Tuesday, August 2, 2011

ಮತ್ತೊಂದು ಶತವಿಕ್ರಮನ ಪ್ರಯತ್ನ.....

(ಚಿತ್ರ ಕೃಪೆ: ಅಂತರ್ಜಾಲ)

ಬಿದ್ದರೂ ಆಗಲಿಲ್ವೇ ಮೀಸೆ ಮಣ್ಣು...???

ಒಮ್ಮಿಂದೊಮ್ಮೆಗೇ ಶತವಿಕ್ರಮ ಜನಕಲ್ಯಾಣದ ತನ್ನ ದೀಕ್ಷೆ ಮತ್ತು ತನ್ನ ಹಿರಿಯರಿಗೆ ಕೊಟ್ಟ ಮಾತಿನ ನೆನಪಾಯಿತು. ನೆನೆಪಾಯಿತು ಅನ್ನೋದಕ್ಕಿಂತಾ ಆನಂದ್ ಜಗ್ಡೆ ಎನ್ನುವ ಸಾಮಾಜಿಕ ಕಾಳಜಿ ಕಳಕಳಿಯ ನ್ಯಾಯಮೂರ್ತಿ ಕಪಿಲಾಪುರಕ್ಕೆ ಅಂಟಿದ್ದ ಪಿಡುಗುರೂಪದ ಜಗಮೊಂಡ ಪ್ರಜಾಪತಿ ಕಿಡಿಕಾರಪ್ಪನನ್ನು ಮುಲಾಜಿಲ್ಲದೇ ಅಂಟಿಕೊಂಡಿದ್ದ ತನ್ನ ಪೀಠದಿಂದ ತಾನಾಗೇ ಅಳುತ್ತಾ ಬಿಡುವಂತೆ ಮಾಡಿದ ಮಹತ್ವಪೂರ್ಣ ವರದಿಯೇ ಶತವಿಕ್ರಮನನ್ನು ಜಾಗೃತಗೊಳ್ಳುವಂತೆ ಮಾಡಿತ್ತು ಎನ್ನಬಹುದು.

ಎಲ್ಲಾ ಪಿಡುಗಿಗೂ ಕಾರಣನಾದ ಕೇವಲ ಶತವಿಕ್ರಮನಿಗೇ ಪರಿಚಯವಿರುವ ಭೇತಾಳನನ್ನು ಸೋಲಿಸದೇ ಯಾವುದೇ ಪ್ರಯತ್ನ ಸಮಾಜ ಕಲ್ಯಾಣವನ್ನು ಶಾಶ್ವತಗೊಳಿಸದು ಎನ್ನುವುದೂ ಶತವಿಕ್ರಮನಿಗೆ ಬಹಳ ಚನ್ನಾಗಿ ತಿಳಿದಿರುವ ವಿಷಯವೇ. ಇನ್ನು ಆಲಸ್ಯ ಸಲ್ಲ ಎಂದು ತಲೆ ಕೊಡವಿ ಭೇತಾಳನ ಜಾಡು ಹುಡುಕಲು ತನ್ನ ಲ್ಯಾಪ್ ಟಾಪ್ ತೆಗೆದು ನೆಟ್ ಓಪನ್ ಮಾಡಿ ಗೂಗಲ್ ಮ್ಯಾಪಿಗೆ ಮೊರೆಹೋದ. ತಂತ್ರಜ್ಞಾನ ನಮ್ಮ ಪುಂಡ ರಾಜಕಾರಣಿಗಳಂತಲ್ಲ... ಬೇಕಾದಾಗ ಕೈ ಕೊಡುವುದಿಲ್ಲ...ಪ್ರಭಾವಿಗಳ ಕೈಗೊಂಬೆಯಾಗುವುದಿಲ್ಲ ..ಲಂಚಕ್ಕೂ ಸುತಾರಾಂ ಜಗ್ಗೊಲ್ಲ...ಬುದ್ಧಿವಂತಿಕೆಯಿದ್ದರೆ ವೈರಸ್ಗಳನ್ನ ಕೊಡವಿ ಮತ್ತೆ ಕಾರ್ಯನಿರತವಾಗುವಂತಹುದು. ಶತವಿಕ್ರಮನಿಗೆ ಸಿಕ್ಕೇ ಬಿಡ್ತು ಭೇತಾಳನ ಅಡ್ರೆಸ್...!!! ಅರೆರೆ ಇದೇನು...ಹೋಗಿ ಹೋಗಿ ವಿಧಾನಸೌಧದ ಮುಖ್ಯ ಸಭಾಂಗಣದಲ್ಲೇ ರಾಜಾರೋಶವಾಗಿ ಛಾವಣಿಯ ತೂಗುದೀಪಗೊಂಚಲಿಗೆ ಜೋತು ಬಿದ್ದಿದೆ...!!!!!, ಹೌದಲ್ಲಾ.. ಕಪಿಲಾಪುರದ ಜಗಮೊಂಡ ತನ್ನ ಪೀಠ ಬಿಟ್ಟಮೇಲೆ ಅವನ ಉತ್ತರಾಧಿಕಾರಿಗಾಗಿ ಕಸರತ್ತು ನಡೆಯುತ್ತಿರುವಾಗ ಬಣಗುಡುತ್ತಿದ್ದ ಸೌಧದ ಸಭಾಂಗಣ ತನಗೆ ಸೂಕ್ತ ಎಂದು ಅಲ್ಲಿ ಹೋಗಿದೆಯೋ ಅಥವಾ ಮುಂಬರುವ ಕಪಿಲಾಪುರಾಧೀಶನ ತಲೆಗೆ ಹುಳು ಬಿಟ್ಟು ತನ್ನ ಸಾಮ್ರಾಜ್ಯ ವಿಸ್ತರಣೆಗೆ ಹೊಂಚುತ್ತಿದೆಯೋ ??? ಭೇತಾಳನ ಈ ಪ್ರಯತ್ನವನ್ನ ತಡೆಯಲೇ ಬೇಕು ಎಂದು ಯೋಚಿಸಿದ ಶತವಿಕ್ರಮ ಕಾರ್ಯ ತತ್ಪರನಾದ. ಸೌಧದ ಸಭಾಗೃಹಕ್ಕೆ ಹೋಗಿ ನೇತಾಡುತಿದ್ದ ಶವವನ್ನು ತೂಗುದೀಪದಿಂದ ಇಳಿಸಿ ..ಹೆಗಲಿಗೇರಿಸಿ ಕಾರಿಡರ್ ಮೂಲಕ ಹೊರಬಾಗಿಲಲ್ಲಿ ಪಾರ್ಕ ಮಾಡಿದ್ದ ತನ್ನ ಟೋಯಾಟಾ ಇನೋವಾ ಕಡೆಗೆ ಹೆಜ್ಜೆ ಹಾಕತೊಡಗಿದ.

ಶವದೊಳಗಿನ ಭೇತಾಳ ಮಾತನಾಡತೊಡಗಿತು....ಎಲೈ. ಶತವಿಕ್ರಮ ನಿನ್ನ ಪರಿಶ್ರಮ ನೋಡಿದರೆ ಲೋಕಾಯುಕ್ತದ ಸಮಗ್ರ ಮೂಲವಾದಂತಹ ಲೋಕಪಾಲ ಮಸೂದೆಯ ವಿಧಿವತ್ ಅಂಗೀಕಾರಕ್ಕೆ ಹೆಣಗುವ ಅಣ್ಣಾ ಸಾವ್ರಾರೆ ಯ ಪ್ರಯತ್ನದ ನೆನಪಾಗುತ್ತದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಲಂಚಕ್ಕೆ ಜೈ ಎನ್ನುವ ಮಧ್ಯಮವರ್ಗದ ಜನ, ಮತದಾನದ ಸಮಯದಲ್ಲಿ ಹೆಂಡ, ಸೀರೆ, ಅಲ್ಪ ಸ್ವಲ್ಪ ಹಣದ ಆಸೆಗೆ ತಮ್ಮ ಅಮೂಲ್ಯಮತವನ್ನು ಮಾರಿಕೊಳ್ಳುವ ಬಡವ-ದೀನಜನ, ತಮ್ಮ ಪೀಠ-ಭಡ್ತಿಗೆ ಹೆಚ್ಚು ಆದ್ಯತೆಕೊಡುವ ಮತ್ತು ಸಮಯ ಸಿಕ್ಕಾಗ ಲಂಚವೆನ್ನೋ ಮಂಚ ಏರುವ ಕನಸಲ್ಲೇ ತೇಲುವ ಅಧಿಕಾರಿವರ್ಗ ಇವರೆಲ್ಲಾ ಇರುವವರೆಗೆ ಆನಂದ ಜಗ್ಡೆಯಂಥವರ, ಅಣ್ಣಾ ಸಾವ್ರಾರೆಯಂಥವರ ಮನೋಭಿಲಾಶೆ ನೆರವೇರದು ಅಂತಹವರ ಮೂಲಕ ನನ್ನನ್ನು ಸದೆಬಡಿದು ಸಮಾಜ ಕಲ್ಯಾಣದ ಕನಸು ಕಾಣುವ ನಿನ್ನಂತಹವರ ಅಭಿಲಾಶೆ ನೆರವೇರದು...ಇರಲಿ...ನನ್ನ ಸಂದೇಹಕ್ಕೆ ಉತ್ತರ ಕೊಡು...ತಿಳಿದೂ ಹೇಳದೆ ಹೋದರೆ ನಿನ್ನ ತಲೆ ನಿದ್ದೆಯ ಮಂಪರಲ್ಲಿ ವಿಮಾನ ಹಾರಿಸಿ ಮಂಗಳಾಪುರದಲ್ಲಿ ಅಪಘಾತ ಮಾಡಿ ಸಿಡಿದ ಪೈಲಟ್ ನ ತಲೆಯತೆ ಸಿಡಿದೀತು...ಎಚ್ಚರ...

ಈಗ ಆನಂದ ಜಗ್ಡೆ ವರದಿ ಕಿಡಿಕಾರಪ್ಪನ ತಲೆದಂಡಕ್ಕೆ ಕಾರಣವಾಗಿದೆ...ತಾನು ಪೀಠ ಬಿಡುವಾಗ ..ದೀನಾತಿದೀನ ಅಳುಬುರುಕ ಮುಖ ತೋರಿದ ಕಿಡಿಕಾರಪ್ಪ ಎರಡೇ ದಿನದಲ್ಲಿ ಪುನರ್ಜನ್ಮ ಪಡೆದ ಭೂತದಂತೆ ತನ್ನ ವಿಕ್ಟರಿ ಸಂಕೇತ ತೋರುತ್ತಾ ಎಲ್ಲೆಡೆ ಮೆರೆದಿದ್ದು ಏಕೆ..?? ಸೋತರೂ ಸೋಲಲಿಲ್ಲವೆಂದೇ? ತನ್ನದೇ ಪಕ್ಷದ ಅರ್ಧ ಬಲದ ಬೆಂಬಲ ಇದ್ದರೂ ಆರು ಕೋಟಿ ಜನತೆ ತನ್ನ ಬೆಂಬಲಕ್ಕಿದೆ ಅನ್ನೋ ಭಂಡತನ ಏಕೆ?? ಇನ್ನು ಆರು ತಿಂಗಳಲ್ಲೇ ತಾನು ಮತ್ತೆ ಬರ್ತೇನೆ ಎಂದು ಧೀಟಾಗಿ ಘೋಷಿಸಿದ್ದು ಯಾರ ಬಲದಮೇಲೆ....??? ಈ ಎಲ್ಲಾ ಸಂದೇಹಗಳಿಗೆ ನಿನ್ನ ಉತ್ತರವೇನು...??

ಎಲೈ ಭೇತಾಳನೇ,,,ನಿನ್ನ ಬರಿ ಬುರುಡೆ ತಲೆಗೇ ಇಷ್ಟೆಲ್ಲಾ ಯೋಚನೆ ಬಂದರೆ ಇನ್ನು ತಲೆತಲಾಂದರದಿಂದ ಚಾಣಾಕ್ಷ ಪರಂಪರೆಯ ನನಗೆ ಹೇಗಿರಬೇಡ..?? ಕಿಡಿಕಾರಪ್ಪ ತನ್ನ ಹಿಂದಿರುವ ಬಾಯಿಬಡುಕ ಬೆಂಬ್ಲಿಗರೆಂದರೆ ಇಡೀ ಕಪಿಲಾಪುರದ ಬೆಂಬಲಕ್ಕಿದೆ ಎನ್ನುವ ತಪ್ಪು ಕಲ್ಪನೆಯಿಂದ ಹಾಗೆ ಹೇಳಿರಬೇಕು,,,ಇನ್ನು ವಿಕ್ಟರಿ ಸಂಕೇತ ಆತನ ಅಭ್ಯಾಸ ಬಲ...ಅದು ತಪ್ಪು ಕಲ್ಪನೆಯ ಫಲವೂ ಆಗಿರಬಹುದು...ಮತ್ತೆ ಆರು ತಿಂಗಳಲ್ಲಿ ವಾಪಸಾಗುತ್ತೇನೆಂಬ ಆತನ ಹೇಳಿಕೆ...ನಿನ್ನಂತಹ ಕುಲಗೇಡಿಗಳ ಸಹಾಯ ಸಿಗಬಹುದೆಂಬ ಆಶಾವಾದದಿಂದ.....

ಹಹಹ ಶತವಿಕ್ರಮ ನೀನು ಹೇಳಿದ್ದು ಸರಿ ಆದರೆ ನೀನು ನಿನ್ನ ಮೌನ ಮುರಿದೆ,,,,ಆದ್ದರಿಂದ ಸೋತೆ...ಇದೋ ನಾನು ಮತ್ತೆ ಹೊರಟೆ...ಎನ್ನುತ್ತಾ ...ಶತವಿಕ್ರಮನ ಹೆಗಲಿಂದ ಹಾರಿ ಕತ್ತಲಿಲೊಳಕ್ಕೆ ಕರಗಿ ಹೋಯಿತು.

ಛೇ ..ಮತ್ತೆ ಈ ಬಾಯಿ ಬಡುಕನ ಮಾತಿಗೆ ಮೋಸಹೋದೆ,,,ತಲೆಕೆಟ್ಟವರ ಸಂದೇಹ ನಿವಾರಣೆ ಮಾಡಲು ಹೋಗಲೇಬಾರದು...ಸರಿ ..ಹೋದ್ರೆ ಹೋಗಲಿ...ಈ ಭೇತಾಳನನ್ನು ಕಿಡಿಕಾರಪ್ಪನ ಉತ್ತರಾಧಿಕಾರಿಯ ತಲೆಕೆಡಿಸಲು ಬಿಡಬಾರದು,,,ಇವನನ್ನು ಹಿಡಿದು ಮಟ್ಟಹಾಕಲೇಬೇಕು..ಎಂದುಕೊಂಡ ಶತವಿಕ್ರಮ ಮತ್ತೆ ಭೇತಾಳನನ್ನು ಹುಡುಕುತ್ತಾ ಹೊರಟ.
12 comments:

 1. ಸರ್,

  ಪ್ರಸ್ತುತ ಸ್ಥಿತಿಗೆ ಒಳ್ಳೆ ಕನ್ನಡಿ ಹಿಡಿದಿದ್ದಿರಾ

  ನಮ್ಮ ಕರ್ನಾಟಕದ ರಾಜಕೀಯ ಅಪಹಾಸ್ಯ ಆಗ್ತಾ ಇದೆ

  ಪಾಕಿಸ್ತಾನ್ ದ Don ಪತ್ರಿಕೆಯ ಮುಖ ಪುಟ ದಲ್ಲಿ ನಮ್ಮ ರಾಜಕೀಯದ ಬಗ್ಗೆ ಬಂದಿದೆ ಎಂದರೆ ಇನ್ನೆಷ್ಟು ಹಾಲು ಅಗಿರಬೇಡ ನಮ್ಮ ವ್ಯವಸ್ಥೆ

  ReplyDelete
 2. ಸೂಪರ್

  _ನನ್ನ 'ಮನಸಿನಮನೆ'ಗೂ ಬನ್ನಿ

  ReplyDelete
 3. ಡಾ.ಗುರು ಹೌದು ನಮ್ಮ ಇತರೆ ರಾಜ್ಯಗಳೂ ನಮ್ಮನ್ನೆಲ್ಲ ಜೋಕರ್ಗಳು ಎನ್ನುವ ರೀತಿ ನೋಡುವಂತಾಗಿದೆ...ಭಂಡತನದ ಪರಮಾವಧಿ ತೋರ್ತಾಇದ್ದಾರೆ ಅಧಿಕಾರದಾಹಿ ರಾಜಕಾರಣಿಗಳು.

  ReplyDelete
 4. ವಿಚಲಿತ ಗುರುವೇ ಧನ್ಯವಾದ...ನಿಮ್ಮ ಬ್ಲಾಗಿನ ಪೋಸ್ಟ್ ಗೆ ಕಾಮೆಂಟ್ ಹಾಕಿದ್ದೇನೆ ಅಭಿನಂದನೆ ಪತ್ರಿಕೆಯಲ್ಲಿನ ಪ್ರಕಟಣೆಗೆ.

  ReplyDelete
 5. ಜಲನಯನ,
  ಅನೇಕ ದಿನಗಳಿಂದ ಬೇತಾಳನ ದರ್ಶನವಾಗಿರಲಿಲ್ಲ. ಕಿಡಿಯೂರಪ್ಪನವರಿಂದಾಗಿ ಅಂತಹ ಸುಯೋಗ ಈಗ ಒದಗಿ ಬಂತು. ಕಿಡ್ಯೂರಿಗೆ ಧನ್ಯವಾದ್ಯಗಳು! ಸತ್ಯದರ್ಶನ ಮಾಡಿಸಿದ ಬೇತಾಳನಿಗೂ ಧನ್ಯವಾದ್ಯಗಳು.

  ReplyDelete
 6. ಅಜಾದ್,
  ಪ್ರಸ್ತುತ ಆಧುನಿಕ ಬೇತಾಳ ಶತವಿಕ್ರಮ ಕತೆ ಸೂಪರ್. ಬೇತಾಳ ಹೋಗಿ ವಿಧಾನಸೌದದಲ್ಲಿ ನೇತುಬೀಳುವುದು ಚೆನ್ನಗಿದೆ. ಇಂಥ ವಿಡಂಬನೆಗಳು ಆಗಾಗ ಬೇಕು..ಬರುತ್ತಿರಲಿ.

  ReplyDelete
 7. ಸುನಾಥಣ್ಣ...ಕಿಡ್ಯೂರಪ್ಪ ಈಗ ಮತ್ತೊಂದು ಕಿಡಿ ಹತ್ತಿಸಿದ್ದಾನೆ ಈಗ ಭೇತಾಳ ಯಾರ ಮೈಮೇಲೆ ಬರ್ತಾನೋ,,,..?? ನಿಜಕ್ಕೂ ನಾಚಿಕೆಗೇಡಿನ ಅರಾಜಕಾರಣ.....ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

  ReplyDelete
 8. ಶಿವು, ಧನ್ಯವಾದ..ಬಿಕೋ ಎನ್ನುವ ವಿಧಾನ ಸೌಧ ...ಕೇಳಲಿಲ್ಲದ ರೈತರ ಕೂಗು...ಕಡತ ಕಡಿಯದ ವಿಧಾನಕ್ಕಿಂತ ಪ್ರಶಸ್ಥ ಸ್ಥಾನ ಸಿಕ್ಕೀತೆ...??

  ReplyDelete
 9. vaasthavakke hidida kannadi !!!! chennagide sir ...........

  ReplyDelete
 10. waw sir ...adunika bethalana bagge barediddiri!
  chennagide

  ReplyDelete
 11. ಗಿರೀಶ್ ಧನ್ಯವಾದ...ಜಲನಯನಕ್ಕೆ ಸ್ವಾಗತ

  ReplyDelete
 12. ಆಶಾವ್ರೆ....ನನ್ನ ಹಿಂದಿನ ಪೋಸ್ಟುಗಳೂ ನೋಡಿ..ಈ ಮಧ್ಯೆ ಬರೆದಿರಲಿಲ್ಲ ಅಷ್ಟೆ....ಈ ಭೇತಾಳನ ಬೇಟೆ ನಡಿತಿದೆ ನಿರಂತರ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete