Tuesday, May 4, 2010

ಸುರ-ಸುಂದರ ರಂಗೋಲಿ
“ನಮಸ್ಕಾರ...ಸುರೇಸಣ್ಣ...ಹೆಂಗಿದ್ದೀಯಾ...?”ಮನೆ ಬಾಗಿಲು ಅಗುಳಿ ತೆರೆದೇ ಇತ್ತು, ಬಾಗಿಲನು ತಳ್ಳುತ್ತಾ ಒಳಕ್ಕೆ ಬಂದ- ಸಲೀಂ....!! ಗಾಬರಿಯಾಗಿ ನಿಂತು ಬಿಟ್ಟ...


ಅರೆರೆ ಏನಿದು ಹೋಳಿ ಹಬ್ಬ ಹೋಗಿ ಜಮಾನಾ ಆಯ್ತು..


“ಸರ್..ನೀವು..ಚಾಟ್ ನಲ್ಲಿ ಹೇಗಾದ್ರೂ ಕರೀರಿ..ಇಲ್ಲಿ ಬಂದು... ನನಗಿಂತ 10-15 ವರ್ಷ ದೊಡ್ಡೋರು ನೀವು..ಹಿಂಗ್ ನನ್ನ ಸುರೇಸಣ್ಣ ಅಂತ ಅಣ್ಣ ಅನ್ನಬಾರ್ದು...... ನಿಮಗೆ ಪಾನಿನೀನೂ ಪರ್ಮಿಶನ್ ಕೊಡೊಲ್ಲಾ...ಕನ್ನಡ ಪಂಡಿತರೂ ಅನುಮತಿ ಕೊಡೊಲ್ಲಾ....”


ತಲೆಮೇಲೆ...ಬಿಳಿ, ಹಳದಿ, ಕೆಂಪು ಬಣ್ಣ ಹಾರಿಸಿಕೊಂಡಿದ್ದ..ಸುರೇಶ್ ಸಲೀಂ ನ ಸ್ವಾಗತಿಸಿದ್ದು ಹೀಗೆ...


“ಅಲ್ಲ ಸುರೇಶ್ ಹೋಳೀ ಹೋಗಿ ಕಾಲ ಆಯ್ತು..., ಇದೇನು ಬಣ್ಬಣ್ಣ ತಲೇ ಮೇಲೆ...ಅಂದಹಾಗೆ ...ಪಾಂಡುರಂಗ ವಿಠಲನ್ನ ಹೆಚ್ಚುನೋಡ್ಬೇಡಿ...ಆಮೇಲೆ...ಭಾಭಿನ ಸುಂದಲಿ..ಸುಂದಲಿ ಅಂತ...ಅಂದ್ರೆ ಕಷ್ಟ....”


ನಗ್ತಾ ಮತ್ತೆ ಕೇಳಿದ ಸಲೀಂ ...


“ಅಲ್ಲಾ..ಇದೇನು ಬಣ್ಣ ಅಂತೀನಿ...?!!”


“ಅಯ್ಯೋ ಸಲೀಂ ಸರ್...ನಮ್ಮ ಸಂಘ ಮಾಡೋ ರಂಗೋಲಿ ಕಾಂಪಿಟೇಶನ್ ಗೆ ಸುಂದರೀನೂ ಭಾಗವಹಿಸ್ತೀನಿ ಅಂದ್ಲು...ಸರಿ ಮಾರಾಯ್ತಿ ..ಮಾಡು..ಅಂದೆ...


ಅಲ್ಲ ಸರ್...ನೀವೇ ಹೇಳಿ..., ಅಭ್ಯಾಸಾನೇ ಇಲ್ದೇ ಇದ್ರೆ ರಂಗೋಲಿ ಹಾಕಿ ಗೆಲ್ಲೋಕಾಗ್ತದಾ...?”


ತನ್ನ ಪ್ರಶ್ನೆ ಸಲೀಂ ಮುಂದೆ ಇಟ್ಟ ಸುರೇಶ ...ತನ್ನ ಕಥೆ ಮುದುವರೆಸಿದ


“ನಿಮಗ್ಯಾಕೆ ನಾನು ಪ್ರಾಕ್ಟೀಸ್ ಮಾಡ್ತೀನಿ, ತಂದುಕೊಡಿ ಬಣ್ಣದ ಪುಡಿ.. ಅಂತ ಹಠ ಇವಳದ್ದು....ಹೇಳಿ ಕೇಳಿ..ಕುವೈಟ್ನಂಥಾ ದೇಶದಲ್ಲಿ ಎಲ್ಲಿಂದ ತರೋದು ರಂಗೋಲಿ ರಂಗಿನ ಪುಡಿ...?? ಹುಡ್ಕಾಡ್ದೆ ಎಲ್ಲೂ ಸಿಗ್ಲಿಲ್ಲ.....!!”


ಆಶ್ಚರ್ಯದಿಂದ ಸಲೀಂ ಕೇಳಿದ..


“ಮತ್ತೆ ...ಈ ಬಣ್ಣ ಎಲ್ಲಿಯದು ?”


ಸುರೇಶ ಹೇಳ್ದ “ಅದೇ ಸರ್...ಕಲರ್ ಕಲರ್ ಚಾಕ್ ತಂದಿದ್ನಲ್ಲ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸೋಕೆ...ಅದನ್ನೇ ಒಂದೊಂದು ಬಣ್ಣದ್ದೂ ಹತ್ತು ಹನ್ನೆರಡು ಚಾಕ್ ನ ಮಿಕ್ಸರ್ ಗೆ ಹಾಕಿ ಪುಡಿ ಮಾಡಿದ್ದು ...”


“ಅದು ಸರಿ ಪುಡಿಮಾಡಿದ್ರೆ..ಮುಖ.. ತಲೆಗೆಲ್ಲಾ ಯಾಕೆ ಮೆತ್ತಿಕೊಂಡ್ರಿ?” ಸಲೀಂ ಅರ್ಥವಾಗದೆ ಪ್ರಶ್ನಿಸಿದ..


“ಅಯ್ಯೋ..ಮಿಕ್ಸೀಗೆ ಹಾಕಿ ..ತಿರುವುತ್ತಾ ಇದ್ನಾ..ಇವ್ಳು ಸ್ವಿಚ್ ಆಫ್ ಮಾಡಿದ್ದು ನೋಡ್ಲಿಲ್ಲ ..ಅರೆ..!! ಯಾಕೋ ಮಿಕ್ಸಿ ನಿಲ್ತಲ್ಲಾ ಅಂತ ಲಿಡ್ ತೆಗೆದು ನೊಡೋಕೆ ಹೋದೆ.......”


“ಅಯ್ಯೋ ಸಲೀಮಣ್ಣ ...ನಾನು ಹೀಟರ್ ಆಫ್ ಮಾಡೋದ್ರ ಬದ್ಲು ಮಿಕ್ಸಿ ಸ್ವಿಚ್ ಆಫ್ ಮಾಡಿದ್ದೆ...ಆಮೇಲೆ ..ಗೊತ್ತಾಗಿ ಮತ್ತೆ ಸ್ವಿಚ್ ಆನ್ ಮಾಡಿದೆ...ಇವರು ಜೋರಾಗಿ ’ಥತ್ ತೇರಿ’..ಅಂತ ಅಂದಾಗ ಹಾಲ್ ಗೆ ಬಂದು ನೋಡಿದ್ರೆ ಈ ಅವ್ತಾರ ಮಾಡ್ಕೊಂಡಿದ್ರು...”


ಇವರ ಸಂಭಾಷಣೇನ ಕೇಳಿದ ಸುಂದರಿ ನಗ್ತಾ ಹಾಲ್ ಗೆ ಬರುತ್ತಾ...ಸಲೀಂ ಗೆ ಏನಾಯ್ತು ಎನ್ನುವುದರ ವಿವರ ಕೊಡ್ತಾ.. “ನಮಸ್ಕಾರ...ಬನ್ನಿ ಸಲೀಮಣ್ಣ” ಎಂದಳು.


“ಸುಂದರಮ್ಮನವರೇ...ನೀವು ಸಲೀಂ ಅನ್ನಿ ಇಲ್ಲ ಸಲೀಮ್ ಸರ್ ಅನ್ನಿ...ಸಲೀಮಣ್ಣ ಅನ್ಬೇಡಿ...ಜೇಡಿ ಮಣ್ಣ...ಕೆಂಪು ಮಣ್ಣ ಅಂದಂಗಿರುತ್ತೆ.....” ಎಂದ ಸಲೀಮ ನಗ್ತಾ....


“ನೋಡಿದ್ರಾ...? ನಿಮ್ಮ ತಂಗಿ ತರ ನಾನು, ನನ್ನ ಸುಂದರ ಅಮ್ಮ ಅಂತ ಕರೀತೀರಲ್ಲಾ...ಇದು ಸರೀನಾ...?”


ಎಂದಳು ಸುಂದರಿ ನುಸು ಮುನಿಸಿಂದ.


“ಸರಿ ಬಿಡಿ ಸುಂದರಿದೇವಿ ಅನ್ತೀನಿ ಇನ್ಮೇಲೆ....ಹಹಹ...” ರೇಗಿಸೋ ಹಾಗೆ ಸಲೀಮ್ ಹೇಳಿದಾಗ..


ಹುಸಿಕೋಪದಿಂದ ಹುಬ್ಬು ಮೇಲೇರಿಸಿ ಸಲೀಮನನ್ನು ನೋಡುತ್ತಿದ್ದ ತನ್ನ ಅರ್ಧಾಂಗಿಯನ್ನು ನೋಡಿದ ಸುರೇಶ...ಹೌದಲ್ಲಾ ..ನಾನೂ ಹಾಗೇ ಕರೀಬಹುದು ಇನ್ಮೇಲೆ... ಎನ್ನುವಾಗ ..”ಏನ್ರೀ ನೀವೂ ..???!!” ಎನ್ನುತ್ತ ಗಂಡನ ಬೆನ್ನಮೇಲೆ ಹುಸಿಮುನಿಸಿನ ಗುದ್ದು ಕೊಡಲು ಹೋದಾಗ ಸುರೇಶ ನಕ್ಕುಬಿಟ್ಟ.


“ಅಂದಹಾಗೆ ರಂಗೋಲಿಸ್ಪರ್ಧೆಲಿ .ಯಾರು ಭಗವಹಿಸೋದು? ..” ಸಲೀಂ ಕೇಳಿದ್ದಕ್ಕೆ...


ಸುರೇಶ-ಸುಂದರಿ ಇಬ್ಬರೂ ನಕ್ಕುಬಿಟ್ರು...


“ಏನ್ ಸರ್ ಈ ಅವತಾರ ನೊಡೀನೂ ಕೇಳಿದ್ದೀರಲ್ಲಾ...? ಎಲ್ಲ ರಂಗೋಲಿ ಹಿಟ್ಟೂ ಅಭಿಷೇಕ ಆಗೋಯ್ತು...ಇವ್ರನ್ನೇ ಅಲ್ಲಿ ಕೂತ್ಕೋಳೋಕೆ ಹೇಳ್ಬೇಕು ಅಷ್ಟೇ ಇದೇ ಅವತಾರದಲ್ಲಿ...ಹಹಹ...ಇವ್ರೇ ಕೂತ್ರೆ ಬಹುಮಾನ ಗ್ಯಾರಂಟಿ”


ಗಂಡನ ಅವತಾರದತ್ತ ನೋಡ್ತಾ ಹೆಂಡತಿ ನಕ್ಕು ...ಆ ಬಣ್ಣವನ್ನು ಕೊಡಹಿ...


“ಹೋಗ್ರಿ ನೀವು, ಮುಖ ತೊಳ್ಕೊಂಡು ಬನ್ನಿ ..ತಿಂಡಿ-ಕಾಫಿ ತರ್ತೀನಿ...ಸಲೀಮ್ ಸರ್ ಜೊತೆ ಮಾತನಾಡ್ತಾ ನಮ್ಮ ಪತ್ರಿಕೆ ಬರಹಗಳನ್ನ ಫೈನಲ್ ಮಾಡೋಣ” ಎನ್ನುತ್ತಾ.. “ಕೂತ್ಕೋಳಿ ಸರ್ ನೀವು...ಈ ಫೈಲ್ ನೋಡ್ತಾ ಇರಿ, ಇವ್ರೂ ಫ್ರೆಶ್ ಆಗಿ ಬರ್ತಾರೆ, ಅಷ್ಟೊತ್ತಿಗೆ ರಂಜನಾ, ವಿನಯ್ ಸರ್ ಮತ್ತೆ ಸಂಜಯ ಸರ್ ಬರ್ತಾರೆ ಎಲ್ಲ ಕುಳಿತು ತಿಂಡಿ-ಕಾಫಿ ತಗೊಳ್ತಾ ಫೈನಲ್ ಮಾಡೋಣ ನಮ್ಮ ಪತ್ರಿಕೇನಾ”


ಎನ್ನುತ್ತ ಅಡುಗೆಮನೆಯತ್ತ ಸುಂದರಿ ಹೋದರು..ಸಲೀಂ ಸೋಫಾದ ಮೇಲೆ ಆಸೀನನಾದ..ಸುರೇಶ ಮುಖ ತೊಳೆಯಲು ಬಾತ್ ರೂಮಿನತ್ತ ನಡೆದ. ಎಲ್ಲ ಬಣ್ಣಗಳ ಹಿತ ಮಿತ ಮಿಶ್ರಣದ ಹೋಳಿಯಂತೆ ಸಮರಸ ತುಂಬಿದ ಸಂಸಾರ ಎಲ್ಲ ಜಂಜಾಟವನ್ನೂ ಮರೆಸಿದರೆ, ಪರಸ್ಪರ ಹೊಂದಾಣಿಕೆ ಸಹಬಾಳ್ವೆಗಳು ಮತಭೇದವನ್ನು ಇಲ್ಲದಂತಾಗಿಸುತ್ತವಲ್ಲ ..??!! ಎಂದು ಯೋಚಿಸುತ್ತಾ ಸಲೀಂ ಫೈಲ್ ನ ಪುಟಗಳನ್ನು ತಿರುವಿದ.