Friday, April 5, 2019

ನೆಪ...ಬ್ಲಾಗ್ ಬರಹಕ್ಕೂ ನೆಪ ಬೇಕಾಯ್ತು...

ನೆಪ ಕುಂಟುತ್ತಾ?
(ಬ್ಲಾಗ್ ಬರಹಕ್ಕೂ ನೆಪ ಬೇಕಾಯ್ತು...ಧನ್ಯವಾದ ಬದರಿ)

Image result for Village teacher
ಶಾಲೆಯ ಮನೆ ಕೆಲಸ ಅಥವಾ ಹೋಮ್ ವರ್ಕ್ ಎಂದರೆ ನನಗೇನೂ ಬಹುಶಃ ಯಾರಿಗೂ ಇಷ್ಟವಾಗುತ್ತಿರಲಿಲ್ಲವೇನೋ..ಇದೇ ಕಾರಣವಾಗಿತ್ತು..ಹಲವು ಸಲ ಹುಣಿಸೆ ಬರ್ಲಿನಲ್ಲಿ (ಗಣಿತದ ಮೇಷ್ಟ್ರು) ಅಥವಾ ಮುಖ್ಯೋಪಾದ್ಯಾಯ (ಇಂಗ್ಲೀಷ್ ಟೀಚರು) ರ “ರೂಲರ್ ದೊಣ್ಣೆಯ” ಪೆಟ್ಟು ತಿಂದಿದ್ದೆ. ನಾನೇ ಅಲ್ಲ ಹಲವರು ತಿನ್ನುತ್ತಿದ್ದುದೇ ನನಗೂ ಸಮಾಧಾನದ ಅಂಶ ಆಗಿತ್ತು. ಹಾಗೆ ನೋಡಿದರೆ ಶಾಲೆಯಲ್ಲಿ ಏಟು ತಿಂದದ್ದು ಕಡಿಮೆಯೇ ಏಕೆಂದರೆ ಬಹುಪಾಲು “ಹೋಮ್ ವರ್ಕ್” ಶಾಲೆಯಲ್ಲೇ ಮುಗಿಸಿಬಿಡುತ್ತಿದ್ದೆ. ಅಪ್ಪಿ ತಪ್ಪಿ ಆಗಲಿಲ್ಲವೆಂದರೆ ಅದು ಮನೆಗೆ ಬಂದಮೇಲೆ ಆಗುವುದಂತೂ ಎಷ್ಟು ಶತ ಸಿದ್ಧವಾಗುತ್ತಿತ್ತೋ ಅಷ್ಟೇ ಶತ ಸಿದ್ಧ.. ಬರ್ಲು ಅಥವಾ ರೂಲರ್ ನ ಅಂಗೈ ಮೇಲೆ ನರ್ತನ..ಜೊತೆಗೆ ನಮ್ಮದೂ ಆಗ್ತಿತ್ತು…ಛಟೀರ್ ಅಂತ ಒಂದು ಬರ್ಲಿನ ಪೆಟ್ಟು ಸಾಕಲ್ವೇ.. ಇನ್ನು ರೂಲರ್ ನಿಧಾನಕ್ಕೇ..ಗೆಣೆಮೇಲೆ ಬೀಳುತ್ತಿದ್ದುದು.., ಆದರೆ ನೋವು ಮಾತ್ರ ಅಪಾರ.
          ಇದೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ… ಆಗ ಗುರುಗಳು ಗುರ್ರಾಯಿಸಿ ಜೋರಾಗಿ ಹೊಡೀತಾ “ನೆಪ” ಹೇಳ್ತೀಯಾ ಭಡವಾ ಎನ್ನುತ್ತಿದ್ದಾಗ.. ಈ “ನೆಪ” ಪದ ಏಟಿನ ಜೊತೆ ಅವಿನಾಭಾವ ಸಂಬಂಧ ಹೇಗೆ ಹೊಂದಿದೆ ಎನ್ನುವ ನೆನಪಾಗಿ. ಆ ನೆನಪು ಬರಲೂ ಕಾರಣವಿದೆ.. ಫೇಸ್ಬುಕ್ ಅಂದ್ರೆ ಏನೋ ಒಂದು ಗೀಳು ಎನ್ನುವುದು ನಿಜವಾದರೂ ಈ ಸಾಮಾಜಿಕ ಜಾಲತಾಣ ಎಷ್ಟೋ ಹಳೆಯ ಸಂಬಂಧಗಳಿಗೆ ಹೊಸ ಜಾಡುಕೊಟ್ಟಾಗ ಅನಿಸುವುದು…”ಧನ್ಯವಾದ ಫೇಸ್ಬುಕ್”. ನೆನ್ನೆ ಹೀಗೆಯೇ ಸ್ನೇಹಿತನೊಬ್ಬನ ಮೂಲಕ ನನ್ನ ಪ್ರಾಥಮಿಕ ಶಾಲಾ ಗಣಿತದ ಮೇಷ್ಟ್ರ ಅಚಾನಕ್ ಸಂದೇಶ ಬಂದಿತ್ತು. ಚನ್ನಪ್ಪ ಮಾಸ್ತ್ರ ಹೆಸರಷ್ಟೇ “ಹುಣಿಸೆ ಬರ್ಲೂ” ಪರಿಚಿತವಾಗಿತ್ತು ನಮ್ಮಲ್ಲಿ ಹಲವರಿಗೆ. ಅವರ ನೆನಪಿನೊಡನೆಯೇ ನೆನಪಿಗೆ ಬಂದಿದ್ದು “ಮನೆಕೆಲ್ಸ ಮಾಡಿಕೊಂಡು ಬರ್ದೇ ನೆಪ ಹೇಳ್ತೀಯಾ ಭಡವಾ” ಎನ್ನುತ್ತಾ ಅವಡುಗಚ್ಚಿ ಬರ್ಲಿನ ಮಧ್ಯದಲ್ಲಿ ಹಿಡಿತದ ಅವರ ಅಂಗೈ ಮೇಲೆ ನಡೆಸುತ್ತಿದ್ದ ಬರ್ಲು ನರ್ತನ. ನೆಪ ಎನ್ನುವ ಪದವೂ ನಮಗೆ ಒಂಥರಾ ಇಂಗ್ಲೀಷ್ ಪದದಂತೆಯೇ ಇತ್ತು…
ಈ ಪದವನ್ನು ಈ ದಿನ ವ್ಯುತ್ಪತ್ತಿಗಾಗಿ ಹುಡುಕಿದೆ “ಬರಹ ಅಂತರ್ಜಾಲ ನಿಘಂಟಿನಲ್ಲಿ”… ಅರೆ..ಏನಾಶ್ಚರ್ಯ …. ಹೀಗೆ ಬಂತು ಉತ್ತರ…
"ನೆಪ"
ಹುಡುಕು.........
ಸಿಗ್ತಿಲ್ಲ.....!!
(ನೆಪವೂ ಸಿಗ್ಲಿಲ್ಲ..ಹಹಹ)
ನಮ್ಮ ಚನ್ನಪ್ಪ ಮಾಷ್ಟ್ರಾಗಿದ್ದಿದ್ರೆ…”ನೆಪ ಹೇಳ್ತಿಯಾ ಭಡವಾ” ಅಂತ ಕೋ ಬೋರ್ಡಿನ ಮೇಲೆಯೇ ಬರ್ಲಿನ ನರ್ತನ ಮಾಡಿಸುತ್ತಿದ್ದರೋ ಏನೋ… !!
ಸಂಕ್ಷಿಪ್ತ ಕನ್ನಡ ನಿಘಂಟನ್ನು ನೋಡಿದೆ: ಅದರಲ್ಲಿ ನೆಪ ಮತ್ತು ನೆವ ಎರಡಕ್ಕೂ ಸಮಾನ ಅರ್ಥವಿತ್ತು. ನೆಪ= ಕಾರಣ, ಹೇತು (ಬರ್ಲಿನ ನರ್ತನ ಜೋರಾದರೆ ಅಂಗೈ ಮುಂದೆ ಮಾಡಿದವ ಇದನ್ನೂ ಮಾಡಿಕೊಳ್ಳುತ್ತಿದ್ದ…ಹಹಹ), ನಿಮಿತ್ತ, ಉದ್ದೇಶಪೂರ್ವಕವಾದ ನಟನೆ, ಯುಕ್ತಿ, ಕಪಟ, ಸಬೂಬು, ದೋಷಾರೋಪಣೆ, ಹೋಲಿಕೆ, ಸಾಮ್ಯ, ವಿಧ, ರೀತಿ, ಇತ್ಯಾದಿ.
ನಮಗೆ ಸಾಮಾನ್ಯ ಅರ್ಥ ಎನಿಸುವುದು- ಸರಿಯಾದ ಕಾರಣ ಕೊಡದೇ ಯಾವುದೋ ಒಂದು ಕೆಲಸ ಮಾಡದೇ ಏನೋ ಒಂದು ಕಾರಣ ಕೊಡುವುದು.
ಯಾಕೋ ಶಾಲೆಗೆ ಲೇಟು? – ಸೈಕಲ್ ಪಂಚರ್ ಆಗೋಯ್ತು ಸಾ; ಅಪ್ಪ ತ್ವಾಟಕ್ಕೆ ಕಳ್ಸಿದ್ದ ಸಾ, ಅಮ್ಮ ಅಪ್ಪಂಗೆ ಬುತ್ತಿ ಕೊಟ್ ಹೋಗು ಸಾಲೆಗೆ ಅಂದ್ರು ಸಾ… ನಮ್ದೂ ಕೆ ಅಮ್ಮೀದು ತಬೀಯತ್ ಖರಾಬ್ ಆಗಿತ್ತು ಸಾ…ಹೀಗೆ…
ನೆಪ – ಏಕೆ ಕೊಡುತ್ತೇವೆ ಅಥವಾ ಹೇಳುತ್ತೇವೆ?
ನಮ್ಮ ಯಾವುದೋ ಒಂದು ಕಾರ್ಯ ಲೋಪವನ್ನು ಸಮರ್ಥಿಸಿಕೊಳ್ಳುವುದು..
ನಮ್ಮ ಶಾಲೆಯಲ್ಲಿ.. ಶಾನುಭೋಗರ ಮಗ ಬಹಳ ಜಾಣ. ಅವನೊಮ್ಮೆ ಹೋಮ್ ವರ್ಕ್ ಮಾಡಿರಲಿಲ್ಲ. ಚನ್ನಪ್ಪನವ್ರಿಗೆ ಪರಮಾಶ್ಚರ್ಯ. ಆದರೆ ಶಿಸ್ತು ಅಂದ್ರೆ ಎಲ್ಲರಿಗೂ ಒಂದೇ..ಅಲ್ವಾ? ಸರಿ.. ಯಾಕೋ ವಾಸು ಹೋಮ್ ವರ್ಕ್ ಮಾಡಿಲ್ಲ ..ಎಂದಾಗ ..ವಾಸು ಶಾಂತನಾಗಿ.. ಕಣ್ಣು ಮುಚ್ಚಿಕೊಂಡು ಅಂಗೈ ಮುಂದೆ ಮಾಡಿದಾಗ..
ಚನ್ನಪ್ಪ ಮೇಷ್ಟ್ರು: ಯಾಕೋ..ಅಂತ ಕೇಳಿದ್ರೆ “ಏಟೇ ಕೊಡಿ ಅಂತೀಯಲ್ಲಾ” ಯಾಕೆ ಹೇಳು..
ವಾಸು: ಸರ್ ಆಡೋಕೆ ಹೋಗಿ ಮನೆ ಬಂದು ತಡವಾಯ್ತು.. ಅಪ್ಪ..”ಅವನಿಗೆ ಊಟ ಹಾಕ್ಬೇಡ..ಆಡೋಕೆ ಹೋಗಿ ಈಗ ಬಂದಿದ್ದಾನೆ, ಹಸ್ವೆ ಆದರೆ ಬುದ್ಧಿ ಬರುತ್ತೆ” ಅಂತ ಅಮ್ಮನಿಗೆ ಹೇಳಿ ನಾನು ಉಪವಾಸ ಮಲ್ಗೋಹಾಗೆ ಮಾಡಿದ್ರು…
ಮೇಷ್ಟ್ರು: ಛೇ ಪಾಪ.. (ಅವರ ಕೋಪ ಎಲ್ಲಿ ಹೋಗಿತ್ತೋ)..ಮತ್ತೆ ಉಪವಾಸ ಮಲಗಿದ್ಯಾ?
ವಾಸು: ಃಊಂ ಸಾ..ಆದರೆ ಅಮ್ಮ ..ಅಪ್ಪ ಮಲಗಿದ್ಮೇಲೆ ನಾಲ್ಕು ಕೈ ತುತ್ತು ಹಾಕಿ ಮಲಗಿಸಿದ್ಳು..ಹಾಗಾಗಿ ಹೋಮ್ ವರ್ಕ್ ಮಾಡೋಕೆ ಆಗಲಿಲ್ಲ.. ಎಂದ
“ಹೋಗಲಿ ಬಿಡು ನಾಳೆ ಮಾಡ್ಕೊಂಡ್ ಬಾ” ಅಂತ ಸುಮ್ಮನೆ ತಾಗಿಸಿದ ಹಾಗೆ ಮಾಡಿ ಬಿಟ್ಟು ಬಿಟ್ಟರು..
ಮಾಮೂಲಿನಂತೆ ಏಟು ತಿನ್ನುತ್ತಿದ್ದ ಎಂಕ್ಟ ಮಾತ್ರ ನೆಪ ಹೇಳೋದು ಮರೆಯೋನಲ್ಲ.. ಏಟು..ತಪ್ಪ್ತಾನೂ ಇರ್ಲಿಲ್ಲ. ಮುಂದಿನ ದಿನ..ಎದ್ದು ನಿಂತವನೇ ಏನೂ ಹೇಳದೇ ಕೈ ಮುಂದುಮಾಡಿದ..
ಚನ್ನಪ್ಪ ಮೇಷ್ಟ್ರು..”ಅರೆ ಇವನಾ ಯಾಕೆ ಮಾಡಲಿಲ್ಲ ಹೇಳೋ ಅಂತ ಹೇಳಿದ್ದಕ್ಕೆ”
ಎಂಕ್ಟ “ವಾಸು ನ ಪ್ಲೇಟ್ ಪ್ಲೇ ಮಾಡಿದ” ಇನ್ನೂ ಪೂರ್ತಿ ಹೇಳಿರ್ಲಿಲ್ಲ…
“ಛಟೀರ್” ಅಂತ ಹುಣ್ಸೆ ಬರ್ಲು ಎರಡು ಸಲ ಅವನ ಅಂಗೈ ಮೇಲೆ ಡ್ಯಾನ್ಸ್ ಮಾಡ್ತು..ಎಂಕ್ಟಾನೂ ಡ್ಯಾನ್ಸ್ ಮಾಡ್ದ ಅನ್ನಿ…ಉಸ್ಸ್…ಉಸ್ಸ್.. ಅಂತ…!!
ಏಟು ಕೊಡ್ತಾ ಮೇಷ್ಟ್ರು ಹೇಳಿದ್ದು..”ಭಡವಾ ಕುಂಟು ನೆಪ ಹೇಳ್ತೀಯಾ”
ತಕಳಪ್ಪಾ…ನೆಪ ಕುಂಟೋಕೂ ಸಾಧ್ಯಾನಾ…??

ಈಗ ನೀವು ಹೇಳಿ… “ನೆಪ ಅಂದ್ರೇನು… ಕುಂಟುನೆಪ ಅಂದ್ರೇನು..?”

6 comments:

  1. ಕಾರಣಗಳು ಏನೇ ಇರಲಿ ಅದು ನೆಪವಾಗೋಕೆ ಸಾಧ್ಯ .. ನಿಜವಾದ ಕಾರಣವನ್ನು ಮುಚ್ಚಿಡೋಕೆ ಪ್ರಯತ್ನ ಮಾಡಿದಾಗ..

    ಸೂಪರ್ ಲೇಖನ.. ಆ ದಿನಗಳಲ್ಲಿ ಹೋಂ ವರ್ಕ್ ಭೂತ ಕಾಡುತ್ತಿದ್ದ ಪರಿ ಹೇಳಲಸಾಧ್ಯ.. ಬೊಂಬಾಟ್ ಬರಹ ಸರ್ಜಿ.. ಬ್ಲಾಗ್ ಲೋಕಕ್ಕೆ ಮತ್ತೆ ಸ್ವಾಗತ..

    ನೆಪ ಕುಂಟುನೆಪವಾಗೋದು.. ಇನ್ನೊಬ್ಬರ ಕಾರಣವನ್ನೇ ಯಥಾವತ್ತಾಗಿ ನಕಲು ಮಾಡಿದಾಗ.. ಅದರ ಸಾಧ್ಯ ಸಾಧ್ಯತೆಗಳನ್ನ ಪರೀಕ್ಷಿಸದೆ. ಒಬ್ಬರಿಗೆ ಸಹಾಯವಾದ ನೆಪ ತನಗೂ ಸಹಾಯವಾಗಬಹುದು ಎಂಬ ಭ್ರಮೆಯಲ್ಲಿ ಸಾಗುವ ಪರಿಯೇ ಕುಂಟುನೆಪ

    ReplyDelete
    Replies
    1. ಧನ್ಯವಾದಗಳು ಶ್ರೀಮನ್

      Delete
  2. ಜಲನಯನ, ನೀವು ಬರೆಯೋದು ಬಿಡೋಕೆ ಕುಂಟುನೆಪ ಹೇಳ್ತಿದ್ದೀರಾ; ಬರೆಯೋಕೆ ಇಷ್ಟೇ ನೆಪ ಸಾಕು!

    ReplyDelete
    Replies
    1. ಸುನಾಥಣ್ಣ ಬ್ಲಾಗ್ ಬರವಣಿಗೆ ನಿಜಕ್ಕೂ ಬಿಕೊ ಎನ್ನುತ್ತಿದೆ. ನಿಮ್ಮ ಆಶೀರ್ವಾದವಂತೂ ಚಾಚೂ ತಪ್ಪದೆ ಸಿಗುತ್ತದೆ

      Delete
  3. ಧನ್ಯವಾದ ಸಾರ್,
    ಜಲನಯನಕ್ಕೆ ಹೀಗೇ ನೆರೆ ಬೀಳಲಿ.
    ಇನ್ನಾದರೂ ಬ್ಲಾಗುಗಳ ಸುವರ್ಣಯುಗ ಮರುಕಳಿಸಲಿ ಎಂಬುದು ನನ್ನ ಹೆಬ್ಬಯಕೆ.

    ನೆಪಗಳ ಬಗೆಗೆ ಸರಿಯಾದ ವಿಶ್ಲೇಷಣೆ ಶ್ರೀಮಾನ್‌ರಿಂದ.

    ReplyDelete
    Replies
    1. ಧನ್ಯವಾದಗಳು ಬದರಿ..ಮತ್ತೊಮ್ಮೆ ಎಲ್ಲರೂ ಬ್ಲಾಗ್ ಕಡೆ ಬರುವಂತಾಗಲಿ

      Delete