Friday, August 21, 2009

ಹಂದಿಜ್ವರ- ಮಂದಿಗ್ಯಾಕೆ...?? ಭೇತಾಳ ಉವಾಚ





ಶತ ವಿಕ್ರಮನ ವಿಕ್ರಮಗಳು ಏಕೋ ..ಸ್ವಲ್ಪ ಢೀಲಾಗಿವೆ ಎನಿಸುವಾಗಲೇ ಹಂದಿಜ್ವರ ಎಂಬ ಭೇತಾಳ ಆಡಳಿತಾರೂಢರ ಬೆನ್ನು ಹತ್ತಿರುವುದು ಶತ ವಿಕ್ರಮ ಚುರುಕಾಗಲು ಕಾರಣವಾಗಿರಬಹುದು. ಅದಕ್ಕೋ ಏನೋ...ಗಂಭೀರ ಮತ್ತು ಸಿಟ್ಟಿನ ಮುಖಭಾವಹೊತ್ತ ಶತವಿಕ್ರಮ ನಿಮ್ಹಾನ್ಸ್ ನ ಹೊರ ವಲಯದ ಬೋಗನ್-ವಿಲ್ಲ ಕ್ಕೆ ನೇತುಬಿದ್ದು ತನ್ನ ಹತ್ತಿರ ಮೂಗಿಗೆ ಬಟ್ಟೆ, ಮುಸುಕು, ಮಾಸ್ಕ್, ಟಿಸ್ಯು ಪೇಪರ್ ಹೀಗೆ ಯಾವುದೋ ಒಂದನ್ನು ಅಡ್ಡವಿಟ್ಟು ಬರುವವರ ನಿರೀಕ್ಷೆಯಲ್ಲಿದ್ದ ಎಚ್-೧-ಎನ್-೧ ಭೇತಾಳನನ್ನು ಜಗ್ಗದೇ ಹೆದರದೇ, ಮೂಗಿಗೆ ಕೈಯನ್ನು ಅಡ್ಡವಿಟ್ಟುಕೊಳ್ಳದೇ ಬಂದು ಎತ್ತಿ ಹೆಗಲಿಗೇರಿಸಿ ರಸ್ತೆಯ ಸಿಗ್ನಲ್ ಅನ್ನೂ ಗಮನಿಸಿದೇ ಹೊರಡುವ ಆಂಬುಲೆನ್ಸ್ ವ್ಯಾನಿನಂತೆ ವಿಲ್ಸನ್ ಗಾರ್ಡನ್ ನ ವಿದ್ಯುತ್ ಚಿತಾಗಾರದತ್ತ ಹೊರಟನು. ಎಚ್-೧ಎನ್-೧ ಮಾತನಾಡತೊಡಗಿತು.


“ನಾನು ಎಂತಹ ವಿಷಾಣು ಎಂದು ತಿಳಿದಿದ್ದರೂ.. ನಿನ್ನದು ಸಾಹಸ ಎನ್ನಲೋ? ಶುದ್ಧ ಮೊಂಡುತನ ಎನ್ನಲೋ?? ಅರ್ಥವಾಗುತ್ತಿಲ್ಲ. ಆದರೂ ನಿನ್ನ ಈ ಧೈರ್ಯವನ್ನು ಮೆಚ್ಚದೇ ಇರಲಾರೆ. ನಿನ್ನಷ್ಟೇ ನಿಷ್ಠೆ..ಏಕಾಗ್ರತೆ..ಸಾಧಿಸಿ ತೋರುವ ಛಲ ನಮ್ಮ ಆಡಳಿತಾರೂಢರಲ್ಲಿದ್ದಿದ್ದರೆ ನಾನು ಮಹಾ ಮಾರಿ ಆಗೋ ಲಕ್ಷಣ ತೋರ್ತಾ ಇರ್ಲಿಲ್ಲ. ನಿಜಕ್ಕೂ ನಿನ್ನ ಪ್ರಯತ್ನ ಅಭಿನಂದನಾರ್ಹ. ನಿನ್ನ ಈ ಪ್ರಯತ್ನಕ್ಕೆ ಸರ್ಕಾರದ ಜೊತೆ ಅನಿವಾರ್ಯ, ಸದ್ಯಕ್ಕೆ ಸರ್ಕಾರಕ್ಕೆ ಉಪಚುನಾವಣೆ ಮುಖ್ಯ.. ಅದೇನೇ ಇರಲಿ, ನಿನ್ನ ವ್ಯರ್ಥ ಪ್ರಯತ್ನದ ಹಾದಿಯ ಶ್ರಮದ ಅರಿವಾಗದಂತೆ ನನ್ನ ಜಾತಿಯ ಕಥೆಯನ್ನು ಹೇಳುತ್ತೇನೆ ಕೇಳು” ಎಂದು ತನ್ನ ಕಥೆಯನ್ನು ಹೇಳಲಾರಂಭಿಸಿತು.


ನನ್ನ ಮೂಲ -ಫ್ಲೂ ಕಾರಕ ಅತಿಸೂಕ್ಷ್ಮಜೀವಾಣು (ವೈರಸ್). ಇವು ಬ್ಯಾಕ್ಟೀರಿಯಾಗಿಂತ (ಎರಡು ಮೈಕ್ರಾನ್ ಗಿಂತ ಅಂದರೆ ೦.೦೦೨ ಮಿ.ಮೀಗಿಂತ) ಚಿಕ್ಕವು. ಅತಿಸೂಕ್ಷ್ಮಾಣು ಜೀವಿಗಳಲ್ಲಿ ಎರಡು ವಿಧ - ಡಿ.ಎನ್.ಎ. ವೈರಸ್ ಮತ್ತು ಆರ್.ಎನ್.ಎ. ವೈರಸ್. ವೈರಸ್ ತನ್ನ ವಂಶಾಭಿವೃದ್ಧಿಗೆ ಮತ್ತೊಂದು ಜೀವಕೋಶವನ್ನು ಅವಲಂಬಿಸುತ್ತವೆ. ಡಿ.ಎನ್.ಎ. ವೈರಸ್ ತನ್ನ ವಂಶಾಭಿವೃದ್ಧಿಗೆ ಬೇಕಾದ ಎಲ್ಲ ಮಾಹಿತಿಯನ್ನುಳ್ಳ ಡಿ.ಎನ್.ಎ. ಎಂಬ ರಾಸಾಯನಿಕ ತತ್ವವನ್ನು ಆಶ್ರಯದಾತ ಜೀವಕೋಶದಲ್ಲಿ (ಆಜೀಕೋ) ಅಳವಡಿಸಿ ತನ್ನ ಪೂರ್ಣ ರೂಪಕ್ಕೆ ಅವಶ್ಯವಾದ ಪ್ರೋಟೀನುಗಳನ್ನು ಆಜೀಕೋ ಉತ್ಪಾದಿಸುವಂತೆ ಮಾಡಿ ಪೂರ್ಣಗೊಂಡು ಆಜೀಕೋ ದಿಂದ ಹೊರಬರುತ್ತದೆ, ಇನ್ನೊಂದು ಆಜೀಕೋ ಮತ್ತೊಂದು ಹೀಗೆಯೇ ಆ ಜೀವಿಯಿಂದ ಮತ್ತೊಂದು ಜೀವಿ ಹೀಗೆ ಹರಡುತ್ತದೆ. ಈ ಪ್ರಕ್ರಿಯೆಯಲ್ಲಿ ಆಜೀಕೋ ಗೆ ಅಥವಾ ಅದನ್ನು ಹೊಂದಿದ ಜೀವಿಯ ಅಸಹನೆ, ಅನಾರೋಗ್ಯ ಕೊನೆಗೆ ಅವಸಾನಕ್ಕೆ ಕಾರಣವಾಗುತ್ತದೆ. ಇನ್ನು ಆರ್.ಎನ್.ಎ. ವೈರಸ್ ಗಳು ಮೊದಲಿಗೆ ಡಿ.ಎನ್.ಎ. ಆಗಿ ರೂಪಾಂತರಗೊಂಡು ನಂತರ ತನ್ನ ವಂಶಾಭಿವೃದ್ಧಿಯನ್ನು ಮುಂದುವರೆಸುತ್ತದೆ. ಆರ್.ಎನ್.ಎ ವೈರಸ್ ನ ರೂಪಾಂತರದ ಸಮಯದಲ್ಲಿ ಆಗುವ ಕೆಲವು ಸ್ವಾಭಾವಿಕ ತಪ್ಪುಗಳು ಹೊಸ ಆರ್.ಎನ್.ಎ. ವೈರಸ್ ನ ಹುಟ್ಟಿಗೆ ಕಾರಣವಾಗಬಹುದು. ಫ್ಲೂ ಕಾರಕ ವೈರಸ್ ಗಳು ಆರ್.ಎನ್.ಎ ವೈರಸ್ ಗಳಾಗಿರುವುದರಿಂದ ರೂಪಾಂತರದ ಕಾರಣ ಮಾನವ ಮತ್ತು ಇತರ ಜೀವಿಗಳ ಸ್ವಾಭಾವಿಕ ರೋಗನಿರೋಧಕ ಗುಣಕ್ಕೆ ಸವಾಲಾಗಿ ಅದನ್ನು ತಪ್ಪುದಾರಿಗೆಳೆದು ರೋಗಹರಡುವಲ್ಲಿ ಯಶಸ್ವೀ ಎನಿಸುತ್ತವೆ. ಪದೇ ಪದೇ ಮಾರ್ಪಾಡುಗಳಿಗೆ ಈಡಾಗುವ ಆರ್.ಎನ್.ಎ. ವೈರಸ್ ಈ ಗುಣದ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದೆ. ಇದೇ ಕಾರಣಕ್ಕೆ ಲಸಿಕೆಯನ್ನೂ ಅಭಿವೃದ್ಧಿಪಡಿಸಲಾಗುತ್ತಿಲ್ಲ ಎನ್ನಬಹುದು.
ಇನ್ನು...ನನ್ನ ಅತಿ ಹೊಸ ರೂಪದ ಫಲಿತವೇ ಹಂದಿಜ್ವರದ ವೈರಸ್..ಎಚ್-೧-ಎನ್-೧. ಇದು ನೀವು ಮನುಷ್ಯರು ಕೊಟ್ಟ ಹೆಸರೇ...ಹಂದಿಗಳಲ್ಲಿ ಬರುತ್ತಿದ್ದ ಫ್ಲೂ ಮನುಷ್ಯರಿಗೆ ಬಂದದ್ದೇ ಈ ರೂಪಕ್ಕೆ ಕಾರಣ. ಇನ್ ಫ್ಲುಯೆಂಜಾ ಎ, ಬಿ ಮತ್ತು ಸಿ ಎಂದು ಮೂರು ವಿಧಗಳು. ಎ ಮೂಲತಃ ಹಂದಿಗಳಲ್ಲಿ ಕಂಡುಬರುವುದು, ಬಿ ಹಂದಿಗಳಲ್ಲಿ ಇಲ್ಲದ್ದು ಮತ್ತು ಸಿ ಹಂದಿಗಳಲ್ಲಿ ಅಪರೂಪದ್ದು. ೧೯೧೮ ರಲ್ಲಿ ಹಂದಿ ಮತ್ತು ಮಾನವನಲ್ಲಿ ಒಟ್ಟಿಗೇ ಕಂಡುಬಂದ ಇನ್ ಫ್ಲುಯೆಂಜಾ ಎ ಜ್ವರ ಬಹುಶಃ ಇಂದಿನ ಹಂದಿ ಜ್ವರದ ಮೂಲ ಎನ್ನಬಹುದು.ನನ್ನ ಹೊಸ ರೂಪದ ಮೂಲ ಮೆಕ್ಸಿಕೋ ಮತ್ತು ಅಮೇರಿಕಾ.. ಹಂದಿಗಳು ಹಕ್ಕಿ ಜ್ವರದ ವೈರಸ್ ಮತ್ತು ಮಾನವ ಇನ್ ಫ್ಲೂಯೆಂಜಾ ವೈರಸ್ ಎರಡನ್ನೂ ತನ್ನಲ್ಲಿ ಬೆಳೆಸುವ ಮತ್ತು ತನ್ನ ವೈರಸ್ ಜೊತೆಗೆ ಅಧಿಕ ರೂಪಾಂತರಕ್ಕೆ ಕಾರಣವಾಗುವ ಸಾಧ್ಯತೆಗಳನ್ನು ೧೯೧೮ ರ ನಂತರದ ಘಟನಾವಳಿಗಳು ಧೃಢಪಡಿಸುತ್ತವೆ...!!! ಅದೇ ಕಾರಣಕ್ಕೆ ಹಂದಿಗಳ ರಕ್ತದಲ್ಲಿ ಈ ವಿವಿಧ ವೈರಸ್ ಗಳ ವಿರುದ್ಧದ ಪ್ರತಿವಿಷವಸ್ತು (ಆಂಟಿಬಾಡಿ) ಕಂಡುಬಂದಿದೆ. ಗುಂಪುಪ್ರತಿರೋಧಕತೆ (ಹರ್ಡ್ ಇಮ್ಯುನಿಟಿ) ಇಂತಹ ರೋಗಗಳಿಗೆ ಉತ್ತಮ ಸ್ವಾಭಾವಿಕ ಪರಿಹಾರ.


ನನ್ನ ಹರಡುವಿಕೆಯನ್ನು ತಡೆಯುವುದು, ನನ್ನ ಅಸ್ತಿತ್ವವನ್ನು ಅತಿಶೀಘ್ರ ಪತ್ತೆಹಚ್ಚುವುದು, ಸೂಕ್ತ ಚಿಕಿತ್ಸೆಯನ್ನು ಅತಿ ತ್ವರಿತ ಅವಧಿಯೊಳಗೆ ನೀಡುವುದು ನನ್ನಿಂದಾಗುವ ರೋಗ ಮತ್ತು ಜೀವಹಾನಿಯನ್ನು ತಡೆಯಲು ಬಹುಮುಖ್ಯ ಅಂಶಗಳು.
ಹೀಗನ್ನುತ್ತಿರುವಂತೆ..ಭೇತಾಳ ತನ್ನ ತಪ್ಪಿನ ಅರಿವಾಗಿ ಅವಡುಗಚ್ಚಿ ಸುಮ್ಮನಾಯಿತು...ಆದರೆ ಆ ವೇಳೆಗಾಗಲೇ ಮಹತ್ವ ಮಾಹಿತಿಯನ್ನು ಶತವಿಕ್ರನಿಗೆ ನೀಡಿತ್ತು..ಮುಗುಳ್ನಕ್ಕ ಶತ ವಿಕ್ರಮ ..”ಅಯ್ಯೋ ಮಂಕೇ ನಮ್ಮ ಸಂಶೋಧಕರು ಇದನ್ನೆಲ್ಲ ಅರಿತಿದ್ದಾರೆ ಆದ್ರೆ ನಮ್ಮ ರಾಜಕಾರಣಿಗಳು ತಮ್ಮ ಆಪ್ತರಿಗೆ ಈ ರೋಗ ಬರುವವರೆಗೂ ಎಚ್ಚರಗೊಳ್ಳುವುದಿಲ್ಲ”
ಎನ್ನುತ್ತಿರುವಂತೆಯೇ...”ಮೌನ ಮುರಿದು ನಮ್ಮ ಅಗ್ರೀಮೆಂಟ್ ಮುರಿದಿದ್ದೀಯಾ...ಅಗೋ ಅಲ್ಲೊಬ್ಬ ಬಕರಾ ಬರ್ತಿದ್ದಾನೆ ಅವನಲ್ಲಿ ಎಚ್-೧-ಎನ್-೧ ಬೀಜ ಬಿತ್ತುತ್ತೀನಿ..ಸಾಧ್ಯ ಅದ್ರೆ ಅವನ್ನ ಉಳಿಸ್ಕೋ” ಎನ್ನುತ್ತಾ ..ಕರ್ಕಶವಾಗಿ ಕೂಗುತ್ತಾ ಹಾರಿಹೋಯಿತು.
ಶತ ವಿಕ್ರಮ ಮಂತ್ರಿಯಾಗಿದ್ದ ತನ್ನ ಮಾವ ಕಂತ್ರಿ ವಿಕ್ಕಣ್ಣನ ಮನೆಕಡೆ ಹೆಜ್ಜೆಹಾಕಿದ ಆ ಹೊಸ -ಬಕರಾ- ನ ಮತ್ತು ಅಂತಹವರನ್ನು ಉಳಿಸಲು.

16 comments:

  1. ವಾಹ್!!!!!
    ಎಂಥಹ ಮಾಹಿತಿ ಭೇತಾಳನ ಬಾಯಲ್ಲಿ ಹೇಳಿಸಿದ್ದೀರಾ!!!!!
    ಬಹಳ ಚೆನ್ನಾಗಿದೆ ....ಒಳ್ಳೆ ಉಪಯುಕ್ತ ಲೇಖನ !!!!
    ಹೇಗಿತ್ತು ಕರುನಾಡು? ಬ್ಲಾಗ್ ನೋಡದೆ ಚಡಪಡಿಸದ್ರ....?
    ರಮಾದಾನ್ ಕರೀಂ....
    ಬರೀತಾ ಇರಿ.......

    ReplyDelete
  2. ತುಂಬಾ ಉಪಯುಕ್ತ ಮಾಹಿತಿ layman ಗೂ ಅರ್ಥ ಆಗುವ ರೀತಿ.. ಚೆನ್ನಾಗಿದೆ ಗುರುಗಳೇ!

    ಒಂದು ಸಂಶಯ.. antibody ಹಂದಿಗಳಲ್ಲಿ ಇರುವುದಾದರೆ ಅದನ್ನು isolate ಮಾಡಬಹುದಲ್ಲವಾ? ಅದನ್ನು immunisation ಗೆ ಬಳಸಬಹುದಲ್ಲವಾ?

    ReplyDelete
  3. ಸವಿಗನಸು ಮತ್ತೊಮ್ಮೆ ಮೂಡಿದ್ದಕ್ಕೆ ಬೇರೆಕಾರಣವೇ ಇದೆ...ಹಹಹ
    ನಿಮ್ಮ ಪ್ರತಿಕ್ರಿಯೆ ನಮಗೆ ದಾರಿದೀಪ ಗುರೂ
    ಇದಕ್ಕೆ ನನ್ನ ಧನ್ಯವಾದ.

    ReplyDelete
  4. ರೂಪಶ್ರೀ ಲೇಖನವನ್ನು ಕೂಲಂಕುಶವಾಗಿ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ...
    ನಿಮ್ಮ ಮಾತು ನಿಜ..ಈ ಆಂಟಿಬಾಡಿಗಳು ಹಂದಿಗಳಲ್ಲಿ ಬಂದಿರುವುದು ಅವುಗಳು ವೈರಸ್ ಗಳನ್ನು ಎದುರಿಸಿ/ಆಶ್ರಯನೀಡಿದ್ದರಿಂದ ಇದೇ ಹರ್ಡ್ ಇಮ್ಯುನಿಟಿಯ ವಿಶೇಷತೆ. ಇದೇ ಸಿದ್ದಾಂತ ಹಾವಿನ ವಿಷವನ್ನು ಹತ್ತಿಕ್ಕಲು ಉಪಯೋಗಿಸಲಾಗುತ್ತದೆ ಹಾವಿನ ಕಡಿತಕ್ಕೆ ಒಳಗಾದವರಲ್ಲಿ. ಇದನ್ನು ವಿಶೇಷ ರೀತಿಯಲ್ಲಿ ಕುದುರೆಗಳಲ್ಲಿ ಉತ್ಪಾದಿಸಲಾಗುತ್ತದೆ. ಈ ಆಂಟಿಬಾಡಿಗಳ ಸಾಂದ್ರತೆಯು ಘನಿಷ್ಠಮಟ್ಟಕ್ಕೆ ಏರಿದಾಗ ಪ್ರತ್ಯೇಕಿಸಿ ಕಾದಿಡಲಾಗುತ್ತದೆ. ಈ ವಿಧಾನವನ್ನು ಪ್ಯಾಸಿವ್ ಇಮ್ಯುನೈಜೇಶನ್ ಎಂದು ಕರೆಯಲಾಗುತ್ತೆ. ಆದರೆ ಇದು ಕೆಲವೇ ಮಂದಿ ಹಾವಿನ ಕಡಿತದಿಂದ ಬಳಲುವಾಗ ಉಪಯೋಗಿಸಲಾಗುತ್ತೆ..ಹಂದಿಜ್ವರ ಸಾಂಕ್ರಾಮಿಕ ಇಲ್ಲಿ ಪ್ಯಾ.ಇ. ವಿಧಾನ ಸೂಕ್ತವಲ್ಲ ಇಲ್ಲಿ ಆಕ್ಟೀವ್ ಇಮ್ಯುನೈಜೇಶನ್ ಹೆಚ್ಚು ಸೂಕ್ತ ಮತ್ತು ಪರಿಣಾಮಕಾರಿ. ಅದಕ್ಕಾಗಿಯೇ ಲಸಿಕೆ (vaccine) ತಯಾರಿಕೆಯತ್ತ ವೈದ್ಯಲೋಕ ಕಾರ್ಯಪ್ರವೃತ್ತಗೊಂಡಿದೆ. ನಿಮ್ಮ ಪ್ರಶ್ನೆಗೆ ನನ್ನ ಉತ್ತರ ಸರಿಯೆನಿಸಿತೇ..?..ತಿಳಿಸಿ.

    ReplyDelete
  5. ಜಲನಯನ ಸರ್,

    ಬೇತಾಳನನ್ನೇ ಹಂದಿಜ್ವರವನ್ನಾಗಿ ಮಾಡಿ ಅದರ ಬಾಯಿಂದಲೇ ಅದರ ಉಗಮ, ಬೆಳವಣಿಗೆ ಹರಡುವಿಕೆ, ನಂತರ ಆದನ್ನು ನಂದಿಸುವ ಉಪಾಯವನ್ನು ಹೇಳಿಸಿದ್ದೀರಿ. ಮತ್ತು ಇದರಿಂದ ಪರೋಕ್ಷವಾಗಿ ನಮಗೂ ಇದರ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಿದ್ದೀರಿ....
    ಇಷ್ಟಕ್ಕೂ ಹಂದಿಜ್ವರದ ಬಗ್ಗೆ ಸರಿಯಾಗಿ ತಿಳಿದುಕೊಂಡಿದ್ದು ನಿಮ್ಮ ಈ ಲೇಖನದಿಂದಲೇ....ಅಷ್ಟರ ಮಟ್ಟಿಗೆ ನಿಮ್ಮ ಲೇಖನ ಸಾರ್ಥಕವಾದಂತೆ ಅನ್ನುವುದು ನನ್ನ ಭಾವನೆ...

    ಧನ್ಯವಾದಗಳು.

    ReplyDelete
  6. ಶಿವು ಬೆಂಗಳೂರಿಗೆ ಬಂದೂ ನಿಮ್ಮನ್ನು ಭೇಟಿಯಾಗಲಾಗಲಿಲ್ಲ ಆದರೆ ಹಂದಿ ಜ್ವರದ ಉಗಮ ಕಂಡೆ ಅಲ್ಲಿ. ಮೊದಲ ಬಲಿ lady teacher ಗೆ ವೈದ್ಯಕೀಯ ಸೂಕ್ತ ಚಿಕಿತ್ಸೆ ಸಿಕ್ಕಿದ್ದು ತಡವಾಯ್ತು ಎಂದೇ ನನ್ನ ಅನಿಸಿಕೆ. ನಿಮ್ಮ ಪ್ರತಿಕ್ರಿಯೆಗೆ ಮತ್ತು ಲೇಖನದ ಮೌಲ್ಯದ ಬಗ್ಗೆ ನಿಮ್ಮ ಅನಿಸಿಕೆಗೆ ನನ್ನ ಧನ್ಯವಾದ.

    ReplyDelete
  7. ಹಂದಿ ಜ್ವರದ ಬಗ್ಗೆ ಪೂರ ಮಾಹಿತಿಯನ್ನು, ಸರ್ಕಾರದ ನಿಲುವಿಗೆ ಚಾಟಿ ಏಟಿನ ಮಾತಿನ ವರಸೆ ನಿಮ್ಮ ಬರಹದಲಿ ಮೂಡಿ ಬಂದಿರುವ ಪರಿ ಸೊಗಸಾಗಿದೆ......ಸಹಯಾತ್ರಿ.

    ReplyDelete
  8. ಈಶಕುಮಾರರಿಗೆ ಜಲನಯನಕ್ಕೆ ಸ್ವಾಗತ
    ನಿಮ್ಮ ಮಾತು ದಿಟ, ಸರ್ಕಾರದ ಪ್ರಾತಿನಿಧ್ಯತೆ ಪಡೆಯಲು ಇನ್ನೆಷ್ಟು ಬಲಿಯಾಗಬೇಕೋ ತಿಳಿಯದು, ಎಚ್ಚೆತ್ತು ಕೊಳ್ಳುವ ವೇಳೆಗೆ ಸ್ವಾಭಾವಿಕವಾಗಿ ರೋನಿಶ ಜನರಲ್ಲಿ ಬೆಳೆದಿದ್ದು ರೋಗ ಇಳಿಮುಖವಾಗಿರುತ್ತೆ ಇದನ್ನೇ ತಮ್ಮ ಚಾಕಚಕ್ಯತೆಯೆಂದು ಸರ್ಕಾರ ಕೊಚ್ಚಿಕೊಂಡು ಮೆರೆಯುವುದರೆ ಆಶ್ಚರ್ಯವಿಲ್ಲ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

    ReplyDelete
  9. ಜಲನಯನ ಸರ್...

    ಬರಹದ ಕ್ರಿಯೇಟಿವಿಟಿ ತು೦ಬಾ ಇಷ್ಟ ಆಯಿತು.... ಮಾಹಿತಿಯೂ ತು೦ಬಾ ಉಪಕಾರಿಯಾಗಿದೆ.... ನಿಜ ಹೇಳಬೇಕೆ೦ದರೆ ನನಗೆ ಹ೦ದಿಜ್ವರದ ಬಗ್ಗೆ ಅಷ್ಟೊ೦ದು ಗೊತ್ತಿರಲೇ ಇಲ್ಲ... ದಿನಾ ಹತ್ತಾರು ಮೇಲ್ಸ್ ಬರುತ್ತೆ.... ಅದಕ್ಕೆ ಅದನ್ನು ಓದುವ ಗೋಜಿಗೆ ಹೋಗಿರಲಿಲ್ಲ...ಈಗ ಸರಿಯಾಗಿ ತಿಳಿದುಕೊ೦ಡೆ....

    ದೇವರೇ ನನಗೆ ಹ೦ದಿಜ್ವರ ಬರದಿರಲಪ್ಪ :)

    ReplyDelete
  10. ಸುಧೇಶ್ ಇನ್ನೊಂದು ವಿಷಯ ಎಲ್ಲರೂ ಮರೆತಂತೆ ಕಾಣುತ್ತೆ ಅಥವಾ ಇದು ಅಷ್ಟು ಮಹತ್ವದ್ದಲ್ಲ ಎನಿಸಿರಬೇಕು. ಆದರೆ ರೋಗ ಶಾಸ್ತ್ರವನ್ನು ಕೂಲಂಕುಶವಾಗಿ ತಿಳಿದುಕೊಳ್ಳುವ ಆಸಕ್ತಿಯಿರುವ ನನಗೆ ತಿಳಿದ ವಿಷಯ ಹಂಚಿಕೊಳ್ಳುತ್ತಿದ್ದೇನೆ. ಇಲ್ಲಿ ಜ್ವರ ಬಂದು ಲಕ್ಷಣ ಕಂದರೆ ಮಾತ್ರ ಹಂದಿ ಜ್ವರದ ವೈರಸ್ ನಮ್ಮಲ್ಲಿಲ್ಲ ಎಂದಲ್ಲ. ಇದನ್ನು sub-clinical and un noticeablle infection ಎನ್ನುತ್ತೇವೆ. ಇದು ಆದರೆ ಒಳ್ಳೆಯದು ಇದರಿಂದ ನಮ್ಮಲ್ಲಿ ಕ್ರಿಯಾಶೀಲ ರೋಗ ನಿರೋಧಕ ಶಕ್ತಿ (ಕ್ರಿರೋನಿಶ) ಬರುತ್ತದೆ. ಇಂತಹವರಿಂದ ವೈರಸ್ ಬೇರೆಯವರಿಗೆ ತಗುಲಿದರೆ ಬಹುಪಾಲು ಅವರಲ್ಲಿ ರೋಗದ ಲಕ್ಷಣಗಳು ಕಾಣಲಿಕ್ಕಿಲ್ಲ, ಇದನ್ನೇ ಹರ್ಡ್ ಇಮ್ಯುನಿಟಿ ಎಂದೂ ಕರೆಯಲಾಗುತ್ತೆ. ಹಾಗಾಗಿ ಇದು ಒಂದು ರೀತಿ ಒಳ್ಳೆಯದೇ.

    ReplyDelete
  11. ಜಲನಯನ ಸರ್....

    ಮಾಹಿತಿಗಾಗಿ ಧನ್ಯವಾದಗಳು...

    ನನಗೆ ಬಿಟ್ಟು ಬಿಟ್ಟು ಜ್ವರ ಬ೦ದು ಕೆಮ್ಮು ಕೂಡ ಇತ್ತು... ಮನೆಯವರೆಲ್ಲಾ ಹ೦ದಿಜ್ವರವೇ ಇರಬೇಕೆ೦ದು ಭಯ ಪಟ್ಟಿದ್ದರು.... ಈಗ ಜ್ವರ ಇಲ್ಲ.... ಕೆಮ್ಮು ಮಾತ್ರ ಸ್ವಲ್ಪ.... ಡಾಕ್ಟರ್ ಗೆ ತೋರಿಸಿದಾಗ ಅವರು ಹ೦ದಿಜ್ವರದ ಲಕ್ಷಣಗಳ ಬಗ್ಗೆ ವಿಚಾರಿಸಿದರು.... ಸಿರಪ್ ಬರೆದುಕೊಟ್ಟಿದ್ದಾರೆ...
    ಯಾಕೆ ಇಷ್ಟೆಲ್ಲಾ ಹೇಳಿದೆ ಎ೦ದರೆ ನನಗೆ ಹ೦ದಿಜ್ವರದ ಬಗ್ಗೆ ಏನೂ ಮಾಹಿತಿ ಗೊತ್ತಿರಲಿಲ್ಲ.... ಅದರಿ೦ದ ವಿನಾಕಾರಣ ಭಯ ಪಡುವ ಹಾಗಾಯಿತು... ಈಗ ನಿಮ್ಮಿ೦ದ ಈ ಜ್ವರದ ಮಾಹಿತಿ ತಿಳಿದು ತು೦ಬಾ ಸ೦ತೋಷವಾಯಿತು...

    ReplyDelete
  12. ಸುಧೇಶ್ ನಿಮ್ಮಷ್ಟೇ ಆಸಕ್ತಿ ಎಲ್ಲರೂ ತೋರಿದರೆ ನಮ್ಮಲ್ಲಿರುವ ಮೌಢ್ಯವನ್ನು ಹೋಗಲಾಡಿಸಬಹುದು. ನಿಮ್ಮ ಈ ಮಾಮೂಲಿ ಜ್ವರ ಮತ್ತು ನೆಗಡಿ ಬಹುಬೇಗ ಉಪಶಮನವಾಗಲಿ ಎಂದಿ ಹಾರೈಸುವ ನಿಮ್ಮ ಸ್ನೇಹಿತ

    ReplyDelete
  13. ಉಪಯುಕ್ತ ಮಾಹಿತಿಗೆ ಧನ್ಯಾದಗಳು ಸರ್

    ReplyDelete
  14. ಮೂರ್ತಿಯವರಿಗೆ ಮನೆಗೆ ಬಂದುದಕ್ಕೆ ಮತ್ತು ಪ್ರೋತ್ಸಾಹದ ಎರಡು ಮಾತಿಗೆ ಧನ್ಯವಾದಗಳು.

    ReplyDelete
  15. ಜಲ ನಯನ ಸರ್,

    ವಿಕ್ರಮ-ಬೇತಾಳದ ಕಥೆ ಮೂಲಕ ಹಂದಿ ಜ್ವರದ ಬಗ್ಗೆ ಮತ್ತು ಅದಕ್ಕೆ ಕಾರಣವಾದ ಹೆಚ್ 1ಎನ್ 1 ವೈರಸ್ ಬಗ್ಗೆ ತುಂಬಾ ವಿವರವಾದ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ, ಧನ್ಯವಾದಗಳು.

    - ಉಮೇಶ್

    ReplyDelete
  16. Thank you Umesh
    ನನ್ನ ಬ್ಲಾಗಿಗೆ ಬಂದಿರಿ ಪ್ರತಿಕ್ರಿಯಿಸಿದಿರಿ ಧನ್ಯವಾದ. ಇದು ಅಂತಹ ಹೆದರಬೇಕಾದ ಮಹಾ ಮಾರಿ ಅಲ್ಲದಿದ್ದರೂ. ಮಾರಿಯಂತೂ ..ಹೌದು ತಾನೇ..?? ಅದ್ಕ್ಕೇ ಜನರಲ್ಲಿ ಜಾಗೃತಿಯ ಪ್ರಯತ್ನ ..

    ReplyDelete