ಮನಸ್ಸೊಂದಿದ್ದರೆ.. ಮಾರ್ಗವು ಉಂಟು
“ನಮಸ್ಕಾರ ಸಾ...”
ದನಿ ಬಂದ ಕಡೆ ನೋಡಿದೆ...ಅರೆರೆ!! ನಮ್ಮ ಎಂಕ್ಟೇಸಾ.... !!!!!???
“ಏನಪ್ಪಾ ವೆಂಕ್ಟೇಶ್ ಅರಾಮಾ..?”
“ಏನೋ ಸಾ..ಇಂಗಿದೀನಿ ನೋಡಿ...!! ಅಲ್ಲ್ ಸಾ ನಂಗೆss ಎಂಕ್ಟೇಸಾ ಅಂತಿದ್ದೋರು ನೀವು, ಈವಾಗೇನು??
ಸಂಸ್ಕೃತ್ದಾಗೆ ಬೈಯ್ತಿದ್ದೀರಿ..???”
ಚಕಿತನಾದೆ..!!
“ಏನು ಬೈಯ್ತಿದ್ದೀನಾ..?? ಇದೇನಪ್ಪಾ ಎಂಕ್ಟೇಸಾ....ಹೀಗ್ ಹೇಳ್ತೀಯಾ...??”
“ಊಂ...ಅಂಗನ್ನಿ ಮತ್ತೆ... ಈವಾಗ್ಸರಿಯೋಯ್ತು...ಅಂಗೆ ಕನ್ನಡ್ದಾಗೆ ’ಎಂಕ್ಟೇಸಾ’ ಅಂದ್ರೆ
ಮರ್ವಾದೆ ಜಾಸ್ತಿ....”
ಹೂಂ..ಇವನೆಲ್ಲಿ ಬದಲಾಗ್ತಾನೆ...!!??? ಆಗ ನನ್ನ ಜೊತೆ (ನಾನು ಪಿ ಎಚ್ ಡಿ ಮಾಡೋಕೆ
ಕಾಲೇಜಿಗೆ ಹೋಗಿದ್ದಾಗ) ಒಂದು ಕೋರ್ಸ್ ತಗೊಂಡಿದ್ದ. ಪಗಡ್ದಸ್ತ ಮಂಡ್ಯದ್ ಆಳು ಎಂಕ್ಟೇಸಾ... !!
ಅಂದಹಾಗೆ “ಎಂಕ್ಟೇಸಾ” ಅಂತ ಹೆಸರು ಇವನೇ ಅಂತೆ ಚೇಂಜ್ ಮಾಡ್ಸಿದ್ದು...ಊಂ..., ??!!
“ಯಾಕೋ.?” ಅಂತ ಕೇಳಿದ್ದೆ, ಅದಕ್ಕವನು,
“ಸಾ, ಓದು ನಂಗಂತೂ ತಲೆಗತ್ತಲ್ಲ.. ಏಳೆಂಟ್ ವರ್ಸ ಆದ್ರೂ ನಾಲ್ಕ್ ವರ್ಸದ್ ಬಿ.ಎಪ್ಪೆಸ್ಸಿ
ಮುಗ್ದಿಲ್ಲಾ... ..” ನಾನಂದೆ..
“ಬಿಎಪ್ಪೆಸ್ಸಿ ..ಅಲ್ವೋ ಮಾರಾಯಾ ಬಿ.ಎಫ್.ಎಸ್ಸಿ ಅನ್ನು...”
“ಪ್ಚ್.. ಬುಡಿ ಸಾ... ಅದನ್ನ ಅತ್ತಾಗೆ. ಎಪ್ಪೆಸ್ ಆದ್ರೆ ಏನು...?? ಅದಲ್ಲ ಇಸ್ಯಾ.., ನಿಮ್ಮಂಗೆ ನನ್ನ ಎಲ್ರೂ “ಸಾ” ಅಂತ ಕರಿಯೋದು ಯಾವಾಗ ???
ಈ ಜನ್ಮಕ್ಕಂತೂ ಆಗಾಣಿಲ್ಲ...ಅದ್ಕೇಯಾ..ನನ್ನೆಸ್ರೇ ಬದ್ಲಾಯಿಸ್ಕೊಂಡ್ರೆ..sss.. ನಮ್ ಪ್ರೊಪೆಸರ್ರೂ ನನ್ನ “ಸಾ” ಅನ್ನೊಂಗಾಯ್ತಲ್ವಾ...???”
ಅನ್ನೋದೇ ?? ಆಸಾಮಿ.
ಅಟೆಂಡೆಂಸ್ ಕರ್ದಾಗೆಲ್ಲಾ...”ಸಾ... ವೆಂಕಟೇಶ್ ಅಲ್ಲ..ಸಾ, ನನ್ನೆಸ್ರು ’ಎಂಕ್ಟೇಸಾ’ ..ಅಂಗೇ ಕರೀರಿ...ಅಂತ
ಪ್ರೊಫೆಸರನ್ನೇ ದಬಾಯ್ಸಿದ್ನಂತೆ.. ಭೂಪ!!!
ವಿಷಯಕ್ಕೆ ಬರೋಣ...,
“ಏನಿದು ಇಷ್ಟೊಂದು ಜೋರಾಗಿ ಡ್ರೆಸ್ ಮಾಡಿಕೊಂಡಿದ್ದಾನೆ? ರೇ ಬ್ಯಾನ್ ಕೂಲಿಂಗ್ ಗ್ಲಾಸು.?!!
(ಮಂಗಳೂರಾದ್ರೂ ಡಿಸೆಂಬರ್ ಆಗಿದ್ರಿಂದ ಬೆಳಿಗ್ಗೆ ಸ್ವಲ್ಪ ತಣ್ಣಗೇ ಇತ್ತು..ಅದು ಬೇರೆ
ಮಾತು...!!!) ಬಿ ಎಫ್ ಎಸ್ಸಿ ಮುಗ್ಸಿದ್ನಾ?? ಕಡೆಗೂ..???”
ಪಕ್ಕದಲ್ಲೇ ಈಗ ತಾನೇ ಪಾರ್ಕ್ ಮಾಡಿದ್ದ Inova ನೋಡಿ ನನ್ನ ಯೋಚನೆಗಳೂ ಭ್ರಷ್ಟಾಚಾರಕ್ಕೆ
ಇಳಿದವು. ಏನಾದ್ರೂ ದುಬೈ ಡಾನ್ ಗೀನ್ ಅಂತ..!!.. ತಣ್ಣನೆ ಗಾಳಿಲೂ ಮೈ ಸ್ವಲ್ಪ ನಡುಗಿತ್ತು...
“ಸಾ ಮುಗಿಸ್ಬಿಟ್ಟೆ ಸಾ ಬಿ ಎಪ್ಪೆಸ್ಸಿ, ಎಂಟ್ನೇ ವರ್ಸಕ್ಕೇ !!” ಅಂದ ಎದೆ ಮುಂದೆ ಮಾಡ್ತಾ
..ಬೀಗ್ತಾ...
ಅಲೆ ಇವನ...!!!?? ಅವನು ಹೋಗ್ತಾ ಇದ್ದ ವೇಗ.. ೧೦-೧೨ ವರ್ಷ ಆದ್ರೂ ಫಿಸ್ಶರೀಸ್ ಇರ್ಲಿ,
ಬೇಸಿಕ್ ಸಬ್ಜೆಕ್ಟ್ ಅಂತ ಇದ್ದಿದ್ದ ಭಯಾನಕ ಭಟ್ರ ಇಂಗ್ಲೀಷ್ ಸಹಾ ಪೂರ್ಣ ಮಾಡೋದೇ ಸಾಧ್ಯ
ಇರ್ಲಿಲ್ಲ .!!! .ಹ್ಯಾಗಾಯ್ತು..??
“ಸಾ, ನಮ್ ಬಟ್ರು.. ನೀವು ಪಿ ಎಚ್ ಡಿ ಮುಗ್ಸಿ ಓದ್ರಲ್ಲಾ .. ಆ ತಿಂಗ್ಳ್ ಕೊನೆಲಿ ಊರಿಂದ
ಬರ್ಬೇಕಾದ್ರೆ..ಕಾಲೇಜ್ ಅತ್ರ ಲೆವಲ್ ಕ್ರಾಸಿಂಗ್ ಕ್ರಾಸ್ ಮಾಡಾಕೋಗಿ ಸ್ಕೂಟರ್ರಾ ದಬ್ಬಾಂಗ್ಕಂಡ್
ಬಿದ್ದ್.. ಗಾಯ ಆಗಿ ಕುಯ್ಯೋ ಮುರ್ರೋ ಅನ್ಬೇಕಾದ್ರೆ.. ನಾನವರ್ನ ಎತ್ತಕ್ಕೋಂಡ್ ಓಗಿ ಆಸ್ಪಿಟಲ್ಲ್
ಸೇರಿಸ್ದೆ, ಊಂ.., ಎಲ್ಡು ದಿನ ಗ್ಯಾನ
ಇರ್ನಿಲ್ಲ...ಅಂಗ್ ಬಿದ್ದಿದ್ರು..., ನೋಡ್ಕಂಡೆ..ಅಲ್ಲೇ ಇದ್ದು....ಅದೇ ನೋಡಿ...ನೆಕಷ್ಟು ಟೇಮು
..ಇನ್ನೊಂದಪ ಇಂಗ್ಲೀಷ್ ಕೋರ್ಸು ತಕ್ಕಂಡಾಗ.. ಮುವತ್ತೈದ್ ಕೊಟ್ ದಬ್ಬಿದ್ರು ನನ್ನ”
ಅರೆ ಇವನಾ...!!! ನನ್ನ ಮನಸಲ್ಲಿದ್ದದ್ದು ಕೇಳ್ಬೇಕು ಅನ್ನೋವಾಗ್ಲೇ ಅದನ್ನೇ
ಹೇಳಿದ್ನಲ್ಲಾ,,, ಟೆಲಿಪತಿ ಏನಾದರೂ ಕಲಿತಿದ್ದಾನಾ..??!! ಅನ್ಸಿತ್ತು
“ಅದ್ಸರಿ, ಇದೇನು? ಟ್ರಿಮ್ಮಾಗಿ ಇನೋವಾ ತಗಂಡು ಕಾನ್ಫರೆನ್ಸ್ ಗೆ ಬಂದಿದ್ದೀಯಾ... ಸೈಂಸೂ
ನೀನು ದೂರ್ದೂರ ಅಲ್ವಾ...??” ಅಂದೆ ತಿಳ್ಕೊಳ್ಳೋ ಕುತೂಹಲದಿಂದ.
ದೂರ ಇದ್ದ ಒಂದು ಪ್ಲಾಸ್ಟಿಕ್ ಚೇರನ್ನು ’ದರ್ರ್’ ಅಂತ ಎಳೆದು ಕೂತ್ಕೊಂಡ ಪಕ್ಕ...
“ಸಾ..ಕೇಳಿ ನನ್ ಕತೆಯಾ.....
ಬಿ.ಎಪ್ ಎಸ್ಸಿ ಮುಗ್ಸಿ ಓದ್ನಾ..?? ಕೆಲ್ಸ ಯಾರ್ ಕೊಟ್ಟಾರು ನನಗೆ ?? ಸರಿ ಅಳ್ಳಿ ದೊಡ್
ಕೆರೆ ಆಕ್ಸನ್ ಆಕುದ್ರು.. ಮೀನ್ಸಾಕಾನೆ ಅಂದ್ಕೊಂಡು ಯಾಲಮ್ ಕೂಗ್ದೆ.. ಒಂದೂವರೆ
ಲಕ್ಸಕ್ಕೆ...ಎಲ್ಲಾರೂ... ತಲ್ಕೆಟ್ಟದೆ ಎಂಕ್ಟೇಸಂಗೆ..ಅಲ್ಲಾ ನೆಟ್ಟಗೆ ಒಂದು ಲಕ್ಸ ಆದಾಯ
ಸಿಗಲ್ಲ ಈ ಕೆರೆವಳ್ಗೆ...ಒಂದೂವರೆ ??? ಅಂತ ಬೈದದ್ದೇ..!!
“ಊಂ...ಆ ಮೇಲೆ..?” ಕುತೂಹಲ ಜಾಸ್ತಿ ಆಯ್ತು ನಂದು...ಕೇಳಿದೆ.
“ಕಾಲೇಜ್ ಗೆ ಬಂದೆ, ಬಸ್ಯ (ಬಸವರಾಜ) ಪ್ರೊಪೆಸರ್ ಆಗವ್ನಲ್ಲಾ..?” (ಇವನ ಕ್ಲಾಸ್ ಮೇಟ್
ಆಗಿದ್ದ ಬಸವರಾಜ ಇವನು ಬಿ ಎಫ್ ಎಸ್ಸಿ ಮುಗ್ಸೋದ್ರೊಳಗೆ ಅವನಿಗೇ ಲೆಕ್ಚರರ್ ಆಗಿದ್ದ..ಅದು ಬೇರೆ
ಮಾತು..!!)..
“ಊಂ.. ಅವನತ್ರ ಹೋದ್ಯಾ...??”
“ಊಂ ಸಾ.., ಇಗಿಂಗೆ..ಕೆರೆ ತಕ್ಕಂಡೆ.. ನೀರು ಯಾವಾಗ್ಲೂ ಭರ್ತಿ ಇರ್ತದೆ, ಅಮ್ಮಮ್ಮಾ
ಅಂದ್ರೆ ಒಂದು ತಿಂಗಳು ..ತುಂಬಾ ಕಮ್ಮಿ ನೀರಿರ್ತದೆ, ಮೀನ್ಸಾಕಾನೆ ಅಂತಿದ್ದೀನಿ..ಎಲ್ಪ್ ಮಾಡೋ
ಒಸಿ ಬಸ್ಯಾ” ಅಂದೆ. ಸರಿ, ಅವನೂ ಬೂದನೂರು, ಬದ್ರಾ ಅಂತೆಲ್ಲಾ ಸ್ನೇಯಿತ್ರತ್ರ ಯೋಳಿ..ಮೀನ್ಮರಿ
ಕೊಡ್ಸಿ ಊರಿಗ್ಬಂದು ಅವಾಗಾವಾಗ ಎಲ್ಪ್ ಮಾಡ್ದ, ನಾನು ಅತ್ ವರ್ಸ ಕಲ್ತಿದ್ದೂ ಸಾರ್ತ್ಕ ಆತು,
ಸಂದಾಕೇ ನೋಡ್ಕಂಡೆ,.. ಹತ್ ತಿಂಗಳಾಯ್ತು, ನೀರು ಕಮ್ಮಿ ಆಯ್ತು, ಬೆಂಗಳೂರಿಂದ ಇಲಾಕೆವೋರು
ಬಂದ್ರು, .. ಅದೇನೋ ರೀಟೈಲ್ ಅಂತಲ್ಲಾ..?? ನಮ್ಮ ಸಿರಿದರ (ಶ್ರೀಧರ,,ಆವನ ಬಾಯಲ್ಲಿ ಹಾಗೇ ಹೊರಡೋದು)
ಅದ್ರಾಗೇ ಇರೋದು ..
“ಎಂಕ್ಟೇಸಾ ಎಲ್ಲಾರ್ಕಿಂತ ಐದು ರೂಪಾಯಿ ಕೇಜಿ ಮ್ಯಾಲೆ ಜಾಸ್ತಿ ಕೊಡ್ತೀನಿ ನಂಗೇ ಕೊಡು”
ಅಂದ...
ಸರಿ ಎಲ್ಲಾ ಬಂದ್ರು, ಇಲಾಕೆವೋರು ದೊಡ್ಡ ದೊಡ್ಡ್ ಬಲೆ ತಂದ್ರು.., ಇಡುದ್ರೆ ಮೀನು.!! ಒಂದೊಂದ್
ಮೀನೂ ಒಂದ್ಕೇಜಿ ಒಂದೂವರೆ ಕೇಜಿ.!!!!. ಡೈರೆಕ್ಟ್ರು ಅಬ್ಬಬ್ಬಾ!! ಅಂತ ಬೆಳ್ಳಿಟ್ಕಂಡ್ರು..ಬಾಯ್ಗೆ!!
ಒಟ್ 24 ಟನ್ ಮೀನ್ ಸಿಕ್ತು ನೋಡಿ...sss, ಕರ್ಚು ಓಗಿ 10 ಲಕ್ಸ
ಅತ್ರತ್ರ ಉಳ್ಕತು. ಎರಡ್ನೇ ಕಿತ ಮಳೆ ಇರ್ಲಿಲ್ಲ ಎಚ್ಚಾಗಿ, ನೀರೂ ಕಮ್ಮೀನೇಯಾ, ಅದ್ಕೆ ಬಸ್ಯಾ..
ಆಪ್ರಿಕಾ ಕ್ಯಾಟ್ ಪಿಸ್ (ಅದೆಂತದೋ ಕೊರ್ದ ಇದ್ದಂಗಿರ್ತದೆ) ಆಕು ಅಂದ, ಆಂದ್ರಾದಿಂದ ಮರಿ ತರ್ಸಿ
ಆಕುಸ್ದಾ, ನೀರ್ಕಮ್ಮಿ ಇದ್ರೂ ಅದ್ಕೆ ಕೋಳಿ ಕಸಾಯಿ ವೇಸ್ಟು ಪಾಸ್ಟು ಅಂತ ಎಲ್ಲಾ ಆಕ್ದೆ,
ತಿಂದಾಕೋದು..!! ಊಂ..!!! ಬೋ ಪಸಂದಾಗಿ ಬೆಳೀತು..ಮೀನು..ಅಳ್ಳಿ ಬಡ್ಮಕ್ಳಿಗ್ ಎಲ್ಲಾರ್ಗೂ
ಅವಾಗಾವಾಗ ಉರ್ಕಂಡ್ ತಿನ್ನಕೂ ಕೊಟ್ಟೆ, ಆಟೆಲ್ಲಾ ಆದ್ರೂ... ಅತ್ರತ್ರ 53 ಟನ್ ಸಿಗ್ತು ಸಾ..ಮೀನು... !!!!
????...........????
“ಸಾ...ಸಾ...!!”
ಅಲುಗಾಡಿಸದ ಎಂಕ್ಟೇಸ ನನ್ನನ್ನ... ನಿಜಕ್ಕೂ ಅಶ್ಚರ್ಯಚಕಿತನಾಗಿದ್ದೆ...
“ಅಲ್ಲಾ ಎಂಕ್ಟೇಸಾ... ನೀನು ಬಿಎಪ್ ಎಸ್ಸಿ ಮಾತ್ರಾನೇ ಮಾಡಿದ್ರೂ ನಮಗಿಂತ ಚನ್ನಾಗಿ
ಸಂಪಾದ್ನೆ ಮಾಡ್ದೆ, ಊರಿಗೂ ಸಹಾಯಾ ಆಯ್ತು, ಅಳ್ಳಿ ಬಡ್ಮಕ್ಳೂ ಪ್ರೋಟೀನ್ ಆಹಾರ
ತಿನ್ನೋಹಾಗಾಯ್ತು..., ಎಲ್ಲೋ ಹೋಗಿ ಏನೋ ಮಾಡೋ ಪಿಎಚ್ ಡಿ ಗಳಿಗಿಂತಾ ಹಳ್ಳಿಲೇ ಇದ್ದು ದುಡಿದು
ನಾಡಲ್ಲಿ ಏಳಿಗೆ ಕಾಣೋ ನೀನೇ ಬೆಟರ್ರು” ಅಂದೆ, ನಿಜಕ್ಕೂ ಅವನ ಕಾಯಕವನ್ನು ಮೆಚ್ಚಿಕೊಳ್ತಾ......
ನಿಜ ಸರ್, ಎಂಕ್ಟೇಸಾ.... ಊರಲ್ಲೇ ಇದ್ದು ಜನರಿಗೂ ಊರಿಗೂ ಉಪಾಕಾರ ಆಗೋ ಹಾಗೆ ಮಾಡಿದ್ದಾರೆ. ಎಷ್ಟು ವಿದ್ಯೆ ಇದ್ದರು ಅಷ್ಟೇ ಇವರ ಮುಂದೆ ಎಲ್ಲಾ ನಿವಾಳಿಸಿ ಬಿಡಬೇಕು.
ReplyDeleteಎಂಕ್ಟೇಸರಿಗೊಂದು ಜೈಕಾರ :)
ಇದು ಇವನೊಬ್ಬನೇ ಅಲ್ಲ ಅವನಂತಹ ಎಷ್ಟೋ ಅಧ್ಯಯನ ಸಾಧನಾ ಶೂನ್ಯರು ವಾಸ್ತವಿಕ ಸಾಧನಾ ವೀರರಾಗಿದ್ದಾರೆ...ಧನ್ಯವಾದ ಸುಗುಣ
Deleteಚನ್ನಾಗಿದೆ ಲಹರಿ ಸರ್.. ಒಳ್ಳೆ ನೀತಿ ಕೂಡಾ ಇದೆ..
ReplyDeleteಊಂ ಮೇಡಮ್ನೋರೇ.. ಲಾರಿಯೊಳ್ಗೆ ಆಕ್ಕೊಂಡೋದ್ರು ಮೀನಾ....
Deleteಬದುಕಿಗೊಂದು ದಾರಿ..
ReplyDeleteನಾ ಏಳನೇ ತರಗತಿ ಓದೋವಾಗ ಕನ್ನಡ ಪುಸ್ತಕದಲ್ಲಿ ನಮಗಿದ್ದ ಒಂದು ಪಾಠ..
ಅಲ್ಲೂ ಹೀಗೆ ಕಥಾ ನಾಯಕ ಶಿವೂ.. ಗ್ರಾಜುಯೇಟ್ ಆದ ಬಳಿಕ ಪಟ್ಟಣ ಸೇರದೆ ಅಪ್ಪ ಬಿಟ್ ಹೋದ ಜಮೀನಿನಲ್ಲೆ ವ್ಯವಸಾಯ.. ಹೈನುಗಾರಿಕೆ ಮಾಡಿ.. ಅದರಿಂದ ಹೆಚ್ಚು ಇಳುವರಿ & ಲಾಭ ಮಾಡಿ ಇಡೀ ಅವರ ತಾಲ್ಲೂಕಿಗೆ ಮಾದರಿ ರೈತನಾಗೋ ಕಥೆ ಆ ಪಾಠದ್ದು..
ಅದರ ಮುಂದುವರೆದ ಭಾಗದ ಹಾಗಿತ್ತು ಈ ಎಂಕ್ಟೇಸ ನ ಕಥೆ.. ಎಂಕ್ಟೇಸನ ಮಾದರಿ ಅಂತ ಒಂದು ಕಿರು ಚಿತ್ರ ತೆಗೆದರೂ ತೆಗೆಬೋದು.. :) :)
ಪುಸ್ತಕ ಇಲ್ಲದೆ ಕೂಡ ಬದನೆ ಕಾಯಿ ಬೆಳೆಯೋ ಕಲೆ ನಮ್ಮ ಹಳ್ಳಿಗರಿಗೆ ಮೊದಲಿಂದಲೂ ಗೊತ್ತು.... ನಾವು ಎಷ್ಟೇ ಓದಿದರೂ ಸರಿಯಾಗಿ ಒಂದು ಕಿಲೋ ಬದನೇಕಾಯಿ ಕೊಳ್ಳೋ ಬುದ್ಧಿಮತ್ತೆ ಎಷ್ಟೋ ಬಾರಿ ನಮ್ಮಲ್ಲಿರಲ್ಲ.. ;) ;)
ಎಂಕ್ಟೇಸನ ಕಥೆ ತುಂಬಾ ಚೆನ್ನಾತ್ತು ಆಜಾದ್ ಅಣ್ಣ.. ಅವ್ರ ಕೈಯಿಂದ ಒಂದು ಅಟೋಗ್ರಾಫ್ ಹಾಕ್ಸ್ಕೊಳ್ಳೋ ಆಸೆ ಅನ್ನಿ.. :) :)
ಧನ್ಯವಾದ ಸತೀಶ್... ಹೀಗೂ ಇರ್ತಾರೆ ಎಷ್ಟೋ ಜನ ...ನಾವೇ ಗುರುತಿಸೊಲ್ಲ...ಅವರನ್ನ
Deleteಎಂಥೆಂಥಾ ಸಾದಕರು ಇದ್ದಾರಲ್ಲಾ ನಮ್ಮ ಮಧ್ಯೆ...? ಅವರನ್ನು ಗುರುತಿಸೋದು, ಅವರ ಕಥೆಯನ್ನು ಎಲ್ಲರಿಗೂ ತಲುಪಿಸೋದು ತುಂಬಾ ಮುಖ್ಯ ಅನಿಸತ್ತೆ .... ಎಲ್ಲರಿಗೂ ಮಾದರಿಯಾಗಲಿ ಎಂಕ್ಟೇಸಾ... ಪ್ರೋತ್ಸಾಹದಾಯಕ ಲೇಖನ ಸರ್...ಧನ್ಯವಾದ..ಕಥೆ ಹೇಳಿದ ರೀತಿ ಸುಪರ್...
ReplyDeleteಸಾಧಕರಿಗೆ ಕೊರತೆಯಿಲ್ಲ ದಿನಕರ್ ಆದರೆ ಅಂತಹ ಸಾಧಕರಿಗೆ ಬಾಧಕರೂ ಹುಟ್ಕೋತಾರೆ ಅದೇ ಚಿಂತೆ ...ಧನ್ಯವಾದ
Deleteತುಂಬಾ ಚೆನ್ನಾಗಿದೆ..ಅಜಾದ್ ಭಾಯ್... ಅವರಿಗೊಂದು ಸಲಾಂ... :)
ReplyDeleteಇದೊಂದು ನಿದರ್ಶನೀಯ ಉದಾಹರಣೆ ಅಷ್ಟೇ..ಹೀಗೂ ಇರ್ತಾರೆ ನಮ್ಮ ಮಧ್ಯೆ...ಧನ್ಯವಾದ ಸುದೀಪ/
Deleteಜಲನಯನ,
ReplyDeleteಕೋಟಿ ವಿದ್ಯೆಗಿಂತ ನಾಟಿ ವಿದ್ಯೆಯೇ ಮೇಲು ಅನ್ನೋದನ್ನ ಎಂಕ್ಟೇಸಾನ ಮೂಲಕ ಚೆನ್ನಾಗಿ ತಿಳಿಸಿದ್ದೀರಿ!
ಕೋಟಿ ವಿದ್ಯೆಯಿಂ ಮೇಟಿ ವಿದ್ಯೆಯೇ ಮೇಲು- ದಿಟವಾದ ಮಾತು ಸುನಾಥಣ್ಣ...ಧನ್ಯವಾದ
Deleteಸರ್ಜಿ..ಮೊದಲು ನಿಮ್ಮ ಹಾಸ್ಯ ಪ್ರಜ್ಞೆಗೆ ನನ್ನ ನಮನಗಳು
ReplyDeleteಎರಡನೆಯದು ಭಾಷಾ ಪ್ರಯೋಗ..ಎಷ್ಟು ಸೊಗಸಾಗಿದೆ ಆ ಪ್ರಾಂತ್ಯದ ಭಾಷೆ
ಮೂರನೆಯದು ಹಾಸ್ಯದಲ್ಲೂ ಜೀವಂತಿಕೆ ತುಂಬಿ ಒಂದು ಸುಂದರ ನೀತಿ ತೋರಿಸಿಕೊಟ್ಟಿರುವ ಘಟನೆ...
ಮನಸಿದ್ದರೆ ಕತ್ತಲೆಯಲ್ಲೂ ಮಾರ್ಗ ಸಿಗುತ್ತದೆ..ಮನ ಮುದುಡಿದಾಗ ಇಂತಹ ಕಥೆಗಳು ಮನಸಿಗೆ ಸಂತಸ ನೀಡುತ್ತದೆ ಹಾಗೆಯೇ ಬದುಕಿಗೆ ಹುಮ್ಮಸ್ಸು ತುಂಬಿ ಏನೇ ಬಂದರೂ ಮುನ್ನುಗುವ ಸ್ಥೈರ್ಯ ತುಂಬುತ್ತದೆ.ಧನ್ಯವಾದಗಳು ಇಂತಹ ಸುಂದರ ಮಾಲಿಕೆ ಕೊಟ್ಟದ್ದಕ್ಕೆ..
ಶ್ರೀಮನ್, ಧನ್ಯವಾದ... ನಮ್ಮಲ್ಲಿ ಎತ್ತರಕ್ಕೆ ಏರುವವರು ಪಾರಂಪರಿಕ ವಿದ್ಯೆಯಲ್ಲಿ ಸಾಧಕರಾಗಿರಬೇಕೆಮ್ದೇನಿಲ್ಲ... ಬಹುಶಃ ನಮ್ಮ ಯಶಸ್ಸಿಗೆ ಓದಿನಲ್ಲಿ ಕಷ್ಟಪಟ್ಟವರನ್ನು ನೋಡಿ ಕಲಿಯೋದು ಹೆಚ್ಚು ಉಪಯುಕ್ತ
Deleteನನಗೆ ನಮ್ಮೂರ ಕಡೆ ಬದರಿಯವರೆ ಎಂದರೆ ಯಾಕಪ್ಪ ಬೈತವ್ರೆ ಅನಿಸ್ತದೆ. ಅವರು ನನ್ನನ್ನು ’ಬದ್ರಗ್ಯಾ’ ಎಂದರೆ ಓಹೋ ಈಗ ರೂಟಿಗೆ ಬಂದ್ರು ಅನ್ನೋ ನೆಮ್ಮದಿ.
ReplyDeleteಪ್ರೊಫೇಸರ್ ಕೈಯಲ್ಲೇ ಸಾ ಎನ್ನಿಸಿಕೊಂಡ ಭೂಪನಿಗೆ ನಮೋ ನಮಃ
ಅದಕ್ಕೆ ಸಾ ಹಳ್ಳಿ ಬುದ್ದಿವಂತ್ರೂ ಅನ್ನೋದು! ಓದಿ ದಬ್ಬಾಕೋ ಜನ ಸಂಬಳದ್ ದಿನ ಏಟಿಎಮ್ ಮುಂದೆ ನಿಂತ್ಕಂಡು ಹಲ್ ಗಿಂಜ್ ತಿದ್ರೇ. ಹಳ್ಳಿ ಮಂದಿ ಕಾರ್ನಾಗ್ ಇಳಿದು ’ಏನ್ಲಾ, ಬದ್ರಗ್ಯಾ ಸಂಬ್ಳಾತಾ?" ಅಂತ ರೇಗಿಸ್ತಾರೆ!!!
ಬದರಿ ಧನ್ಯವಾದ..ಬುದ್ಧಿ ಪಟ್ಟಣದವರ ಅಥವಾ ಕಾನ್ವೆಂಟ್ ಓದಿದದವರ ಸ್ವತ್ತಲ್ಲ...
Deleteನಿಜ, ಮನಸ್ಸಿದ್ದರೆ ಮಾರ್ಗ ಅನ್ನೋದಕ್ಕೆ ಒಳ್ಳೆಯ ಉದಾಹರಣೆ ನಿಮ್ಮ ಎಂಕ್ಟೆಸಾ ....
ReplyDeleteಒಂದು ನೀತಿ , ಒಬ್ಬ ವ್ಯಕ್ತಿಯ ಸಾಧನೆಯನ್ನು ನವಿರಾದ ಹಾಸ್ಯದ ಮೂಲಕ ಹೇಳಿದ್ದಕ್ಕೆ hats off sir..
ಸಂಧ್ಯಾ ಧನ್ಯವಾದ... ಸಮಯಕ್ಕೆ ತಕ್ಕಂತೆ ತನ್ನಲ್ಲಿರುವ ಅಲ್ಪ ಸಾಧನಗಳನ್ನೇ ಉಪಯೋಗಿಸಿ ಗರಿಷ್ಟ ಪ್ರಯೋಜನ ಪಡೆಯುವವ ನಿಜವಾದ ಸಾಧಕ..ಅಲ್ವಾ
Deleteಓದಿ ಬೋ ಕುಸಿ ಆತು ಸಾ...
ReplyDeleteಸುಮ್ನೆ ಪುಸ್ತಕದಾಗೆ ಓದಿ ಮಡುಗುದ್ರೆ ಏನು ಉಳಿಯಾಕಿಲ್ಲಾ ಅಲ್ವಾ ಸಾ??
ಒಂಥರಾ ನೆನಪಿನಲ್ಲುಳಿಯುವ ನಿರೂಪಣೆ ಸಾ,,ಓಹ್ ಸರ್..
ಮೊದಲು ಇದೇನು ಬರಿಯ ಹರಟೆಯೇನೋ ಅಂದುಕೊಂಡೆ ,ಬರಬರುತ್ತಾ ಒಂದು ಸಾಧಕನ ಪರಿಚಯವಾಯಿತು..
ತುಂಬಾ ಇಷ್ಟವಾಯ್ತು....
ಬ್ಲಾಗಿನ ಹೆಸರಿಗೂ,ಈ ಬರಹಕ್ಕೂ ಯಕ್ಕಾ ಜೋಡಿ..(ಪಕ್ಕಾ ಜೋಡಿ)
ಬರೆಯುತ್ತಿರಿ...
ಚಿನ್ಮಯ ಕುಸಿ ನಂಗೂ ಆತಪ್ಪಾ... ದನ್ಯವಾದ
Deleteಆಲ್ವಾ ಸರ್ ....ಇಂತಹ ಅನೇಕ ಎಂಕ್ಟೇಸಾ ರು ತೆರೆ ಮರೆಯಲ್ಲಿ ತಮ್ಮದೇ ಲೋಕದಲ್ಲಿ ಯಾವುದೇ ಪ್ರಚಾರ ವಿಲ್ಲದೆ ಇದ್ದರಲ್ವೆ?? ಅಂತವರನ್ನು ಗುರುತಿಸುವ ಪ್ರಯತ್ನ ನಾವು ಮಾಡ್ಬೇಕು ಅನ್ಸುತ್ತೆ ಸರ್.....ಸೂಪರ್ ಬರಹ ......ಭಾಷಾ ಶೈಲಿ ಇಷ್ಟ ಆಯಿತು ಸರ್....
ReplyDeleteಅಶೋಕ್ ಧನ್ಯವಾದ... ಹೌದು ಹಲವರು ಸಾಧಕರು ಗುರುತಿಸುವವರು ಬೇಕು ಅಷ್ಟೇ...
Delete'kereya neeranu kerege challi' gnapaka bantu.. Kalitiddu namma janagalige upayoga aguvantadare saarthaka..
ReplyDeleteHeege namma balannana jote hogiddaga intaha sadhakarannu omme bheti madidde.. avaru nenapadru..
ಹೌದು ದೀಪ್ ನಮ್ಮ ವಿದ್ಯೆ ನಮ್ಮ ಮನೆಗೆ ನಾಡಿಗೆ ಉಪಯೋಗವಾಗದಿದ್ದರೆ ಓದಿಯೂ ವ್ಯರ್ಥ....
ReplyDeleteಎಷ್ಟೋ ಬಾರಿ ನಾನು ಯೋಚಿಸಿದ್ದಿದೆ, ಸಂಶೋಧನೆ ಎಂದು ಕಾಲ ಕಳೆಯದೆ ಜನರಿಗೆ ಉಪಯೋಗವಾಗುವಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು.ಆದರೆ ನಿಮ್ಮ ಗೆಳೆಯ ಎಂಕ್ಟೇಸಾರ ಹಾಗೆ ಬದುಕಲು ಮನದ ಆಳುಕು ಬಿಡುತ್ತಿಲ್ಲ.
ReplyDeleteತುಂಬಾ ಚೆಂದದ ಬರಹ.
ಧನ್ಯವಾದ ರಶ್ಮಿ...ಶುಭ ಸ್ವಾಗತ ನನ್ನ ಜಲನಯನಕ್ಕೆ.
ReplyDelete