Saturday, March 9, 2013

ಶಿವಪ್ಪಾ ಕಾಯೋ ತಂದೆ


(ಚಿತ್ರ ಕೃಪೆ: https://fbcdn-sphotos-b-a.akamaihd.net/hphotos-ak-prn1/544330_440301269378501_1118927512_n.jpg)

ಶಿವಪ್ಪಾ ಕಾಯೋ ತಂದೆ

ಅವತರಿಸಿ, ನೀ ಸುರಿದು
ಗಂಟಲಿಗೆ ವಿಷವಾ
ಮಂಥನದ ಚಿಂತೆಯನು
ತೊಡೆದೆಯಾ ಶಿವಾ

ಜಗದೊಳಗೆ ಹೊರಗೆ
ತುಂಬಿಹುದು ನಂಜು
ಕವಿದಿಹುದು ಮಂಕು
ಬೆಳಗೊಂದು ಪಂಜು

ಶಿವರಾತ್ರಿ ಪ್ರತಿರಾತ್ರಿ
ಮನುಜನಿಗೆ ಬೇಕು
ಮಲಿನವನು ತೊಳೆಯುತಲಿ
ನಿಜ ನಾಲಗೆ ಪಲಕು

ರಕ್ಕಸರು ತುಂಬಿಹರು
ನೆಕ್ಕುವರು ಸುರೆಯಾ
ತಡೆಯಿವರ ಕೊಟ್ಟು ವಿಷ
ಅಳಿಸುವರು ಧರೆಯಾ

ದೇವನನೇ ದಾನವಿಸಿ
ಮೆರೆವುದಿವರಿಗೆ ಗೊತ್ತು
ಅರಿತಿರುವೆ ನೀ ಸಕಲ
ತಡೆ ವಿನಾಶದ ಹೊತ್ತು

ಸಾಮಾನ್ಯ ಜನಕೆಲ್ಲಿ
ಮಾನ್ಯತೆಯ ಬದುಕು
ನಿನಮೆಟ್ಟಿಲೇರುವುದಕೂ
ಲಂಚ ಕೊಡಬೇಕು

ಮಗನೆಂದು ಗಣಿಸದೆಯೇ
ಗಣಪನಾ ತಲೆಕಡಿದೆ
ಈ ಲಂಚಕೋರರನು
ಬಿಡುವೆ ಹೀಗೇಕೆ ಬರಿದೇ?

ಆಯ್ದು ಬಿಡು ಹುಳುಗಳನು
ನಂಜುಕಾರುವ ಮುನ್ನ
ಕಾಯ್ದುಕೋ ನಿನ ಜಗವ
ಹೊತ್ತು ಮೀರುವ ಮುನ್ನ

6 comments:

  1. ಆಜಾದೂ...

    ನಿಜ ಶಿವ ರಾತ್ರಿಯ ಅರ್ಥ ಇಲ್ಲಿದೆ.....

    ನಮ್ಮೆಲ್ಲರ ಅಸಹಾಯಕತೆಯ ಧ್ವನಿ ಇಲ್ಲಿದೆ....

    ಬಹಳ ಅರ್ಥಗರ್ಭಿತ ಕವನ...

    ReplyDelete
  2. ಚೆನಾಗಿದೆ ಸಾರ್....
    ಇಂದಿನ ಪರಿಸ್ಥಿತಿ ಹಾಗೂ ಅದರಲ್ಲಿ ಆಗಬೇಕಾದ ಗುರುತರ ಬದಲಾವಣೆಯ ಬಗ್ಗೆ ಹೇಳುವ ಸಾಲುಗಳು ಇಷ್ಟವಾದವು...
    ಬರೆಯುತ್ತಿರಿ :)
    ನಮಸ್ತೆ :)

    ReplyDelete
  3. "ನಿಜ ನಾಲಗೆ ಪಲಕು" ಎನ್ನುವ ಕವಿಯ ನಿಜ ಆಶಯ ಇಲ್ಲಿ ಸಮರ್ಥವಾಗಿ ವ್ಯಕ್ತವಾಗಿದೆ.

    ಕಾಲದ ವಿಪರೀತ ಪ್ರಕ್ರಿಯೆಯಲ್ಲಿ "ದೇವನನೇ ದಾನವಿಸಿ" ಆಗುವ ವಿಕಲ್ಪಗಳ ಬಗೆಗೆ ಎಚ್ಚರಿಸುವ ಈ ಕವಿತೆಯೂ, ಮುಂದುವರೆಯುತ್ತಾ ಶಿವನನ್ನು "ತಡೆ ವಿನಾಶದ ಹೊತ್ತು" ಎಂದು ಬೇಡಿಕೊಳ್ಳುತ್ತದೆ.

    ಕಡೆಯಲ್ಲಿ ಬರುವ "ಹೊತ್ತು ಮೀರುವ ಮುನ್ನ" ಎನ್ನುವುದು ದೇವನಿಗೂ - ಮಾನವನಿಗೂ ಸಮಾನವಾಗಿ ಬಿಂಬಿತವಾದಹಾಗಿದೆ.

    ಸಂಗ್ರಹ ಯೋಗ್ಯ - ಹಾಡಿಕೊಳ್ಳಬಲ್ಲ ಕವನ.

    ReplyDelete
  4. ಶಿಪ್ಪ ಕಾಯಬೇಕಿದೆ ಇಂದಿನ ಪರಿಸ್ಥಿತಿಗಳನ್ನು.. ತುಂಬಾ ಸುಂದರ ಕವನ ಸರ್..ಶುಭಾಶಯಗಳು.. ಶಿವರಾತ್ರಿ ಹಬ್ಬಕ್ಕೆ ಮನೆಗೆ ಬನ್ನಿ ಅಮೇಲೆ ಕರೆಯಲೇ ಇಲ್ಲ ಎಂದುಕೊಳ್ಳಬೇಡಿ :)

    ReplyDelete

  5. ಕಾಯುವ ಶಿವ ಕೆಲವೊಮ್ಮೆ
    ಪಾಪಿಗಳ ಕೊಡಗಳು ತುಂಬಲು
    ತುಂಬಿದ ಮರುಕ್ಷಣವೇ
    ಧರೆಗುರುಳುತ್ತದೆ ಮದವೇರಿದ ತಲೆಗಳು
    ಸುಂದರ ಕವಿತೆ
    ಶಿವರಾತ್ರಿ ಹಬ್ಬದ ಶುಭಾಶಯಗಳು

    ReplyDelete
  6. ತುಂಬಾ ಚೆನ್ನಾಗಿದೆ ಸರ್
    ಈ ಕವಿತೆಯ ಆಶಯ ತುಂಬಾ ಇಷ್ಟಾವಾಯ್ತು ಸರ್.
    ಸಾಮಾನ್ಯ ಮನುಷ್ಯರಿಗೆ ಹತ್ತಿರವಾಗಿದೆ ಈ ಕವಿತೆ ಸರ್

    ReplyDelete