Thursday, April 2, 2015

ಬೆದರದ ಬದರಿ ವಿಕ್ರಮಗಾಥ


ಬೆದರದ ಬದರಿ ವಿಕ್ರಮಗಾಥ
ಇಂತಿರಲಾಗಿ ಕರುನಾಡ ಕನ್ನಡಿಯಲಿ ನೋಡುತ ಶತವಿಕ್ರಮ ವಂಶಜ “ಬದರಿ ವಿಕ್ರಮ” ಬೆದರದೆ ಹೆದರದೆ ನಕ್ಷೆಯಲಿ ಗುರುತು ಹಾಕಿದ. ಎಲ್ಲಿಗೆ ಹೋಗುತ್ತಿದೆ ಈ ಬ್ಲಾಗ್ ಭೇತಾಳ ನನ್ನ ಕೈವಶವಾಗದೇ? ಎನ್ನುವ ಚಿಂತೆಯ ಗೆರೆಗಳು ಹಣೆಯ ಮೇಲೆ ಮೂಡುವ ಮುನ್ನವೇ 3-K ಖಡ್ಗವನ್ನು ಮೊನಚುಮಾಡಿಕೊಂಡು, ತನ್ನ ಜೊತೆಗೆ ನಿಯಮಿತವಾಗಿ ವಾರ್ತಾಲಾಪ ಮಾಡುವ ಅಂತಃ ಜೀವಿತ ಬ್ಲಾಗಾತ್ಮಗಳ ಪ್ರೋತ್ಸಾಹದಿಂದ ಉತ್ತೇಜಿತನಾಗಿ ಮಳೆ ಗೊಬ್ಬರಗಳಿಲ್ಲದಿದ್ದರೂ ಹುಲುಸಾಗಿ ಬೆಳೆದು ಘನ-ತೆ ವೆತ್ತ ಫೇಸ್ಬುಕಾರಣ್ಯ, ವಾಟ್ಸಪಾಪರ್ವತ ಮತ್ತು ಟ್ವಿಟ್ಟರ್ಸರೋವರಗಳಲ್ಲಿ ಹುಡುಕಾಡತೊಡಗಿದ. ಒಂದು ಕಾಲದಲ್ಲಿ ನೂರಾರು ಮಕ್ಕಳುಮರಿಗಳೊಂದಿಗೆ ಸುಭಿಕ್ಷವಾಗಿದ್ದ ಬ್ಲಾಗ್ರಾಜನ ರಾಜ್ಯ ಋತುಗಳು ಕಳೆದರೂ "ಋತು"ಗಳ ಕಾಣದೇ ಪದೇ ಪದೇ ಕಾಣುವ ಖಾರಿದೇಶದ ಮರಳುಗಾಡಾಗಿತ್ತು. ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕುತ್ತಾ ತನ್ನ ಗತವೈಭವ ಹೀಗೂ ಇತ್ತು ಎನ್ನುವಂತೆ ಕಾಣುವ ಬ್ಲಾಗ್ರಾಜ ಈಗ ಕೆಲವೊಮ್ಮೆ ಫೇಸ್ಬುಕಾರಣ್ಯದಲ್ಲೋ ಮಗದೊಮ್ಮೆ ವಾಟ್ಸಪಾಪರ್ವತದಲ್ಲೋ ಕಾಣಿಸುತ್ತಾ “ಬದರಿ ವಿಕ್ರಮ”ನನ್ನು ಬೆದರಿಸುವ ಯಾವುದೇ ಅವಕಾಶವನ್ನೂ ಬಿಡದೇ ಕಾಡಿಸುವ ಭೇತಾಳನಾಗಿ ಕಣ್ಣಾಮುಚಾಲೆ ಆಡಿಸುತ್ತಿತ್ತು. ತನ್ನ ರಾಜ್ಯವ ಬಿಟ್ಟು ಅರಣ್ಯ, ಪರ್ವತ ಸರೋವರಗಳಲ್ಲಿ ಅಲೆದಾಡುವ ಅತೃಪ್ತ ಬ್ಲಾಗ್ ಭೇತಾಳಕ್ಕೆ ಒಂದು ನೆಲೆ ಕಾಣಿಸಬೇಕೆಂಬುದೇ “ಬದರಿ ವಿಕ್ರಮ”ನ ಮಹದಾಸೆಯಾಗಿತ್ತು.
ಹೀಗೇ ಹುಡುಕಾಡುವಾಗ ಇತ್ತೀಚೆಗೆ ಬಹಳ ಹೆಸರು ಮಾಡಿದ ಫೇಸ್ಬುಕಾರಣ್ಯದ ನವೀನ “ಪಚಿಂ ಉದ್ಯಾನ”ದ ಪದಗಳ ಹುಡುಕಾಟದಲ್ಲಿ ಬ್ಲಾಗ್ ಭೇತಾಳ ನಿರತನಾಗಿದ್ದಾನೆಂದು “ಬದರಿ ವಿಕ್ರಮ”ನಿಗೆ ತಿಳಿದುಬಂತು. ತನ್ನ ಸ್ಟೇಟಸ್ ಎಂಬ ಕುದುರೆ ಏರಿ ಫೇಸ್ಬುಕ್ಕಾರಣ್ಯದ “ಪಚಿಂ ಉದ್ಯಾನ”ದ ಬಳಿ Park ಮಾಡಿ. ಉದ್ಯಾನದ ಒಳಹೋಗಿ ಬ್ಲಾಗ್ ಭೇತಾಳವನ್ನು ಹುಡುಕಲಾರಂಭಿಸಿದ. ಸಂಸ್ಕೃತದ ಪುಷ್ಪವ ಅರಳಿಸುತ್ತಿದ್ದ ಕನ್ನಡದ ನೀರನ್ನು ನೋಡುತ್ತಾ ಎತ್ತರದ ಚರ್ಚೆಯ ಪೊದೆಯನ್ನೊಮ್ಮೆ ನೋಡಿದಾಗ ಬ್ಲಾಗ್ ಭೇತಾಳ ಕಂಡು ಬಂತು. ಪೊದೆಯ ಬಿಳಲುಗಳನ್ನು ತನ್ನ 3-K ಖಡ್ಗದಿಂದ ಬಿಡಿಸಿ ಬ್ಲಾಗ್ ಭೇತಾಳದ ಕೊರಳಿಗಿದ್ದ ಹಗ್ಗವನು ಕತ್ತರಿಸಿ “ಬ್ಲಾಗ್ ಸ್ಪಾಟ್” ವನದಲ್ಲಿ ಬ್ಲಾಗ್ ಭೇತಾಳಕ್ಕೆ ಜೀವಕೊಡಲೆಂದು ಹೆಗಲಿಗೇರಿಸಿ ನಡೆಯತೊಡಗಿದ.
ಕನ್ನಡ, ಸಂಸ್ಕೃತ, ಅಲ್ಪಪ್ರಾಣ, ಮಹಾಪ್ರಾಣ ಎಂದು ಕಳೆದು ಹೋಗಿದ್ದ ಭೇತಾಳ..ಪರಿಚಿತ “ಬದರಿ ವಿಕ್ರಮ”ನ ಹೆಗಲನ್ನು ನೇವರಿಸಿ... “ರಾಜನ್, ಏಕೆ ನನ್ನ ಹಿಂದೆ ಬಿದ್ದಿರುವೆ, ಸಾಮಾಜಿಕ ಅರಣ್ಯ, ಪರ್ವತ ಸರೋವರಗಳಲ್ಲಿ ವಿಹರಿಸಲು ಬಿಡದೇ ನನ್ನನ್ನು ಜೀವಂತಗೊಳಿಸುವ ನಿನ್ನ ವ್ಯರ್ಥ ಪ್ರಯತ್ನ ನೋಡಿ ನನಗೊಂದು ಸಂದೇಹ ಮೂಡಿದೆ ಅದಕ್ಕೆ ಪರಿಹಾರ ನಿನಗೆ ಗೊತ್ತಿದ್ದೂ ಹೇಳದಿದ್ದರೆ ಈಮೈಲ್ ಗಳ ಹಾವಳಿಗೆ ಸಿಕ್ಕ ಅಂಚೆ ಇಲಾಖೆಯಂತೆ ಹೇಳ ಹೆಸರಿಲ್ಲದಂತಾಗುವೆ – ಕೇಳು, ಎಂದಿತು.
ಅಂತರಜಾಲವೆಂಬ ದೇಶದಲ್ಲಿ ಮಿಂಚಂಚೆಗಳೆಂಬ ರಾಜ್ಯಗಳಿದ್ದ ಸಮಯವದು. ಹಾಟ್ಮೈಲ್ ಪ್ರದೇಶ, ಯಾಹೂರ್ ಮತ್ತು ಹೊಸದಾಗಿ ಹುಟ್ಟಿದ್ದ ಜಿ-ನಾಡು ಗಳು ಸಮೃದ್ಧವಾಗಿದ್ದ ಸಮಯದಲ್ಲಿ ಬಿರುಗಾಳಿಯಂತೆ “ಬಜ್” ಎಂಬ ಸುಂಟರಗಾಳಿ ಬಂತು. ಅಲ್ಲಿಯವರೆಗೂ ಸಮೃದ್ಧವಾಗಿದ್ದ ಬ್ಲಾಗ್ ಜಿಲ್ಲೆಗಳ ಬ್ಲಾಗಾಧೀಶರು ಜೀವ ಕಳೆದುಕೊಂಡು ಭೇತಾಳಗಳಾಗಲು ಕಾರಣವನು..??
ಭೇತಾಳನ ಮಾತಿಗೆ ಮೌನ ಮರಿದು “ಬದರಿ ವಿಕ್ರಮ” ಉತ್ತರಿಸಿದ. ಎಲವೋ ತನ್ನ ಕೆಲವನ್ನೂ ಮರೆತು ಸದಾಕಾಲ ಫೇಸ್ಬುಕ್ಕಾರಣ್ಯದಲ್ಲಿ ವ್ಯರ್ಥ ಅಲೆಯವ ಬುಕ್ಕಿಯಂತೆ ತಲೆಯಿಲ್ಲದೇ commentಇಸಿದೆ. ನಾನು ಇದನ್ನು Like ಮಾಡಲಿಲ್ಲ. Commentಇಸಿದವರನ್ನೆಲ್ಲಾ ಸಂಶಯದಿಂದ ನೋಡುವ ಮನೋಭಾವ ನನ್ನದಲ್ಲ. ಕೇಳು. ಹುಡುಗಿಯರ ಸ್ಟೇಟಸ್ಸುಗಳು, ತಾನು ಹಾಕುವ ತಲೆಬುಡವಿಲ್ಲದ ಪೋಸ್ಟ್ ಗಳಿಗೆ ನೂರಾರು ಲೈಕುಗಳನ್ನು ನೋಡುವ ವಲಸೆ ಬಂದ ಬ್ಲಾಗಾಧೀಶರು ತಮ್ಮನ್ನು ತಿರುಗಿಯೂ ನೋಡುವವರು ಇಲ್ಲದಿರುವ ಬ್ಲಾಗ್ ಜಿಲ್ಲೆಗಳಿಂದ ಬೇ-ಸತ್ತು ಭೇತಾಳವಾಗಿದ್ದು ಅತಿಶಯವೇನಲ್ಲ ಅಲ್ಲವೇ..? “  ಎಂದ.

“ನಿಯಮ ಮೀರಿ ಮೌನ ಮುರಿದೆ, ಇದೋ ವಾಟ್ಸಪಾಪರ್ವತದ ಮೇಲಿಂದ ಜೋಕ್ ಧಾರೆಯೊಂದು ಹೊರಟಿದೆ ಜೊತೆಗೆ ವೀಡಿಯೋ ಸಹಾ ಇದೆ...ಅದನ್ನು ನೋಡಿ ಬರುವೆ...Best of Luck” ಎನ್ನುತ್ತಾ “ಬದರಿ ವಿಕ್ರಮ”ನ ಹೆಗಲಿಂದ ಮಾಯವಾದ ಬ್ಲಾಗ್ ಭೇತಾಳ ವಾಟ್ಸಪಾಪರ್ವತದತ್ತ ಹಾರಿತು. 

14 comments:

  1. ಆಜಾದೂ..
    ಸ್ಸೂಪರ್.. ಸ್ಸೂಪರ್ ಸ್ಸೂಪರ್.. !

    ನಮ್ಮ ಬದರಿ ನಿಜಕ್ಕೂ ಛಲ ಬಿಡದ ವಿಕ್ರಮ... !

    ತುಂಬಾ ಇಷ್ಟವಾಯ್ತು...

    ReplyDelete
  2. ಆದರೂ ಮತ್ತೆ ಬಿಡದೆ ಬೇತಾಳವನ್ನು ಬೆನ್ನು ಹತ್ತಿಯೇ ತೀರುತ್ತೇನೆ, ಎಂದು ಸಿಗರೇಟಿಗೆ ಕಡ್ಡಿಯನ್ನು ಗೀರಿ, ಘೋರ ಧೂಮ ಪ್ರತಿಜ್ಞೆಯನು ಮಾಡಿದ ಬ್ಲಾಗ್ ಹುಡುಕಿಗ.

    ಮರು ದಿನ ಬೆಳಗು, ಅವನಿಗೆ ನಿಜವಾದ ಮಾರ್ನವಮಿ, ಕೈ ತಪ್ಪಿ ಹೋದ ಜಲನಯನ ಬ್ಲಾಗಿಸಿದ, ತನ್ನ ಹೆರಿಗೆಯಾಗದ ಡೊಳ್ಳು ಹೊಟ್ಟೆಯನ್ನು ಬದರಿ ಖುಷಿಯಾಗಿ ಸವರಿಕೊಂಡ!

    ಮುಂದಿನ ಬೇಟೆ ನಿಮ್ಮೊಳಗೊಬ್ಬ, ಬಿಳಿ ಮುಗಿಲು ಎಂದು ಘೋಷಿಸಿದ.

    (ಒಂದು ಪೆಂಟಾಸ್ಟಿಕ್ಕು ಪೋಸ್ಟಿನ ಸಮೇತ ಬ್ಲಾಗಿಗೆ ಹಿಂದಿರುಗಿದ ಅಜಾದಣ್ಣನಿಗೆ ಅಡ್ಡ ಬೀಳಲಾಗಿದೆ...)

    ReplyDelete
  3. ಆಜಾದ್ ಸರ್; ಸೂಪರ್ ಪೋಸ್ಟ್. ನಮ್ಮ ಬದರಿ ಛಲ ಬಿಡದ ತ್ರ್ವಿಕ್ರಮನೆ ಸೈ. ತುಂಬಾ ಇಷ್ಟವಾಯಿತು.

    ReplyDelete
    Replies
    1. Dr DTKನಿಮ್ಮ ಮಾತು ನಿಜ ಬದರಿಯ ಬ್ಲಾಗ್ ಕಾಳಜಿಯೇ ನನ್ನ ಈ ಲೇಖನಕ್ಕೆ ಸ್ಫೂರ್ತಿ.

      Delete
  4. ನಿಜಾ ನಿಜಾ... ಬದರಿ ಸಾರ್‍ ಶ್ರಮಕ್ಕೆ ಹ್ಯಾಟ್ಸ್‌ಫ್...
    ಮರಳಿ ಶಾಲೆಗೆ ಬಾ ಅನ್ನವ ಹಾಗೆ ಸರಕಾರದ ಸ್ಲೋಗನ್ ಥರಾ, ಬದರಿ ಸಾರ್‌ದು 'ಮರಳಿ ಬ್ಲಾಗಿಗೆ ಬಾ" ಚಳುವಳಿ :)

    ಇದನ್ನು ಬೇತಾಳನ ಕಥೆಗೆ ಸಮೀಕರಿಸಿ ಬರೆದದ್ದು, ನನಗೆ ಬದರಿ ಸಾರ್‍ ಕೆಲಸವನ್ನು ಗುರುತಿಸುವ ಕೆಲಸ ಮಾಡಿದ ಸಾರ್ಥಕ ಭಾವ ತಂದುಕೊಟ್ಟಿತು.

    ಇಬ್ಬರಿಗೂ ಧನ್ಯವಾದಗಳು.
    ಬ್ಲಾಗಮ್ಮಾ ಕೀ ಜೈ!!

    ReplyDelete
    Replies
    1. ಓಹೋ ಬ್ಲಾಗಮ್ಮನವರಿಗೆ ನನ್ನ ನಮನ. ಬದರಿಗೆ ಸದರಿ ಸಾಟಿ ಯಾರೂ ಇಲ್ಲ.

      Delete
  5. ಜಲನಯನ,
    ಬದರಿ ತ್ರಿವಿಕ್ರಮ ಸಾಹಸದಲ್ಲಿ ನನ್ನ ವಿಶ್ವಾಸವಿದೆ. ಬ್ಲಾಗ್ ಬೇತಾಳಗಳನ್ನು ಫೇಸ್‍ಬುಕ್ ಅರಣ್ಯದಿಂದ ಎಳೆದು ತಂದು ಅವರವರ ಜಿಲ್ಲೆಗಳಲ್ಲಿ ಮರುಸ್ಥಾಪನೆಯಾಗುವ ದಿನವನ್ನು ಎದುರು ನೋಡುತ್ತಿದ್ದೇನೆ.

    ReplyDelete
    Replies
    1. ುನಾಥಣ್ನ ನಿಜ ಬದರಿಯ ಪ್ರಯತ್ನಕ್ಕೆ ನಾವೂ ಕೈ ಜೋಡಿಸಬೇಕು...

      Delete
  6. ಹಃ ಹಃ ಬ್ಲಾಗ್ ಬೇತಾಳನೆ ಯಂತಹ come bak ಉ ...ಸೂಪರ್ ಬರಹ ಅಜ್ಯದ್ ಭಾಯಿ ನಕ್ಕೂ ನಕ್ಕೂ ಸಾಕಾಯಿತು .
    ಆರತಿ ಘಟಿಕಾರ್

    ReplyDelete
    Replies
    1. ಆರತಿ ಬದರಿ ಪ್ರಯತ್ನಕ್ಕೆ ನಾನೂ ಮಾರು ಹೋಗಿದ್ದೀನಿ... ಹಾಗೇ ಬ್ಲಾಗಿಂದ ಮಾರು ದೂರ ಹೋಗಿರುವವರನ್ನು ಎಳೆತರುವಲ್ಲಿ ಬಹಳ ಗುರುತರ ಪ್ರಯತ್ನ ಇವರದ್ದು.

      Delete
  7. ಅಜಾದ್ ಸರ್,

    ಸೂಪರ್ ಆಗಿದೆ ವಿಕ್ರಮಗಾಥ !

    ReplyDelete
    Replies
    1. ಅಪ್ಪ-ಅಮ್ಮ ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ....ಬದರಿ ಕಿ ಜೈ...

      Delete
  8. ನಾನುಂಟೋ ಮೂರು ಲೋಕವುಂಟೋ ಎನ್ನುವ ಈ ಲೋಕದಲ್ಲಿ.. ತಾನಷ್ಟೇ ಬರೆಯದೆ.. ತನ್ನ ಜೊತೆಯಲ್ಲಿರುವರನ್ನು ಬರೆಯಿರಿ ಎನ್ನುತ್ತಾ ಉತ್ಸಾಹ ತುಂಬುವ ಬದರಿ ಸರ್ ಬಗ್ಗೆ ಉತ್ತಮ ಲೇಖನ.. ನಿಜಕ್ಕೂ ಅವರು ಛಲ ಬಿಡದ ತ್ರಿವಿಕ್ರಮ..

    ಸೂಪರ್ ಆಜಾದ್ ಸರ್

    ReplyDelete
    Replies
    1. ನಿಜ ಶ್ರೀಮನ್ ನನಗೆ ಕೈ ಹಿಡಿದು ಬರೆಯಿಸುವ ಇವರ ಈ ಆತ್ಮಿಯ ಗುಣ ಬಹಳ ಇಷ್ಟವಾಯ್ತು... ಧನ್ಯವಾದ ನಿಮಗೂ

      Delete