Thursday, May 14, 2015

ಹೀಗೂ ಒಂದು ಎಡವಟ್ಟು.....

ಹೀಗೂ ಒಂದು ಎಡವಟ್ಟು ..
(Foto Source: Internet)

ಟ್ರಿನ್...ಟ್ರಿನ್...ಟ್ರಿನ್...
ಅಪರೂಪಕ್ಕೆ ನಮ್ಮ ಮನೆಯ ಲ್ಯಾಂಡ್ ಲೈನ್ ದೂರವಾಣಿ ಪಕ್ಕದಲ್ಲೇ ಚಾರ್ಜ್ ಮಾಡಲು ಇಟ್ಟಿದ್ದ ನನ್ನ ಹೊಸ ಗೆಲಾಕ್ಸಿ ಎಸ್ಸಾರು ನ ನೋಡಿ ಲೇವಡಿ ಮಾಡಿದ್ದು...ನೋಡಿ...ನನಗೆ ನಗು ಬಂತು...
ಯಾವಾಗಲೂ ಮನೆಯಲ್ಲೇ ಇರುವ, ಅಲ್ಪ ಸ್ವಲ್ಪ ಓಡಾಡಬಲ್ಲ, ಆದರೂ ಸದಾ ಕರೆಗೆ ಓಗೊಡಬಲ್ಲ ಆ ಸೀಮಿತಚರ ದೂರವಾಣಿಗೆ- ಉಸಿರಿಲ್ಲದೇ ವಿದ್ಯುತ್ ಸಾಕೆಟ್ಟನ್ನೇ ದೇಹಿ ಎನ್ನುತ್ತಾ ಗೋಗರೆಯುತ್ತಿದ್ದ ಗೆಲಾಕ್ಸಿ ಎಸ್ಸಾರನ್ನು ನೋಡಿ “ಅಯ್ಯೋ ಪಾಪ” ಎನಿಸಿರಲೂಬಹುದು.
ದೂರವಾಣಿಯನ್ನ ಕೈಗೆ ತೆಗೆದುಕೊಂಡೆ
ಹಲೋ..ಹಲೋ..
ಆ ಕಡೆಯಿಂದ ಸವಿ ಸವಿ ಹೆಣ್ಣಿನ ದನಿ...
“ಹಲೋ, ಎಸ್...ಹೂ ಈಸ್ ಸ್ಪೀಕಿಂಗ್”...ಎಂದೆ....
“ಮೇಡಂ ಈಸ್ ಡಾ. ಆಜಾದ್ ದೇರ್..? ದಿಸ್ ಈಸ್ ಕನ್ವಿನರ್ ಪಿ ಆರ್ ಕಮಿಟಿ  ಫ್ರಂ ಕುವೈತ್ ಕನ್ನಡ ಕೂಟ...ಸ್ಪೀಕಿಂಗ್”
ಅರೆರೆ..ಇಸ್ಕಿ..!!.ನನ್ನ ನಾನು ಮುಂದುಗಡೆ ಇದ್ದ ಕನ್ನಡಿಲಿ ನೋಡ್ಕೊಂಡೆ..., ಹೌದು ನಾನೇ...!! ಮತ್ತೆ ಮೇಡಂ ಅಂತಾರಲ್ಲ ಈವಮ್ಮ..?? ಅಂದ್ಕೊಂಡ್ರೂ...
ಹೌದು ಕನ್ನಡ ಕೂಟದವರು ನನ್ನ ಮಿಸಸ್ ಗೆ ಕನ್ನಡ ಬರೊಲ್ಲ ಅಂದ್ಕೊಂಡಿದ್ದಾರಾ ಹ್ಯಾಗೆ..?? !!,
ನಾನಂದೆ..
“ಮೇಡಂ, ಕನ್ನಡ ಕೂಟದ ಪಿ ಆರ್ ಕಮಿಟಿ ಅಂತೀರ, ಕನ್ನಡದಲ್ಲಿ ಮಾತನಾಡಬಹುದಲ್ಲ ಕೂಟದ ಸದಸ್ಯರ ಜೊತೆಗೆ ಮಾತಾನಾಡುವಾಗ..??”
“ಹಾಂ..!!”
ಆ ಕಡೆಯವರು ಗಾಬರಿಯಾದಂತೆ ಅನಿಸಿತು... ತಕ್ಷಣ ಹೇಳಿದೆ...
“ಅಲ್ಲ ಮೇಡಂ, ತಪ್ಪು ತಿಳಿಯಬೇಡಿ, ನಾವೇ ನಮ್ಮಲ್ಲಿ ಕನ್ನಡದಲ್ಲಿ ವ್ಯವಹರಿಸದೇ ಇದ್ದರೆ ಉತ್ತರ ಭಾರತದವರು ಕನ್ನಡದಲ್ಲಿ ಮಾತನಾಡುತ್ತಾರೆಯೇ..??”
“ಅಯ್ಯೋ, ಕ್ಷಮಿಸಿ ಮೇಡಂ, ನಿಮಗೆ ಕನ್ನಡ ಬರುತ್ತೋ ಇಲ್ವೋ ಅನ್ನೋ ಅನುಮಾನದಲ್ಲಿ ಇಂಗ್ಲೀಷಲ್ಲಿ ಮಾತನಾಡಿದೆ... ಆಜಾದ್ ಸರ್ ಆದರೆ ಕನ್ನಡದಲ್ಲೇ ಕೇಳ್ತಿದ್ವಿ”
ಈಗ ನನ್ನಲ್ಲಿದ್ದ ಪುರುಷ ಪ್ರಧಾನ ಗಡಸು ಸ್ವರ ಜಾಗೃತಗೊಂಡಿತು....ಸ್ವಲ್ಪ ದಪ್ಪ ಸ್ವರ ಹೊರಡಿಸುತ್ತಾ...ಕೇಳಿದೆ,
“ಅಲ್ಲಾ ರೀ...ನನ್ನ ಜೊತೆಗೇ ಇಂಗ್ಲೀಷಲ್ಲಿ ಮಾತನಾಡಿದ್ದಲ್ಲದೇ... ಆಗ್ಲಿಂದ ಮೇಡಂ ಮೇಡಂ ಅಂತ ಹೇಳ್ತಿದ್ದೀರಲ್ಲಾ..ನಾನು ಗಂಡಸು ಕಣ್ರೀ... ನಾನೇ ಆಜಾದ್..” ಎಂದೆ ಆಕ್ಷೇಪದಿಂದ.
“ಅಯ್ಯೋ ಹೌದಾ ಸರ್, ...ನೀವೇನಾ ಮಾತ್ನಾಡಿದ್ದು...??”
ಇದ್ಯಾಕೋ ತೀರಾ ಆಯ್ತು, ನನ್ನನ್ನು ನಾನೇ ಅಲ್ಲ ಎನ್ನುವಂತೆ ಕೇಳ್ತಾರಲ್ಲ...ಎಂದುಕೊಂಡರೂ.. ಸಮಾಧಾನದಿಂದ,
“ಹೌದು ಮೇಡಂ ನಾನೇ ಆಗ್ಲಿಂದ ಮಾತನಾಡ್ತಿರುವುದು, ಯಾಕೆ ನನ್ನ ದನಿ ಹೆಣ್ಣಿನ ದನಿ ತರಹ ಇದೆಯಾ?” ಎಂದೆ ಸ್ವಲ್ಪ ಗಡಸು ದನಿಯಲ್ಲೇ...
“ಸಾರಿ, ಸಾರಿ ಸರ್, ನಮ್ಮ ಪ್ರಚಂಡರ ಪರಿಷೆ ಕಾರ್ಯಕ್ರಮಕ್ಕೆ ನೀವು ಒಬ್ಬರೇ ಬರ್ತೀರೋ ನಾಲ್ಕೂ ಜನ ಬರ್ತೀರೋ...?”
“ನಾವು...ಮೂವರು... ಆಂ !..., ಅರೆ!! ಏನಂದ್ರಿ..ನಾಲ್ಕೂ ಜನ...?? ನಮಗೆ ಇರೋದು ಒಂದೇ ಮಗು ಕಣ್ರೀ.. ಸುರಯ್ಯಾ – ಮಗ ಮಗಳು ಎಲ್ಲಾ ಅವಳೇ, ಈ ನಾಲ್ಕನೇದನ್ನ ಯಾವಾಗ ದೇವರು ಕೊಟ್ಟ ನನಗೇ ಗೊತ್ತಿಲ್ಲ..!!” ಎಂದೆ ನಗುತ್ತಾ.
“ಹಿಹಿಹಿ, ತುಂಬಾ ತಮಾಶೆಯಾಗಿ ಹೇಳ್ತೀರಿ..ಸರ್.  ಸಾರಿ ಸರ್, ಹೌದಲ್ಲಾ ...ಸುರಯ್ಯಾ ಒಬ್ಬಳೇ ಅಲ್ವಾ...?,  ಹಾಗಾದರೆ ನೀವು ಮೂವರೂ ಬರ್ತೀರಲ್ವಾ..?”
“ಹೌದು ತಮಾಶೆಯಲ್ಲೇ ನಾಲ್ಕನೇ ಸದಸ್ಯ ಆದರೆ ಪರವಾಗಿಲ್ಲ ಬಿಡಿ... ಎನಿ ವೇ...ತಪ್ಪು ತಿಳೀಬೇಡಿ...ಹಾಗೇ ತಮಾಶೆಗೆ ಹೇಳಿದೆ, ಹೌದು ನಾವು ಮೂವರೂ ಬರ್ತೀವಿ” ಎಂದೆ.
“ಧನ್ಯವಾದ ಸರ್, ಗೊಂದಲಕ್ಕೆ ಕ್ಷಮೆಯಿರಲಿ...” ಎಂದರು ಆ ಕಡೆಯಿಂದ
“ಪರವಾಗಿಲ್ಲ ಬಿಡಿ, ಆಯ್ತು ಶುಭವಾಗಲಿ ಬರ್ತೀವಿ ನಾವು, ಬೈ” ಎಂದು ಫೋನ್ ಇಟ್ಟೆ.
ಇಡೀ ಸಂಭಾಷಣೆ ಮೆಲುಕು ಹಾಕ್ತಾ ನಗ್ತಾ, ಮರಳ ಮಲ್ಲಿಗೆಗೆ ಲೇಖನ ಬರೆಯಲು ಕುಳಿತೆ.
ಟ್ರಿಣ್ ಟ್ರಿಣ್ ಟ್ರಿಣ್... ಟ್ರಿಣ್..ಟ್ರಿಣ್..... ಮತ್ತೆ ದೂರವಾಣಿ ಉಲಿಯಿತು...
“ಹಲೋ...ಎಸ್...? “ ಎಂದೆ.
“ಹಲೋ ನಮಸ್ಕಾರ ಅಬಿದಾ.. ಮೇಡಂ.. ಹ್ಯಾಗಿದ್ದೀರಿ..?? ಸುರು ಹ್ಯಾಗಿದ್ದಾಳೆ..?? ಇನ್ನೊಂದು ಸಂಗೀತಮಯ ಹೆಣ್ಣಿನ ದನಿ..
ಯಪ್ಪಾ..ಏನಿದು.. ?? ತಲೆ ಚಿಟ್ ಹಿಡೀತಿದೆ... ಇವರೂ ನನ್ನನ್ನ ಹೆಣ್ಣಿಗಿಂತಾ ಹೆಚ್ಚಿಲ್ಲ ಅನ್ನೋ ಹಾಗೆ ಕೇಳ್ತಾರಲ್ಲ...??!! ಕೋಪ ಬಂತು.. ಆದರೂ ..ಅರೆ ! ಅಬಿದಾ ಹೆಸರು ..ಸುರಯ್ಯಳ ಕಿರುನಾಮ ಸಹಾ ಗೊತ್ತಿದೆಯಲ್ಲ..!!  ಕೇಳಬೇಕು ಅಂತ ಬಾಯ್ ಬಿಡುವುದರೊಳಗೆ...ಅವರೇ...
“ನಾನು.. ಆರತಿ ಅಂತ, ದುಬೈಯಿಂದ... ಡಾ. ಆಜಾದ್ ಸರ್ ದುಬೈ ಗೆ ಕಾನ್ಫರೆನ್ಸಿಗೆ ಬರ್ತೀನಿ ಅಂತ ಹೇಳಿದ್ರು.. ಅವರ ಹತ್ರ ಮಾತನಾಡಬಹುದಾ..??”
ಓಹ್ ಚುಟುಕು-ಗುಟುಕಿನ ಆರತಿನಾ...!! ಆದರೂ ಸ್ವಲ್ಪ ಗೋಳು ಹುಯ್ಕೊಳ್ಳೋಕೆ ಮನಸಾಯ್ತು...
“ಓಹ್..ಆರತಿನಾ...ನೀವು ಹೇಗಿದ್ದೀರಿ? ನಾವೆಲ್ಲಾ ಚನ್ನಾಗಿದ್ದೀವಿ?” ಎಂದೆ
“ಹೌದು ಮೇಡಂ, ನಾವೂ ಚನ್ನಾಗಿದ್ದೀವಿ..ಮಾತನಾಡಬಹುದಾ ಅವರ ಹತ್ರ..”
“ಆರತಿಯವರೇ.. ಅವರ ಪ್ರೋಗ್ರಾಮ್ ಕ್ಯಾನ್ಸಲ್ ಆಯ್ತಂತೆ... ಏನೋ ಮಾಡ್ತಿದ್ದಾರೆ ಕಂಪ್ಯೂಟರ್ ಬಳಿ... “ ನಗು ಅದುಮಿಟ್ಟುಕೊಂಡು ಹೇಳಿದೆ...
“ಹೌದಾ...ಬರ್ತೀನಿ ಅಂದಿದ್ರು,,, ನಾನು ಹೊಳೆನರಸೀಪುರ ಮಂಜುನಾಥ್ ಗೂ ಹೇಳಿಬಿಟ್ಟಿದ್ದೆ..ನಮ್ಮ ಮನೆಗೆ ಭೇಟಿ ಕೊಡಿ ಅಂತ,,, ಅವರೂ ಒಪ್ಕೊಂಡಿದ್ರು...ಆಜಾದ್ ಸರ್ ಟಿಕೆಟ್ ಎಲ್ಲಾ ಬುಕ್ ಆಗಿದೆ ಅಂತ ಹೇಳ್ತಿದ್ರು...!!”  ಆರತಿ ದನಿಯಲ್ಲಿ ನಿರಾಸೆ ಸ್ಪಷ್ಟವಾಗಿತ್ತು...
ಪಾಪ ಹೆಚ್ಚು ಗೋಳಾಡಿಸೋದು..ಬೇಡ...ಎಂದು...
“ಹಹಹಹ .....ಹಾಗಲ್ಲ.........”
ಎನ್ನುವುದರೊಳಗೆ...
“ಏಯ್..ಇದು ಆಜಾದ್ ಸರ್ರೇ!!,,,, ಏನ್ಸಾರ್ ನೀವು ಬೇಸ್ತು ಬೀಳಿಸ್ತೀರಾ...!! ಹೆಣ್ಣಿನ ದನಿಯಲ್ಲಿ ಎಷ್ಟು ಚನ್ನಾಗಿ ಮಾತನಾಡ್ತೀರ...?!!
ಯಪ್ಪಾ... ಇದಂತೂ ಎಡವಟ್ಟೇ..ಅಂದ್ಕೊಂಡು...
“ಆರತಿ...ಸುಮ್ನೆ ತಮಾಶೆಗೆ ಹಾಗೆ ಹೇಳಿದೆ...ನಾನು ಬರ್ತಿದ್ದೇನೆ...ಮಂಜುನಾಥ್ ಗೆ ಪೋನ್ ಸಹಾ ಮಾಡಿದ್ದೆ... ಹೆಣ್ಣಿನ ದನಿ..ಅಂದ್ರಲ್ಲಾ...?? ಕಂಫ್ಯೂಜನ್ ಯಾಕೆ...”
“ಅಲ್ಲ ಸರ್..ದನಿ ಬದಲಿಸಿ ಮಾತನಾಡ್ತೀರಲ್ಲ ಅದಕ್ಕೆ ಕೇಳಿದೆ...”
ಈಗ ನಿರ್-ಉತ್ತರ ನಾನು... ನನ್ನ ದನಿನೇ ಹಾಗಾ...?? ನನಗೇ ನನ್ನ ಬಗ್ಗೆ ಅನುಮಾನ ಆಯ್ತು...
“ಸರಿ ಬಿಡಿ ಅಲ್ಲಿ ಬಂದಾಗ ಕತೆ ಹೇಳ್ತೀನಿ...ಹಹಹ” ಎಂದೆ ಪೆಕರು ಪೆಕರಾಗಿ
“ಓಕೆ ಸರ್.. ಆಯ್ತು...ನಾನೂ ಸ್ವಲ್ಪ ತೇಜೂ ಸ್ಕೂಲ್ ಹತ್ರ ಹೋಗ್ಬೇಕು..ಮತ್ತೆ ಸಿಗ್ತೇನೆ ..ಬೈ..”
“ಓಕೆ ಬೈ...ಆರತಿ...ಟೇಕ್ ಕೇರ್” ಎಂದು ಪೋನ್ ಕೆಳಗಿಟ್ಟೆ
ನನಗೆ ಪರಿಶೀಲನೆ ಆಗಲೇಬೇಕು ಅನ್ನಿಸಿತು... ಕಂಪ್ಯೂಟರ್ ನ ಸೌಂಡ್ ರೆಕಾರ್ಡ್ ಪ್ರೋಗ್ರಾಮಲ್ಲಿ  ಫೋನಿನಲ್ಲಿ ನಾನು ಮಾತನಾಡಿದ ಮಾತನ್ನೇ ರೆಕಾರ್ಡ್ ಮಾಡಿ..ದೊಡ್ಡದಾಗಿ ದನಿ ಹೆಚ್ಚಿಸಿ...ಪ್ಲೇ ಮಾಡಿದೆ... ಅರೆ..ಸರಿಯಾಗೇ ಇದೆಯಲ್ಲಾ...!! ಮತ್ತೆ ಯಾಕೆ ..??? ಇದೊಂದು ಬಿಡಿಸಲಾಗದ ಕಗ್ಗಂಟಾಗ್ತಿತ್ತು....
ಮತ್ತೆ ಅದೇ ಸೀಮಿತಚರ ದೂರವಾಣಿ....ಸದ್ದು....
“ಟ್ರಿನ್.ಟ್ರಿನ್...ಟ್ರಿನ್...”
ಫೋನ್ ಎತ್ತಿದೆ...
“ಹಲೋ” ಎಂದೆ...
“ದಿಸ್ ಈಸ್ ಫ್ರಂ ಸಿಮ್ಸ್ ಸ್ಕೂಲ್,.... ಈಸ್ ದಿಸ್ ಸುರಯ್ಯಾಸ್ ಮಮ್ಮಿ...??”
!!!???!!!!! ಕಣ್ಣು ಕತ್ತಲಿಟ್ಟಂತಾಯ್ತು... ಚೇರಿನಲ್ಲಿ ಕುಸಿದೆ... ಆ ಕಡೆಯಿಂದ..ಹೆಣ್ಣಿನ ದನಿ ಇನ್ನೂ ಕೇಳುತ್ತಿತ್ತು.
“ಮೇಡಂ...ಹಲೋ...ಮೇಡಂ... ಈಸ್ ಇಟ್ ಸುರಯ್ಯಾಸ್ ಮಮ್ಮಿ...ಪ್ಲೀಸ್ ದಿಸ್ ಈಸ್ ಟು ರಿಮೈಂಡ್ ಯೂ ದಟ್ ವೀಕೆಂಡ್ ಈಸ್ ಪೇರೆಂಟ್ ಟೀಚರ್ಸ್ ಮೀಟಿಂಗ್ ಓಕೆ ಮೇಡಂ!!”
ಸಾವರಿಸಿಕೊಂಡು..
“ಓಕೆ....” ಎಂದು ಪೋನ್ ಕುಕ್ಕಿದೆ...’
ಯಾಕೆ ಹೀಗೆ...?? ನನ್ನ ಮೀನಿನ ರೀಸರ್ಚ್ ಬೇಕಾರ್ ಅನ್ನಿಸ್ತು...ಈ ಬಗ್ಗೆ ಈಗ ರೀಸರ್ಚ್ ಮಾಡ್ಲೇಬೇಕು...ಊಂ..!!!’
ಅಷ್ಟರಲ್ಲಿ...ನನ್ನ ಗೆಲಾಕ್ಸಿಗೆ ಜೀವ ಬಂತು ಅಂತ ಗೊತ್ತಾಗಿದ್ದು,,ಅದ್ರಲ್ಲಿ ರಿಂಗ್ ಟೋನ್ ಅಣ್ಣಾವ್ರ...”ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು” ಅಂತ ಬಂದಾಗಲೇ...
ಚಾರ್ಜರ್ ನ ತೆಗೆದು ಫೋನ್ ನಲ್ಲ್ಲಿ
“ಎಸ್..ಹಲೋ...” ಎಂದೆ..
“ನಮಸ್ಕಾರ ಸರ್, ನಾನು ಮಹೇಶ್ ಮಾತನಾಡ್ತಿರೋದು... ಯಾಕೆ ನನ್ನ ನಂಬರ್ ಸೇವ್ ಮಾಡ್ಕೊಂಡಿಲ್ವಾ ನೀವು...??
ಈಗ ನನಗೆ ಮಹದಾಶ್ಚರ್ಯ...ಜೊತೆಗೆ...ನನ್ನ ಸಂಶಯ ಸಹಾ ನಿವಾರಣೆ ಆಯ್ತು ಅನ್ನಿಸ್ತು...
“ಹೇಳಿ ಮಹೇಶ್..., ಒಂದೆರಡು ನಿಮಿಷದ ನಂತರ ಕಾಲ್ ಮಾಡಲಾ” ಎಂದೆ..
ಈಗ ಗೆಲಾಕ್ಸಿ ಮೂಲಕ ಸ್ಕೂಲಿಗೆ ಫೋನಾಯಿಸಿದೆ....
“ಈಸ್ ದಿಸ್ ಸಿಮ್ಸ್ ಸ್ಕೂಲ್?” ಎಂದೆ
“ಎಸ್ ಸರ್...ದಿಸ್ ಈಸ್ ಸಿಮ್ಸ್.. ಟೆಲ್ ಮಿ ಸರ್ ವಾಟ್ ಕೆನ್ ಐ ಡೂ?”
ಹೌದು ಅದೇ... ಹೆಣ್ಣಿನ ದನಿ!!..ಆಗ ಕೇಳಿದ್ದು !!!... ಈಗ ಸರ್...ಅನ್ತಿದೆ... ಅಂದರೆ...
’ಎಲ್ಲಾ ಎಡವಟ್ಟೂ ..ಸೀಮಿತಚರ ದೂರವಾಣಿ ಯದ್ದೇ ಎನ್ನುವುದರಲ್ಲಿ ಅನುಮಾನ ಉಳಿಯಲಿಲ್ಲ...
“ಓಹ್...ಎಸ್... ಹಲೋ...ಹಲೋ....ಹಲೋ....”
ಆ ಕಡೆ ಫೋನ್ ಇಟ್ಟಾಗಿತ್ತು.

ಅಬ್ಬಾ...!! ಅಂತೂ ಒಂದಂತೂ ಇತ್ಯರ್ಥ ಆಯ್ತು.... “ನಾನು ನಾನೇ...!!!”