Saturday, May 16, 2009

ನಂಗೊತ್ತಿಲ್ಲ ಮಗು ಕನ್ನಡ-ನುಡಿ ನಮ್ಮದು


(Source: Web)
ಕನ್ನಡ-ನುಡಿ ನಮ್ಮದು
ನುಡಿ ನನ್ನದು .. ನುಡಿ ನಿಮ್ಮದು
ಕರುನಾಡೆಲ್ಲೆಡೆ ಆಡು ಭಾಷೆ ನಮ್ಮದು
ಪಂಪನ ಬನವಾಸಿಯ ಕಂಪು—ಕನ್ನಡ
ರನ್ನನ ಗಧಾಯುದ್ಧದ ಗುಡುಗು-ಕನ್ನಡ,
ಪುಲಿಕೇಶಿ, ವಿಜಯನಗರ, ಮೈಸೂರರಸರ ಸಿರಿ
ನೃಪತುಂಗ, ಹರಿ-ಹರ ರಾಘವಾಂಕರ ರಗಳೆಯ ಗರಿ,
ಮುದ್ದಣ-ಮನೋರಮೆಯರ ಸಲ್ಲಾಪ
ಹರಿಶ್ಚಂದ್ರ ಕಾವ್ಯದ ಚಂದ್ರಮತಿಯ ಪ್ರಲಾಪ
ಸರ್ವಜ್ಞನ ತ್ರಿಪದಿಗಳು, ಶಿಶುನಾಳರ ಉಕ್ತಿಗಳು
ಅಕ್ಕ-ಅಲ್ಲಮ-ಬಸವಣ್ಣರ ವಚನಗಳು
ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ
ಇವರಲ್ಲವೇ ಕನ್ನಡಿಗರ ಅಮೂಲ್ಯ ಆಸ್ತಿ ?!
ಗೋಕಾಕ್, ಕಾರ್ನಾಡ್, ಜೀಎಸ್ಸೆಸ್, ಕಂಬಾರ್,
ಅನಕೃ, ತ್ರಿವೇಣಿ, ಭೈರಪ್ಪರ ಜತೆಗೂಡಿದ ನಿಸಾರ್
ಕಥೆ, ಕವನ, ಕಾದಂಬರಿಗಳ ಸರದಾರರು
ಜ್ಞಾನಪೀಠಗಳ ಹೊಳೆಯನ್ನೇ ಹರಿಸಿದರು
ನಾಟಕಕ್ಕೆ ಕೈಲಾಸಂ ಪರ್ಯಾಯವಾದರೆ
ರಾಜ್ ರಜತ ಪರದೆ ಮರೆಯದ ಧೃವತಾರೆ
ಭಾಷೆ ನಮ್ಮದೆಂಬ ಅಭಿಮಾನವಿರಲಿ
ನವಂಬರ್ ಮಾತ್ರವೇ ಏಕೆ? ವರ್ಷವಿಡೀ ಇರಲಿ
ಉಕ್ಕಲಿ ಭಾಷಾಭಿಮಾನ..ಕಿತ್ತೊಗೆದು ..ಕಳೆ
ಮೊಳಗಲಿ..ಭೋರ್ಗರೆದು ಕನ್ನಡದ ಕಹಳೆ.

ನಂಗೊತ್ತಿಲ್ಲ ಮಗು
ಅಪ್ಪಾ..
ಹೇಳು ಮಗು..
ನವಂಬರ್ ಬಂದ್ರೆ
ಕನ್ನಡದಲ್ಲೇ ಮಾತಾಡೋಣ
ಅಂತಾರಲ್ಲಾ..ನಾಯಕರು?
ಹೌದು ಮಗು..
ಹಂಗಂದ್ರೆ ಬೇರೆ ಹೊತ್ನಲ್ಲಿ ಕನ್ನಡದಲ್ಲಿ
ಮಾತಾಡೊಲ್ಲವೇ ಇವರು?
...ಹ್ಞಾಂ...!! ಗೊತ್ತಿಲ್ಲ ಮಗು.
ಅಪ್ಪಾ....
ಹೇಳು ಮಗು....
ಮುಂಗಾರು ಮಳೆ...ಗಾಳಿಪಟ..
ದಾಖಲೆಗಳ ಧೂಳೀಪಟ..ಅಂತಾರಲ್ಲಾ...??
ಹೌದು ಮಗು..
ಕನ್ನಡದವರೇ..ಒಳ್ಳೊಳ್ಳೆ ಗಾಯಕರಿದ್ರೂ..
ಹಿಂದಿಯವರನ್ನ ಕರಿಸಿ ಹಾಡ್ಸಿದ್ದಕ್ಕಾ???!!
...ಹ್ಞಾಂ...!! ಗೊತ್ತಿಲ್ಲ ಮಗು
ಅಪ್ಪಾ..
ಏನು ಮಗು..?
ಕರ್ನಾಟಕದ ಮಹಿಳಾ ವಿಶ್ವವಿದ್ಯಾಲಯಕ್ಕೆ
ಆಂಧ್ರದ ಮಹಿಳೆಯನ್ನ ಉಪಕುಲಪತಿಗಳನ್ನಾಗಿ
ನೇಮಿಸಿದ್ರಲ್ಲಾ...
ಹೌದುಮಗು....ಗಂಡಸರನ್ನ ಮಾಡ್ಬೇಕಿತ್ತಾ..??
ಹೇ..ಹಂಗಲ್ಲಪ್ಪ..ಕರ್ನಾಟಕದಲ್ಲಿ ಯೋಗ್ಯ ಮಹಿಳೇರೇ
ಇರಲಿಲ್ಲವೇ??
ನಂಗೊತ್ತಿಲ್ಲ ಮಗು

7 comments:

  1. ಅಜಾದ್ ಸರ್,
    ನಿಮ್ಮ ಕವನಗಳೆಲ್ಲವೊ ಚೆನ್ನಾಗಿದೆ, ನಿಮ್ಮಲಿರೋ ಕನ್ನಡ ಪ್ರೀತಿಗೆ ನಾವು ತಲೆಬಾಗಿದ್ದೇವೆ.

    ReplyDelete
  2. ನಿಮ್ಮ "ಗೊತ್ತಿಲ್ಲ ಮಗು" ಸಿರೀಸ್ ಮು೦ದುವರಿಸಿ, ಇನ್ನು ಏನೇನೋ ವಿಷಯಗಳ ಮೇಲೆ ಅದನ್ನು ವಿಸ್ತರಿಸಬಹುದು. ಒ೦ಥರಾ ಚೆನ್ನಾಗಿರುತ್ತೆ.

    ReplyDelete
  3. ಮನಸು ಮೇಡಂ ಮತ್ತು ಪರಾಂಜಪೆಯವರೇ..
    ನಿಮ್ಮ ಪ್ರೋತ್ಸಾಹ ಮತ್ತು ಗೊತ್ತಿಲ್ಲ ಮಗು-ವಿನ ತಾತ್ವಿಕ ಆಧಾರ ನನಗೆ ಇಷ್ಟವಾದುದ್ದರಿಂದ ಇದನ್ನು ಮುಂದುವರೆಸಿದ್ದೇನೆ...ನಿಮಗೂ ಇಷ್ಟವಾದದ್ದು ಬೋನಸ್ ಸಿಕ್ಕಹಾಗೆ..

    ReplyDelete
  4. ನಿಮ್ಮ ಕನ್ನಡಾಭಿಮಾನಕ್ಕೆ ವಂದನೆಗಳು... ತುಂಬ ಚೆನ್ನಾಗಿ ಇದೆ, ಕವನಗಳು.... ಮುಂದುವರಿಸಿ.....
    ಗುರು

    ReplyDelete
  5. ಚೆನ್ನಾಗಿದೆ ಮಗುವಿನ ಪ್ರಶ್ನೆ ನಿಮ್ಮ ಉತ್ತರ... ಕನ್ನಡದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಆದರೆ ಪ್ರೊತ್ಸಾಹದ ಕೊರತೆ ಇದೆ... ಅದನ್ನು ನೀಗಿಸುವುದು ಹೇಗೆ ಇದು ನನ್ನ ಪ್ರಶ್ನೆ...

    ReplyDelete
  6. ಕನ್ನಡದ ಪ್ರತಿಭೆಗಳು ಎಷ್ಟೋ ಬಾರಿ ಎಲೆಮರೆಯ ಕಾಯಿಯಾಗೇ ಉಳಿದುಬಿಡುತ್ತವೆ. ಪ್ರಭುರವರೇ, ನಿಮ್ಮ ಪ್ರಶ್ನೆ ಯೇ ನನ್ನ ಪ್ರಶ್ನೆಯೂ ಸಹಾ, ನನಗೂ ಉತ್ತರ ಸಿಕ್ಕಿಲ್ಲ, ಶಕ್ತರಾದವರು- ನನ್ನ ಅನಿಸಿಕೆ ಪ್ರಕಾರ ತಮ್ಮವರನ್ನು ಮೇಲೆತ್ತುವ, ಪರಿಚಯಿಸುವ ಪ್ರಯತ್ನವನ್ನೇ ಮಾಡುವುದಿಲ್ಲ. ಅಸಡ್ದೆಯೋ, ಈರ್ಷೆಯೋ ಅಥವಾ ಬೇರೆಯವರು ಆಡಿಕೊಳ್ಳುತ್ತಾರೆ ಎಂದೋ ಗೊತ್ತಿಲ್ಲ. ಹೊರರಾಜ್ಯಗಳಲ್ಲಿ ಸುಮಾರು ಇಪ್ಪತ್ತು ವರ್ಷ ಕೆಲಸಮಾಡಿರುವ ನನಗೆ ನಮ್ಮ ಶಕ್ತ ಕನ್ನಡಿಗರು ಸಹಾಯ ಹಸ್ತ ನೀಡದಿರುವುದಕ್ಕೆ ಕಾರಣ ಮೂರನೆಯದು ಎಂದು ನನ್ನ ಅನ್ನಿಸಿಕೆ. ಹಿಂದಿ ಭಾಷಿಗರು ಅಷ್ಟೇಕೆ ಇತರ ದ್ರಾವಿಡ ಭಾಷಿಗರೂ ತಮ್ಮವರೆಂದರೆ ಶಕ್ತಿಮೀರಿ ಸಹಾಯಮಾಡುತ್ತಾರೆ...ನಮ್ಮವರು ಬೇರೆಯವರು ‘ಪಕ್ಷಪಾತಿ‘ ಎನ್ನುವರೇನೋ ಎಂಬ ಭಯದಲ್ಲಿ ನಮ್ಮ ಕಡೆ ನೋಡುವುದೂ ಇಲ್ಲ, ಈ ಭಾವನೆ ಹೋಗಬೇಕು, ನಿಜವಾಗಲೂ ಪ್ರತಿಭಾವಂತನಾದರೆ ಸಹಾಯ ಸಹಕಾರ ನೀಡುವುದರಲ್ಲಿ ತಪ್ಪೇನೂ ಇಲ್ಲ.
    ಪ್ರತಿಕ್ರಿಯೆಗೆ ಧನ್ಯವಾದ

    ReplyDelete
  7. ನೀವನ್ನೊದು ಸರಿ ನಾವು ಕನ್ನಡಿಗರು ಪ್ರತಿಭಾವಂತರಿಗೆ ಪ್ರೊತ್ಸಾಹ ಕೊಡುವಲ್ಲಿ ಸ್ವಲ್ಪ ಜಿಪುಣರೇ ಸರಿ... ಈ ಪಕ್ಷಪಾತಿಯಾಗುತ್ತೇವೆ ಅನ್ನುವ ಭಯ ನನ್ನನ್ನೂ ಹಲವು ಬಾರಿ ಕಾಡಿದ್ದಿದೆ ಆದರೆ ಅದನ್ನು ಮೀರಿ ಬರಲು ಪ್ರಯತ್ನಿಸಿದ್ದೇನೆ, ಕೆಲವು ಬಾರಿ ಮಾತ್ರ ಸಫಲ... ನಿಮ್ಮ ಪ್ರತಿಕ್ರಿಯೆ ವಾಸ್ತವಕ್ಕೆ ಹಿಡಿದ ಕನ್ನಡಿ ಬಹಳ ಇಷ್ಟವಾಯಿತು...

    ReplyDelete