Thursday, July 8, 2010

ಎಲ್ಲಾ ಮಾಯವೋ

ಕಾಡು..ಕಾಡಿದ್ದು ನಾಡು
ನಾಡು ನೋಡಿದ್ದು ಬೀಡು
ಬೀಡು ಈಗಾಯ್ತು ಮತ್ತೆ ಕಾಡು
ಇಲ್ಲ ಮರ ಗಿಡ, ಹಸಿರು
ತೋರಿ ಎತ್ತರಗಳ ಕಾಂಕ್ರೀಟು ಜಾಡು.

ಕಾಡು, ಎಲ್ಲಿವೆ ನೋಡು
ನೋಡುತ್ತಿರುವಂತೆ ಮಾಯ
ಮರ, ಬಂದವು ಗಿಡ, ಕೃಷಿಗೆ
ಸಾಯೋ ಸ್ಥಿತಿಗೆ ವ್ಯವಸಾಯ.

ಕೆರೆಯಾದವು ಮರೆ,
ತೊರೆ ನೆಲಬಿರಿದಿರೆ
ಒತ್ತುವರಿಕೆ ಸುತ್ತುವರಿದು
ಮಾಫಿಯಾ ಕೊಳ್ಳೆ ಸುಲಿದು.

ಹೊಲ-ಗದ್ದೆ ಮಾರಿ ಮೆದ್ದೆ
ಹಣದಾಸೆ, ಈಗ- ಇಲ್ಲ ಆಹಾರ ನಿದ್ದೆ
ಆಗ ನಿನ್ನ ಕೂಲಿ
ಈಗಾಗಿರುವ ನಿನ್ನದೇ ಸಿರಿಯ ಮಾಲಿ.

ಬಿಡುತ್ತಿಲ್ಲ ಭೂ ಗರ್ಭವನೂ
ಅಗೆದು ಹೊರಹಾಕಿ ಕರುಳನೂ
ಅಯ್ಯೋ ಮರುಳೇ..ಏಕೆ ತೋಡುತಿರುವೆ
ನಿನ್ನವನತಿ ಗೋರಿಯ ಕುಳಿಯನ್ನು ನೀನೇ?

ಈಗಲೂ ಕಾಲ ಮಿಂಚಿಲ್ಲ
ತಾಯವಳು ಮನ್ನಿಸುವಳು ಎಲ್ಲ
ನೆಡು - ಬೆಳೆಯಲಿ ಕಾಡು
ರೈತ-ಕಾರ್ಮಿಕ ಬೆಳಗಲು ನಾಡು
ಅನ್ನ, ಗಾಳಿ, ನೀರಿಗೆ ಬೇಕು ಎಲ್ಲ
ಸತ್ತಾಗ ಕೊಂಡುಹೋಗುವುದೇನಿಲ್ಲ
ದಡಿಮಣ್ಣು ಹಿಡಿ ಬೂದಿ ಕಡೆಗಷ್ಟೇ ಎಲ್ಲಾ

47 comments:

  1. ಸರ್, ಕವನ ತುಂಬಾ ಚೆನ್ನಾಗಿದೆ ಬೆಂಗಳೂರಿಗೆ ಹೋಗಿ ಬಂದಿದ್ದಕ್ಕೆ ಈ ಅನುಭವಾಯ್ತೇ

    ReplyDelete
  2. ನಿಮ್ಮ ಮಾತು ನಿಜ ಮನಸು ಮೇಡಂ, ನಾವು ಸ್ಕೂಲಿನಲ್ಲಿದ್ದಾಗ, ಪ್ರಥಮ ಪಿಯುಗೆ ಕಾಲೇಜಿಗೆ ಸೇರಿದಾಗ ಇದ್ದ ಬೆಂಗಳೂರ ರಸ್ತೆಗಳ ಮರತಂಪು..ಎಲ್ಲಿ ಹೋಯಿತು ಅನಿಸುತ್ತೆ..? ಬೆಂದು ಬೇಯ್ಗೆಯಾಗಿದೆ ಬೆಂದಕಾಳೂರಿಗೆ

    ReplyDelete
  3. ಒಳ್ಳೆಯ ಕವನ.ನೋಡ ನೋಡುತ್ತಿದ್ದಂತೆ ಮರಗಳು ಮಾಯ!ರಸ್ತೆಗಾಗಿ ,ಗಣಿಗಾಗಿ ಮತ್ತೊಂದಕ್ಕಾಗಿ ರೈತರ ಭೂಮಿಯ ವಶ!ಇನ್ನು ಹತ್ತು ವರುಷಗಳ ನಂತರದ ಸ್ಥಿತಿ ನೆನಸಿಕೊಂಡರೆ ಭಯವಾಗುತ್ತದೆ!ಅದೇ ರೀತಿ ನಾವೆಲ್ಲಾ ಸಣ್ಣವರಿದ್ದಾಗ ಅಂದರೆ ಅರವತ್ತರ ದಶಕದ ಬೆಂಗಳೂರನ್ನು ನೆನಸಿಕೊಂಡು ಈಗಿನ ಬೆಂಗಳೂರಿನ ಸ್ಥಿತಿ ನೋಡಿ ಬೇಸರವಾಗುತ್ತದೆ.ಈಗಲಾದರೂ ಜನ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.ಧನ್ಯವಾದಗಳು.

    ReplyDelete
  4. ಬೆಂಗಳೂರು ಈಗ ಒಂದು ಸಾಗರ ಮೊದಲು ಇದೊಂದು ನಗರ.
    ಭಾಗಶಃ ಭಾರತದ ಜನ ಇಲ್ಲಿ ವಾಸ್ತವ್ಯ ಹೂಡ್ತಾರೆ ಈ ಜನಸಂಕ್ಯಾ ಆರ್ಭಟಕ್ಕೆ ಪರಿಸರ ವಿಲಿ ವಿಲಿ .
    ಮನುಷ್ಯನ ಎಲ್ಲ ಸೌಕರ್ಯಗಳಿಗೆ ಮೊದಲ ಬಲಿ ಪರಿಸರ. (ಪ್ರಾಪಂಚಿಕ ಸತ್ಯ )
    ಹಳ್ಳಿಗಳು ಈಗ ಹಳ್ಳಿಗಳಾಗಿ ಉಳಿದಿಲ್ಲ (ಯಾವುದೇ ವಿಚಾರದಲ್ಲಿ) ಕಾರಣ ನಾವು ನಗರವಾಸಿಗಳಾಗಿ ಬದಲಾಗತ್ತಿದ್ದೇವೆ.
    ಬಹುಶಃ ನಾವೆಲ್ಲಾ ಹಳ್ಳಿಗಳಿಗೆ ಮರಳುವ ಸಾದ್ಯತೆ ಕಡಿಮೆಯೇ ಅಲ್ವಾ ಸರ್ ?
    (ಭಾರತದಲ್ಲಿ ಆಹಾರದುಬ್ಬರ ಒಂದು ವಾರದಲ್ಲಿ 12.28% ರಿಂದ 16.72%ಕ್ಕೆ ಮುಟ್ಟಿದೆ, ಮೂಲ : ದಿನಪತ್ರಿಕೆ )
    (ರೈತರಾಗಬೇಕೆನ್ನುವ ಹಂಬಲ 7% ಯುವಕರಿಗೆ ಮಾತ್ರ ಇದೆ, ಭಾರತದಲ್ಲಿ !!! (ಅದು ಹಂಬಲ ಮಾತ್ರ ರೈತರಾಗುವವರೆಷ್ಟೋ ?))
    ಸಾಲುಗಳು ಅದ್ಭುತ ಹಾಗು ಸತ್ಯ.
    ಒಟ್ಟಾರೆ ಸಾರಾಂಶವು ಎಲ್ಲರಿಗೂ ತಲುಪುವಂತಿದೆ.
    ಚೆಂದದ ಸತ್ಯಕ್ಕೆ ಥ್ಯಾಂಕ್ಸ್ .

    ReplyDelete
  5. ಡಾ. ಟಿ.ಕೆ. ಹೌದು ನಾನು ಏಳನೇ ತರಗತಿಯಲ್ಲಿದ್ದಾಗ ಲಾಲ್ಬಾಗಿಗೆ ಅಪೋಲೋ ಹನ್ನೊಂದರ ಮೂಲಕ ಬಂದ ಚಂದ್ರನ ಮೇಲಿನ ಚಿತ್ರಗಳು ಮತ್ತು ಮಣ್ಣಿನ ಪ್ರದರ್ಶನ ಇಟ್ಟಿದ್ದರು ..ನಾನು ಅಲಸೂರಿನ ಬಳಿ ಬಸ್ಸಿಂದ ಇಳಿದುಬಿಟ್ಟೆ ತಿಳಿಯದೆ...ಅಲ್ಲಿ ಯಾರನ್ನೋ ಕೇಳಿದಾಗ ಅಯ್ಯೋ ಇನ್ನೂ ಎಷ್ಟು ದೂರ ಇದೆ ಲಾಲ್ ಬಾಗು..ಮತ್ತೆ ಇನ್ನೊಂದು ಬಸ್ ಹತ್ತಿ ಕಾರ್ಪೊರೇಶನ್ ಹತ್ರ ಇಳಿದು ಅರ್ಧ ಗಂಟೆ ನಡೆದ್ರೆ ಸಿಗುತ್ತೆ ಅಂತ ಹೆದರಿಸಿಯೇ ಬಿಟ್ಟಿದ್ದರು ಯಾಕಂದರೆ ಬೆಂಗಳೂರು ಅಲ್ಲಿಗೆ ಬಂದೇ ಇರಲಿಲ್ಲ ಆಗ...ಈಗ...ಹೊಸಕೋಟೆ ಬೆಂಗಳೂರಿನ ಅಂಗ ಆಗಿದೆ.....ಥ್ಯಾನ್ಕ್ಸ್ ನಿಮ್ಮ ಅನಿಸಿಕೆಗೆ

    ReplyDelete
  6. ಎನ್ನಾರ್ಕೆ, ನಿಮ್ಮ ಮಾತು ನಿಜ...ಹಳ್ಳಿಗಳ ಯುವಕರು ಪಟ್ಟಣದ ಥಳುಕಿಗೆ ಮತ್ತು ನೌಕರಿ ಚಾಕರಿಯತ್ತ ಒಲವನ್ನು ಹರಿಸಿದ್ದಾರೆ..ಇನ್ನು ಎಮ್ಮೆನ್ಸಿಗಳು ಗದ್ದೆ=-ಹೊಲ ನುಂಗುತ್ತಿವೆ...ದುಡಿಮೆ ಮಾಡಲು ಆಳುಕಾಳಿಲ್ಲದೇ ಸಣ್ಣ ಪುಟ್ಟ ರೈತರು ಸಾಲ ಸೋಲಮಾಡಿ ತೀರಿಸಲಾರದೇ ನೇಣಿಗೆ ಕೊರಳನ್ನು ಕೊಡ್ತಿದ್ದಾರೆ...ಇದಕ್ಕೆಲ್ಲ ನಮ್ಮ ಸರ್ಕಾರ ಒಂದು ದೂರೋದ್ದೇಶಿತ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬೇಕು...ಆದರೆ ಇದು ಕೇವಲ ಹಣಮಾಡುವ ದುರುದ್ದೇಶದತ್ತಲೇ ವಾಲುತ್ತಿದೆ...ನಿಜಕ್ಕೂ ಶೋಚನೀಯ ಸ್ಥಿತಿ.

    ReplyDelete
  7. ಅಜಾದ್ ಸರ್,
    ಸತ್ಯವಾದ ಮಾತು.
    ಮಾನವನಿಗೆ ಅರ್ಥವಾಗುವುದು ಯಾವಾಗ? ದಿನಾದಿನಾ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿದ್ದರೂ ಕೇಕೆ ಹಾಕಿ ನಗುತ್ತಾನೆ ಏನೋ ಸಂತೋಷದಿಂದ. ಆದರೆ ಆ ಸಂತೋಷ ಬಹಳ ಹೊತ್ತು ಇಲ್ಲ ಎಂಬ ಸತ್ಯ ಅರಿವಾಗುವಾಗ ತನ್ನ ಅಂತ್ಯವೇ ಸಮೀಪಿರುತ್ತದೆ. ಆಧುನಿಕತೆಯಲ್ಲಿ ಮುಂದುವರೆದಿದ್ದೇವೆ ಎಂಬ ಅಹಂಕಾರ ನಾಳೆ ನೀರಿಲ್ಲದೆ ಪರಿತಪಿಸುವಾಗ ಮುರಿದುಬೀಳುತ್ತದೆ. ಹಳ್ಳಿ-ವ್ಯವಸಾಯ ಬಿಟ್ಟು ನಗರ ಸೇರುವ ನಮ್ಮಂತ ಹಳ್ಳಿ ಯುವಕರಿಗೆ ತಿನ್ನಲು ಅನ್ನ ಇಲ್ಲದಿದ್ದಾಗ ವ್ಯವಸಾಯದ ಮಹತ್ವ ತಿಳಿಯುತ್ತದೆ...........
    ಹೇಳುತ್ತಾ ಹೋದರೆ ಇನ್ನೂ ಇದೆ.
    ಏನೇ ಇರಲಿ, ಕವನ ಚೆನ್ನಾಗಿದೆ.

    ReplyDelete
  8. ಪ್ರವೀಣ್ ಮನದಾಳದ ಮಾತಿಗೆ ಮನದಾಳದ ಧನ್ಯವಾದ...ಮನದ ಅಳಲನ್ನು ಕೆದಕಿದ್ದು ಈ ಬಾರಿ ಬೆಂಗಳೂರನ್ನು ಕಂಡ ನೋಟ...

    ReplyDelete
  9. ಚೆಂದದ ಕವನ. ನಗರಗಳು ಧೈತ್ಯಾಕಾರವಾಗಿ ಬೆಳೆಯುತ್ತಿದ್ದು ಅದರ ಸುತ್ತಲಿನ ಕೆರೆ-ತೊರೆ-ಅರಣ್ಯ-ಕೃಷಿಭೂಮಿ-ಹಸಿರು ತಿಂದು ಬೆಳೆಯುತ್ತಿರುವದು ನೋಡಿದರೆ ಭಯವಾಗುತ್ತೆ!!

    ReplyDelete
  10. ಜಲನಯನ,
    ನಮ್ಮೆಲ್ಲರ ಭಯ, ಆತಂಕಗಳಿಗೆ ಸೊಗಸಾದ ಕವನರೂಪ ಕೊಟ್ಟಿದ್ದೀರಿ. ಈ ವಿನಾಶಪ್ರಯಾಣದಿಂದ ನಾವು ಎಂದಾದರೂ ಹಿಮ್ಮುಖರಾಗಬಹುದೆ?

    ReplyDelete
  11. ಸೀತಾರಾಂ ಸರ್, ನನಗೆ ಸ್ಕೂಲಿನ ಸಮಯದ ಹೊಸಕೋಟೆ ಮತ್ತು ದೇವನಹಳ್ಳಿ ಬಳಿಯ ವಿಜಯಪುರ-ವೆಂಕಟಾಪುರ ಕೆರೆಗಳು ನೆನಪಾಗುತ್ತವೆ...ಮಳೆಗಾಲದ ನಂತರ ಈ ಕೆರೆಗಳಲ್ಲಿ ತುಂಬಿತುಳುಕುತ್ತಿದ್ದ ನೀರು...ಮತ್ತೆ ಕೋಡಿಗಳ ರಭಸ..ಮೈ ಜುಂ ಎನಿಸುತ್ತಿತ್ತು...ಈಗ....ಇಲ್ಲಿ ನೀರಿತ್ತಾ..? ಎನ್ನುವುದಿರಲಿ...ಕೆರೆಯಿತ್ತಾ ಎನಿಸುವಂತಾಗಿದೆ...

    ReplyDelete
  12. ಸುನಾಥಣ್ಣ...ಈ ನಿಟ್ಟಿನಲ್ಲಿ ಒಂದು ಯುವಕ್ರಾಂತಿ ಸಾಧ್ಯವಾದರೆ ಮಾತ್ರ ...ನಿಮ್ಮ ಕನಸು ನಮ್ಮ ಕನಸು ನನಸಾಗಬಹುದು..... ಬರೀ ಕೆಲಸಕ್ಕೆ ಬಾರದ ಸಂಘಟನೆಗಳನ್ನು ಮಾಡಿ ಆಸ್ತಿ ಪಾಸ್ತಿ ಹಾನಿ ಮಾಡುವವರು ಇಂತಹ ಒಂದು ಕೂಟವನ್ನು ಹುಟ್ಟುಹಾಕಬಾರದೇ ಎನಿಸುತ್ತದೆ.

    ReplyDelete
  13. ಗುರುಗಳೆ....
    ಊರಿನಿಂದ ಬಂದ ಮೇಲೆ ಒಳ್ಳೆ ಸಾಲುಗಳ ಕವನ ಬರೆದಿದ್ದೀರ.......
    ಚೆನ್ನಾಗಿದೆ....

    ReplyDelete
  14. ಏರುತ್ತಿರುವ ತಾಪಮಾನವನ್ನೂ ನಿರ್ಲಕ್ಷಿಸುತ್ತಿರುವ ನಾವು ಪ್ರತಿವರ್ಷವೂ ಒಂದೇ ಹೊಂಡದಲ್ಲಿ ಗಿಡ ನೆಡುವ ಪರಂಪರೆಯನ್ನು ಮಾತ್ರ ಮುಂದುವರಿಸಿಕೊಂಡು ಹೋಗುವುದನ್ನು ಮರೆಯುತ್ತಿಲ್ಲ. ಅಜಾದ ಅವರೇ ನನಗೆ ಮಾನವನ ಆಸೆಗೆ ತುಪ್ಪ ಹೊಯ್ಯುವಂತಹ ಒಳ್ಳೆ idea ಇದೆ ಹೇಳ್ಲಾ?? ಫೈ ಒವರ್ ಕೆಳಗೆ BDA ಸೈಟ್ ಮಾಡಿ ಮಾರಿದರೆ...?? ದೊಡ್ಡ ದೊಡ್ಡ ಚರಂಡಿಗಳ ಮೇಲೆ ಮುಚ್ಚಗೆ ಮಾಡಿ shopping mal ಮಾಡಿದ್ರೆ ಒಳ್ಳೆ ಕಮಾಯಿ ಅಗತ್ತಲ್ವಾ?? ಯಾರ್ಗೂ ಹೇಳ್ಬೇಡಿ ಇದ್ನ,,, copy paste ಮಾಡ್ಬಿಟ್ರೆ ಕಷ್ಟ ಅಲ್ವ?

    ReplyDelete
  15. ಸಾಗರಿ..ಏನ್ ಐಡಿಯಾರೀ....ಸೂಪರ್ರು... ಫ್ಲೈ ಓವರ್ ಕೆಳಗಡೆ ೨೦ ಬೈ ೩೦ ಸೈಟುಗಳಿವೆ ಅಂತ ಜಾಹೀರಾತು ಪ್ರಕಟಿಸಿದ್ದಾರಲ್ಲಾ ಬಿ.ಬಿ.ಎಮ್.ಪಿ ಕುಳಗಳು....ಆಗ್ಲೇ ನಿಮ್ಮ ಐಡಿಯಾ ಕ್ಯಾಶ್ ಆಗೋಕೆ ಶುರು..!!!
    ಆದ್ರೆ ಚರಂಡಿ ಮೇಲೆ ಶಾಪಿಂಗ್ ಮಾಲ್...ಐಡಿಯಾ ಕಮಾಲ್....ನಾನು ಉಪಯೋಗಿಸ್ಲಾ ಇದನ್ನ....ಹಹಹ

    ReplyDelete
  16. ಈ ನಗರೀಕರಣ, ನಗರ ವ್ಯಮೊಹ ಅರ್ಥವಾಗದ ವಿಷಯ.. ನಾನು ಅವಗಾವಾಗ ಅಚ್ಚರಿ ಪಡೋ ವಿಷಯಂದ್ರೆ ಹೆಚ್ಚಾಗಿ ಎಲ್ಲರು ಕೆಸಕ್ಕೆಂದು ಬೆಂಗಳೂರಿಗೆ ಹೊಗುತ್ತಾರೆ ನಂತರ ಅವರ ಕುಟುಂಬ ಹಳ್ಳಿಯ ಆಸ್ತಿ-ಪಾಸ್ತಿ ಮಾರಿ ಅಲ್ಲೆ ಸೇರಿಬಿಡ್ತಾರೆ.. ತಾಂತ್ರಿಕ ವಲಯದಲ್ಲಿ ಈ ವಲಸೆ ಇನ್ನೂ ಹೆಚ್ಚು.. ಭಾರತದ ಎಲ್ಲ ಮೂಲೆಗಳಿಂದಲು dump ಆಗೊದು ಬೆಂಗಳೂರಲ್ಲಿ.. ಅಲ್ಲಾ ಇಷ್ಟೊಂದು ಜನ ಅಲ್ಲಿ ಹೇಗೆ ಹಿಡಿಸ್ತಾರೆ ಅಂತ.. ?! ಬೆಂಗಳೂರು ಬೆಳಿತಿರೊ ಪರಿ 'ಕೇಳಿ' ನನ್ನ ಆ ಪ್ರಶ್ನೆಗೆ ಉತ್ತರ ಅಲ್ಪ-ಸ್ವಲ್ಪ ಸಿಗ್ತಾ ಇದೆ.
    ಇದು ಈಗ ಎಲ್ಲಾ 'ನಗರ'ಗಳ ಕಥೆ ಅನ್ನೊದು ಇನ್ನೊಂದು ಬೇಸರದ ಸಂಗತಿ.
    ಇದನ್ನು ತಡೆಗಟ್ಟಲು ಸಾದ್ಯವಿಲ್ಲ ಅಥವ ಅವಕಾಶ ಇದೆಯೋ ಇಲ್ವೊ ಎನ್ನುವಾಗ ಒಂತರ ಸಂಕಟ ಆಗುತ್ತೆ..

    ನೈಜ್ಯ ಕವನಕ್ಕೆ ಅಭಿನಂದನೆಗಳು..

    ReplyDelete
  17. tumba prastutavaagide kavite! :)

    ReplyDelete
  18. ಚೆನ್ನಾಗಿದೆ ಕವನ... ಯಾರೆಷ್ಟು ಬರೆದರೂ, ಕೂಗಿದರೂ ಜಾಣ ಕುರುಡರು/ಕಿವುಡರು ನಮ್ಮಜನ :(

    ReplyDelete
  19. ಸರ್
    ತುಂಬಾ ಸುಂದರ ಹಾಡು
    ವಾಸ್ತವದ ನೈಜ ಚಿತ್ರಣ ಕೂಡ
    ಮುಂದಿನ ಪೀಳಿಗೆಗೆ ಸಂಕೇತ ಕೂಡಾ

    ReplyDelete
  20. sir,
    mangaloorina uddudda kattadagaLa madye gaaLinoo aadtilla eegeega..... kavana sogasaagide sir...

    ReplyDelete
  21. ಈಗಲೂ ಕಾಲ ಮಿಂಚಿಲ್ಲ ಅನ್ನೋ ಭರವಸೆ ನೀಡುವ ಸಾಲು ಧೈರ್ಯ ತುಂಬುತ್ತದೆ.

    ReplyDelete
  22. ಕಾಂಕ್ರೀಟು ಕಾಡನ್ನು ಬೆಳೆಸಿ ನಾಡನ್ನು ಉಳಿಸಿ! ಕವನ ಸ್ವಾರಸ್ಯಕರವಾಗಿದೆ ಸರ್, ನಿಮಗೆ ಧನ್ಯವಾದಗಳು

    ReplyDelete
  23. ಬರುವಾಗ ಏನಾದರೂ ತಂದಿದ್ದೇವಾ?
    ಇಲ್ಲ ಹೋಗುವಾಗ ಏನಾದ್ರು ತೆಗೆದುಕೊಂಡು ಹೋಗುತ್ತೇವಾ? ಇಲ್ಲಾ ತಾನೇ..
    ಯಾಕೆ ಜನ ಕಾಡು ಕಡಿದು ಕಾಂಕ್ರೀಟು ನೆಡುವ ಕೆಲಸ ಮಾಡ್ತಾರೆ..
    ಅರ್ಥನೇ ಆಗೋಲ್ಲ...ಇದಾಕಿದ್ದೆಯೇ ಕೊನೆ ?
    ಸರ್ ಚೆನ್ನಾಗಿದೆ ಇದೆ ಕವನ.
    ನಿಮ್ಮವ,
    ರಾಘು.

    ReplyDelete
  24. ಶ್ರವಣರೇ, ನಾಡು ಬೆಳೆದರೆ ಬೆಳೆಯಲಿ ಆದರೆ ಮರ ಗಿಡಕ್ಕೆ ಮಾರಕವಾಗಿ ಬೇಳೆಯೋದೇ ಯೋಚನೆಮಾಡಬೇಕಾದ ವಿಷಯ...ಧನ್ಯವಾದ ನಿಮ್ಮ ಅನಿಸಿಕೆಗೆ

    ReplyDelete
  25. ಕನಸು ...ಹೌದು ಇದು ಕೇವಲ ಕನಸಾಗುತ್ತಿದೆ...ಮರ ಗಿಡ, ತೊರೆ ಕೆರೆ....ಕಾಂಕ್ರೀಟಿನ ಮಳೆಯಲ್ಲಿ ಕಾಡೆಲ್ಲಾ ಕೊಚ್ಚಿಗೋಗುತಿವೆ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  26. ತೇಜಸ್ವಿನಿ, ಏನೇನೋ ಮಾಡುವ ನಮ್ಮ ಬುದ್ಧಿವಂತ ಸಂಘಟನೆಗಳ ಸಂಚಾಲಕರು ಈ ನಿಟ್ಟಿನಲ್ಲಿ ಏನಾದರೂ ಮಾಡುವರೇ ಕಾದು ನೋಡಬೇಕು.

    ReplyDelete
  27. ಮಂಜು...ಬೆಂಗಳೂರು ಮೈಸೂರು ಮಂಗಳೂರುಗಳ ಕಥೆ ಬೇರೆಡೆ ಹರಡುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳೋ ಸರ್ಕಾರ ಬಂದರೆ ಅದೇ ಭಾಗ್ಯ....ಅಲ್ಲವೇ...?

    ReplyDelete
  28. ಡಾಕ್ಟ್ರೇ...ಹಸಿರಿನ ವ್ಯಾಪ್ತಿ ಕಡಿಮೆ ಆದ ಹಾಗೆ ಮಳೆಯನ್ನು ಆಕರ್ಷಿಸುವ ಶಕ್ತಿಗಳೂ ಇಲ್ಲವಾಗಿ ಅತಿ ವೃಷ್ಠಿ ಅನಾವೃಷ್ಠಿ ಸಮಾನ್ಯವಾಗುತ್ತಲಿದೆ..ಏನಂತೀರಿ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  29. ದಿನಕರ್, ಮಂಗಳೂರಿಗಿಂತ ಶಿರಾಡಿ..ರಾಡಿಯಾಗಿದೆ ಅಲ್ವಾ....ಹಸಿರು ಎಲ್ಲಿ ಹೋಯ್ತು ? ಅರ್ಥವಾಗೊಲ್ಲ....ಜನಜಾಗೃತಿಯೂ ಅಗತ್ಯ...ಸರ್ಕಾರದ ಪ್ರಾಮಾಣಿಕ ಪ್ರಯತ್ನದ ಜೊತೆಗೆ...

    ReplyDelete
  30. ವಸಂತ್, ಬೆಂಗಳೂರು, ಕೋಲಾರ, ತುಮಕೂರು, ಮಂಡ್ಯ, ಮೈಸೂರುಗಳು ಕೆರೆ ಕುಂಟೆಗಳಿಂದ ತುಂಬಿದ್ದ ಜಿಲ್ಲೆಗಳು ಈಗ ನೋಡಲು...ಹೆಸರಿಗೆ ಮಾತ್ರ ಕೆರೆಗಳಿವೆ...ಅಲ್ವಾ..ಧನ್ಯವಾದ ನಿಮ್ಮ ಅನಿಸಿಕೆಗೆ.

    ReplyDelete
  31. ನಾರಾಯಣ್ ಭಟ್ ಸರ್, ಹೌದು ಈಗಲೂ ಕಾಲ ಮಿಂಚಿಲ್ಲ ಎನ್ನುವುದೇ ನನ್ನ ಅಭಿಪ್ರಾಯ...ಪ್ರಾಮಾಣಿಕ ಪ್ರಯತ್ನ ಪ್ರಭುಗಳಿಂದ ಮತ್ತು ಪ್ರಜೆಗಳಿಂದ ಅಗತ್ಯ...ಏನಂತೀರಿ.

    ReplyDelete
  32. ವಿ.ಆರ್.ಬಿ. ನಿಮ್ಮ ಮಾತನ್ನು ಒಪ್ತೇನೆ.. ಕಾಂಕ್ರೀಟಿನ ರಭಸ ಕಾಡನ್ನು ಕೊಚ್ಚುತ್ತಿದೆ ಅಲ್ಲವೇ...? ಧನ್ಯವಾದ ಪ್ರತಿಕ್ರಿಯೆಗೆ.

    ReplyDelete
  33. ರಾಘು.... ಹೋಗುವಾಗಲೂ ಏನೂ ಕೊಂಡೊಯ್ಯುವುದಿಲ್ಲ ಆದರೂ ಪೀಪಾಸು ಮಾನವ ಏನೆಲ್ಲಾ ಅನರ್ಥಗಳಿಗೆ ಕಾರಣನಾಗುತ್ತಿದ್ದಾನೆ...ನೋಡಿ...ಅಲ್ಲವೇ..?

    ReplyDelete
  34. chennaagide.. sundaravaagi apaayavannu echcharisiddeeri..

    ReplyDelete
  35. ವಿಜಯಶ್ರೀ, ಎಚ್ಚೆತ್ತುಕೊಳ್ಳೋಕೆ ಜನ/ಸಮಾಜ್ ಮತ್ತು ಎಲ್ಲದಕ್ಕೂ ಹೆಚ್ಚಾಗಿ ನಮ್ಮ ಸರ್ಕಾರ ನಿದ್ದೆ ಮಾಡ್ತಿದ್ದರೆ ಪರ್ವಾಗಿಲ್ಲ....ಆದರೆ ಹಾಗೆ ನಟಿಸ್ತಿದ್ದಾರೆ...

    ReplyDelete
  36. ಸುಂದರ ಕವನ,,,,, ಚೆನ್ನಾಗಿ ವಿವರಿಸಿ ಹೇಳಿದ್ದಿರ......

    ReplyDelete
  37. ಅಜಾದ್ ಅವರೇ,
    ನಿಮ್ಮೂರಿಂದ ಏನ್ ತಂದ್ರಿ...? ನಮ್ಮೂರಿಂದ (ನಿಮ್ಮ ಊರು ಸಹ ) ಏನ್ ತಗೊಂಡೋದ್ರಿ.....?
    ಯಾಕಿಷ್ಟು ವಿಷಾದ? ದಿನಾ ಸಾಯೋರಿಗೆ ಅಳುವವರು ಯಾರು ಎನ್ನುವ ಹಾಗಿದೆ ಅಲ್ವೇ ಇಲ್ಲಿನ ಸ್ಥಿತಿ....
    ಬದಲಾವಣೆ ಬೇಕು ಎಂದು ಪ್ರತಿಯೊಂದು ಮನಸು ಹಾತೊರೆಯುತ್ತಿದೆ ಆದರೆ ಬದಲಾವಣೆ ತರುವವರು ಯಾರು?
    ಇದೆ ಗೊಂದಲದಲ್ಲೇ ನಿತ್ಯ ಜೀವನ ತನ್ನ ಪಾಡಿಗೆ ತಾನು ಸಾಗುತ್ತಾ ಇದೆ!
    ಕವನ ಅರ್ಥಗರ್ಭಿತವಾಗಿದೆ.

    ನೀವು ಕೊಟ್ಟ ನಂಬರ್ ಗೆ ಫೋನ್ ಮಾಡಿದ್ದೆ ಆದರೆ ಚಾಲನೆಯಲ್ಲಿಲ್ಲಾ ಎನ್ನುವ ಉತ್ತರ ಬಂತು....!
    ಮತ್ತೆ ಆಗಸ್ಟ್ ನಲ್ಲಿ ಬರುತ್ತೀರಾ? ಹೆಸರು ಕಂಡುಹಿಡಿದಿರಾ?

    ReplyDelete
  38. ಗುರು...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಅಂದಹಾಗೆ ಆಗಸ್ಟ್ ೨೨ಕ್ಕೆ ನನ್ನ ಕವನ ಸಂಕಲನ ಮತ್ತು ಶಿವು ಪುಸ್ತಕ ಬಿಡುಗಡೆ ಇದೆ..ಖಂಡಿತಾ ಬನ್ನಿ....

    ReplyDelete
  39. ರೀ...ಎಸ್ಸೆಸ್ಕೇ..ಬಿಎಸ್ಕೆ...ಎಮ್ಮೆಸ್ಕೆ...ಏನೋ ಒಂದು....ಯಾಕಂದ್ರೆ ಹೆಸರು ಹೇಳ್ದೆ ಸತಾಯಿಸ್ತಿದ್ದೀರಲ್ಲಾ...ಅದಕ್ಕೆ ನಾನೂ ಎಕ್ಸ್ ಪೈರ್ ಆದ ನಂಬರು ನಾನೂ ಕೊಟ್ಟೆ...ಆದ್ರೆ ನಾನು ನಿಮ್ಮ್ ಹಾಗೆ ಸತಾಯಿಸ್ಲಿಲ್ಲ....Buzz ನಲ್ಲಿ ಹಕಿದೆ ನನ್ನ ಡೋಕೋಮೋ ನಂಬರ್...7795725767....ಆಗಸ್ಟ್ 21ಕ್ಕೆ ಬರ್ತೇನೆ... ನಮ್ಮೂರಿಂದ (ಈಗ ಇರೋ ಊರು) ನಿಮ್ಮ-ನಮ್ಮೂರಿಗೆ (ಇಬ್ರ ಊರೂ) family ಜೊತೆ ಬಂದು ಬರುವಾಗ ಒಬ್ನೇ..ಬಂದೆ ಒನ್ಸೊಲ್ಪ ಸ್ವೀಟ್ಸ್ ತಂದೆ... ಧನ್ಯವಾದ ಕಾಮೆಂಟ್ಸ್ ಗೆ.....ಹೋಗ್ಲಿ ಮೈಲ್ ಮಾಡ್ರಿ...(suruaz@gmail.com)

    ReplyDelete
  40. ಸರ್ ಚೆನ್ನಾಗಿದೆ ಕವನ .. ಪರಿಸರದ ಮೇಲಿನ ಕಳವಳ.

    ಬರಿ ಬೆಂಗಳೂರೊಂದೆ ಅಲ್ಲ ಬೆಳೆಯುತ್ತಿರುವ ಎಲ್ಲ ಹಿರಿ ಕಿರಿ ನಗರಗಳಲ್ಲಿ

    ಬರಿ ನೆಲ ಕಂಡು ಬರುತ್ತಿದೆ.

    ಎಲ್ಲೆಲ್ಲೂ ತೀವ್ರಗತಿಯ ಬೆಳವಣಿಗೆ ...

    ಹೀಗೆ ಆದರೆ ಬಹು ಬೇಗ ನಡೆವುದು ಕಳೆಬರದ ಮೆರವಣಿಗೆ ..

    ReplyDelete
  41. ಧನ್ಯವಾದ ಶ್ರೀಧರ್, ಪರಿಸರದ ಕಾಳಜಿ ಎಲ್ಲರಿಗೆ ಬರಬೇಕು..ಸರ್ಕಾರ ಪ್ರಾರಂಭಿಸಿದರೆ ಜನ ಅನುಮೋದಿಸಬೇಕು, ಅನುಸರಿಸಬೇಕು...

    ReplyDelete
  42. ಜಲನಯನ ,
    ತುಂಬಾನೇ ಚೆನ್ನಾಗಿದೆ.. ವಾಸ್ತವದ ಚಿತ್ರೀಕರಣ.
    ಕೊನೆಯ ಸಾಲುಗಳು ತುಂಬಾ ಅರ್ಥಗರ್ಭಿತ ಮತ್ತು ಹಿಡಿಸಿದವೂ ಕೂಡ

    ReplyDelete
  43. ಅಜಾದ್,

    ನಾನು ಫೋಟೊಗ್ರಫಿಯಲ್ಲಿ ಎಷ್ಟು ಮೈಮರೆತಿದ್ದೆನೆಂದರೆ, ನಿಮ್ಮ ಹೊಸ ಲೇಖನಕ್ಕೆ ೪೪ ಕಾಮೆಂಟು ಬರುವವರೆಗೆ ನನಗೆ ಗೊತ್ತಾಗದಷ್ಟು. ಆಗಂತ ನೋಡಬಾರದೆಂದು ಅಲ್ಲ. ನಮ್ಮ ಮನೆಯಲ್ಲಿ ಫೋಟೊಗ್ರಫಿ ಗೆಳಯರು ಲಗ್ಗೆ ಹಾಕಿದ್ದರು. ಅದೆಲ್ಲದರ ನಡುವೆ ಬ್ಲಾಗ್ ಒಂದೇ ಅಲ್ಲ ಮೇಲ್ ಕೂಡ ನೋಡಲಾಗಿಲ್ಲ. ಇವತ್ತು ಎಲ್ಲವನ್ನೂ ನೋಡುತ್ತಿದ್ದೇನೆ. ನಿಮ್ಮ ಕವನ ಓದಿದೆ. ಪರಿಸರದ ಬಗ್ಗೆ ಕಾಡು ಉಳಿಸುವ ಬಗ್ಗೆ ನಿಮ್ಮ ಕವನವನ್ನು ಓದಿದೆ. ಚೆನ್ನಾಗಿದೆ. ನಾನು ಕೂಡ ಮರ ಉಳಿಸುವ ಬಗ್ಗೆ ಬರೆದಿದ್ದೆ. ಅಂದ ಮೇಲೆ ನಮ್ಮ ಇಬ್ಬರ ವೇವ್ ಲೆನ್ತ್ ಎಷ್ಟು ದೂರವಿದ್ದರೂ ಒಂದೇ ಅಲ್ಲವೇ!

    ReplyDelete
  44. ಗುರು, ಧನ್ಯವಾದ ನಿಮ್ಮ ಅಭಿಪ್ರಾಯ ಅನಿಸಿಕೆಗೆ. ನಮ್ಮ ವ್ಯವಸ್ಥೆಯ ಅವ್ಯ್ವಸ್ಥೆ ಈಗ ಇನ್ನೂ ನಗ್ನವಾಗುತ್ತಿದೆ...ಎಲ್ಲ ಕಳ್ಳರೇ...ನೋಡಿ ವಿದಾನ ಸಭೆ ಹೇಗೆ ಚತ್ರ ಆಗಿದೆಯೋ..?

    ReplyDelete
  45. ಶಿವು...ಹೌದು ನಿಮ್ಮ ಬ್ಲಾಗ್ ಪೋಸ್ಟ್ ನೋಡಿದೆ ಅದಕ್ಕೆ ಕಾಮೆಂಟ್ ಸಹಾ ಹಾಕಿದೆ.... ಹೌದು ನೋಡಿ ವಿಚಾರಗಳ ಭಾವ ಮಂಥನೆ ದಿಕ್ಕು ಒಂದೇ ಆಗಿದೆ...ಇದಕ್ಕೆ ಭೌತಿಕ ಭೌಗೋಳಿಕ ದೂರಗಳು ಅಡ್ಡಿಯಲ್ಲ....ಧನ್ಯವಾದ.

    ReplyDelete
  46. ಆಜಾದ್ ಸರ್,

    ನಿಮ್ಮ ಈ ಕವನ ನಂಗೆ ತುಂಬಾನೇ ಇಷ್ಟ ಆಯಿತು. ಎಲಾ ಸಾಲುಗಳು ತುಂಬಾ ಅರ್ಥಪೂರ್ಣವಾಗಿವೆ. ನಾನು ಪರಿಸರದ ಬಗ್ಗೆ ಬಹಳ ಹಿಂದೆ ಬ್ಲಾಗ್ ನಲ್ಲಿ ಒಂದು ಕವನ ಹಾಕಿದ್ದೆ. ಪರಿಸರದ ಮೇಲೆ ನಿಮಗಿರುವ ಕಾಳಜಿಯನ್ನು ಕವನದ ಮೂಲಕ ತುಂಬಾ ಚೆನ್ನಾಗಿ ಹೊರಗೆಡಹಿದ್ದಿರಿ. ಧನ್ಯವಾದಗಳು..

    ReplyDelete