Friday, August 10, 2018

ಬ್ಲಾಗುವನದ ಖಳರು- ಫೇಸ್ಬುಕ್ಕಣ್ಣ ಮತ್ತು ವಾಟ್ಸಪ್ಪನ್



ಶತವಿಕ್ರಮನ ವಿಕ್ರಮಗಳು ಕ್ರಮಿಸುವ ದೂರಗಳು ಈಗ ಗೋಜಲು ಗೋಜಲು! ಆದರೂ ಛಲವೆಂದರೆ ವಿಕ್ರಮನದೇ, ಎರಡು ಮಾತಿಲ್ಲ. ಎಲ್ಲರಂತೆ ಫೇಸ್ಬುಕ್ಕಣ್ಣ, ವಾಟ್ಸಪ್ಪನ್ ಗಳು ನೀಡುವ ಗೋಳು ಛಲದಂಕಮಲ್ಲನನ್ನೂ ಬಿಡಲಿಲ್ಲ... ಎಷ್ಟೋ ಸಮಯದ ನಂತರ ಅವನ ಛಲ ಮತ್ತೆ ಗರಿಗೆದರಿತು. ಹೊರಟೇಬಿಟ್ಟ...ಬ್ಲಾಗ್ ವನದ ಖೂಳರನ್ನು ಹತ್ತಿಕ್ಕಲು.
ಮತ್ತದೇ ಸಮಸ್ಯೆ, ಮೊದಲಿಗೆ ಎಲ್ಲಿಯೋ ನೇತು ಬಿದ್ದಿರುವ ಭೇತಾಳನ ಹುಡುಕಿ ಅವನಿಗೊಂದು ಗತಿಕಾಣಿಸಿದರೇನೇ ಈ ಫೇಸ್ಬುಕ್ಕಣ್ಣ, ವಾಟ್ಸಪ್ಪನ್ ಗಳನ್ನು ಹುಡುಕಲು ಸಾಧ್ಯ. ಅದೇನೋ ಹೇಳ್ತಾರಲ್ಲ.. ’ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ’ ಅಂತ. ಹಾಗೆ.
ಒಮ್ಮೆ ಫಲಪುಷ್ಪ ಹೆಮ್ಮರಗಳಿಂದ ನಳನಳಿಸುತ್ತಿದ್ದ ಬ್ಲಾಗ್ ವನಕ್ಕೆ ಹೊಕ್ಕ ಶತವಿಕ್ರಮನಿಗೆ ಹೆಜ್ಜೆ ಹೆಜ್ಜೆಗೆ ಲೈಕ್ ಮುಳ್ಳುಗಳು, ವಾಟ್ಸಪ್ಪನ್ ಸಮೂಹ ಪೊದೆಗಳು, ಕಾಮೆಂಟೆಂಬ ಕುರುಚುಲುಗಳು...ಅಪರೂಪಕ್ಕೆ ದೂರ ದೂರಕ್ಕೆ ಕಾಣುವ ಸುಗಂಧಿತ "ಪದಾರ್ಥ ಚಿಂತಾಮಣಿ, ವಾಗರ್ಥ, ಕಾಜಾಣ, 3-K, ಕೃಷಿಲೋಕ, ಸ್ನೇಹಲೋಕ"ಗಳು...ಗಬ್ಬೆಬ್ಬಿಸುವ ಆ ಕುಲಗೆಡುತ್ತಿದ್ದ ಬ್ಲಾಗ್ ವನದ ಗತವೈಭವಕ್ಕೆ ಸಾಕ್ಷಿಯಾಗಿ ನಿಂತದ್ದು ಸ್ವಲ್ಪಮಟ್ಟಿಗೆ ಅವನ ಚಿಂತೆಗ ಮರಳುಗಾಡಿನ ಓಯಸಿಸ್ ಆಗಿದ್ದು ನಿಜ. ಆದರೂ ಫೂರ್ತಿ ಕುಲಗೆಟ್ಟಿಲ್ಲ ಎನ್ನಲು ಬ್ಲಾಗ್ ವನದ ಕೆಲ ಪರಿಚಿತ ಮುಖದ ಆಲದ ಮರಗಳು ಇನ್ನೂ ತಮ್ಮ ಛಾಪನ್ನುಇಟ್ಟುಕೊಂಡಿರುವುದನ್ನು ಕಂಡು ಶತವಿಕ್ರಮನ ಛಲಕ್ಕೆ ಬಲ ಬಂತು. ಹೀಗೇ ಹುಡುಕುತ್ತಾ ಹೊರಟವನಿಗೆ ..ಒಂದು ಫೇಸ್ಬುಕ್ಕಣ್ಣನ  ಕಾಮೆಂಟ್ ಗಳ ಪೊದೆಯಲ್ಲಿ... ಯಾರದೋ ಸಂಬಂಧಪಡದವರ ರಾಜಕೀಯ, ಧರ್ಮಗಳ ಮನೋಭಾವಗಳನ್ನು ಕೆರಳಿಸುವ ಪೋಸ್ಟ್ ಗೆ ಕಾಮೆಂಟುಗಳೆಂಬ ಮುಳ್ಳುಗಳಲ್ಲಿ ತನ್ನನ್ನು ಹುದುಗಿಸಿಕೊಂಡು...ಅನಾಮಧೇಯ "ಫೇಕ್ ಐಡಿ" ಯೊಂದಿಗೆ ಇದ್ದ ಭೇತಾಳ ಹದ್ದಿನ ಕಣ್ಣಿನ ಶತವಿಕ್ರಮನ ಕಣ್ಣಿಗೆ ಬಿದ್ದ...
ಸರಿ ಪೊದೆಗಳನ್ನು ಕಡಿದು, ಭೇತಾಳನನ್ನು ಬಿಡಿಸಿ ಹೆಗಲಿಗೇರಿಸಿ ನಡೆಯತೊಡಗಿದ.
ಮೊದಲೇ ಫೇಸ್ಬುಕ್ಕಣ್ಣ, ವಾಟ್ಸಪ್ಪನ್ ಗಳ ತಾಲೀಮಿನಲ್ಲಿ ಪಳಗಿದ್ದ ಭೇತಾಳನಿಗೆ ಹೇಳಬೇಕೇ..? ಪಲುಕತೊಡಗಿದ.
"ಮೂರ್ಖ ಶತವಿಕ್ರಮನೇ..  ಅಧರ್ಮಗಳ, ಅನ್ಯಾಯಗಳ ಅಕ್ರಮಗಳ ಸುತ್ತ ಬೆಳೆಯುವ ವನದಲ್ಲಿ ಸೃಜನಸಿರಿಯ ಬ್ಲಾಗ್ ವನವ ಹುಡುಕಲು ಬಂದಿರುವೆಯಲ್ಲಾ ನಿನ್ನ ಬುದ್ಧಿಗೆ ಏನು ಹೇಳಲಿ...ಸರಿಬಿಡು, ನಿನ್ನ ಛಲ ನೀನು ಬಿಡಲೊಲ್ಲೆ, ನನ್ನ ಪರಾಕು ನಾನು ಬಿಡೆ...ಎಂದಿನಂತೆ ನಾನು ಕಥೆ ಗಿತೆ ಹೇಳುವುದಿಲ್ಲ... ಒಂದು ಪ್ರಶ್ನೆ ಕೇಳುವೆ...ಅದಕ್ಕೆ ನಿನ್ನ ಸಮಾಧಾನ ಹೇಳು" ಎಂದಿತು.
ಈಗ ತಾನೇ ನನ್ನ ಫ್ರೆಂಡಿನ ಬೇರೊಬ್ಬ ಫ್ರೆಂಡ್ ನ  ಪೋಸ್ಟ್ ಗೆ ಯಾರೋ ಅವನ ಫ್ರೆಂಡ್ ಅಲ್ಲದವ ಕಾಮೆಂಟು ಹಾಕಿ ನನ್ನ ಹಾಗೆ ಕಿಚ್ಚು ಹಚ್ಚಿದ್ದಾನೆ, ಅದು ಯಾವ ಪೋಸ್ಟ್...?
ಶತವಿಕ್ರಮನೆಂದ, ಎಲವೋ ತಲೆಯಲ್ಲಿ ಬುರುಡೆಮಾತ್ರ ನಿನಗೆ ಬುದ್ಧಿ ಎಲ್ಲಿಂದ ಬರಬೇಕು..? ನಿಮ್ಮಂಥ ಖೂಳರನ್ನು ಹತ್ತಿಕ್ಕಲು ಬ್ಲಾಗ್ ವನವನ್ನು ಸುತ್ತಿರುವ ನನಗೆ ನಿನ್ನ ಪ್ರಶ್ನೆ ನೀರುಕುಡಿದಂತೆ.
ಆ ಪ್ರಶ್ನೆ ಖಂಡಿತಾ ಯಾವುದೋ ರಾಜಕೀಯ ಹಿತಾಸಕ್ತಿಯ ಇತರ ಧಾರ್ಮಿಕ ನೆಲೆಯ ನಂಬಿಕೆಗೆ ಸವಾಲಾಗುವ ಅಂಚೆಯಾಗಿರಬೇಕು... ನೀನು ಬೇರೆ..ಸೃಜನಾತಕ ಸಮಾಜಪರ ಅಪರೂಪದ ಮರಗಳಲ್ಲಿ ಕಂಡುಬರಲು ಹೇಗೆ ಸಾಧ್ಯ,,,??  ಎಂದ
ಹಿಹಿಹಿ...ನೋಡಿದೆಯಾ ಮೌನ ಮುರಿದೆ..ನಿನ್ನ ಉತ್ತರ ಸರಿಯಾದರೂ .. ನನ್ನದೇ ಸರಿ ಎನ್ನುವ ಫೇಸ್ಬುಕ್ ನ ಕೆಲ ಅಕೌಂಟುಗಳಂತೆ ನಾನೂ ಇದನ್ನು ಒಪ್ಪದೇ ಇದೋ ಹೊರಟೆ... ಅಲ್ಲೊಂದು ಅತ್ಯಾಚಾರದ ಪೋಸ್ಟ್ ಕಾಣ್ತಿದೆ....ಹಚ್ಚಿಡಲು ಒಳ್ಳೆಯ ಅವಕಾಶ ಎನ್ನುತ್ತಾ....ಮತ್ತೆ ಯಾವುದೋ ..ಕಾಮೆಂಟುಗಳ ಪೊದೆಯಲ್ಲಿ ಅಡಗಿ..ಕಾಮೆಂಟನ್ನು ಗೀಚತೊಡಗಿತು.
ಛೇ.. ಇಂತಹ ಫೇಸ್ಬುಕ್ಕಣ್ಣ...ವಾಟ್ಸಪ್ಪನ್ ಖೂಳರನ್ನು ಹೇಗಪ್ಪಾ ತಹಬದಿಗೆ ತರುವುದು..? ಇವುಗಳ ಮೇಲೆ ಹಿಡಿತ ಹೆಚ್ಚಿಸಲು ಸರ್ಕಾರ ಏನೋ ಕಾನೂನನ್ನು ಮಾಡುತ್ತಿದೆ ಎಂಬ ಸುದ್ದಿ ಕೇಳಿದೆ...ಅದಾದರೂ ಬಂದೀತೆಂಬ ನಂಬಿಕೆ ನನಗಿಲ್ಲ...ಆದರೂ ...ಕಛೇರಿ, ಶಾಲೆ ಮುಂತಾದವುಗಳ ಕೆಲಸದ ವೇಳೆಯಾದರೂ ಅವುಗಳನ್ನು ನಿಷ್ಕ್ರಿಯಗೊಳಿಸಿದರೆ... ಕವಿಗಳಾದರೂ ಈ ಅಣ್ಣಗಳ ಹಿಡಿತದಿಂದ ಹೊರಬಂದು ಬ್ಲಾಗ್ ವನಕ್ಕಾಗಿ ತಮ್ಮ ಕೊಡುಗೆ ನೀಡುವರೇನೋ ಆಗ ನನ್ನ ಶ್ರಮ ಸಾರ್ಥಕವಾದೀತು..ಎನ್ನುತ್ತಾ ಸ್ವಲ್ಪ ಪದಸುಮಗಳ ಘಮವನ್ನಾದರೂ ಪಡೆಯೋಣ ಎನ್ನುತ್ತಾ ಶತವಿಕ್ರಮ..ಪದಾರ್ಥ ಚಿಂತಾಮಣಿಯೆಂಬ ಹೂವನಕ್ಕೆ ಕಾಲಿಟ್ಟ.
"

10 comments:

  1. ನಿಜ ಸಾರ್, ಕಲುಷಿತ ವಾತಾವರಣಕ್ಕೆ ಇನ್ನಾದರೂ ಶುದ್ಧೀಕರಣ ಯಜ್ಞ ಶುರು ಮಾಡೋಣ.
    ವ್ಯರ್ಥ ರಾಜಕೀಯಾಲಾಪಗಳನ್ನು ತೊರೆದು ನಿಜ ಸಾಹಿತ್ಯಾಸಕ್ತರಾಗೋಣ.
    ಮರಳಿ ಬ್ಲಾಗ್ ಸುವರ್ಣಯುಗ ಪ್ರತಿಷ್ಠಾಪಿಸೋಣ.
    ಪರಸ್ಪರತೆಯ ನಿಜಾರ್ಥ ಅರಿವಿಗೆ ತರೋಣ.
    ಒಲುಮೆ ಇರಲಿ.
    ನಾಳೆ ಶ್ರಾವಣದ ಮೊದಲ ದಿನವೇ ಅಭಿಯಾನ ಶುರೂ...

    ReplyDelete
    Replies
    1. ಶ್ರಾವಣ ಮಾಸ ಬಂದಾಗ ಆನಂದ ತಂದಾಗ...ಬ್ಲಾಗು ಬದರಿ ಬರ್ತಾರಾ ಖುಷಿಯ ನಮಗೆ ತರ್ತಾರಾ...ಹಿಹಿಹಿ

      Delete
  2. ಬೊಂಬಾಟ್ ಬರಹ ಸರ್ಜಿ.. ಟಿ ಆರ್ ಪಿಗಳ ಹಿಂದೆ ಬಲವಂತವಾಗಿ ಓಡಿಸುವ ಫೇಸ್ಬುಕ್ ಮತ್ತು ವಾಟ್ಸಾಪ್ ಇನ್ಸ್ಟಾಗ್ರಾಮ್ ಇವುಗಳ ಮಧ್ಯೆ ಬರಹಗಳು ಕಣ್ಮರೆ ಆಗಿರುವುದು.. ಓದುಗರ ಸಮೂಹ ಚರ್ಚೆ ಕಮ್ಮಿ ಆಗಿರುವುದು ನಿಜವೇ ಸರಿ..

    ಒಂದು ಊರಿನಲ್ಲಿ ಬರ ಕಾಡುತ್ತಿತ್ತು.. ಕೆರೆ ಕಟ್ಟೆ ಬಾವಿಗಳು ಒಣಗಿದ ವಾಟೆಗಾರಿಯಾಗಿದ್ದವು.. ಊರಿನ ಪ್ರಮುಖರು ಚರ್ಚೆ ಮಾಡಿ.. ಅನತಿದೂರದಲ್ಲಿದ್ದ ನದಿಯನ್ನು ತಮ್ಮ ಊರಿನ ಕಡೆ ತುಸು ಹರಿಸಿದರೆ ಸ್ವಲ್ಪ ಉಸಿರಾಡಬಹುದುದ್ ಎಂದು ತೀರ್ಮಾನಿಸಿದರು.. ಕಡೆಗೆ ಇಷ್ಟು ಜನ.. ಇಷ್ಟು ದಿನ ಬೇಕು. ಇಷ್ಟು ಹಣ.. ಇಷ್ಟು ಸಾಮಗ್ರಿ ಬೇಕು .. ಎನ್ನುವ ಚರ್ಚೆ ಮತ್ತೆ ಈ ಸವಲತ್ತುಗಳನ್ನು ಪೂರೈಸುವವರು ಯಾರು ಎಂದಾಗ.. ಎಲ್ಲರ ತೋರು ಬೆರಳು ಪಕ್ಕದವರ ಕಡೆ ತನ್ನಷ್ಟಕ್ಕೆ ತಾನೇ ತಿರುಗಿತು..

    ಅಲ್ಲಿಯೇ ಕೂತಿದ್ದ ಒಬ್ಬ ವೃದ್ಧ.. ಕಣ್ಣಿಗೆ ಹಾಕಿಕೊಂಡಿದ್ದ ಕನ್ನಡಕ ಏರಿಸಿ.. ಪಂಚೆಯನ್ನು ತುಸು ಮೇಲಕ್ಕೆ ಏರಿಸಿ.. ಗಣೇಶ ಬೀಡಿಯನ್ನು ಹಚ್ಚಿಕೊಂಡು.. ಹೆಗಲ ಮೇಲೆ ಗುದ್ದಲಿ ಪಿಕಾಸಿ ತಲೆಯ ಮೇಲೆ ಮಣ್ಣು ಎತ್ತುವ ಬಾಣಲಿ ಹೊತ್ತು ನೆಡೆದೆ ಬಿಟ್ಟ.. ಎಲ್ಲರೂ ತಲೆ ತಗ್ಗಿಸಿದರು. ಮುಂದೆ ನೆಡೆದದ್ದು ಇತಿಹಾಸ.. ಅನತಿ ಕಾಲದಲ್ಲಿ ಹಸಿರು ಕಂಗೊಳಿಸಿತು..


    ಸೂಪರ್ ಬರಹ ಸರ್ಜಿ

    ReplyDelete
    Replies
    1. ಸುಂದರ ಪ್ರತಿಕ್ರಿಯೆ ಹೃದಯಸ್ಪರ್ಶಿ ನಿದರ್ಶನದೊಂದಿಗೆ ಶ್ರೀಮನ್

      Delete
  3. Wow Anna fake id bethalanna nange 10k kodbeku. Keli nodi

    ReplyDelete
    Replies
    1. ಫೇಕ್ ಐಡಿ ಭೇತಾಳಾನಾ..?? ಯಾರಪ್ಪಾ ಅದು...ನಾವೂ ಪೀಡಿತರೇ ...ಅದೇ ಭೇತಾಳ ಆದರೆ ಬಹಳ ಬ್ಲಾಗ್ ಬಳಗಿಗಳಿಗೆ ಕೊಡಬೇಕಿದೆ

      Delete
  4. Blogannana nodoke Facebook ammana mukhantara wallninda beku

    ReplyDelete
  5. ಛಲದಂಕಮಲ್ಲ ಜಲನಯನ ಇರುವಾಗ, ಬೇತಾಳಕ್ಕೆ ನಾವು ಅಂಜಲು ಸಾಧ್ಯವೆ? ಆದರೆ ಒಂದು ಮಾತು: ‘ಪದಾರ್ಥ ಚಿಂತಾಮಣಿ’ಯೂ ಸಹ ಬ್ಲಾ‌^ಗ್‍ವನದಲ್ಲಿ ಕಲ್ಪವೃಕ್ಷದಂತೆಯೇ ಕಂಗೊಳಿಸುತ್ತಿದೆ!

    ReplyDelete
  6. ಸುನಾಥಣ್ಣ ಧನ್ಯವಾದ... ನೀವಂತೂ ಎರಡೂ ಕಡೆ ಕಂಗೊಳಿಸುತ್ತೀರಿ ಕಂಗೆಟ್ಟಿಲ್ಲ ನಮ್ಮ ಹಾಗೆ. ನಿಜಕ್ಕೂ ಕೆಲವು ಖಾತೆಗಳನ್ನು ಬಿಟ್ಟರೆ ಫೇಸ್ಬುಕ್ ನಂತಹ ಹೊಲಸು ಇನ್ನೆಲ್ಲೂ ಇಲ್ಲ.

    ReplyDelete
  7. ಚೆಂದದ ಬರಹ, ನೀವು ಹೇಳುವಂತೆ ಈ ಬ್ಲಾಗ್ ವನ ಮತ್ತೆ ನಳನಳಿಸಬೇಕೆಂದರೆ ಫ಼ೇಸ್ಬುಕ್ಕಣ್ಣ ಮತ್ತು ವಾಟ್ಸಪ್ಪನ್ ಗಳ ಹಾವಳಿ ಕಡಿಮೆಯಾಗಲೇ ಬೇಕು.

    ReplyDelete