Saturday, November 21, 2009

ನಂಗೊತ್ತಿಲ್ಲ ಮಗು


ಅಪ್ಪಾ..
ಏನು ಮಗು?
ನಮ್ಮ ನಾಡು ನಮಗೆ ಮುಖ್ಯ ಅಲ್ಲ್ವಪ್ಪಾ?
ಹೌದು ಕನ್ನಡ ನಾಡು -ಗಂಧದ ಬೀಡು ಅನ್ನೋಲ್ಲ್ವೇ?
ಮತ್ತೆ ದೇಶಭಕ್ತಿ ತೋರ್ಸಿದ್ರೆ ತಪ್ಪಾಗುತ್ತ?
ನಾಡು ಕನ್ನಡಿಗರದು-ದೇಶ ಎಲ್ಲರದ್ದು ತಪ್ಪೆಲ್ಲಿ??
ಮತ್ತೆ ಸಚಿನ್ ಮಾಡಿದ್ದು ತಪ್ಪಂತೆ,
ನಂಗೊತ್ತಿಲ್ಲ ಮಗು

ಅಪ್ಪಾ
ಹೇಳಪ್ಪ..ಏನು?
ಮದ್ಯ ಸರಾಯಿ ಕೆಟ್ಟದಲ್ಲವಾ?
ಹೌದು..ಅದೊಂದು ದುಶ್ಚಟ
ಮನೆ-ಮಠ ಅಷ್ಟೇ ಯಾಕೆ
ಪ್ರಾಣಾನೇ ಹೋದೀತು ಬಿದ್ರೆ ಚಟಕ್ಕೆ
ಮತ್ತೆ ಈಗ ಸರ್ಕಾದವರೇ ಮದ್ಯ
ಮಾರೋ ಸಾವಿರಾರು ಅಂಗಡಿ ತೆರೀತಿದಾರೆ
ಅದು ಅಬ್ಕಾರಿ ಇಲಾಖೆ ಯೋಜನೆ
ಮತ್ತೆ..ಮಕ್ಕಳ ಸ್ಕೂಲುಗಳೇ ಇಲ್ಲ
ಕೆಲವು ಕಡೆ ಅಂತಾರಲ್ಲಾ ಇದು
ಶಿಕ್ಷಣ ಇಲಾಕೆಯ ಯೋಜನೇಲಿಲ್ವಾ?
ನಂಗೊತ್ತಿಲ್ಲ ಮಗು

ಅಪ್ಪಾ,
ಇನ್ನೂ ಎನೋ ನಿನ್ನ ತರಲೆ
ಕೊಲೆ ಸುಲಿಗೆ ಮಾಡೋರನ್ನ ನಮ್ಮ ಪೋಲೀಸ್ರು
ಬಹಳ ಚಾಕ ಚಕ್ಯತೆಯಿಂದ ಹಿಡೀತಿದ್ದಾರೆ
ಹೌದು ಮಗು ನಮ್ಮವರು ದಕ್ಷರು
ಮತ್ತೆ ಮಂಗಳೂರಿನಲ್ಲೊಬ್ಬ ಕೇಡಿ
೨೦-೩೦ ಮದ್ವೆ ಆಗಿ, ಅವ್ರನ್ನ ಕೊಲೆನೂ ಮಾಡ್ದ
ಹೌದು ಮಗ..ಐದಾರು ವರ್ಷದಿಂದ
ನಡೆಸ್ದ ತನ್ನ ಧಂಧೆ ಅಂತ ಟೀವೀ ವಾರ್ತೆ ಬಂದಿತ್ತಲ್ಲ
ಮತ್ತೆ ಅಷ್ಟರವರೆಗೂ ದಕ್ಷತೆ ಮೇಯೋಕೆ ಹೋಗಿತ್ತಾ?
ನಂಗೊತ್ತಿಲ್ಲ ಮಗು

Saturday, November 14, 2009

ಬ್ಲಾಗು- ಹೀಗೂ ಒಂದು ಎಡವಟ್ಟು



ಸುಮ್ನಿದ್ದವ್ನಿಗೆ ಬ್ಲಾಗ್ರೋಗ ಹತ್ಬಿಡ್ತು
ದಿನಾ ಒಂದಷ್ಟು ಓದ್ತಿದ್ದೆ ಈಗದು ಎಕ್ಕುಡ್ತು
ಹುಡ್ಗೀ ಹೆಸರ್ನಾಗೆ ಬ್ಲಾಗ್ಮಾಡೋಕೆ ಸುರುಹಚ್ದೆ
ಹುಡ್ಗೀರ್ಸ್ನೇಹ ಆಗ್ತಾದಂದ್ರೆ ಹುಡುಗರ್ದೇ ಧಂದೆ

ಒಬ್ಬ ಬರ್ದ ನಿಮ್ ಬರಹ ಮೆಚ್ದೆ ಮೈಲ್ ಐಡಿ ಕೊಡಿ
ನಿಮ್ಜೊತೆ ಮಾತ್ನಾಡೋದೈತೆ ಒಂದ್ಡೇಟು ಕೊಡಿ
ಅವ್ನಿಗ್ ಹೆಂಗೇಳ್ಳಿ ನಿನ್ನಂಗೇ ನಾನೂ ಉಡುಗ್ನೇಯ
ಕಾಮೆಂಟ್ಮಾಡೋರ್ ಕಮ್ಮಿ ಅಗ್ತಾರ್ ಅಂಗೇಯ

ಒಬ್ಳು ಬರದ್ಳು ನನ್ ಕಷ್ಟ ನಿಂತಾವ ಹೇಳ್ಬೇಕು ಅಂತಿವ್ನಿ
ಬ್ಲಾಗ್ ಮಡೋ ಒಬ್ಬ್ ಮುದ್ಕಂಗೆ ಹೆದ್ರ್ ಕೊಂಡು ಕುಂತಿವ್ನಿ
ನನ್ ಕಷ್ಟ ಅವ್ಳಿಗೇನು ಗೊತ್ತು ಆದ್ರೂ ..ಯೋಳ್ದೆ ಕಳ್ಸು ವಿವ್ರಾನ
ಅವ್ಳು ನಾನ್ ಕೊಟ್ ಮೈಲ್ ಐಡಿಗೆ ಕಳ್ಸ್ ಬಿಟ್ಳು
ವೆಬ್ನಾಗೆ ಮುಳ್ಗಿ ಹುಡ್ಗೀ ಒಬ್ಳಿಗೆ ನನ್ ಫ್ರೆಂಡು ಬರೆದಿದ್ದ ಪತ್ರಾನ

ಮುದ್ಕಪ್ಪ ಒಬ್ಬ ಬರ್ದ, ನಿಮ್ ಬರಹ ನೋಡಿದ್ರಿ
ಭಾಳ ಅನುಭೋವಸ್ತ್ರು ನೀವ್ ಅನ್ನೋದು ಕಾಣ್ತದ್ರಿ
ನಂಗೂ ಹೇಂತೀಹೋಗಿ ಹತ್ತ್ ವರ್ಷ ಆಗೈತ್ರೀ
ಜೊತ್ ಜೊತ್ಯಾಗೇ ಇನ್ಮುಂದಿ ಬ್ಲಾಗ್ಮಾಡೋಣು ಏನಂತೀರಿ?

ಯಪ್ಪೋ ನನ್ಗೋ ಸುಸ್ತಾಯ್ತು ಈ ಪಾಟಿ ಎಡ್ಬಿಡಂಗಿ ಆಗಿ
ಅದ್ಕೆ ಮುಂದಿನ ಪೋಸ್ಟ್ನಾಗೆ ಬರ್ದೆ ನಾನ್ ಗಂಡು ಬ್ಲಾಗಿ
ಬರ್ತಿದ್ವು ಪ್ರತಿಪೋಸ್ಟ್ಗೂ ೫೦-೬೦ ಕಾಮೆಂಟ್ಸು ಆವಾಗ
ನಾಲ್ಕೈದು ವಾರ ಆಯ್ತು ಒಟ್ಟು ಐದೋ-ಆರೋ ಈವಾಗ


ಮುಚ್ಚಿಟ್ಟೆ ಮೊಸರು, ಬೆಣ್ಣೆ ತುಪ್ಪ ಅನ್ನೋರ್ಗೆನೂ ಕಮ್ಮಿಇಲ್ಲ
ತೆರೆದಿಟ್ಟೆ ಒಮ್ಮೆ ಮಜ್ಜಿಗೆ ಹುಳಿ ಹತ್ರ ಸುಳಿಯೋರೇ ಕಾಣ್ತಿಲ್ಲ
ಈವತ್ನ ಜೀವ್ನಾನೆ ಹೀಂಗೆ, ಇದ್ದದ್ದು ಇದ್ದಾಂಗೆ ಯೋಳೋಂಗಿಲ್ಲ
ಕದ್ದೋ ಮುಚ್ಚೊ ಹೊಲಸಾದ್ರೂ ಅಮೃತ ಅಂತಾರೆ ಎಲ್ಲ

Saturday, November 7, 2009

ನಿಜವಾಗ್ಲೂ ನಂಗೊತ್ತಿಲ್ಲ ಮಗು





ಅಪ್ಪಾ...ಅಪ್ಪಾ...
ಅಪ್ಪಾ.....sss
ನಿನ್ ಮಗ ಕೂಗ್ತಾನೇ ಇದ್ದೀನಿ
ಕೇಳಿಸ್ತಾ ಇಲ್ಲ್ವೇ ಅಪ್ಪಾ..??...
ಪ್ರವಾಹದಲ್ಲಿ ಮನೆಮಠ ಕಳ್ಕೊಂಡೋವ್ರು
ಸಹಾಯಕ್ಕೆ ಕೂಗಿದ್ರೂ..
ಗರ ಬಡ್ದಿರೋ ಸರ್ಕಾರದ್ ಥರಾ....
ಎದ್ದೇಳಪ್ಪಾ...ನನಗೆ ಉತ್ತರಾ ಕೊಡು..

ಹಾ..ಆಂ....ಏನ್ಮಗಾ.....
ಅಲ್ಲಪ್ಪಾ..ಅಮ್ಮನಜೊತೆ ರಾತ್ರಿ
ಜಗಳಮಾಡ್ಕಂಡು ನಾನ್ ಕರೆದ್ರೂ ಕೇಳ್ತಿಲ್ಲವಾ?
ಇಲ್ಲ ಕಣೋ..ಏನೋ ಯೋಚಿಸ್ತಿದ್ದೆ..
ಹೇಳು ಏನು ನಿನ್ನ ಗೋಳು..??
ಹೆಣ್ಣು ದೋಷ ಬಡಿದಿದೆಯಂತೆ
ಮಂತ್ರಿ ಮಂಡಳಕ್ಕೆ ಮತ್ತೆ ಸರ್ಕಾರಕ್ಕೆ ಹೌದಾಪ್ಪಾ..?
ನಂಗೊತ್ತಿಲ್ಲ ಮಗ..
ಅಲ್ಲಪ್ಪಾ ..ನೆರೆಪೀಡಿತರು
ಸಹಾಯ ಕೇಳಿದ್ರೆ .. ಸರ್ಕಾರ ಉಳೀಲಿ
ಅಂತಾರಲ್ಲಾ..
ಹೌದು ಕಣೋ ಆವಾಗ್ಲೇ ಅಲ್ಲವಾ
ಪರಿಹಾರ, ಪುನರ್ವಸತಿ ಸಾಧ್ಯ ಆಗೋದು..?
ಮತ್ತೆ ..ಎತ್ತು ಏರಿಗೆಳದ್ರೆ
ಕೋಣ ನೀರಿಗೆಳೀತಿದೆಯಲ್ಲಪ್ಪಾ..?
ನೀನೇ ಜಾಣ ಕಣೋ ..
ಸರ್ಕಾರ ಉಳಿಯೋದು ಮುಖ್ಯಾನಾ..
ಅನ್ನ, ವಸ್ತ್ರ ಸೂರಿಲ್ಲದೇ ಪರದಾಡ್ತಿರೋರಿಗೆ
ಪರ್ಯಾಯ ವ್ಯವಸ್ಥೇನಾ...?
ನನಗೆ ಮಂಕು ಕವಿದೈತೆ ಮಗಾ
ನಿಜವಾಗ್ಲೂ ನಂಗೊತ್ತಿಲ್ಲ ಮಗು

Wednesday, November 4, 2009

ಪ್ರಾಚೀನ ವೇದ, ಪುರಾಣ, ಖಗೋಳಶಾಸ್ತ್ರದ ನಮ್ಮ ಪ್ರಕಾರ...೨೦೧೨...ಏನು??









ಸ್ನೇಹಿತರೇ...(ಭಾವ ಮಂಥನಕ್ಕೆ ಭೇಟಿ ಕೊಟ್ಟಿರುವ ಮಿತ್ರರಿಗೆ ವಿಶೇಷತಃ) ಇದೇನು ಭಾವಮಂಥನದ ಪೋಸ್ಟ್ ತೆಗೆದು ಇಲ್ಲಿ ಹಾಕಿದ್ದಾನಲ್ಲ...??!! ಎಂದುಕೊಳ್ಳಬೇಡಿ..ನಿಜ ಅದನ್ನ ಹಾಕಿದ್ದು ..ಕಾರಣ ಜಲನಯನದಲ್ಲಿ ಈ ಬಗ್ಗೆ ಮಾಹಿತಿ ಕೊಟ್ಟಿದ್ದೆ ಆದರೂ ಹಲವು ಜಲನಯದ ಓದುಗ ಮಿತ್ರರು ಭಾವಮಂಥನವನ್ನು ನೋಡಲಾಗಿಲ್ಲ....ಆ ಕಾರಣಕ್ಕೆ ಈ ಉಪ-ಲೇಖನ.
"ಅರೆ ಇವನ..!! ಪ್ರಳಯದ ಇವನ ಸಂಶಯ ನಿವಾರಿಸಿ ಮೂರುದಿನ ಆಗಿಲ್ಲ, ಇನ್ನೊಬ್ಬರನ್ನ ಕರೆತರ್ತಾ ಇದ್ದಾನಲ್ಲ...ಇವರೇನಾದ್ರೂ ಅವರ್ದ್ದೇ ತರ್ಕ ತಂದರೋ ಹೇಗೆ..? ಎ0ಮ್ದು ಕೊಳ್ಳುತ್ತಾ ರಾಮಣ್ಣ ತನ್ನ ಮನೆಕಡೆ ಬರುತ್ತಿದ್ದ ಗೋಪಾಲ ಮತ್ತು ಅವರ ಜೊತೆಯಿದ್ದವರನ್ನು ಬರ ಮಾಡಿಕೊಳ್ಳುತ್ತಾ...‘ಬಪ್ಪಾ ಗೋಪಲ...ಬನ್ನಿ ಒಳಗ್ಬನ್ನಿ....ಅಂದಹಾಗೆ ಇವರು ಯಾರು ಗೊತ್ತಾಗಲಿಲ್ಲ..?‘
ರಾಮು ಇವರು ನಮ್ಮ ವೇದ ಪುರಾಣಗಳನ್ನು ಅಧ್ಯಯನ ಮಾಡ್ತಿರೋರು..ಇವರು ನಿನ್ನ ಮಾತು ಒಪ್ತಾರೆ..ಅಷ್ಟೇ ಅಲ್ಲ..ನಮ್ಮ ವೇದ ಪುರಾಣಗಳ ಪ್ರಕಾರ ಇದು ಕೇವಲ ಯುಗದ ಪ್ರಾರಂಭ ಆಗಿರೋಕೆ ಸಾಧ್ಯ ಅನ್ತಿದ್ದಾರೆ...ಅದೂ ನಮ್ಮ ಯುಗದ್ದಲ್ಲ..ಮಾಯನ್ ಯುಗದ್ದು..ನಮ್ಮ ಪ್ರಕಾರ ಯುಗ ಮುಗಿಯೋಕೆ...ಇನ್ನೂ ದೂರ ಇದೆ...ಪ್ರಳಯ ಹಾಗಿರ್ಲಿ...ಅಂತಾರೆ....ಅಂದಹಾಗೆ ಇವರು ವಿದ್ವಾನ್ ಸಿದ್ಧರಾಮ್. ಎಂದು ತನ್ನ ಜೊತೆಯಿದ್ದವರನ್ನು ರಾಮಣ್ಣನಿಗೆ ಪರಿಚಯಿಸಿದ.

ಸರ್ ನೀವೊಬ್ಬ scientist ಅಂತ ಹೇಳಿದ್ರು ಗೋಪಾಲ್ ..ಹಾಗೇ ಇವರ ಪ್ರಳಯದ ಬಗ್ಗೆ ಎದ್ದಿರುವ ಊಹಾ ಪೋಹಾ ನಿಜವಲ್ಲ ಅಂತ ಹೇಳಿದ್ದಿರಂತೆ...ಎಂದರು ವಿದ್ವಾನ್
ನೋಡಿ ನನ್ನ ಅಧ್ಯಯನ ಈಗಷ್ಟೇ ಪ್ರಾರಂಭವಾಗಿದೆ ನನಗೆ ತಿಳಿದಿರುವುದನ್ನು ಹೇಳ್ತೇನೆ...
ನಮ್ಮ ವೇದ-ಪುರಾಣಗಳ ಪ್ರಕಾರ...ಬ್ರಹ್ಮ ನಮ್ಮ ಸೃಷ್ಠಿಕರ್ತ...ಇಡೀ ಬ್ರಹ್ಮಾಂಡದ ಸೃಷ್ಠಿಕರ್ತ ಎಂದೇ ಹೇಳಬೇಕು. ಅಲ್ಲವೇ?
ಹೌದು...ಎಂದು ಗೋಣು ಹಾಕಿದರು ರಾಮಣ್ಣ ಮತ್ತು ಗೋಪಾಲ್ ..
ಮುಂದುವರಿದ ವಿದ್ವಾನರು...

ಮಾಯನ್ ಪ್ರಕಾರ ಅವರ ಪಂಚಾಂಗ 2012 ಕ್ಕೆ ಕೊನೆಯಾದರೆ ಬೇರೆ ಯುಗ ಪ್ರಾರಂಭವಾಗಬೇಕು...ಅದು ಪ್ರಳಯ ಅನ್ನುವುದಾದರೆ...ಮನುಕುಲದ ಸಮಾಪ್ತಿ ಎಂದಾಯಿತು...ಆದರೆ ಹಿಂದೂ ಪುರಾಣಗಳ ಪ್ರಕಾರ ಇದು ಅಸಾಧ್ಯ..ಇದು ಕೇವಲ ಒಂದು ಯುಗದ (ಮಾಯನ್) ಅಂತ್ಯ ಮತ್ತು ಮತ್ತೊಂದರ ಪ್ರಾರಂಭ...!!!
ಹೇಗೆ??

ಇದರ ಪ್ರಕಾರ ಬ್ರಹ್ಮನ ಆಯಸ್ಸು 100 ಭ್ರಹ್ಮ ವರ್ಷಗಳು. ಬ್ರಹ್ಮನ ವರ್ಷದ ಒಂದುದಿನವನ್ನು ‘ಕಲ್ಪ‘ ಎನ್ನುತ್ತೇವೆ...ಇದರ ಅವಧಿ 4.32 ದಶಕೋಟಿ ವರ್ಷಗಳು (ಇದು ಪೃಥ್ವಿಯ ಆಯಸ್ಸಿಗೆ ಸಮ). ಪ್ರತಿ ಕಲ್ಪದಲ್ಲಿ (ಆತನ ಒಂದು ದಿನ) ಬ್ರಹ್ಮ ಹದಿನಾಲ್ಕು ಮನು ವಂಶಗಳನ್ನು ಸೃಷ್ಠಿಸುತ್ತಾನಂತೆ. ಒಂದು ಮನು ವಂಶ (ಮನ್ವಂತರ) ಎಪ್ಪತ್ತೊಂದು ಚತುರ್ಯುಗಗಳನ್ನು ಹೊಂದಿರುತ್ತದಂತೆ...ಚತುರ್ಯುಗಗಳು ಅಂದರೆ ಸತ್ಯ, ತ್ರೇತ, ದ್ವಾಪರ ಮತ್ತು ಕಲಿ.
ಸತ್ಯಯುಗ - 1,728,000 ಮಾನವ ವರ್ಷಗಳ ಅವಧಿ ಹೊಂದಿರುತ್ತೆ
ತ್ರೇತ ಯುಗ- 1,296,000 ಮಾ.ವ.
ದ್ವಾಪರ ಯುಗ- 864,000 ಮಾ.ವ.
ಕಲಿಯುಗ - 432,000 ಮಾ.ವ.
ನಮ್ಮ ಆರ್ಯಭಟನ ಪ್ರಕಾರ ಕಲಿಯುಗ ಪ್ರಾರಂಭವಾಗಿದ್ದು 3102 ಕ್ರಿಸ್ತ ಪೂರ್ವ ಅಂದರೆ 3102+2009=5111 ವರ್ಷ ಕಳೆದಿದೆ. ಅಂದರೆ ಕಲಿಯುಗದ 432,000 ವರ್ಷ ಅವಧಿಯಲ್ಲಿ ನಾವು ಕಳೆದಿರುವುದು ಕೇವಲ 5111 ವರ್ಷ ಅಂದರೆ ಯುಗಾಂತ್ಯಕ್ಕೆ ಇನ್ನೂ 427,889 ವರ್ಷ ಇದೆ ನಂತರ ಒಂದು ಚತುರ್ಯುಗ ಮುಗಿದಂತೆ. ಈಗ ನಡೆಯುತ್ತಿರುವ ಮನು ವಂಶ ಏಳನೇ ಮನುವಂಶ ಇದಕ್ಕೆ ವೈಸ್ವತ್ ಮನುವಂಶ ಎನ್ನುತ್ತಾರೆ. ಹೀಗೆ ಹದಿನಾಲ್ಕು ಮನು ವಂಶಕಾಲ ಮುಗಿದ ಮೇಲೆ ಪ್ರಳಯ...!!!! ಅಂದ್ರೆ ಕಲಿಯುಗದ ಉಳಿದಿರುವ 427,889 ವರ್ಷದ ನಂತರ ಇನ್ನೂ ಏಳು ಮನುವಂಶಗಳು ಉಳಿದಿವೆ..ಪ್ರತಿ ಮನು ವಂಶಕ್ಕೆ 71 ಚತುರ್ಯುಗಗಳು ಅಂದರೆ 71 x 7 = 497 ಚತುರ್ಯುಗಗಳು. ಒಂದು ಚತುರ್ಯುಗ = 4,320,000 ವರ್ಷ ಅಂದರೆ ಉಳಿದಿರುವ 497 ಚತುರ್ಯುಗಕ್ಕೆ ತಗಲುವ ಅವಧಿ 2,147,040,000 ವರ್ಷ...!!!!! ಅಲ್ಲಿಗೆ ಬ್ರಹ್ಮನ ಒಂದು ದಿನ (ಕಲ್ಪ) ಮುಗಿಯುತ್ತೆ ಅಂದರೆ ಪ್ರಳಯ, ಬ್ರಹ್ಮ ನಿದ್ರಿಸುತ್ತಾನೆ..ಬೆಳಗೆದ್ದು ಮತ್ತೊಂದು ಸೃಷ್ಠಿ ಅಂದರೆ 14 ಮನುವಂಶಗಳು...ಹೀಗೆ ಬ್ರಹ್ಮನ ೧೦೦ ವರ್ಷ..ಒಬ್ಬ ಬ್ರಹ್ಮನ ಪತನ ಮತ್ತೊಬ್ಬನ ಉಗಮ...

ಇಲ್ಲಿ ಇನ್ನೊಂದು ಅಂಶ ಗಮನಿಸಿದಿರಾ? ಸತ್ಯಯುಗದ ಬರೋಬ್ಬರಿ ಅರ್ಧ ಮಾತ್ರ ದ್ವಾಪರ..ಅಂದರೆ ಧರ್ಮ ಒಂದು ಕಾಲಲ್ಲಿ ನಡೆದ ಯುಗ...ಅದರಲ್ಲಿ ಅರ್ಧ ಕಲಿಯುಗ..ಅಲ್ಲವಾ..? ಇಲ್ಲಿ scientific ಆಗಿ ನೋಡೊದಾದರೆ.. ಸತ್ಯ ಜನಸಂಖ್ಯೆ ಕಡಿಮೆ..ನಿಸರ್ಗ ಸಂಪದ್ಭರಿತ..ತ್ರೇತಾ..ಅದರ ನಂತರದ್ದು..ಜನ ಸಮ್ಖ್ಯೆ ಸ್ವಲ್ಪ ಜಾಸ್ತಿ ಅವರ ಅಧರ್ಮಾಚರಣೆ ಹೆಚ್ಚುತ್ತೆ..ಆದ್ರೂ ಪ್ರಕೃತಿ ಮಾನವನ ಮೇಲೆ ಹಾಗೇ ಕೃಪೆ ಮುಂದುವರಿಸುತ್ತೆ..ದ್ವಾಪರ..ಹೆಚ್ಚು ಜನಸಂಖ್ಯೆ..ಪ್ರಕೃತಿ ಹುಸಿ ಮುನಿಸು ಮತ್ತು ಮಾನವನ ಉದ್ಧಟತನ..ಅಧರ್ಮ..ಹೆಚ್ಚುತ್ತೆ..ಅಧರ್ಮಿಗಳು ಹೆಚ್ಚುತ್ತಾರೆ..ಕಲಿ ಪ್ರಕೃತಿಯ ವಿಕೋಪ ಹೆಚ್ಚುವ ಕಾಲ..ಮಾನವ ತನ್ನ ಸಜಾತಿಯಲ್ಲದೇ ಪ್ರಕೃತಿಯ ಇತರ ಜೀವಿಗಳಮೇಲೆ ಕ್ರೂರಿಕ್ರಮಕ್ಕೆ ಮುಂದಾಗುವುದು..ಪ್ರಕೃತಿಯ ವ್ಯಾಪಕ ಪ್ರಕೋಪ..ಆಗ ಹಲವೆಡೆ ನಾಶ ಕೆಲವೆಡೆ ಶಾಂತ..ಇದು ಮುಂದುವರೆದು..ಮಾನವ ಸಂತತಿ ಕಡಿಮೆಯಾಗಿ..ದುಷ್ಠನಾಶ..ಅಂದರೆ ಜನಸಂಖ್ಯೆಯಲ್ಲಿ ಹೆಚ್ಚಿರುವ ದುಷ್ಟರ ದಮನ...ಉಳಿಯುವವರು ಸತ್ಯಕ್ಕಾಗಿ ಧರ್ಮಕ್ಕಾಗಿ ನಿಲ್ಲುವವರು...ಅಂದರೆ...ಸತ್ಯಯುಗದ ಪುನರಾರಂಭ....ಹೀಗೆ..೭೧ ಬಾರಿ..ಪ್ರತಿ ಬಾರಿಯೂ ಸತ್ಯವಂತರ ನೆರಳಲ್ಲಿ ಮೊದಲಿಗೆ ಕೆಲಪಾಪಿಗಳು ಉಳಿದುಬಿಡುತ್ತಾರೆ..ನಂತರದ ಚತುರ್ಯುಗದ ಕೊನೆಗೆ ಮೊದಲ ಚತುರ್ಯುಗಕ್ಕಿಂತ ಸ್ವಲ್ಪ ಹೆಚ್ಚು ಪಾಪಿಗಳು...ಹೀಗೆ..೧೪ ಮನುವಂಶಗಳು ಮುಗಿಯುವ ವೇಳೆಗೆ ಭೂಭಾರ ಹೆಚ್ಚಾಗಿ ಪಾಪಿಗಳೇ ತುಂಬಿಹೋಗಿ..ಸೃಷ್ಟಿಕರ್ತನಿಗೆ ಯುಗಗಳ ಮೂಲಕ ರಿಪೇರಿಮಾಡಲಾಗದು ಎನಿಸಿ..ಪೂರ್ತಿ ಪ್ರಳಯವಾಗಿ...ಮತ್ತೊಂದು ಪೃಥ್ವಿ ರೂಪ ಹೊರ ಹೊಮ್ಮುತ್ತೆ..ಅದರೊಂದಿಗೆ ಬ್ರಹ್ಮನ ಎರಡನೇ ಕಲ್ಪದ ಪ್ರಾರಂಭ..ಅಂದರೆ ಹದಿನಾಲ್ಕು ಮನುವಂಶಗಳಲ್ಲಿ ಏಳು ಮುಗಿದಿವೆ ಎಂಟನೆಯ ಮನು ವಂಶದ ಸೃಷ್ಟಿ.........ಹೀಗೆ ನೋಡಿದರೆ..??!!
ನನ್ನ ತರ್ಕದಿಂದ.....ಏನು ಪ್ರತಿಕ್ರಿಯೆ ಬರುತ್ತೋ ನೋಡೋಣ......


ಯಾವುದಕ್ಕೆ ಅಂತ್ಯ? ಯಾರದ್ದು ಅಂತ್ಯ? ವಿಚಾರ ವೈಶಾಲ್ಯತೆಯ ಆಧಾರಕ್ಕೆ ಬಂದರೆ 2012..ಅಂದರೆ ಇನ್ನು ಉಳಿದಿರುವ ಮೂರು ವರ್ಷ...ಉಳಿದಿರುವ ಕಲಿಯುಗದ ಅವಧಿಯಲ್ಲಿ ತೃಣಮಾತ್ರ!!!

Wednesday, October 28, 2009

ಭೂಮಿಯ ಅಂತ್ಯ..!! 2012 ಡಿಸೆಂಬರ್ 21 ಕ್ಕೆ !!! ..ಕಿವೀಗೆ ಹೂವಾ??!!




ಮನುಯುಗ-ಪ್ರಳಯ ವೇದಗಳು
(www.bhavamanthana.blogspot.com
)
‘ರೀ ಗೋಪಾಲ್ ನಿಮ್ಮ ಮಗಳ ಮದುವೆ 2011 ಕ್ಕೆ ಮಾಡ್ಬೇಕು ಅಂದ್ಕೊಂಡಿದ್ದರಲ್ಲವಾ? ಈ ವರ್ಷನೇ ಮಾಡ್ಬಿಡಿ...ಪ್ರಳಯ ಆಗುತ್ತಂತ್ರೀ...2012 ಡಿಸೆಂಬರ್ 21ಕ್ಕೆ...!!?? ಮೊಮ್ಮಗೂನಾದರೂ ನೋಡ್ಕೊಂಡು ಹೋಗಬಹುದು ನೀವು..‘ ಎಲ್ಲೋ ಊರಿಗೆ ಹೋಗೋರಿಗೆ..ಮಧ್ಯಾನ್ಹದ ಊಟ ಮಾಡ್ಕೊಂಡು ಹೋಗಿ ಅನ್ನೋರೀತಿ... ಹೇಳ್ದ ನಿಂಗಣ್ಣ ..ತನ್ನ ಎದುರು ಮನೆ ಗೋಪಾಲ್..ಗೆ ಇದ್ದ ಬದ್ದ ಎರಡು ಕೂದಲನ್ನ ಕೆರೀತಾ ....
‘ರೆಡ್ಡಿ ರಂಪಾಟ - ಎಡ್ಡಿ ಎಗರಾಟ‘ ಅನ್ನೋ ಸ್ವಾರಸ್ಯಕರ ತಲೆಬರಹ ನೋಡಿ ಆ ದಿನದ ದಿನಪತ್ರಿಕೆ ಹಿಡಿದು ತನ್ನ ಪೋರ್ಟಿಕೋದಲ್ಲಿ ಈಸೀ ಛೇರಿನಲ್ಲಿ ಆಸೀನನಾಗಿ..ಬೆಳಗಿನ ಹಬೆಯಾಡುವ ಕಾಫಿಯನ್ನು ಗುಟುಕಿಸುತ್ತಾ ಕೂತಿದ್ದ ಗೋಪಾಲ್ ಗೆ ಒಂದು ಬಾಂಬೆಸೆದ....
ಎಡ್ಡಿ-ರೆಡ್ಡಿ ವಿಷಯ ಹಾರೇ ಹೋಯ್ತು..ಗೋಪಾಲ್ ತಲೆಯಿಂದ ನಿಂಗಣ್ಣ ಸಿಡಿಸಿದ ಬಾಂಬು ಕೇಳಿ...ಏನು..?? ಏನು ನಿಂಗಣ್ಣ ನೀನು ಹೇಳಿದ್ದು?..ಪ್ರಳಯ ಆಗುತ್ತಂತಾ?? ಯಾವ ನ್ಯೂಸ್ನಲ್ಲೂ ಬರ್ಲಿಲ್ಲವೇ?? ನಿನಗ್ಯಾರು ಹೇಳಿದ್ದು..?? ಇದೇನಪ್ಪ ಇದ್ದಕ್ಕಿದ್ದಂಗೆ ಪ್ರಳಯ ಗಿಳಯ ಅಂತೀಯ?? ಆಗೋಂದ್ಸಾರಿ..ಸ್ಕೈಲ್ಯಾಬ್ ಬೆಂಗಳೂರ್ ಮೇಲೆ ಬೀಳ್ಸೋಕೆ ಅಮೇರಿಕಾದವ್ರು ಪ್ಲಾನ್ ಮಾಡವ್ರಂತೆ ಅಂತ ನೀನೇ ಅಲ್ವಾ ಗುಲ್ಲೆಬ್ಬಿಸಿದ್ದು..!!?? ಹಂಗೇನಾ ಇದೂನೂ..??
ಯೇ..ಬಿಡ್ರಪ್ಪಾ ನೀವು..ಉಪಕಾರ ಮಾಡೊರ ಬುಡಕ್ಕೇ ಈಡ್ತೀರ ನೀವು ಬತ್ತೀನಾ..!! ಇದು ನಿಜ ಕಣಪ್ಪಾ..ವಿಜ್ಜಾನಿಗಳೂ ಹೇಳವರಂತೆ..ಅದೇನೋ ಆಕಾಶ ಕಾಯ ಅನ್ನೋದು ಭೂಮಿಗೆ ಬಡಿತದಂತೆ.. ಯಾರೂ ಉಳಿಯಲ್ಲವಂತೆ..ಅದನ್ನೇ ಮಾಯಾ ಜನಾಂಗದ ಕ್ಯಾಲಂಡರೂ ಹೇಳೋದಂತೆ..ಆ ಕ್ಯಾಲಂಡರ್ ನಲ್ಲಿ ೨೦೧೨, ಡಿ. ೨೧ ನಂತರ ಯಾವುದೇ ದಿನ ಇಲ್ಲಂತೆ..ಅಲ್ಲೀಗೇ ಮುಗೀತದಂತೆ ಎಲ್ಲಾ??....
ಒಂದೇ ಉಸಿರಿಗೆ ತನಗೆ ಗೊತ್ತಿದ್ದನ್ನ ಒದರಿದ ನಿಂಗಣ್ಣ.
ಈಗ ನಿಜವಾಗೂ ಯೋಚನೆಗೆ ಬಿದ್ದ ಗೋಪಾಲ...ತಕ್ಷಣ ಅವನಿಗೆ ssಛಿieಟಿಣisಣ ರಾಮಣ್ಣ ನೆನಪಿಗೆ ಬಂದ. ತನ್ನ ಬಾಲ್ಯದ ಗೆಳೆಯ, ಮೊನ್ನೆ ಮೊನ್ನೆವರೆಗೂ ಅಮೇರಿಕಾದಲ್ಲಿದ್ದು ಈಗ ಕರ್ನಾಟಕ ಸರ್ಕಾರದ ವಿಶೇಷ ಆಹ್ವಾನದ ಮೇರೆಗೆ ವಾತಾವರಣ ಶಾಸ್ತ್ರದ ಎಕ್ಸ್ಪರ್ಟ್ ಆಗಿ ಬೆಂಗಳೂರಿಗೆ ಬಂದಿದ್ದ. ಪಕ್ಕದ ಬೀದೀಲೇ ಅವನ ಮನೆ, ಭಾನುವಾರ ಆಗಿದ್ದರಿಂದ ಮನೇಲೇ ಇರ್ತಾನೆ ಅಂತ ರಾಮಣ್ಣನ ಮನೆಕಡೆ ಹೆಜ್ಜೆ ಹಾಕ್ದ.
ಗಾಬರಿ ಗಾಬರಿಯಾಗೇ ಮನೆಗೆ ಬಂದ ಗೋಪಾಲನ್ನ ನೋಡಿ ರಾಮಣ್ಣ..ಏನೋ ಗೋಪಾಲ ಗಾಬರಿ...ಎಲ್ಲಾ ಆರಾಮ ಹೌದಲ್ಲೋ? ಎನ್ನುತ್ತ ಗೆಳೆಯನನ್ನ ಬರಮಾಡಿಕೊಂಡ.
ಏ..ಏನಿಲ್ಲೋ ರಾಮು...ಎನ್ನುತ್ತಾ ತನ್ನ ಗಾಬರಿಯನ್ನು ಇಲ್ಲವೆನ್ನುವಂತೆ...ಅದೇ..ನಿಂಗಣ್ಣ ...ಏನೋ ೨೦೧೨......
ಓ ಅದಾ..ನಿನ್ಗೂ ಬಿಟ್ಟವನೆ ಭೂತಾನ..?? ಹಹಹ..ಎಂದ ರಾಮಣ್ಣ ಎಲ್ಲ ಗೊತ್ತಿರುವಂತೆ.
ನಿನಗೆ ಗೊತ್ತಾ.. ರಾಮು..? ಕೇಳಿದ ಗೆಳೆಯನ್ನ ಆಶ್ಚರ್ಯದಿಂದ ಗೋಪಾಲ.
ಊಂ ನಪ್ಪಾ..ಎಲ್ಲ ಕಡೆ ಇದೇ ಡಿಸ್ಕಶನ್ನು...ಮಾಡೋಕೆ ಕೇಮೆಯಿಲ್ಲ...ಎಂದ ಉದಾಸೀನತೆಯಿಂದ..
ಅಲ್ಲೋ ಏನೂ ಇಲ್ಲ ಅನ್ನೋ ತರಹ ಹೇಳ್ತಿದ್ದೀಯಾ ನೀನು..ಎಂದ ಗೋಪಾಲ ಈಗ ಸ್ವಲ್ಪ ಸಮಾಧಾನ ಮಾಡಿಕೊಳ್ಳುತ್ತಾ
ಗೆಳೆಯನ್ನ ತನ್ನ ಪಕ್ಕದ ಸೋಫಾದಲ್ಲಿ ಕೂರಿಸಿಕೊಳ್ಳುತ್ತಾ...ಕೂತ್ಕೋ ಹೇಳ್ತೀನಿ ನಾನು..ಎಂದ ರಾಮಣ್ಣ. ನೋಡು ಗೋಪಾಲ..ಎಲ್ಲಾ ಪ್ರಾರಂಭ ಆಗಿದ್ದು ಮಾಯನ್ ಪಂಚಾಂಗ ಅಥವಾ ಕ್ಯಾಲಂಡರ್ ನಿಂದ.
ಮಾಯಾನ್ ಜನಾಂಗ ಆಕಾಶಕಾಯ, ಸೂರ್ಯ ಚಂದ್ರ ಹೀಗೆ ಹಲವು ವಿಷಯ ಅರಿತ ಹಗೂ ಗಣಿತವನ್ನೂ ಅರಿತ ನಾಗರಿಕ ಜನಾಂಗ..ಅದು ಈಗಲೂ ಮಾಯನ್ ಕ್ಯಾಲಂಡರ್ ಅನ್ನು ಬಳಸುತ್ತೆ. ಅದರ ಪ್ರಕಾರ ೨೧ ದಿಸೆಂಬರ್ ೨೦೧೨ ರ ನಂತರ ದಿನವಿಲ್ಲ, ದಿನಾಂಕವಿಲ್ಲ..ನಿನ್ನ ಕಾರಿನ ಸ್ಪೀಡಾ ಮೀಟರ್ ೯೯,೯೯೯ಕ್ಕೆ ಬಂದ ನಂತರ ಓಡೋದನ್ನ ನಿಲ್ಲುಸುತ್ತಾ ಹೇಳು??..
ಏನೋ ರಾಮು ಹೀಗ್ ಕೇಳ್ತೀಯಾ..ಮತ್ತೆ ೦೦೦೦೧ಕ್ಕೆ ಬರುತ್ತೆ...ಅಲ್ಲವಾ...ಅದರಲ್ಲಿ ನಿಲ್ಲೋದು ಏನು?
ನೋಡಿದ್ಯಾ..ಇಲ್ಲೇ ಇದೆ ಉತ್ತರ..ಮಾಯನ್ ಕ್ಯಾಲಂಡರ್ ತನ್ನ ಮೂಲ ಸಂಖ್ಯೆಗಳಾದ ೧೩ ಮತ್ತು ೧೯ ನು ಉಪಯೋಗಿಸಿ ೦.೦.೦.೦.೦. ಉದ್ದ ಎಣಿಕೆ- ಎಂದು‌, ಕರೆಯುತ್ತೆ, ಅಂದರೆ ಅವರ ೦.೦.೦.೦.೦ ರೂಪದ ಕಡೆಯ ಸಂಖ್ಯೆ ೧೩.೦.೦.೦.೦. ಹಾಗಾದ್ರೆ ಈ ಸಂಖ್ಯೆ ಬಂದ ನಂತರ ನಿಂತರೆ ಭೂಮಿ ನಾಶ ಆದಂತೆ ಆಗುತ್ತಾ..?
ಇಲ್ಲಿ ಮಾಯನ್ ಕ್ಯಾಲಂಡರ್ ಬಗ್ಗೆ ತಿಳಿಯೋಣ. ಅವರ ಕ್ಯಾಲಂಡರ್ ನಲ್ಲಿ.. ೦.೦.೦.೦.೦ ..ಹೀಗೆ ಐದು ಸೊನ್ನೆಗಳು..ಪ್ರತಿಸೊನ್ನೆ (ಮೂಲದ ಮೊದಲ ಸೊನ್ನೆ ೧೩ಕ್ಕೆ ನಿಲ್ಲುತ್ತೆ) ೧ರಿಂದ ೧೯ ರವರೆಗೆ ಹೋಗುತ್ತೆ...ಅಂದರೆ ಮೊದಲದಿನ ೦.೦.೦.೦.೧ ಹಾಗೇ ೧೯ನೇ ದಿನ ೦.೦.೦.೦.೧೯, ಅದೇ ೨೦ನೇ ದಿನ ೦.೦.೦.೧.೦ ಆಗುತ್ತೆ ...ಹಾಗೆಯೇ..ಒಂದು ವರ್ಷಕ್ಕೆ -೦.೦.೧.೦.೦, ಇಪ್ಪತ್ತು ವರ್ಷಕ್ಕೆ ೦.೧.೦.೦.೦. ಇದನ್ನೇ ಮುಂದುವರೆಸಿದರೆ .. ೧.೦.೦.೦.೦ ಅಂದರೆ ೪೦೦ ವರ್ಷ (೨೦ *೨೦). ಇದೇ ರೀತಿ ಕ್ಯಾಲಂಡರಿನ ಕೊನೆಯ ಸಂಖ್ಯೆ...೧೩.೦.೦.೦.೦ ಇದನ್ನು ನಮ್ಮ
ಸೌರ್ಯ ಮಾನದಲ್ಲಿ ಹೇಳಿದರೆ ೫೧೨೬ ವರ್ಷ. ಮಾಯನ್ ಕ್ಯಾಲಂಡರ್ ನ ೦.೦.೦.೦.೧ ರ ನಮ್ಮ ಲೆಕ್ಕದ ದಿನಾಂಕ ಕ್ರಿ,ಪೂ. ೩೧೧೪ರ ಆಗಸ್ಟ್ ೧೧. ಅಲ್ಲಿಂದ ೫೧೨೬ ವರ್ಷ ಅಂದರೆ ೨೦೧೨ ಡಿಸೆಂಬರ್ ೨೧..!!!! ಅಂದ್ರೆ ನಿನ್ನ ಕಾರು ನಿಲ್ಲುತ್ತಾ..? ಹೇಳು..?
ಓ... ಅದ್ಕಾ ಇವರು ಹೇಳೋದು ಡಿ.೨೧ ೨೦೧೨ ಕ್ಕೆ ಪ್ರಳಯ ಅಂತಾ..??!! ..ಅಲ್ಲಪ್ಪ ನಮ್ಮ ಕ್ಯಾಲಂಡರ್ ಡಿ.೩೧ಕ್ಕೆ ಪ್ರತಿವರ್ಷ ನಿಲ್ಲುತ್ತಲ್ಲಾ..ಮತ್ತೆ ಜನವರಿ ೧ಕ್ಕೆ ಹೊಸವರ್ಷ ಆಚರಿಸೊಲ್ಲವೇ ನಾವು?...!!! ಸರಿ..ಸರಿ..ಬಿಡು ಅರ್ಥ ಆಯ್ತು..
ನೋಡು ಗೋಪಾಲ..ಇನ್ನೊಂದೆರಡು ವಿಷಯಾನೂ ಇದೆ..ಅವ್ರು ಹೇಳೋದು...
ಆ ದಿನಕ್ಕೆ ಭೂಮಿಯ ಗುರುತ್ವ ಮತ್ತು ಕಾಂತಗುಣ ಅದಲು ಬದಲಾಗುತ್ತೆ ಅಂತ...ಅಂದರೆ..ಉತ್ತರ ದೃವ ದಕ್ಷಿಣ ದೃವಗಳಲ್ಲಿ ವ್ಯತ್ಯಯ ಆಗುತ್ತೆ ಅಂತ...ಇದರಿಂದ ಸಮುದ್ರ ಅಲ್ಲೋಲಕಲ್ಲೋಲ ಆಗುತ್ತೆ, ಜೀವಿಗಳ ಮೇಲೆ ಅಪಾರ ಪ್ರಭಾವ ಬೀಳುತ್ತೆ ಅಂತ... ಇದೂ..ಅಸಾಧ್ಯ ಅಂತ ನಾನು ಹೇಳ್ತೀನಿ...
ಯಾಕೆ ಗೊತ್ತಾ? ಕಾಂತಗುಣ ಬದಲಾವಣೆ ಹೊಸದೇನಲ್ಲ. ಇದು ನಿಯಮಿತವಲ್ಲ ಹಾಗೂ ಇದ್ದಕ್ಕಿದ್ದಂತೆ..ನೀನು ಮಲಗಿದ್ದು ಬೆಳಿಗ್ಗೆ ಏಳುವಾಗ ಬದಲಾಗುವಂತಹುದೂ ಅಲ್ಲ... ಕ್ರಮೇಣ ಆಗುವುದು.. ಲೆಕ್ಕದ ಪ್ರಕಾರ ೩೦೦,೦೦೦ ವರ್ಷಕ್ಕೆ ಒಮ್ಮೆ ಆಗುತ್ತದಂತೆ. ಹೀಗೆ ಆಗಿ ೭೮೦,೦೦೦ ವರ್ಷ ಆಗಿದೆಯಂತೆ..ಅಂದರೆ ಆಗಬೇಕಿತ್ತು ಆಗಿಲ್ಲ..ಯಾವಾಗ ಬೇಕಾದರೂ ಆಗಬಹುದು...ಮತ್ತು ಇದು ಕ್ರಮೇಣ ಆಗುವುದಾದ್ದರಿಂದ ಮತ್ತು ಇದು ಪೂರ್ಣವಾಗಲು ಸುಮಾರು ೫೦೦೦ ವರ್ಷಗಳೇ ತಗಲಬಹುದು ಎನ್ನುವುದರಿಂದ....ನಮ್ಮ ಇಡೀ ನಾಗರೀಕತೆಯೂ ಇಷ್ಟು ಸಮಯವನ್ನು ನೋಡಿಲ್ಲ ಇನ್ನು ಆ ಸಮಯದ ಅವಧಿಯ ತೃಣಸಮಾನವೂ ಇಲ್ಲ ನಮ್ಮ ಜೀವಿತಾವಧಿ...ಇದರ ಬಗ್ಗೆ ಯೋಚಿಸುವ ಅಗತ್ಯವಾದರೂ ಏನು...?? ಹಾಗೆಯೇ ನಮ್ಮ ಭೂಮಿಯ ಕಾಂತೀಯ ಗುಣ ಶೂನ್ಯವಾಗುವುದು ಎನ್ನುವ ಮಾತೂ ಅಸಾಧ್ಯವಾದದ್ದು...ಕಾಂತ ಕ್ಷೇತ್ರ..ಏರುಪೇರಾದರೂ ಅದರ ಒಟ್ಟಾರೆ ರಕ್ಷಕಗುಣ ಹಾಗೆಯೇ ಇರುತ್ತೆ..ಹೀಗಾಗಿ..ಸೂರ್ಯ ಅಥವಾ ಇನ್ನಿತರ ಆಕಾಶಕಾಯದ ಕ್ಷಕಿರಣ ಬೆಂಕಿ ನಮ್ಮನ್ನು ತಟ್ಟುತ್ತೆ ಎನ್ನುವುದೂ ಬರೀ ಬುರುಡೆ...ಇದಕ್ಕೆ ಅಮೇರಿಕೆಯ ನಾಸಾ ಸ್ಸಿನೆತಿಸ್ತ್ಸ್ ಸಹಾ ಪೂರಕ ತರ್ಕ ಒದಗಿಸಿ ಭೂಕಾಂತತೆ ಹೇಗೆ ಸೂರ್ಯನ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದ್ದಾರೆ.




ಇನ್ನು ಮೂರನೇ ಸಾಧ್ಯತೆ...ಇದು ಎಲ್ಲದಕ್ಕಿಂತ ಅತಿ ಬಾಲಿಶ ಮತ್ತು ಮೂರ್ಖ ತರ್ಕದ ಸಾಧ್ಯತೆ... ಯಾವುದೋ ಎಕ್ಸ್ ಎನ್ನುವ ಆಕಾಶಕಾಯ ಭೂಮಿಯತ್ತ ಬರುತ್ತಿದ್ದು ೨೦೧೨ ಡಿ.೨೧ಕ್ಕೆ ಭೂಮಿಯನ್ನು ಬಲವಾಗಿ ಹೊಡೆಯುತ್ತೆ,....!! ಅದೂ ..ಡಿ.೨೧ಕ್ಕೇ ಏಕೆ? ಅದರ ಗಾತ್ರ ಏನು? ಮೂರುದಿನ ಭೂಮಿಯ ಚಲನೆಯನ್ನೇ ನಿಲ್ಲಿಸುವಷ್ಟು ಶಕ್ತಿಯುತವಾಗಿದ್ದರೆ ಅದರ ಗಾತ್ರ ಬೃಹದಾಕಾರದ್ದಾಗಿ‌ಅರಬೇಕು...ನಮ್ಮಲ್ಲಿ ಲಕ್ಷಾಂತರ ಖಗೋಳ ಶಾಸ್ತ್ರಿಗಳು ಅಕಾಶ ವೀಕ್ಷಕರು ಇದ್ದು ಇಷ್ಟು ದೊಡ್ದ ಆಕಾಶಕಾಯವನ್ನು ಗಮನಿಸಿಲ್ಲವೇ..?? ಅದರ ಗಾತ್ರದ ಬಗ್ಗೆ ಗೊತ್ತಿಲ್ಲ ಎಂದರೆ...ಅದರ ವೇಗ ಹೇಗೆ ತಿಳಿಯಿತು? ವೇಗ ಗೊತ್ತಿಲ್ಲ ಎಂದರೆ ಅದು ಡಿ,೨೧ಕ್ಕೇ ಢೀ ಹೊಡೆಯುತ್ತೆ ಎನ್ನುವುದು ಯಾವ ತರ್ಕ..??!! ಇದರ ಸುತ್ತ ಸಂಶಯಗಳೇ ಹೆಚ್ಚು...ಅಸಲು ಹೀಗೊಂದು ಆಕಾಶ ಕಾಯ ಇರುವುದೇ ಯಾವ ದೇಶದ ಖಗೋಳಜ್ನ ನಿಗೂ ಗೊತ್ತಾಗಿಲ್ಲ..!!! ಇದಕ್ಕೆ ಇನ್ನೊಂದು ಹಾಗಲಕ್ಕೆ ಬೇವು ಸಾಕ್ಷಿ ತರಹ...ಸರ್ಕಾರಗಳು ವಿಷಯವನ್ನು ತಿಳಿದಿದ್ದೂ ಬಯಲು ಮಾಡುತ್ತಿಲ್ಲ...!!! ಇದು ಸಣ್ಣ ಪುಟ್ಟದ್ದಲ್ಲ...ಇಡೀ ಭೂಮಿಯೇ ಇಲ್ಲವಾಗುತ್ತೆ ಎನ್ನುವುದಾದರೆ...ಯಾವುದೇ ಕುರುಹೇ ಇರುವುದಿಲ್ಲವೇ..??!! ಭೂಮಿ, ಸೂರ್ಯ, ಆಕಾಶಕಾಯ ಎಲ್ಲ ಚಾಲನೆಯ ನಿಯಮಕ್ಕೆ ಬದ್ಧ ಎನ್ನುವುದಾದರೆ ...ಅತಿಘೋರ ಒಮ್ಮೆಗೇ ಆಗುತ್ತೆ ಎನ್ನುವುದನ್ನು ನಂಬುವುದಾದರೂ ಹೇಗೆ..??




ಇದಕ್ಕೆಲ್ಲ ಒಂದೇ ಉತ್ತರ ಸಾಧ್ಯ...ಇದು ಮೂಲತಃ ಮಾಯನ್ ಹುಟ್ಟುಹಾಕಿದ ಜನಗೊಂದಲ್ಕ್ಕೀಡುಮಾಡುವುದು...ತಮ್ಮ ಸ್ಪೀಡಾ ಮೀಟರ್ ಕೊನೆಯಾದ್ದರಿಂದ ಜಗತ್ತೂ ಕೊನೆಯೆನ್ನುವುದು...ಹೇಗೆಂದರೆ...ಅಜ್ಜಿ ಹುಂಜ ಕೂಗದಿದ್ದರೆ ಸೂರ್ಯ ಮೂಡುವುದಿಲ್ಲ ಬೆಳಕಾಗುವುದಿಲ್ಲ ಎನ್ನುವಂತೆ...
ಏನಂತೀಯ ಗೋಪಾಲ???
ಏಯ್ ಬಿಡು ಮಾರಾಯಾ..ಒಳ್ಳೆ ಮಾಹಿತಿ ಕೊಟ್ಟೆ ನೀನು..., ಬರ್ಲಿ ಆ ನಿಂಗಣ್ಣ ನನ್ನ ಹತ್ರ ಹೇಳ್ತೀನಿ ಅವನಿಗೆ ಸರಿಯಾಗಿ...ಬರ್ಲಾ...ಅಂದಹಾಗೆ ...ನನ್ನ ಕಾರಿನ ಸ್ಪೀಡಾ ಮೀಟರು ನಿಜಕ್ಕೂ ಕೆಟ್ಟೈತೆ ೫೦೦೦ ಕಿ.ಮೀ ಓಡಿದೆ ಕಾರು..೦೦೦೦೦ ತೋರಿಸ್ತಾ ಇದೆ....ಬರ್ಲಾ...


ಸ್ನೇಹಿತರೇ ಇಲ್ಲಿ ನಿಮಗೆ ಮಾಯನ್ ಕ್ಯಾಲೆಂಡರ್ ಲಿಂಕ್ ಕಳುಹಿಸುತ್ತಿದ್ದೇನೆ...ಇದರಲ್ಲಿ ನಮ್ಮ ಕ್ಯಾಲಂಡರ್ ನಲ್ಲಿ ಡಿಸೆಂಬರ್ ೨೧, ೨೦೧೨ ಟೈಪ್ ಮಾಡಿ.....ನೀವೇ ನೋಡಿ ಇದು...ಮ್ಯಾಯನ್ ಕ್ಯಾಲಂಡರ್ ನ ಮೂಲ ಸೊನ್ನೆಯ ಗರಿಷ್ಟ್ ಸಂಖ್ಯೆ ೧೩ ಕ್ಕೆ ನಿಲ್ಲುತ್ತೆ ಮತ್ತು ..ಕ್ಯಾಲಂಡರ್....೧೩.೦.೦.೦.೦ ಗೆ ನಿಲ್ಲಿತ್ತೆ..!!!!
http://www.diagnosis2012.co.uk/mlink.htm

Friday, October 16, 2009

ಶಾಯರಿ-ಗುಟುಕು

ಖುದ್ ಖುಷಿ
ನ ಕರೋ ವಾರ್
ಕರ್ಕೆ ದಿಲ ಕೆ ಪಾರ್
ಮೀಠಿ ನಜ಼ರೋಂಕೆ ತೀರ್
ಬೈಠಿಹೋ ದಿಲ್ ಮೇ ಮೇರೆ
ಬನಾಕೆ ಉಸ್ಕೋ ಅಪ್ನಾ ಘರ್
ನ ಮಾನೋಗಿ ತುಮ ಅಗರ್
ತೊ ಹೋಜಾನ ತುಮ್
ಖುದ್-ಖುಷಿಕೋ ತಯ್ಯಾರ್

ಆತ್ಮಹತ್ಯೆ
ನನ್ನೆದೆ ಗೂಡಿಗೆ ಚುಚ್ಚಿ
ಕೊಲ್ಲಬೇಡವೇ ಹುಚ್ಚಿ
ಅದುವೆ ಗೂಡು ಅಲ್ಲಿಹಳೆನ್ನ ಗುಬ್ಬಚ್ಚಿ
ಕೇಳದೇ ಹೋದರೆ ಪೋರಿ
ನಿನ್ನಾತ್ಮಹತ್ಯೆಗೆ ನೀನೇ
ಮಾಡಿಕೊಳ್ಳುವೆ ದಾರಿ

ಇನ್ನೊಂದು ಜುಗಲ್ ಬಂದಿ - ಶೋಕಿ
ಶೌಖ್ ಥಾ ಸಿರ್ಫ್ ಬಾತ್ ಕರ್ನೇಕ
ಲಿಯಾ ಮೊಬೈಲ್ ಶಾದೀಸೆ ಪಹಲೆ
ಅಬ್ ಕ್ಯೊಂ ಐಸೆ ಲಗ್ ರಹಾ ಹೈ?
ಹೋಗಯೀ ಮಾಡಲ್ ಪುರಾನಿ
ಕ್ಯೋಂ ನ ಇಸ್ಕೋ ಬದಲ್ಲೇಂ?

ಮದುವೆಗೆ ಮುಂಚೆ ಶೋಕಿ ಮಾತನಾಡಲು
ಕೊಂಡಾಯ್ತು ಮೊಬೈಲೊಂದು ಮಾಡಲ್ಲು
ಇತ್ತೀಚಿಗೇಕೆ ಕೆರೆತ ಮನದಲ್ಲೂ ?
ಹೊಸದೊಂದು ಕೊಳ್ಳೋಣವೇ
ಹಳತಾಯ್ತು ಮಾಡಲ್ಲು.

ಭಂಡ
ದಸ್ ಮಿನಟ್ ಸೆ ಚೀಖ್-ಚೀಖ್
ಪೂಛ್ ರಹಾ ಹೂಂ ತುಮ್ಕೋ ಗುಂಡ
ಕೌನ್ ಆಯಾ ಪಹಲೆ
ಮುರ್ಗಿ ಕಿ ಅಂಡ?
ಚುಪ್-ಚಾಪ್ ಬೋಲಾ ಗುಂಡ
ಮುರ್ಗಿ ಹೊ ಯಾ ಅಂಡ
ಅಪ್ ಹೀ ನೆ ಕಹಾ ಥಾ ಮಾಸ್ಟರ್ ಜೀ
ಚುಪ್ ಹೋಜಾನ ತುಮ್ ಗುಂಡ
ಗರ್ ಪಾಲ ಪಡೆ ತುಮ್ಕೋ
ಕಿಸೀ ಮೂರ್ಖ್ ಸೆ
ಔರ್ ಸಾಮನೆ ಹೋ ಕೋಯಿ ಭಂಡ

ತುಂಟ
ಬೇಡ ನನಗವು ಓಲೆಯುಂಗುರ
ತೋಡಲಾರೆ ನೀನೇನೇ ಹೇಳು ಸುಂದರ
ದುಗುಡತುಂಬಿ ಕೇಳಿದ ಏಕೆ ನನ್ನ ಚಂದಿರ?
ನಿನ್ನ ತುಂಟತನ ಇವುಗಳದೂ
ಎಳೆದು ಪೀಡಿಸ್ತಾವಲ್ಲ ನನ್ನ ಕೂದಲ-ಗುಂಗುರ
(ಗೀತಾ ಅವರ ಮ್ಯೂಸಿಂಗ್ಸ್ ಪೋಸ್ಟ್ ಪ್ರಭಾವಿತ)

Wednesday, October 7, 2009

ಭಾರತೀಯ ವಿಜ್ಞಾನಿ ಡಾ. ವೆಂಕಟರಾಮನ್ ರಾಮಕೃಷ್ಣನ್ ಗೆ ೨೦೦೯ ರ ರಸಾಯನ ಶಾಸ್ತ್ರದ ನೋಬೆಲ್ ಪಾರಿತೋಷಕ















(ಚಿತ್ರ: ಕೃಪೆ ಅಂತರ್ಜಾಲ)

ಭಾರತೀಯ ವಿಜ್ಞಾನಿ ಡಾ. ವೆಂಕಟರಾಮನ್ ರಾಮಕೃಷ್ಣನ್ ಗೆ ೨೦೦೯ ರ ರಸಾಯನ ಶಾಸ್ತ್ರದ ನೋಬೆಲ್ ಪಾರಿತೋಷಕ.


ನಮ್ಮೆಲ್ಲರಿಗೆ ಇದು ಹೆಮ್ಮೆಯ ವಿಷಯ.
ಜೈಹಿಂದ್
ಇವರು ಪ್ರೊಟೀನುಗಳ ಉತ್ಪಾದನೆಗೆ ಬೇಕಾಗುವ ರೈಬೋಸೋಮು ಎಂಬ ನಮ್ಮ ಜೀವಕೋಶಾಂಶಗಳ ಕ್ರಿಯಾ-ಪ್ರಕ್ರಿಯಾ ವಿಧಾನಗಳ ಅಧ್ಯಯನ ಮಾಡಿದ್ದಾರೆ. ಈ ಪಾರಿತೋಷಕವನ್ನು ಮೂವರು ಹಂಚಿಕೊಳ್ಳುತ್ತಿದ್ದು, ಇವರು ಮಿಕ್ಕವರಿಗಿಂತ ಕಿರಿಯರು ಎನ್ನುವುದು ಗಮನಿಸಬೇಕಾದ ಅಂಶ. ಇವರ ಅಧ್ಯಯನ ಆಂಟೀಬಯೋಟಿಕ್ ಗಳು ರೈಬೋಸೋಮುಗಳ ಜೊತೆ ಕೂಡಿಕೊಳ್ಳುವ ಪ್ರಕ್ರಿಯೆಗೆ ಬೆಳಕನ್ನು ಚೆಲ್ಲಿದೆ ಆ ಮೂಲಕ ವಿವಿಧ ಜೀವರಕ್ಷಕ ಔಷಧಿಗಳಿಗೆ ಅದರ ಆವಿಷ್ಕಾರಕ್ಕೆ ದಾರಿಮಾಡಿಕೊಟ್ಟಿದ್ದಾರೆ.
ನಮ್ಮೆಲ್ಲರ ಅಭಿನಂದನೆಗಳು ಡಾ. ರಾಮಕೃಷ್ಣನ್ ಗೆ ಮತ್ತು ಅವರ ಪರಿವಾರಕ್ಕೆ..ಇಡೀ ದೇಶಕ್ಕೆ.