರಿಣಾಮಕಾರಿ ಮಾಡ್ಕೋತಾ ಇದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಬ್ಲಾಗಾಯಣದ ಪರಿಣಾಮ ಬಹಳವಾಗಿಯೇ ಆಗಿದೆ ಎಂದರೆ ತಪ್ಪಿಲ್ಲ. ಕವಿಗಳು ತಮ್ಮ ಕವನಗಳನ್ನ, ಲೇಖನಗಳನ್ನ ಬ್ಲಾಗಿನ ಮೂಲಕ ಪರಿಚಯಿಸುತ್ತಿದ್ದಾರೆ. ಇದು ಒಂದು ಹಿತಕರ ಬೆಳವಣಿಗೆ ಯೇ ಸರಿ. ಇದೇ ತರಹ ವಿಷಯ ವಿನಿಮಯಕ್ಕೂ ತಮ್ಮಲ್ಲಿನ ಶೇಖರಿತ ಮಾಹಿತಿಗಳನ್ನು ವಿನಿಮಯಿಸಿಕೊಳ್ಳಲು ಬ್ಲಾಗ್ ಬಹಳ ಸಹಕಾರಿಯಾಗುತ್ತಿದೆ.
ಬ್ಲಾಗೆಂಬ ಮಹತ್ವಪೂರ್ಣ ಮಾಧ್ಯಮವನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಮತ್ತು ಅರೋಗ್ಯಕರ ಸಮಾಜದ ಬೆಳವಣಿಗೆಗೆ ಪ್ರಯೋಗಿಸಬೇಕು. ನಮ್ಮ ಭಾವನೆಗಳ ಬಿತ್ತರಕ್ಕೆ ಇದು ಬಹು ಅಮೂಲ್ಯ ಮಾಧ್ಯಮ...ಬ್ಲಾಗನ್ನು ಸಂಧಿಸಿ..ಓದಿ..ತಮ್ಮ ಅನಿಸಿಕೆಗಳನ್ನು ಹಂಚಿ ಕೊಳ್ಳುವ ಬ್ಲಾಗುಮಿತ್ರರು ನಮ್ಮ ವಿಚಾರಧಾರೆಯನ್ನು ಚುರುಕುಗೊಳಿಸುತ್ತಾರೆ ಹಾಗೇ..ನಮ್ಮಲ್ಲಿ ನಮಗೇ ಅರಿವಿಲ್ಲದಂತೆ ವಿಷಯ ಪ್ರಸ್ತಾವನೆಯ ಹೊಸ ಮತ್ತು ಪರಿಣಾಮಕಾರೀ ಸೃಜನಶೀಲತೆ ಬೆಳಕುಕಾಣಲಾರಂಭಿಸುತ್ತದೆ.
ನನಗಂತೂ ಈ ಮೂಲಕ ಲಾಭವೇ ಆಗಿದೆ ಎಂದರೆ ತಪ್ಪಿಲ್ಲ.
ಆಜಾದ್ ಸರ್,
ReplyDeleteನಿಜ ನಿಮ್ಮ ಮಾತು ಈ ಬ್ಲಾಗ್ ನಮ್ಮ ಮನಸಿನ ಭಾವನೆ ನೈಜತೆ ಎಲ್ಲವನ್ನು ತಿಳಿಸಲು ಒಂದು ವೇದಿಕೆ ..
ನೀವು ತುಂಬಾ ಚೆನ್ನಾಗಿ ಬರೆಯುತ್ತೀರಿ ಹೀಗೆ ಮುಂದುವರಿಸಿ..