Friday, September 4, 2009

ಕವಿತೆಯೆಂದರೇನು?

ಕವಿತೆ,
ಕೆಲವು ಪದಗಳ ಸಾಲೇ?
ಸಾಲಿನ ಕೊನೆಯ ಪ್ರಾಸವೇ?
ಪ್ರಾಸದೊಳಗಿನ ಭಾವವೇ?
ಭಾವದೊಳಗಿನ ಕಲ್ಪನೆಯೇ?
ಕಲ್ಪನೆಗೊಂದು ಚಿಂತನೆಯೇ?
ಚಿಂತನದೊಳಿಹ ವಿಷಯವೇ?
ವಿಷಯದ ಹಿಂದಿನ ಘಟನೆಯೇ?
ಘಟನೆಗೊಂದು ತರ್ಕವೇ?
ತರ್ಕಕ್ಕೆ ನಿಲುಕದ ಸತ್ಯವೇ?
ಸತ್ಯದೊಳಗಿನ ಸೌಂದರ್ಯವೇ?
ಸೌಂದರ್ಯವೆಂಬ ಕನಸೇ?
ಕನಸಿಂದ ದೊರೆತ ಸ್ಪೂರ್ತಿಯೇ?
ಸ್ಪೂರ್ತಿಯಿಂದ ಹುಟ್ಟಿದ ಪದಗಳೇ?
ಪದಗಳ ಅಂತರಾಳವೇ?
ಅಂತರಾಳದಲ್ಲಡಿಗಿದ ದುಗುಡ ದುಮ್ಮಾನವೇ?
ಮಾನಕಂಜಿದ ಸಮ್ಮಾನವೇ?
ಸಮ್ಮಾನ ಗಿಟ್ಟಿಸಿಸಿದ ವಿಪರ್ಯಾಸವೇ?
ವಿಪರ್ಯಾಸ ತರಿಸಿದ ಪರ್ಯಾಯವೇ?
ಪರ್ಯಾಯ ಹೇಳಲಿಚ್ಛಿಸಿದ್ದೇ?
ಹೇಳಲಿಚ್ಛಿಸುದೇ ಬರೆದುದೇ?
ಬರೆದುದೇ ಒಂದು ಕವಿತೆಯೇ?
ಕವಿತೆಯೆಂದರೇನು? ???

ಕವಿತೆ
ಕವಿತೆ ಕವಿ
ತಾ ತೆರೆದ ಮನ
ವಿ (ಆ)ಷಯ ಕ್ಷಣ
ಕ್ಷಣ ತುಡಿತದ
ಭಾಷೆ ಸುರುಳಿ
ಬಿಚ್ಚಿಡುವ ಸರಪಳಿ
ಅನಿಸಿದ್ದು ಬರೆ
ಬರೆದದ್ದು ತೆರೆ
ತೆರೆವವನದೊಂದು ಪರಿ
ಹೆಪ್ಪುಗಟ್ಟಿದ ಭಾವ
ಮಂಥಿಸಲು ಕವನ
ಬಿಂಬಿಸಲು ಕಥನ
ಮನತುಂಬಿ
ಹೊನಲು ಗೀತೆ
ಮನಸೀಳಿ ಲೇಖಾಂಕವಿತೆ

ಅವನು-ಅವಳು
ಅವನು ಕಥೆ-
ರಸ-ನೀರಸ
ಏಳು-ಬೀಳು
ಪುಟಗಟ್ಟಲೆ ಗೋಳು
ಅಲ್ಲೊಂದು
ಇಲ್ಲೊಂದು
ರಸಿಕತೆಯ ಓಳು
ಕೊನೆಗೊಂದೇ
ಉಳಿದದ್ದು ಹೇಳೋಕೆ
ಯಾಕದ್ರೂ ಬೇಕು
ಬಾಳಬೇಕು ಈ ಬಾಳು?

ಅವಳು ಕವಿತೆ-
ಸುಂದರ ಸವಿತೆ
ಬಲು ಆಕರ್ಷಿತೆ
ಪುಟವೆಲ್ಲಿ..ಪದಗಳು?
ಕಣ್ಣಲ್ಲೇ ನುಡಿಗಳು
ತುಟಿ ಬರೆವ ಸಾಲುಗಳು
ನಕ್ಕರೆ ಉದುರುವ
ಬಹುಮೂಲ್ಯ ಮುತ್ತುಗಳು
ಲತಾಂಗಿ, ಸುಕೋಮಲೆ
ಬಿಂಬವೊಂದೇ..
ಸಾವಿರ ಕನಸಲೂ
ಅದಕೇ ಇವಳು
ನಡೆದಾಡುವ
ಜೀವಂತ ಕವಿತೆ.

ದಾಂಪತ್ಯ
ಅವಳಜೊತೆ ಅವನು
ಬೆಸೆದ ಸಾಂಗತ್ಯ
ಕಥೆಯಲ್ಲಿ ಬೆರೆತ ಕವಿತೆ
ಒಂದು ವಾಸ್ತವದ ಭಾಷೆ
ಮತ್ತೊಂದು ಬಾಳರಸ
ಹಿಂಗಿಸಲು ತೃಷೆ
ಮಹಾಕಾವ್ಯದ ರಚನೆಗೆ
ಇಬ್ಬರೂ ಸಮ, ಹೇಳಲಾದೀತೆ?
ಇದು ಕಥನ ಇದೇ ಕವಿತೆ?

29 comments:

 1. 1.ಕವಿತೆ ಎ೦ದರೇನು -ಎ೦ಬ ತಮ್ಮ ಪ್ರಶ್ನೆಗೆ ತಮ್ಮ ಕವನದ ಕೊನೆಯ ಮೂರು ಸಾಲಿನಲ್ಲಿ ತಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ, ಪ್ರಶ್ನೆ ರೂಪದಲ್ಲಿ ಬ೦ದಿದೆ..!
  ಉತ್ತರ ಅದ್ಭುತ ಅಲ್ಲವೇ.....!!
  2.ಕವನ-ಕವನದಲ್ಲಿ ತೆರೆವವನದೊಂದು ಪರಿ .. ಓದುಗನದು ಇನ್ನೊ೦ದು ಪರಿ ಅಲ್ಲವೇ....
  3.ಅವನು -ಅವಳು ದಲ್ಲಿ -ತುಟಿ ಬರೆವ ಸಾಲುಗಳು
  ನಕ್ಕರೆ ಉದುರುವ
  ಬಹುಮೂಲ್ಯ ಮುತ್ತುಗಳು
  ಚೆನ್ನಾಗಿದೆ. ಅದರೆ ಅವನನ್ನು ನೀರಸ ಎ೦ದು ಬಿ೦ಬಿಸಿ ಅವಳನ್ನು ಸರಸವನ್ನಾಗಿಸಿದ್ದಿರಿ. ಇದು ಅನ್ಯಾಯ. ಪುರುಷರ ಶೋಷಣೆ.
  ದಾ೦ಪತ್ಯದಲ್ಲಿ ಇಬ್ಬರು ಶ್ರಾವ್ಯಕ್ಕೆ ಇಬ್ಬರು ಶ್ರುತಿ. ಅಪಶ್ರಾವ್ಯಕ್ಕೆ ಇಬ್ಬರು ಅಪಶ್ರುತಿ ಏನ೦ತೀರಾ..? ಜೋಡಿ ಕೈಗಳಿ೦ದಲೇ ಅಲ್ಲವೇ ಚಪ್ಪಾಳೆ. ಹಾ ಕೆನ್ನೆಗೆ ಬಾರಿಸಲು ಒ೦ದೇ ಕೈ ಸಾಕು. ಅದು ಅವನದಿರಬಹುದು ಅಥವಾ ಅವಳಿದಿರಬಹುದು.
  ತಮ್ಮ ತರ್ಕಕ್ಕೆ ನನ್ನದೊ೦ದಿಷ್ಟು ಕುತರ್ಕ ಸುಮ್ಮನೆ ಹಾಗೇ ಕೊರೆತಕ್ಕೆ.

  ReplyDelete
 2. ಅಝಾದಣ್ಣ,
  ಎಂಥದೂ ಮಾರಾಯ್ರೆ...
  ಅವನಿಗೆ ನೀರಸ ಗೋಳು...
  ಅವಳಿಗೆ ಸರಸದ ಸೀಳು...
  ಆದ್ರೂ ಸಂದಾಕ್ಕಿತ್ರಿ....
  ಕವಿತೆ ಅಂದ್ರ ನೀವೂ ನಿಮ್ಮ ಪದ್ಯದಲ್ಲಿ ಹೇಳಿರುವುದ್ಯಲ್ಲ ಇರ್ಥೈತ್ರಿ...
  ಚಲೋ ಬರ್ದಿದೀರ್ರಿ....

  ReplyDelete
 3. This comment has been removed by the author.

  ReplyDelete
 4. ಸೀತಾರಾಂ ಸರ್,
  ಕಥೆ ಕವಿತೆಗಳ ಬಗ್ಗೆ ನನ್ನದು ಪುರುಷ ವಿರೋಧಿ ಅಭಿಪ್ರಾಯ ಎಂದು ನಿಮ್ಮ ಅನಿಸಿಕೆಯೇ..??
  ಕಥೆ ನೀಳ ಅದಕೆ ತಾಳ್ಮೆ, ಧೀಮಂತಿಕೆ, ಗಾಂಭೀರ್ಯ ಅಗತ್ಯ. ದಾಂಪತ್ಯ ಈ ಕಥೆ-ಕವಿತೆಗಳ ಸಾಂಗತ್ಯವಲ್ಲವೇ?
  ನಿಮ್ಮ ಅನಿಸಿಕೆಗೆ ಧನ್ಯವಾದಗಳು. ಅವಸರದಲ್ಲಿ ಪೇಸ್ಟ್ ಮಾಡುವಾಗ ಇನ್ನೊಂದು ಸರಣಿ ಬಿಟ್ಟುಹೋಗಿದೆ ಲಗತ್ತಿಸಿದ್ದೇನೆ ನೋಡಿ ಮತ್ತೆ ಕಾಮೆಂಟಿಸಿ.

  ReplyDelete
 5. ಮಹೇಶ್ ಮಾಮ
  ಎಂಥದು ಮಾರಾರ್ರೆ ನಿಮ್ಮದೂ ಸೀತಾರಾಂ ಸರ್ ತರದ್ದೇ ಕಾಮೆಂಟು..ಒಂದು ತಪ್ಪಾಗಿದೆ
  ಅದನ್ನ ಸರಿ ಮಾಡಿಯಾಯ್ತು..ನೋಡಿ ಮತ್ತೆ ಹೇಳಿ ಮಾರಾರ್ರೆ.

  ReplyDelete
 6. ಸರ್ ಅವನು ಅವಳು ಕವನ ಸೂಪರ... ಕವನದಲ್ಲೇ ಕವನದಬಗ್ಗೆ ಹೇಳಿದ್ದೀರಲ್ಲ, ಕವನವೆಂದರೆ ಅದೇ ಅಂದರೆ... ಕವನ ಅಂದರೆ ಒಂಥರಾ ಕನಸುಗಳ ಕಲರವ...

  ReplyDelete
 7. ಪ್ರಭುಗಳೇ..ನಿಮ್ಮ ಮಾತನ್ನು ಅಕ್ಷರಶಃ ಒಪ್ಪಬೇಕಾದ್ದೇ...ಕವನ -ಕವಿತೆ ನನಗೆ ಇಗ್ಗೂ ವ್ಯತ್ಯಾಸ ಗೊತ್ತಿಲ್ಲ...(ಆದ್ರೂ ಬರೀತಿದ್ದೀರಾ..??!! ಮೂಲ ಸಂದೇಹ ಬೇಡ...!!). ಕವನ-ಕವಿತೆ ನನಗೆ ಹೆಣ್ಣಿನ ಸುಂದರತೆ, ಕೋಮಲತೆ, ಎಲ್ಲವನ್ನೂ ಸಂಕ್ಷಿಪ್ತದಲ್ಲಿ ಹೇಳುವ ಸಾಮರ್ಥ್ಯ ಇವೆಲ್ಲವುಗಳ ಪಡಿಯಚ್ಚು ಎನಿಸುತ್ತೆ, ಗಂಡಿಗೆ ಮೋಸವಾಗಿದೆ ನನ್ನ ಈ ಕವನದಲ್ಲಿ ಎನಿಸುತ್ತದೆಯೇ??
  ರೆಸ್ಪಾಂಡಿಸಿದ್ದಕ್ಕೆ ಥ್ಯಾಂಕುವಾದಗಳು.

  ReplyDelete
 8. ಅಝಾದಣ್ಣ,
  ನನ್ನ ಮೊದಲ ಕಾಮೆಂಟ್ ನೋಡಿ ಬೇಸರ ಆಯಿತ್ತಾ...
  ಗಂಡಿಗೆ ಮೋಸ ಎನೂ ಆಗಿಲ್ಲ ನಿಮ್ಮ ಕವನದಲ್ಲಿ.......
  ನಿಜಾನೆ ಹೇಳಿದ್ದೀರಾ....ಈಗ ಇನ್ನು ಚೆನ್ನಾಗಿದೆ ನಿಮ್ಮ ಕವನ...
  ಬರೀತಾ ಇರಿ...

  ReplyDelete
 9. ಮಹೇಶ್ ನಿಮ್ಮ ಮಾತು ನಿಜ, ಬೇಸರ ಏನಿಲ್ಲ. ಯಾಕಂದ್ರೆ ಕವನ ಪೂರ್ತಿ ಇಲ್ಲದಾಗ ಅರ್ಥ ಸ್ವಲ್ಪ ಎಡವಟ್ಟಾಗಿತ್ತು. ಈಗ ಏನಂತೀರಿ?

  ReplyDelete
 10. ಅವನು-ಅವಳು ತುಂಬಾ ಇಷ್ಟವಾಯಿತು. ಅದರಲ್ಲೀ ಈ ಕವನದ ಕೊನೆಯ ಸಾಲುಗಳು ಮತ್ತೂ ಇಷ್ಟವಾದವು.

  ReplyDelete
 11. ಧನ್ಯವಾದ, ನನ್ನ ಬಾವ ಮಂಥನಕ್ಕೆ ಒಂದು ಭೇಟಿ ಕೊಡಿ ತೇಜಸ್ವಿನಿ ಮರಳಲ್ಲಿ ಮೂಡಿದ ಕವಿತೆ ನೋಡಬಹುದು for a change, ಓದಬಹುದು..ಅಲ್ಲ.

  ReplyDelete
 12. ಜಲನಯನ ಅವರೇ
  ಪ್ರಶ್ನೆಯಲ್ಲೇ ಉತ್ತರ, ಉತ್ತರದಲ್ಲೇ ಪ್ರಶ್ನೆ ಹೀಗೆ ಗೊಂದಲ ಸೃಷ್ಟಿಸಿ ಸ್ಪಷ್ಟನೆಯೂ ನೀಡಿದ್ದೀರಾ! ಎಷ್ಟಾದರೂ scientist brain ಅಲ್ಲವೇ, Hattsof ನಿಮಗೆ ಮತ್ತು ನಿಮ್ಮ ಲೇಖನಕ್ಕೆ!!

  ReplyDelete
 13. ಏನಿದು..?? ಈದ್ ಕಾ ಚಾಂದ್...?? SSK after such a long GAAAP...!!! ಸ್ವಾಗತ ಪುನಃ ಬ್ಲಾಗ್-ಬಳಗಕ್ಕೆ ಮತ್ತು ಜಲನಯನಕ್ಕೆ...ಹಾಗೆ ನನ್ನ ಇತರ ಬ್ಲಾಗುಗಳಮ್ಮೂ ನೋಡಿ ಬನ್ನಿ...ಚುಚ್ಚಬೇಕು ಅನಿಸಿದರೆ ಚುಚ್ಚಿಬಿಡಿ...ಬಲೂನು ಹೆಚ್ಚು ಊದಬಾರದು...ಹಹಹ...ಧನ್ಯವಾದ ನಿಮ್ಮ ಅನಿಸಿಕೆಗೆ...

  ReplyDelete
 14. ಜಲನಯನ ಅವರೇ ,
  comment ಹಾಕಲು ಬಂದವಳು ಏನು ಹಾಕ ಬೇಕೆಂದು ತೋರದೇ ಕುಳಿತಿದ್ದೇನೆ ...
  ತುಂಬಾ ಚೆನ್ನಾಗಿದೆ ನಿಮ್ಮ ಕವಿತೆ..
  ಧನ್ಯವಾದಗಳು...:)

  ReplyDelete
 15. ಅಜಾದ್ ಸರ್
  ನೀವು ಕವಿತೆ ಬಗ್ಗೆ ಬರೆದಿರೋದು ನೋಡಿ ನನ್ನ್ಗು ಹಾಗೆ ಅನ್ನಿಸುತ್ತಿದೆ ಸೂಪರ್ ಸರ್

  ReplyDelete
 16. ಗುರುಗಳೇ, ಮತ್ತೆ ಮತ್ತೆ ಓದಿದೆ.. "ಕವಿತೆ" ನನ್ನ ತುಂಬಾ ಓದಿಸಿತು.. ಅದ್ಭುತವಾಗಿದೆ.. ಅಷ್ಟಾದರೂ ಕವಿತೆ ಅಂದರೇನೆಂದು ಅರ್ಥವಾಗಲೇ ಇಲ್ಲ.. ಪದಗಳಲ್ಲಿ ವಿವರಿಸಬಹುದಾದ ಅರ್ಥಕ್ಕೆ ಮೀರಿದ್ದೇ ಕವಿತೆಯಾ?? ಗೊತ್ತಿಲ್ಲ.. ಗೊತ್ತಾಗುವುದೂ ಇಲ್ಲವೇನೋ!!
  ಬೇರೆಲ್ಲ ಕವಿತೆಗಳೂ ಚೆನ್ನಾಗಿವೆ. ನೀವು ಪದಗಳೊಂದಿಗೆ ಆಡಿರುವುದು ತುಂಬಾ ಸೊಗಸಾಗಿದೆ :)

  ReplyDelete
 17. ದಿವ್ಯಾ...ಏನೂ ಮಾಡಲಾಗದೆ ಕೂತದ್ದಕ್ಕೆ ಎರಡು ಸಾಧ್ಯತೆಗಳು
  ಒಂದು- ಬರೆದದ್ದು ಬಹಳ ಕೆಟ್ಟದಾಗಿರಬೇಕು
  ಎರಡು- ಅತಿ ಉತ್ತಮವಿರಬೇಕು....(ಇದು ಸಾಧ್ಯವೇ ಇಲ್ಲದ್ದು ಮಾನವಮಾತ್ರರಿಂದ..ಏಕಂದರೆ...ಬೇಂದ್ರೆಯವರೂ ಕವಿತಎಯಲ್ಲಿ ಏನು ಇರಬಾರದು ಎನ್ನುವುದಕ್ಕೆ ತಮ್ಮದೇ ಕವಿತೆಗಲನ್ನು ಉದಹರಿಸಿದ್ದರಂತೆ..ಅವರೋ ಮೇರು ಪರ್ವತ ಸ್ವರೂಪರು..ನಾವೊಂದು ಕಣ)
  ನೀವು- ಬರೆದಿರಿ ಎರಡು ಮಾತು..ಅಂದರೆ...ಕೆಟ್ಟದಾಗಿದೆ ..ಆದರೂ ಓದಬಹುದು..ಅಥವಾ ಬಮ್ದುದದ್ಕ್ಕೆ ಓದಲೇಬೇಕು ..ಓದಿದಮೇಲೆ ಒಮ್ದೆರಡು ಮಾತು ಬರೆಯಬೇಕು...ಇದು..ವಾಸ್ತವ ಅಲ್ಲವೇ???...ಹಹಹಹ
  ಧನ್ಯವಾದ..ನಿಮ್ಮ ಅನಿಸಿಕೆಗೆ.

  ReplyDelete
 18. ಮನಸು ಮೇಡಂ ಬರೆದುದನ್ನು ಸಹಿಸಿಕೊಂಡು ಹೀಗೆ ಬರೆದಿರೋ ಅಥವಾ....????

  ReplyDelete
 19. ಪದಗಳೊಂದಿಗಿನ ಆಟ ಚನ್ನಾಗಿರುತ್ತೆ ಚೌಕಟ್ಟಿನಲ್ಲಿ...ನನ್ನದು ಚೌಕಟ್ಟಿನಲ್ಲಿದೆಯೋ ಅಥವಾ ಮೀರಿದ್ದೋ ತಿಳಿಯಲಾಗಲಿಲ್ಲ, ರೂಪಶ್ರೀ. ನಿಜ ನನಗೂ ಕವಿತೆಯೆಂದರೇನೆಂದು ಗೊಂದಲವಿದ್ದ ಕಾರಣ..ಪ್ರಶ್ನೆಯಲ್ಲಿ ಅಂತ್ಯಗೊಳಿಸಿದೆ...ಇಷ್ಟವಾದುದು ನನಗೆ ನೆಮ್ಮದಿ ವಿಷಯ. ಧನ್ಯವಾದ

  ReplyDelete
 20. ಜಲನಯನ,
  ಕವಿತೆ ಎಂದರೆ ಏನಲ್ಲ, ಏನು ಹೌದು ಎನ್ನುವದನ್ನು ಸರಸವಾಗಿ, ಸುರಸವಾಗಿ ಬಿಡಿಸಿಟ್ಟಿದ್ದೀರಿ. ಕೊನೆಗೊಮ್ಮೆ ಕತೆ ಹಾಗೂ ಕವನಗಳ ದಾಂಪತ್ಯವೇ ಸಾಹಿತ್ಯ ಎನ್ನುವದನ್ನೂ ತೋರಿಸಿದ್ದೀರಿ! ಅಭಿನಂದನೆಗಳು.

  ReplyDelete
 21. ಕವಿತೆ ಎಂದರೆ ಸ್ವಲ್ಪ ಮೊದಲಿಂದಲೂ ಅರ್ಥ ಮಾಡಿಕೊಳ್ಳೋದು ಕಷ್ಟ ಅನ್ನೋವಳು ನಾನು.. ನೀವು ಕವಿತೆನ ಹೆಣ್ಣಿಗೂ, ಕಥೇನ ಗಂಡಿಗು ಹೋಲಿಸಿದ್ದು ನೋಡಿ ಎಲ್ಲರೂ ಹೇಳೋ ಮಾತು (ಹೆಣ್ಣನ್ನ ಅರ್ಥ ಮಾಡಿಕೊಳ್ಳೋದು ಕಷ್ಟ ಅಂತೆ!!!) ಸರಿಯೇ ಅನ್ನೋ ಅನುಮಾನ ಬಂತು!! :)
  ನೀವು ಹೇಳಿದಂತೆ ನಾನು ಬರೀದೇ ತುಂಬಾ ದಿನ ಆಯ್ತು. ಬರೀ ತಿರುಗಾಟದಲ್ಲಿ ಒಂಥರ busy ಆಗಿ ಹೋಗಿದೀನಿ!!
  ಮೊನ್ನೆ ನನ್ನ 'sumne thoughts' ನಲ್ಲಿ ಒಂದು ಪುಸ್ತಕದ ಸಾರಾಂಶ ಹಾಕಿದೀನಿ ನೋಡಿ!

  ReplyDelete
 22. ಸುನಾಥ್ ಸರ್, ನಾನು ಗಂಡಿಗೆ ಅನ್ಯಾಯಮಾಡಿದೆ (ಕಥೆಗೆ ಹೋಲಿಸಿ) ಅಂತ ಕೆಲವರ ಅಂಬೋಣ ..ನೀವಾದರೂ ಇದನ್ನು ವಿಮರ್ಶಿಸಿ ಬರೆಯುತ್ತೀರೆಂದು ಯೋಚಿಸಿದ್ದೆ..ನೀವು ಕಥೆ-ಕವಿತೆಯ ಜುಗಲ್ಬಂದಿಯನ್ನು ಅನುಮೋದಿಸಿ ಬರೆದಿರಿ..ಧನ್ಯವಾದ

  ReplyDelete
 23. ಸುಮನ, ನಿಮಗೂ ಹೆಣ್ಣು ಕಷ್ಟ-ಅರ್ಥವಾಗುವ ವಿಷಯ ಅಥವಾ ವ್ಯಕ್ತಿತ್ವ ಅಂತ ಅನ್ನಿಸ್ತಾ..?? ನನ್ನ ಪ್ರಕಾರ..ಹೆಣ್ಣು ಎಷ್ಟು ಸುಲಭವೋ ಅಷ್ಟೇ ಕಷ್ಟ ಕವಿತೆ ಥರ...ಅತಿ ಸುಲಭವೂ ಹೌದು ಅಷ್ಟೆ ಕಷ್ಟವೂ ಹೌದು.ನಿಮ್ಮ ಬ್ಲಾಗ್ ಪೋಸ್ಟ್ ಗೆ ಇದೋ ಹೊರಟೆ

  ReplyDelete
 24. ಸರ್,
  ಪದಗಳಲ್ಲಿ ಅವಿತಿರುವ ಕವಿತೆತನ್ನೇ ಕವನವನ್ನಾಗಿಸಿದ್ದೀರಿ. ಅದ್ಭುತ. ಮತ್ತೆ ಮತ್ತೆ ಓದಿದೆ. ತುಂಬ ಚೆನ್ನಾಗಿದೆ.

  ReplyDelete
 25. ಮಲ್ಲಿಕಾರ್ಜುನ್...ಚನ್ನಾಗಿದ್ದೀರಾ? ನಿಮ್ಮ ಪ್ರೋತ್ಸಾಹ ಮಹಾಪ್ರಸಾದ. ನನ್ನ ಕೆಲವು ದ್ವಂದ್ವಗಳಿಗೆ ಅರ್ಥ ಕೊಡುವುದೇ ಈ ಕವಿತೆಗಳ ಗೀಚುವಿಕೆ. ನಿಮಗೆ ಇಷ್ಟವಾದದ್ದು ಬೋನಸ್.

  ReplyDelete
 26. ಜಲನಯನ ಸರ್..
  ನಮಸ್ತೆ
  ನಿಮ್ಮ ಪ್ರಶ್ನೆಗೆ ನಂಗೂ ಗೊತ್ತಿಲ್ಲ ಬಿಡಿ ಉತ್ತರ..
  ನಂಗೆ ಕವನ ಬರೆಯಕೆ ಬರೊಲ್ಲ ಅದಕ್ಕೆ..
  ಆದರೆ..ತುಂಬಾ ಚೆಂದನೆಯ ಪದಗಳನ್ನು ಪೋಣಿಸಿ ನಮಗೆಲ್ಲಾ ಇಷ್ಟವಾಗುವ 'ಕವಿತೆ' ಬರೆದಿರಿ...ಅದಕ್ಕೆ ನನ್ನದು ಒಂದು ಪ್ರೀತಿಯ ಸಲಾಂ...
  -ಧರಿತ್ರಿ

  ReplyDelete
 27. ಕವಿತೆಯ ಕಥೆಗೆ ಧರಿತ್ರೀದೂ ಒಂದು ಪಂಕ್ತಿ, ಸಲಾಮಿಗೆ...ಅದೇ ಪ್ರೀತಿಯ ಶುಕ್ರಿಯಾ...ಮೆಹರ್ಬಾನಿ.....
  ಬಹಳ ಹೈಬರ್ನೇಷನ್ ನಂತರ ಧರಿತ್ರಿ ಉರುಳಿದೆ ತನ್ನ ಪಥದಮೇಲೆ...ಹಹಹ...ಧನ್ಯವಾದಗಳು

  ReplyDelete
 28. kavithe andare ishtondella ideye Ajad sir...? Aadru neevu barediruva kavitheya aayaamagalu isht aaayithu... mudina baari kathe bareyuvaaga ivannella chinthisuththene :)

  ReplyDelete
 29. ಸುಧೇಶ್, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ. ಕವಿತೆ-ಕವನಗಳ ವ್ಯಾಖ್ಯನಕ್ಕೆ ನನ್ನ ಅರ್ಹತೆಯಾದರೂ ಏನು? ಮನಸಿಗೆ ಬಂದ ಕೆಲವು ದ್ವಂದ್ವಗಳ ಬಗ್ಗೆ ಅನಿಸಿದ್ದನ್ನು ಹಾಗೇ ಗೀಚಿದೆ. ನಿಮ್ಮ ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು.

  ReplyDelete