Saturday, May 5, 2012

ಕಾಯ್ತಾ ಇವ್ನಿ ಬತ್ತದಾ ಮಳೆ...???

Foto: Internet

ಕಾಯ್ತಾ ಇವ್ನಿ ಬತ್ತದಾ ಮಳೆ...???

ಅಪ್ಪ ಯೋಳ್ತಿದ್ದ – ಯಪ್ಪಾ ಯಾ ಪಾಟಿ ಮಳೆ!!
ತೊಯ್ದು ತೊಯ್ದು ಬುರ್ದೆ ಆಗ್ಬುಟ್ಟೈತೆ ಇಳೆ
ಕೆರೆ ಕೋಡಿ ಓಯ್ತಿತ್ತಂತೆ, ಒಂದೇ ವಾರದಲ್ಲಿ
ದಾಟೋಕೋದ ಕುರಿ ದನ ಕೊಚ್ಚೋಗ್ನೀರಲ್ಲಿ.

ವಾರದಿಂದ ಮುದ್ಕ ಆಕಾಸ ನಿಟ್ಟಿಸ್ತಾ ಇರ್ತಾನೆ
ಯಪ್ಪೋ ಒಳೀಕ್ಬಾ, ಬೋ ಬಿಸ್ಲು ಸೂರ್ಯ ಸುಡ್ತಾನೆ
ನನ್ಮಾತು ಕೇಳಾಂಗಿಲ್ಲ ರೈತನ್ಮನ್ಸು ರೋಸಿದ್ರೆ ಇಂಗೆ
ಯೋಳ್ತಾನೆ ಮೂರ್ನೇ ವರ್ಸ ಬರ್ಗಾಲ ಬಂದ್ರೆ ಎಂಗೆ?

ಬೋ ..ಅಂತ ಅರ್ಚೋದು ದನ್ಗೋಳು ದನದಟ್ಟಿಲಿ
ಒಟ್ಟೆ ಬೆನ್ತಾಕೈತೆ ಕುರಿಗೋಳು ಬಡ್ವಾಗವೆ ಕುಂತಲ್ಲಿ
ಗೌಡಂಗೆ ಅಂಬ್ಲಿ ದಾಸೋವ ಮಾಡಾಕೆ ಯೋಸ್ನೆನಂತೆ
ಅಕ್ಪಕ್ಕದ್ ಅಳ್ಳಿ ಬಡ್ಮಕ್ಳು ಮಂದಿ ಬತ್ತಾರೆ ಸಂತೆ ಸಂತೆ

ಬಡ್ಕಲಾಗಿರೋ ನಾಗೇಸಾ ಮಂಡ್ರಾಯ್ನ್ ಎತ್ಕಂಬಂದ
ಸಿದ್ದೇಸ ಮಂಗ್ಳಾರ್ತಿ ಎತ್ತೋದು ಐಕ್ಳು ಕುಣ್ಯೊದ್ಚಂದ
ಉಯ್ಯೋ ಉಯ್ಯೋ ಮಂಡ್ರಾಯ ಬಾಳೆ ತ್ವಾಟಕ್ನೀರಿಲ್ಲ
ಉಯ್ಯೋ ಉಯ್ಯೋ ಮಂಡ್ರಾಯ ಬತ್ತ ಒಣ್ಗಿ ಓಯ್ತಲ್ಲಾ

ಇದ್ಕಿದ್ದಂಗೆ ಮಟ್ಮಟ ಮದ್ಯಾನ್ನ ಕವ್ಕಂಬತ್ತು ಕತ್ಲಾ
ಮಲ್ಗಿದ್ದಪ್ಪ ಎದ್ದ ಕುಸ್ಕುಸಿ, ಕೂಗ್ದ ಎಂಕ್ಟ ಮಳ್ಬತ್ಲಾ
ಅವ್ಮಾನ ಇಲಾಕೆವ್ರು ಅಂದವ್ರೆ ವಾರಪೂರಾ ಇಂಗೇ
ಅಪ್ಪಾಂದ ಬಾಲಾ ನನ್ಮೀಸೆಯೂ ಬೆಳ್ಗಾಗಿಲ್ಲ ಅಂಗೇ

ನೋಡ್ತಾ ನೋಡ್ತಾ ಕಪ್ಮೋಡ ಕವ್ಕೊಂಡ್ವು ಆಕಾಸಾ
ದಪ್ ದಪಾ ಬಿತ್ತು ಅನಿ ನೋಡೀ ಕುಸೀನಾ ಎಂಕ್ಟೇಸಾ?
ಬಿರ್ದಿದ್ ನೆಲ ಸೊಳ್ ಅಂತ ಈರ್ಕೊಳ್ತು ಬಿದ್ದಿದ್ದನಿ
ಘಮ್ ಅಂತು ಮಣ್ ವಾಸ್ನೆ, ಓಣಿತುಂಬಾ ಅಪ್ಪಂದನಿ

ಗುಡ್ಗು, ಸಿಡ್ಲು, ದೋ ಮಳೆ, ಕುಣೀತು ಅಪ್ಪನ್ಬಿಳಿ ಮೀಸೆ
ಅಂದ ಮಾಡಮ್ಮೀ ಮೆಣ್ಸಿನ್ ಕಾಯ್ ಬಜ್ಜಿಗಾಗೈತೆ ಆಸೆ
ಸಂಜೆ ಗಂಟ ಬುಡ್ನೇ ಇಲ್ಲ ಸುರೀತಾನೇ ಇತ್ತು ಮಳೆ
ಆಕಾಸ್ದಾಗೂ ಕಮ್ಮೀನೇ ಆಗ್ಲಿಲ್ಲ ಕವ್ದಿದ್ಮೋಡದ್ ಬೆಳೆ

16 comments:

  1. ಅಜಾದಅಣ್ಣಓ ಅದೆನ್ ಯಪಾಟಿ ಮಳೆ ಸುರಿಸಿದ್ದೆಯ ನಿನ್ನ ಕವನ್ದಾಗೆ ಅಂತೀನಿ ! ಬೊ ಸಂದಾಗದೆ !ನಂಗೂನು ವಸಿ ಬಜ್ಜಿ ಮಾಡ ಮಡ್ಗಿರು ಅಂತ ಹೇಳಪ್ಪ್ ನಿಮ್ಮ ಹೆಂಡ್ರಗೆ !

    ಹಳ್ಳಿ ಭಾಷೆ ಸೋಗಡಿನ ಘಮ ಚನ್ನಾಗಿದೆ ನಿಮ್ಮ ಕವನದಲ್ಲಿ !

    ReplyDelete
  2. ಆರ್ತ್ಯಮ್ಮಾ.... ಬಜ್ಜಿ ಏನು ಜೊತ್ಗೆ ಓಳ್ಗೆನೂ ಮಾಡ್ಸಾನೆ ಬಂದ್ರೆ ಇತ್ತಾಗೆ...ಅಳ್ಳಿ ಬೋ ನೆಪ್ಪಾಯ್ತು ನೋಡ್ಕಣಮ್ಮೀ..ಈ ಮಳೆ ಕವ್ನ ಬರೆಯೋವಾಗ.... ಟ್ಯಾಂಕೂ...ಮೆಚ್ಕೊಂಡಿದ್ಕೆ...

    ReplyDelete
  3. ಸಾರ್,

    ಇಲ್ಲಿ ಎರಡು ಮಾತು:
    ೧. ಗ್ರಾಮೀಣ ಕನ್ನಡದ ಸರಿಯಾದ ಅವತರಿಣಿಕೆ ಇದು.
    ೨. ಮಳೆ ಆಧಾರಿತ ರೈತಾಪಿಯ ನಿಜಾವತರಣ.

    ವಾವ್, ಪ್ರತಿ ಸಾಲಲ್ಲೂ ನನ್ನ ಹಳ್ಳಿಯ ಎಂಕ್ಟ್ಸಾಮಿ, ಜಲ್ಗೇರಿ, ನಡುಮಯ್ಯ ಜ್ಞಾಪಕಕ್ಕೆ ಬಂದ್ರು.

    ಅದ್ಭುತವಾದ visualization ಶಕ್ತ ಕವಿ ನೀವು.

    ReplyDelete
    Replies
    1. Beuty lies in the Beholder ಅಂತ ಇಂಗ್ಲೀಸ್ನಾಗೆ ನಿಮ್ಮಂತೋರ್ನ ಕಂಡೇ ಮಾಡಿರ್ಬೇಕು ಬದರಿಯಣ್ಣ.,,,,ಹಹಹ ಏನೂ ಇಲ್ದೋನ್ನ ಏನೇನೋ ಅಂತ ಏರ್ಸೋದು ನಿಮ್ಮಿಂದ ಕಲೀಬೇಕ್ ನೋಡಿ.... ಸಿಂಪಲ್ ಆಗಿ ಅಂಗೇ ನಾಕ್ ಲೈನ್ ವಗ್ದೆ...ನೋಡೋರ್ಕಣ್ ಅಂಗೆಲ್ಲಾ ನೊಡ್ತದೆ ನಾವೋ ಪಾಮರರು...ಟ್ಯಾಂಕು ವಟ್ರಾಸಿ...

      Delete
  4. ಏನ್ ಸಿವಾ ಇಂಗ್ ಬರದ್ ಬುಟ್ಟೀರಿ... ಓದ್ತಾ ಓದ್ತಾ ಅಂಗೆ ಓಬುಟ್ಟೆ ನಮ್ಹಳ್ಳಿ ಕಡೀಕೆ... ಇನ್ಮ್ಯಾಗೆ ನಿಮ್ ಜಲನಯನ್ದಾಗೆ ಮಳೆ ಬಂದ್ಬುಟ್ಟ್ರೆ ಕೊಡೆ ಅನ್ ಬ್ಯಾಡಿ... ತತ್ತಾರಮ್ಮಿ ಅನ್ಬುಡಿ... ಹೂ ಮುತ್ತ್ಯಾಕೆ... ಮುತ್ತಿನ್ ಮಳೆಯೇ ಸಿಕ್ಬುಟ್ಟಾವು...
    ತುಂಬಾ ಸೆಂದಾಕ್ ಬರ್ದಿವ್ರಿ ಅಂತೀವ್ನಿ...

    ReplyDelete
    Replies
    1. ಸುರೇಸಣ್ಣೋ...ಅಳ್ಳಿ ಕಡೀಕ್ಕೋಗ್ಬಂದ್ರಾ... ಮಳೆ ಗಿಳೆ ಆಗ್ಯದೋ ಎಂಗೆ...??? ಇಲ್ಲಾ ಎಲ್ಲಾ ಒಣಕ್ಕೊಂಡ್ ಕೂತದೋ...ನೋಡುಮಾ ಒಸಿ ಈ ಕಿತ ಅಂಗೇ ನೀವೇಳ್ದಂಗೇ ಟ್ರೈ ಮಾಡೇಬುಡ್ತೀನಿ....ಹಹಹಹ ಟ್ಯಾಂಕು ಕಣಣ್ಣೋ...

      Delete
  5. ಇಷ್ಟವಾಯಿತು ಕವಿತೆ. ಆ ವೃದ್ಧ ನೋಡುವ ಪರಿ ಆ ಕ್ಷಣಕೆ ಅವನನ್ನೇ ನೋಡುವುದು..

    ReplyDelete
    Replies
    1. ರವಿ ಸರ್ ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...

      Delete
  6. ಜಲನಯನ,
    ಇಲ್ಲಂತೂ ಮಳೆ ಹನೀನೂ ಇಲ್ಲ. ನಿಮ್ಮ ಕವನದಲ್ಲಾದರೂ ಮಳೆ ಸುರಿಯಿತಲ್ಲ ಅನ್ನೋ ಸಮಾಧಾನ ಆಗ್ತಿದೆ!

    ReplyDelete
  7. ಸುನಾಥಣ್ಣ... ಹೌದಾ..?? ನನಗೆ ಕೆಲವು ಸ್ನೇಹಿತರು ಇಲ್ಲಿ ಮಳೆ ಬರ್ತಿದೆ ಅಲ್ಲಿನೂ ಸ್ವಲ್ಪ ಅಂದ್ರಿ...ಒಂದು ನಾಲ್ಕು ಸಾಲು ಹಾಕಿ ಅಂದ್ರು... ಆಗ ಮಾಡಿದ ಪಯತ್ನ... ಧನ್ಯವಾದ.

    ReplyDelete
  8. maLe barutta dhaNivarutta anta kaaytanE irbeku sir idu mugiyada kate

    ReplyDelete
  9. ಹೌದು ಸುಗುಣ...ದಿನಗಳೆದಂತೆ ವಿಪರೀತಗಳು ಪರಿಸರದಲ್ಲಿ ಕಾಣುತ್ತಿರುವುದು ನಿಜ... ಜೊತೆಗೆ ಅನ್ನದಾತನನ್ನು ಕಾಡುವ ರಾಜಕಾರಣಿಗಳು....!!!

    ReplyDelete
  10. ಸಂದಾಕದೆ ಕವನ.... ನಿಮ್ ಪೆನ್ ನಾಗೆ ಅದೆಂತೆಂತ ಸಾಲು ಹುಟ್ಟತಾವೋ.. ದೇವರೇ ಬಲ್ಲ... :)

    ReplyDelete
  11. ಧನ್ಯವಾದ ಕಾವ್ಯ...ಅಂಗೇಯಾ...ಈ ನಡ್ವೆ ಬ್ಲಾಗ್ ಆದಂಗೆ....ಬಿದ್ರೆ ಜೋರ್ ಮಳೆ ಇಲ್ಲಾಂದ್ರೆ...ಕೊಳೆ,,,ಹಹಹಹ

    ReplyDelete
  12. ಅಜಾದ್, ಗ್ರಾಮೀಣ ಭಾಷೆಯಲ್ಲಿ ಮಳೆಯ ಬಗ್ಗೆ ಬರೆದ ಕವನ ಸೂಪರ್...ಮೊದಲು ಅರ್ಥಮಾಡಿಕೊಳ್ಳುವುದು ಕಷ್ಟವಾಯ್ತು..ಮತ್ತೆ ಮತ್ತೆ ಓದಿದಾಗ ಸುಲಭವಾಯ್ತು...ನಮಗೂ ಇಲ್ಲಿ ಮಳೆ ಇಲ್ಲದೆ ಸಿಕ್ಕಾಪಟ್ಟೆ ಬಿಸಿಲು...

    ReplyDelete
  13. ಒಂದು KAVANA ಇಸ್ತವಾಗೋದು ನಮ್ಮ ಮುಂದೆ ಅದ್ರ ಚಿತ್ರಣ ಬಂದಾಗ ಮಾತ್ರ ಉತ್ತಮ ವಾದ SAALUGALU ...ಆಶಾವಾದಿ KAVANA

    ReplyDelete