Tuesday, July 7, 2009

ನನ್ನವರು


(ವೆಬ್ ಚಿತ್ರ)
ನನ್ನ ಕಣ್ಣಲ್ಲಿ ಉಕ್ಕಿರಲಿಲ್ಲ
ಇನ್ನೂ ನೀರು...
ಕಕ್ಕುಲತೆಯಿಂದ ಅಮ್ಮನೆಂದಳು
ಯಾಕೆ ಕಂದ..? ಏನುಬಿತ್ತು
ಕಣ್ಣಿಗೆ ಕಣ ಚೂರು..??
ತನ್ನ ಸೆರಗನ್ನು ಬಾಯಿಗಿಟ್ಟು
ಕಾವುಕೊಟ್ಟು ನನ್ನ ಕಣ್ಣಿಗೆ
ಒತ್ತಿ ಹಿತವಾಗಿ ಸವರಿದಳು
ಕಣ್ಣಗಲಿಸಿ ಊದಿದಳು...!!
ತಣ್ಣೀರಲಿ ತೊಳೆಯಲೇ ಎಂದೆಲ್ಲಾ
ಹುಲುಬಿದಳು..ತನ್ನ ಕಣ್ಣಿಗೇ
ಎನೋ ಬಿದ್ದಂತೆ
ನನ್ನ ಕಣ್ಣು
ತೇವವಾಗುವುದಕ್ಕೆ ಮೊದಲೇ
ಹನಿಗೂಡಿತ್ತು ಅವಳ ಕಣ್ಣು.
ಅವಳು ಮಮತೆಯ ಮಾತೆ.
ಅಪ್ಪ
ಕಂಡ ಇದನೆಲ್ಲ...
ಏನು ಮಾಡ್ಕೊಂಡ್ಯೋ..?
ಗಮನ ಇಟ್ಟು ಕೆಲ್ಸಮಾಡು
ಎಷ್ಟು ಸರ್ತಿ ಹೇಳಿಲ್ಲ ನಿನಗೆ??
ಸ್ವಲ್ಪ ನೀರು ಚಿಮುಕಿಸಿ
ಕನ್ನಡಿ ಒರೆಸೋದು ಬಿಟ್ಟು
ಊದಿದರೆ ಕಣ ಚೂರು
ಬರದೇ ಇರುತ್ಯೇ ಕಣ್ಣೀರು..?
ಏನು, ಹೇಗೆ ಯಾವಾಗ
ಮಾಡಬೇಕೆಂದು ಬದುಕ
ಕಲಿಸುವನೀತ
ನನ್ನ ಜನ್ಮದಾತ.
ಅಣ್ಣನೆಂದ
ಆತ್ರ ಇವನಿಗೆ, ನಾನೆಲ್ಲಿ
ಮೊದಲು ಕನ್ನಡಿ ತಗೋತೀನೋಂತ
ಯಾವುದನ್ನೂ ಸರಿಯಾಗಿ
ಮಾಡೊಲ್ಲಾಂತಾನೆ..
ಕೊಡು ನಾನು ಒರೆಸ್ಕೊಡ್ತೀನಿ
ಬಯ್ದು ಕಾಳಜಿ-ಪ್ರೀತಿ ತೋರಿಸಿದ್ದ
ನನ್ನ ಅಗ್ರಜ.
ಯಾಕೋ ಅಣ್ಣ
ನನ್ಗೆ ಹೇಳಿದ್ರೆ ಒರೆಸ್ಕೊಡ್ತಿರ್ಲಿಲ್ಲವೇ?
ಅಮ್ಮ ಬಿಡಮ್ಮ, ನಾನ್ನೋಡ್ತೀನಿ
ಅಣ್ಣನ ಕಣ್ಣಿಗೆ ನೀರ್ ಹಾಕ್ತೀನಿ..
ಅಂತಾಳೆ ಪ್ರೀತಿಯ ತಂಗಿ
ಮನೆಯಲ್ಲಿ ಎಲ್ಲರೂ ಪ್ರೀತಿಸುವವರೇ
ಆದರೆ ಒಬ್ಬೊಬ್ಬರದೂ
ಒಂದೊಂದು ತೆರನಾದ ಭಂಗಿ

12 comments:

  1. ಜಲನಯನ.....

    ಸಿಂಪ್ಲಿ ಸೂಪರ್... ಅಂದ್ರೆ ಇದು..!

    ಬಾಂಧವ್ಯದ ಬಂಧನಗಳೇ ಹೀಗೆ...

    ತುಂಬಾ ಚೆನ್ನಾಗಿದೆ..

    "ಯಾಕೋ ಅಣ್ಣ
    ನನ್ಗೆ ಹೇಳಿದ್ರೆ ಒರೆಸ್ಕೊಡ್ತಿರ್ಲಿಲ್ಲವೇ?
    ಅಮ್ಮ ಬಿಡಮ್ಮ, ನಾನ್ನೋಡ್ತೀನಿ
    ಅಣ್ಣನ ಕಣ್ಣಿಗೆ ನೀರ್ ಹಾಕ್ತೀನಿ..
    ಅಂತಾಳೆ ಪ್ರೀತಿಯ ತಂಗಿ
    ಮನೆಯಲ್ಲಿ ಎಲ್ಲರೂ ಪ್ರೀತಿಸುವವರೇ
    ಆದರೆ ಒಬ್ಬೊಬ್ಬರದೂ
    ಒಂದೊಂದು ತೆರನಾದ ಭಂಗಿ.."

    ಪ್ರತಿ ಸಾಲುಗಳು ಚೆನ್ನಾಗಿವೆ...
    ಇದನ್ನು ಓದಿದ ಮೇಲೆ..
    ಪಂಕಜ್ ಉದಾಸ್ ಅವರ "ಚಿಟ್ಟಿ ಆಯಿ ಹೇ"
    ಹಾಡು ನೆನಪಾಯಿತು...

    ತುಂಬಾ.... ತುಂಬಾ ಚೆನ್ನಾಗಿದೆ...

    ಅಭಿನಂದನೆಗಳು...

    ReplyDelete
  2. ಕುಟುಂಬದ ಎಲ್ಲ ಸದಸ್ಯರು ಬೇರೆ ಬೇರೆ ತರದ ಬಂಧನದಲ್ಲಿ ಬಂಧಿತರು.... ಆಯಾ ಬಾಂಧವ್ಯದ ಅರ್ಥವನ್ನರಿತು ಅದನ್ನು ಅನುಭವಿಸಿದಾಗಲೇ ನಮಗೆ ಸಾರ್ಥಕ್ಯದ ಅರಿವಾಗುವುದು.
    ತುಂಬಾ ಸರಳವಾದ ಮನ ಮುಟ್ಟುವಂತಹ ಕವನ. ಹೀಗೆ ಬರೆಯುತ್ತಾ ಇರಿ!!

    ನಿಮ್ಮ ಪ್ರೋತ್ಸಾಹಕ್ಕೆ ಥ್ಯಾಂಕ್ಸ್!! 'ಸುಮ್ನೇ' ಯ 'ಬಿಡಿಸುವಿಕೆ' ಚೆನ್ನಾಗಿದೆ :)

    ReplyDelete
  3. ಕುಟುಂಬದಲ್ಲಿಯ ಒಬ್ಬೊಬ್ಬರದು ಒಂದೊಂದು ತರಹದ ಪ್ರೀತಿ. ಈ ಸೂಕ್ಷ್ಮವನ್ನು
    ಚೆನ್ನಾಗಿ ವರ್ಣಿಸಿದ್ದೀರಿ. ನಿಮ್ಮ ಕುಟುಂಬದ ಫೋಟೋ ಚೆನ್ನಾಗಿದೆ. ಅಲ್ಲಿ ನೀವು ಯಾರು ಅಂತ ಗುರುತಿಸಲಾಗಲಿಲ್ಲ.

    ReplyDelete
  4. ಪ್ರಕಾಶ್, ತುಂಬಾ..ತುಂಬಾ..ತುಂಬಾ..ವಂದನೆಗಳು..
    ನಿಮ್ಮ ಮನ ತುಂಬಿದ ಮಾತಿಗೆ, ತಾಯಿ ತಂದೆಯರದು ಒಂದು ಪರಿಯಾದರೆ ಸಹ-ಜ ರದು ಮತ್ತೊಂದು ಪರಿಯಾದ ಪ್ರೀತಿ-ವಾತ್ಸಲ್ಯ....
    ನನಗೆ ನಿಲುಕಿದಂತೆ ಬರೆದೆ...ನಿಮಗೆ ಇಷ್ಟವಾಯಿತೆಂದು ತಿಳಿದು ಸಂತೋಷವಾಯಿತು...

    ReplyDelete
  5. ಸುಮನ ಮೇಡಂ...ಧನ್ಯವಾದಗಳು...ನಿಮ್ಮ ಅನಿಸಿಕೆಯ ಪ್ರಕಟಕ್ಕೆ...ಹೌದು ಚನ್ನಾಗಿ ಮೂಡಿ ಬರ್ತಾ ಇದೆ ನಿಮ್ಮ ಬ್ಲಾಗ್ ಮುಂದುವರೆಸಿ..

    ReplyDelete
  6. ಸುನಾಥ್ ಸರ್....ತಪ್ಪಿದಿರಿ ಸ್ವಲ್ಪ ನೀವು....ಅದು ವೆಬ್ ಚಿತ್ರ...!!! ಪೋಟೋ ಕೆಳಗಡೆಯೇ ಇದೆ ನೋಡಿ..!!! ಇಬ್ಬರು ಅಣ್ಣಂದಿರ ತಂಗಿಯ ಜೊತೆ ಅಪ್ಪ-ಅಮ್ಮ ಇರುವ ಚಿತ್ರ ಸಿಕ್ತು...ಅದ್ನೇ ಹಾಕ್ದೆ...ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

    ReplyDelete
  7. ಜಲನಯನ ಸರ್,

    ಭಾವನಾತ್ಮಕವಾದ ಸಂಭಂದಗಳ ಬಗ್ಗೆ ಮನತಟ್ಟುವ ಕವನ.
    ಒಂದು ಕುಟುಂಬದಲ್ಲಿ ಎಲ್ಲರನ್ನೂ ಸರಿಯಾಗಿ ಗಮನಿಸಿದರೆ...ಪ್ರತಿಯೊಬ್ಬರೂ ವಿಭಿನ್ನರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.. ಕುಟುಂಬದ ಫೋಟೋ ಕವನಕ್ಕೆ ತುಂಬಾ ಸೂಕ್ತವಾಗಿದೆ.

    ReplyDelete
  8. ನಿಜ ಶಿವು, ಕುಟುಂಬದಲ್ಲಿ ಒಬ್ಬೊಬ್ಬರದೂ ಒಂದೊಂದು ರೀತಿಯ ಬಾಂಧವ್ಯ ಬಂಧ, ಪ್ರತಿಕ್ರಿಯೆ, ಅಕ್ಕ-ತಂಗಿಯರ ನಡುವೆ, ಅಣ್ಣ-ತಮ್ಮಂದಿರ ಮಧ್ಯೆ, ಮಕ್ಕಳೊಂದಿಗೆ ತಂದೆ-ತಾಯಿ, ಅಜ್ಜ-ಅಜ್ಜಿ...ಇತ್ಯಾದಿ...ಕೆಲವು ಮನದ ಕದ ತಟ್ಟಿದ ಭಾವನೆಗಳನ್ನು ಬಿಂಬಿಸುವ ಪ್ರಯತ್ನ.

    ReplyDelete
  9. ಡಾಕ್ಟ್ರು ಸಾಹೇಬ್ರೆ,
    ಕವನ ಸೊಗಸಾಗಿ ಬಂದಿದೆ. ಈ ಕಾಲದಲ್ಲಿ ಎಲ್ಲಾ ಒಬ್ಬರೆ ಮಕ್ಕಳು ಭಾಂದವ್ಯ ಮರೆಯಾಗಿ ಹೋಗ್ತ ಇದೆ ಅನಿಸುತ್ತೆ ಅಲ್ವ...

    ReplyDelete
  10. ಕುಟುಂಬ ಕವನ ಚೆನ್ನಾಗಿದೆ ಸರ್... ಈ ಬಾಂಧವ್ಯಗಳೇ ಹೀಗೆ ಒಂದಕ್ಕೊಂದು ಬೆಸುಗೆ... ಯಾಕೊ ಈಗೀಗ ಈ ಮದುವೆಯಾಗಿ ಮಡದಿ ಬಂದಾದ ಮೇಲೆ ಈ ಬಂಧಗಳು ಹೀಗೇ ಉಳಿಯುತ್ತಿಲ್ಲ ಅದೇ ಬೇಜಾರು

    ReplyDelete
  11. ಹಾಯ್ ರೀ
    ನಿಮ್ಮ ಕವಿತೆ ತುಂಭಾ ಚೆನ್ನಾಗಿದೆರಿ

    ReplyDelete
  12. ಜಲನಯನರೆ,
    ಎಲ್ಲರ ಪ್ರೀತಿಯ ರೀತಿಯನ್ನು ಸೊಗಸಾಗಿ ಬಣ್ಣಿಸಿದ್ದೀರಿ ! ಈ ಪ್ರೀತಿ ಸದಾ ಹೀಗೆಯೇ ನಿಮ್ಮೊಂದಿಗಿರಲಿ !
    ಸರಳವಾದ , ಸುಂದರ ಕವಿತೆ. ಇಷ್ಟವಾಯ್ತು .

    ReplyDelete