Tuesday, October 20, 2015

ಗಂಡು..ಎನ್ನುವ ಅಂಶವೇ ಇಲ್ಲವೇ...ಏನಾಯ್ತು...ಇವನಿಗೆ..??

ನಮ್ಮದೊಂದು ಪುಟ್ಟದಲ್ಲವಾದರೂ ಅದ್ದೂರಿ ಎನ್ನಲಾಗದ ಮೇಲ್ಮಧ್ಯಮ ವರ್ಗದ ಗೂಡು.. ಮೇಲ್..?? ಸ್ವಾಮಿ ಇದು ಆಂಗ್ಲ "ಮೇಲ್" ಅಲ್ಲ ಈ ಪದಾರ್ಥ ಚಿಂತಾಮಣಿಯೋರು ನನಗೂ ಸ್ವಲ್ಪ ಕನ್ನಡ ಕಲಿಸಿದ್ದಾರೆ...!! ಮೇಲಿನ ಮಧ್ಯಮ ವರ್ಗ ಅಥವಾ ಮೇಲ್ಮಧ್ಯಮ ವರ್ಗ.. ಗೊತ್ತಾಯ್ತಾ?! ಊಂ...
ಸರಿ ನೇರವಾಗಿ ವಿಷಯಕ್ಕೆ ಬರ್ತೀನಿ. ನಮ್ಮದು ತುಂಬಿದ ಕುಟುಂಬ. ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅಜ್ಜಿ, ತಾತ. ನಾವು ಆರು; ನಾಲ್ಕು ಹೆಣ್ಣು ಎರಡು ಗಂಡು. ಚಿಕ್ಕಪ್ಪಂಗೆ  ನಾಲ್ಕು ಮೂರು ಹೆಣ್ಣು ಒಂದು ಗಂಡು. ಅಕ್ಕಂದಿರಿಗೆ ಇಬ್ಬರಿಗೆ ಮದುವೆಯಾಗಿದೆ, ನಾನು ಈಗ ನನ್ನ ಪದವಿ ಮುಗಿಸಿದ್ದೇನೆ, ಒಬ್ಬ ಅಣ್ಣ ಸುಮಾರು ಸಮಯ ಊರ ಹೊರಗೇ ಬೋರ್ಡಿಂಗ್ ಸ್ಕೂಲಲ್ಲಿ ಓದಿ ಅಲ್ಲೇ ದೂರದಲ್ಲಿ ಕಾಲೇಜ್ ಮುಗಿಸಿ ನೌಕರಿಗೂ ಸೇರ್ಕೊಂಡಿದ್ದ ಅವನ ಮದುವೆಗೆ ಮುಂಚೆ ನನ್ನದು ಆಗಬೇಕು ಅನ್ನೋ ಅಮ್ಮನ ಹುಯ್ದಾಟ. ಅಪ್ಪ-ಅಮ್ಮಂಗೆ ನಂದೇ ಕಾಳಜಿ. ಎಲ್ಲೆಂದರಲ್ಲಿ ಹರಿ ಹಾಯೋ ಗಂಡುಗಳು..ಹೆಣ್ಣಿನ ಶೀಲಕ್ಕೆ ಗ್ಯಾರಂಟಿಯೇ ಇಲ್ಲ.. ಅದೇ ಆತಂಕ ಅಪ್ಪ-ಅಮ್ಮಂಗೆ. ನೋಡೋಕೆ ನಾನು ತುಂಬಾ ಚನ್ನಾಗಿ ಕಾಣ್ತೀನಿ ಅಂತ ಎಲ್ಲಾರೂ ಹೇಳೋದು ಕೇಳಿ ನನ್ನ ಮನೆಯಲ್ಲಿ ಎಲ್ಲರಿಗೂ ಇದ್ದ ಆತಂಕ ಇನ್ನೂ ಹೆಚ್ಚಾಗಿದ್ರಲ್ಲಿ ಅತಿಶಯ ಏನಿಲ್ಲ. ನನ್ನ ಬಂಗಾರದ ಮೈಬಣ್ಣ, ಉಬ್ಬು ತಗ್ಗಿನ ಮೈಮಾಟ ನಾನು ಹುಚ್ಚು ಹಿಡಿಸುವ ಹಾಗೆ ಹರಿದಾಡ್ತೀನಿ ಅಂತ ಪಕ್ಕದ ಓಣಿಯ ಜಲೀಲ.."ಅರೆ ಬುಲ್ ಬುಲ್ ಮಾತಾಡ್ಸಾಕಿಲ್ವಾ?" ಅಂತ ನಾಗರಹಾವು ಡೈಲಾಗ್ ಹೊಡಿಯೋದೇ ಹೊಡಿಯೋದು... ನನ್ನ ಜೊತೆಗೇ ಇರ್ತಿದ್ದ ನನ್ನ ತಮ್ಮ ..ನನ್ನನ್ನ ಯಾರಾದ್ರೂ ಛೇಡಿಸಿದರೆ.."ಏಯ್ ಮಲ್ಲಿ, ಯಾಕೆ ಅವರ ತಂಟೆಗೆ ಹೋಗ್ತೀಯಾ, ಸುಮ್ನೆ ದೂರ ಇರು, ಈ ಕಡೆಯಿಂದಹೋಗ್ಬಿಡೋಣ, ನಮಗ್ಯಾಕೆ ಉಸಾಬರಿ? ಸುಮ್ನೆ ಮನೆಗೆ ಹೋದ್ರಾಯ್ತಪ್ಪ" ಅಂತ ಹೇಳಿದಾಗ ನನ್ನ ಸ್ನೇಹಿತೆಯರು, "ಲೇ ಮಲ್ಲಿ ನಿನ್ನ ತಮ್ಮ ಯಾಕೆ ಹಾಗೆ ಹೆಣ್ಗ ಆಡೋ ಹಾಗೆ ಆಡ್ತಾನೆ, ಸ್ವಲ್ಪ ಗದರೋದಲ್ವಾ? ಗಂಡು ಹುಡುಗ ಜೊತೆಲಿದ್ದಾನೆ ಅನ್ನೋ ಧೈರ್ಯವೇ ಇರೊಲ್ಲ ನಮಗೆ ಇವನ ಜೊತೆ ಬಂದ್ರೆ, ಥೂ.." ಎನ್ನುವಾಗ ಇವನು ಮುಸಿ ಮುಸಿ ನಕ್ಕು ನಾಚ್ಕಂಡಾಗ ನನಗೆ ಎಲ್ಲಿಲ್ಲದ ಕೋಪ.. ಬೆನ್ಸಿಲ್ಲೋ, ಸ್ಕೇಲೋ ಎತ್ತಿ ಎಸೀತಿದ್ದೆ ಅವನ ಮೇಲೆ.
ಆರು ತಿಂಗಳ ಹಿಂದೆ ಪಟ್ಟಣದ ಕಾಲೇಜಲ್ಲಿ ಪದವಿಗೆ ಸೇರಿದ್ದ ನನ್ನ ತಮ್ಮ ಮನೆಗೆ ಬಂದಿದ್ದ. "ಹ್ಯಾಗಿದೆಯೋ ಕಾಲೇಜು? ಹುಡ್ಗೀರು ಜೋರಾ ಪಟ್ನದಲ್ಲಿ ??..ನೀನೂ ಕೆಂಪ್ ಕೆಂಪ್ಗೆ ಇದ್ದೀಯಾ..ಅವ್ರೇ ಲೈನ್ ಹೊಡೀತಾರೆ ಅನ್ಸುತ್ತೆ !!" ಅಂತ ಛೇಡಿಸಿದ್ದೆ. "ಥೂ ಹೋಗೇ ಮಲ್ಲಿ ನೀನೊಂದು, ನಾನು ಯಾವ್ ಹುಡ್ಗೀನೂ ಕಣ್ಣೆತ್ತಿಯೂ ನೋಡೊಲ್ಲಪ್ಪ" ಅಂತ ಹೇಳ್ದಾಗ ಅವನ ಅತಿ ನಾಚುವಿಕೆ ಹೆಣ್ಣಿಗಿಂತಾ ಹೆಚ್ಚು ನುಲಿಯುವಿಕೆ ನೋಡಿ ನನಗೆ ಆಶ್ಚರ್ಯಕ್ಕಿಂತ ಆತಂಕ ಆಗಿತ್ತು, ಅಮ್ಮನಿಗೆ ಹೇಳಿದೆ... ಅಮ್ಮನೂ "ಹೌದ್ ಕಣೇ, ಪಟ್ಣದಿಂದ ಬಂದಾಗಿಲಿಂದ ನೋಡ್ತಿದ್ದೀನಿ, ಸ್ನಾನ ಮಾಡೋಕೆ ಒಂದು ಗಂಟೆ ಬಾತ್ ರೂಂ ಬಾಗಿಲು ಜಡ್ಕೋತಾನೆ, ಕನ್ನಡಿ ಮುಂದೆ ನಿಂತು ಅಲಂಕಾರ ಮಾಡ್ಕೋತಾನೆ..!!" ನಾನು ನಾಟ್ಕ ಗೀಟ್ಕ ಅಂತ ಸೇರ್ಕೊಂಡಿದ್ದಾನಾ ಅಂದ್ಕೊಂಡೆ, ಊಂಹೂಂ.. ಆ ಲಕ್ಷಣವೇ ಅಲ್ಲ ಇದು" ಅಂತ ತಮ್ಮ ಆತಂಕವನ್ನೂ ತೋಡಿಕೊಂಡಿದ್ದರು. ಅಯ್ಯೋ ಏನೂ ಇಲ್ಲ ಬಿಡಮ್ಮ, ಕಾಲೇಜ್ ಹೊಸದಲ್ವಾ ಅಲ್ದೇ ಯಾವಾಗ್ಲೂ ನನ್ ಜೊತೆ ಸ್ಕೂಲಿಗೆ ಬರ್ತಿದ್ದ, ನನ್ನ ಫ್ರೆಂಡ್ಸ್ ಜೊತೆ ಇದ್ದು ಹೆಣ್ಣಿನಂತೆ ಸ್ವಲ್ಪ ಸ್ವಲ್ಪ ಆಡ್ತಿದ್ದ..ಈಗ ಪಟ್ನಕ್ಕೆ ಹೋದ್ಮೇಲೆ ಸರಿ ಹೋಗ್ತಾನೆ ಬಿಡು," ಅಂತನೂ ಹೇಳಿದ್ದೆ. ಆದರೂ ನನಗೆ ಆತಂಕ ಇದ್ದೇ ಇತ್ತು, ಯಾಕಂದ್ರೆ ಅವನ ಹೆಣ್ಣಿನ ಸ್ವಭಾವ ಹೆಚ್ಚಾಗಿತ್ತು ಈ ಮಧ್ಯೆ.!!
ಹಬ್ಬಕ್ಕೆ ಅಂತ ಬಂದಿದ್ದಾಗ ಅವನ್ನ ನೋಡಿ ನನ್ನ ಭಯ ಹೆಚ್ಚಾಯ್ತು. ಎಲ್ಲ ನಡವಳಿಕೆ ಹೆಣ್ಣೀನ ಥರವೇ ಆಗಿತ್ತು. ಅಪ್ಪ ಯಾವುದೋ ಪ್ರಾಜೆಕ್ಟ್ ಗೆ ಅಂತ ಒಂದು ವರ್ಷದ ಕಾಂಟ್ರಾಕ್ಟ್ ಮೇಲೆ ಇಂಗ್ಲೇಂಡ್ ಗೆ ಹೋಗಿದ್ದರು, ಅಕ್ಕ ಈ ಮಧ್ಯೆ ಗಲ್ಫ್ ನಿಂದ ಬಂದಿರಲಿಲ್ಲ...ಅವಳಿಗೆ ಬೇಕೆಂದೇ ಹೇಳಿರಲಿಲ್ಲ. ಹಾಗಾಗಿ ನಾನೇ ಅಮ್ಮನಿಗೆ "ಅಮ್ಮ ಡಾಕ್ಟರ್ ಹತ್ರ ಇವನನ್ನ ಕರ್ಕೊಂಡು ಹೋಗಿ ಬರ್ತೀನಿ, ನೋಡೋಣ ಏನಾದರೂ ಸಮಾಧಾನ ಸಿಗುತ್ತೋ" ಅಂದೆ, ಆಯ್ತು ಹೋಗಿ ಬಾ ಅಂದಿದ್ರು ಅಮ್ಮ. ಇವನ್ನ ಕೂಲಂಕಶವಾಗಿ ನೋಡಿದ ಡಾಕ್ಟ್ರು...ಕೆಲವು ಟೆಸ್ಟ್ ಮಾಡ್ಬೇಕು ಅಂದ್ರು..ಮಾಡಿಸಿದೆವು. ಒಂದು ವಾರದ ನಂತರ ಬನ್ನಿ, ನೀವೊಬ್ರೆ ಬನ್ನಿ ಆಮೇಲೆ ಹೇಳ್ತೀನಿ ಏನು ಮಾಡಬೇಕೋ ಅಂತ ಅಂದ್ರು ಡಾಕ್ಟ್ರು. ಸರಿ ವಾರದ ನಂತರ ಹೋದೆ. ಒಳಗೆ ಕರೆದು ಕುಳಿತುಕೊಳ್ಳಲು ಹೇಳಿ ರಿಪೋರ್ಟ್ ನೋಡುತ್ತಾ ಗಂಭೀರರಾದರು ಡಾಕ್ಟ್ರು. ನನಗೆ ಎದೆ ಡವ ಡವ ಶುರುವಾಯ್ತು. "ಏನ್ ಡಾಕ್ಟರ್, ರಿಪೋರ್ಟ್ ನಾರ್ಮಲ್ ತಾನೇ ?" ಎಂದೆ ಉಡುಗಿದ ದನಿಯಲ್ಲಿ. "ನೀನು ಸ್ವಲ್ಪ ಧೈರ್ಯ ತಗೊಳ್ಳಮ್ಮಾ, ಈ ಥರ ಈಗೆಲ್ಲಾ ಮಾಮೂಲು" ಎಂದರು ನಿಧಾನಕ್ಕೆ, ರಿಪೋರ್ಟ್ ಮಾಮೂಲಲ್ಲ ಎನ್ನುವುದು ಅವರ ಮಾತಿನಲ್ಲೇ ಇತ್ತು. "ಹೇಳಿ ಡಾಕ್ಟರ್ ಪರ್ವಾಗಿಲ್ಲ" ಎಂದೆ ಧೈರ್ಯ ತಂದುಕೊಂಡು. "ನೋಡಮ್ಮ, ಪಟ್ಟಣದ ವಾಸದಲ್ಲಿ ಅತಿ ನಾಗರೀಕ ಸಮಾಜ ಉಪಯೋಗಿಸುವ ಪ್ಲಾಸ್ಟಿಕ್, ಔಷಧಿಗಳು ಮತ್ತು ಹೆಣ್ಣು ಮಕ್ಕಳು ಉಪಯೋಗಿಸುವ ಹಾರ್ಮೋನುಗಳು ಹೆಚ್ಚು ಹೆಚ್ಚು ಬಚ್ಚಲುನೀರಿಗೆ ಸೇರಿ ಅಂತರ್ಜಲ ಮತ್ತು ನದಿನೀರು ಕಲುಷಿತವಾಗಿದೆ. ನಿನ್ನ ತಮ್ಮ ಇರುವ ಪಟ್ಟಣದ ಸರೋವರದ ನೀರು ಇಂತಹ ತ್ಯಾಜ್ಯಗಳಿಂದ ತುಂಬಿಹೋಗಿದೆ ಎಂದು ವಿಶ್ವವಿದ್ಯಾಲಯದ ಅಧ್ಯನಗಳು ಸಾಧಿಸಿ ತೋರಿಸಿವೆ. ಇವೆಲ್ಲವುಗಳಿಗೆ ಪೂರಕ ಎಂಬಂತೆ ನಮ್ಮ ಆಚಾರ ವಿಚಾರ, ಊಟ, ನಡೆ ಎಲ್ಲಾ ಇಂತಹ ತ್ಯಾಜ್ಯಗಳ ಋಣಾತ್ಮಕ ಪರಿಣಾಮಗಳಿಗೆ ಸಹಾಯಕವಾಗಿ ಸರೋವರದ ಜೀವರಾಶಿಯಲ್ಲಿ ಲಿಂಗಪರಿವರ್ತನೆಯಾಗುತ್ತಿದೆ ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತಿವೆ. ಅದೇ ಕಾರಣಕ್ಕೆ ನಿನ್ನ ತಮ್ಮನ ರಕ್ತ ಪರೀಕ್ಷೆ ಮಾಡಿಸಿದ್ದೆ, ನನ್ನ ಅನುಮಾನ ನಿಜವಾಗಿದೆ, ನಿನ್ನ ತಮ್ಮನ ಪುರುಷ ಹಾರ್ಮೋನುಗಳ ಉತ್ಪಾದನೆಯಲ್ಲಿ ತಡೆಯುಂಟಾಗಿ, ಸ್ತ್ರೀಲಿಂಗೋತ್ಕರ್ಷಕ ಹಾರ್ಮೋನುಗಳು ಉದ್ದೀಪನಗೊಂಡಿವೆ. ಹಾಗಾಗಿ ನಿನ್ನ ತಮ್ಮ ಈಗ ಬಹುಪಾಲು ಹುಡಿಗಿಯಾಗಿ ರೂಪಾಂತರಗೊಂಡಿದ್ದಾನೆ" ಎನ್ನುತ್ತಾ, ಎದ್ದು ಕೆಲ ಚಾರ್ಟ್ ತೋರಿಸುತ್ತಾ.. "ನೋಡಮ್ಮ, ನಿಮ್ಮ ಜಾತಿಯ ಮೀನುಗಳಲ್ಲಿ ಈ ರೀತಿಯ ಸ್ವಭಾವ ಕಾಣಸಿಗದು, ಕೆಲ ಜಾತಿಯ ಮೀನುಗಳು ತಮ್ಮ ವಯಸ್ಸಿನ ಮೊದಲ ೩-೪ ವರ್ಷದವೆರೆಗೆ ಹೆಣ್ಣಾಗಿರುತ್ತವೆ ಆನಂತರ ಗಂಡಾಗಿರುತ್ತವೆ ಅಥವಾ ಇನ್ನೂ ಕೆಲವು ಮೊದಲು ಗಂಡಾಗಿದ್ದು ನಂತರ ಹೆಣ್ಣಾಗುತ್ತವೆ, ಇದು ನಿನಗೂ ಗೊತ್ತು. ಆದರೆ ಈ ರೀತಿಯ ಲಿಂಗಪರಿವರ್ತನೆ ನಿಮ್ಮ ಜಾತಿಯ ಮೀನುಗಳಲ್ಲಿ ಇಲ್ಲ. ಆದರೂ ಹೀಗಾಗಿದೆಯೆಂದರೆ ಇದಕ್ಕೆ ಮೂಲಕಾರಣ "ಜಲಮಾಲಿನ್ಯ" ಎಂದು ವಿವರಿಸಿದರು. "ಅಬ್ಬಾ ಹೀಗಾ ಕಥೆ!!." ಎಂದು ಉದ್ಗರಿಸಿ, ಡಾಕ್ಟರಿಗೆ ಧನ್ಯವಾದ ಹೇಳಿ, ಮನೆಗೆ ಬಂದೆ.
.......ಅಯ್ಯೋ ಸಿವನೇ, ಇದೇನಪ್ಪಾ...ಇವನು ಕತೆನ ಎಲ್ಲೆಲ್ಲಿಗೋ ಕೊಂಡೊಯ್ದ ಅಂದ್ಕೊಂಡ್ರಾ...? ಹೌದು ಸ್ನೇಹಿತರೇ, ನಾನು ಹೇಳಿದ್ದು ಸಮಾನ್ಯವಾಗಿ ಜೀವನಮಾನವಿಡೀ ಒಂದೇ ಲಿಂಗ ಸ್ವಭಾವ ಹೊಂದಿದ ಒಂದು ಜಾತಿಯ ಮೀನಿನ ಸಂತತಿ ಕುರಿತ ಕತೆ. ಹೆಣ್ಣಾಗಿ ಹುಟ್ಟಿ ಹೆಣ್ಣಾಗಿಯೇ ಸಾಯುವ ಮೀನುಗಳಿದ್ದಂತೆ, ಜೀವನದ ಕೆಲಕಾಲ ಹೆಣ್ಣು ಅಥವಾ ಗಂಡಾಗಿದ್ದು ನಂತರ ಗಂಡು ಅಥವಾ ಹೆಣ್ಣಾಗುವ ಮೀನಿನ ಜಾತಿಗಳೂ ಇವೆ, ಇದನ್ನು ಸ್ವಾಭಾವಿಕ ಲಿಂಗಪರಿವರ್ತನೆ ಎನ್ನುತ್ತೇವೆ. ಆದರೆ ಇತ್ತೀಚಿನ ಜಲಮಾಲಿನ್ಯದ ಹಿನ್ನೆಲೆಯಲ್ಲಿ ಅಸಾಮಾನ್ಯ ಎನಿಸುವ ಘಟನೆಗಳು ಜಲಪ್ರಪಂಚದಲ್ಲಿ ನಡೆಯುತ್ತಿವೆ. ಲಿಂಗಪರಿವರ್ತನೆ ಸ್ವಭಾವವಲ್ಲದ ಮೀನುಗಳಲ್ಲಿ ಅಕಾಲಿಕ ಲಿಂಗ ಪರಿವರ್ತನೆಯಿಂದ ಸ್ವಾಭಾವಿಕ ಪ್ರಜನನ ಮತ್ತು ವಂಶಾಭಿವೃದ್ಧಿಯಾಗದೇ ಆ ಮೀನಿನ ಪ್ರಜಾತಿಯೇ ನಶಿಶಿಹೋಗುವ ಸಾಧ್ಯತೆ ಇಲ್ಲದಿಲ್ಲ ಎನ್ನುವ ಅಭಿಪ್ರಾಯವನ್ನು ಮತ್ಸ್ಯವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಒಂದೆಡೆ ಮೀನಿನ ಅತಿಗ್ರಹಣ (ಓವರ್ ಫಿಶಿಂಗ್) ಒಂದೆಡೆ ಪ್ರಜಾತಿಗಳ ನಾಶಕ್ಕೆ ಕಾರಣವಾದರೆ ಮಾನವ ನಿರ್ಮಿತ ಕಾರನಗಳಿಂದ ಪರೋಕ್ಷ ಪ್ರಭಾವ ಜಲಸಂಪತ್ತಿನ ಮೇಲೆ ಬೀಳುತ್ತಿದೆ.
ಹಲವಾರು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಮಾನ್ಯವಾಗಿ ಕಾಣಬೇಕಾಗಿದ್ದ ಲಿಂಗಾನುಪಾತ ಕಾಣದೇ ಹೆಚ್ಚಿನ ಹೆಣ್ಣುಗಳ ಸಾಂದ್ರತೆ ಮತ್ಸ್ಯವಿಜ್ಞಾನಿಗಳನ್ನು ಕಂಗೆಡಿಸಿದರೆ, ಕಾರಣಗಳನ್ನು ಹುಡುಕಹೊರಟಾಗ ಸಿಕ್ಕ ಫಲಿತಾಂಶಗಳು ಪರಿಸರ ತಜ್ಞರನ್ನೂ ಯೋಚನೆಗೀಡುಮಾಡಿವೆ. ನಾಗರೀಕ ಬಸಿನೀರು (ಬಚ್ಚಲುನೀರು, ಕೃಷಿಭೂಮಿಯ ನೀರು ಮತ್ತು ಸಕ್ಷಮ ಸಂಸ್ಕರಣೆಗೊಳಪಡದೇ ನದಿ ಸೇರುವ ತ್ಯಾಜ್ಯನೀರು) ನದಿ ಸರೋವರಗಳಲ್ಲಿ ನಿರ್ನಾಳಗ್ರಂಥಿಬಾಧಕ ರಾಸಾಯನಿಕ (ಎಂಡೋಕ್ರೈನ್ ಡಿಸ್ರಪ್ಟಿಂಗ್ ಕಾಂಪೌಂಡ್ಸ್) ಗಳ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿವೆ. ಈ ಕಾರಣವಾಗಿ ಮೀನುಗಳಲ್ಲಿ ಲಿಂಗಾನುಪಾತದಲ್ಲಿ ಪ್ರಭೇದ ಮಾರಕ ಬದಲಾವಣೆಗಳು ಕಂಡುಬಂದಿವೆ. ಅಲ್ಲಿ ಅಧ್ಯಗಳಾಗಿವೆ ಕಂಡುಬಂದಿದೆ, ನಮ್ಮಲ್ಲಿ ಸಾಕಷ್ಟು ಅಧ್ಯಯನಗಳಾಗಿಲ್ಲ ಹಾಗಾಗಿ ಬೆಳಕಿಗೆ ಬಂದಿಲ್ಲ. ಈ ಬಗ್ಗೆ ಸಮಗ್ರ ಯೋಜನೆಗಳು ರೂಪುಗೊಳ್ಳಬೇಕು.
ಆಸಕ್ತಿದಾಯಕ ಲೇಖನಕ್ಕೆ ಕೆಳಗಿನ ಕೊಂಡಿಗಳನ್ನು ಒತ್ತಿ.
http://www.popsci.com/science/article/2009-11/what-feminizing-so-many-male-fish-our-rivers
http://www.naturalnews.com/030197_endocrine_disrupting_chemicals_sex_organs.html
http://www.unep.org/chemicalsandwaste/Portals/9/EDC/SOS%202012/EDC%20report%20Ch2-2.4.pdf

Friday, June 5, 2015

ಮೈಟೋಕಾಂಡ್ರಿಯಾ

ಮೈಟೋಕಾಂಡ್ರಿಯಾ (ಜೀವಕೋಶ ಶಕ್ತಿ ತಾಣ/ಕೇಂದ್ರ)

ಶಕ್ತಿ ಉತ್ಪಾದಿಸುವ ಕೋಶಾಂಶಗಳು (ಆರ್ಗನೆಲ್ಲೆ)



ಮೈಟೋಕಾಂಡ್ರಿಯಾಗಳನ್ನು “ಕೋಶ ಶಕ್ತಿತಾಣ” ಎಂದು ಕರೆಯುವುದೇ ಸರಿ, ಶಕ್ತಿ ಕೇಂದ್ರ ಎಂದರೆ ಯಾವುದಕ್ಕೆ ಕೇಂದ್ರ? ಮತ್ತೆ ಬೇರೆ ಕಡೆಯೂ ಶಕ್ತಿ ಉತ್ಪಾದನೆಯಾಗುತ್ತದೆ ಎಂದಾಗುತ್ತದಲ್ಲವೇ..?ಆದರೆ ಜೀವಕ್ರಿಯೆಗಳಿಗೆ ಬೇಕಾಗುವ ಶಕ್ತಿ ಉತ್ಪಾದನೆಯಾಗುವುದು ಮೈಟೋಕಾಂಡ್ರಿಯಾದಲ್ಲೇ. ಹಾಗಾಗಿ ಕೇಂದ್ರ ಎನ್ನುವುದಕ್ಕಿಂತಾ ತಾಣ ಎಂದರೆ ಸೂಕ್ತವೇನೋ.
ಮೈಟೋಕಾಂಡ್ರಿಯಾ ಪ್ರತಿ ಜೀವಕೋಶದ ಜೀವಜಲದಲ್ಲಿ (ಸೈಟೋಪ್ಲಾಸಮ್) ಕಂಡುಬರುವ ಕೋಶಾಂಶ (ಆರ್ಗನೆಲ್ಲೆ) ಗಳಲ್ಲಿ ಒಂದು. ಜೀವಕೋಶಗಳ ಕಾರ್ಯನಿರ್ವಹಣೆಗೆ ಬೇಕಾಗುವ ಶಕ್ತಿಯನ್ನು ಉತ್ಪಾದಿಸುವ ಕೆಲಸ ಈ ಕೋಶಾಂಶಗಳದ್ದು. ಉದಾಹರಣೆಗೆ- ನರವ್ಯೂಹ ಮತ್ತು ಮಿದುಳಿನ ಕೋಶಗಳ ಸಂವೇದಿ ಸೂಚನೆಗಳ ಪ್ರವಹನೆಗೆ ಶಕ್ತಿ ಬೇಕಾಗುತ್ತದೆ, ಆಶಕ್ತಿಯನ್ನು ಮೈಟೋಕಾಂಡ್ರಿಯಾ ಉತ್ಪಾದಿಸುತ್ತವೆ. ಮಾಂಸ ಖಂಡಗಳಿಗೂ ಶ್ರಮಿಸಲು ಬೇಕಾಗುವ ಶಕ್ತಿಯನ್ನು ಮೈಟೋಕಾಂಡ್ರಿಯಾ ಒದಗಿಸುತ್ತವೆ. ವಿದ್ಯುತ್ ಕೋಶಗಳಿಂದ ಸಿಗುವ ಶಕ್ತಿಯಂತಹ ರಾಸಾಯನಿಕ ಶಕ್ತಿಯನ್ನು ಮೈಟೋಕಾಂಡ್ರಿಯಾ ಉತ್ಪಾದಿಸುತ್ತವೆ. ಅಡಿನೋಸಿನ್ ಮುಮ್ಮಡಿ ಫಾಸ್ಫೇಟ್ (ಅ.ಮು.ಫಾ) ಅಥವಾ ಎ.ಟಿ.ಪಿ. ಜೀವಕೋಶಗಳ ಕೆಲಸ ನಡೆಯಲು ಬೇಕಾದ ನಗದು ಅ.ಮು.ಫಾ. ಮೈಟೋಕಾಂಡ್ರಿಯಾ ಅ.ಮು.ಫಾ. ತಯಾರಿಕೆಗೆ ಬಳಸುವ ಯಾಂತ್ರಿಕ ವ್ಯವಸ್ಥೆಯನ್ನು ಎಲೆಕ್ಟ್ರಾನ್ ಟ್ರಾನ್ಸ್ಪೋರ್ಟ್ ಚೈನ್ ಅಥವಾ ವಿದ್ಯುನ್ಮಾನ ಸಂಚಾರ ಸರಣಿ ಎನ್ನುತ್ತೇವೆ. ಈ ಸರಣಿ ಜೊತೆಜೊತೆ ಕೆಲಸ ನಿರ್ವಹಿಸುವ ಪ್ರೋಟೀನು ಗುಂಪುಗಳ ನಾಲ್ಕು ಸಂಕೀರ್ಣ ವ್ಯವಸ್ಥೆಗಳ ಅನುಬಂಧವಾಗಿದೆ. ಐದನೇ ವ್ಯವಸ್ಥೆಯ ಮೂಲಕ ಶಕ್ತಿ ಉತ್ಪಾದನೆಯಾಗುತ್ತದೆ.

ಮೈಟೋಕಾಂಡ್ರಿಯಾ ಜೀವವಿಕಾಸ ಸರಣಿಯಲ್ಲಿ ವಿಕಸಿತ ಜೀವಿ (ಪ್ರಾಣಿ ಮತ್ತು ಸಸ್ಯಗಳನ್ನೊಳಗೊಂಡಂತೆ ಮಾನವನವರೆಗೂ) ಮತ್ತು ಅತಿ ಪ್ರಾಥಮಿಕ ಹಂತದ ಬ್ಯಾಕ್ಟೀರಿಯಾಗಳ ನಡುವಿನ ಸಂಬಂಧವನ್ನು ಪ್ರತಿಪಾದಿಸುವ ಪ್ರಮುಖ ಕೊಂಡಿಯಾಗಿದೆ. ಬ್ಯಾಕ್ಟೀರಿಯಾಗಳಲ್ಲಿ ಕೋಶಕೇಂದ್ರ ಇರುವುದಿಲ್ಲ ವಂಶಾಭಿವೃದ್ಧಿಗೆ ಬೇಕಾದ ವಂಶವಾಹಿನಿಗಳು (ಡಿ.ಎನ್.ಎ) ಕೋಶದಲ್ಲೆಲ್ಲಾ ಕಂಡುಬರುತ್ತವೆ. ಜೀವವಿಕಾಸವಾದಂತೆ ಕೋಶಗಳಲ್ಲಿ ವಿವಿಧತೆ ಮೂಡಿದಂತೆ ಅಂಗಾಂಶ ರೂಪುಗೊಂಡಂತೆ, ದೇಹ ರಚನೆ, ರೂಪು ರೇಷೆ ಇತ್ಯಾದಿಗೆ ಬೇಕಾದ ಸಂಕೇತಗಳನ್ನೊಳಗೊಂಡ ಡಿ.ಎನ್.ಎ. ಕೋಶ ಕೇಂದ್ರದಲ್ಲಿ ಸಾಂದ್ರೀಕೃತವಾದವು. ಜೀವ ಮತ್ತು ಕೋಶ ಕ್ರಿಯೆಗಳಿಗೆ ಬೇಕಾಗುವ ಶಕ್ತಿಯ ಉತ್ಪಾದನೆಗೆ ಬೇಕಾಗುವ ಎಲ್ಲಾ ಅಂಶಗಳಿಗೆ ಸಂಕೇತಗಳನ್ನೊಳಗೊಂಡ ಡಿ.ಎನ್.ಎ. ಮೈಟೋಕಾಂಡ್ರಿಯಾದಲ್ಲಿ ಉಳಿದುಕೊಂಡಿತು. ಡಿ. ಎನ್ ಎ. ಒಂದು ತಿರುಚಿದ ಏಣಿಯ ರೂಪದಲ್ಲಿ ವಿನ್ಯಾಸ ಹೊಂದಿರುವ ಕೇಂದ್ರ ಧಾತುಗಳ (ನ್ಯೂಕ್ಲಿಯೋಟೈಡ್) ಆಕಾರವಾಗಿದೆ. ಮಾನವ (ಹೆಚ್ಚಿನ ಎಲ್ಲಾ ಪ್ರಾಣಿಗಳಲ್ಲೂ) ದೇಹದ ಕೋಶಕೇಂದ್ರದಲ್ಲಿರುವ ವರ್ಣತಂತುಗಳಲ್ಲಿ ಮತ್ತು ಕೋಶ ಜೀವಜಲದಲ್ಲಿನ ಮೈಟೋಕಾಂಡ್ರಿಯಾದಲ್ಲಿ “ಡಿ.ಎನ್.ಎ.” ಕಂಡುಬರುತ್ತದೆ. ಜೀವಿಗಳಲ್ಲಿ ಮಾರ್ಪಾಡುಗಳು ಕಂಡುಬರಲು ಕೋಶ ಕೇಂದ್ರದ ಡಿ ಎನ್ ಎ ಕಾರಣ. ಮೈಟೋಕಾಂಡ್ರಿಯಾ ಎಲ್ಲಾ ಜೀವಿಗಳ ಅತ್ಯಾವಶ್ಯಕ ಶಕ್ತಿ ಉತ್ಪಾದನೆಗೆ ಕಾರಣವಾಗಿರುವುದರಿಂದ ಇದರಲ್ಲಿನ ಡಿಎನ್ ಎ ನಲ್ಲಿ ಮಾರ್ಪಾಟುಗಳು ಆಗುವುದಿಲ್ಲ.

ಮಾನವ ದೇಹದಲ್ಲಿ ಮೈಟೋಕಾಂಡ್ರಿಯಾ ಹೊಂದಿರುವ ಡಿ ಎನ್ ಎ ಪ್ರಮಾಣ ಕೇವಲ 16,500 ಮೂಲ ಜೋಡಿ (ಬೇಸ್ ಪೇರ್ಸ್)  ಧಾತುಗಳು (ನ್ಯೂಕ್ಲಿಯೋಟೈಡ್). ಅದೇ ಕೋಶಕೇಂದ್ರದ ವರ್ಣತಂತುಗಳ ಮೇಲೆ ಕಂಡುಬರುವ ಡಿ,ಎನ್.ಎ ಪ್ರಮಾಣ 30 ಕೋಟಿ ಮೂಲ ಜೋಡಿ ಧಾತುಗಳು. ಇಷ್ಟು ಕಡಿಮೆ ಡಿ ಎನ್ ಎ. ಹೊಂದಿದ್ದರೂ ಮೈಟೋಕಾಂಡ್ರಿಯಾ ಜೀವ ಶಕ್ತಿ ತಾಣ ಹಾಗಾಗಿ ಮಹತ್ತರ ಕೋಶಾಂಶ.   




 

Thursday, May 14, 2015

ಹೀಗೂ ಒಂದು ಎಡವಟ್ಟು.....

ಹೀಗೂ ಒಂದು ಎಡವಟ್ಟು ..
(Foto Source: Internet)

ಟ್ರಿನ್...ಟ್ರಿನ್...ಟ್ರಿನ್...
ಅಪರೂಪಕ್ಕೆ ನಮ್ಮ ಮನೆಯ ಲ್ಯಾಂಡ್ ಲೈನ್ ದೂರವಾಣಿ ಪಕ್ಕದಲ್ಲೇ ಚಾರ್ಜ್ ಮಾಡಲು ಇಟ್ಟಿದ್ದ ನನ್ನ ಹೊಸ ಗೆಲಾಕ್ಸಿ ಎಸ್ಸಾರು ನ ನೋಡಿ ಲೇವಡಿ ಮಾಡಿದ್ದು...ನೋಡಿ...ನನಗೆ ನಗು ಬಂತು...
ಯಾವಾಗಲೂ ಮನೆಯಲ್ಲೇ ಇರುವ, ಅಲ್ಪ ಸ್ವಲ್ಪ ಓಡಾಡಬಲ್ಲ, ಆದರೂ ಸದಾ ಕರೆಗೆ ಓಗೊಡಬಲ್ಲ ಆ ಸೀಮಿತಚರ ದೂರವಾಣಿಗೆ- ಉಸಿರಿಲ್ಲದೇ ವಿದ್ಯುತ್ ಸಾಕೆಟ್ಟನ್ನೇ ದೇಹಿ ಎನ್ನುತ್ತಾ ಗೋಗರೆಯುತ್ತಿದ್ದ ಗೆಲಾಕ್ಸಿ ಎಸ್ಸಾರನ್ನು ನೋಡಿ “ಅಯ್ಯೋ ಪಾಪ” ಎನಿಸಿರಲೂಬಹುದು.
ದೂರವಾಣಿಯನ್ನ ಕೈಗೆ ತೆಗೆದುಕೊಂಡೆ
ಹಲೋ..ಹಲೋ..
ಆ ಕಡೆಯಿಂದ ಸವಿ ಸವಿ ಹೆಣ್ಣಿನ ದನಿ...
“ಹಲೋ, ಎಸ್...ಹೂ ಈಸ್ ಸ್ಪೀಕಿಂಗ್”...ಎಂದೆ....
“ಮೇಡಂ ಈಸ್ ಡಾ. ಆಜಾದ್ ದೇರ್..? ದಿಸ್ ಈಸ್ ಕನ್ವಿನರ್ ಪಿ ಆರ್ ಕಮಿಟಿ  ಫ್ರಂ ಕುವೈತ್ ಕನ್ನಡ ಕೂಟ...ಸ್ಪೀಕಿಂಗ್”
ಅರೆರೆ..ಇಸ್ಕಿ..!!.ನನ್ನ ನಾನು ಮುಂದುಗಡೆ ಇದ್ದ ಕನ್ನಡಿಲಿ ನೋಡ್ಕೊಂಡೆ..., ಹೌದು ನಾನೇ...!! ಮತ್ತೆ ಮೇಡಂ ಅಂತಾರಲ್ಲ ಈವಮ್ಮ..?? ಅಂದ್ಕೊಂಡ್ರೂ...
ಹೌದು ಕನ್ನಡ ಕೂಟದವರು ನನ್ನ ಮಿಸಸ್ ಗೆ ಕನ್ನಡ ಬರೊಲ್ಲ ಅಂದ್ಕೊಂಡಿದ್ದಾರಾ ಹ್ಯಾಗೆ..?? !!,
ನಾನಂದೆ..
“ಮೇಡಂ, ಕನ್ನಡ ಕೂಟದ ಪಿ ಆರ್ ಕಮಿಟಿ ಅಂತೀರ, ಕನ್ನಡದಲ್ಲಿ ಮಾತನಾಡಬಹುದಲ್ಲ ಕೂಟದ ಸದಸ್ಯರ ಜೊತೆಗೆ ಮಾತಾನಾಡುವಾಗ..??”
“ಹಾಂ..!!”
ಆ ಕಡೆಯವರು ಗಾಬರಿಯಾದಂತೆ ಅನಿಸಿತು... ತಕ್ಷಣ ಹೇಳಿದೆ...
“ಅಲ್ಲ ಮೇಡಂ, ತಪ್ಪು ತಿಳಿಯಬೇಡಿ, ನಾವೇ ನಮ್ಮಲ್ಲಿ ಕನ್ನಡದಲ್ಲಿ ವ್ಯವಹರಿಸದೇ ಇದ್ದರೆ ಉತ್ತರ ಭಾರತದವರು ಕನ್ನಡದಲ್ಲಿ ಮಾತನಾಡುತ್ತಾರೆಯೇ..??”
“ಅಯ್ಯೋ, ಕ್ಷಮಿಸಿ ಮೇಡಂ, ನಿಮಗೆ ಕನ್ನಡ ಬರುತ್ತೋ ಇಲ್ವೋ ಅನ್ನೋ ಅನುಮಾನದಲ್ಲಿ ಇಂಗ್ಲೀಷಲ್ಲಿ ಮಾತನಾಡಿದೆ... ಆಜಾದ್ ಸರ್ ಆದರೆ ಕನ್ನಡದಲ್ಲೇ ಕೇಳ್ತಿದ್ವಿ”
ಈಗ ನನ್ನಲ್ಲಿದ್ದ ಪುರುಷ ಪ್ರಧಾನ ಗಡಸು ಸ್ವರ ಜಾಗೃತಗೊಂಡಿತು....ಸ್ವಲ್ಪ ದಪ್ಪ ಸ್ವರ ಹೊರಡಿಸುತ್ತಾ...ಕೇಳಿದೆ,
“ಅಲ್ಲಾ ರೀ...ನನ್ನ ಜೊತೆಗೇ ಇಂಗ್ಲೀಷಲ್ಲಿ ಮಾತನಾಡಿದ್ದಲ್ಲದೇ... ಆಗ್ಲಿಂದ ಮೇಡಂ ಮೇಡಂ ಅಂತ ಹೇಳ್ತಿದ್ದೀರಲ್ಲಾ..ನಾನು ಗಂಡಸು ಕಣ್ರೀ... ನಾನೇ ಆಜಾದ್..” ಎಂದೆ ಆಕ್ಷೇಪದಿಂದ.
“ಅಯ್ಯೋ ಹೌದಾ ಸರ್, ...ನೀವೇನಾ ಮಾತ್ನಾಡಿದ್ದು...??”
ಇದ್ಯಾಕೋ ತೀರಾ ಆಯ್ತು, ನನ್ನನ್ನು ನಾನೇ ಅಲ್ಲ ಎನ್ನುವಂತೆ ಕೇಳ್ತಾರಲ್ಲ...ಎಂದುಕೊಂಡರೂ.. ಸಮಾಧಾನದಿಂದ,
“ಹೌದು ಮೇಡಂ ನಾನೇ ಆಗ್ಲಿಂದ ಮಾತನಾಡ್ತಿರುವುದು, ಯಾಕೆ ನನ್ನ ದನಿ ಹೆಣ್ಣಿನ ದನಿ ತರಹ ಇದೆಯಾ?” ಎಂದೆ ಸ್ವಲ್ಪ ಗಡಸು ದನಿಯಲ್ಲೇ...
“ಸಾರಿ, ಸಾರಿ ಸರ್, ನಮ್ಮ ಪ್ರಚಂಡರ ಪರಿಷೆ ಕಾರ್ಯಕ್ರಮಕ್ಕೆ ನೀವು ಒಬ್ಬರೇ ಬರ್ತೀರೋ ನಾಲ್ಕೂ ಜನ ಬರ್ತೀರೋ...?”
“ನಾವು...ಮೂವರು... ಆಂ !..., ಅರೆ!! ಏನಂದ್ರಿ..ನಾಲ್ಕೂ ಜನ...?? ನಮಗೆ ಇರೋದು ಒಂದೇ ಮಗು ಕಣ್ರೀ.. ಸುರಯ್ಯಾ – ಮಗ ಮಗಳು ಎಲ್ಲಾ ಅವಳೇ, ಈ ನಾಲ್ಕನೇದನ್ನ ಯಾವಾಗ ದೇವರು ಕೊಟ್ಟ ನನಗೇ ಗೊತ್ತಿಲ್ಲ..!!” ಎಂದೆ ನಗುತ್ತಾ.
“ಹಿಹಿಹಿ, ತುಂಬಾ ತಮಾಶೆಯಾಗಿ ಹೇಳ್ತೀರಿ..ಸರ್.  ಸಾರಿ ಸರ್, ಹೌದಲ್ಲಾ ...ಸುರಯ್ಯಾ ಒಬ್ಬಳೇ ಅಲ್ವಾ...?,  ಹಾಗಾದರೆ ನೀವು ಮೂವರೂ ಬರ್ತೀರಲ್ವಾ..?”
“ಹೌದು ತಮಾಶೆಯಲ್ಲೇ ನಾಲ್ಕನೇ ಸದಸ್ಯ ಆದರೆ ಪರವಾಗಿಲ್ಲ ಬಿಡಿ... ಎನಿ ವೇ...ತಪ್ಪು ತಿಳೀಬೇಡಿ...ಹಾಗೇ ತಮಾಶೆಗೆ ಹೇಳಿದೆ, ಹೌದು ನಾವು ಮೂವರೂ ಬರ್ತೀವಿ” ಎಂದೆ.
“ಧನ್ಯವಾದ ಸರ್, ಗೊಂದಲಕ್ಕೆ ಕ್ಷಮೆಯಿರಲಿ...” ಎಂದರು ಆ ಕಡೆಯಿಂದ
“ಪರವಾಗಿಲ್ಲ ಬಿಡಿ, ಆಯ್ತು ಶುಭವಾಗಲಿ ಬರ್ತೀವಿ ನಾವು, ಬೈ” ಎಂದು ಫೋನ್ ಇಟ್ಟೆ.
ಇಡೀ ಸಂಭಾಷಣೆ ಮೆಲುಕು ಹಾಕ್ತಾ ನಗ್ತಾ, ಮರಳ ಮಲ್ಲಿಗೆಗೆ ಲೇಖನ ಬರೆಯಲು ಕುಳಿತೆ.
ಟ್ರಿಣ್ ಟ್ರಿಣ್ ಟ್ರಿಣ್... ಟ್ರಿಣ್..ಟ್ರಿಣ್..... ಮತ್ತೆ ದೂರವಾಣಿ ಉಲಿಯಿತು...
“ಹಲೋ...ಎಸ್...? “ ಎಂದೆ.
“ಹಲೋ ನಮಸ್ಕಾರ ಅಬಿದಾ.. ಮೇಡಂ.. ಹ್ಯಾಗಿದ್ದೀರಿ..?? ಸುರು ಹ್ಯಾಗಿದ್ದಾಳೆ..?? ಇನ್ನೊಂದು ಸಂಗೀತಮಯ ಹೆಣ್ಣಿನ ದನಿ..
ಯಪ್ಪಾ..ಏನಿದು.. ?? ತಲೆ ಚಿಟ್ ಹಿಡೀತಿದೆ... ಇವರೂ ನನ್ನನ್ನ ಹೆಣ್ಣಿಗಿಂತಾ ಹೆಚ್ಚಿಲ್ಲ ಅನ್ನೋ ಹಾಗೆ ಕೇಳ್ತಾರಲ್ಲ...??!! ಕೋಪ ಬಂತು.. ಆದರೂ ..ಅರೆ ! ಅಬಿದಾ ಹೆಸರು ..ಸುರಯ್ಯಳ ಕಿರುನಾಮ ಸಹಾ ಗೊತ್ತಿದೆಯಲ್ಲ..!!  ಕೇಳಬೇಕು ಅಂತ ಬಾಯ್ ಬಿಡುವುದರೊಳಗೆ...ಅವರೇ...
“ನಾನು.. ಆರತಿ ಅಂತ, ದುಬೈಯಿಂದ... ಡಾ. ಆಜಾದ್ ಸರ್ ದುಬೈ ಗೆ ಕಾನ್ಫರೆನ್ಸಿಗೆ ಬರ್ತೀನಿ ಅಂತ ಹೇಳಿದ್ರು.. ಅವರ ಹತ್ರ ಮಾತನಾಡಬಹುದಾ..??”
ಓಹ್ ಚುಟುಕು-ಗುಟುಕಿನ ಆರತಿನಾ...!! ಆದರೂ ಸ್ವಲ್ಪ ಗೋಳು ಹುಯ್ಕೊಳ್ಳೋಕೆ ಮನಸಾಯ್ತು...
“ಓಹ್..ಆರತಿನಾ...ನೀವು ಹೇಗಿದ್ದೀರಿ? ನಾವೆಲ್ಲಾ ಚನ್ನಾಗಿದ್ದೀವಿ?” ಎಂದೆ
“ಹೌದು ಮೇಡಂ, ನಾವೂ ಚನ್ನಾಗಿದ್ದೀವಿ..ಮಾತನಾಡಬಹುದಾ ಅವರ ಹತ್ರ..”
“ಆರತಿಯವರೇ.. ಅವರ ಪ್ರೋಗ್ರಾಮ್ ಕ್ಯಾನ್ಸಲ್ ಆಯ್ತಂತೆ... ಏನೋ ಮಾಡ್ತಿದ್ದಾರೆ ಕಂಪ್ಯೂಟರ್ ಬಳಿ... “ ನಗು ಅದುಮಿಟ್ಟುಕೊಂಡು ಹೇಳಿದೆ...
“ಹೌದಾ...ಬರ್ತೀನಿ ಅಂದಿದ್ರು,,, ನಾನು ಹೊಳೆನರಸೀಪುರ ಮಂಜುನಾಥ್ ಗೂ ಹೇಳಿಬಿಟ್ಟಿದ್ದೆ..ನಮ್ಮ ಮನೆಗೆ ಭೇಟಿ ಕೊಡಿ ಅಂತ,,, ಅವರೂ ಒಪ್ಕೊಂಡಿದ್ರು...ಆಜಾದ್ ಸರ್ ಟಿಕೆಟ್ ಎಲ್ಲಾ ಬುಕ್ ಆಗಿದೆ ಅಂತ ಹೇಳ್ತಿದ್ರು...!!”  ಆರತಿ ದನಿಯಲ್ಲಿ ನಿರಾಸೆ ಸ್ಪಷ್ಟವಾಗಿತ್ತು...
ಪಾಪ ಹೆಚ್ಚು ಗೋಳಾಡಿಸೋದು..ಬೇಡ...ಎಂದು...
“ಹಹಹಹ .....ಹಾಗಲ್ಲ.........”
ಎನ್ನುವುದರೊಳಗೆ...
“ಏಯ್..ಇದು ಆಜಾದ್ ಸರ್ರೇ!!,,,, ಏನ್ಸಾರ್ ನೀವು ಬೇಸ್ತು ಬೀಳಿಸ್ತೀರಾ...!! ಹೆಣ್ಣಿನ ದನಿಯಲ್ಲಿ ಎಷ್ಟು ಚನ್ನಾಗಿ ಮಾತನಾಡ್ತೀರ...?!!
ಯಪ್ಪಾ... ಇದಂತೂ ಎಡವಟ್ಟೇ..ಅಂದ್ಕೊಂಡು...
“ಆರತಿ...ಸುಮ್ನೆ ತಮಾಶೆಗೆ ಹಾಗೆ ಹೇಳಿದೆ...ನಾನು ಬರ್ತಿದ್ದೇನೆ...ಮಂಜುನಾಥ್ ಗೆ ಪೋನ್ ಸಹಾ ಮಾಡಿದ್ದೆ... ಹೆಣ್ಣಿನ ದನಿ..ಅಂದ್ರಲ್ಲಾ...?? ಕಂಫ್ಯೂಜನ್ ಯಾಕೆ...”
“ಅಲ್ಲ ಸರ್..ದನಿ ಬದಲಿಸಿ ಮಾತನಾಡ್ತೀರಲ್ಲ ಅದಕ್ಕೆ ಕೇಳಿದೆ...”
ಈಗ ನಿರ್-ಉತ್ತರ ನಾನು... ನನ್ನ ದನಿನೇ ಹಾಗಾ...?? ನನಗೇ ನನ್ನ ಬಗ್ಗೆ ಅನುಮಾನ ಆಯ್ತು...
“ಸರಿ ಬಿಡಿ ಅಲ್ಲಿ ಬಂದಾಗ ಕತೆ ಹೇಳ್ತೀನಿ...ಹಹಹ” ಎಂದೆ ಪೆಕರು ಪೆಕರಾಗಿ
“ಓಕೆ ಸರ್.. ಆಯ್ತು...ನಾನೂ ಸ್ವಲ್ಪ ತೇಜೂ ಸ್ಕೂಲ್ ಹತ್ರ ಹೋಗ್ಬೇಕು..ಮತ್ತೆ ಸಿಗ್ತೇನೆ ..ಬೈ..”
“ಓಕೆ ಬೈ...ಆರತಿ...ಟೇಕ್ ಕೇರ್” ಎಂದು ಪೋನ್ ಕೆಳಗಿಟ್ಟೆ
ನನಗೆ ಪರಿಶೀಲನೆ ಆಗಲೇಬೇಕು ಅನ್ನಿಸಿತು... ಕಂಪ್ಯೂಟರ್ ನ ಸೌಂಡ್ ರೆಕಾರ್ಡ್ ಪ್ರೋಗ್ರಾಮಲ್ಲಿ  ಫೋನಿನಲ್ಲಿ ನಾನು ಮಾತನಾಡಿದ ಮಾತನ್ನೇ ರೆಕಾರ್ಡ್ ಮಾಡಿ..ದೊಡ್ಡದಾಗಿ ದನಿ ಹೆಚ್ಚಿಸಿ...ಪ್ಲೇ ಮಾಡಿದೆ... ಅರೆ..ಸರಿಯಾಗೇ ಇದೆಯಲ್ಲಾ...!! ಮತ್ತೆ ಯಾಕೆ ..??? ಇದೊಂದು ಬಿಡಿಸಲಾಗದ ಕಗ್ಗಂಟಾಗ್ತಿತ್ತು....
ಮತ್ತೆ ಅದೇ ಸೀಮಿತಚರ ದೂರವಾಣಿ....ಸದ್ದು....
“ಟ್ರಿನ್.ಟ್ರಿನ್...ಟ್ರಿನ್...”
ಫೋನ್ ಎತ್ತಿದೆ...
“ಹಲೋ” ಎಂದೆ...
“ದಿಸ್ ಈಸ್ ಫ್ರಂ ಸಿಮ್ಸ್ ಸ್ಕೂಲ್,.... ಈಸ್ ದಿಸ್ ಸುರಯ್ಯಾಸ್ ಮಮ್ಮಿ...??”
!!!???!!!!! ಕಣ್ಣು ಕತ್ತಲಿಟ್ಟಂತಾಯ್ತು... ಚೇರಿನಲ್ಲಿ ಕುಸಿದೆ... ಆ ಕಡೆಯಿಂದ..ಹೆಣ್ಣಿನ ದನಿ ಇನ್ನೂ ಕೇಳುತ್ತಿತ್ತು.
“ಮೇಡಂ...ಹಲೋ...ಮೇಡಂ... ಈಸ್ ಇಟ್ ಸುರಯ್ಯಾಸ್ ಮಮ್ಮಿ...ಪ್ಲೀಸ್ ದಿಸ್ ಈಸ್ ಟು ರಿಮೈಂಡ್ ಯೂ ದಟ್ ವೀಕೆಂಡ್ ಈಸ್ ಪೇರೆಂಟ್ ಟೀಚರ್ಸ್ ಮೀಟಿಂಗ್ ಓಕೆ ಮೇಡಂ!!”
ಸಾವರಿಸಿಕೊಂಡು..
“ಓಕೆ....” ಎಂದು ಪೋನ್ ಕುಕ್ಕಿದೆ...’
ಯಾಕೆ ಹೀಗೆ...?? ನನ್ನ ಮೀನಿನ ರೀಸರ್ಚ್ ಬೇಕಾರ್ ಅನ್ನಿಸ್ತು...ಈ ಬಗ್ಗೆ ಈಗ ರೀಸರ್ಚ್ ಮಾಡ್ಲೇಬೇಕು...ಊಂ..!!!’
ಅಷ್ಟರಲ್ಲಿ...ನನ್ನ ಗೆಲಾಕ್ಸಿಗೆ ಜೀವ ಬಂತು ಅಂತ ಗೊತ್ತಾಗಿದ್ದು,,ಅದ್ರಲ್ಲಿ ರಿಂಗ್ ಟೋನ್ ಅಣ್ಣಾವ್ರ...”ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು” ಅಂತ ಬಂದಾಗಲೇ...
ಚಾರ್ಜರ್ ನ ತೆಗೆದು ಫೋನ್ ನಲ್ಲ್ಲಿ
“ಎಸ್..ಹಲೋ...” ಎಂದೆ..
“ನಮಸ್ಕಾರ ಸರ್, ನಾನು ಮಹೇಶ್ ಮಾತನಾಡ್ತಿರೋದು... ಯಾಕೆ ನನ್ನ ನಂಬರ್ ಸೇವ್ ಮಾಡ್ಕೊಂಡಿಲ್ವಾ ನೀವು...??
ಈಗ ನನಗೆ ಮಹದಾಶ್ಚರ್ಯ...ಜೊತೆಗೆ...ನನ್ನ ಸಂಶಯ ಸಹಾ ನಿವಾರಣೆ ಆಯ್ತು ಅನ್ನಿಸ್ತು...
“ಹೇಳಿ ಮಹೇಶ್..., ಒಂದೆರಡು ನಿಮಿಷದ ನಂತರ ಕಾಲ್ ಮಾಡಲಾ” ಎಂದೆ..
ಈಗ ಗೆಲಾಕ್ಸಿ ಮೂಲಕ ಸ್ಕೂಲಿಗೆ ಫೋನಾಯಿಸಿದೆ....
“ಈಸ್ ದಿಸ್ ಸಿಮ್ಸ್ ಸ್ಕೂಲ್?” ಎಂದೆ
“ಎಸ್ ಸರ್...ದಿಸ್ ಈಸ್ ಸಿಮ್ಸ್.. ಟೆಲ್ ಮಿ ಸರ್ ವಾಟ್ ಕೆನ್ ಐ ಡೂ?”
ಹೌದು ಅದೇ... ಹೆಣ್ಣಿನ ದನಿ!!..ಆಗ ಕೇಳಿದ್ದು !!!... ಈಗ ಸರ್...ಅನ್ತಿದೆ... ಅಂದರೆ...
’ಎಲ್ಲಾ ಎಡವಟ್ಟೂ ..ಸೀಮಿತಚರ ದೂರವಾಣಿ ಯದ್ದೇ ಎನ್ನುವುದರಲ್ಲಿ ಅನುಮಾನ ಉಳಿಯಲಿಲ್ಲ...
“ಓಹ್...ಎಸ್... ಹಲೋ...ಹಲೋ....ಹಲೋ....”
ಆ ಕಡೆ ಫೋನ್ ಇಟ್ಟಾಗಿತ್ತು.

ಅಬ್ಬಾ...!! ಅಂತೂ ಒಂದಂತೂ ಇತ್ಯರ್ಥ ಆಯ್ತು.... “ನಾನು ನಾನೇ...!!!”

Thursday, April 2, 2015

ಬೆದರದ ಬದರಿ ವಿಕ್ರಮಗಾಥ


ಬೆದರದ ಬದರಿ ವಿಕ್ರಮಗಾಥ
ಇಂತಿರಲಾಗಿ ಕರುನಾಡ ಕನ್ನಡಿಯಲಿ ನೋಡುತ ಶತವಿಕ್ರಮ ವಂಶಜ “ಬದರಿ ವಿಕ್ರಮ” ಬೆದರದೆ ಹೆದರದೆ ನಕ್ಷೆಯಲಿ ಗುರುತು ಹಾಕಿದ. ಎಲ್ಲಿಗೆ ಹೋಗುತ್ತಿದೆ ಈ ಬ್ಲಾಗ್ ಭೇತಾಳ ನನ್ನ ಕೈವಶವಾಗದೇ? ಎನ್ನುವ ಚಿಂತೆಯ ಗೆರೆಗಳು ಹಣೆಯ ಮೇಲೆ ಮೂಡುವ ಮುನ್ನವೇ 3-K ಖಡ್ಗವನ್ನು ಮೊನಚುಮಾಡಿಕೊಂಡು, ತನ್ನ ಜೊತೆಗೆ ನಿಯಮಿತವಾಗಿ ವಾರ್ತಾಲಾಪ ಮಾಡುವ ಅಂತಃ ಜೀವಿತ ಬ್ಲಾಗಾತ್ಮಗಳ ಪ್ರೋತ್ಸಾಹದಿಂದ ಉತ್ತೇಜಿತನಾಗಿ ಮಳೆ ಗೊಬ್ಬರಗಳಿಲ್ಲದಿದ್ದರೂ ಹುಲುಸಾಗಿ ಬೆಳೆದು ಘನ-ತೆ ವೆತ್ತ ಫೇಸ್ಬುಕಾರಣ್ಯ, ವಾಟ್ಸಪಾಪರ್ವತ ಮತ್ತು ಟ್ವಿಟ್ಟರ್ಸರೋವರಗಳಲ್ಲಿ ಹುಡುಕಾಡತೊಡಗಿದ. ಒಂದು ಕಾಲದಲ್ಲಿ ನೂರಾರು ಮಕ್ಕಳುಮರಿಗಳೊಂದಿಗೆ ಸುಭಿಕ್ಷವಾಗಿದ್ದ ಬ್ಲಾಗ್ರಾಜನ ರಾಜ್ಯ ಋತುಗಳು ಕಳೆದರೂ "ಋತು"ಗಳ ಕಾಣದೇ ಪದೇ ಪದೇ ಕಾಣುವ ಖಾರಿದೇಶದ ಮರಳುಗಾಡಾಗಿತ್ತು. ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕುತ್ತಾ ತನ್ನ ಗತವೈಭವ ಹೀಗೂ ಇತ್ತು ಎನ್ನುವಂತೆ ಕಾಣುವ ಬ್ಲಾಗ್ರಾಜ ಈಗ ಕೆಲವೊಮ್ಮೆ ಫೇಸ್ಬುಕಾರಣ್ಯದಲ್ಲೋ ಮಗದೊಮ್ಮೆ ವಾಟ್ಸಪಾಪರ್ವತದಲ್ಲೋ ಕಾಣಿಸುತ್ತಾ “ಬದರಿ ವಿಕ್ರಮ”ನನ್ನು ಬೆದರಿಸುವ ಯಾವುದೇ ಅವಕಾಶವನ್ನೂ ಬಿಡದೇ ಕಾಡಿಸುವ ಭೇತಾಳನಾಗಿ ಕಣ್ಣಾಮುಚಾಲೆ ಆಡಿಸುತ್ತಿತ್ತು. ತನ್ನ ರಾಜ್ಯವ ಬಿಟ್ಟು ಅರಣ್ಯ, ಪರ್ವತ ಸರೋವರಗಳಲ್ಲಿ ಅಲೆದಾಡುವ ಅತೃಪ್ತ ಬ್ಲಾಗ್ ಭೇತಾಳಕ್ಕೆ ಒಂದು ನೆಲೆ ಕಾಣಿಸಬೇಕೆಂಬುದೇ “ಬದರಿ ವಿಕ್ರಮ”ನ ಮಹದಾಸೆಯಾಗಿತ್ತು.
ಹೀಗೇ ಹುಡುಕಾಡುವಾಗ ಇತ್ತೀಚೆಗೆ ಬಹಳ ಹೆಸರು ಮಾಡಿದ ಫೇಸ್ಬುಕಾರಣ್ಯದ ನವೀನ “ಪಚಿಂ ಉದ್ಯಾನ”ದ ಪದಗಳ ಹುಡುಕಾಟದಲ್ಲಿ ಬ್ಲಾಗ್ ಭೇತಾಳ ನಿರತನಾಗಿದ್ದಾನೆಂದು “ಬದರಿ ವಿಕ್ರಮ”ನಿಗೆ ತಿಳಿದುಬಂತು. ತನ್ನ ಸ್ಟೇಟಸ್ ಎಂಬ ಕುದುರೆ ಏರಿ ಫೇಸ್ಬುಕ್ಕಾರಣ್ಯದ “ಪಚಿಂ ಉದ್ಯಾನ”ದ ಬಳಿ Park ಮಾಡಿ. ಉದ್ಯಾನದ ಒಳಹೋಗಿ ಬ್ಲಾಗ್ ಭೇತಾಳವನ್ನು ಹುಡುಕಲಾರಂಭಿಸಿದ. ಸಂಸ್ಕೃತದ ಪುಷ್ಪವ ಅರಳಿಸುತ್ತಿದ್ದ ಕನ್ನಡದ ನೀರನ್ನು ನೋಡುತ್ತಾ ಎತ್ತರದ ಚರ್ಚೆಯ ಪೊದೆಯನ್ನೊಮ್ಮೆ ನೋಡಿದಾಗ ಬ್ಲಾಗ್ ಭೇತಾಳ ಕಂಡು ಬಂತು. ಪೊದೆಯ ಬಿಳಲುಗಳನ್ನು ತನ್ನ 3-K ಖಡ್ಗದಿಂದ ಬಿಡಿಸಿ ಬ್ಲಾಗ್ ಭೇತಾಳದ ಕೊರಳಿಗಿದ್ದ ಹಗ್ಗವನು ಕತ್ತರಿಸಿ “ಬ್ಲಾಗ್ ಸ್ಪಾಟ್” ವನದಲ್ಲಿ ಬ್ಲಾಗ್ ಭೇತಾಳಕ್ಕೆ ಜೀವಕೊಡಲೆಂದು ಹೆಗಲಿಗೇರಿಸಿ ನಡೆಯತೊಡಗಿದ.
ಕನ್ನಡ, ಸಂಸ್ಕೃತ, ಅಲ್ಪಪ್ರಾಣ, ಮಹಾಪ್ರಾಣ ಎಂದು ಕಳೆದು ಹೋಗಿದ್ದ ಭೇತಾಳ..ಪರಿಚಿತ “ಬದರಿ ವಿಕ್ರಮ”ನ ಹೆಗಲನ್ನು ನೇವರಿಸಿ... “ರಾಜನ್, ಏಕೆ ನನ್ನ ಹಿಂದೆ ಬಿದ್ದಿರುವೆ, ಸಾಮಾಜಿಕ ಅರಣ್ಯ, ಪರ್ವತ ಸರೋವರಗಳಲ್ಲಿ ವಿಹರಿಸಲು ಬಿಡದೇ ನನ್ನನ್ನು ಜೀವಂತಗೊಳಿಸುವ ನಿನ್ನ ವ್ಯರ್ಥ ಪ್ರಯತ್ನ ನೋಡಿ ನನಗೊಂದು ಸಂದೇಹ ಮೂಡಿದೆ ಅದಕ್ಕೆ ಪರಿಹಾರ ನಿನಗೆ ಗೊತ್ತಿದ್ದೂ ಹೇಳದಿದ್ದರೆ ಈಮೈಲ್ ಗಳ ಹಾವಳಿಗೆ ಸಿಕ್ಕ ಅಂಚೆ ಇಲಾಖೆಯಂತೆ ಹೇಳ ಹೆಸರಿಲ್ಲದಂತಾಗುವೆ – ಕೇಳು, ಎಂದಿತು.
ಅಂತರಜಾಲವೆಂಬ ದೇಶದಲ್ಲಿ ಮಿಂಚಂಚೆಗಳೆಂಬ ರಾಜ್ಯಗಳಿದ್ದ ಸಮಯವದು. ಹಾಟ್ಮೈಲ್ ಪ್ರದೇಶ, ಯಾಹೂರ್ ಮತ್ತು ಹೊಸದಾಗಿ ಹುಟ್ಟಿದ್ದ ಜಿ-ನಾಡು ಗಳು ಸಮೃದ್ಧವಾಗಿದ್ದ ಸಮಯದಲ್ಲಿ ಬಿರುಗಾಳಿಯಂತೆ “ಬಜ್” ಎಂಬ ಸುಂಟರಗಾಳಿ ಬಂತು. ಅಲ್ಲಿಯವರೆಗೂ ಸಮೃದ್ಧವಾಗಿದ್ದ ಬ್ಲಾಗ್ ಜಿಲ್ಲೆಗಳ ಬ್ಲಾಗಾಧೀಶರು ಜೀವ ಕಳೆದುಕೊಂಡು ಭೇತಾಳಗಳಾಗಲು ಕಾರಣವನು..??
ಭೇತಾಳನ ಮಾತಿಗೆ ಮೌನ ಮರಿದು “ಬದರಿ ವಿಕ್ರಮ” ಉತ್ತರಿಸಿದ. ಎಲವೋ ತನ್ನ ಕೆಲವನ್ನೂ ಮರೆತು ಸದಾಕಾಲ ಫೇಸ್ಬುಕ್ಕಾರಣ್ಯದಲ್ಲಿ ವ್ಯರ್ಥ ಅಲೆಯವ ಬುಕ್ಕಿಯಂತೆ ತಲೆಯಿಲ್ಲದೇ commentಇಸಿದೆ. ನಾನು ಇದನ್ನು Like ಮಾಡಲಿಲ್ಲ. Commentಇಸಿದವರನ್ನೆಲ್ಲಾ ಸಂಶಯದಿಂದ ನೋಡುವ ಮನೋಭಾವ ನನ್ನದಲ್ಲ. ಕೇಳು. ಹುಡುಗಿಯರ ಸ್ಟೇಟಸ್ಸುಗಳು, ತಾನು ಹಾಕುವ ತಲೆಬುಡವಿಲ್ಲದ ಪೋಸ್ಟ್ ಗಳಿಗೆ ನೂರಾರು ಲೈಕುಗಳನ್ನು ನೋಡುವ ವಲಸೆ ಬಂದ ಬ್ಲಾಗಾಧೀಶರು ತಮ್ಮನ್ನು ತಿರುಗಿಯೂ ನೋಡುವವರು ಇಲ್ಲದಿರುವ ಬ್ಲಾಗ್ ಜಿಲ್ಲೆಗಳಿಂದ ಬೇ-ಸತ್ತು ಭೇತಾಳವಾಗಿದ್ದು ಅತಿಶಯವೇನಲ್ಲ ಅಲ್ಲವೇ..? “  ಎಂದ.

“ನಿಯಮ ಮೀರಿ ಮೌನ ಮುರಿದೆ, ಇದೋ ವಾಟ್ಸಪಾಪರ್ವತದ ಮೇಲಿಂದ ಜೋಕ್ ಧಾರೆಯೊಂದು ಹೊರಟಿದೆ ಜೊತೆಗೆ ವೀಡಿಯೋ ಸಹಾ ಇದೆ...ಅದನ್ನು ನೋಡಿ ಬರುವೆ...Best of Luck” ಎನ್ನುತ್ತಾ “ಬದರಿ ವಿಕ್ರಮ”ನ ಹೆಗಲಿಂದ ಮಾಯವಾದ ಬ್ಲಾಗ್ ಭೇತಾಳ ವಾಟ್ಸಪಾಪರ್ವತದತ್ತ ಹಾರಿತು.