ನೆನಪಾಗುವುದು
ಬೇಸಿಗೆ ಬಂದರೆ
ನಗರದಿ ತೊಂದರೆ
ಹಳ್ಳಿಯೆಡೆಗೆ ವಲಸೆಯ ನೆನಪಾಗುವುದು
ಮಾವಿನ ತೋಪಿನ
ತಣ್ಣನೆ ತಂಪಿನ
ಹುಳಿಮಾವಿನ ಸವಿ ನೆನಪಾಗುವುದು
ಅಮ್ಮನು ಕಟ್ಟಿದ ಬುತ್ತಿ
ಕೂಡಿ ತಿಂದೆವು ಭರ್ತಿ
ಮತ್ತೆ ಆಡಿದ ಮರಕೋತಿ ನೆನಪಾಗುವುದು
ನೆಳಲಲಿ ನಿದ್ದೆ
ಹೊಳೆಯಲಿ ಒದ್ದೆ
ಒಡನಾಡಿದ ದಿನಗಳ ನೆನಪಾಗುವುದು
ಆ ಹುಣ್ಣಿಮೆ ರಾತ್ರಿಲಿ
ಶಿವನಳ್ಳಿ ಜಾತ್ರೆಲಿ
ಬತಾಸು-ಚುರುಮುರಿಯ ನೆನಪಾಗುವುದು
ರಾತ್ರಿಯ ಬಯಲಾಟ
ಹನುಮನ ಹುಡುಕಾಟ
ಕೊನೆಗೆ ಸೀತೆಯ ವ್ಯಥೆ ನೆನಪಾಗುವುದು
ಅಜ್ಜ ಸುತ್ತ ಹತ್ತಳ್ಳೀಗೂ ಸಜ್ಜನ
ಊರವರಿಗೆ ಅವನೇ ಯಜಮಾನ
ಅವ ಸತ್ತ ದಿನ ಊರೇ ಅತ್ತದ್ದು ನೆನಪಾಗುವುದು
ಇಲ್ಲದಾಗಿವೆ ಹಸಿರುಗಳು
ಸಂಜೆಗೆ ಮರಳುವ ರಾಸುಗಳು
ನೆನಪುಮಾತ್ರ ಈಗ ನೆನಪಾಗುವುದು
ಸರ್,
ReplyDeleteನಿಮ್ಮಂಥೆ ನನಗೂ ಹೀಗೆ ನೆನಪಾಗುವುದು..ಆದ್ರೆ ಏನು ಮಾಡಲಿ ಬೆಂಗಳೂರಿನ ಕೆಲಸದ ಒತ್ತಡ ಎತ್ತ ಕಡೆಗೂ ಅಲ್ಲಾಡಲೂ ಆಗುತ್ತಿಲ್ಲ...
ಬೇಸಿಗೆಯ ನೆನಪಿನ ಕವನ ಚೆನ್ನಾಗಿದೆ...
ಶಿವು ನನಗೆ ಹಳ್ಳಿಯ ಮಾವಿನ ತೋಪಿಂದ ಕದ್ದ ಅರೆಹಣ್ಣು ಮಾವಿನಕಾಯಿಯ ಪಚ್ಚಡಿ ನೆನಪಾಗುತ್ತೆ.
ReplyDeleteಹಳ್ಳಿ ಜಾತ್ರೆ ನೆನಪಾಗುತ್ತೆ...ಹೌದು ನಿಮ್ಮ ಹಾಗೆ ನಾನೂ ಊರಿಗೆ ಹೊರನಾಡಿಂದ ಬಂದಾಗ ನೆಂಟರಿಷ್ಟರನ್ನು ನೋಡುವುದರಲ್ಲೇ ಸಮಯ ಹೋಗಿಬಿಡುತ್ತೆ..ಹಳೆಯ ನೆನೆಪುಗಳನ್ನು ತಾಜಾ ಮಾಡಲು ಸಮಯವೆಲ್ಲಿ?? thanks ನೀವು, ಮನಸು ಮೇಡಮ್, ಪರಾಂಜಪೆ, ಬಾಲು, ಧರಿತ್ರಿ, ಪ್ರಭು ಎಲ್ಲ ಪ್ರೋತ್ಸಾಹಕ ಮಾತುಗಳನ್ನಾದುತ್ತೀರಿ..ಲೇಖನದ ಉತ್ಸಾಹದ ಸೆಲೆ ಬತ್ತದಂತೆ ಇಡುತ್ತೀರಿ, ಇಲ್ಲವಾಗಿದ್ದರೆ ನನ್ನ ಸಂಶೋಧನೆಯ ವ್ಯಸ್ತತೆಯಲ್ಲಿದ್ದುಬಿಡುತ್ತಿದ್ದೆ, ಧನ್ಯವಾದಗಳು