Thursday, January 27, 2011

ಜಾಣ ಮೀನು

ಸ್ನೇಹಿತರೆ 
ಜಲನಯನದ ಮೊದಲ ಪುಟದ ಮೊದಲ ಪ್ರಸ್ತುತಿ ಕೆಲ ಮಾರ್ಪಾಡುಗಳ ಕವನ ನಿಮ್ಮ ಮುಂದೆ... ಇಂದಿನ ಪ್ರಸ್ತುತ ರಾಜ-ಅಕಾರಣಗಳ ವಿಪರ್ಯಾಸಗಳಲ್ಲಿ ನಲ್ಗುತ್ತಿರುವುದು  ಅಮಾಯಕ ಜನತೆ, ಅವರ ಆಶೋತ್ತರಗಳನ್ನು ತಮ್ಮ ಸ್ವಾರ್ಥದ ಬೆಳವಣಿಗೆಗೆ ಬಳಸುತ್ತಿರುವ ಜನ ಪ್ರತಿನಿಧಿಗಳು, ಬೇಕಾಗಿಯೋ, ಬೇಡದೆಯೋ, ಸಂದರ್ಭಕ್ಕೆ ಕೊಗೊಮ್ಬೇಯಾದೆಯೆಂಬ ಮರೀಚಿಕೆಗೊಳಗಾಗಿಯೋ ವರ್ತಿಸುವ ಅಧಿಕಾರಿಗಳು ಒಟ್ಟಿನಲ್ಲಿ ನಾಡು ದೇಶ ಸಿರಿಯಿಂದ ಕೂಡಿದ್ದೂ ಬಡತೆಯ ನೆತ್ತಿ ಪಟ್ಟಿ ..ಎಲ್ಲವನ್ನು ಸೂಚ್ಯವಾಗಿಸುವ ಪ್ರಯತ್ನ.  
ಜಾಣ ಮೀನು
ಅಲೆಮೇಲೆ ಅಲೆಯೋ
ಅಲೆಮಾರಿ ಮೀನು
ನೆಲೆ ಕಂಡ ಸೆಲೆಯಲಿ
ಮೆಲ್ಲನೆ ನುಸುಳಿತು ಬೋನು
ಕಂಡರಿಯದ ಬಲೆಯದು
ತಿಳಿಯದ ಕೆಲ ಮೀನು
ಅರಿಯದೆ ಸಿಕ್ಕಿಕೊಂಡವು ಹಲವು
ಅಡಗಿ ಕುಳಿತಿತ್ತು ಅಲ್ಲೇ ಸಾವು
ಅಲ್ಲೇ ಇದ್ದವು ಜಾಣ ಮೀನು
ಸಿಕ್ಕ ಮೀನ ತಿಂದವು 
ಕೊಂಡೂ ಹೋದವು
ಇನ್ನೂ ಕೆಲ ಸ್ವತಂತ್ರ ಮೀನ
ಚೂಪುಹಲ್ಲು ಬಲೆಯ ಹರಿದವು
ಜಿಗಿದವು ಜೊತೆ ಜೊತೆ
ಬಲೆಗಾರಗೆ ಸಿಕ್ಕಿ ಬಿದ್ದದ್ದು  
ತಿಂದು ಮೈಮರೆತ ದೊಡ್ಡ ಮೀನು
ದಿಕ್ಕುತೋಚದ ಕಂಗೆಟ್ಟ ಪುಟ್ಟ ಮೀನು


Wednesday, January 19, 2011

ಕರವೋಕೆ,,,,,,ಪ್ರಿಯರಿಗೆ....

ಕೊಂದೆ ಕಣ್ಣಲ್ಲೇ ನನ್ನ (ಲೇಕೆ ಪಹಲಾ ಪಹಲಾ ಪ್ಯಾರ್ ಶೈಲಿ)


ಕೊಂದೆ ಕಣ್ಣಲ್ಲೇ ನನ್ನ
ಬಿಟ್ಟು ನೋಟದ ಹೂಬಾಣ
ಕದ್ದೆ ಮನಸನ್ನು ಚಲುವಾ
ನಾ ಬಿಡಿಸುವೆ ಬಿಂಕಾನಾ//೨//
ಓ ನನ್ನ ಕನಸಲು ನೀನೇನೇ
ನನ್ನ ಮನಸಿನರಾಣೀನೆ
ಬಂದು ನನಸಲ್ಲೂ ನೆಲಸು
ನಾ ಮುಡಿಸುವೆ ಹೂವನ್ನ//ಕೊಂದೆ ಕಣ್ಣಲ್ಲೆ//

ಮುಂಗುರುಳ ಉರುಳ ನೀ
ಹಾಕಬೇಡ ಚಂಚಲೇ
ಕೊಲ್ಲಬೇಡ ನನ್ನನು
ಸಾಯುವ ಮೊದಲೇ// ಮುಂಗುರುಳ ಉರುಳ ನೀ// ೨//
ಹಾಯ್ ..ನಿನ್ನೀ ನಯನದ ಹೂ ಬಾಣ
ತೆಗೆದರೆ ನನ್ನಯ ಈ ಪ್ರಾಣ
ಮತ್ತೆ ಹುಟ್ಟಿ ಬರುವೆ ನಾ ನಿನಗಾಗಿ ಓ ಚಿನ್ನಾ// ಕೊಂದೆ ಕಣ್ಣಲ್ಲೇ ನನ್ನ//೨//

ಕಣ್ಣಲ್ಲೇ ತುಂಬಿಕೊಂಡೆ
ಕಾಣಲೆಂದೇ ಕನಸನ್ನ
ನನಸಲ್ಲಿ ಬಂದು ನೀನು
ನಿಜ ಮಾಡು ಕನಸನ್ನ//ಕಣ್ಣಲ್ಲೇ ತುಂಬಿಕೊಂಡೆ//೨//
ಹಾಯ್...ಕೋಪ ಮಾಡಿದರೂ ಚನ್ನಾ
ಅದರುವ ತುಟಿಗಳು ಬಲು ಚನ್ನ
ನಿನ್ನಕೆಂಪಾದ ಕೆನ್ನೆಯೂ ಕರೆದಿದೆ ಇನಿಯನ್ನ//ಕೊಂದೆ ಕಣ್ಣಲ್ಲೆ ನನ್ನ// ೨//

ಮುಸಿ ಮುಸಿ ನಗುತಾಳೆ
ಕೇಳಿ ಸವಿ ಮಾತನ್ನೇ
ತಡೆಯಲಾಗದಂತೆ ನಗು
ತುಟಿ ತಡೆದು ಮನದನ್ನೆ//ಮುಸಿ ಮುಸಿ ನಗುತಾಳೆ//೨//
ಹಾಯ್...ಮನಸಲಿ ಮಂಡಿಗೆ ನೀ ತಿಂದು
ಮೊಗದಲಿ ಹುಸಿ ಮುನಿಸು ಬಂದು
ಕಡೆಗೆ ನಕ್ಕೇ ಬಿಡುತಾಳೆ ನನ್ನವಳೋ ಇವಳು//ಕೊಂದೆ ಕಣ್ಣಲ್ಲೆ ನನ್ನ//೨//
ಮೂಲ ಹಾಡು ಇಲ್ಲಿದೆ ನೋಡಿ
http://www.youtube.com/watch?v=SFqGQ54WT9Y


Thursday, January 13, 2011

ಮತ್ತೆ ಕೆಲವು ನ್ಯಾನೋಗಳು

ಮೆಳ್ಳ-ಗಣ್ಣು
ಲುಕಿಂಗ್ ಅಟ್ ಲಂಡನ್ ಟಾಕಿಂಗ್ ಅಟ್ ಟೋಕಿಯೋ ಅಂತಾರೆ
ಬಾಯಲ್ಲಿ ಬೆಣ್ಣೆ ಕಂಕ್ಳಲ್ಲಿ ದೊಣ್ಣೆಯ ಛಂದಗಣ್ಣಿಗಿಂತ ನನ್ನದೇ ಖರೆ


ಕುಳ್ಳ
ಕಳ್ಳನ್ನ ನಂಬಿದ್ರೂ ಕುಳ್ಲನ್ನ ನಂಬಬ್ಯಾಡಿ ಅನ್ನೋ ಮಂದಿಗ್ ಪ್ರಶ್ನೆ ನಂದು
ಎತ್ರೆತ್ರ ಕುರ್ಚಿ ಭರ್ತಿ ಚುನಾಯಿಸಿ ಬರೋ ತಾಯ್ಗಂಡ್ರನ್ನ ಕೇಳಿ ಇಂದು


ಮಕಮಲ್ ಟೋಪಿ
ಹೇಳ್ತೀರಲ್ಲಾ ?ಗಾರುಡಿಗ  ಹಾಕ್ತಾನೆ ಹುಷಾರ್ ಎಲ್ಲಾರ್ಗೂ ಮಕಮಲ್ ಟೋಪಿ
ನಾನು ಹೆಚ್ಚಂದ್ರೆ ಹತ್ತು, ಕೋಟ್ಯಾಂತರ ದೋಚಲ್ವೆ ಹಾಕ್ಕೊಂಡು ಗಾಂಧಿ ಟೋಪಿ


ತಿಗಣೆ
ತಾನು ಬದುಕೋಕೆ ಸ್ವಲ್ಪ ಹೀರ್ಕೊಂಡ್ರೆ ರಕ್ತ, ಸಾಯ್ಸೇ ಬಿಡ್ತೀರಾ!!, ಛೀ ತಿಗಣೆ
ಜೀವನ ಪೂರ್ತಿ ನೌಕ್ರಿ ಮಾಡಿ ಪೆನ್ಶನ್ಗೆ ಸತಾಯ್ಸೋವಾಗ ಕಾಣೊಲ್ವೇ ಆ ಬವಣೆ?


ಏನಂತೀರಾ?
ಕಣ್ಕಾಣ್ದೆ ಇದ್ರೆ ಕುರುಡ ಅಂತೀರ, ಕಿವಿ ಕೇಳದೆ ಇದ್ರೆ ಕಿವುಡ
ಎಲ್ಲಾರೆದ್ರುಗೇ ದೋಚೋರ್ನ ಕಂಡೂ ಸುಮ್ನಿರೋನು ಮೂಢ

Saturday, January 1, 2011

ದೀಕ್ಷೆ

ಈ ವರ್ಷ ಪ್ರತಿ ವರ್ಷ
ಹೊಸ ಹೊಸತು ತರಲಿ
ಈ ಬೆಳಗಿನಾನಂದ ಪ್ರತಿ ಬೆಳಗೂ ಇರಲಿ

ಕನ್ನಡತೆ ನನ್ನಡತೆ
ಎಲ್ಲರಲೂ ಬರಲಿ
ದಿನದೀಕ್ಷೆ ಬೇಕಿಲ್ಲ ಎಲದಿನವೂ ಇರಲಿ

ನಿನ್ನಿಂದ ಆನಂದ
ನಂದನವ ಬೆಳೆಸು
ಚಂದನದ ನಾಡಲ್ಲಿ ಕನ್ನಡವನುಳಿಸು

ನಾಡಲ್ಲಿ ನೋಡಿಂದು
ಅಳುತಿಹಳು ತಾಯಿ
ಉಳುವವನ ಗೇಯ್ಮೆಯಲಿ ನಡುವನದೇ ಬಾಯಿ

ಒಳಹೊರಗೂ ಪ್ರತಿಭೆಯಿದೆ
ಪ್ರಜ್ವಲಿಸಿ ಮೆರೆಸು
ಮೆರೆದಿಹರು ನಮ್ಮವರು, ಹೆಸರಿಂದು ಉಳಿಸು

ಆಳುವವ ಬೀಳುತಿಹ
ಗೋಳಾಯ್ತು ಹಗಲು
ನೀನಾರಿಸಿ ಕಳಿಸಿರುವೆ ನಿನದಾಯ್ತು ಸೋಲು

ನಿನ ಕೈಲೇ ಇದೆಯಲ್ಲ
ಎಲ್ಲದಕೂ ಕೀಲಿ
ಒತ್ತಿ ಬಿಡು, ಬಿತ್ತಿ ಬಿಡು, ಹಾಕಿಬಿಡು ಬೇಲಿ