Saturday, May 23, 2009

ಕಪಿಲಾಪುರದ ಕಥೆ



(ಆತ್ಮೀಯರೇ...ನನಗೆ ಬಹಳ ದಿನಗಳಿಂದ ಕಾಡಿಸುತ್ತಿದ್ದ ಒಂದು ವಿ.ವಿ. ಉಪಕುಲಪತಿ ನೇಮಕಾತಿಯ ಹಗರಣವೊಂದನ್ನು ಬಿಂಬಿಸಲು ಭೇತಾಳನ ಕಥೆಯನ್ನು ಆರಿಸಿಕೊಂಡೆ ಪ್ರಸ್ತಾವನಾ ಮಾಧ್ಯಮವಾಗಿ, ನಿಮ್ಮ ಟಿಕೆ ಟಿಪ್ಪಣಿಗಳಿಗೆ ತುಂಬು ಮನಸ್ಸಿನ ಸ್ವಾಗತ)

ಮಹಾನಗರ, ಅಸೆಂಬ್ಲಿ, ಪಾರ್ಲಿಮೆಂಟ್ ಹೀಗೆ ಎಲ್ಲಾ ಚುನಾವಣೇಲೂ ಹಿಗ್ಗಾ ಮುಗ್ಗಾ ಸೋತರೂ ಮತ್ತೆ ಬೈ ಎಲೆಕ್ಷನಿಗೆ ನಿಲ್ಲುವ ಸಾಹಸಮಾಡುವ ಪುಢಾರಿಯಂತೆ ಹಠಬಿಡದ ಶತವಿಕ್ರಮ ಸುಡುಗಾಡಿನ ಬಳಿಯ ಬಿಕೋ ಎನ್ನುವ ಧೂಳುತುಂಬಿದ ಬೀಡಲಿ ಒಂಟಿ ಭೂತದಂತೆ ನಿಂತಿದ್ದ ಮುಳ್ಳುಜಾಲಿ ಮರಕ್ಕೆ ನೇತುಬಿದ್ದಿದ್ದ ಭೇತಾಳನನ್ನು ಹೆಗಲಿಗೇರಿಸಿ ಕ್ರೆಮೆಟೋರಿಯಂನ ವಾಹನದ ಕಡೆ ನಡೆಯುತಿರಲು... ಮಹತ್ವದ ಮೀಟಿಂಗ್ ನಡೆಯುವಾಗ ಎಲ್ಲರನ್ನೂ ಡಿಸ್ಟರ್ಬ್ ಮಾಡುವ ಮೊಬೈಲ್ ರಿಂಗ್ ಟೋನಿನಂತೆ..ನಿರ್ಜೀವ ನಿಶ್ಶಬ್ದವಾಗಿದ್ದ ಭೇತಾಳ ಮಾತನಾಡತೊಡಗಿತು...
"ಎಲೈ ... ಕುರ್ಚಿಸಿಗಲೆಂದು ಆ ಪಕ್ಷದಿಂದ ಈ ಪಕ್ಷ, ಈ ಪಕ್ಷದಿಂದ ಉ ಪಕ್ಷಕ್ಕೆ ನೆಗೆಯುವ ಪುಢಾರಿಯಂತೆ ಏನೂ ನನ್ನಿಂದ ನಿನಗೆ ಸಿಗುವುದು ಆಸಾಧ್ಯವೆಂದು ತಿಳಿದರೂ ನನ್ನ ಬೆನ್ನ ಹಿಂದೆ ಬಿದ್ದಿರುವ ನಿನ್ನ ಸಣಕಲು ದೇಹಕ್ಕೆ ನನ್ನಹೆಣ ಭಾರದ ತೂಕದ ಅರಿವಾಗದಂತೆ ಕಥೆಯೊಂದನ್ನು ಹೇಲುತ್ತೇನೆ ಕೇಳು" ಎಂದಿತು
"ಕಪಿಲಾಪುರದ ಕಪಿಲಭಾಷೆ ಅಭಿವೃದ್ಧಿ, ಭಾಷೆಯ ಬೆಳವಣಿಗೆ ಮತ್ತು ಸಂಶೋಧನೆಗೆಂದೇ ಮೀಸಲಾಗಿದ್ದ ಕಂಪಲಾ ವಿಶ್ವವಿದ್ಯಾನಿಲಯ ಅದರ ಉಪಕುಲಪತಿ ಕಸ್ತೂರಮ್ಮ ತಮ್ಮ ಅಧಿಕಾರಾವಧಿಯಲ್ಲಿ ವಿಶ್ವ ವಿದ್ಯಾಲಯಕ್ಕೆ ಅಮೋಘ ಯಶಸ್ಸು ಮತ್ತು ಹೆಸರನ್ನು ತಂದುಕೊಟ್ಟರು. ಅವರ ಕಾರ್ಯಾವಧಿ ಮುಗಿಯಲು ಆ ಸ್ಥಾನಕ್ಕೆ ಕಂಪಲಾಪುರದ ಪ್ರತಿಭಾನ್ವಿತ ಪ್ರೊ.ನೀಲಾಂಬಿಕೆ ಮತ್ತು ಬತ್ತೊಬ್ಬ ನಾಡಿನ ಪ್ರತಿಭೆ ಡಾ. ಕುಸುಮಕ್ಕ ಬಹು ಚರ್ಚಿತ ಹೆಸರುಗಳಾಗತೊಡಗಿದವು. ಆದರೆ ಕಪಿಲಾಪುರದ ಮು.ಮಂ. ಕನಕಪ್ಪ ಮತ್ತು ಉ.ಮು.ಮಂ. ತಮ್ಮ ಜಾತಿಯವಳೆಂದು ನೀಲಾಂಬಿಕೆಯ ಹೆಸರು ಸೂಚಿಸಿದರೆ ಪಕ್ಷದ ಅಧ್ಯಕ್ಷ ಮತ್ತು ವಿರೋಧ ಪಕ್ಷದ ಮುಖಂಡ ತಮ್ಮ ಜಾತಿಗೆ ಸೇರಿದ ಕುಸುಮಕ್ಕನನ್ನೇ ಆ ಸ್ಥಾನಕ್ಕೆ ನಿಯೋಜಿಸಬೇಕೆಂದು ಪಟ್ಟು ಹಿಡಿದುಕುಂತರು. ವಿಷಯವನ್ನು ನಿಷ್ಪಕ್ಷವಾಗಿ ವಿಚಾರಿಸಿ ತಮಗೆನೆಸಿದಂತೆ ನಿರ್ಧಾರ ತೆಗೆದುಕೊಳ್ಳಬಹುದೆಂದು ತನ್ನ ಕಾರ್ಯಾವಧಿಯ ಕೊನೆಯ ವರ್ಷದಲ್ಲಿದ್ದ ಸರ್ಕಾರ ಕುಲಪತಿಗಳಿಗೆ ತನ್ನ ಇಂಗಿತವನ್ನು ಸೂಚಿಸಿತು. ಹಾಗೆ ನೋಡಿದರೆ ಇದು ಕುಲಪತಿಯವರ ಸ್ವತಂತ್ರ ಕಾರ್ಯವ್ಯಾಪ್ತಿಯ ವಿಷಯವಾದರೂ ಸರ್ಕಾರದ "ಇಂಗಿತ" ವೇ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎನ್ನುವುದು ಕಪಿಲಾಪುರದ ಅಲಿಖಿತ ನಿಯಮ. ಹೀಗಾಗಿ ಈಗ ಕುಲಪತಿಗಳಿಗೆ ತಮ್ಮ ಮನಸೇಚ್ಛೆ ಉಪ ಕುಲಪತಿಯನ್ನು ಆರಿಸುವ ಚಾನ್ಸ್ ಸಿಕ್ಕಿದ್ದು..ವೈದ್ಯ ಹೇಳಿದ್ದು ಹಾಲು-ಅನ್ನ ರೋಗಿ ಬಯಸಿದ್ದು ಹಾಲು-ಅನ್ನ ಎನ್ನುವಂತಾಯಿತು. ಸಿಕ್ಕ ಅವಕಾಶವನ್ನು ಚನ್ನಾಗಿಯೇ ಉಪಯೋಗಿಸಿಕೊಂಡ ಪಕ್ಕದ ಪ್ರಾಂತ ಇಂಪಲಾಪುರದವನಾದ ಕುಲಪತಿ ತನ್ನಜಾತಿಯ ಇಂಪು ಭಾಷೆಯ ಪಂಡಿತೆ ಇಂಪಲಾಪುರದ ಪ್ರೊ. ಸಂಪೂರ್ಣೇಶ್ವರಿಯನ್ನು ನೇಮಿಸಿಯೇ ಬಿಟ್ಟರು.
ವಿಷಯ ಕಪಿಲಾಪುರದ ಗಲ್ಲಿ-ಗಲ್ಲಿಗಳಲ್ಲಿ ಗುಲ್ಲೆಬ್ಬಿಸಿ ಕಪಿಲಭಾಷಾ ಜಾಗರಣಾ ಸಮಿತಿ ಹೋರಾಟಕ್ಕಿಳಿದು ಸರ್ಕಾರಕ್ಕೆ ಇರಿಸು-ಮುರಿಸಿಗೆ ಕಾರಣವಾಗತೊಡಗಿತು. ಚಳುವಳಿಯ ತೀವ್ರತೆ ಹೆಚ್ಚಾಗಿ, ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ವಿಚಾರಣೆಗೆ ಬಂದೇ ಬಿಡ್ತು..ನ್ಯಾಯಾಲಯ ಕಪಿಲ ಭಾಷಾ ವಿ.ವಿ.ಗೆ ಇಂಪು ಭಾಷೆಯ ಪ್ರೊಫೆಸರ್ ನೇಮಕಕ್ಕೆ ಆಕ್ಷೇಪಣೆ ಎತ್ತಿಹಿಡಿದು, ಸರ್ಕಾರದ ಕ್ರಮವನ್ನು ಅನೂರ್ಜಿತಗೊಳಿಸಿ, ಕಪಿಲಾಪುರದ ಅರ್ಹ ಪ್ರತಿಭಾವಂತರ ಪಟ್ಟಿಯೋದನ್ನು ಮಾಡಿ ಸರ್ಕಾರಕ್ಕೆ ಸೂಚಿಸಬೇಕೆಂದು ಆ ಕಾರ್ಯಕ್ಕೆಂದು ಆಯೋಗವೊಂದನ್ನು ರಚಿಸಬೇಕೆಂದು ಸರ್ಕಾರಕ್ಕೆ ಸೂಚನೆ ನೀಡಿ ಅದುವರೆಗೂ ಪೂರ್ವ ಉಪ ಕುಲಪತಿಯವರೇ ಮುಂದುವರೆಯಿವಂತೆ ತೀರ್ಪುಕೊಟ್ಟಿತು".
"ಎಲೈ ಶತ ವಿಕ್ರಮನೇ ನನಗೆ ಕೆಲವು ಸಂದೇಹಗಳಿವೆ...ಮೊದಲನೆಯದಾಗಿ - ಮು.ಮಂ., ಉ.ಮು.ಮಂ., ವಿ.ಪ.ನಾಯಕ ಇವರು ಪರಸ್ಪರ ಲೇವಾದೇವಿಯ (ಎಲ್ಲ ವಿಷಯಗಳಲ್ಲಿ ಮಾಡುವಂತೆ) ಅಧಾರದ ಮೇಲೆ ಯಾರನ್ನಾದರೂ ತಾವೇ ಆರಿಸಬಹುದಿತ್ತಲ್ಲ ಹಾಗೇಕೆ ಮಾಡಲಿಲ್ಲ..? ಎರಡನೇ ಸಂದೇಹ ..ಕುಲಪತಿ ತನ್ನ ಆದೇಶವನ್ನು ಯಾರಾದರೂ ಪ್ರಶ್ನಿಸಬಹುದು ಎನ್ನುವ ಸಾಮಾನ್ಯ ತಿಳುವಳಿಕೆಯನ್ನು ಉಪಯೋಗಿಸಲಿಲ್ಲವೇಕೆ?....ನಿನ್ನ ಮುತ್ತಾತಂದಿರಂತೇ..ನನ್ನ ಈ ಸಂದೇಹಗಳನ್ನು ತಿಳಿದೂ ಪರಿಹರಿಸದೇ ಹೋದರೆ ನಿನ್ನ ತಲೆ ತಾಲಿಬಾನ್ ಗಳು ಅಂಧ- ಧರ್ಮಾನುಕರಣೆ ಎಂಬ ಸುಳ್ಳು ನೆಪಗಳ ಹೆಸರಿನಲ್ಲಿ ವಿನಾಕಾರಣ ಅಮಾಯಕರ ಹತ್ಯೆಗೆ ಉಪಯೋಗಿಸುವ ಚೀನಾದ ಬಾಂಬಿನಂತೆ ಸಿಡಿದು ಹೋದೀತು, ಎಚ್ಚರಿಕೆ" ಎಂದು ತನ್ನ ಕೊರೆತವನ್ನು ಮುಗಿಸಿತ್ತು ಭೇತಾಳ.
"ಹೇ ತಾಳವಿಲ್ಲದ ಭೇತಾಳನೇ, ನನ್ನ ಇಷ್ಟಾಯಿಷ್ಟದ ಪರಿವೆಯೇ ಇಲ್ಲದೇ lecture ಕೊರೆಯುವ ಪ್ರೊಫೆಸರುಗಳಂತೆ ನಿನ್ನ ತಲೆಬುಡವಿಲ್ಲದ ಕಥೆ ಹೇಳಿ ..ಎಷ್ಟೇ ಮನವಿ ಮಾಡಿಕೊಂಡರೂ ಅರ್ಥವಾಗದೇ ಸಭಾ ಭವನದಲ್ಲೇ ಕಿರಿಚಾಡುವ ವಿರೋಧ ಪಕ್ಷದವರಂತೆ ಅರ್ಥವಿಲ್ಲದ ಮತ್ತು ವಿವೇಚನಾ ವಿಹೀನ ಪ್ರಶ್ನೆಯನ್ನು ಕೇಳಿದ್ದೀಯೆ,,ಪರವಾಗಿಲ್ಲ..ನನ್ನ ಉತ್ತರ ಕೇಳು...
ಮು.ಮಂ., ಉ.ಮು.ಮಂ. ಅಥವಾ ವಿ.ಪ.ನಾಯಕ ಇವರುಗಳಿಗೆ ಇದ್ದದ್ದು ಕಡೆಯ ವರ್ಷ ಹಾಗಾಗಿ..ಮುಂದೆ ಚುನಾಯಿತರಾಗಿ ಬರುವರೋ ಇಲ್ಲವೋ ಎಂಬುದು ಅವರಿಗೇ ಅನುಮಾನವಾಗಿತ್ತು.ಈ ಅಂಶ ನಿನ್ನ ಮಿದುಳಿಲ್ಲದ ಬುರುಡೆಗೆ ಹೇಗೆ ಹತ್ತೀತು..?.ಹೀಗಿರುವಾಗ ತಮ್ಮ ಆಯ್ಕೆಯನ್ನು ಮುಂದಿಟ್ಟಿದ್ದರು.
ಇನ್ನು ನಿನ್ನ ಎರಡನೇ ಸಂದೇಹ ಮೊದಲನೆಯದಕ್ಕಿಂತ ಮೂರ್ಖ ಸಂದೇಹ...ಏಕೆಂದರೆ..ಕಪಿಲಾಪುರದವರು ತಮ್ಮ ನೆಲದಲ್ಲಿ ಇಂಪಲಾಪುರ, ಟೆಂಪಲಾಪುರ ಅಲ್ಲದೇ ಮಂಪಲಾಪುರದವರನ್ನು ಬೇರೂರಲು ಬಿಟ್ಟಿದ್ದರು..ಹೀಗಿರುವಾಗ ಯಾವುದೇ ಪ್ರತಿರೋಧ ಇರುವುದಿಲ್ಲವೆಂದು ಕುಲಪತಿ ಅತಿ ಜಾಣತನ ತೋರಿದ್ದ..."
"ಭಲೇ ಶತವಿಕ್ರಮ ನಿನ್ನ ಬುದ್ಧಿವಂತಿಕೆ ಮೆಚ್ಚುವಂತಹುದು...ಆದರೆ ನೀನು ಮೌನ ಮುರಿದೆ..."
ಎನ್ನುತ್ತಾ ಕರ್ಕಶವಾಗಿ ಊಳಿಡುತ್ತಾ ನಾಯಿಯರೂಪ ಧರಿಸಿ ಶತವಿಕ್ರಮನ ಹೆಗಲಿಂದ ಜಾರಿ ಓಡಿ ಮತ್ತೆ ಜಾಲಿಮರದ ಕೊಂಬೆಗೆ ನೇತಾಡತೊಡಗಿತು.

(ಚಿತ್ರ: ಭೇತಾಳನ ಕಥೆಗಳು ಚಂದಮಾಮ ಪತ್ರಿಕೆ, ಅಂತರ್ಜಾಲ ಕೃಪೆ)

13 comments:

  1. ಸರ್,
    ಏನು ಬೇತಾಳನ ಹಿಡಿದುಬಿಟ್ಟಿದ್ದೀರಿ ಹಾ ಹಾ ಹಾ.....ಸೊಪರ್!! ಎಲ್ಲಿ ಇಲ್ಲ ಹೇಳಿ ರಾಜಕೀಯ ಎಲ್ಲೇಲ್ಲು ತುಂಬಿ ತುಳುಕಾಡುತ್ತಲಿದೆ... ನೀವು ತೆಗೆದುಕೊಂಡಿರುವ ಹಗರಣದ ವಿಷಯ ಚೆನ್ನಾಗಿ ಬಿತ್ತರವಾಗಿದೆ.. ಧನ್ಯವಾದಗಳು

    ReplyDelete
  2. ಬೇತಾಳನ ಕಥೆಗಳಲ್ಲಿ ಹಗರಣ ಬಿಚ್ಚಿಟ್ಟದ್ದು ಚೆನ್ನಾಗಿದೆ, ಮಗುವಿನ ಪ್ರಶೆಗಲ ಸರಣಿ ಮತ್ತೆ ಮುಂದುವರೆಯಲಿ...

    ReplyDelete
  3. ಬೇತಾಳನ ಕಥೆಯ ಮೂಲಕ ರಾಜಕೀಯ ಪ್ರಹಸನ, ಚೆನ್ನಾಗಿದೆ.

    ReplyDelete
  4. ಮನಸು ಮೇಡಂ...ಭೇತಾಳನ್ನ ನಾನು ಹಿಡೀಲಿಲ್ಲ...ಅದೇ ನನ್ನ ಹಿಡ್ದಿದ್ದು...ಈ ಪ್ರಕರಣ ಪಬ್ಲಿಕ್ ಆದಾಗಿನಿಂದ..ಹೇಗೆ ಇದನ್ನು ಒಂದು ಕೃತಿಯ ರೂಪ ಕೊಡೋದು ಅನ್ನ್ಕೊಳ್ತಿದ್ದೆ..ಭೇತಾಳನ ಕಥೆಗಳು ನೆನಪಿಗೆ ಬಂದು...ಹೀಗೇಕೆ ಮಾಡಬಾರದು ಅಂತ ಪ್ರ್ಯತ್ನಿಸಿದೆ...ನಿಮಗೆ ಇಷ್ಟ ಆಯ್ತು ಅಂದರೆ ಸಮಾಧಾನ...thanks ಪ್ರತಿಕ್ರಿಯೆಗೆ..

    ReplyDelete
  5. ಪ್ರಭು, ಧನ್ಯವಾದ ಮೆಚ್ಚುಗೆಗೆ...ವಿಚಾರ ಮುಂದಿಡುವುದರಲ್ಲಿ ಏನಾದರೂ ಮಾರ್ಪಾಡುಗಳು ಇದ್ದರೆ ನೀವೆಲ್ಲಾ ತಿಳಿಸಿದರೆ ಒಳ್ಳೆಯದು..ಮನಸು ಮೇಡಂ ಗೆ ಮತ್ತು ಪರಾಂಜಪೆಯವರಿಗೂ ಇಷ್ಟವಾಗಿದೆ...thanks...request for your suggestions...for improvements...
    ಮನಸು ಮೇಡಂ...ಭೇತಾಳನ್ನ ನಾನು ಹಿಡೀಲಿಲ್ಲ...ಅದೇ ನನ್ನ ಹಿಡ್ದಿದ್ದು...ಈ ಪ್ರಕರಣ ಪಬ್ಲಿಕ್ ಆದಾಗಿನಿಂದ..ಹೇಗೆ ಇದನ್ನು ಒಂದು ಕೃತಿಯ ರೂಪ ಕೊಡೋದು ಅನ್ನ್ಕೊಳ್ತಿದ್ದೆ..ಭೇತಾಳನ ಕಥೆಗಳು ನೆನಪಿಗೆ ಬಂದು...ಹೀಗೇಕೆ ಮಾಡಬಾರದು ಅಂತ ಪ್ರ್ಯತ್ನಿಸಿದೆ...ನಿಮಗೆ ಇಷ್ಟ ಆಯ್ತು ಅಂದರೆ ಸಮಾಧಾನ...ಥನ್ಕ್ಸ್ ಪ್ರತಿಕ್ರಿಯೆಗೆ..

    ReplyDelete
  6. ಸರ್,

    ಬೇತಾಳನ ಕತೆಯ ಮೂಲಕ ಎಲ್ಲಾ ಪ್ರಕಾರದ ವಿಚಾರಗಳನ್ನು ಕೈಗಿತ್ತಿಕೊಳ್ಳುತ್ತಿದ್ದೀರಿ...ಇಲ್ಲಿ ಹಗರಣದ ವಿಚಾರವನ್ನು ಚೆನ್ನಾಗಿ ಹೇಳಿದ್ದೀರಿ.. ಇನ್ನಷ್ಟು ಬರಲಿ...

    ಧನ್ಯವಾದಗಳು.

    ReplyDelete
  7. ಶಿವು, ನಮ್ಮಲ್ಲಿರುವ ಸಮಸ್ಯೆಗಳಿಗೆ ಅಥವಾ ವಾಸ್ತವಗಳನ್ನು ಮಂಡಿಸುವುದಕ್ಕೆ ಭೇತಾಳಾನೂ ಒಂದು ಒಳ್ಳೆಯ ಮಾಧ್ಯಮ...ಅಲ್ವೇ..? ಚುಟುಕಗಳಲ್ಲಿ ‘ಗೊತ್ತಿಲ್ಲ ಮಗು‘ ನನ್ನ ಇನ್ನೊಂದು ಪ್ರಯತ್ನ. ನಿಮ್ಮ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು.

    ReplyDelete
  8. ಬೇತಾಳನ ರೂಪದಲ್ಲಿ ಯಾಕೆ ಹೇಳಿದ್ರಿ..ಡೈರೆಕ್ಟಾಗಿ ಹೇಳೋದಪ್ಪಾ..
    ನಿಜವಾಗಲೂ ನಾನು ನಕ್ಕು ಹಣ್ಣಾದೆ..
    ನಾಟಕ, ಯಕ್ಷಗಾನ ಶೈಲಿಯಲ್ಲಿ ಓದಿ..ಪಕ್ಕದಲ್ಲಿದ್ದವರನ್ನೂ ನಗಿಸಿಬಿಟ್ಟೆ
    "ಹೇ ತಾಳವಿಲ್ಲದ ಭೇತಾಳನೇ, ನನ್ನ ಇಷ್ಟಾಯಿಷ್ಟದ ಪರಿವೆಯೇ ಇಲ್ಲದೇ ಕೊರೆಯುವ ಪ್ರೊಫೆಸರುಗಳಂತೆ ನಿನ್ನ ತಲೆಬುಡವಿಲ್ಲದ ಕಥೆ ಹೇಳಿ ..." ಎಂದು ಎಷ್ಟು ಚೆನ್ನಾಗಿದೆ! ಸರ್..ನಿಜವಾಗಲೂ ನಂಗೆ ಭಾಳ ಇಷ್ಟವಾಯಿತು.
    ಅಭಿನಂದನೆಗಳು
    -ಧರಿತ್ರಿ

    ReplyDelete
  9. ಡೈರೆಕ್ಟಾಗಿ ಎಂಗೆ ಧರಿತ್ರಿ ಅಮ್ಮಾವರೇ ಯೋಳಕಾಯ್ತದೆ...ಸಮಾಜ್ದಾಗೆ ದೊಡ್ಡೋರ್ ಮಾಡೋ ದಡ್ಡ ಕೆಲ್ಸ ಇಂಡೈರೆಕ್ಟಾಗಿ ಯೋಳುದ್ರೇನೇ ನಾವೂ ಸೇಪು ಅಲ್ವರಾ..??

    ಈಗ ಸ್ವಲ್ಪ ಸೀರಿಯಸ್ಸಾಗೋಣ...
    ಇದು ಹೊಸ ಪ್ರಯೋಗವೇನಲ್ಲ, ಇದು ಸುಮಾರು ವರ್ಷಗಳ ಹಿಂದೆ ಸುಧಾ ಪತ್ರಿಕೆ ಬಳಸಿತ್ತು, ನನಗೆ ಮೆಚ್ಚುಗೆಯಾದದ್ದು ವಿಷಯ ಪ್ರಸ್ತಾವನೆಯ ವಿಧಾನ.
    ಇದು ನಿಮಗೂ ಇಷ್ಟವಾಗಿದೆಯೆಂದರೆ ನನ್ನ ಪ್ರಯತ್ನ ಸಾರ್ಥಕ. ವ್ಯಂಗ ವಿಡಂಬನೆ ಮತ್ತು ನವಿರು ಹಾಸ್ಯ ವಿಷಯ ಪ್ರಸ್ತಾವನೆಯನ್ನು ಪ್ರಭಾವಶಾಲಿ ಮಾಡುತ್ತದೆ ಎಂದು ನನ್ನ ಅನಿಸಿಕೆ.
    ಆದರೂ ನಿಮ್ಮ ಸಹಜತೆಗೆ ಹ್ಯಾಟ್ಸ್ ಆಫ್..Thanks ಪ್ರತಿಕ್ರಿಯೆಗೆ

    ReplyDelete
  10. ಜಲನಯನ,
    ಭೇತಾಳ ನನಗೆ ತುಂಬ ಇಷ್ಟವಾದ ಕತೆಗಾರ. ಆತನನ್ನು ನೀವು ಇಲ್ಲಿ ಬಳಸಿಕೊಂಡ ವಿಧಾನ ಚೆನ್ನಾಗಿದೆ.
    ತ್ರಿವಿಕ್ರಮನನ್ನು ಬಿಡದಿರಿ ಎಂದು ಕೇಳಿಕೊಳ್ಳುತ್ತೇನೆ.

    ReplyDelete
  11. ಸುನಾಥ್ ಸರ್,
    ನಮಸ್ತೆ, ಸ್ವಾಗತ ಜಲನಯನ ಮತ್ತು ಭಾವ ಮಂಥನಕ್ಕೆ
    ಧನ್ಯವಾದಗಳು...
    ನನಗೂ ಭೇತಾಳನ ಕಥೆಗಳು ಬಹು ಪ್ರಿಯವಾದುವು, ನಿಮ್ಮ ಆಶೀರ್ವಾದ ಸಲಹೆಗಳಿದ್ದರೆ ಖಂಡಿತ ಮುಂದುವರೆಯುತ್ತೆ ಭೇತಾಳನ ತಾಳ-ವಾದ್ಯ

    ReplyDelete
  12. chennagide. Nivu allello koothu, illina raajakeeya prahasana galige sookshma vaagi prathikiyisiruvudu thumba kushi kottitu.

    nimma blog ge yavagalu baruttaa iruttene, e tharada vyangya, vidambane.. haagu monachada lekhana jaasti barali. :)

    ReplyDelete
  13. ಬಾಲು ಸರ್
    ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹದ ಆಧಾರದಮೇಲೆ ಈ ಪ್ರಯತ್ನ ಸಾಧ್ಯವಾದದ್ದು, ಮುನ್ನಡೆಯುವುದು.
    ಗೂಡಿಗೆ ಬಂದಿರಿ ಮನತುಂಬಿ ಬರೆದಿರಿ, Thanks.
    ಈಗಿನ ಎಲ್ಲ ಸಾಮಾಜಿಕ ಮತ್ತು ವೈಚಾರಿಕ ಅತ್ಯಾಚಾರಗಳಿಗೆ ರಾಜಕಾರಣವೇ ಕಾರಣ ಎಂದೇ ನನ್ನ ಅನಿಸಿಕೆ.

    ReplyDelete