Sunday, January 1, 2017

ಭ್ರಮಾಚಾರಿಗಳ ಎಡವಟ್ಟುಗಳು...


ಭ್ರಮಾಚಾರಿಗಳ ಎಡವಟ್ಟುಗಳು...
     
ಇದೇನಪ್ಪಾ ಭ್ರಮಾಚಾರಿ..? ಅಂತ ಯೋಚಿಸ್ತಿದ್ದಿರಾ..?? ಬಿಡಿ ಹೆಚ್ಚು ದಿಮಾಗಿಗೆ ಕಸರತ್ತು ಮಾಡಿಸ್ಬೇಡಿ,ನಾನೇ ಹೇಳ್ತೀನಿ. ಮದುವೆ ಆದವರು ಅನಿವಾರ್ಯವಾಗಿ (ಬೇಕಂತಲೇ ಅಂದ್ಕೊಳ್ಳಿ) ಹೆಂಡತಿಯನ್ನ ಅವಳ ತೌರಿಗೆ ಬಿಟ್ಟು ಬಂದಾಗ ಬರುವ ವೈಯಕ್ತಿಕ ಸ್ಥಿತಿಯೇ “ಭ್ರಮಾಚಾರ್ಯ” ಇಂತಹ ಸ್ಥಿತಿಗೆ ತಲುಪಿದವನೇ “ಭ್ರಮಾಚಾರಿ”. ಇನ್ನು ಇದು ಯಾವ ನಿಘಂಟಿನ ಅರ್ಥ? ಅಂತ ಮತ್ತೆ ಕೊಶ್ನೆ ಮಾಡ್ಬೇಡಿ...ನಾನು ಹೇಳ್ಬೇಕಂತಿರೋ ವಿಷಯ ಮರ್ತ್ ಹೋಗುತ್ತೆ.
          ಹಾಂ... ಭ್ರಮಾಚಾರಿಗಳು.. ಅನಿವಾರ್ಯಕ್ಕೋ ಅಥವಾ ಪ್ರಯೋಗಾರ್ಥವೋ ಅಡುಗೆ ಮಾಡಿಕೊಳ್ಳುವುದನ್ನು ನೋಡಿದರೆ ಯಾವುದೇ ಹೆಣ್ಣಿನ ತಂದೆ ತಾಯಿ ತಮ್ಮ ಮಗಳನ್ನು ತವರಿಗೆ ಬರೋಕೆ ಬಿಡೊಲ್ಲ.. ಯಾಕೆ ಗೊತ್ತಾ... ಇಂತಹ ಕೆಲವು ಭ್ರಮಾಚಾರಿಗಳು ಅಡುಗೆ ಅಪ್ಪಿ ತಪ್ಪಿ ಮಾಡಿಬಿಟ್ರೆ..ಅದನ್ನ ತಿನ್ತಾರೋ ಬಿಡ್ತಾರೋ ಗೊತ್ತಿಲ್ಲ..ಆದ್ರೆ ಜಿರಳೆ, ಇರುವೆಗಳಿಗಂತೂ ಹಬ್ಬ..!! ಇನ್ನು ಬಚ್ಚಲು ಮನೆಯಲ್ಲಿ ಅವರುಗಳು ಮಾಡುವ ಅವಾಂತರ ಚಿತ್ರಣ ಯಾವ ಕುರುಕ್ಷೇತ್ರಕ್ಕೂ ಕಡಿಮೆ ಇರುವುದಿಲ್ಲ. ಒಂದು ದೇಕ್ಷಾದಲ್ಲಿ ಹೊರಗೆ ಇಟ್ಟು ಮರೆತುಹೋದ (ಮೂರು ದಿನದ್ದು) ಬೆಂಡೆಕಾಯಿ ಪಲ್ಯ (ಅವರು ಹೇಳಿದ್ದರಿಂದ ಹಾಗೆ ಕರೆಯಬಹುದಷ್ಟೇ), ವಾಸ್ತವಕ್ಕೆ ಏನಿರಬಹುದು ಎನ್ನುವುದನ್ನು ಯಾವ ಫೋರೆನ್ಸಿಕ್ ಲ್ಯಾಬ್ ನವರೂ ಕಂಡುಹಿಡಿಯಲಾರರು. ಇನ್ನೊಂದರಲ್ಲಿ ಸೀದು ಕರಕಲಾದ ಕಮಟುಗಟ್ಟಿದ ಹಾಲಿನ ಅವಶೇಷಗಳನ್ನು ಹುಡುಕಲೂ ಸಾಧ್ಯವಾಗದ ಸ್ಥಿತಿಯ ಒಂದು ಪದಾರ್ಥ. ಇನ್ನು ಸಿಂಕಿನ ಕಥೆಯೋ ಕೇಳಲೇ ಬೇಡಿ.
ಒಬ್ಬ ನನ್ನ ಸ್ನೇಹಿತ ಹೀಗೇ ಹೆಂಡತಿಯನ್ನ ತವರಿಗೆ ಕಳುಹಿಸಿದ ೧೦ ದಿನದಲ್ಲಿ ..ಮನೆಯೊಡೆಯ ನನಗೆ ಫೋನ್ ಮಾಡಿದ. “ಸರ್, ನೀವು ಹೇಳಿದ್ರಿ ಅಂತ ಮನೆ ಬಾಡಿಗೆಗೆ ಕೊಟ್ಟೆ, ಮನೆ ಮಹಾಲಕ್ಷ್ಮಿ ಇದ್ದ ೨ ವರ್ಷವೂ ಆಹಾ ಪೂಜೆಯ ಸುಗಂಧದಿಂದ ಆಕೆ ಮಾಡುತ್ತಿದ್ದ ಕಾಫಿಯ ಘಮದವರೆಗೂ ಎಲ್ಲವನ್ನೂ ಆಸ್ವಾದಿಸಿದೆವು, ಆವಮ್ಮ ಹೋಗಿ ೫ ದಿನ ಆಗಿರ್ಲಿಲ್ಲ... ನಮ್ಮ ಮನೆಯ ಬಚ್ಚಲು ಪೈಪ್ ಕಟ್ಕೊಳ್ತು.. ಪ್ಲಂಬರ್ನ ಕರೆಸಿ ಕ್ಲೀನ್ ಮಾಡ್ಸಿದೆ. ಇನ್ನೂ ೫ ದಿನ ಆಗಿಲ್ಲ ಈಗ ಮತ್ತೆ ಪೈಪ್ “ನನ್ ಕೈಲಾಗೊಲ್ಲ ಅಂತ ಕೈ ಎತ್ತಿದೆ. ಪ್ಲಂಬರ್ನ ಕೇಳಿದ್ದಕ್ಕೆ, ಆಯ್ಯೋ, ತರಕಾರಿ, ಮಿಕ್ಕ ಪಲ್ಯ, ಹಳಸಲು ಅನ್ನ ಎಲ್ಲಾ ಪೈಪನ್ನ ಜಾಮ್ ಮಾಡಿ ಸಿಲ್ಕ್ ಬೋರ್ಡ್ ಜಂಕ್ಶನ್ನೂ ನಾಚ್ಕೊಳ್ಳೋ ಹಂತಕ್ಕೆ ತಂದಿಟ್ಟಿದ್ದಾರೆ ಅಂದ. ಒಂದೋ ಅವರಿಗೆ ಹೋಟೆಲ್ ಊಟ ತರಿಸಿಕೊಳ್ಳೋಕೆ ಹೇಳಿ, ಇಲ್ಲ ಯಾರಾದರೂ ಪಾರ್ಟ್ ಟೈಮ್ ಅಡುಗೆಯವಳನ್ನ ಗೊತ್ತು ಮಾಡಿಕೊಳ್ಳೋಕೆ ಹೇಳಿ. ಎರಡೂ ಆಗೊಲ್ಲ ಅಂದ್ರೆ ಮನೆ ಖಾಲಿಮಾಡೋಕೆ ಹೇಳಿ, ಅಂತ ಫೋನ್ ಕುಕ್ಕಿದ್ರು. ಸಂಜೆ ಸಿಕ್ಕ ನಮ್ಮ ಭ್ರಮಾಚಾರಿ, ಕೇಳಿದ್ದಕ್ಕೆ, ಲೋ, ಅಡುಗೆ ಮಾಡ್ಕೊಳ್ಳೋದನ್ನೇನೋ ಮಾಡ್ತೀನಿ ಆದರೆ ಮುಸುರೆ ತೊಳಿಯೋದು ನನ್ನ ಕೈಲಾಗೊಲ್ಲ... ಅಂದ. ನಮ್ಮ ಮನೆಗೆ ಬರ್ತಾಳಲ್ಲ ಆ ಕೆಲ್ಸದವಳಿಗೆ ಪಾರ್ಟ್ ಟೈಮ್ ಕೆಲ್ಸ ಹೇಳೋ, ಮಾಡ್ತಾಳೆ ಅಂದೆ...ಯಪ್ಪಾ..ಬ್ಯಾಡಪ್ಪಾ.. “ಮನೆದೇವ್ರು ಚಿತ್ರದಲ್ಲಿ ಕ್ರೇಜಿ ಸ್ಟಾರ್ ಅರವಿಚಂದ್ರನ್ ಎಡವಟ್ ಮಾಡ್ಕಂಡಂಗೆ ಮಾಡ್ಕಂಡ್ರೆ...??” ಅಂತ ಸಜೆಶನ್ ತಳ್ಳಿ ಹಾಕಿದ್ದ. ಅವನು ಹೇಳಿದ್ರಲ್ಲಿ ಅರ್ಥ ಇತ್ತು ಅನ್ನಿ... ಮನೆಯೊಡತಿ ಇಲ್ಲ ಅಂದ್ರೆ ಎರಡುದಿನಕ್ಕೊಮ್ಮೆ ತೀರ್ಥಸೇವನೆ ಆಗಬೇಕು ಇವನಿಗೆ. ಮೊನ್ನೆ ಕುಡ್ದು ಓಲಾಡ್ತಾ ಪಕ್ಕದ್ಬೀದಿ ಕ್ರಿಶ್ಚಿಯನ್ ನವದಂಪತಿಗಳ ಮನೆಗೆ ಹೋಗಿ ಕದ ತಟ್ತಾ ಇದ್ದ... ಸದ್ಯ ಸಮಯಕ್ಕೆ ಸರಿಯಾಗಿ ಅವನನ್ನ ನೋಡೊಕೆ ನಾನು ಬಂದಿದ್ದಕ್ಕೂ ಸರಿಹೋಯ್ತು... ಕೈಹಿಡಿದು ತಂದು ಅವನ್ನ ಮನೆಗೆ ಕರೆದೊಯ್ದು ಮಲಗಿಸಿ ಬಂದಿದ್ದೆ !!
ಅವ್ರಿವ್ರ ಕತೆ ಇರ್ಲಿ ನಿಂದೇನು...? ಅಂತ ಕೇಳ್ತೀರಾ...??  ನನ್ನದು ಅಂತಹ ಎಡವಟ್ಗಳು ಏನೂ ಆಗಿಲ್ಲ. ಆದರೂ ಗಂಡಸು ಯಾವಗಲೋ ಒಮ್ಮೆ ಅಡುಗೆಗೆ ನಿಂತ್ರೆ ಅಡುಗೆ ಮಾಡೋದು ಗೊತ್ತಿದ್ರೂ ಎಡವಟ್ ಆಗೊಲ್ಲ ಅನ್ನುವವರು ಪ್ರಾಮಾಣಿಕರಲ್ಲ ಅಂತ ನನ್ನ ಅನಿಸಿಕೆ. ಅದರಲ್ಲೂ ಒಲೆಯ ಮೇಲೆ ಎರಡೆರಡು ಬರ್ನರ್ ಉಪಯೋಗಿಸ್ದ್ರಂತೂ ಏನಾದರೂ ಆಗಿಯೇ ತೀರುತ್ತೆ.
ಮೊನ್ನೆ ಏನಾಯ್ತು ಅಂತೀರಿ.. ಮೀನಿನ ಸಾರು ಮಾಡಿದ್ದೆ, ಸರಿ ಅದಕ್ಕೆ ತಕ್ಕ ಸೆಡ್ಡುಹೊಡೆಯುವ ಸಾಥ್ ನೀಡೋದು ರಾಗಿ ಮುದ್ದೆ ಅನ್ನೋದು ನನ್ನ ಕಟ್ಟಾ ಅಭಿಪ್ರಾಯ. ಟೀ ಕುಡಿಯೋ ಮನಸೂ ಆಗಿತ್ತು. ಸರಿ, ಮುದ್ದೆ ಮಾಡಿ ಊಟ ಆದ ಮೇಲೆ ಜೊತೆಗೇ ಚಹಾ ಆಸ್ವಾದನೆ ಚನ್ನಾಗಿರುತ್ತೆ ಅಂತ, ಟೂ-ಇನ್-ಒನ್ ಕೆಲ್ಸ ಸುರು ಹಚ್ಕೊಂಡೆ. ಮುದ್ದೆಗೆ ಎಸ್ರಿಗೆ ನೀರಿಟ್ಟೆ, ಇನ್ನೊಂದರ ಮೇಲೆ ಅಂತಹುದೇ ಇನ್ನೊಂದು ಪಾತ್ರೆ ಇಟ್ಟು ನೀರು ಮತ್ತು ಹಾಲು (೫೦-೫೦) ಹಾಕಿ ಚಹಾಪುಡಿ ಹಾಕಿ ಕುದಿಸಿದೆ.. ಇನ್ನೊಂದು ಬರ್ನರ್ ಮೇಲೆ ಎಸರು ಕುದಿಯುವಾಗ ರಾಗಿ ಉರುಟನ್ನು ಹಾಕಿದೆ. ಆ ಕಡೆಯ ಪಾತ್ರೆಗೆ ನಂತರ ಸಕ್ಕರೆ ಹಾಕಿ ಸೋಸಿ ಚಹಾ ಫ್ಲಾಸ್ಕಿಗೆ ಹಾಕಿಟ್ಟೆ. ಆ ಹೊತ್ತಿಗೆ ಮುದ್ದೆಯ ಹಿಟ್ಟು ಬೆಂದಿತ್ತು, ಚನ್ನಾಗಿ ತೊಳಸಿ ಮುದ್ದೆ ಮಾಡಿ ಕ್ಯಾಸೆರೋಲ್ ಗೆ ಹಾಕಿ, ಮೀನಿನ ಸಾರನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಡೈನಿಂಗ ಟೇಬಲ್ ಮೇಲೆ ತಂದಿಟ್ಟು, ತಟ್ಟೆಗೆ ಮುದ್ದೆ ಹಾಲಿ, ಮೀನಿನ ಸಾರನ್ನು ಬಟ್ಟಲಲ್ಲಿ ಹಾಕಿದೆ, ಮೀನಿನ ಒಂದು ತುಂಡನ್ನು ಬಾಯಿಗಿಟ್ಟೆ..ವಾಹ್!! ವಾಹ್!! ಸುಮ್ನೆ ಹೇಳೊಲ್ಲ ನನ್ನ ಸ್ನೇಹಿತರು, “ಗುರೂ ನಿನ್ನ ಕುವೈತ್ ನ ಕೆಲಸಕ್ಕೆ ಗುಡ್ ಬೈ ಹೇಳಿ ಬೆಂಗಳೂರಿಗೆ ಹೋದರೆ ಬರೀ ಮುದ್ದೆ-ಮೀನಿನ ಸಾರಿನ ಮೆಸ್ ನಡೆಸಿದರೂ ಎಲೆಕ್ಟ್ರಾನಿಕ್ ಸಿಟಿ ಟೆಕ್ಕಿಗಳೆಲ್ಲಾ...ಪೇಟಿಯಮ್ ಮಾಡಿ ಮಾಡಿ ನಿನ್ನ ಇಲ್ಲಿನ ಸಂಬಳದ ಎರಡರಷ್ಟು ಕಮಾಯಿ ಆಗದೇ ಇದ್ರೆ ಹೇಳು” ಅಂತ ಹೇಳೋದು ಅನ್ನಿಸಿದ್ದಂತೂ ನಿಜ. ಸರಿ, ಮುದ್ದೆ ಮುರಿದು ಮೀನಿನ ಸಾರಲ್ಲಿ ಅದ್ದಿ ನುಂಗಿದೆ.. ಕಣ್ಣು ಮೇಲೆ ಕೇಳಗಾಯ್ತು... ಅರೆ..ಏನಿದು..!!?? ಬಂಗಾಲಿಗಳ ರೊಸೊಗೊಲ್ಲ ಉಂಡೆನ ಮೀನಿನ ಸಾರಲ್ಲಿ ಅದ್ದಿ ತಿಂತಾ ಇದ್ದೀನಾ..?? ನನ್ನ ಆಶ್ಚರ್ಯ ಒಮ್ದು ಹಂತಕ್ಕೆ ಬರೋಹೊತ್ತಿಗೆ ಮುದ್ದೆ ತುತ್ತು ಗಂಟಲು ದಾಟಿತ್ತು... ನಂಬಿಕೆ ಬರಲಿಲ್ಲ... ಇನ್ನೊಂದು ತುತ್ತು ಬಾಯಿಗೆ ಹಾಕಿದೆ...”ತ್ ತ್ ಥೂ” ಆಗಲಿಲ್ಲ ಉಗುಳಿಬಿಟ್ಟೆ.,... ಹೌದು ಮುದ್ದೆಗೆ ಸಕ್ಕರೆ ಹಾಕಿದ್ದೆ!!  ನನ್ನ ಪುಣ್ಯಕ್ಕೆ ಅನ್ನ ಇತ್ತು ಅದನ್ನೇ ಹಾಕಿಕೊಂಡು ತಿಂದು ಮುದ್ದೆಯ ಪಾತ್ರೆಯನ್ನು ನಲ್ಲಿಯಕೆಳಗಿಟ್ಟು..ನೀರು ಬಿಟ್ಟೆ..!!!
ಏನೋ ಹೊಳೆಯಿತು... ಫ್ಲಾಸ್ಕ್ ತೆಗೆದು ಚಹಾ ಲೋಟಕ್ಕೆ ಬಗ್ಗಿಸಿ, ಹಿಂಜರಿಯುತ್ತಲೇ ಒಮ್ಮೆ ಸಿಪ್ಪರಿಸಿದೆ...”ಯಕ್..ಥೂ...”!!! ನನ್ನ ಅನುಮಾನ ನಿಜವಾಗಿತ್ತು... ಮುದ್ದೆಗೆ ಹಾಕಬೇಕಿದ್ದ ಉಪ್ಪನ್ನು ಚಹಾ ಪಾತ್ರೆಗೆ ಹಾಕಿದ್ದೆ... ಈಗ ನಲ್ಲಿ ಕೆಳಗೆ ಸ್ನಾನ ಮಾಡಲು ಮುದ್ದೆಯ ಪಾತ್ರೆಯ ಜೊತೆಗೂಡಿದ್ದು ಚಹಾ ಪಾತ್ರೆ!!

ಅಡುಗೆಯನು ಅರಿಯದವರೇ ಎಡವಟ್ ಮಾಡಬೇಕೆಂದೇನಿಲ್ಲ... ಚನ್ನಾಗಿ ಅಡುಗೆ ಮಾಡುವ ಹೆಣ್ಣು ಮಕ್ಕಳೂ ಕೆಲವೊಮ್ಮೆ ಎಡ್ವಟ್ ಮಾಡೋದುಂಟು...ಆದರೆ ಈ ಭ್ರಮಾಚಾರಿಗಳು ಮಾಡುವ ಎಡವಟ್ ವಾಹ್...!! ಅವರ ಅಡುಗೆಯಷ್ಟೇ ವಿಭಿನ್ನ ವಿನೂತನ ವಿಚಿತ್ರ ವಿನೋದಮಯ ವರ್ಣನಾತೀತ.   


3 comments:

  1. ಭ್ರಮಾಚಾರಿ ಎನ್ನುವ ನಿಮ್ಮ ಪದರಚನೆ ತುಂಬ ಚೆನ್ನಾಗಿದೆ, ನಗು ತರಿಸುತ್ತದೆ. ಇನ್ನು ಲೇಖನವಂತೂ ಹೊಸ ವರ್ಷಕ್ಕೆ ನನಗೆ ಹಾಸ್ಯದ ಕೊಡುಗೆಯಂತೆ ಅನಿಸಿತು. ತುಂಬ ಧನ್ಯವಾದಗಳು. ನೀವು ಅಡುಗೆ ಮಾಡುವ ಬದಲು ಇನ್ನಿಷ್ಟು ವಿನೋದಲೇಖನಗಳನ್ನು ನಮಗೆ ಬಡಿಸಿರಿ ಎಂದು ವಿನಂತಿಸುತ್ತೇನೆ!

    ReplyDelete
  2. ಹಹಹ ಸುನಾಥಣ್ಣ... ಹಂಗಂದ್ರೆ ನನ್ನ ಅಡುಗೆ ಬೇಡ ಅಂತೀರಾ...? ಅಡುಗೆ ಎಡವಟ್ ಒಂಥರಾ ಮಾಡಿದ್ಮೇಲೆ ಬರೋದೇ...ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ.

    ReplyDelete
  3. ಹೌದೆನ್ನಿ.. ಯಜಮಾನಿಯಿರದ ಮನೆ ಗಂಡುಗಳ ಕಥೆಯೇ ಇಷ್ಟು ಎನ್ಬಹುದು.. ಆದ್ರೂ, ಊರಿನ ಮದುವೆ, ಬೀಗ್ಳು, ಹಬ್ಬ-ಹುಣ್ಣಿಮೆಗಳಲ್ಲಿ ಗಂಡಸರು ಮಾಡಿದ ಅಡುಗೆ ರುಚಿ ಹೆಂಗಸರಿಗೂ ಬಾಯ ಮೇಲೆ ಬೆರಳಿಡಿಸುತ್ತಲ್ಲ ಅದ್ಹೇಗೋ.. ಒಟ್ನಲ್ಲಿ ಹೆಮ್ಮೆ.

    ReplyDelete