Saturday, October 8, 2011

ಭಾನುವಾರದ - ಕಚಗುಳಿ

ಜಯತು ಜಯ - ಎಂಕ್ಟೇಸಾ
"ಇದೇನಪ್ಪಾ ಮೀನಿನ ರೋಗ ನಿವಾರಣೆಗೆ ಮೀನಿನ ಡಾಕ್ಟರು ವೆಂಕಟೇಶನ ಜಪ ಹೊರಡಿಸ್ತಾ ಇದ್ದಾರಾ ಮೀನಿನ ಬಾಯಿಂದ...!!!" ಅಂದ್ಕೊಂಡ್ರಾ..?? ಅಯ್ಯೋ ಇಲ್ಲಾರೀ... ನಮ್ಮ ಪಕ್ಕು ಮಾಮನ ಪ್ರಭಾವ ಇದು..., ಎಂಕ್ಟೇಸಾ!?...ಪಕ್ಕೂ ಮಾಮಾ??.....
ಬ್ಯಾಡ್ವೇ ಬ್ಯಾಡ ಕನ್ ಪೂಸನ್ನು....ಹಹಹ. 
ಬಂದೇ ಬಿಡ್ತೀನಿ ವಿಷಯಕ್ಕೆ.

ಶುಕ್ರವಾರ ನನಗೆ ರಜಾ...ಹಾಗಾಗಿ ನಮಾಜ್ ಗೆ ಮುಂಚೆ ಚಾಟಲ್ಲಿ ನಮ್ಮ ಪಕ್ಕು ಮಾಮನ ಭೇಟಿ ಆಯ್ತು, ಪ್ರೇಯರ್ ಗೆ ಮುಂಚೆ. ಹಾಗೇ ಲೋಕಾಭಿರಾಮ ಚಾಟ್ ಆಗ್ತಿದ್ದಾಗ...ನನಗೆ ಅನಾಯಾಸವಾಗಿ ನೆನಪಿಗೆ ಬಂದಿದ್ದು ಈ ಸುಲಲಿತ, ಮಧುರ, ಭಕ್ತಿಭಾವಪೂರಿತ ಆಲ್ ಟೈಮ್ ಹಿಟ್ ಹಾಡು "ಜಯತು ಜಯ ವಿಠಲ..ನಿನ್ನ ನಾಮವು ಶಾಂತಿ ಧಾಮವು ಸೌಖ್ಯದಾರಾಮಾ...”


ಈ ಹಾಡನ್ನ ಹಾಕಿದೆ ಚಾಟ್ ಬಾಕ್ಸಲ್ಲಿ....“ಇದೇನೋ..ಶುಕ್ರವಾರ ನಮಾಜ್ ಅಂತ ಹೇಳಿ ದೇವರನಾಮ ಶುರು ಮಾಡಿದ್ದೀಯಾ..??” ಅಂತ ಪ್ರಕಾಶನ ಚಾಟ್ ಉತ್ತರ.
ಅದಕ್ಕೆ ನಾನು..
 “ಒಂದು ಸ್ವಾರಸ್ಯಕರ ಘಟನೆ ನಮ್ಮ ಸ್ಕೂಲಲ್ಲಿ ನಡೆದದ್ದು” ಅಂತ ಚಾಟಲ್ಲೇ ಸಂಕ್ಷಿಪ್ತವಾಗಿ ಹಾಕ್ದೆ...
ಅವನಿಗೆ ಏನನ್ನಿಸ್ತೋ..
 “ಬ್ಲಾಗಲ್ಲಿ ಹಾಕೋ ಮಾರಾಯಾ”.....
ನಾನು “ಎಸ್ ಬಾಸ್” ಎಂದವನೇ ಟೈಪಿಸೋದಕ್ಕೆ ಸುರು ಅಚ್ಕಂಡೆ.... ಅದರ ಫಲವೇ ಈ ಭಾನುವಾರದ ಕಚಗುಳಿ....
ಅದು ಹಳ್ಳಿ ಹೈಯರ್ ಪ್ರೈಮರಿ ಸ್ಕೂಲ್ ನ ಏಳನೇ ತರಗತಿ ಕ್ಲಾಸ್ ರೂಮು, ಹಳ್ಳಿ ಸ್ಕೂಲು ಅಂದ್ರೆ ಗೊತ್ತಲ್ಲ...?? ಕೆಳಗಡೆ ಮಣೆಗಳು.. ಸುಮಾರು ೬ ಅಡಿ ಉದ್ದ ಒಂದೊಂದೂ...ಹೆಚ್ಚು ಅಂದ್ರೆ ಅರ್ಧ ಅಡಿ ಎತ್ತರ...!!! ಹೂಂ...
ನೆಲದ ಮೇಲೆ ಕೂತಿಲ್ಲ.... ಅಥವಾ ಪಟ್ಟಣದ ಸ್ಸೂಕ್ಲೂಲಿನಲ್ಲಿರುವಂತೆ ಬೆಂಚಿನ ಎತ್ತರದಲ್ಲೂ ಕೂತಿಲ್ಲ... ಅನ್ನೋ ರೀತಿಯ ಎಡಬಿಡಂಗಿ ಸೀಟಿಂಗ್... ಈಗ್ಲೂ ಇದೆಯೇನೋ ಆ ಸಿಸ್ಟಮ್ ಗೊತ್ತಿಲ್ಲ....
ಓಕೆ...ಬಂದೆ..ಪ್ರಸಂಗಕ್ಕೆ...

ಕ್ಲಾಸಿನಲ್ಲಿ ಆ ದಿನ ಏನೋ ಕಾತರ ಮತ್ತೆ ಆಸಕ್ತಿ ಎಲ್ಲಾರಿಗೂ... ಯಾಕಂದ್ರೆ ಆ ದಿನ ನಮ್ಮ  ಹಳ್ಳಿಗಿಂತಾ ಹಳ್ಳಿ ಅನ್ನೋ ಸ್ಕೂಲಿಗೆ ಹತ್ತಿರದ ಪಟ್ಟಣಾಂತ ಅನ್ನಲಾಗದ ಪಟ್ಟಣದ ಹೊಸಾ ಮೇಡಂ ವರ್ಗವಾಗಿ ಬರ್ತಿದ್ದುದು.
ಸರಿ.. ಮೂರನೇ ಪಿರಿಯಡ್ಡು ಗಣಿತದ್ದು.  ಪ್ರವೇಶ ಆಯ್ತು ಮೇಡಂ ದು...

“ಗೂಡ್ ಮಾರ್ನಿಂಗ್ ಸಾ....”
ಎಲ್ಲಾ ಒಕ್ಕೊರಲಲ್ಲಿ ಹೇಳ್ತಿದ್ದುದು ಬೆಳಿಗ್ಗೆ ಇದನ್ನು ಮಾತ್ರ. ಗಂಡಸಾಗಲೀ...ಹೆಂಗಸಾಗಲೀ...ಹೇಳ್ತಿದ್ದುದು “ಸಾ” ಅಂತಲೇ...

“Attention... please...ಇಲ್ಲಿ ಕೇಳಿ...” ಅಂತ ಮೇಡಂ ಕೋಮಲ ದನಿ ಕೇಳಿ ಎಲ್ಲರೂ ಗಪ್-ಚಿಪ್.
“ನನ್ನ ಹೆಸರು- ಸುವರ್ಣ ನಾನು ಪಕ್ಕದ ವಿಜಯಪುರ ಪಟ್ಟಣದವಳು...ಇಂದಿನಿಂದ ನಿಮಗೆ ಗಣಿತ ಪಾಠ ನಾನೇ ಮಾಡುವುದು... ಓಕೆ...” ಹೊಸ ಮೇಡಂ ತನ್ನ ಬಗ್ಗೆ ಪರಿಚಯಕೊಟ್ಟರು.
“ಎಸ್ಸಾ” ಮತ್ತೆ ಎಲ್ಲರ ಒಕ್ಕೊರಲು...
“ನಾನು ಸರ್ ಅಲ್ಲ... ಮಿಸ್ ಅನ್ನಿ ಇಲ್ಲಾ ಮ್ಯಾಮ ಅನ್ನಿ” ಎನ್ನುತ್ತಾ
“ಸರಿ ಈಗ ಎಲ್ಲ ನಿಮ್ಮ ನಿಮ್ಮ ಪರಿಚಯ ಮಾಡ್ಕೊಳ್ಳಿ... ಹಾಂ...”
ಮೊದಲ ಸಾಲಿನ ಹುಡುಗಿಯರಲ್ಲಿ ಮೊದಲಿನ ಹುಡುಗಿಯನ್ನ ನೋಡಿ..


“ನೀನು ಹೇಳಮ್ಮ... ನಿನ್ನ ಹೆಸರು ಯಾವ ಊರು..ಅಂತ”...ಹೀಗೇ...ಒಬ್ಬೊಬ್ಬರಾಗಿ ಎಲ್ಲರ ಪರಿಚಯ ಆದಮೇಲೆ.. ಮೇಡಂ ...
“ನಿಮ್ಮ ಕ್ಲಾಸಿನಲ್ಲಿ ಯಾರು ಚನ್ನಾಗಿ ಹಾಡು ಹಾಡ್ತಾರೆ..?” ಎಂದು ಕೇಳಿದರು. ಒಡನೆಯೇ ಮತ್ತೆ ಒಕ್ಕೊರಲಲ್ಲಿ.... “ಎಂಕ್ಟೇಸಾ”....ಎಂದರು ಎಲ್ಲರೂ...
“ಏನಿದು...?? ಏನು..?? ಎಂಕ್ಟೇಸಾ!! ..ಅಂದ್ರೆ??” ಕೇಳಿದ್ರು ಮೇಡಂ ಏನೂ ಗೊತ್ತಾಗದೇ.
ಶೈಲಜಾ ಎದ್ದು ನಿಂತು... “ಮ್ಯಾಮ್ ವೆಂಕಟೇಶ್ ..ಅದೇ ಮೂರನೇ ಬೆಂಚಲ್ಲಿ ಕುಳಿತಿದ್ದಾನಲ್ಲಾ.....ಹಾಂ..ಅಲ್ಲಿ...,  ಅವನು ಚನ್ನಾಗಿ ಹಾಡ್ತಾನೆ” ಎಂದಳು.
“ಬನ್ರೀ ವೆಂಕಟೇಶ್.....” ಎಂದರು ಮೇಡಂ....  ಒಡನೇ ಹುಡುಗರೆಲ್ಲಾ...
“ಓ ಓ.. ಏನು ಮರ್ವಾದೆ,,??!!! ಎಂಕ್ಟೇಸನ್ಗೆ..” ಎಂದರು ಉದ್ಗಾರ ತೆಗೆಯುತ್ತಾ,,,,
“ಓಗೋ ಎಂಕ್ಟೇಸಾ..” ಎನ್ನುತ್ತ ಮೆಲ್ಲಗೆ ತಳ್ಳಿದ ಅವನ ಬೆನ್ನ ಮೇಲೆ ಕೈಯಿಟ್ಟು ಅವನ ಸ್ನೇಹಿತ ಪಕ್ಕದಲ್ಲೇ ಕುಳಿತಿದ್ದ ಸುಲೇಮಾನ್. "ಓಗೋ..ಓಗೋ..." ಎಂದರು ಎಲ್ಲಾ ಹುಡುಗರು.
ಆದರೆ....
ಯಾಕೋ ..ಬೆಳಿಗ್ಗೆಯಿಂದ ಒಂಥರಾ ಮುಖ ಮಾಡಿದ್ದ ವೆಂಕಟೇಶ... ಮೂಡಲ್ಲಿ ಇರ್ಲಿಲ್ಲ..... ಇಲ್ಲಾಂದ್ರೆ..ಸಿಳ್ಳೆ ಸೀನ, ಎಂಕ್ಟೇಸ ಇಬ್ರದ್ದು ಆರ್ಕೆಸ್ಟ್ರಾನೇ ಶುರು ಆಗ್ತಿತ್ತು. ಅದಕ್ಕೆ ತಕ್ಕ ಹಾಗೆ ಸಿಲ್ವರ್ ಸುಲೇಮಾನ್ ಬೆಂಚನ್ನೇ ತಬಲ ಮಾಡ್ತಿದ್ದ.


ಮೇಡಂ ಮೂರ್ನ್ಲಾಲ್ಕು ಬಾರಿ ಹೇಳಿ .. ಅವನ ಸ್ನೇಹಿತ್ರು..ಬಲವಂತ ಮಾಡಿದ ಮೇಲೆ...ವೆಂಕಟೇಶ ಬೋರ್ಡ್ ಬಳಿ ಹೋಗಿ ಕೈ ಕಟ್ಟಿ ನಿಂತ. ಮಕ್ಕಳೆಲ್ಲಾ ಅವನ ಹಾಡನ್ನು ಕೇಳಲು ನಿಶ್ಶಬ್ದರಾಗಿ ಕುಳಿತರು.
ವೆಂಕಟೇಶ ಪ್ರಾರಂಭಿಸಿದ...
“ಜಯತು... ಜಯ... ವಿಠಲಾ... ನಿನ್ನ ನಾಮವು..ಶಾಂತಿ..........."
ಎಲ್ಲರೂ ಮೌನ.... ಹುಡುಗ ಹುಡುಗಿಯರ ಮುಖದ ಮೇಲೆ ಅತ್ಯಾಶ್ಚರ್ಯದ ಮುಖಭಾವ.... ಮೇಡಂ ಸಹಾ...ಸ್ಟನ್....!!!!
ಸುಶ್ರಾವ್ಯ ಹಾಡು ಬಯಸಿದವರಿಗೆ!!! 
ಪಾಠವನ್ನು ಒಪ್ಪಿಸೋ ಎರಡನೇ ತರಗತಿ ಹುಡುಗ... “ಶಾಲೆ” ಪಾಠವನ್ನು ಓದಿದಂತಿತ್ತು ವೆಂಕಟೇಶನ ಹಾಡು....
“ಜಯತು ಜಯ ವಿಠಲ (ಇದು ನನ್ನ ಶಾಲೆ). ನಿನ್ನ ನಾಮವು ಶಾಂತಿಧಾಮವು (ನನ್ನ ಶಾಲೆ ನಮ್ಮ ಅಕ್ಕ ಪಕ್ಕದ ಊರುಗಳಿಗೆಲ್ಲಾ ಮಾದರಿ ಶಾಲೆ). ಸೌಖ್ಯದಾರಾಮಾ (ನನ್ನ ಶಾಲೆಯಲ್ಲಿ ಹದಿನಾಲ್ಕು ಕೊಠಡಿಗಳಿವೆ)” ಇತ್ಯಾದಿ...... 
ಕ್ಲಾಸೆಲ್ಲಾ ನಗುವಿನ ಗುಲ್ಲೋ ಗುಲ್ಲು...
ಮೇಡಂ...ಸಹನೆ ಕಟ್ಟೆ ಒಡೆಯಿತು....
“ಏಯ್... ಏಯ್.ಏಯ್.....ಸಾಕು ನಿಲ್ಲಿಸಿ...” ಎನ್ನುತ್ತಾ ಎಲ್ಲರನ್ನು ಗದರಿಸಿ, ವೆಂಕಟೇಶನ್ನ ನೋಡುತ್ತಾ
“ನಿಲ್ಲಿಸ್ರೀ ...ವೆಂಕಟೇಶ್!!....ನಾನು ಪಾಠ ಓದಿ ಅಂತ ಅಲ್ಲಾ ಹೇಳಿದ್ದು!!!,...ಹಾಡು ಹಾಡಿ ಅಂತಾ....!!” ಎಂದರು ಬೇಸರದಿಂದ
“ಹಾಡೋಕೆ ಬರೋಲ್ಲಾ ಅಂದ್ರೆ ಮುಂಚೆನೇ ಹೇಳ್ಬೇಕಪ್ಪಾ.... ಏನಮ್ಮ ಶೈಲಜಾ ನಿಮ್ಮ ಕ್ಲಾಸಿನ ಗಾನ ಗಂಧರ್ವ ಇವರೇನಾ??!!... ಬಹಳ ಚನ್ನಾಗಿದೆ....!!!!” ಎಂದರು ಬೇಸರದಿಂದ.
ಎಲ್ಲರೂ.. “ ಇಲ್ಲಾ ಮೇಡಂ ಚನ್ನಾಗಿ ಹಾಡ್ತಾನೆ ಇವನು....ಯಾಕೋ ಈವೊತ್ತು...ಗೊತ್ತಿಲ್ಲ....”
ಮೇಡಂ ಗೆ ರೇಗಿತ್ತು...
“ಸಾಕು ನಿಲ್ಲಿಸ್ರೀ ನಿಮ್ಮ ರೆಕಮೆಂಡೇಶನ್ನು... ಅಲ್ಲಾ ಹಾಡಿನ ಗಂಧಾನೇ ಗೊತ್ತಿಲ್ಲ ಇವರಿಗೆ...ಹಾಡ್ತಾರಂತೆ..ಹಾಡು...!!!”
ಎಂದು.. ಮುಖ ಗಂಟಿಕ್ಕಿ...
“ಆಯ್ತು ಬಿಡಿ.. ನಾಳೆಯಿಂದ ಪಾಠ ಪ್ರಾರಂಭಿಸ್ತೇನೆ... ಈ ದಿನ ನೀವು ಕೊಟ್ಟಿರೋ ಶಾಕೇ ಸಾಕು...” ಎನ್ನುತ್ತಾ...ತಮ್ಮ ಪುಸ್ತಕಗಳನ್ನು ಕೈಲಿ ಹಿಡಿದು ಹೊರನಡೆದರು.

ತಿಂಗಳಲ್ಲಿ ಒಮ್ಮೆ ನಡೆಯುವ ’ಶಾರದಾ” ಪೂಜೆಯೂ ಮೂರುದಿನಗಳಲ್ಲಿ ನಡೆಯುವುದಿತ್ತು.. ಆ ದಿನದ ಬೆಳಿಗ್ಗೆ ಪ್ರಾರ್ಥನೆ ನಂತರ HM ಘೋಷಣೆ ಮಾಡಿದರು...
“ನಿಮಗೆಲ್ಲಾ ಗೊತ್ತಿರೋ ಹಾಗೆ ತಿಂಗಳ ಶಾರದಾ ಪೂಜೆ ಶುಕ್ರವಾರ ಸಂಜೆ ೩.೦ ಗಂಟೆಗೆ ಎಲ್ಲಾ ಕ್ಲಾಸು ಮುಗಿದ ನಂತರ ಸ್ಕೂಲಿನ ಸಭಾಂಗಳದಲ್ಲಿ ಆಗುತ್ತೆ... ಸುಲೇಮಾನ್ ನೀನು ಪೂಜೆ ಮೆಮೋ ಪುಸ್ತಕಾನ ಊರಿನ ಹಿರಿಯರಿಗೆ ತೋರಿಸಿ ಅವರನ್ನ ಆಹ್ವಾನಿಸಿ ಬಾ... ಇನ್ನು ಪೂಜೆಯ ಸಮಯದ ಪ್ರಾರ್ಥನೆ ಜವಾಬ್ದಾರಿ... ವೆಂಕಟೇಶನದ್ದು” ಎಂದರು... 
ತಕ್ಷಣ ಹೊಸ ಮೇಡಂ ಸುವರ್ಣ...
"ಸರ್ ಸರ್.. ವೆಂಕಟೇಶಾನಾ??... ಏಳನೇ ಕ್ಲಾಸಿನ ವೆಂಕಟೇಶಾನಾ..???. ಅಯ್ಯೋ ಅವನು ಮಾತ್ರ ಬೇಡ ಸರ್..ಎಷ್ಟು ಕೆಟ್ಟದಾಗಿರುತ್ತೆ ಗೊತ್ತಾ ಅವನು ಹಾಡೋದು ..?? ಅವನು ಹಾಡೋದೂಂದ್ರೆ ಏನು..??!!!” 
ಎನ್ನುತ್ತಾ ತಮ್ಮ ಆತಂಕ ತೋಡಿಕೊಂಡರು..
ಅವರ ಮಾತನ್ನು ಕೇಳಿ HM  ಮತ್ತೆ ಇತರ ಉಪಾದ್ಯಾಯರು ಚಕಿತರಾದರು. ..ಆದ್ರೆ...
ಮಕ್ಕಳೆಲ್ಲಾ...ಅದರಲ್ಲೂ ಏಳನೇ ತರಗತಿ ಮಕ್ಕಳು ನಗಲು ಪ್ರಾರಂಭಿಸಿದರು.
“ಸೈಲೆನ್ಸ್.... ಯಾಕೆ ..ಯಾಕೆ ಎಲ್ಲಾರೂ ನಗೋದು...??” ಎನ್ನುತ್ತಾ HM ರವರು ಹೊಸ ಮೇಡಂ ಕಡೆ ನೋಡಿ... 
“ಯಾಕಮ್ಮಾ ..ಯಾಕೆ ಹಾಗೆ ಹೇಳಿದ್ರಿ?... ವೆಂಕಟೇಶ್ ನಮ್ಮ ಶಾಲೆಯ ಒಳ್ಳೆಯ ಗಾಯಕ...” ಎಂದಾಗ ಶಾಕ್ ಆಗೋ ಸರದಿ ಹೊಸ ಮೇಡಂದು....
“ಅಲ್ಲ ಸರ್..ಮೊನ್ನೆ ಇವರ ಕ್ಲಾಸಿಗೆ ಹೋಗಿ..........................” ಎಂದು ಪೂರ್ತಿ ವಿಷಯ ತಿಳಿಸಿದಾಗ ....
ಉಪಾದ್ಯಾಯರೂ ಸೇರಿಕೊಂಡರು ಈಗಾಗಲೇ ನಗಲು ಪ್ರಾರಂಭಿಸಿದ್ದ ಮಕ್ಕಳ ಜೊತೆ.


ಆ ನಂತರವೇ ಗೊತ್ತಾಗಿದ್ದು.... ಆ ದಿನ ಗೌಡರ ತೋಟದ ಸೀಬೇ ಕಾಯಿ ಕದ್ದು ಬಂದಿದ್ದರಿಂದ ಅವನ ಅಪ್ಪನ ಬೈಗುಳ ತಿಂದು ಬಂದಿದ್ದೂ ಅಲ್ಲದೇ ಆ ದಿನದ ಖರ್ಚಿನ ಎಂಟಾಣೆಗೂ ಖೋತಾ ಮಾಡ್ಕೊಂಡಿದ್ದ ಎಂಕ್ಟೇಸಾ ಅಂತ!!. ಹಾಡೋಕೆ ಆಗೊಲ್ಲ ಅಂತ ಸುಲೇಮಾನ್ ಗೆ ಹೇಳಿದ್ನಂತೆ...
ಅದಕ್ಕೆ ಸುಮೇಮಾನ್ “ಲೇ ಎಂಕ್ಟೇಸಾ ..ಮ್ಯಾಡಮ್ಮು ಮ್ಯಾತ್ಸ್ ಪಾಠ ಮಾಡೋದು ಆಮ್ಯಾಕೆ ಇನ್ನೂ ಟಫ್ ಮಾಡ್ಬಿಡ್ತಾರೆ ಹೋಗಿ ಹಾಡೋ” ಅಂತ ಹೆದರ್ಸಿದ್ದನಂತೆ. 
ಹೊಸ ಮೇಡಂ ಗೆ ಬೇಸರ ತರಿಸೋದು ಬೇಡ ಅಂತ ತೋರಿಸಿದ್ದು ಈ ವರಸೆ...!!! ಆಗ್ಲಿಂದ ಸ್ಕೂಲ್ ಮಕ್ಕಳೆಲ್ಲಾ... ಎಂಕ್ಟೇಸಾ ಅಂದ್ರೆ .... "ಓ..ಜಯತು ಜಯ ಎಂಕ್ಟೇಸಾ ನಾ" ಅಂತ ಹೇಳ್ತಿದ್ದರಂತೆ. 

24 comments:

 1. ಹ ಹ ಹ , ಹೋ ಹೋ ಹೋ ಹ್ಹ ಹ್ಹ ಹ್ಹ ಅಜಾದ್ ಸಾರ್ ಇದು ನಮ್ಮ ಹಳ್ಳಿಯ ಕಥೆ ಇದ್ದಂತೆ ಇದೆ. ನಿಮ್ಮನ್ನು ಕೆಣಕಿದ ಪಕ್ಕೂ ಮಾಮನಿಗೆ , ಹಾಗು ಬರೆದ ನಿಮಗೆ ಜೈ ಜಯತು ಜಯ - ಎಂಕ್ಟೇಸಾ!!!!!!
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
 2. ಹಹಹ ನಮಸ್ಕಾರ ಬಾಲು ಎಂಕ್ಟೇಸಾ....ಹೌದು ಎಲ್ಲರ ಅನುಭವದಲ್ಲಿ ಇಂತಹುದು ಯಾವುದಾದರೂ ಇದ್ದೇ ಇರುತ್ತೆ ಕೆದಕಿ ತೆಗಿಬೇಕು ಅಷ್ಟೇ,,,,ಅಲ್ವಾ,,,ಧನ್ಯವಾದ.

  ReplyDelete
 3. ಅಜಾದ್ ಸರ್;ಹ,ಹ,ಹ,.....ಎಂಕ್ಟೇಸನ ಪರಸಂಗ ಬೋ ಪಸಂದಾಗೈತೆ.
  ಇನ್ನೂ ರವಷ್ಟು ಯೋಳಿ ಮತ್ತೆ.

  ReplyDelete
 4. ಆಜಾದ್ ಸರ್,
  ನಿಮ್ಮ school environment + ಎಂಕ್ಟೇಸನ ಪ್ರಸಂಗ ಚೆನ್ನಾಗಿದೆ. ಹಳ್ಳಿ ಶಾಲೆಗ ಪೇಟೆ ಟೀಚರ್ ಎಂಟ್ರಿ ಅಂದ್ರೆ, ಆ curiosity ಹೆಂಗಿತ್ತು ಸರ್, ಒಸಿ ಹೇಳಿ :)

  ReplyDelete
 5. ಹಹಹ...ಪಾಪ ವಿಜಿಪುರದ ಮೇಡಂಗೆ ಗಾಬರಿ ಪಡಿಸಿಬಿಟ್ರಾ ನಿಮ್ಮ ದೋಸ್ತಿ...ಹಹಹಹ... ಚೆನ್ನಾಗಿದೆ ನಿಮ್ಮ ಶಾಲಾ ಪ್ರಸಂಗ...
  ಜಯತು ಜಯ ವಿಠಲಾ... ಎಂಕಟೇಶ... ವೆಂಕಟೇಶ...
  ನಿನ್ನ ಗಾಯನವೇ.. ನಗೆಯ ಧಾಮವು... ಎಲ್ಲ ಸೀಬೇಕಾಯಿಯ ಪ್ರಭಾವ....

  ReplyDelete
 6. ಹಹಹ....ಎಂಕ್ಟೇಸಾ ನ ಹಾಡಿನ ಪುರಾಣ ಸಕ್ಕತ್ತಾಗಿದೆ...

  ReplyDelete
 7. ಜಯತು ಜಲನಯನಾ, ನಿನ್ನ ಬ್ಲಾಗಿದು
  ಹಾಸ್ಯಧಾಮವು, ಸೌಖ್ಯಧಾರಾಮಾ!!

  ReplyDelete
 8. ಡಾಕ್ಟ್ರೇ, ಧನ್ಯವಾದ..ಏನೂಂತ ಯೋಳೋದೇಳ್ರೀ...ಎಂಕ್ಟ..ಎಸ್ಸೆಲ್ಸಿಲಿ ಡುಂಕಿ ಒಡ್ದ... ಅವ್ನಲ್ಲೇಯಾ ಊರ್ನಾಗೆ, ನಾನು ಬೆಂಗ್ಳೂರು, ಮಂಗ್ಳೂರು, ಇಂಫಾಲ್, ಮದ್ರಾಸು ಅಂತ ತಿರುಗಾಡ್ತಾ ಈವಾಗ ಕುವೈತ್......

  ReplyDelete
 9. ವನಿತಾ... ಅಳ್ಳಿ ಉಡುಗ್ರು...ಪ್ಯಾಟೆ ಉಡ್ಗೀರು ಅಂದ್ರೆ ಎಲ್ಲೋ ಪಿಲಂ ಆಕುಟ್ರೆಸ್ಸು ಅಂದ್ಕಂಡಿರ್ತವೆ... ನಮ್ಮ ಎಂಕ್ಟೇಸಾ... ಬೆಂಗ್ಳೂರ್ ಕಾಲೇಜ್ ಉಡೀಗೀರ್ಗೇ ಚಲ್ಳೆ ಅಣ್ಣು ತಿನ್ಸಿದ್ದ ಗೊತ್ತಾ..?? ಅವನ್ನ ಚನ್ನಾಗಿ ಗೋಳು ಹುಯ್ಕಂಡ್ರು ಎಣ್ಮಕ್ಳು...ಎನ್ ಎಸ್ ಎಸ್ ಕ್ಯಾಂಪ್ಗೆ ಅಂತ ನಮ್ಮೂರ್ಗೆ ಬಂದು.... ಕಡೇ ದಿವ್ಸ ಫಂಕ್ಸನ್ ಒಳ್ಗೆ ಅವ್ನ್ಗೆ ಆಡೋಕೆ ಬರಲ್ಲಾ ಅಂತ ಓಳ್ ಬುಟ್ಟು... ಅವ್ರೆಲ್ಲಾ... ಸ್ಟೇಜ್ ಮ್ಯಾಕೆ ಅವನ್ನ ತಳ್ಳೇ ಬುಟ್ರು...ಎಂಕ್ಟೇಸ ಆಡೇಳ್ತಾನೆ ಅಂತ.... ಅವನು ಯಾವ್ದು ಆಡ್ದ ಗೊತ್ತಾ.....ಹಾಡಾ.....
  ಏನೇ ಸುಬ್ಬಿ ತುಂಬ ಕೊಬ್ಬಿ ಗೇಲಿ ಮಾಡಿ ಕೆಳಕ್ಕೆ ದಬ್ಬಿ ಕೆಕ್ಕೆ ಕೆಕ್ಕೆ ನಗ್ತಿಯಾಕೆ ಹಲ್ಲುಬ್ಬಿ.....ಏಟ್ ಪಸಂದಾಗ್ ಆಡ್ದ ಅಂದ್ರೆ ಎಣ್ಮಕ್ಳಿಗೆ ಕ್ವಾಪ ಬಂದಿದ್ರೂ ಒಳ್ಲೆ ಚಪ್ಪಾಳೆ ಒಡೆದ್ರು...

  ReplyDelete
 10. ಸುಗುಣ ಧನ್ಯವಾದ...ಎಂಕ್ಟೇಸನ ಆಡು ಮೇಡಂ ಎಡವಟ್ಟು.. ಬೀಳೋ ಹಾಗಾಯ್ತು...ಹಹಹಹ್ ಇನ್ನು ಸೀಬೆ, ಮಾವು ಕದಿಯೋದು ನಮ್ಮೆಲ್ಲರ ಆಜನ್ಮ ಸಿದ್ಧ ಹಕ್ಕಾಗಿತ್ತು ನಮಗೆಲ್ಲ....

  ReplyDelete
 11. ಸುಶ್ಮಾ ಧನ್ಯವಾದ... ಎಂಕ್ಟೇಸನ ಆಡು ಅಂದ್ರೆ ನಮ್ ಸ್ಕೂಲಲ್ಲಿ ಡಿಮ್ಯಾಂಡೋ ಡಿಮ್ಯಾಂಡು.... ಇನ್ನು ಅಳ್ಳಿ ಮದ್ವೆ ಮನೆಗಳಿಗೆ ಬರೋ ಮೈಕ್-ಸ್ಪೀಕರ್ ಸೆಟ್ ನವರಿಗೆ ಮುಂಚೆನೇ ಮದುಮನೆ ಕಡೆಯಿಂದ ಸಿಂಗರ್ ಬುಕ್ ಆಗ್ತಿದ್ದ....

  ReplyDelete
 12. ಸುನಾಥಣ್ಣ...ಧನ್ಯವಾದ...ನಿಮ್ಮ ಆಸೀರ್ವಾದ ಕಣಣ್ಣೋ..ಒಸಿ ಅಂಗೇಯಾ ನೆಪ್ಪಾಯ್ತು ಊರ್ಕಡೆ ಇಸ್ಯ.....ಹ್ಹಹಹಹ

  ReplyDelete
 13. ಹ ಹ ಹ... ಚೆನ್ನಾಗಿದೆ ಸರ್... ಕನ್ನಡ ಶಾಲೆಯ ಆ ನೆನಪು, ಬೆಂಚಲ್ಲದ ಹಲಗೆಯ ಮೇಲೆ ಕುಳಿತು ಮಾಡುತ್ತಿದ್ದ ಕೀಟಲೆಗಳು ಎಲ್ಲಾ ಸ್ಮೃತಿ ಪಟಲಕ್ಕೆ ಒಮ್ಮೆ ಬಂದು ಹೋಯಿತು... :) :)

  ReplyDelete
 14. ನೀವು ಭಾನುವಾರ ಬರೆದ್ರಿ
  ನಾವು ಸೋಮವಾರ ಓದುದ್ವಿ
  ಶಾನೆ ನಗು ಬಂತು
  ಈಗ..
  ಜಯತು ಜಯ ಅಜಾದು ....
  ಜಯತು ಜಯ ಪಕ್ಕೂ ....
  ಅಂತ
  ಹಾಡು ಬುಡ್ತಾ ಇದ್ದೀವಿ ....

  ReplyDelete
 15. ಸೀತಾರಾಂ ಹ....ಹ.....ಹ.....ಧನ್ಯವಾದ

  ReplyDelete
 16. ಕಾವ್ಯಾ..ನಿಮ್ಮ ಸ್ಕೂಲಲ್ಲೂ ಇಂತಹ ಬೆಂಚ್ ಇದ್ದವಾ?? ಪರ್ವಾಗಿಲ್ಲ ನಮ್ಮ ಊರಿನ ಸ್ಕೂಲೇ ಹಾಗಿತ್ತೇನೋ ಅಂದ್ಕೊಂಡೆ... ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 17. ಔದ್ ನೋಡ್ರೀ..ಹಾಂಗೇ ಒಂದು ಆಕ್ದೆ ನೀವು ನೋಡಿದ್ರಲ್ಲಾ ಆಟೇ ಸಾಕ್ ಬುಡ್ರಿ...ಅಂಗಾದ್ರೆ ಟ್ಯಾಂಕು ಏಳ್ಲಾ..???

  ReplyDelete
 18. ಹೌದು ಅಜಾದ್ ಸರ್... ಅದೇ ಹಲಗೆಯ ಮೇಲೆ ಕುಳಿತೆ ನಾವೂ ಕಲಿತಿದ್ದು... :)

  ReplyDelete
 19. ಕಾವ್ಯ, ನೋಡಿದ್ರಾ..?? ಹಾಗಾದ್ರೆ ಹುಡ್ಕಿ ಏನಾದ್ರೂ ಸ್ವಾರಸ್ಯ ಸಿಗಬಹುದು ನೆನಪಿನ ಪುಟಗಳನ್ನ ತಿರುವಿಹಾಕಿದ್ರೆ.....

  ReplyDelete
 20. howdu sir ivagalu aneka school alli ade alige ive.. mattu aneka school alli adu saha illa....

  chenagide sir... :)

  ReplyDelete
 21. ಇಂತಹ ಚಂದದ ಬ್ಲಾಗ್ ಇಷ್ಟು ದಿನ ಕಣ್ಣಿಗೇಕೆ ಬಿದ್ದಿರಲಿಲ್ಲ.. ಸೂಪರ್ ಆಗಿ ಬರೀತೀರ ಸರ್..

  ReplyDelete
 22. Student life is golden life ಅಂತಾರೆ. ಅದು ಕಲಿಕೆಯ ವಿಷಯದಲ್ಲಿ ಮಾತ್ರ ಅಲ್ಲ. ಇಂತಹ ಸೊಗಸಾದ ಅನುಭವ ಹಳ್ಳಿಯ ಶಾಲೆಗಳಲ್ಲಿ ಮಾತ್ರ ಸಿಗುತ್ತೆ... ಮತ್ತೆ ಆ ಮರೆಯಲಾಗದ ಬಾಲ್ಯದ ಸವಿ ನೆನಪುಗಳು ಕಣ್ಮುಂದೆ ಸುಳಿಯುವಂತಾಯಿತು.. ಬಹಳ ಸ್ವಾರಸ್ಯಕರವಾಗಿದೆ ನಿಮ್ಮ ಅನುಭವ... Thanks...

  ReplyDelete
 23. Student life is golden life ಅಂತಾರೆ. ಅದು ಕಲಿಕೆಯ ವಿಷಯದಲ್ಲಿ ಮಾತ್ರ ಅಲ್ಲ. ಇಂತಹ ಸೊಗಸಾದ ಅನುಭವ ಹಳ್ಳಿಯ ಶಾಲೆಗಳಲ್ಲಿ ಮಾತ್ರ ಸಿಗುತ್ತೆ... ಮತ್ತೆ ಆ ಮರೆಯಲಾಗದ ಬಾಲ್ಯದ ಸವಿ ನೆನಪುಗಳು ಕಣ್ಮುಂದೆ ಸುಳಿಯುವಂತಾಯಿತು.. ಬಹಳ ಸ್ವಾರಸ್ಯಕರವಾಗಿದೆ ನಿಮ್ಮ ಅನುಭವ... Thanks...

  ReplyDelete