ಹಳ್ಳಿ-ದಿಲ್ಲಿ
ಹಳ್ಳಿಯಲೀಗ
ಆ ಕಸುವಿಲ್ಲ
ಬಾವಿ ಕಟ್ಟೆಯೇ
ಬತ್ತಿದೆ, ನೀರಿಲ್ಲ..
ನೀರಿಗೆ ಬರುವ
ನೀರೆಯರ ಆ
ಮನ ಮೋಹಕ
ಸಾಲುಗಳಿಲ್ಲ..
ಗಿಲ್ಲಿಗೆ ಸಿಗುವ
ಮಣ್ಕೊಡವಿಲ್ಲ
ಕೊಡವಲು ಧೂಳಿಲ್ಲ
ಚಾವಡಿಗಳಿಲ್ಲ
ಕಳ್ಳಿ ಬೇಲಿಗಳಿಲ್ಲ
ಕದ್ದೋಡಲು
ಹಿತ್ತಲ ಸೀಬೆಯಿಲ್ಲ
ಕಿತ್ತಳೆ ಮಾವಿಲ್ಲ
ಚಡ್ಡಿಗಳಿಲ್ಲ
ಜೋಬಿಗೆ ಅಂಟು
ಜಾಮೂನು ನಂಟು
ಬೆಲ್ಲದ ಜಿಗಟಿಲ್ಲ
ಬೀದಿ ಜಗುಲಿಗಳಿಲ್ಲ
ಓಣಿ ಗುಂಟಗಳಿಲ್ಲ
ಕೆಸರಾಗುವ
ಎರಚಾಡುವ
ಎಮ್ಮೆಗಳಿಲ್ಲ
ಹೆಮ್ಮೆ ತೋಟಗಳಿಲ್ಲ
ಭಜನೆ ಜಾಗಟೆಯಿಲ್ಲ
ಮಂಡ್ರಾಯನೆತ್ತೋ
ಗೊಣ್ಣೆಸಿರ್ಕನಿಲ್ಲ
ಎಲ್ಲರೊಂದಾಗಿ
ಈದ್-ಗಣೇಶನೆತ್ತುವ
ಸಾಬಿ-ತುರ್ಕನಿಲ್ಲ
ಹರ್ಕು ಕೇರಿಯಿಲ್ಲ
ಮುರ್ಕು ಮೋರಿಯಿಲ್ಲ
ತಿರುಕನಿಲ್ಲ
ಶಾನುಭೋಗ
ತೋಟಿ-ತಳವಾರ
ಗೌಡ-ಗೌಡ್ತಿಯರ
ಗರಿ ಗರಿ ದೌಲತ್ತಿಲ್ಲ
ನವಮಿ ರಥವಿಲ್ಲ
ಬಾಬಯ್ಯನ
ಅಬ್ಬರವಿಲ್ಲ.....
ಏನೆಲ್ಲಾ ಇತ್ತು..!!
ಈಗ ಏನೇನೂ ಇಲ್ಲ
ಕೋಟಿಗೆ ಮಾರಿದ
ತೋಟಿ ತನ್ನೆಲವ
ಅಲ್ಲೇ ನಿರ್ಮಿತ
ಫ್ಯಾಕ್ಟರಿಯಲಿ
ದಿನಗೂಲಿಯಲ್ಲಾ...!!
ಕೆರೆಬತ್ತಿ ಅಲ್ಲೇ
ಅಗರ ಬತ್ತಿ
ಉತ್ಪತ್ತಿ, ತ್ಯಾಜ್ಯ
ಬಣ್ಣದ ಕೆಸರ ಕುಂಟೆ
ಕೇರಿ ಹೈಕಳು
ಸಂಜೆಯಾದರೆ
ಒಪ್ಪೊತ್ತು ತಿಂದು
ಮೂರೊತ್ತು ಕುಡ್ದು
ತೂರಾಡುವರಲ್ಲಾ..!!
ಕಾಲ್ ಸೆಂಟರ್ಗೆ
ಹುಡ್ಗೀರ ದಂಡು
ಸೊಂಟಕೆ ವ್ಯಾನಿಟಿ
ಕೊಡವೇನು..?
ಸೊಂಟವೇ ಇಲ್ಲಾ..
ಅಕ್ಕಂದಿರೀಗ
ಶೋಕಿ ಆಂಟಿಯರು
ಕಿಟ್ಟಿ ಪಾರ್ಟಿಗಂಟಿ
ಸೋಬಾನೆ ಗೀಗಿ
ಟೀವಿಗೆ ಮೀಸಲು
ನವಮಿ ನಾಟಕ
ಬಯಲಾಟ ಮೋಹಕ
ಉಳಿದಿಲ್ಲ ಈಗ ಇಲ್ಲಿ..
ಅದಕೇ ಏನೋ..
ಮಳೆಯೂ ಅತಿಥಿ
ಬಂದು ಹೋಗುತ್ತೆ
ಬಂದದ್ದೂ ಮರೆಯುತ್ತೆ
ಹಸಿರು ಗದ್ದೆ-ಹೊಲ?
ಅವರೇ ಕೇಳ್ತಾರೆ
ಏನಿವುಗಳೆಲ್ಲಾ??
ಹಳ್ಳಿ- ಹಳ್ಳಿ-ಹಳ್ಳಿ
ಎಲ್ಲಿವೆ ಎಲ್ಲಾ ಆಗಿವೆ
ದಿಲ್ಲಿ ದಿಲ್ಲಿ ದಿಲ್ಲಿ
ನಿಜ ಕಣೊ....
ReplyDeleteಹಳ್ಳಿ ಹಳ್ಳಿಯಾಗಿ ಉಳಿದಿಲ್ಲ..
ಒಳಗಿನ ನೋವು ಮನತಟ್ಟುತ್ತವೆ..
ಸುಂದರ ಸಾಲುಗಳಿಗೆ ಅಭಿನಂದನೆಗಳು...
ಹೌದು ಪ್ರಕಾಶೂ... ನನ್ನ ಹಳ್ಳಿಗೆ ಇತ್ತೀಚಿಗೆ ಹೋಗಿಲ್ಲ..ನನ್ನ ಅಕ್ಕ ನೋಡಿ ಬಂದು ಹೇಳಿದಮೇಲೆ ನೋಡಬೇಕು ಎಂದುಕೊಂಡಿದ್ದ ಆಸಕ್ತಿ ಸತ್ತು ಹೋಯ್ತು...
Deleteಇತ್ತಲಾಗೆ ದೊಡ್ಡಬಳ್ಳಾಪುರ ಅತ್ತಲಾಗಿನ ಕನಕಪುರ ಯಾವತ್ತೋ ಬೆಂಗಳೂರಾಗಿಬಿಟ್ಟಿವೆ. ನಮ್ಮ ಹಳ್ಳಿ ಜನ ಮೊಬೈಲಿನಲ್ಲೇ ಪಾಪು ಸೆಟ್ಟು ನೀರು ಬಿಡೋಮ ಅಂತ ಮಾತಾಡುತ್ತಿರುತ್ತಾರೆ!
ReplyDeleteಯಾಕೋ ಹಳ್ಳಿ ಹಳ್ಳಿಯಾಗೇ ನಗರ 'ನರಕ'ವಾಗೇ ಉಳಿಯಬೇಕಿತ್ತೇನೋ ಅನಿಸಿಬಿಡುತ್ತದೆ.
ಬದರಿ, ಚಿಂತಾಮಣಿವರೆಗೂ ಬೆಳೆದಿದೆ ಬೆಂಗಳೂರು...ಇತ್ತ ಮಂಡ್ಯ ತಲುಪೋ ದಿನ ದೂರವಿಲ್ಲ... ಹಳ್ಳಿಗಳ ಮನದುಗಳು ಕಲುಷಿತವಾಗಿವೆ ನಗರ ಪ್ರಭಾವದಿಂದ...
Deleteನಿಜ ಸರ್ ನೀವು ಹೇಳಿರುವುದು... ನಾವು ಕಂಡ ಹಳ್ಳಿ ಸೊಗಡಿನ ಅನುಭವ ನಮ್ಮ ಮಕ್ಕಳಿಗೂ ಇಲ್ಲ... ಇನ್ನು ಮುಂದೆ ಮುಂದೆ ಹಳ್ಳಿ ದಿಲ್ಲಿಗಿಂತ ಸಿಂಗಾಪುರ್ ಆಗೋಗುತ್ತೆ ಎಂದೆನಿಸುತ್ತೆ
ReplyDeleteಸುಗುಣ ಧನ್ಯವಾದ...
Deleteಹಳ್ಳಿಗಳಲ್ಲಿ ಯುವಕರು ದಾರಿತಪ್ಪುತ್ತಿರುವುದು ನಿಜಕ್ಕೂ ಶೋಚನೀಯ...ಅದ್ರಲ್ಲೂ ಬೆಂಗಳೂರು ಸುತ್ತಮುತ್ತ ಹೀಗಾಗುತ್ತಿರುವುದು ಮನಸಿಗೆ ಖೇದಕರ.
ಆಧುನಿಕ ನಾಗರಿಕತೆ ಎನ್ನುವ ಬಕಾಸುರ ನಮ್ಮ ಹಳ್ಳಿಗಳನ್ನು ಭಸ್ಮ ಮಾಡಿ ಹಾಕಿದ್ದಾನೆ. ವಾಸ್ತವ ಕವನ.
ReplyDeleteಹೌದು ಸುನಾಥಣ್ಣ... ಹಳ್ಳಿಗಳ ಬಯಲಾಟ, ನಾಟಕ ಭಜನೆಗಳು ಎಲ್ಲಾ ಮಾಯ.
DeleteArthavattada salugalu….odutta hoda hage yeno kaledu kondantha bahava…
ReplyDelete