Wednesday, April 29, 2009

ಚುಟುಕಗಳ ಮತ್ತೊಂದು ಸರಣಿ

ಕನಸು
ಮುಚ್ಚಿದ ಕಣ್ಣ
ಹಚ್ಚಿದ ಬಣ್ಣ
ಕೊಚ್ಚಿಹೋಯಿತೇಕೆ?
ತೆರೆದರೆ ಕಣ್ಣ


ಲವ್ವು
ತಾಳ ತಪ್ಪಿದ ಬಡಿತ
ಹೃದಯ ಬಿಚ್ಚಿ ಮಿಡಿತ
ಕಣ್ಣ-ಕಣ್ಣು ಕಲೆತಾಗ
ತುಟಿ ಎರಡಾಗದೇ ಹೊಮ್ಮಿದ್ದು

ಗಾಯ
ಸ್ವಲ್ಪವೇ ಏಕೋ ಉಜ್ಜಿಕೊಂಡೆ
ಹಿತವೆನಿಸಿತು ಕೆರೆದುಕೊಂಡೆ
ಈಗ ಅನಿಸುತಿದೆ-ತಲೆಚಚ್ಚಿಕೊಂಡೆ
ನಾನೇಕೆ ಕೈಯಾರೆ ಗಾಯ ಮಾಡಿಕೊಂಡೆ ?

ಟ್ವಿಸ್ಟರ್
ನ್ಯಾಯಾನ್ಯಾಯದ ತಕ್ಕಡಿ
ಅನ್ಯಾಯದೆಡೆಗೆ ವಾಲುವುದು
ಅನ್ಯಾಯವಾದಿಯ
ನ್ಯಾಯವಲ್ಲದ
ಅನ್ಯಾಯವನ್ನು
ನ್ಯಾಯಾಸ್ಥಾನದ
ನ್ಯಾಯಾಧೀಶರು
ಅನ್ಯಾಯವಾದರೂ
ನ್ಯಾಯವಲ್ಲದ
ಅನ್ಯಾಯವನ್ನು
ನ್ಯಾಯವೆಂದು
ಎತ್ತಿ ಹಿಡಿದಾಗ

ವಿಪರ್ಯಾಸ
ಹೆಣ್ಣನ್ನು
ಅಬಲೆಯೇ
ಅಬಲೆಯೆಂದು
ಬಣ್ಣಿಸುವುದು.

ಸರಣಿ
ಅಂದು - ಇಬ್ಬರದೂ ಮಾತು, ಇನಿಮಾತು
ಪ್ರೇಮಿಗಳು
ನಂತರ - ಅವನದೇ ಮಾತು ಸವಿ ಮಾತು
ಮಧುಚಂದ್ರ-ರಾತ್ರಿ
ಆಮೇಲೆ- ಇವಳದೇ ಮಾತು, ಇವನು ಮೂಕ
ಸಂಸಾರದ ಪ್ರಾರಂಭ
ತದನಂತರ- ಇಬ್ಬರದೂ ಮಾತು..ಅಲ್ಲಲ್ಲ ಕಿರುಚಾಟ
ಸಂಸಾರದಲಿ ಜಂಜಾಟ
ಈಗ- ಮೌನ, ಇಬ್ಬರೂ
ವೃದ್ಧಾಶ್ರಮದಲಿ...
ಇವರು ಮಾಡಿದ್ದನ್ನು
ಮುಂದುವರೆಸಿದ್ದಾರೆ ಅವರ ಮಕ್ಕಳು
ತಂತಂಮ್ಮ ಮನೆಗಳಲ್ಲಿ

Saturday, April 18, 2009

XX ಮತ್ತು XY









ಮಗು
ಕರುಳಬಳ್ಳಿಯ
ಟಿಸುಲೊಡೆದ ಮೊಗ್ಗು
ತಾಯಿ
ಆ ಮೊಗ್ಗು
ತನ್ನೊಡಲ ಮಮತೆಯ
ಧಾರೆಗೆ
ದಾರಿಯಾದಾಗ
ಅಜ್ಜಿ
ತನ್ನ ಮಮತೆಯ ಸೆಲೆ
ಬತ್ತದೇ ಬಾಡದೇ
ಇನ್ನೊಂದು ಜೀವಕೆ
ಕಾರಣವಾದಾಗ



ಮಗ
ತಾಯ-ತಂದೆಯ
ಒಂದೊಂದು ಅಂಶ
ಪಡೆದಾಗ
ಅಪ್ಪ
ತನ್ನಪ್ಪನನ್ನು
ಧಿಕ್ಕರಿಸಿ, ಪ್ರೇಮಿಸಿ
ವರಿಸಿ, ತನ್ನದೇ ಜಾತಿಯ
ಜನ್ಮವಾದಾಗ
ಅಜ್ಜ
ಮುದಿಸಿ, ವ್ಯಥಿಸಿ
ತನ್ನ ಎರಡನೇ ತಲೆಮಾರಿನ
ಗಂಡು ಕೂಸನು ಕಾಣಲು
ವೃದ್ಧಾಶ್ರಮದ
ಅನುಮತಿ ಪಡೆದಾಗ

Thursday, April 9, 2009

ಛೀ..ಛೀ..ಥೂ..ಥೂ..

ಛೀ..ಛೀ..ಥೂ..ಥೂ..
ವಾಂತಿ ಬರುತ್ತೆ ರೀ ಈಹೊತ್ತಿನ
ರಾಜಕೀಯ ನೋಡಿದ್ರೆ...ಛೀ..ಛೀ..
ದೇವರಾಣೆ ಇಟ್ಟು ದೇವರ್ಗೇ
ಮಹದೇವನಾಣೆ ಇಡಿಸ್ಬಿಡ್ತಾರೆ..ಛೀ..ಛೀ..
ಜರೀತಾರೆ, ಬೈತಾರೆ
ಆಮೇಲೆ ಅವರ್ಹೆಂಡ್ತಿಗೆ
ಜರತಾರೀ ಪ್ರೆಸೆಂಟ್ ಮಾಡ್ತಾರೆ
ಉಗುಳಿದ್ದು ನೆಲಬೀಳೋಕ್ಮುಂಚೆ
ಜರೀ ಪಂಚೇಲೇ ಒರಸ್ತಾರೆ..ಛೀ..ಛೀ..
ಹೆಂಡ ಕುಡುಸ್ತಾರೆ
ಸೀರೆ ತೊಡುಸ್ತಾರೆ
ಕಿಸೆಕೊಂದಷ್ಟು ರೊಕ್ಕ ತುರುಕ್ತಾರೆ
ಗೆದ್ದು ಬಂದರೆ..
ಸೀರೆ ಸೆಳೀತಾರೆ, ಉಂಡಿದ್ದು
ಕಕ್ಕೋಹಾಗೆ ಎದೇಗೊದೀತಾರೆ
ಮಕ್ಕಳು-ಮರಿ ಅನ್ನ್ದೇ
ಕೈಲಿದ್ದ ಕಾಸೂ ಕಿತ್ಕೋತಾರೆ
ಏಳೇಳು ಜನ್ಮಕ್ಕೂ ಬ್ಯಾಡಪ್ಪ
ರಾಜ್ಯ ಕೊಟ್ಟ್ರೂ ರಾಜಕಾರಣಿ
ಸವಾಸ..ಛೀ..ಛೀ..ಥೂ..ಥೂ..

Wednesday, April 8, 2009

ಹಳ್ಳಿ-ಗಲ್ಲಿ

ಹಳ್ಳಿ-ಗಲ್ಲಿ

ಮನೆಯಂಗಳದಲಿ ನಿಂತು
ಜಗುಲಿಸಾಲನು ನೋಡಿದೆ
ಅಗುಳಿಹಾಕದ ಕದಗಳು
ಮನ-ಮನೆಗಳ ಬೆಸೆದಿದೆ

ಸಾಲು -ಸರತಿಯ ಮನೆಗಳು
ಹೊಲವ ತುಂಬಿಹ ತೆನೆಗಳು
ದವಸ ಧಾನ್ಯವ ಹಸನ ಮಾಡುವ
ಊರಹೊರಗಿನ ಕಣಗಳು

ಕೆರೆಯ ಅಂಚಿನ ಬಾವಿ ಕಟ್ಟೆಯ
ಮೇಲೆ ನೆರೆದಿಹ ಕೊಡಗಳು
ಬಳುಕು ನಡುವಿನ ಮೇಲೆ ಕುಂತಿಹ
ಹೊಳೆವ ಕಂಚಿನ ಕೊಡಗಳು

ಬಿಂಕಮೊಗದ ಸಿಂಗಾರಿ ಮುಂದೆ
ತುಂಟ ನಗೆಯಬಂಗಾರಿ ಹಿಂದೆ
ನೀರಹೊತ್ತ ನೀರೆಯರ ಕೊಡಗಳು
ಒಯ್ಯಾರ ನಡೆಗೆ ಓಲಾಡುವ ಜಡೆಗಳು

ಅರಳಿಕಟ್ಟೆಯಮೇಲೆ ಸೇರುವ
ಪಂಚರ ಪಂಚಾಯಿತಿ ಸಭೆಗಳು
ಬೆಳಗು ಸಂಜೆಯ ನಸುಕು ಮುಸುಕಲಿ
ಇಂಚರ ಸಂಚಾರ ಮಾಡುವ ಶುಕಗಳು

ಜಾತಿ ಮತ ಭೇದ ಅರಿಯದ
ಹಬ್ಬ ಹರಿ ಒಂದಾಗಿ ಸೇರಿದ
ಎಂದೂ ಮರೆಯದ ದಿನಗಳು
ನೆನಪಿನಾಳದಿ ಉಳಿದುಕೊಂಡಿವೆ
ಹಳ್ಳಿ-ಗಲ್ಲಿಯ ಆ ಕ್ಷಣಗಳು

ಮಾರನ- ಮಾರಲ್ಲU

"ನಮ್ಸ್ಕಾರ ಸಾ..ಎಲ್ಲೋ ಒಂಟಂಗೈತಲ್ಲಾ ಪಟ್ನದ್ಕಡೇಗಾ...?"
ಹಿಂತಿರುಗಿ ನೋಡಿದೆ.. ಮಾರ... ಹೊಲಗಳ ಕಡೆಯಿಂದ ರಸ್ತೆಗೆ ಸೇರುವ ಕಾಲುದಾರಿಯಿಂದ ಬರುತ್ತಾ..ಹೇಳಿದ್ದ..
"ನಮಸ್ಕಾರ ಮಾರ.., ಏನಪ್ಪಾ ಬಹಳ busy ಅಂತೆ ನೀನು..ಕೈಗೇ ಸಿಗ್ತಿಲ್ಲ election announce ಆದಮೇಲೆ..." ಎಂದೆ.
"ಔದು ಸಾ.. ಕಂಟ್ರಾಕ್ಟ್ ತಂಗಂಡಿದ್ದಿನಿ.. ದೇವ್ರ ದಯ ನಿಮ್ಮೆಲ್ಲರ ಆಸೀರ್ವಾದ..ಚನ್ನಾಗಿ ನಡೆದೈತೆ ಧಂಧೆ" ಅಂದ.
"ಏನು..ಕಾಂಟ್ರಾಕ್ಟು..?? ಅದೆಂಥ contract ಓ ಮಾರಾಯ?, ಹೌದು ಬಿಡು..ಟ್ರಮ್ಮಾಗಿ ಡ್ರಸ್ ಮಾಡಿಕೊಂಡು ಪೂರ್ತಿ ಮನುಷ್ಯಾನೇ ಬದಲಾಗಿ ಬಿಟ್ಟೀದೀಯ...!!!" ಎಂದೆ.
"ಅದೇ ಸಾ...ಎಲೆಕ್ಸನ್ ಪರ್ಚಾರ..ಸಬೆ ಅಂತೆಲ್ಲಾ ಮಾಡ್ತಾರಲ್ವೇ..ಅದಕ್ಕೆ..ಜನಾನ ಸಪ್ಲೈ ಮಾಡೋದು.. ಇವತ್ತು ಎಮ್ಮೆ ಪಾರ್ಟಿಯೋರು ಕರದೌವ್ರೆ ಓಗಿ ಯಾವಾರ ಕುದ್ರಿಸ್ಕೊಂಡು ಬರೋಣಾ ಅಂತ ಒಂಟಿವಿನಿ"
"ಅಲ್ಲಪ್ಪಾ.. ಮಲ್ಲಿಗೆ ಪಕ್ಷದ ಸಭೇಲಿ ಇದ್ದೆ..ಬಹಳ ಓಡಾಡ್ತಾ ಇದ್ದೆ ನೀನು ಅಂತ ಗುರುರಾಜ ಮೇಸ್ಟ್ರು ಹೇಳ್ತಾ ಇದ್ರು...!! ನಾನು..ಇವನೇನಪ್ಪಾ ನೆನ್ನೇ ವರೆಗೂ ಹೆಬ್ಬೆರಳು ಪಕ್ಷದಲ್ಲಿ ಕೆಲಸ ಮಾಡ್ತಿದ್ದವನು ಇದ್ದಕ್ಕಿದ್ದಂತೆ ಮಲ್ಲಿಗೇ ಪಕ್ಷಕ್ಕೆ ವಲಸೆ ಹೋಗಿದ್ದಾನಾ ಹೇಗೆ..? ಅಂತ ಯೋಚಿಸಿದ್ದೆ" ಎಂದೆ.
"ಹೆ..ಹೆ..ಹೆ...ಏ..ಏನೂ ಇಲ್ಲ ಸಾ..ನಾನೇನು ಮಾಮೂಲಿ ಪುಢಾರಿಗಳ ತರಾನೇ..? ಕುರ್ಚಿನೋ ..ಇನ್ನೇನೋ..ಸಿಗ್ತೈತೆ ಅಂತಂದ್ರೆ ವರ್ಷಗಟ್ಲೇ ನಂಬಿರೋ ಸಿದ್ಧಾಂತಾನ ಧಿಢೀರ್ ಅಂತ ಬಿಡೋಕೆ...?? ಈ ವಾಗ ನಮ್ಮ ರಂಗನತಿಟ್ಟ್ಗೆ ಹಕ್ಕಿ ಪಕ್ಸಿ ಬತ್ತಾವೆ..ತಿಂಡಿ ತೀರ್ಥ ತಿಂತವೆ..ಮರಿ ಮಾಡ್ತಾವೆ..ರೆಕ್ಕೆ ಪುಕ್ಕ ಬಲ್ತ್ ಮ್ಯಾಲೆ ಮಕ್ಕಳು ಮರೀನ ಕರ್ಕೋಂಡ್ ತಮ್ಮ್ ದೇಸಕ್ಕೊಂಟೋಯ್ತಾವೆ..ಅಲ್ಲವ್ರಾ...? ಅಂಗೇಯಾ..ಒಟ್ಟೇಪಾಡ್ಗೆ ಅಂತ ಓಯ್ತೀನಿ..ದುಡ್ಕೋತೀನಿ ಮತ್ತೆ ನನ್ಗೂಡ್ನ ನಾನು ಸೇರ್ಕೋತೀನಿ...ನಮ್ಮ್ ತಾತನ ಕಾಲ್ದಿಂದ್ಲೂವೆ ಸ್ವಾಸಂತ್ರ ತಂದ್ಕೋಟ್ಟೋರ್ ಪಕ್ಸ ನಂಬಿರೋರು ನಾವು..ಏನೋ ಒಂದ್ಸ್ವಲ್ಪ ಯಡವಟ್ಟ್ಮಾಡ್ಕಂಡವ್ರೆ ಅಂತ ಗೂಡ್ನೇ ಬಿಡಾಕಾಯ್ತಾದಾ..ಯೋಳಿ..ಒಸಿ...."
ಬಡವನಾದರೂ ಸಿದ್ಧಾಂತ-ಪರಂಪರೆಗೆ ಎಷ್ಟು ಮಹತ್ವ ಕೊಡ್ತಾನಲ್ಲಾ ಮಾರ ಎನ್ನಿಸಿ ಎಲ್ಲ ಕಟೌಟ್ ರಾಜಕಾರಣಿಗಳಿಗಿಂತ ಎತ್ತರ ಕಂಡ ಮಾರ. ಅಷ್ಟರಲ್ಲಿ ಬಸ್ ಬಂತು, ಇಬ್ಬರೂ ಬಸ್ ಹತ್ತಿ ಪಟ್ಟಣದ ಕಡೆ ಹೊರಟೆವು.