Friday, October 22, 2010

ಶತ ವಿಕ್ರಮನ – ಅಸಹಾಯಕತೆ ಯೋ ಅಪ್ರಬುಧ್ಧತೆಯೋ

(ಚಿತ್ರ ಕೃಪೆ: ಚಂದಮಾಮ ಅಂತರ್ಜಾಲ) 

ಕಪಿಲಾಪುರದ ಕಥೆಯಾಕೋ ಈ ಮಧ್ಯೆ ಇಡೀ ಭೂಭಾಗದಲ್ಲಿ ನಗೆಪಾಟಲಾಗತೊಡಗಿತ್ತು...ಪ್ರಜೆಗಳು ಕಪಿಲಾಪುರ ಏಕೆ ಹೀಗೆ ದಿಕ್ಕಿಲ್ಲದೆ ನಡೆಯುತ್ತಿದೆ ? ತಿಳಿಯದಾಗಿತ್ತು. ಭೇತಾಳನ ಬೆನ್ನಹಿಂದೆ ಬಿದ್ದಿದ್ದ ಶತವಿಕ್ರಮ ಯಾಕೋ ಕಿಂಕರ್ತವ್ಯ ಮೂಢನಾಗಿದ್ದಾನೆ...ಪುರಕ್ಕೆ ಹಿಡಿದ ಭೂತವನ್ನು ಬಿಡಿಸೋದೋ..ಪುರವನ್ನು ಕಾಡುತ್ತಿದ್ದ ಪಾಳೆಯಗಾರರನ್ನು ನಿಗ್ರಹಿಸೋದೋ..ಹದಗೆಟ್ಟ ರಸ್ತೆಗಳಲ್ಲಿ ನಾರುವ ಕೊಳೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದೋ..ತನ್ನ ಕೋಟೆಯನ್ನು ಕಾಯುವ ಕೊತ್ವಾಲರ ಸ್ವಯಂಘೋಷಿತ ಸ್ವಾಯತ್ವಕ್ಕೆ ಸವಾಲಾಗಿ ಅವರನ್ನು ನಿಯಂತ್ರಿಸುವುದೋ,,,,ಹೋ,,,!!!  confusionnoo…
ಆದ್ರೂ ಶತ ವಿಕ್ರಮ ಭೇತಾಳನ್ನು ಹುಡುಕಲು ಹೊರಟೇಬಿಟ್ಟ.... ಮರಗಳೇ ಇಲ್ಲವಾಗಿವೆ...ಸರಿಯಾಗಿ ಮಳೆಕಾಣದೆ..ಬೀಡು ಮರಳುಗಾಡಾಗಿದೆ....ಭೂಮಿ ಅಗೆದು ಧೂಳೆಬ್ಬಿಸಿದ ಬಂಡವಾಳಶಾಹಿ ಭೂ ಕೊರೆತ ಧಣಿಗಳು ನಿರಂಕುಶರಾಗಿದ್ದಾರೆ...ಹೆಚ್ಚು ಹೇಳಿದ್ರೆ.. “ಲೋ ದಾಸಯ್ಯ ನಿನ್ನ ಹರಿಕಥೆ ಸುಮ್ನೆ ಮುಂದುವರೆಸ್ತೀಯೋ ಇಲ್ಲ ನಿನ್ನ ಕಾಲಕೆಳಗಿರೋ ಕಂಬಳೀನ ನಿನಗೆ ಕೊಟ್ಟದ್ದನ್ನ ಮತ್ತೆ ಪರಿಶೀಲಿಸಿ ಅದನ್ನ ಎಳೀಯೋದೋ ಹೇಳು” ಅಂತ ಧಮ್ಕಿ ಹಾಕ್ತಾರೆ....

ಶತವಿಕ್ರಮನಿಗೆ ಈಗ ಪೀಕಲಾಟಕ್ಕೆ ಇಟ್ಕೊಳ್ತು...ಅವನ ರಾಜ್ಯದ ಮರಗಳೆಲ್ಲ ಬೋಳಾಗೋಕೆ ಶುರುಹಚ್ಚಿದ್ವು, ಭೂಮಿ ಟೊಳ್ಳಾಗುತ್ತಿತ್ತು, ಬಿಟ್ರೆ ಭೇತಾಳ ಬಂದು ಸಿಂಹಾಸನಾನ ಆವ್ರಿಸ್ಕೊಂಡು ಮುಂದಿನ ಶತವಿಕ್ರಮನಾಗಿಬಿಡ್ತಾನೆ...ಏನು ಮಾಡೋದು..? ಎಲ್ಲಿ ಈ ಭೇತಾಳ....?

ತಾನು ಆಸೆ ಆಮಿಷ ಒಡ್ಡಿ, ಜನರು ತಮ್ಮಲ್ಲೇ ಹೊಡೆದಾಡಿ ಪ್ರಾಣಹಾನಿ ಮಾಡಿಕೊಂಡು ಚುನಾಯಿಸಿ ಕಳುಹಿಸಿದ ವಿರೋಧಪಕ್ಷದವರನ್ನ ರಾಜಿನಾಮೆ ಕೊಡಿಸಿ.....ಅಲ್ಲಿ ಅವನನ್ನೋ ಅಥವಾ ಇನ್ನೊಬ್ಬನ್ನನ್ನೋ ಹಣ ಚೆಲ್ಲಿ ಮತ್ತೆ ಗೆಲ್ಲಿಸಿ ತನ್ನ ಪಕ್ಷದ ಬಲ ಹೆಚ್ಚಿಸ್ಕೊಂಡ್ರೆ......ಈಗ ಪಕ್ಷದವರೇ ಗುಂಪಾಗಿ ಗುಳೆ ಹೋಗಿದ್ದಾರೆ...ನನ್ನ ಆಸ್ಥಾನ ಸೌಧದ ಸುತ್ತ ಮಾಟ ಮಂತ್ರ ನಡೆದಿದೆ...ಇದು ಆ ಭೇತಾಳನ ತಂತ್ರಾನೇ ಇರ್ಬೇಕು...ಎಲ್ಲಿ ಹುಡ್ಕೋದು ಇವನನ್ನ,,,?? ಛೇ...

ಕೊನೆಗೆ, ಲೋಕಪಾಲರ ಅಫೀಸಿನ ಹಳೆಯ ಹಗರಣಗಳ ಧೂಳು ತಿನ್ನುತ್ತಾ ಬಿದ್ದಿದ್ದ ಕಡತಗಳ ಒಂದು ಕೊಠಡಿಯ ಸೀಲಿಂಗ್ ಫ್ಯಾನಿಗೆ ಜೋತು ಬಿದ್ದಿದೆ ಅಂತ ನಂಬಲರ್ಹ ಮೂಲಗಳಿಂದ ತಿಳಿದು ಅಲ್ಲಿಗೆ ಹೋಗಿ ಲೋಕಪಾಲರು ಬರೋಕೆ ಮುಂಚೆ ಅಲ್ಲಿಂದ ಭೇತಾಳನ್ನ ಎತ್ತಿ ಹೆಗಲಿಗೇರಿಸಿ .. ಶಾಶಕರ ಭವನದ ಹಿಂದಿನ ಶವಾಗಾರಕ್ಕೆ ಹೊರಟ....

ರಾಜ್ಯದಲ್ಲಿ ಏನೇ ನಡೆದರೂ ಜಪ್ಪಯ್ಯ ಎನ್ನದ, ಗಣಿ-ಧಣಿ ಎಂಬ ಜೋಡಿ-ಪದ ಕೇಳಿದೊಡನೇ ಕೆರಳಿ ಕೇರಳದ ಸಿಂಹ (ಹಹಹ ಕೇರಳದಲ್ಲಿ...ಸಿಂಹ...ಎಂಥಾ ವಿರೋಧಾಭಾಸ ಎನ್ನಬೇಡಿ...!!) ಆಗುವ ವಿರೋಧ ಪಕ್ಷಗಳಂತೆ ಅಲ್ಲಿವರೆಗೂ ಸುಮ್ಮನಿದ್ದ ಭೇತಾಳ ಮಾತನಾಡತೊಡಗಿತು.

“ಎಲೈ ಶತ ವಿಕ್ರಮ, ...ನಿದ್ದೆ ಮಾಡುತ್ತಿದ್ದ ನಿನಗೆ ಹಾಗೋ ಹೀಗೋ .... ಸಿಂಹಾಸನ ಸಿಕ್ಕಿ ಬಿಡ್ತು....ನಿನ್ನ ಮುತ್ತಜ್ಜ ಇಮ್ಮಡಿ ವಿಕ್ರಮ ಬಹು ಮೇಧಾವಿ ಅವನ ಹೆಸರಿನಿಂದಲೇ ನಿನಗೆ ಈ ಪಟ್ಟವೂ ಹೇಗೋ ಸಿಕ್ತು ..ಆದ್ರೆ ಇದನ್ನು ಉಳಿಸಿಕೊಳ್ಳಲು ಉಳುವವನ ಮನೆ ಬಗ್ಗೆ ಮಾತನಾಡಿ ಈಗ ಅವನ ಬುಡಕ್ಕೇ ನೇಗಿಲು ಹರಿಸಿದ್ದೀಯಾ...ನಿನಗೆ ತರವಲ್ಲ..., ಅಲ್ಲಯ್ಯ ..ರೈತನಿಗೆ ಉಳುವ ಭೂಮಿ ಕೊಡಬೇಕಾದ ನೀನು ಕೊರೆದ ಭೂಮಿ ಕೊಡೋದ್ರಲ್ಲೇ ಇಡೀ ವ್ಯವಸ್ಥೆಯನ್ನ ದಿಕ್ಕಾಪಾಲು ಮಾಡ್ತಿದ್ದೀಯಲ್ಲ ತರವೇ..? ನನಗೆ ಕಥೆ-ಗಿಥೆ ಹೇಳೋ ಮೂಡಿಲ್ಲ... ನಿನ್ನದೇ ಕಥೆಯಿಂದ ಆಯ್ದ ಭಾಗಗಳ ನನ್ನ ಸಂಶಯಗಳ ಕಂತೆಯನ್ನು ನೀನು ನೂರು ಜನ್ಮ ಎತ್ತಿದರೂ ಬಿಡಿಸಲಾರೆ...ಆದ್ರೂ ಕಂತು ಕಂತಿನಲ್ಲೇ ..ಕೇಳು.., ಪ್ರಯತ್ನಿಸು ಉತ್ತರಿಸೋಕೆ....."
ಭೇತಾಳ ವಿರೋಧ ಪಕ್ಷದವರಂತೆ ಸಮಸ್ಯೆ ಬಗೆ ಹರಿಸುವುದರ ಬಗ್ಗೆ ಸಲಹೆ ಕೊಡುವುದನ್ನು ಬಿಟ್ಟು ಪುಃಖಾನು ಪುಃಖ ಪ್ರಶ್ನೆಗಳ ಬಾಣಬಿಡಲಾರಂಭಿಸಿದ.

"ನಿನ್ನ ಕಪಿಲಾಪುರದ ಸಿಂಹಾಸನಾರೂಢನಾಗುವ ಸಮಯದ ನಿನ್ನ ದುಡಿವ ಅನ್ನದಾತನ ಉದ್ಧಾರದ ದೀಕ್ಷೆಗೇಕೆ ತಿಲಾಂಜಲಿ ಕೊಟ್ಟೆ..? ಕಪಿಲಾಪುರದ ಅವ್ಯವಹಾರ ಬಯಲಿಗೆ ತರೋ ಲೋಕಪಾಲನಿಗೆ ಕೇವಲ ಇಲಿ, ಬೆಕ್ಕುಗಳನ್ನು ಹಿಡಿಯುವ ಅಧಿಕಾರ ಕೊಟ್ಟು ತೋಳ ಮತ್ತು ಕಪಟ ನರಿಗಳ ದಂಡಿಸುವ ಹಕ್ಕನ್ನು ಏಕೆ ಕೊಡಲಿಲ್ಲ..? "

"ವಿರೋಧಪಕ್ಷದವರನ್ನು ಆಮಿಷವೊಡ್ಡಿ ನೀನು ಸೆಳೆದದ್ದು ಲೋಕ ನೋಡಿದೆ.., ಅದೇ ಕೆಲಸದ ಕೇವಲ ಒಂದಂಶ ವಿರೋಧಿಗಳು ಮಾಡಿದಾಗ ಏಕೆ ಸಿಡಿಮಿಡಿಯಾದೆ..? ಎಲ್ಲ ದೇವಾನು ದೇವತೆಗಳೂ ಮೀಟಿಂಗ್ ಮಾಡೋ ಮಟ್ಟಕ್ಕೆ ...ದೇವಸ್ಥಾನಗಳ ಸುತ್ತಿಬಿಟ್ಟೆ....??!! ಅಧಿಕಾರ ಹಣಕ್ಕೆ ಆಸೆಪಟ್ಟು ಮತ್ತೆ ಗೆಲ್ಲುವ ಲವಲೇಶವೂ ನಂಬಿಕೆಯೇ ಇರದ ಸದಸ್ಯರನ್ನು ನೀನು ಸೆಳೆದ್ದುದರಲ್ಲಿ ಘನತೆಯೇನೂ ಇಲ್ಲ ..ಆದರೆ ನಿನ್ನವರ ಗುಂಪೊಂದು ಸಿಡಿಯಿತು ಅಂದರೆ ನಿನ್ನ ಆಳ್ವಿಕೆಯಲ್ಲಿ ಏನೋ ಲೋಪವಿದೆಯೆಂದು ಅರಿತರೂ ಮತ್ತೆ ನಿನ್ನ ಹಳೆಯ ಚಾಳಿಗಿಳಿದು...ಈಗಲೇ ನೆಲಕಚ್ಚಿರುವ ನಿನ್ನ ನಾಡಿನ ಘನತೆ ಪ್ರಜೆಗಳ ಆಶಯವನ್ನು ಪಾತಾಳಕ್ಕೆ ತುಳಿಯುವುದು ನ್ಯಾಯವೇ..??......

ಇದನ್ನು ತಿಳಿದೂ ನೀನು ಹೇಳದೇ ಹೋದರೆ ನಿನ್ನ ಪಕ್ಷದವರೆಲ್ಲಾ ಗುಂಪು-ಗುಂಪು ಗುಂಪುಗಾರಿಕೆ ಮಾಡಿ ನಿನ್ನ ಆಸ್ಥಾನವನ್ನ ಅಲ್ಲಾಡಿಸಿಬಿಟ್ಟಾರು ಜೋಕೆ,,,,”

ಶತವಿಕ್ರಮನಿಗೆ ರೇಗಿತು...“ನೀನು ಕೇಳಿದ್ದಕ್ಕೆಲ್ಲಾ ಉತ್ತರಕೊಡೋಕೆ ಜವಾಬ್ದಾರಿಯುತ ಅಧಿಕಾರಿಯಲ್ಲ ...ನನ್ನ ರಾಜ್ಯಾಳ್ವಿಕೆಯನ್ನು ಕಾಪಾಡಿಕೊಳ್ಳೋದು ನನಗೆ ಮೊದಲ ಕರ್ತವ್ಯ ಉಳಿದ ಮಿಕ್ಕಿದ್ದೆಲ್ಲ ಗೌಣ,,,,” ಎಂದಾಗ ...

“ಮೂಢ, ನೀನು ಹೀಗೇ ವಿರೋಧಪಕ್ಷಕ್ಕೂ ಉತ್ತರಕೊಡದೇ ಪ್ರಜೆಗಳ ಸಮಸ್ಯೆಗಳನ್ನೂ ಪರಿಹರಿಸದೇ ಉಡಾಫೆಯಲ್ಲೇ ಕಾಲ ಕಳೆ...!! ಈಗ ನೀನು ಮೌನ ಮುರಿದೆ...ಅದಕ್ಕೆ ಇದೋ ನಾನು ಹೊರಟೆ...” ಎನ್ನುತ್ತಾ ಶತವಿಕ್ರಮನ ಹೆಗಲಿಂದ ಮಾಯವಾಯಿತು.